ADVERTISEMENT

ಕೇದಿಗೆಯ ಬನದಲ್ಲಿ ಕಾಣುವ ಹಾವು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:15 IST
Last Updated 16 ಜೂನ್ 2018, 9:15 IST

ತುರ್ತು ಪರಿಸ್ಥಿತಿಯ ನೆನಪಲ್ಲಿ ಆಗಬೇಕಾಗಿದೆ ಪ್ರಸಕ್ತ ಸ್ಥಿತಿಗತಿಯ ವಿಶ್ಲೇಷಣೆ
ಜೂನ್ 25- ಭಾರತ ದೇಶವು ಎಂದೂ ಮರೆಯದ, ಮರೆಯಲಾಗದ ‘ಆ ದಿನ’ಕ್ಕೆ ಈಗ ನಲವತ್ತು ವರ್ಷ. ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿಯಾದ ಆ ದುರ್ದಿನವನ್ನು ‘ನೋಯುವ ಹಲ್ಲಿಗೆ ನಾಲಗೆ ಮತ್ತೆ ಮತ್ತೆ ಹೊರಳುವಂತೆ’ ಹಲವರು ಹಲವು ರೀತಿಗಳಲ್ಲಿ ನೆನಪು ಮಾಡಿಕೊಳ್ಳುತ್ತ ಇರುತ್ತಾರೆ. ಆದರೆ ಲಾಲ್‌ಕೃಷ್ಣ ಅಡ್ವಾಣಿ ಅಂಥವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆ ದಿನವನ್ನು ನೆನಪಿಸಿಕೊಳ್ಳುತ್ತ ‘ದೇಶದಲ್ಲಿ ತುರ್ತು ಪರಿಸ್ಥಿತಿ ಮತ್ತೆ ಮರಳುವ ಎಲ್ಲ ಲಕ್ಷಣ ಕಾಣುತ್ತಿದೆ’ ಎಂದು ಹೇಳಿದ್ದನ್ನು ಮಾತ್ರ, ಇದು ಎಂಬತ್ತೇಳರ ವೃದ್ಧನ ಅರಳುಮರಳು ಮಾತು ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಅಡ್ವಾಣಿ ವ್ಯಕ್ತಪಡಿಸಿದ ಆತಂಕ, ಕುರುಕುಲತಿಲಕ ದುರ್ಯೋಧನನ ಸಭೆಯಲ್ಲಿ ಪಿತಾಮಹರಾದ ಭೀಷ್ಮನೋ ದ್ರೋಣನೋ ವ್ಯಕ್ತಪಡಿಸಿದ ಆತಂಕದಂತೆ ಕೆಲವರಿಗೆ ತೋರಬಹುದು. ಅದು ದೇಶದ ಉದ್ದಗಲಕ್ಕೆ ಹುಟ್ಟಿಸಿದ ಅನರ್ಥಗಳನ್ನು ಗಮನಿಸಿದ ಬಿಜೆಪಿ ‘ಅವರು ಹಾಗೇನು ಹೇಳಿಲ್ಲ, ಅವರೇನು ಆ ಅರ್ಥದಲ್ಲಿ ಹೇಳಿಲ್ಲ’ ಎಂದು ತಿದ್ದುಪಡಿಗೆ ಯತ್ನಿಸಿತು. ಆದರೆ ಸರ್ವಾಧಿಕಾರದ ವಾಸನೆ ಮೊದಲು ಹತ್ತುವುದು ಹತ್ತಿರದಲ್ಲಿ ಇರುವವರಿಗೇ ಎಂಬ ಸತ್ಯವೂ ಸೇರಿ, ದೇಶದ ಜನರಿಗೆ ಎಲ್ಲವೂ ಅರ್ಥವಾಗಿತ್ತು.

ತನಗೊದಗಿದ ಸಂಕಷ್ಟವನ್ನು ದೇಶಕ್ಕೆ ಬಂದ ಅನಿಷ್ಟ ಎನ್ನುವಂತೆ ಮಾರ್ಪಡಿಸಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿ ಮತ್ತು ನಿರಂಕುಶ ಆಡಳಿತ (25 ಜೂನ್ 1975- 21 ಮಾರ್ಚ್ 1977) ನಮ್ಮ ಪ್ರಜಾಪ್ರಭುತ್ವದ ಕರಾಳ ಅಧ್ಯಾಯಗಳಲ್ಲಿ ಒಂದೆನ್ನುವುದು ನಿಸ್ಸಂಶಯ.  ಈ ನಲವತ್ತು ವರ್ಷಗಳಲ್ಲಿ ತುರ್ತು ಪರಿಸ್ಥಿತಿಯ ಬಗ್ಗೆ ಇದುವರೆಗೆ ಬಂದಿರುವ ವ್ಯಾಖ್ಯಾನಗಳು ಎಷ್ಟಿವೆಯೋ ಇನ್ನು ಮುಂದೆ ಬರಬಹುದಾದವು ಅದಕ್ಕೂ ಹೆಚ್ಚಿರಬಹುದು. ‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ’ ಎಂದು ಹೇಳುತ್ತಿದ್ದ ಹಾಗೆ ‘ತುರ್ತು ಪರಿಸ್ಥಿತಿಯ ನಂತರ’ ಎಂದು ಹೇಳುತ್ತ, ದೇಶದಲ್ಲಿ ನಡೆದಿರುವ ಪ್ರತಿಯೊಂದು ಹೊಸ ರಾಜಕೀಯ ಬೆಳವಣಿಗೆಯನ್ನೂ ಅದರ ವ್ಯಾಕರಣದ ನೆರವಿನಲ್ಲೇ ವಿಶ್ಲೇಷಿಸುವುದು ಸಹಜವೇ ಆಗಿದೆ.

ಹಾಗೆ, ಆ ಆಪತ್ಕಾಲದ ಪುನರ್ಮನನದ ನೆಪದಲ್ಲಿ ಸಮಕಾಲೀನ ಪರಿಸ್ಥಿತಿಯ ಅವಲೋಕನ ಸತತವಾಗಿ ನಡೆಯುವುದು ಅತ್ಯಂತ ಅಪೇಕ್ಷಣೀಯ. ಏಕೆಂದರೆ ಪ್ರಜಾಪ್ರಭುತ್ವ ಎಂಬ ಕೇದಿಗೆಯ ಬನದಲ್ಲಿ ಸರ್ವಾಧಿಕಾರ ಎಂಬ ಹಾವು ಸೇರುವ ಸಾಧ್ಯತೆ ಬಹಳ ಹೆಚ್ಚು.

ಇಂದಿರಾ ಪ್ರಿಯದರ್ಶಿನಿ ನೆಹರೂ ಕುಟುಂಬದಲ್ಲಿ ಹುಟ್ಟಿದ್ದರಿಂದ ರಾಷ್ಟ್ರೀಯ ಚಳವಳಿ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಜನಾದೇಶ ಮುಂತಾದ ಜೋಗುಳ ಪದಗಳನ್ನು ಕೇಳಿಕೊಂಡೇ ಬೆಳೆದರು. ಸೆರೆಮನೆಯಿಂದ ತಂದೆ ಬರೆದ ಪತ್ರಗಳಿಂದಲೇ ಅವರಿಗೆ ನಮ್ಮ ಸಾವಿರಾರು ವರ್ಷಗಳ ಚರಿತ್ರೆಯಲ್ಲಿನ ರಾಜರ ಮೂಲಕ ಭಾರತ ದರ್ಶನ ಆಯಿತು. ಆಮೇಲೆ ಯುರೋಪಿನ ಹೊಸ ನಮೂನೆ ನಿರಂಕುಶ ಪ್ರಭುತ್ವಗಳ ಪರಿಚಯವೂ ಆಯಿತು. ಎಲ್ಲದರ ಒಳಿತು ಕೆಡಕು ಅವರಿಗೆ ಚೆನ್ನಾಗಿ ತಿಳಿದಿತ್ತು. ಅವರೇ ಸ್ವತಃ ಪ್ರಧಾನಮಂತ್ರಿ ಆಗುವವರೆಗೆ ಸರ್ವಾಧಿಕಾರದ ಬ್ರಹ್ಮಾಸ್ತ್ರ ಅವರ ಬತ್ತಳಿಕೆಯಲ್ಲಿ ಮಸೆದುಕೊಂಡು ಕೂರಬೇಕಾಯಿತು. ಸ್ವಂತ ಸಂಕಟ ಶುರುವಾದೊಡನೆ ಅವರಿಗೆ ಇಡೀ ದೇಶವೇ ಒಂದು ಗುಬ್ಬಿಯಂತೆ ಕಂಡು ಅದನ್ನು ಪ್ರಯೋಗಿಸಿದರು. ಜಗತ್ತು ಅದನ್ನು ಮಿಳಮಿಳನೆ ನೋಡುತ್ತ ಸುಮ್ಮನಿತ್ತು. ಏಕೆಂದರೆ, ಸಾವಿಲ್ಲದ ಮನೆಯ ಸಾಸಿವೆಯಂತೆ ಸರ್ವಾಧಿಕಾರವಿಲ್ಲದ ದೇಶ ಯಾವುದಿತ್ತು?

ಜನರಿಂದ ಆಯ್ಕೆಯಾದ ಸರ್ಕಾರವನ್ನು ಉಳಿಸಿ, ಬಳಸಿಕೊಂಡೇ ನಿರಂಕುಶ ಆಡಳಿತ ನಡೆಸಬಹುದು ಎನ್ನುವುದು ತುರ್ತು ಪರಿಸ್ಥಿತಿ ಮುಂದಿಟ್ಟ ಸರ್ವಾಧಿಕಾರದ ಇನ್ನೊಂದು ಮಾದರಿ. ಹಾಗೆ ಮಾಡದಿದ್ದರೆ ದೇಶ ಉಳಿಯುತ್ತಿರಲಿಲ್ಲ ಎಂದು ಅವರ ಸುತ್ತ ಇದ್ದ ಸ್ವಯಂಸೇವೆಯ ಗಿಳಿಗಳು ಕೂಗುತ್ತಿದ್ದವು. ಸರ್ಕಾರಿ ಆಡಳಿತ ಯಂತ್ರ, ವಿರೋಧ ಪಕ್ಷಗಳು, ಅಧಿಕಾರಶಾಹಿ, ಮಾಧ್ಯಮ, ಪ್ರಜಾಚಳವಳಿಗಳು ಮುಂತಾದುವನ್ನು ಬಗ್ಗುಬಡಿಯುವುದಿರಲಿ, ನ್ಯಾಯಮೂರ್ತಿಗಳನ್ನು ದಾರಿಗೆ ತರುವುದು ಹೇಗೆ ಅನ್ನುವುದೂ ಇಂದಿರಾಗೆ ಗೊತ್ತಿತ್ತು.

ಸಂವಿಧಾನವನ್ನು ಕಸದ ಬುಟ್ಟಿಗೆ ಎಸೆದ, ಮೂಲಭೂತ ಹಕ್ಕುಗಳನ್ನು ಕಸಿದುಕೊಂಡ ಇಂಥ ತುರ್ತು ಪರಿಸ್ಥಿತಿ ಜನಜೀವನದ ಸಹಜ ಉಸಿರಾಟವನ್ನೇ ನಿಲ್ಲಿಸಿಬಿಟ್ಟಿತ್ತು. ದೇಶದ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ನಿಂತುಹೋಗಿದ್ದರೂ ‘ರೈಲು ಬಸ್ಸು ಸಮಯಕ್ಕೆ ಸರಿಯಾಗಿ ಹೊರಡುತ್ತಿದ್ದವು’ ಎಂದು ಈ ಅವಧಿಯನ್ನು ಕೆಲವರು ಹೊಗಳುತ್ತಾರಲ್ಲ-  ಛೇ, ಇಂದಿರಾ ಮೇಡಂ ಕಲಿಸಿದ ಪಾಠ ಇಷ್ಟೇನೇ!

ತುರ್ತು ಪರಿಸ್ಥಿತಿ ಇದರ ಜೊತೆಗೆ ಇನ್ನೂ ಏನೇನು ಮಾಡಬಾರದ್ದನ್ನು ಮಾಡಿತು ಎನ್ನುವುದನ್ನು ಮುಂದೆ ನೇಮಕಗೊಂಡ ಷಾ ಆಯೋಗದ ವರದಿ ಬಹಳ ವಿವರವಾಗಿ ಪ್ರಕಟಿಸಿತು. ಆದರೆ 1980 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿ, ಪರಶುರಾಮ ಕ್ಷತ್ರಿಯರನ್ನು ಹುಡುಕಿಹುಡುಕಿ ಕೊಂದಂತೆ ಎಲ್ಲ ರಾಜ್ಯಗಳಲ್ಲೂ ಇದ್ದ ವರದಿಯ ಪ್ರತಿಗಳನ್ನು ಹುಡುಕಿಸಿ ನಾಶಮಾಡಿಸಿದರು. ಈಗ ಎರಾ ಚೆಳಿಯನ್ ಎಂಬ ಹಿರಿಯ ರಾಜಕಾರಣಿ ಷಾ ವರದಿಯನ್ನು ಪುಸ್ತಕ ರೂಪದಲ್ಲಿ ಮತ್ತೆ ಪ್ರಕಟಿಸಿದ್ದಾರೆ. ಅಷ್ಟಾಗಿ, ಜನಮಾನಸದಲ್ಲಿ ತುರ್ತು ಪರಿಸ್ಥಿತಿ ಬರೆದ ಕಡುಗೆಂಪು ಕಥೆಗಳಂತೂ ಹಚ್ಚಹಸಿರಾಗಿ ಉಳಿದೇ ಉಳಿಯುತ್ತವೆ.

1962 ರಲ್ಲಿ ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಸಹಜವಾಗಿ ಜಾರಿಯಾಗಿತ್ತು. 1966 ರಲ್ಲಿ ಮೊದಲ ಬಾರಿಗೆ ನಡೆದ ಮುಖ್ಯಮಂತ್ರಿಗಳ ಸಮ್ಮೇಳನ, ಇನ್ನೂ ಜಾರಿಯಲ್ಲಿದ್ದ ಆ ತುರ್ತು ಪರಿಸ್ಥಿತಿ ಮುಂದುವರೆಯಲಿ ಎಂದು ನಿರ್ಧರಿಸಿತು. ಇದನ್ನು ತಿಳಿದ ಕೂಡಲೇ ಇಂದಿರಾ ಗಾಂಧಿ ‘ಮಹನೀಯರೇ, ತುರ್ತು ಪರಿಸ್ಥಿತಿ ಮುಂದುವರಿಕೆಯನ್ನು ನಾನು ಒಪ್ಪುವುದಿಲ್ಲ’ ಎಂದು ಖಡಕ್ಕಾಗಿ ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದರಂತೆ. ಮುಂದೆ ತಾವೇ ತುರ್ತು ಪರಿಸ್ಥಿತಿ ಹೇರಿ, ಯುದ್ಧಕಾಲದ್ದಕ್ಕೂ ಶಾಂತಿಕಾಲದ ಆಂತರಿಕ ತುರ್ತು ಪರಿಸ್ಥಿತಿಗೂ ಇರುವ ವ್ಯತ್ಯಾಸವನ್ನು ಚೆನ್ನಾಗಿ ಮನವರಿಕೆ ಮಾಡಿಕೊಟ್ಟರು.

ಇಂದಿರಾಗೆ ಎಡಪಂಥೀಯರ ಬೆಂಬಲ ಇದ್ದರೂ ಬಲಪಂಥೀಯರ ಬೆದರಿಕೆ ಇತ್ತು. ತುರ್ತು ಪರಿಸ್ಥಿತಿಗೆ ಮೊದಲೇ ಜಯಪ್ರಕಾಶ ನಾರಾಯಣ್ ಆರಂಭಿಸಿದ ನವನಿರ್ಮಾಣ ಆಂದೋಲನ ಅವರಲ್ಲಿ ನಡುಕ ಹುಟ್ಟಿಸಿತ್ತು. ಅದರ ನೆರವಿನಿಂದಲೇ ಅಧಿಕಾರಕ್ಕೆ ಬಂದ ಗುಜರಾತಿನ ಬಾಬು ಭಾಯಿ ಪಟೇಲ್, ತುರ್ತು ಪರಿಸ್ಥಿತಿ ವಿರೋಧಿಗಳಿಗೆ ಜೀವ ರಕ್ಷಿಸಿಕೊಳ್ಳಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೆರವಾಗುತ್ತಿದ್ದರು. ತಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದ ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದ ಹಾಗೆ ಕೇಳುವಂತೆ ಮಾಡುವುದು ಇಂದಿರಾಗೆ ಮುಖ್ಯ ಕೆಲಸವೇ ಆಗಿತ್ತು. ಆಗ ಅವರಿಗೆ ಇಂಥ ಸವಾಲು ಒಡ್ಡಿದ ರಾಜ್ಯ ಗುಜರಾತ್. ತುರ್ತು ಪರಿಸ್ಥಿತಿ ಸಮಯದಲ್ಲಿ ಗುಜರಾತಿನಲ್ಲಿ ನಡೆದ ವಿದ್ಯಾರ್ಥಿ-ಯುವಜನರ ಚಳವಳಿ, ಸಾಂಸ್ಕೃತಿಕ ಆಂದೋಲನ, ಪತ್ರಿಕೆಗಳ ಪ್ರತಿರೋಧ ಇವೆಲ್ಲವನ್ನೂ ವಿವರವಾಗಿ ದಾಖಲಿಸುವ ‘ಆಪತ್ಕಾಲದಲ್ಲಿ ಗುಜರಾತ್’ ಎಂಬ ಹೆಸರಿನ ಪುಸ್ತಕ ಮರುವರ್ಷವೇ 1978 ರಲ್ಲಿ ಪ್ರಕಟವಾಯಿತು. ಆರ್‍ಎಸ್‍ಎಸ್‌ನ ಸಾಮಾನ್ಯ ಕಾರ್ಯಕರ್ತನಾಗಿ ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಇಪ್ಪತ್ತೈದರ ಯುವಕ ಬರೆದ ಮೊದಲ ಪುಸ್ತಕ ಅದು. ಆ ಯುವಕನ ಹೆಸರು ನರೇಂದ್ರ ಮೋದಿ.

ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ಉಗ್ರವಾಗಿ ವಿರೋಧಿಸಿದ್ದ ನರೇಂದ್ರ ಮೋದಿ ಇಂದು ಪ್ರಧಾನಿಯಾಗಿದ್ದಾರೆ ಮತ್ತು ದೇಶದ ಮೇಲೆ ತುರ್ತು ಪರಿಸ್ಥಿತಿಯ ನೆರಳು ಹಾಯುತ್ತಿದೆ ಎಂಬ ಅಡ್ವಾಣಿ ಆರೋಪ ಕೇಳಿಸಿಕೊಳ್ಳುತ್ತಿದ್ದಾರೆ. ನಡುವೆ ಇತಿಹಾಸ ಚಕ್ರ ಎಷ್ಟೊಂದು ಸುತ್ತು ಉರುಳಿದೆ!

ಅಡ್ವಾಣಿ ಮತ್ತು ಅವರ ಆತಂಕ- ಆರೋಪಗಳ ಸಮರ್ಥನೆ ಇಲ್ಲಿ ಬೇಡ. ಆದರೆ ಅಸಾಮಾನ್ಯ ಹಿನ್ನೆಲೆಯ ಇಂದಿರಾ ಗಾಂಧಿ ಮತ್ತು ಸಾಮಾನ್ಯ ಹಿನ್ನೆಲೆಯ ನರೇಂದ್ರ ಮೋದಿ ಅವರಿಬ್ಬರ ರಾಜಕೀಯ ಬದುಕನ್ನು ಹಾಗೇ ಸುಮ್ಮನೆ ನೋಡುತ್ತ ಹೋದರೆ ಎಷ್ಟೊಂದು ಸಂಗತಿಗಳು ಇಲ್ಲಿ ಸರ್ವಾಧಿಕಾರದ ಬೆಟ್ಟಕ್ಕೆ ಮೆಟ್ಟಿಲುಗಳಾಗುತ್ತಿವೆ! ಜನರು ಆರಿಸಿದ ಪ್ರತಿನಿಧಿ, ಸಂಸತ್ ಸದಸ್ಯೆ, ಮಂತ್ರಿ, ನಾಯಕಿ, ಪ್ರಧಾನಿ ಇತ್ಯಾದಿ ಆಗಿದ್ದ ಇಂದಿರಾ, ರಾಜಕೀಯ ವ್ಯಾಖ್ಯಾನಕಾರರು ಹೇಳುವಂತೆ ನೋಡನೋಡುತ್ತ ‘ಚುನಾಯಿತ ಚಕ್ರವರ್ತಿನಿ’ ಆಗಿಬಿಟ್ಟರು. ತಾನು ದೇಶವನ್ನು ರಕ್ಷಿಸುವ ದೇವತೆ ಎಂಬ ಭ್ರಮೆ ಅವರನ್ನು ಆವರಿಸಿಕೊಂಡಿತು.

ತನ್ನಿಂದಲೇ ಸರ್ಕಾರ, ತಾನೇ ಸರ್ಕಾರ, ತನ್ನಿಂದಲೇ ದೇಶ, ತಾನೇ ದೇಶ ಎಂಬುದೆಲ್ಲ ಕೊನೆಗೆ ‘ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ’ ಎಂಬ ಭಟ್ಟಂಗಿ ಮಂಡಲಿಯ, ಭಜನಾ ಮಂಡಲಿಯ ಮಂತ್ರವಾಯಿತು. ‘ದೇಶವನ್ನು ರಕ್ಷಿಸುವುದು ನನ್ನ ಕರ್ತವ್ಯ’ ಎಂದು ಅವರು ಎಲ್ಲ ಸಂದರ್ಶನಗಳಲ್ಲಿ ಹೇಳುತ್ತಿದ್ದರು. ಆದರೆ ಪ್ರಜಾಪ್ರಭುತ್ವವನ್ನು ರಕ್ಷಿಸುವುದೂ ಅವರ ಕರ್ತವ್ಯವಾಗಿತ್ತು.

ಆಳುವವರು ಭ್ರಮಾಧೀನತೆಯನ್ನೇ ಕನ್ನಡಿಯಂತೆ ಹಿಡಿದಾಗ, ಎಷ್ಟು ಬಾರಿ ನೋಡಿಕೊಂಡರೂ ಅಲ್ಲಿ ಕಾಣುವುದು ಅದರದೇ ಪ್ರತಿಬಿಂಬ. ಇಂದಿರಾ ಅವರ ಈ ಭ್ರಮಾಧೀನತೆಯ ಪರೀಕ್ಷೆ ಆದದ್ದು, ಅವರ ಸ್ವಂತ ರಾಜಕೀಯ ಬಿಕ್ಕಟ್ಟು ಬಲಗೊಂಡಾಗ. ಆದರೆ ಇನ್ನೂ ಆರಂಭದಲ್ಲೇ - ನಾನು ಪ್ರಧಾನಿ ಆಗುವ ಮೊದಲು ನಮ್ಮ ದೇಶದ ಜನರಿಗೆ ತಾವು ಭಾರತೀಯರೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿತ್ತು- ಎಂಬರ್ಥದ ಮಾತು ಯಾರಿಗೆ ನಾಚಿಕೆ ತರಿಸಬೇಕು? ಹೀರೊಗಳು ಏಕಾಂಗಿಯಾಗಿ ಹೊಡೆದಾಡಿ ಗೆಲ್ಲುವುದು ಸಿನಿಮಾಗಳಲ್ಲಿ ಮಾತ್ರ, ಉಳಿದದ್ದೆಲ್ಲ ಸಾಮೂಹಿಕ ಸಂಘಟಿತ ಹೋರಾಟಗಳೇ ಎಂದು ಯಾರು ಯಾರಿಗೆ ಹೇಳಬೇಕು?   

2014ರ ಚುನಾವಣೆ ನರೇಂದ್ರ ಮೋದಿ ಅವರ ಹೆಸರಿನಲ್ಲೇ ಆರಂಭಗೊಂಡು, ಅವರ ಹೆಸರಿನಲ್ಲೇ ದಿಗ್ವಿಜಯ ಪಡೆಯಿತು. ಆದರೆ, ಒಂದು ವರ್ಷವಾದರೂ ಈ ‘ಸ್ವದರ್ಶನ ಚಕ್ರ’ ಅವರ ಹೆಸರಿನ ಸುತ್ತ ಸುತ್ತುತ್ತಿದೆಯೇ ಹೊರತು ಸರ್ಕಾರದತ್ತ ಸುಳಿಯುತ್ತಿಲ್ಲ. ಚುನಾವಣೆಗಳಲ್ಲಿ ‘ಅಬ್ ಕೀ ಬಾರ್ ಮೋದಿ ಸರ್ಕಾರ್’ ಅಥವಾ ‘ಪಾಂಚ್ ಸಾಲ್ ಕೇಜ್ರಿವಾಲ್’ ಮುಂತಾದ ಮತಮಂತ್ರಗಳೆಲ್ಲ ವ್ಯಕ್ತಿಯ ಆರೋಹಣಕ್ಕಲ್ಲದೆ ಪಕ್ಷದ ಉದ್ಧಾರಕ್ಕಲ್ಲ; ಸಿದ್ಧಾಂತದ ಪ್ರಚಾರಕ್ಕಂತೂ ಅಲ್ಲವೇ ಅಲ್ಲ.

ಅಷ್ಟಾಗಿ ಶೇಕಡ 31 ರಷ್ಟು ಮತವಷ್ಟೇ ಬಹುಮತ ಆಗಿರುವಾಗ ಯಾರೂ ಹೆಚ್ಚು ಬೀಗುವ ಕಾರಣವಿಲ್ಲ. ಸಹಮತ ಸಾಧಿಸಲಾಗದೆ ಸುಗ್ರೀವಾಜ್ಞೆಗಳನ್ನೇ ನೆಚ್ಚುವುದು ಒಳ್ಳೆಯ ಸರ್ಕಾರದ ಕ್ರಮ ಎಂದು ಯಾರೂ ಹೇಳುವುದಿಲ್ಲ. ಮೂಲಭೂತವಾದಿ ಕೂಗುಮಾರಿಗಳ ಬಾಯಿ ಮುಚ್ಚಿಸದೇ ಇರುವುದನ್ನು ಪ್ರಾಮಾಣಿಕತೆ, ಪಾರದರ್ಶಕತೆ ಎಂದು ಯಾರೂ ನಂಬುವುದಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಎಲ್ಲ ಅಂಗಗಳನ್ನೂ ನಿರ್ಲಕ್ಷಿಸುವುದು ಅಭಿವೃದ್ಧಿಯತ್ತ ನಡೆ ಖಂಡಿತಾ ಅಲ್ಲ. ನಲವತ್ತು ವರ್ಷಗಳಿಂದ ಒಂದೂ ಯುದ್ಧ ನಡೆದೇ ಇಲ್ಲ ಎಂಬ ರಕ್ಷಣಾ ಮಂತ್ರಿಯ ಹಳಹಳಿಕೆ ಮುಂದಿನ ಚುನಾವಣೆಯ ಮನೋಹರ ಪ್ರಣಾಳಿಕೆ ಎನ್ನುವುದು ಜನರಿಗೆ ಅರ್ಥ ಆಗದೇ ಇರುವುದಿಲ್ಲ. ಆಮೇಲೆ ಐಪಿಎಲ್ ಕ್ರಿಕೆಟ್ ಖ್ಯಾತಿಯ ಲಲಿತ್ ಮೋದಿ ಪ್ರಕರಣದ ಟೆಸ್ಟ್‌ನಲ್ಲಿ ಇಡೀ ಬಿಜೆಪಿ ತಂಡ ‘ಕಾಟ್ ಅಂಡ್ ಬೌಲ್ಡ್’ ಆಗಿದ್ದು ಅಚ್ಛೇ ದಿನ್ ಬರುವ ಸೂಚನೆ ಎಂದು ಯಾರಿಗೂ ಅನ್ನಿಸುವುದಿಲ್ಲ.  

ನರೇಂದ್ರ ಮೋದಿ ಎಂಬ ವಾಕ್ಚತುರ ರಾಜಕೀಯ ರಂಗಮಧ್ಯದಲ್ಲಿ ಪ್ರಖರ ಬೆಳಕಿನಲ್ಲೇನೋ ನಿಂತಿದ್ದಾರೆ, ಆದರೆ ಅವರು ಪ್ರಧಾನ ಮಂತ್ರಿಯ ಪಾತ್ರ ಪ್ರವೇಶ, ಪರಕಾಯ ಪ್ರವೇಶ ಮಾಡುವುದು ಯಾವಾಗ? ‘ಆಡದೇ ಮಾಡುವವರು ರೂಢಿಯೊಳಗುತ್ತಮರು’ ಎಂಬ ಮಾತೇ ನಿಜ ಎಂದು ಅವರ ಮಂತ್ರಿ ಮಂಡಲ ಅರಿತುಕೊಳ್ಳುವುದು ಯಾವಾಗ? ನರೇಂದ್ರ ಮೋದಿ ಅವರ ಬದಲು ಅವರ ಸರ್ಕಾರದ ಕೆಲಸಗಳು ಮಾತನಾಡಲು ಆರಂಭಿಸುವುದು ಯಾವಾಗ? ಸಂತ ಜ್ಞಾನೇಶ್ವರರ ನಾಡಿನಲ್ಲಿ ‘ಸ್ವಂತ ನಾನೇಶ್ವರ’ರು ಹೆಚ್ಚು ಕಾಲ ಬಾಳಲಾರರು ಎಂಬ ಜ್ಞಾನೋದಯ ಆಗುವುದು ಯಾವಾಗ?
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT