ಅಸಹನೆ ಎನ್ನುವುದು ಮಾನವ ಸ್ವಭಾವಕ್ಕೆ ಹೊಸದೇನಲ್ಲ. ಅಸಹನೆಯ ಅಗಣಿತ ಅವತಾರಗಳನ್ನು ಬಲ್ಲವರೆಲ್ಲ, ಸಮಕಾಲೀನ ಸಂದರ್ಭದಲ್ಲಿ ಅದು ಹಳೆಯ ಮತ್ತು ಹೊಚ್ಚಹೊಸ ರೀತಿಗಳಲ್ಲಿ ಪ್ರಕಟವಾಗುತ್ತಿದೆ ಎನ್ನುವುದನ್ನು ಗಮನಿಸುತ್ತಿದ್ದಾರೆ. ಚುನಾವಣೆಗಳು, ಪ್ರಚಾರ ಸಭೆಗಳು, ಕತ್ತೆಗಳು, ರೆಸಾರ್ಟ್‌ಗಳು, ಸೆರೆಮನೆಗಳು, ಡೈರಿಗಳು, ಕಪ್ಪಕಾಣಿಕೆಗಳು...
ಇವುಗಳೆಲ್ಲ ಇದ್ದಮೇಲೆ ಮಾತೆಂಬುದು ಜ್ಯೋತಿರ್ಲಿಂಗವಾಗಿ ಇರುವುದು ಸಾಧ್ಯವಿಲ್ಲ. ಆದರೆ ಅಸಹನೆಯ ಪ್ರಕಟಣೆ ಎಷ್ಟು ಆತಂಕ ಹುಟ್ಟಿಸುತ್ತದೋ ಅದರ ವಿರುದ್ಧ ವ್ಯಕ್ತಪಡಿಸುವ ಪ್ರತಿರೋಧವೂ ಅದೇ ಅಸಹನೆಯ ವೇಷ ಧರಿಸುವುದು ಅಷ್ಟೇ ಆತಂಕ ಹುಟ್ಟಿಸುತ್ತಿದೆ.
ಕರ್ನಾಟಕದಲ್ಲಿ ಅಸಹನೆ, ಅಸಹಿಷ್ಣುತೆಯ ಕುಲುಮೆಯಾಗಿರುವ ಕರಾವಳಿಯಲ್ಲಿ ಹಿಂದೂ ಸಂಘಟನೆಗಳು ಹಾಕಿದ ಬೆದರಿಕೆಗಳ ನಡುವೆಯೂ ಮೊನ್ನೆ ಸೌಹಾರ್ದ ರ್ಯಾಲಿ ಸುಗಮವಾಗಿ ನಡೆಯಿತು. ಜನರಿಂದ ಆಯ್ಕೆಯಾದ ಮುಖ್ಯಮಂತ್ರಿಯೊಬ್ಬರಿಗೆ ‘ಮಂಗಳೂರಿಗೆ ಕಾಲಿಡಲು ಬಿಡುವುದಿಲ್ಲ’ ಎಂದು ಬೆದರಿಕೆ ಹಾಕುವುದು ಮತ್ತು ಬಂದ್ ಕರೆ ಕೊಡುವುದು ಅಪ್ಪಟ ಪ್ರಜಾಪ್ರಭುತ್ವ ವಿರೋಧಿ ನಿಲುವಲ್ಲದೆ ಬೇರೇನೂ ಅಲ್ಲ.
ಆದರೆ ಇದನ್ನು ಕರಾವಳಿಯ ಎಲ್ಲ ಪ್ರಗತಿಪರ ಮನಸ್ಸುಗಳು ಒಗ್ಗೂಡಿ ಎದುರಿಸಿದ ದಿಟ್ಟ ರೀತಿಯೇ ಗಮನಾರ್ಹ. ದೇಶದ ಅನೇಕ ಕಡೆ ಕಾಣುತ್ತಿರುವ ಶಾಂತಿ ಕದಡುವ ಸಂದರ್ಭಗಳಿಗೆ ಕರಾವಳಿಯ ಜನಪರ ಒಗ್ಗಟ್ಟು ನೀಡಿದ ಉತ್ತರ, ಒಂದು ದಿಕ್ಸೂಚಿಯೇ ಆಗಬಹುದು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭದ್ರತೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೂ ಒಂದು ಸರ್ಕಾರ ಮತ್ತು ಅದರ ಪೊಲೀಸ್ ವ್ಯವಸ್ಥೆ ಮಾಡಬೇಕಾದ ಕೆಲಸವೇ ಆಗಿತ್ತು.
ಸಮಾಜದ ಶಾಂತಿ ಕದಡಲು ನೆಪಗಳನ್ನು ಹೆಕ್ಕುವ ಅಸಹಿಷ್ಣು ಜನರಿಗೆ, ಅವರ ವಿಚಾರಗಳನ್ನು ವಿರೋಧಿಸುವ ಜನರೇ ಒಂದುಗೂಡಿ ರ್‍್ಯಾಲಿಯಲ್ಲಿ ಭಾಗವಹಿಸಿ ಉತ್ತರ ಕೊಟ್ಟರು. ಹಾಗಿದ್ದೂ ಸಮಾರಂಭವೊಂದರಲ್ಲಿ ರಾಜ್ಯದ ಆಹಾರ ಸಚಿವರು ವ್ಯಕ್ತಪಡಿಸಿದ ಅಸಹನೆಯ ಪ್ರತಿಕ್ರಿಯೆ ಅನೇಕರಿಗೆ ಅಪಥ್ಯವಾಗಿರಲು ಸಾಕು. ತಮ್ಮ ಜಿಲ್ಲೆಯಲ್ಲಿ ನಡೆದ ಸೌಹಾರ್ದ ರ್ಯಾಲಿಗೆ ಸಚಿವರಾಗಿ ಬೆಂಬಲ ನೀಡಿದ್ದ ಯು.ಟಿ. ಖಾದರ್ ಅವರು ‘ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸುವುದನ್ನು ವಿರೋಧಿಸುವ ಶಕ್ತಿಗಳು ಅವರ ಚಪ್ಪಲಿಗೂ ಸಮಾನವಲ್ಲ.
ಸಂವಿಧಾನವನ್ನು ಗೌರವಿಸದೇ ಇರುವ ಅಂತಹ ಜನರಿಗೆ ಚಪ್ಪಲಿಯಿಂದ ಹೊಡೆಯಬೇಕು’ ಎಂದು ಹೇಳಿರುವುದು ಅಸಹನೆಗೆ ಕೊಟ್ಟ ಅಸಹನೆಯ ಪ್ರತಿಕ್ರಿಯೆಯೇ ಆಗಿದೆ ಎಂದು ಅನ್ನಿಸಬಹುದು. ಸಹನೆ ಕಳೆದುಕೊಂಡ ಇಂಥ ಮಾತು ಮೊದಲಿಗೆ, ಅದು ಯಾರನ್ನು ಉದ್ದೇಶಿಸಿದೆಯೋ ಅವರಿಗೆ ಒಂದು ಅಸ್ತ್ರವಾಗಿ ಪರಿಣಮಿಸುತ್ತದೆ. ಜೊತೆಜೊತೆಗೆ ಪ್ರಸ್ತುತ ವಿವಾದವನ್ನು ಅಡ್ಡದಾರಿಗೆಳೆಯುತ್ತದೆ ಮತ್ತು ಪ್ರತಿರೋಧದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಎನ್ನುವುದೂ ಬಹಳ ಮುಖ್ಯ.
ಸಾರ್ವಜನಿಕ ಸಂಕಥನದ ಗಾಂಭೀರ್ಯವನ್ನು ಹಗುರ ಮಾಡುವ ಅಸಹನೆಯ ಮಾತಿಗಿರುವಷ್ಟು ಸೂತಕ ಇನ್ನಾವುದಕ್ಕೂ ಇಲ್ಲ. ಯಾರೋ ಒಂದಷ್ಟು ಜನ ಬೈಯಲು ಅಥವಾ ಇಂದಿನ ನವಮಾಧ್ಯಮದ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಯಾರೋ ಒಂದಷ್ಟು ಜನ ಬೈದಾಡಿಕೊಳ್ಳಲು ಇದೊಂದು ವಸ್ತುವಾಯಿತು ಎಂಬಷ್ಟಕ್ಕೆ ಇಂಥದನ್ನು ಉಪೇಕ್ಷಿಸುವಂತಿಲ್ಲ.
‘ಚಪ್ಪಲಿ’ ಎನ್ನುವುದು ವೈಯಕ್ತಿಕ ದ್ವೇಷವನ್ನು ಮತ್ತು ತಾತ್ವಿಕ ಅಸಹನೆಯನ್ನು ಎಲ್ಲರೆದುರಿಗೆ ವ್ಯಕ್ತಪಡಿಸುವ ಪದವಾಗಿ, ಪದಾರ್ಥವಾಗಿ ಎಂದಿನಿಂದಲೂ ಬಳಕೆಯಾಗುತ್ತಲೇ ಇದೆ. ಧಾರವಾಡದ ಇತ್ತೀಚಿನ ಸಾಹಿತ್ಯ ಸಂಭ್ರಮದಲ್ಲಿ ವಿದ್ವಾಂಸರು ಝಳಪಿಸಿದ ಚಪ್ಪಲಿ, ಆಹಾರ ಸಚಿವರು ಮಾತಿಗೆಳೆದ ಚಪ್ಪಲಿ ಇವೆಲ್ಲವೂ ಕಾಲಾತೀತವಾದ ಪಾದುಕಾ ಪುರಾಣಕ್ಕೆ ಹೊಸದಾಗಿ ಸೇರ್ಪಡೆಯಾದ ಪ್ರಸಂಗಗಳಷ್ಟೆ.
ಚಪ್ಪಲಿಯಲ್ಲಿ, ಬೂಟಿನಲ್ಲಿ ಹೊಡೆಯುವುದು, ಹೊಡೆಯಬೇಕೆಂದು ಹೇಳುವುದು, ಹೊಡೆಯುತ್ತೇನೆ ಎಂದು ಗದರಿಸುವುದು ಇವುಗಳ ನಡುವೆ ಅಸಹನೆಯ ಪ್ರಮಾಣದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ- ಎಲ್ಲವೂ ಅಸಂಸದೀಯ ಮಾತುಗಳೇ. ಹಳ್ಳಿಗಳಲ್ಲಿ ಆಗದವರನ್ನು, ಅಪರಾಧಿಗಳನ್ನು ಕಂಬಕ್ಕೆ ಕಟ್ಟಿ ಚಪ್ಪಲಿಯಿಂದ ಹೊಡೆಯುವುದು, ಚಿಲ್ಲರೆ ವಿಷಯಗಳಿಗೂ ಚಪ್ಪಲಿಯಲ್ಲಿ ಹೊಡೆದಾಡುವುದು, ನ್ಯಾಯಾಲಯದಲ್ಲಿ ಚಪ್ಪಲಿ ಎಸೆಯುವುದು, ರಾಜಕಾರಣಿಗಳತ್ತ ರಾಜಕೀಯ ವೈರಿಗಳತ್ತ ಚಪ್ಪಲಿ ತೂರುವುದು, ಕಿಡಿಗೇಡಿತನದಿಂದ ಭಾವಚಿತ್ರ- ಪ್ರತಿಮೆಗಳಿಗೆ ಚಪ್ಪಲಿ ಹಾರ ಹಾಕುವುದು ಮುಂತಾದುವೆಲ್ಲ ನಮ್ಮ ದೇಶದಲ್ಲಿ ಈಗ ಒಂದು ಹೊಸ ಸುದ್ದಿಯೇ ಅಲ್ಲ. ನಮ್ಮ ಊರಿನದೇನು ವಿಶೇಷವಲ್ಲ ಬಿಡಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ನೋಡುವುದಾದರೆ-ಜಗತ್ತಿನಲ್ಲಿ ಚಪ್ಪಲಿ ನಡೆದಾಡದ ಜಾಗವೂ ಇಲ್ಲ, ಚಪ್ಪಲಿ ತೂರಾಡದ ಜಾಗವೂ ಇಲ್ಲ!
ಚಪ್ಪಲಿಯ ಚರಿತ್ರೆಯ ಹಾದಿಯಲ್ಲಿ ನಡೆದುಹೋದರೆ, ಕ್ರಿಸ್ತಪೂರ್ವದ ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ಹೋಗಬೇಕಾಗುತ್ತದೆ. ಅದಕ್ಕೆ ಕೆಲವು ದೇವತೆಗಳಿಗೂ ಹೆಚ್ಚಿನ ವಯಸ್ಸಾಗಿದೆ ಎಂದು ಮಾತ್ರ ಹೇಳಬಹುದು. ಚಪ್ಪಲಿಯ ಹುಟ್ಟಿನ ಬಗ್ಗೆ ಒಂದು ಕಥೆಯಿದೆ: ಒಂದಾನೊಂದು ಕಾಲದಲ್ಲಿ ಒಬ್ಬಾನೊಬ್ಬ ರಾಜನಿಗೆ ಉರಿಬಿಸಿಲಿನಲ್ಲಿ ನಡೆಯಲು ಬಹಳ ಕಷ್ಟವಾಯಿತು. ಅದಕ್ಕಾಗಿ ತಲೆಯ ಮೇಲೆ ಕೊಡೆ ಹಿಡಿದರೂ ಪಾದಗಳು ಸುಡುತ್ತಿದ್ದವು. ತಡೆದುಕೊಳ್ಳಲಾರದೆ, ತಾನು ನಡೆದಾಡುವ ದಾರಿಯಲ್ಲೆಲ್ಲ ಬಟ್ಟೆ ಹಾಸಬೇಕು ಎಂದು ರಾಜ ಆಜ್ಞೆ ಮಾಡಿದ.
ಆದರೆ ಅದನ್ನು ಎಷ್ಟು ಮಾಡಲು ಸಾಧ್ಯ ಎಂದು ಮಂತ್ರಿಯೊಬ್ಬ ಚಿಂತಿಸಿದ. ಊರಿಗೆಲ್ಲ ಬಟ್ಟೆ ಹಾಸುವ ಬದಲು ರಾಜನ ಪಾದಗಳಿಗೇ ರಕ್ಷಣೆ ಕೊಟ್ಟುಬಿಟ್ಟರೆ ಸಾಕು ಎಂದು ಮಂತ್ರಿ ಉಪಾಯ ಮಾಡಿದ. ಪಾದರಕ್ಷೆ ಬಂದದ್ದು ಹೀಗಂತೆ. ಇರಬಹುದು, ಹಿಂದಿನ ಆ ಕಾಲದಲ್ಲಿ ಬುದ್ಧಿವಂತರು ಮಾತ್ರ ಮಂತ್ರಿಗಳಾಗುತ್ತಿದ್ದರು ಮತ್ತು ರಾಜರನ್ನು ರಕ್ಷಿಸುವುದೇ ಅವರ ಮುಖ್ಯ ಕೆಲಸವಾಗಿರುತ್ತಿತ್ತು. ಚೀನೀ ಹುಡುಗಿಯರಿಗೆ ಚಿಕ್ಕಪಾದ ಇಲ್ಲದಿದ್ದರೆ ಮದುವೆಗೆ ಯೋಗ್ಯರಲ್ಲ ಎಂದು ಅವರ ಪಾದಗಳನ್ನು ಕಬ್ಬಿಣದ ಷೂಗಳಲ್ಲಿ ತೂರಿಸಿಡುತ್ತಿದ್ದರು. ಓಡುತ್ತಾ ಒಂದು ಷೂ ಕಳಚಿಕೊಂಡ ಸಿಂಡ್ರೆಲಾಳ ಅಕ್ಕತಂಗಿಯರು ಅನೇಕ ದೇಶಗಳ ಜನಪದ ಕಥೆಗಳಲ್ಲಿ ಇದ್ದಾರೆ.
ಪಾದುಕೆಗೆ ಇನ್ನಿಲ್ಲದ ಗೌರವವನ್ನು ತಂದುಕೊಟ್ಟ ರಾಮಾಯಣವನ್ನು ಮರೆಯುವಂತೆಯೇ ಇಲ್ಲ. ‘ನೀನು ಅಯೋಧ್ಯೆಗೆ ವಾಪಸಾಗಲು ಒಪ್ಪದಿದ್ದರೆ, ನಿನ್ನ ಪಾದುಕೆಗಳನ್ನೇ ಸಿಂಹಾಸನದ ಮೇಲಿಟ್ಟು ರಾಜ್ಯಭಾರ ಮಾಡುತ್ತೇನೆ’ ಎಂದ ಭರತನ ಸೋದರಪ್ರೇಮ, ರಾಮನ ಪಿತೃವಾಕ್ಯ ಪರಿಪಾಲನೆಯಷ್ಟೇ ನಮ್ಮ ಸಂಸ್ಕೃತಿಯ ಭಾಗವಾಗಿಹೋಗಿದೆ. ಭರತನೇನೋ ರಾಮನ ಪಾದುಕೆಗಳನ್ನು ತಲೆಯ ಮೇಲೆ ಇಟ್ಟುಕೊಂಡುಹೋಗಿ ಪರಮ ಪುಣ್ಯವಂತನಾದ, ಆದರೆ ರಾಮ ವನವಾಸದುದ್ದಕ್ಕೂ ಆಮೇಲೆ ಕಾಡಿನಲ್ಲಿ ಬರಿಗಾಲಿನಲ್ಲಿ ಹೇಗೆ ನಡೆದ ಎಂಬುದನ್ನು ಯೋಚಿಸುವುದೇ ಪರಮಪಾಪ.
ಸೀತೆಯನ್ನು ಪಾದಗಳಿಂದ, ಕೆಳಗೆ ಬಿದ್ದ ಅವಳ ಕಾಲಂದುಗೆಯಿಂದ ಮಾತ್ರ ಗುರುತು ಹಿಡಿಯುವ ಇತರರಿಗೂ ಗೌರವದ ಸ್ಥಾನವಿದೆ. ಈ ಪಾದ, ಪಾದುಕೆಯ ಕಥೆಗಳೆಲ್ಲ ಜನಮಾನಸದಲ್ಲಿ ಪೂಜ್ಯಭಾವನೆಯ ಸಂಕೇತಗಳು. ರಾಮಸೀತೆಯರು ನಡೆದಾಡಿದ ಹೆಜ್ಜೆಗುರುತುಗಳು ಇಡೀ ದೇಶದ ತುಂಬಾ ಕಾಣುತ್ತಿರುವುದೇ ಒಂದು ಬಹುದೊಡ್ಡ ರೂಪಕ.
ಆದರೆ ಮಹಾಭಾರತ ಯುದ್ಧ ಕುರಿತು ಹರಿಕಥೆದಾಸರು ಹೇಳುವ ಬಹಳ ಜನಪ್ರಿಯ ಕಥೆಯೊಂದಿದೆ: ಯುದ್ಧದಲ್ಲಿ ಪಾಂಡವರಿಗೆ ಜಯ ಸಿಗಲೇಬೇಕೆಂದು ಬಯಸಿದ್ದ ಕೃಷ್ಣ, ಹಿರಿಯನಾದ ಧರ್ಮರಾಯನನ್ನು ಅಜ್ಜ ಭೀಷ್ಮನ ಬಳಿಗೆ ಕಳಿಸಿ, ಶಿಖಂಡಿಯನ್ನು ಮುಂದಿಡುವ ಉಪಾಯದ ವರವನ್ನು ತರಿಸಿಕೊಂಡಿದ್ದ. ಆದರೂ ಅದರಲ್ಲಿ ನಂಬಿಕೆ ಸಾಲದೆಂದೋ ಏನೋ ‘ಭೀಷ್ಮನ ಪಾದಕ್ಕೆ ಬಿದ್ದು ವರ ಕೇಳಿಕೋ’ ಎಂದು ದ್ರೌಪದಿಯನ್ನು ಭೀಷ್ಮನ ಶಿಬಿರದ ಬಳಿಗೆ ರಹಸ್ಯವಾಗಿ ಕರೆದೊಯ್ದು ಅವಳೊಬ್ಬಳನ್ನೇ ಒಳಗೆ ಕಳುಹಿಸಿದ.
ಶಿಬಿರದ ದ್ವಾರದಲ್ಲಿ ದ್ರೌಪದಿ ಬಿಟ್ಟ ಪಾದರಕ್ಷೆಗಳು ಕೌರವನ ಬೇಹುಗಾರರ ಕಣ್ಣಿಗೆ ಬಿದ್ದರೆ ಅನಾಹುತ ಎಂದು ಭಾವಿಸಿದ ಕೃಷ್ಣ ಅವುಗಳನ್ನು ತನ್ನ ಕಂಕುಳಲ್ಲಿ ಇಟ್ಟುಕೊಂಡು ಮರೆಯಲ್ಲಿ ನಿಂತುಕೊಂಡ. ಆದರೆ ಸೂಕ್ಷ್ಮಜ್ಞನಾದ ಭೀಷ್ಮನಿಗೆ ಅವನೂ ಬಂದಿರುವುದು ಗೊತ್ತಾಗಿ, ಥಟ್ಟನೆ ಹೊರಗೆ ಬಂದು ಕೃಷ್ಣನನ್ನು ಅಪ್ಪಿಕೊಂಡ. ಆ ರಭಸಕ್ಕೆ ಕೃಷ್ಣನ ಕಂಕುಳಲ್ಲಿದ್ದ ದ್ರೌಪದಿಯ ಪಾದರಕ್ಷೆಗಳು ಕೆಳಗೆ ಬಿದ್ದವು. ‘ನಿನ್ನ ಪಾದರಕ್ಷೆಗಳನ್ನು ಶ್ರೀಕೃಷ್ಣ ಪರಮಾತ್ಮನೇ ಮೈಮೇಲೆ ಮುಚ್ಚಿಟ್ಟುಕೊಂಡಮೇಲೆ, ಯುದ್ಧದಲ್ಲಿ ನಿನಗಲ್ಲದೆ ಇನ್ನಾರಿಗೆ ಜಯ, ನಿಶ್ಚಿಂತೆಯಿಂದ ಹೋಗು ದ್ರೌಪದಿ’ ಎಂದು ಭೀಷ್ಮ ನಗುತ್ತಾ ಕಳಿಸಿಕೊಟ್ಟ. ಈ ಕಥೆ ಹೇಳುತ್ತಿರುವುದು ಕೃಷ್ಣನ ರಾಜಕೀಯ ಚಾತುರ್ಯದ ಮಹಿಮೆಯೊಂದನ್ನೇ ಅಲ್ಲ.
ಭಾರತೀಯ ಸಂಸ್ಕೃತಿಯಲ್ಲಿ ಪಾದ, ಪಾದುಕೆ ಎರಡೂ ಮನಸ್ಸಿನ ಭಾವನೆಗಳ ಎರಡೂ ತುದಿಗಳಿಗೆ ಸಂಕೇತವಾಗಿವೆ. ಭಕ್ತಿ, ಗೌರವ ಸಮರ್ಪಿಸಲು ಹಾಗೆಯೇ ದ್ವೇಷ, ತಿರಸ್ಕಾರ ತೋರಿಸಲು ಪಾದವೂ ಬೇಕು, ಪಾದುಕೆಯೂ ಬೇಕು. ಅದಕ್ಕೆ ಅವರದು, ಇದಕ್ಕೆ ಇವರದು ಎಂಬುದು ಮಾತ್ರ ವ್ಯತ್ಯಾಸವಷ್ಟೆ. ಗೋವು ಬದುಕಿರುವಾಗ ಹಾಲಿಗೆ ಮತ್ತು ಪೂಜೆಗೆ, ಸತ್ತಾಗ ಅದರ ಚರ್ಮ ನೀರಿನ ಚೀಲಕ್ಕೆ ಮತ್ತು ಚಪ್ಪಲಿಗೆ ಎನ್ನುವುದು ಜನರಲ್ಲಿ ಶತಮಾನಗಳ ಹಳೆಯ ಅಭ್ಯಾಸ. ಪಾದಪದ್ಮ, ಪದ್ಮಚರಣ, ಪಾದಕಮಲಗಳ ಆರಾಧನೆಯಂತೂ ಇದ್ದೇ ಇದೆ.
ಪಜ್ಯಭಾವವನ್ನು ತೋರಿಸಲು ಪಾದ ತೊಳೆದು ಪಾದೋದಕವನ್ನು ತೀರ್ಥವೆಂದು ಕುಡಿಯುವುದರ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಸನ್ಯಾಸಿಮುನಿಗಳ ಮರದ ಪಾದುಕೆಗಳಿಗೂ ಅವರ ಪಾದಗಳಷ್ಟೇ ಮರ್ಯಾದೆಯಿದೆ. ನಂತರ ಅವರ ಗದ್ದುಗೆಗಳ ಹಾಗೆ ಪಾದುಕೆಗಳ ಪೂಜೆಯೂ ಹಲವು ದೇಶಗಳಲ್ಲಿ, ಧರ್ಮಗಳಲ್ಲಿ ಇದ್ದೇ ಇದೆ. ಪಾದುಕೆಗಳ ಬಗ್ಗೆ ಹಿಂದೂ ಧರ್ಮದಂತೆ ಬೌದ್ಧ, ಜೈನ ಧರ್ಮಗಳಲ್ಲೂ ವಿವಿಧ ಕಾಲಘಟ್ಟಗಳಲ್ಲಿ ಆರಾಧನಾಭಾವವಿರುವುದು ಕಂಡುಬರುತ್ತದೆ. ಶ್ರೀಪಾದ, ವಿಷ್ಣುಪಾದದಂತೆ ಬುದ್ಧಪಾದವೂ ಇದೆ.
ಪೂಜ್ಯಭಾವನೆ ವ್ಯಕ್ತಪಡಿಸಲು, ಭಕ್ತಿಗೌರವ ಸಲ್ಲಿಸಲು ನಿಮಿತ್ತವಾಗಿದ್ದ ಪಾದುಕೆಗಳು ಅದಕ್ಕೆ ವಿರುದ್ಧವಾದ ಮತ್ತೊಂದಕ್ಕೆ ಬಳಕೆಯಾಗುವುದೂ ಬಹಳ ಹಳೆಯದೇ. ಎಲ್ಲ ಕಾಲದಲ್ಲೂ ಇತರರ ಧರ್ಮ ಮತ್ತು ಧಾರ್ಮಿಕ ವಿಚಾರಗಳಿಗೆ ಒಪ್ಪಿಗೆ ಇಲ್ಲದಿದ್ದಾಗ ಕಟುಟೀಕೆ ಕಂಡುಬರುತ್ತದೆ. ಸುಮ್ಮನೆ ನೆನಪಿಸಿಕೊಳ್ಳುವುದಾದರೆ, ನಮ್ಮ ವಚನಕಾರರೂ ಕಟುವಾಗಿ ಬೈಯಲು ಚಪ್ಪಲಿಯನ್ನು ಬಳಸಿಕೊಂಡಿದ್ದಾರೆ.
ಯಾರ್‍್ಯಾರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎನ್ನುವ ವಿಚಾರದಲ್ಲಿ ಅಂಬಿಗರ ಚೌಡಯ್ಯನಂತೂ ಬಹಳ ಧಾರಾಳಿಯಾಗಿದ್ದಾನೆ. ‘ಎಡದ ಪಾದ ಎಕ್ಕಡದಿಂದೆ ಪಟಪಟನೆ ಹೊಡೆ’ ಎಂದಾತ ನಮ್ಮ ಅಂಬಿಗರ ಚೌಡಯ್ಯ. ನಾವು ಪರಮವಿರಕ್ತರು, ಚರಮೂರ್ತಿಗಳು ಎಂದೆಲ್ಲ ಹೇಳಿಕೊಂಡು, ಹಣ ಬೇಡಿತಂದು ಮಠದೊಳಗೆ ಮಡಗಿಕೊಳ್ಳುವ, ಪರಸ್ತ್ರೀಯರ ಸಂಗ ಮಾಡುವ ದುರಾಚಾರಿ ಕಡುಪಾತಕರನ್ನು ಮನೆಗೆ ಕರೆತಂದು ಅವರ ಪಾದತೀರ್ಥ ತೆಗೆದುಕೊಳ್ಳುವ ಭಕ್ತರಿಗೂ ಕಟುವಾಗಿ ಬೈಯುವ ಅಂಬಿಗರ ಚೌಡಯ್ಯ, ಅಂಥವರ ಮೂಗು ಸೀಳಿ ಮೆಣಸು ತುಂಬಿ ಎಡಗಾಲಿನ ಚಪ್ಪಲಿಯಿಂದ ಪಟಪಟನೆ ಹೊಡೆಯಬೇಕು ಎಂದು ಹೇಳುತ್ತಾನೆ. ಅಂಬಿಗರ ಚೌಡಯ್ಯನ ಕ್ರೋಧ ಇನ್ನೂ ಹಲವು ವಚನಕಾರರಲ್ಲೂ ಕಾಣುತ್ತದೆ.
ನಮ್ಮ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಚರ್ಮಕ್ಕೂ ಚಪ್ಪಲಿಗೂ ಜಾತಿ ಪದ್ಧತಿಗೂ ಅನಿವಾರ್ಯ ಸಂಬಂಧ ಇರುವುದನ್ನು ಮರೆಯುವಂತೆಯೇ ಇಲ್ಲ. ತಮ್ಮ ಕಣ್ಣೆದುರಿಗೆ ಚಪ್ಪಲಿ ಧರಿಸಿ ಓಡಾಡುವ ದಲಿತರನ್ನು ನಿರ್ದಯವಾಗಿ ಹೊಡೆದುಹಾಕುವ ಮೇಲ್ಜಾತಿಯ ಜನರಿರುವ ಹಳ್ಳಿಗಳು ನಮ್ಮ ದೇಶದ ತುಂಬಾ ಇವೆ. ಇಂಥ ಚರಿತ್ರೆಯುಳ್ಳ ಚಪ್ಪಲಿ, ಕಾಲಿನಲ್ಲೇ ಇದ್ದರೆ ಒಳ್ಳೆಯದು, ಅದು ಕೈಗೆ, ಬಾಯಿಗೆ ಬರದಿದ್ದರೆ ಚೆನ್ನ. ಅಸಹನೆ, ಅಸಹಿಷ್ಣುತೆ, ಅಸಮ್ಮತಿ ವ್ಯಕ್ತಪಡಿಸಲು ಪದಗಳಿಗೆ ಶಕ್ತಿಯಿದೆ ಎಂದು ನಂಬಿದರೆ ಸಾಕು.
editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.