ADVERTISEMENT

ಮಾತಿನ ಮಂಟಪದಲ್ಲೇ ಉಳಿದ ಮಹಿಳಾ ಮೀಸಲಾತಿ

ಆರ್.ಪೂರ್ಣಿಮಾ
Published 14 ಫೆಬ್ರುವರಿ 2017, 20:17 IST
Last Updated 14 ಫೆಬ್ರುವರಿ 2017, 20:17 IST
ಮಾತಿನ ಮಂಟಪದಲ್ಲೇ ಉಳಿದ ಮಹಿಳಾ ಮೀಸಲಾತಿ
ಮಾತಿನ ಮಂಟಪದಲ್ಲೇ ಉಳಿದ ಮಹಿಳಾ ಮೀಸಲಾತಿ   
ನಮ್ಮ ದೇಶದ ರಾಜಕಾರಣದಲ್ಲಿರುವ ವಿವಿಧ ರಾಜಕೀಯ ಪಕ್ಷಗಳ ನಡುವೆ ಯಾವುದಾದರೂ ವಿಚಾರಕ್ಕೆ ಒಮ್ಮತ ಇದೆಯೇ? ಒಂದು ಹಾಸ್ಯದ ಮಾತು ಹೇಳುವ ಪ್ರಕಾರ, ಎರಡೇ ಎರಡು ವಿಚಾರಗಳಿಗೆ ಮಾತ್ರ ಒಕ್ಕೊರಲಿನ ಒಮ್ಮತ ಇದೆ- ಮೊದಲನೆಯದು ಮಹಿಳಾ ಮೀಸಲಾತಿ ಮಸೂದೆಯನ್ನು ಯಾವುದೋ ನೆಪ ಒಡ್ಡಿ ತಡೆಯುವುದು. ಎರಡನೆಯದು ಸಂಸದರ ಮತ್ತು ಶಾಸಕರ ವೇತನ ಭತ್ಯೆ ಸವಲತ್ತುಗಳನ್ನು ಚರ್ಚೆಯಿಲ್ಲದೆ ಏರಿಸುವುದು.  ಇದು ಬರೀ ತಮಾಷೆಯ ಮಾತಲ್ಲ, ನಮ್ಮ ಕಾಲದ ಅಪ್ಪಟ ರಾಜಕೀಯ ಸತ್ಯ! ಹಾಗಾಗಿಯೇ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಒದಗಿಸುವ ವಿಚಾರ, ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ರಾಜಕೀಯ ಮಾತಿನ ಮಂಟಪದಲ್ಲೇ ಉಳಿದಿದೆ. ಇತ್ತೀಚೆಗೆ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು ಆ ಮಾತಿನ ಮಂಟಪಕ್ಕೆ ಮತ್ತೊಂದು ಕಂಬ ಜೋಡಿಸಿದ್ದಾರೆ. 
 
‘ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳ ಮೀಸಲಾತಿ ಕೊಡುವ ಶಾಸನವನ್ನು ಎನ್‌ಡಿಎ ಸರ್ಕಾರ ಜಾರಿಗೊಳಿಸಲಿದೆ- ಆದರೆ ಇದಕ್ಕೆ ರಾಜ್ಯಸಭೆಯಲ್ಲಿ ಬಹುಮತ ಇರಬೇಕು... ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮನಸ್ಸಿನಲ್ಲಿ ಈ ವಿಚಾರ ಇದ್ದೇ ಇದೆ. ರಾಜ್ಯಸಭೆಯಲ್ಲಿ ಬಹುಮತ ದೊರೆತರೆ ಸಂಸತ್ತಿನಲ್ಲಿ ಇದು ಅಂಗೀಕಾರವಾಗುವ ದಿನ ದೂರವಿಲ್ಲ’ ಎಂದೆಲ್ಲ ಸಚಿವರು ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಹಿಳಾ ಮಹಾಮೇಳದಲ್ಲಿ ಹೇಳಿದ್ದಾರೆ. ದೇಶದ ಮಹಿಳೆಯರ ಕಿವಿಗೆ ಇದು ಹಾಡಾಗುತ್ತದೋ ಹೂವಾಗುತ್ತದೋ ಕಾದು ನೋಡಬೇಕು. ಏಕೆಂದರೆ ಸ್ವಾತಂತ್ರ್ಯ ಬಂದು ಏಳು ದಶಕಗಳಾಗುತ್ತ ಬಂದರೂ ಹದಿನಾರನೇ ಲೋಕಸಭೆ ಕಾರ್ಯ ನಿರ್ವಹಿಸುತ್ತಿದ್ದರೂ 543 ಸ್ಥಾನಗಳ ಸಂಸತ್ತಿನಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಇನ್ನೂ 61, ಅಂದರೆ ಶೇ 11 ಮಾತ್ರ! ಅಂದಮೇಲೆ ಶೇ 33ರ ಪ್ರಮಾಣ ತಲುಪುವುದೆಂದರೆ ಸಾಹಸವೇ ಸರಿ.
 
ಮೇಲ್ಮನೆ ಎಂದು ಕರೆಯುವ 245 ಸ್ಥಾನಗಳ ರಾಜ್ಯಸಭೆಯಲ್ಲಿ ಹಾಲಿ ಇರುವ ಹಲವಾರು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಪೈಕಿ ಬಿಜೆಪಿ 56 ಸ್ಥಾನಗಳು ಮತ್ತು ಕಾಂಗ್ರೆಸ್ 60 ಅಲ್ಲದೆ ಸಮಾಜವಾದಿ ಪಕ್ಷ 19, ಎಐಎಡಿಎಂಕೆ 13, ತೃಣಮೂಲ ಕಾಂಗ್ರೆಸ್ 11, ಜೆಡಿಯು 10, ಬಿಜು ಜನತಾದಳ 8, ಸಿಪಿಎಂ 8, ಬಿಎಸ್‌ಪಿ 6, ತೆಲುಗು ದೇಶಂ 6, ಎನ್‌ಸಿಪಿ 5, ಡಿಎಂಕೆ 4, ಆರ್‌ಜೆಡಿ 3, ಶಿರೋಮಣಿ ಅಕಾಲಿ ದಳ 3, ಟಿಆರ್‌ಎಸ್ 3  ಸ್ಥಾನಗಳನ್ನು ಹೊಂದಿವೆ. ನಾಮಕರಣ ಸದಸ್ಯರು 8, ಒಂದು- ಎರಡು ಸ್ಥಾನ ಹೊಂದಿರುವ ಇನ್ನೂ ಅನೇಕ ಪಕ್ಷಗಳು ಅಲ್ಲಿವೆ. ರಾಜ್ಯಸಭೆಯಲ್ಲಿ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಬೇಕಾಗಿರುವುದು ಒಟ್ಟು 132 ಮತಗಳು. ಯಾವುದೇ ಆಡಳಿತ ಪಕ್ಷಕ್ಕೆ ಬಂಧುಮಿತ್ರ ಪಕ್ಷಗಳು, ಪರಸ್ಪರ-ಚೌಕಾಶಿ-ವಿನಿಮಯ ಗುಂಪುಗಳು ಇದ್ದೇ ಇರುತ್ತವೆ. ಇವರನ್ನೆಲ್ಲಾ ಒಪ್ಪಿಸಿ ಕೂಡಿಸಿಕೊಂಡು ಈ ಅದ್ಭುತ ‘ಬಹುಮತ’ ಗಳಿಸಿಕೊಳ್ಳುವುದು ಬಿಜೆಪಿಗೆ ಕಷ್ಟವೇ? ಮನಸ್ಸಿದ್ದಲ್ಲಿ ಮಾರ್ಗವೂ ಇದ್ದೇ ಇರುತ್ತದೆ. 
 
ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡುವ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷಕ್ಕೆ ಮನಸ್ಸೂ ಇರಲಿಲ್ಲ, ಮಾರ್ಗವನ್ನೂ ಹುಡುಕಲಿಲ್ಲ, ಮಾತು ಬಿಟ್ಟರೆ ಬೇರೇನಿಲ್ಲ ಎನ್ನುವುದನ್ನು ದೇಶ ಕಂಡಿದೆ. ಮಹಿಳೆಯೊಬ್ಬರು ಅಧ್ಯಕ್ಷರಾಗಿರುವ ಆ ಪಕ್ಷದ ನೂರಾರು ನೇತಾರರು ಈ ವಿಚಾರದಲ್ಲಿ ಕೊಟ್ಟ ಭರವಸೆಗಳ ಲೆಕ್ಕ ಇಡಲು ಚಿತ್ರಗುಪ್ತನಿಗೂ ಸಾಧ್ಯವಿಲ್ಲ. ಮಹಿಳಾ ಮೀಸಲಾತಿ ವಿಚಾರದಲ್ಲಿ ಅವರ ಪ್ರಾಮಾಣಿಕತೆಯನ್ನು ಈಗ ನಂಬುವುದಕ್ಕೆ ಯಾವ ಆಧಾರವೂ ಇಲ್ಲ. ರಾಜ್ಯಸಭೆಯಲ್ಲಿ ಮಸೂದೆ ಈಗ ಮಂಡನೆಯಾದರೆ (!?) ಕಾಂಗ್ರೆಸ್ ಪಕ್ಷ ತನ್ನ ಬೇಷರತ್ ಬೆಂಬಲ ಕೊಡಬೇಕು ಮತ್ತು ತನ್ನ ಸಾಮಾಜಿಕ ಕಾಳಜಿ ಕುರಿತು ಜನರಲ್ಲಿ ಮತ್ತೆ ನಂಬಿಕೆ ಹುಟ್ಟಿಸಬೇಕು. ಹಾಗೆ ನೋಡಿದರೆ ಮಸೂದೆಗೆ ಕ್ಯಾತೆ ತಕರಾರು ತೆಗೆದು ಹಿಂದೆ ಸಂಸತ್ತಿನಲ್ಲಿ ಯಾದವೀ ಕಲಹ ನಡೆಸಿದ ಪಕ್ಷಗಳೂ ಸೇರಿ ಯಾವ ರಾಜಕೀಯ ಪಕ್ಷವೂ ಮಹಿಳಾ ಮೀಸಲಾತಿಗೆ ತನ್ನ ವಿರೋಧವಿದೆ ಎಂದು ಬಹಿರಂಗವಾಗಿ ಹೇಳಿಲ್ಲ. ಅವುಗಳ ವಿರೋಧ ಏನಿದ್ದರೂ ಮಹಿಳೆಗೆ ಮೀಸಲಾತಿ ನೀಡುವ ಮಸೂದೆ-ಕಾಯಿದೆಗೆ ಅಷ್ಟೇ! 
‘ರಾಜ್ಯಸಭೆಯಲ್ಲಿ ನಮಗೆ ಬಹುಮತ ದೊರಕಿದರೆ ಮಹಿಳಾ ಮೀಸಲಾತಿ ಮಸೂದೆ ಅಂಗೀಕೃತವಾಗುತ್ತದೆ ಎಂದು ಸಚಿವ ವೆಂಕಯ್ಯ ನಾಯ್ಡು ಈಗ ಹೇಳುತ್ತಿರುವುದೇ ಒಂದು ಗಿಮಿಕ್’ ಎಂದು ವಿರೋಧ ಪಕ್ಷದ ಸದಸ್ಯೆಯರು ಟೀಕಿಸುತ್ತಿದ್ದಾರೆ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ ಮಸೂದೆ ಅಂಗೀಕಾರ ಸುಲಭ ಅನ್ನುವುದು ಎಷ್ಟು ನಿಜವೋ ರಾಜ್ಯಸಭೆಯಲ್ಲಿ ಮಸೂದೆಗೇ ಬಹುಮತ ಇರುವುದರಿಂದ ಅದು ಅಷ್ಟೇ ಸುಲಭ ಎನ್ನುವುದು ಅವರ ವಾದ. ‘ಮಸೂದೆಗೆ ಬಹುಮತ ದೊರಕಿದರೆ ಅನ್ನುವ ಮಾತೇ ಬೇಡ, ರಾಜ್ಯಸಭೆಯಲ್ಲಿ ಅದಕ್ಕೆ ಈಗಾಗಲೇ ಬಹುಮತ ಗಟ್ಟಿಯಾಗಿ ಇದೆ. ಹಿಂದೆ 2010ರಲ್ಲಿ ಆ ಮಸೂದೆ ರಾಜ್ಯಸಭೆಯ ಒಪ್ಪಿಗೆ ಪಡೆದಿತ್ತಲ್ಲ?’ ಎಂದು ಕಾಂಗ್ರೆಸ್ಸಿಗರು ನೆನಪಿಸುತ್ತಾರೆ. ಆದರೆ ನಂತರ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಹುಸಿ ಕಾಳಜಿಯ ನಾಟಕ ಆಡಿದ್ದರಿಂದ, ಒಳಮೀಸಲಾತಿ ಸೇರಿ ಮಸೂದೆ ಪರಿಷ್ಕರಿಸಿದ ನಂತರವೂ ಅದರ ಬಗ್ಗೆ ಮಾತನಾಡುತ್ತಲೇ ಉದ್ದೇಶಪೂರ್ವಕವಾಗಿ ಮೂಲೆಗೆ ಸರಿಸಿದ್ದರಿಂದ, ಹದಿನೈದನೇ ಲೋಕಸಭೆ ಅದನ್ನು ಕೈಗೆತ್ತಿಕೊಳ್ಳದೇ 2014ರಲ್ಲಿ ಅದು ಕರಗಿಹೋಯಿತು ಎನ್ನುವುದನ್ನು ಮರೆಯಲು ಹೇಗೆ ಸಾಧ್ಯ? 
 
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ವರ್ಷಗಳು ಕಳೆದ ಮೇಲಾದರೂ ಮಹಿಳಾ ಮೀಸಲಾತಿ ಮಸೂದೆಯನ್ನು ಜ್ಞಾಪಿಸಿಕೊಂಡು ಮಾತನಾಡುತ್ತಿದೆ. ಮಸೂದೆ ಮಂಡನೆ ವಿಚಾರದಲ್ಲಿ ಯಾರು ಬಿಜೆಪಿಗೆ ತಡೆ ಒಡ್ಡುತ್ತಿದ್ದಾರೆ, ಅದರ ಕೈಗಳನ್ನು ಯಾರು ಕಟ್ಟಿಹಾಕಿದ್ದಾರೆ? ಅದಕ್ಕೆ ಈ ವಿಚಾರದಲ್ಲಿ ನೈಜ ಕಾಳಜಿ ಇದ್ದರೆ, ಮೊದಲು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಸ್ವಂತ ಸುಲಭ ಬಹುಮತದಿಂದ ಅದಕ್ಕೆ ಸುಲಭ ಅಂಗೀಕಾರ ಪಡೆಯಲಿ. ನಂತರ ರಾಜ್ಯಸಭೆಯಲ್ಲಿ ಈ ಮಸೂದೆಯ ಮಂಡನೆ ಮಾಡಿದಾಗ ಯಾರು ಇದಕ್ಕೆ ವಿರೋಧ ಮಾಡುತ್ತಾರೆ, ಯಾರು ಬಹುಮತಕ್ಕೆ ಅಡ್ಡಿಯಾಗಿದ್ದಾರೆ ಎನ್ನುವುದು ದೇಶಕ್ಕೆ ತಿಳಿಯುತ್ತದೆ. ಮಸೂದೆ ಮಂಡನೆ ಮಾಡಿದರೆ ಅದರಿಂದ ಬಿಜೆಪಿಗೆ ಮಾತ್ರವಲ್ಲ, ಕಾಂಗ್ರೆಸ್ ಮತ್ತು ಇನ್ನಿತರ ಎಲ್ಲ ಪಕ್ಷಗಳಿಗೂ ಸಾಮಾಜಿಕ ನ್ಯಾಯ ಮತ್ತು ಲಿಂಗ ರಾಜಕಾರಣದ ಅಗ್ನಿಪರೀಕ್ಷೆ ಆಗುತ್ತದೆ. ಅಥವಾ ಪುರುಷರಿಂದ ಮಹಿಳೆಗಂತೂ ಅಗ್ನಿಪರೀಕ್ಷೆ ಹೊಸದಲ್ಲ, ಈಗ ಪುರುಷಾಧಿಪತ್ಯದ ರಾಜಕಾರಣದಲ್ಲಿ ಮಹಿಳಾ ಮಸೂದೆಗೂ ಅದು ಆಗಿಬಿಡಬಹುದು. ಏಕೆಂದರೆ ಮಹಿಳಾ ಮೀಸಲಾತಿ ಮಸೂದೆ ವಿಚಾರ ಇನ್ನೂ ಇದ್ದಲ್ಲೇ ಕೊಳೆಯುತ್ತಿರುವುದಕ್ಕೆ ಎಲ್ಲ ರಾಜಕೀಯ ಪಕ್ಷಗಳ ಪುರುಷ ಪ್ರಧಾನ ಧೋರಣೆಯೂ ಕಾರಣ.  
 
ರಾಜಕೀಯ ವ್ಯವಸ್ಥೆಯ ಹೊರಗಿರುವ ಜನರನ್ನು ಒಳಗೊಳ್ಳಲು ಮೀಸಲಾತಿಯಲ್ಲದೆ ಬೇರೆ ಉಪಾಯವಿಲ್ಲ ಎಂಬ ಸತ್ಯವನ್ನು ಪ್ರತೀ ಚುನಾವಣೆಯ ರಾಜಕೀಯ ಪಕ್ಷಗಳ ಅಭ್ಯರ್ಥಿ ಆಯ್ಕೆಯೂ ಪ್ರತೀ ಬಾರಿಯೂ ಸಾಬೀತು ಮಾಡುತ್ತಿದೆ. ಗಂಡುಹೆಣ್ಣು ಅಸಮಾನತೆಯ ವಿಚಾರದಲ್ಲಿ ಭಾರತ ಅತ್ಯಂತ ನಾಚಿಕೆಗೇಡಿನ ಸ್ಥಾನದಲ್ಲಿದೆ, ಈ ಅಸಮಾನತೆ ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಅಂಶಗಳನ್ನು ಮೀಸಲಾತಿ ಮಸೂದೆ ಕುರಿತು ಮಾತನಾಡುವಾಗ ಸಚಿವ ವೆಂಕಯ್ಯ ನಾಯ್ಡು ಅವರೇ ಹೇಳಿದ್ದಾರೆ. ಇದನ್ನು ಸರಿಪಡಿಸುವ ಅನೇಕ ಅವಕಾಶಗಳಲ್ಲಿ ಒಂದಾಗಿರುವ ಇದಂತೂ ಅವರ ಎನ್‌ಡಿಎ ಸರ್ಕಾರದ ಕೈಯಲ್ಲೇ ಇದೆ. ಮೀಸಲಾತಿ ಎನ್ನುವುದು ಸಕಲ ಸಾಮಾಜಿಕ ಅನ್ಯಾಯಗಳಿಗೂ ಇರುವ ಏಕೈಕ ಪರಿಹಾರವಲ್ಲ, ಆದರೆ ಸಾಮಾಜಿಕ ಸಮಾನತೆಯ ದಾರಿಯಲ್ಲಿ ಇಡಬಹುದಾದ ಒಂದು ಹೆಜ್ಜೆ ಮಾತ್ರ ಎನ್ನುವುದು ಎಲ್ಲ ಪಕ್ಷಗಳ ರಾಜಕೀಯ ಪ್ರಜ್ಞೆಯ ಪ್ರಾಥಮಿಕ ಪಾಠ ಎಲ್ಲರಿಗೂ ಗೊತ್ತೇ ಇರುತ್ತದೆ. 
 
ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸುವ ಮೀಸಲಾತಿ ಮಸೂದೆಯನ್ನು ಮತ್ತೆ ಜ್ಞಾಪಿಸಿಕೊಳ್ಳುವ ಈ ಹೊತ್ತಿನಲ್ಲೇ ನಾಗಾಲ್ಯಾಂಡ್‌ನಲ್ಲಿ ಕೆಳಗಿನ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳಾ ಮೀಸಲಾತಿಗೆ ಉಗ್ರ ವಿರೋಧ ವ್ಯಕ್ತವಾಗುತ್ತಿದೆ. ನಾಗಾಲ್ಯಾಂಡ್‌ನಲ್ಲಿ ಪುರುಷ ಪ್ರಾಧಾನ್ಯ ಹೆಡೆ ಎತ್ತಿರುವ ರೀತಿ ಬೆಚ್ಚಿ ಬೀಳಿಸುತ್ತಿದೆ. ಮಹಿಳೆಯರು ರಾಜಕೀಯ ಪ್ರವೇಶಿಸುವುದು ನಾಗಾ ಸಂಸ್ಕೃತಿಗೆ ಹೊಂದುವುದಿಲ್ಲ ಎನ್ನುತ್ತ ಅಲ್ಲಿನ ಬುಡಕಟ್ಟು ಸಂಸ್ಥೆಗಳ ಒಕ್ಕೂಟ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಬೇಡ ಎಂದು ಹಿಂಸಾಚಾರಕ್ಕೆ ಇಳಿದು ಚುನಾವಣಾ ಪ್ರಕ್ರಿಯೆಯನ್ನೇ ನಿಲ್ಲಿಸಿದೆ. ದೇಶ ಅಂಗೀಕರಿಸಿದ ಮಹಿಳಾ ಮೀಸಲಾತಿ ಕಾಯಿದೆಯನ್ನು ಸ್ವಲ್ಪ ವಿಶೇಷ ಸ್ಥಾನಮಾನ ಪಡೆದಿರುವ ನಾಗಾಲ್ಯಾಂಡ್ ನಂತರ ನಿಧಾನವಾಗಿ 2001ರಲ್ಲಿ ಒಪ್ಪಿಕೊಂಡಿದ್ದರೂ ಅದು ಜಾರಿಯಾಗಲು ಸಾಧ್ಯವೇ ಆಗಿಲ್ಲ. ಸಂವಿಧಾನ ನೀಡುವ ಎಲ್ಲ ಹಕ್ಕುಗಳು ನಾಗಾ ಮಹಿಳೆಯರಿಗೂ ಇದ್ದೇ ಇವೆ. ಆದರೆ ತಮಗೆ ಮೀಸಲಾತಿ ಇರುವ ಚುನಾವಣೆಗಾಗಿ ಅವರು ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟ ನಡೆಸಬೇಕಾಯಿತು. ಈಗ ಒಕ್ಕೂಟದ ಹಿಂಸಾಚಾರಕ್ಕೆ ಬೆದರಿದ ಅಲ್ಲಿನ ಸರ್ಕಾರ ಎಲ್ಲವನ್ನೂ ನಿಲ್ಲಿಸಿಬಿಟ್ಟಿರುವುದು ಸಂವಿಧಾನಕ್ಕೆ ಮಾಡಿದ ಅವಮಾನ. ಚುನಾವಣೆ, ಪ್ರಾತಿನಿಧ್ಯ, ಆಡಳಿತ ವ್ಯವಸ್ಥೆ ಎನ್ನುವುದೆಲ್ಲ ‘ಸಂವಿಧಾನ’ಕ್ಕೆ ಸೇರಿದ್ದೇ ಹೊರತು ‘ಸಂಸ್ಕೃತಿ’ಗಲ್ಲ. 
 
ಮಹಿಳಾ ಮೀಸಲಾತಿಯನ್ನು ಆಡಳಿತ ವ್ಯವಸ್ಥೆಯ ಮೇಲಿನ ಹಂತಗಳಾದ ಸಂಸತ್ತು ಮತ್ತು ವಿಧಾನಸಭೆಗಳಿಗೆ ವಿಸ್ತರಿಸುವುದು ನಮ್ಮ ಕಾಲದ ದೊಡ್ಡ ರಾಜಕೀಯ- ಸಾಮಾಜಿಕ ಸವಾಲು. ಹಾಗೆಯೇ ಸಂವಿಧಾನ ತಿದ್ದುಪಡಿಯ ಮೂಲಕ ಈಗಾಗಲೇ ಕೆಳಹಂತಗಳಲ್ಲಿ ಇರುವ ಆ ಮೀಸಲಾತಿಯನ್ನು ಮಹಿಳೆಯರ ಸಬಲೀಕರಣದ ರಾಜಕೀಯ- ಸಾಮಾಜಿಕ ಉಪಕರಣವಾಗಿ ಮಾರ್ಪಡಿಸುವುದು ಮತ್ತೊಂದು ದೊಡ್ಡ ಸವಾಲು. ಈಗ ಹದಿನಾರು ರಾಜ್ಯಗಳಲ್ಲಿ ಪಂಚಾಯತ್‌ಗಳು, ಪುರಸಭೆಗಳಲ್ಲಿ ಮಹಿಳೆಯರ ಮೀಸಲಾತಿ ಶೇ 50ನ್ನು ತಲುಪಿದೆ. ಅವರಲ್ಲಿ ಬಹುಪಾಲು ಮಹಿಳೆಯರ ಪ್ರಾತಿನಿಧ್ಯ ಮತ್ತು ಅಧಿಕಾರ ಕೇವಲ ಸಾಂಕೇತಿಕವಾಗಿದ್ದು, ಗಂಡಂದಿರ ಅಥವಾ ಮನೆಯ ಗಂಡಸರ ಅವಾಂತರದ ಗಂಡಾಂತರ ಅವರನ್ನು ಆವರಿಸಿದೆ. ಸದಸ್ಯೆಯರ ಗಂಡಂದಿರು, ಅಪ್ಪಂದಿರು, ಅಣ್ಣತಮ್ಮಂದಿರನ್ನು ಅಧಿಕೃತ ಸಭೆಗಳಿಂದ ಹೊರಗಿಡುವುದು ಹೇಗೆ ಎನ್ನುವುದೇ ಇಂದು ನಮ್ಮ ಪಂಚಾಯತ್ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಯ ಮುಂದಿರುವ ಬಹುದೊಡ್ಡ ಸಮಸ್ಯೆ. ಭಾರತದಲ್ಲಿ ಮಹಿಳೆಯರನ್ನು ಆಡಳಿತ ವ್ಯವಸ್ಥೆಯೊಳಗೆ ತಂದ ಪ್ರಕ್ರಿಯೆ ಬಹುದೊಡ್ಡ ಶಾಸನಮೂಲ ಸಾಮಾಜಿಕ ಕ್ರಾಂತಿ ಎಂದು ಜಗತ್ತಿನಾದ್ಯಂತ ಖ್ಯಾತಿ ಪಡೆದಿದೆ. ಆದರೆ ಗಳಿಸಿದ ಈ ಖಂಡಾಂತರ ಖ್ಯಾತಿಗೆ ಸದಸ್ಯೆಯರ ಮನೆಯ ‘ಗಂಡಾ’ಂತರವೇ ಮಸಿ ಬಳೆಯುತ್ತಿದೆ. 
 
ಅಂದಹಾಗೆ ಅಮರಾವತಿಯಲ್ಲಿ ನಡೆದ ‘ಮಹಿಳೆಯರ ಸಬಲೀಕರಣವೇ ಪ್ರಜಾಪ್ರಭುತ್ವದ ಬಲವರ್ಧನೆ’ ಎಂಬ ಆಶಯದ ಮಹಿಳಾ ಮಹಾಮೇಳ ಕುರಿತು ವಿವರಣೆ ನೀಡುವಾಗ ಆಂಧ್ರಪ್ರದೇಶದ ವಿಧಾನಸಭೆಯ ಸ್ಪೀಕರ್ ಕೋಡೆಲ ಶಿವಪ್ರಸಾದ ರಾವ್ ಆಡಿದ ಮಾತುಗಳನ್ನು ಗಮನಿಸಿದರೆ ಮೊದಲು ಬದಲಾಗಬೇಕಾಗಿರುವುದು ಏನು ಎನ್ನುವುದು ಥಟ್ಟನೆ ಅರ್ಥವಾಗುತ್ತದೆ. ‘ಕಾರು ರಸ್ತೆಗೆ ಬರದೆ ಗ್ಯಾರೇಜಿನಲ್ಲೇ ಇದ್ದರೆ ಅಪಘಾತ ಆಗುವುದಿಲ್ಲ, ಹಾಗೇ ಮಹಿಳೆಯರು ಮನೆಯಲ್ಲೇ ಇದ್ದರೆ ಅತ್ಯಾಚಾರ ಆಗುವುದಿಲ್ಲ’ ಎಂದು ಈ ಕಂದಾಚಾರದ ಸ್ಪೀಕರ್ ಸಾರಿದ್ದಾರೆ. ‘ಗೃಹಿಣೀ ಗೃಹಮುಚ್ಯತೇ’ ಎಂಬ ಪುರಾತನ ವಾಕ್ಯವನ್ನು ಈ ಪುರಾತನ ಮನುಷ್ಯ ‘ಗೃಹಿಣಿಯನ್ನು ಗೃಹದಲ್ಲೇ ಇರಿಸಿ ಬಾಗಿಲು ಮುಚ್ಚಬೇಕು’ ಎಂದು ಅರ್ಥ ಮಾಡಿಕೊಂಡಿರಬೇಕು. ಇಂಥ ಅಧಃಪಾತಾಳದ ಮನಸ್ಥಿತಿಯ ವ್ಯಕ್ತಿ ಅತಿಉನ್ನತ ಸ್ಥಾನದಲ್ಲಿ ಇದ್ದಾರೆಂದ ಮೇಲೆ, ನಮ್ಮ ದೇಶದ ಮಹಿಳೆಯರ ಮುಂದಿರುವುದು ನಿಜಕ್ಕೂ ಬೆಳಕಿಲ್ಲದ ಕತ್ತಲೆ ದಾರಿ!     
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.