ಗಣರಾಜ್ಯೋತ್ಸವ ಎಂಬ ರಾಷ್ಟ್ರೀಯ ಹಬ್ಬ ಈ ವರ್ಷದ ಹಾಗೆ ಎಂದೂ ಝಗಮಗಿಸಿರಲಿಲ್ಲ ಎಂಬ ಮಾತನ್ನು ಬೇರೆ ಬೇರೆ ಕಾರಣಗಳಿಂದಾಗಿ ಇಡೀ ದೇಶಕ್ಕೆ ದೇಶವೇ ಒಪ್ಪಬಹುದು. ಉತ್ಸವದ ಅತಿಥಿಯಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಬಂದದ್ದೇ ಬಹಳ ದೊಡ್ಡ ವಿಶೇಷ ಎನ್ನುವುದಷ್ಟೇ ಅಲ್ಲ, ಇನ್ನಿತರ ಸಣ್ಣಪುಟ್ಟ ಸಂಗತಿಗಳಿಂದಲೂ ಅದು ಜನರ ಮನ ಅಥವಾ ಗಮನ ಸೆಳೆಯಿತು.
ಅಕೇಶನ್ ಮತ್ತು ಲೋಕೇಶನ್‌ಗೆ ತಕ್ಕಂತೆ ಉಡುಪು ಧರಿಸಲು ಅದ್ಭುತವಾಗಿ ಪ್ರಿಪರೇಶನ್ ಮಾಡಿಕೊಳ್ಳುವ ನಮ್ಮ ಪ್ರಧಾನ ಮಂತ್ರಿಗಳು ಹತ್ತು ಲಕ್ಷ ರೂಪಾಯಿ ಬೆಲೆಯ ‘ನಾಮ್ ಕ ವಸ್ತ್ರ’ ಧರಿಸಿ ಕಂಗೊಳಿಸಿದ್ದು, ಅದನ್ನು ಕಂಡು ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಮಾತ್ರ ಇರುವ ನಮ್ಮ ನಾಮ್‌ಕೆ ವಾಸ್ತೆ ಪ್ರಜೆಗಳು ಕಣ್‌ಕಣ್‌ಬಿಟ್ಟದ್ದು, ಗಂಭೀರವಾಗಿ ಪರೇಡ್ ಸಾಗುತ್ತಿದ್ದಾಗ ಗಣ್ಯರು ಚೂಯಿಂಗ್ ಗಮ್ ಜಗಿದದ್ದು, ಚಹಾದ ಜೋಡಿ ವಿವಿಧ ವಿಷಯಗಳ ಚರ್ಚೆಯ ಚೂಡಾ ಕೂಡಾ ಇದ್ದದ್ದು, ಮೋದಿ ಭಾಯಿ ತಮ್ಮ ಬರಾಕ್ ಬ್ರದರ್ ಅನ್ನು ‘ಏನ್ಲಾ ಬರಾಕಣ್ಣ ಇದಕ್ ಏನಂತೀಯ’ ಅಂತ ಸಲಿಗೆಯಿಂದ ಕೇಳಿದ್ದು– ಮುಂತಾದ ಮಹೋನ್ನತ ದೃಶ್ಯಗಳಿಂದಾಗಿ ಈ ಬಾರಿಯ ರಾಷ್ಟ್ರೀಯ ಹಬ್ಬ, ಒಬ್ಬ ಮೇಧಾವಿ ನಿರ್ದೇಶಕ ಮಾಡಿದ ಸಿನಿಮಾದಂತೆ ಮೆಗಾ ಹಿಟ್ ಆಗಿಹೋಯಿತು. ಇದನ್ನು ಕುರಿತು ನಮ್ಮ ದೇಶದ ಟಿವಿ ಚಾನೆಲ್‌ಗಳಲ್ಲಿ ಗಂಟೆಗಟ್ಟಲೆ ಅದೆಷ್ಟು ಕಾಲ ಚರ್ಚೆ ನಡೆಯಿತು, ಪತ್ರಿಕೆಗಳಲ್ಲಿ ಕಾಲಂಗಟ್ಟಲೆ ಅದೆಷ್ಟು ಸುದ್ದಿ ಪ್ರಕಟವಾಯಿತು ಅನ್ನುವುದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ.
ಮೋದಿ ಭಾಯಿ ಬರಾಕ್ ಬ್ರದರ್ ಜೋಡಿ ನಡೆಸಿಕೊಟ್ಟ ಈ ಐತಿಹಾಸಿಕ ಉತ್ಸವ ಮುಂದಿಟ್ಟ ಇನ್ನೊಂದೆರಡು ಸಂಗತಿಗಳನ್ನೂ ನಾವು ಅಗತ್ಯವಾಗಿ ಗಮನಿಸಬೇಕು ಮತ್ತು ಚರ್ಚಿಸಬೇಕು. ಮೊದಲನೆಯದು, ಗಣರಾಜ್ಯೋತ್ಸವ ದಿನಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಜಾಹೀರಾತು– ಇದರಲ್ಲಿ ಎಂದಿನ ಅಧಿಕೃತ ವಿಷಯಗಳು ಗೋಚರಿಸುವುದರ ಜೊತೆಗೆ, ಆಳುವ ಪಕ್ಷದ ಆಕಾಂಕ್ಷೆಯೂ ಮೆಲ್ಲಗೆ ಅಗೋಚರವಾಗಿ ಜಾಹೀರು ಆಯಿತು. ಯಾವ ರಾಜಕೀಯ ಪಕ್ಷವೂ ಯಾವುದೇ ಸಂದರ್ಭದಲ್ಲೂ ತನ್ನ ಮೂಲ ಗುರಿಯನ್ನು ಬಿಟ್ಟುಕೊಡುವುದಿಲ್ಲ, ಯಾವ ಅವಕಾಶವನ್ನೂ ತನ್ನ ಗುರಿಸಾಧನೆಗೆ ಬಳಸಿಕೊಳ್ಳದೆ ಬಿಡುವುದಿಲ್ಲ ಎನ್ನುವುದು ಗೊತ್ತಿರುವ ಸತ್ಯ.
ಸದರಿ ಜಾಹೀರಾತಿನಲ್ಲಿ ಬಳಸಿದ್ದು ನಮ್ಮ ಸಂವಿಧಾನದ ಹಳೆಯ ಪೀಠಿಕಾಭಾಗದ ಚಿತ್ರ. ಸಂವಿಧಾನಕ್ಕೆ ಮಾಡಿದ 42 ನೇ ತಿದ್ದುಪಡಿಯಲ್ಲಿ ಅದರ ಪೀಠಿಕೆಗೆ ‘Socialist’ ಮತ್ತು ‘Secular’ ಎಂಬ ಎರಡು ಪದಗಳನ್ನು ಸೇರಿಸಿ ಸ್ವಲ್ಪ ಬದಲಾಯಿಸಿ, ನಮ್ಮ ಭಾರತ ಒಂದು ‘ಸಮಾಜವಾದಿ, ಧರ್ಮನಿರಪೇಕ್ಷ ಪ್ರಜಾಪ್ರಭುತ್ವವಾದಿ ಗಣರಾಜ್ಯ’ ಎಂದು ಸ್ಪಷ್ಟವಾಗಿ ಸಾರಲಾಗಿದೆ. ಆದರೆ Socialist –ಸಮಾಜವಾದಿ ಮತ್ತು Secular – ಧರ್ಮನಿರಪೇಕ್ಷ (ಜಾತ್ಯತೀತ ಎನ್ನುವುಕ್ಕಿಂತ ಇದು ಹೆಚ್ಚು ಸೂಕ್ತವಲ್ಲವೇ?) ಎಂಬ ಎರಡು ಹೊಸ ಪದಗಳಿಲ್ಲದ ಹಳೆಯ ಪೀಠಿಕಾಭಾಗವನ್ನೇ ಜಾಹೀರಾತಿನಲ್ಲಿ ಬಳಸಿತ್ತು. ಹಿಂದಿನ ಕಾಂಗ್ರೆಸ್ ಸರ್ಕಾರವೂ 2012 ರ ತನ್ನ ಜಾಹೀರಾತಿನಲ್ಲಿ ಹಳೆಯದನ್ನೇ ಬಳಸಿ ತಪ್ಪು ಮಾಡಿದ್ದ ವಿಚಾರ ಈಗ ಹೊರಬಂದಿದೆ. ಇವು ಯಾವುದನ್ನೂ ಕೇವಲ ಆಕಸ್ಮಿಕ ಎಂದು ಭಾವಿಸಲು ಸಾಧ್ಯವಿಲ್ಲ.
ಭಾರತದ ಸಂವಿಧಾನಕ್ಕೆ ಈ ದಿನದ ವರೆಗೆ 99 ತಿದ್ದುಪಡಿಗಳು ಆಗಿದ್ದರೂ ಈ 42 ನೇ ತಿದ್ದುಪಡಿ ಮಾತ್ರ ಚರಿತ್ರಾರ್ಹವಾದದ್ದು. ಆ ತಿದ್ದುಪಡಿ ಮಾಡಲು ಅಂದಿನ ಇಂದಿರಾ ಗಾಂಧಿ ಸರ್ಕಾರಕ್ಕೆ ಅದರದೇ ಸ್ಪಷ್ಟ (ಮತ್ತು ದುಷ್ಟ) ಕಾರಣಗಳು ಇದ್ದದ್ದು ನಿಜ. ಸಂವಿಧಾನ ರೂಪಿಸುವ ಕಾಲದಲ್ಲಿ ಅದರ ಮುಖ್ಯ ಗುರಿಯೇ ಅವು ಹೇಳುವಂಥ ದೇಶವನ್ನು ಕಟ್ಟುವುದಾಗಿರುವಾಗ, ಆ ಎರಡು ಪದಗಳನ್ನು ಸೇರಿಸುವುದು ಅನಗತ್ಯವೆಂದು ಡಾ. ಬಿ.ಆರ್. ಅಂಬೇಡ್ಕರ್ ಭಾವಿಸಿದ್ದರು; ಮುಂದೆ ತುರ್ತು ಪರಿಸ್ಥಿತಿ ಕಾಲದಲ್ಲಿ ಕಾಂಗ್ರೆಸ್ ಸರ್ಕಾರ ತನ್ನದೇ ವಿಶೇಷ ಕಾರಣಗಳಿಗೆ ಆ ಎರಡು ಪದಗಳನ್ನು ಸೇರಿಸಿತು. ಈಗ ಎನ್‌ಡಿಎ ಸರ್ಕಾರ ತನ್ನದೇ ವಿಶೇಷ ಗುರಿಗಳಿಗಾಗಿ ಆ ಎರಡು ಪದಗಳ ಮೇಲೆ ಕೈಯಿಡಲು ಹವಣಿಸುತ್ತಿರಬಹುದು. ಒಟ್ಟಿನಲ್ಲಿ ಸೇರಿಸದಿರುವುದಕ್ಕೆ, ಸೇರಿಸಿರುವುದಕ್ಕೆ ಅವರದೇ ಕಾರಣಗಳಿರುವಂತೆ, ಸೇರಿಸಿರುವುದನ್ನು ಅಳಿಸುವುದಕ್ಕೂ ಅವರದೇ ಕಾರಣಗಳಿರಬಹುದು. ಒಟ್ಟಿನಲ್ಲಿ ಆ ಎರಡು ಪದಗಳು ಎಲ್ಲರ ಕಣ್ಣನ್ನೂ ಕುಕ್ಕುತ್ತಿವೆ.
ಆದರೆ ಸಂವಿಧಾನದ ಪೀಠಿಕೆಯಲ್ಲಿರುವ ಆ ಎರಡು ಪದಗಳು ಕೇವಲ ಪದಗಳಾಗಿ ಉಳಿದಿಲ್ಲ, ಸೇರಿಸಿದವರ ಆಶಯ ಮೀರಿ, ಆ ಎರಡು ಪದಗಳು ನಮ್ಮ ಸಂವಿಧಾನದ ಎರಡು ಕಣ್ಣುಗಳೇ ಆಗಿವೆ. ದೇಶದ ಎಲ್ಲರ ಹೊಟ್ಟೆಗೂ ಅನ್ನವಿರಲಿ, ಎಲ್ಲರ ತಲೆಯ ಮೇಲೂ ಸೂರಿರಲಿ, ಸರ್ವಜನರೂ ಸುಖವಾಗಿರಲಿ ಎನ್ನುವುದನ್ನು ಒಪ್ಪುವುದಾದರೆ ಸಮಾಜವಾದ ಬೇಕಾಗುತ್ತದೆ; ಇವನಾರವ ಇವನಾರವ ಎಂದು ಕೇಳದೆ, ಇವ ನಮ್ಮವ ಇವ ನಮ್ಮವ ಎಂದು ಹೇಳಬೇಕು ಎನ್ನುವುದನ್ನು ನಂಬುವುದಾದರೆ ಧರ್ಮನಿರಪೇಕ್ಷತೆ ಬೇಕಾಗುತ್ತದೆ. ಈ ಎರಡು ಆಶಯಗಳು ನಮ್ಮ ಸಂವಿಧಾನ ಮತ್ತು ದೇಶದ ಒಳಹೊರಗನ್ನು ಬೆಳಗುವುದಿಲ್ಲವೇ?
ಧರ್ಮ ಬಹಳ ಒಳ್ಳೆಯದು ಎಂದು ಹೇಳುತ್ತ ರಾಜಕಾರಣ ಅದನ್ನು ತನ್ನ ಉದ್ದೇಶಗಳಿಗೆ ಬಳಸಿಕೊಂಡಾಗ ಬರೀ ಕೆಟ್ಟದ್ದೇ ಆಗಿದೆ ಎನ್ನುವುದನ್ನು ಇತಿಹಾಸ ಲೆಕ್ಕವಿಲ್ಲದಷ್ಟು ಬಾರಿ ತೋರಿಸಿದೆ. ಯಾವ ದೇಶವಾದರೂ ಇರಲಿ, ಅದರೊಳಗಿನ ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷ, ತನ್ನ ರಾಜಕಾರಣ ಮತ್ತು ರಾಜಕೀಯ ಚಟುವಟಿಕೆಗೆ ಧರ್ಮವನ್ನು ನೆಲೆಗಟ್ಟು ಮಾಡಿಕೊಳ್ಳದೆ ಅದನ್ನು ಎಷ್ಟು ಸಾಧ್ಯವೋ ಅಷ್ಟು ದೂರ ಇಡುವುದು ಲೋಕದ ಕ್ಷೇಮಕ್ಕೆ ಅಗತ್ಯ. ಧರ್ಮ ಎನ್ನುವುದು ಮನ ಮತ್ತು ಮನೆಯೊಳಗಿರದೆ ಅವುಗಳನ್ನು ದಾಟಿ ಹೊರಬಂದ ಕ್ಷಣ, ಅದರ ಸ್ವರೂಪ ಬೇರೆಯಾಗುತ್ತದೆ. ಧರ್ಮವೇ ಜನರ ಅಫೀಮು ಎಂಬ ಮಾತನ್ನು ಜಗತ್ತಿನಲ್ಲಿ ಈಗಲೂ ಘಟಿಸುತ್ತಿರುವ ಎಷ್ಟೊಂದು ಮಾರಣಹೋಮಗಳು ನಿಜ ಮಾಡುತ್ತಿವೆ. ಈ ಅಪಾಯದ ಅರಿವು ನಮಗಿದೆ, ಇದನ್ನು ತಡೆಯುವ ಆಶಯ ನಮಗಿದೆ ಎಂದು ಹೇಳಲಿಕ್ಕಾದರೂ ‘ಸೆಕ್ಯುಲರ್’ ಎನ್ನುವ ಪದ ಉಳಿಯಬೇಡವೇ? ಧಾರ್ಮಿಕ ಸಂಘಟನೆಗಳು ಆ ಎರಡು ಪದಗಳನ್ನು ವಿರೋಧಿಸುವುದಿರಲಿ, ಸ್ವತಃ ಸರ್ಕಾರವೇ ತನ್ನ ವಿರೋಧವನ್ನು ಜಾಹೀರಾತು ಮಾಡಿದರೆ ಏನು ಸಂದೇಶ ಕೊಟ್ಟಂತಾಗುತ್ತದೆ?
ಸರ್ಕಾರ ಸಂದೇಶಸಹಿತ ಜಾಹೀರಾತು ಕೊಟ್ಟ ಕೂಡಲೇ ಅದರ ಅಂಗವಾದ ಶಿವಸೇನೆ ಅದನ್ನು ಸ್ವಾಗತಿಸಿ, ಆ ಎರಡು ಪದಗಳನ್ನು ಸಂವಿಧಾನದಿಂದಲೇ ಕೈಬಿಡಬೇಕೆಂದು ಆಗ್ರಹಿಸಿದ್ದೂ ಗಮನಾರ್ಹ ಮತ್ತು ಹಾಗೆ ಜಾಹೀರಾತು ಕೊಟ್ಟು ಸರ್ಕಾರ ‘ಹಾಗೆ ಸುಮ್ಮನೆ’ ಆಟ ನೋಡಲು ಬಯಸಿದೆ, ಏಕೆಂದರೆ ಆರ್‌ಎಸ್‌ಎಸ್ ಮೊದಲಿನಿಂದಲೂ 42ನೇ ತಿದ್ದುಪಡಿಯನ್ನು ವಿರೋಧಿಸುತ್ತಿತ್ತು ಎಂದು ಕಾಂಗ್ರೆಸ್ ಹೇಳಿದ್ದೂ ಗಮನಾರ್ಹ. ವಿವಾದ ರೂಪಿಸಿದ ಈ ಪೀಠಿಕೆಗಳಿಗೂ ‘ಪೀಠಿಕೆಯಲ್ಲಿ ಈ ಎರಡು ಪದಗಳು ಇರಬೇಕೇ ಬೇಡವೇ ಎಂಬ ಬಗ್ಗೆ ದೇಶದಲ್ಲಿ ಚರ್ಚೆ ನಡೆದರೆ ತಪ್ಪೇನು?’ ಎಂದು ಕೇಂದ್ರ ದೂರ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹಾಕಿದ ಸವಾಲಿಗೂ ಹತ್ತಿರದ ಸಂಪರ್ಕ ಇದ್ದೇ ಇದೆ. ಬೃಹತ್ ‘ಡಿಜಿಟಲ್ ಸಮಿಟ್’ ಆಯೋಜಿಸಿರುವ ಅವರ ಪ್ರಕಾರ ನಮ್ಮ ದೇಶ ‘ಡಿಜಿಟಲ್’ ಆಗಿದ್ದರೆ ಸಾಕು, ‘ಸೆಕ್ಯುಲರ್’ ಆಗಿರುವುದೇನೂ ಬೇಡ!
ಮೊದಲು ಜಾಹೀರಾತಿನಲ್ಲಿ ಕೈಬಿಟ್ಟು ನಂತರ ಮೂಲ ಸಂವಿಧಾನದ ಪೀಠಿಕೆಯಿಂದಲೇ ಆ ಎರಡು ಪದಗಳನ್ನು ಕೈಬಿಡುವ ಹುನ್ನಾರ ಇದಾಗಿರಬಹುದು ಎಂಬ ಸಂಶಯ ಜನಮನದಲ್ಲಿ ಏಳುವುದು ಸಹಜ. ‘ಘರ್ ವಾಪಸಿ’ ಕಾರ್ಯಕ್ರಮದ ನಂತರ ‘ಪೂರ್ವಸ್ಥಿತಿಗೆ ಪೀಠಿಕಾ ವಾಪಸಿ’ ಕಾರ್ಯಕ್ರಮ – ಇದು ಮುಂದಿನ ವಾಪಸಿಗಳ ತಾಮಸಿ ಕಾರ್ಯಕ್ರಮಗಳಿಗೆ ಪೀಠಿಕೆ ಎಂಬ ಭಯ ಹುಟ್ಟಿದರೂ ಆಶ್ಚರ್ಯವಿಲ್ಲ. ಒಟ್ಟಿನಲ್ಲಿ ಇದರ ಬಗ್ಗೆ ರಾಜಕೀಯೇತರ ವಲಯದಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಯಿತು. 42ನೇ ತಿದ್ದುಪಡಿಯ ಅನೇಕ ಅಂಶಗಳನ್ನು ಕೈಬಿಡಲು ಮುಂದೆ ಜನತಾ ಸರ್ಕಾರ 44ನೇ ತಿದ್ದುಪಡಿ ತಂದಿತ್ತು, ಆಗ ಆ ಸರ್ಕಾರದೊಳಗಿದ್ದ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ಮುಂತಾದವರಲ್ಲಿ ಯಾರೊಬ್ಬರೂ ಈ ಎರಡು ಪದಗಳ ಬಗ್ಗೆ ಆಕ್ಷೇಪ ಎತ್ತಿರಲಿಲ್ಲ ಎಂಬುದನ್ನೂ ರಾಜಕೀಯ ವಿಶ್ಲೇಷಕರೊಬ್ಬರು ಸರಿಯಾಗಿ ಜ್ಞಾಪಿಸಿದರು.
ಮೋದಿ ಭಾಯಿ – ಬರಾಕ್ ಬ್ರದರ್ ಭೇಟಿ ಸಂಭ್ರಮದಲ್ಲಿ ದೇಶದ ಜನ ‘ಮಿಂದೇಳುತ್ತಿರುವಾಗ’ ಪೀಠಿಕಾ ವಿವಾದದ ಕೆಸರು ಏಳಬೇಕೇ? ಇದನ್ನು ಗುಡಿಸಿ ಹಾಕುವುದು ಸೂಕ್ತ ಎನ್ನುವುದು ಸಂಬಂಧಪಟ್ಟ ಚಾಣಕ್ಯರಿಗೆ ಗೊತ್ತಿಲ್ಲವೇ? ಮೊನ್ನೆ ಭಾನುವಾರ ಆಂಗ್ಲ ಪತ್ರಿಕೆಯೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಷಾ ‘ಸಂವಿಧಾನದ ಪೀಠಿಕೆಯನ್ನು ಬದಲಾಯಿಸುವ ಅಗತ್ಯವಿಲ್ಲ. ಸಂವಿಧಾನವನ್ನು ಬಿಜೆಪಿ ಗೌರವಿಸುತ್ತದೆ. ಜಾಹೀತಾತಿನಲ್ಲಿ ಕಾಣೆಯಾಗಿರುವ ಆ ಎರಡು ಪದಗಳ ಬಗ್ಗೆ ಎದ್ದಿರುವ ವಿವಾದ ಅರ್ಥಹೀನ’ ಎಂದು ಸಾರಿದ್ದಾರೆ. ಅಲ್ಲಿಗೆ ಈ ವಿವಾದ ಮುಗಿಯುತ್ತದೆಯೇ? ನಿಜವಾಗಿ? ಸ್ವಲ್ಪ ನೀರು ಚಿಮುಕಿಸಿದ ಮಾತ್ರಕ್ಕೆ ಉರಿಯುವ ಕೆಂಡ ಆರಿಹೋಗುವುದಿಲ್ಲ.
ಪತ್ರಿಕೆಯ ಆ ಸಂದರ್ಶನ ಜನಮನದಲ್ಲಿ ಎದ್ದಿರುವ ಇನ್ನೂ ಅನೇಕ ಸಂಶಯಗಳನ್ನು ಪ್ರಶ್ನೆಗಳ ರೂಪದಲ್ಲಿ ಅಮಿತ್ ಷಾ ಅವರ ಮುಂದಿಟ್ಟಿದೆ. ಇಂಥ ಸಂಶಯಗಳೆಲ್ಲವನ್ನೂ ಆ ಮಾತಿನಮಲ್ಲ ಕೆಲವೇ ಪದಗಳಲ್ಲಿ ಅಲ್ಲಗಳೆದಿದ್ದಾರೆ ಅಥವಾ ಇಲ್ಲಗಳೆದಿದ್ದಾರೆ. ಆಮೇಲೆ ಪಾಪ ಸಂದರ್ಶಕರು – ಸರಿಯಪ್ಪ, ಭಾರತ ಒಂದು ಹಿಂದು ರಾಷ್ಟ್ರ ಎಂದು ನಿಮ್ಮ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಹೇಳುತ್ತಾರಲ್ಲಾ ಇದಕ್ಕೆ ನೀವು ಏನು ಹೇಳುತ್ತೀರ – ಎಂದು ಕೇಳಿದರು. ‘ನೀವು ಈ ಪ್ರಶ್ನೆಯನ್ನು ನಿಮಗೆ ಇಷ್ಟ ಬಂದಷ್ಟು ಬಾರಿ ಕೇಳಬಹುದು, ಆದರೆ ಭಾಗವತ್ ಅವರ ಹೇಳಿಕೆ ಕುರಿತು ನಾನು ಮಾತ್ರ ಏನನ್ನೂ ಹೇಳುವುದಿಲ್ಲ’ ಎಂದರಂತೆ ಅಮಿತ್ ಷಾ. ಅವರು ಏನನ್ನಾದರೂ ಹೇಳಿದ್ದರೆ ಕಡಿಮೆ ತಿಳಿಯುತ್ತಿತ್ತು, ಅವರು ಏನನ್ನೂ ಹೇಳದಿರುವುದೇ ಹೆಚ್ಚು ಹೇಳಿತು.
ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಹತ್ತು ವರ್ಷಗಳ ‘ಮಹಾಮೌನ’ದ ಬಗ್ಗೆ ದೇಶದ ಜನ ಸಹಜವಾಗಿಯೇ ಬಹಳ ಆಡಿಕೊಂಡಿದ್ದಾರೆ. ಆದರೆ ಬೇರೆ ನೂರಾರು ವಿಷಯಗಳ ಬಗ್ಗೆ ಮನಮೋಹಕವಾಗಿ ಮಾತನಾಡುತ್ತಿದ್ದರೂ, ‘ಘರ್ ವಾಪಸಿ’, ‘ಸಂವಿಧಾನದ ಆ ಎರಡು ಪದಗಳನ್ನು ಬಿಟ್ಟ ಜಾಹೀರಾತು’ ಮುಂತಾದ ಆಯ್ದ ವಿಷಯಗಳ ಬಗ್ಗೆ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ವಹಿಸುವ ‘ಜಾಣಮೌನ’ವೂ ಬಹಳಷ್ಟನ್ನು ಹೇಳುತ್ತಿದೆ. ‘ಪ್ರಧಾನಮಂತ್ರಿಗಳ ಮೌನವೂ ಆಡಳಿತದ ಸೈದ್ಧಾಂತಿಕ ಕಾರ್ಯತಂತ್ರದ ಒಂದು ಭಾಗ’ ಎಂದು ರಾಜಕೀಯ ಶಾಸ್ತ್ರಜ್ಞರೊಬ್ಬರು ಹೇಳಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯ ರಕ್ಷಿಸೋಣ, ಇದರಿಂದ ನಮ್ಮ ನಿಮ್ಮ ಜನ ಚೆನ್ನಾಗಿ ಬದುಕುತ್ತಾರೆ. ಧರ್ಮದ ವಿಷಯಕ್ಕೆ ದೇಶ ಒಡೆದುಹೋದರೆ ಉದ್ಧಾರ ಆಗುವುದಿಲ್ಲ – ಎಂದು ಬರಾಕ್ ಒಬಾಮ ಹೋಗುವ ಮುನ್ನ ಹೇಳಿದ್ದನ್ನು ಯಾರೂ ಅಪಾರ್ಥ ಮಾಡಿಕೊಳ್ಳಬೇಕಿಲ್ಲ. ‘ಅದನ್ನು ಅವರೇನು ಹೇಳುವುದು, ನಾವೂ ಹೇಳುತ್ತೇವೆ, ನಮ್ಮ ಸಂವಿಧಾನವೂ ಹೇಳುತ್ತದೆ, ಅದರಲ್ಲಿ ಹೊಸದೇನಿದೆ?’ ಎಂಬ ಮಾತಿನಲ್ಲಿ ಅರ್ಥ ಹುಡುಕುವುದು ಕಷ್ಟ.
‘ಗಣರಾಜ್ಯೋತ್ಸವದಲ್ಲಿ ನಮ್ಮ ಮಿಲಿಟರಿ ಶಕ್ತಿ ಪ್ರದರ್ಶನ ಮಾಡುವುದಕ್ಕಿಂತ, ನಮ್ಮ ಸಂವಿಧಾನದ ಶಕ್ತಿ ಪ್ರಚಾರ ಮಾಡಿದರೆ ಎಷ್ಟು ಚೆನ್ನ’ ಎಂದು ಕರ್ನಾಟಕ ಸಂಗೀತದ ಪ್ರತಿಭಾವಂತ ಗಾಯಕ ಟಿ.ಎಂ. ಕೃಷ್ಣ ಇತ್ತೀಚೆಗೆ ಬರೆದಿದ್ದಾರೆ. ಎಂದೂ ಶ್ರುತಿ ತಪ್ಪದೆ ಹಾಡುವ ಅವರು ಬರೆಯುವುದೂ ಹಾಗೇ ಎನ್ನುವುದು ಗೊತ್ತಾಯಿತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.