ಬಹುಮತ ಅನ್ನುವುದೊಂದಿದ್ದರೆ ಯಾರು ಏನು ಬೇಕಾದರೂ ಮಾಡಬಹುದು ಎಂದು ಸರ್ಕಾರದ ಸೂತ್ರ ಹಿಡಿದಿರುವ ರಾಜಕೀಯ ನಾಯಕರು ನಂಬುತ್ತಾರೆ. ಇದಕ್ಕೆ ನಮ್ಮ ದೇಶದಲ್ಲೂ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ ಮತ್ತು ಸಿಗುತ್ತಿವೆ. ಅಧಿಕಾರದಲ್ಲಿರುವ ಪಕ್ಷವನ್ನು, ಅದರ ತತ್ವಗಳನ್ನು ನಿರಂತರವಾಗಿ ಪ್ರಶ್ನಿಸುತ್ತ, ಆಗುವ ಅನಪೇಕ್ಷಿತ ಬೆಳವಣಿಗೆಗಳನ್ನು ತಡೆಯಲು ಬೇಕಾಗಿರುವುದು ಒಂದು ಸಮರ್ಥ ವಿರೋಧ ಪಕ್ಷ. ಬಹುಮತ ಪಡೆದು ದೇಶದ ಅಥವಾ ರಾಜ್ಯದ ಅಧಿಕಾರ ಹಿಡಿಯುವ ಅವಕಾಶ ಯಾವುದೋ ಒಂದು ಪಕ್ಷಕ್ಕೆ ಸಿಗಬಹುದು; ಆದರೆ ಅದೇ ಪಕ್ಷಕ್ಕೆ ವಿರೋಧ ಪಕ್ಷವಾಗಿ ಕೆಲಸ ಮಾಡುವ ಅವಕಾಶ ಸಿಕ್ಕರೆ ಅದನ್ನು ವಿವೇಚನೆಯಿಂದ ಬಳಸಿಕೊಂಡು ಸಮರ್ಥ ವಿರೋಧ ಪಕ್ಷವಾಗಿ ಬೆಳೆಯುವುದು ಬಹಳ ಕಷ್ಟ. ಎಷ್ಟು ಕಷ್ಟ ಎನ್ನುವುದಕ್ಕೆ ರಾಷ್ಟ್ರಮಟ್ಟದಲ್ಲಿ ಇಂದಿನ ಕಾಂಗ್ರೆಸ್ ಪಕ್ಷಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.
ಯಾವ ಅಧಿಕೃತ ವಿರೋಧ ಪಕ್ಷವಾದರೂ ತನ್ನನ್ನು ‘ಅಧಿಕಾರಕ್ಕಾಗಿ ತೆರೆಮರೆಯಲ್ಲಿ ಕಾಯುತ್ತಿರುವ ಪಕ್ಷ’ ಎಂದೇ ಭಾವಿಸಿಕೊಳ್ಳುತ್ತದೆ. ಚುನಾವಣೆಯಲ್ಲಿ ಒಂದು ಅಧಿಕೃತ ವಿರೋಧ ಪಕ್ಷ ಎಷ್ಟು ಸ್ಥಾನಗಳನ್ನು ಗಳಿಸಿತು, ಎಷ್ಟು ಪ್ರಮಾಣದ ಮತ ಗಳಿಸಿತು, ಮೊದಲಿಗಿಂತ ಅದು ಹೆಚ್ಚೋ ಕಡಿಮೆಯೋ ಅನ್ನುವುದೆಲ್ಲ ಆಗಲೇಬೇಕಾದ ಲೆಕ್ಕಾಚಾರ. ಆದರೆ ಒಂದು ವಿರೋಧ ಪಕ್ಷದ ರಾಜಕೀಯ ಯಶಸ್ಸನ್ನು ಕೇವಲ ಅಂಕಿಸಂಖ್ಯೆಗಳಿಂದ ಮಾತ್ರ ಅಳೆಯಲಾಗುವುದಿಲ್ಲ.
ಅದು ಯಾವ ವಿಷಯಗಳನ್ನು ಕೈಗೆತ್ತಿಕೊಂಡು ಶಾಸನಸಭೆ, ಸಂಸತ್ತುಗಳಲ್ಲಿ ಚರ್ಚಿಸಿತು, ಯಾವ ಸಂಗತಿಗಳನ್ನು ಸಾರ್ವಜನಿಕವಾಗಿ ಜನರ ಮುಂದೆ ಮಂಡಿಸಿತು, ಯಾವ ವಿಚಾರಗಳಿಗೆ ಹೋರಾಟಗಳನ್ನು ಮಾಡಿತು ಮುಂತಾದುವೇ ಅದರ ಮಾನದಂಡಗಳು. ವಿರೋಧ ಪಕ್ಷಕ್ಕೆ ಶಕ್ತಿ ಕೊಡುವುದು ಈ ಮಾನದಂಡಗಳಲ್ಲಿ ಅದು ಗಳಿಸುವ ಅಂಕಿಗಳೇ ಹೊರತು ಬೇರೆಯದಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದ್ದರಿಂದಲೇ, ದೇಶದಲ್ಲಿ ಯಾವ ಪ್ರಮುಖ ಘಟನೆ ನಡೆಯಲಿ, ಸರ್ಕಾರ ಯಾವ ಪ್ರಮುಖ ನಿರ್ಧಾರ ಕೈಗೊಳ್ಳಲಿ, ‘ವಿರೋಧ ಪಕ್ಷ ಏನು ಮಾಡುತ್ತಿದೆ, ಏನು ಹೇಳುತ್ತಿದೆ’ ಎಂದು ಕೂಡಲೇ ಅದರತ್ತ ಗಮನ ಹರಿಯುತ್ತದೆ. ಹೇಳಲು ವಿರೋಧ ಪಕ್ಷಕ್ಕೆ ಏನಾದರೂ ಇರಬೇಕಲ್ಲವೇ?
ಸರ್ಕಾರ, ಸಚಿವ ಸಂಪುಟ, ಸಂಸತ್ತು, ಮುಂಗಡಪತ್ರ, ಆರ್ಥಿಕ ನೀತಿ ಇವುಗಳೆಲ್ಲವನ್ನೂ ಮೀರಿ ನಿಂತ ಸರ್ವಶಕ್ತನಂತಿರುವ ನಮ್ಮ ಪ್ರಧಾನ ಮಂತ್ರಿಗಳು ದೇಶದ ಆರ್ಥಿಕ ಚಹರೆ ಬದಲಾಯಿಸುವ ಅತ್ಯಂತ ಪ್ರಮುಖ ನಿರ್ಧಾರಗಳನ್ನು ಮಾಧ್ಯಮಗಳ ಭಾಷಣದಲ್ಲಿ ಘೋಷಣೆ ಮಾಡಿದರು. ಐವತ್ತು ದಿನಗಳ ನಂತರ ಹೊಸ ಭಾಷಣದಲ್ಲಿ ಇನ್ನಷ್ಟು ಹೊಸ ಕ್ರಮಗಳನ್ನು ಪ್ರಕಟಿಸಿದರು. ಇವೆಲ್ಲದರ ವಿಶ್ಲೇಷಣೆಯನ್ನು ಎಲ್ಲರಿಗಿಂತ ಮುಖ್ಯವಾಗಿ ಮೊದಲು ವಿರೋಧ ಪಕ್ಷವೇ ಮಾಡಬೇಕು.
ಜನರಿಗೆ ಇವುಗಳಿಂದ ಏನೇನು ಆಯಿತು ಎನ್ನುವುದನ್ನು ತಮ್ಮ ರಾಜಕೀಯ ಅಲ್ಪ ಲಾಭನಷ್ಟಗಳನ್ನು ಬದಿಗಿಟ್ಟು ಪರೀಕ್ಷಿಸಬೇಕು. ರಾಜಕೀಯ ಚಾಣಾಕ್ಷತೆ ಇದ್ದರೆ, ಆಳುವ ಪಕ್ಷದ ವೈಫಲ್ಯಗಳನ್ನು ತಮ್ಮ ಮುಂದಿನ ಗುರಿಸಾಧನೆಗೆ ಮೆಟ್ಟಿಲುಗಳನ್ನಾಗಿ ಮಾರ್ಪಡಿಸಿಕೊಳ್ಳಬೇಕು. ಆದರೆ ಕಾಂಗ್ರೆಸ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳೆಲ್ಲವೂ ಈಗ ಏನು ಮಾಡಿದವು- ತಮ್ಮ ಬೇಜವಾಬ್ದಾರಿ ವರ್ತನೆಗಳಿಂದ ಆಳುವ ಪಕ್ಷಕ್ಕೆ ನಿರಾಳತೆ ತಂದವು!
ಎನ್‌ಡಿಎ ಸರ್ಕಾರದ ಶಕ್ತಿಗಳು ಯಾವುವು ಎಂದು ಪಟ್ಟಿ ಮಾಡಲು ಹೊರಟರೆ ಅದರ ಬಗ್ಗೆ ಒಮ್ಮತ ಇಲ್ಲದಿರಬಹುದು; ಆದರೆ ವಿರೋಧ ಪಕ್ಷವಾದ ಕಾಂಗ್ರೆಸ್‌ನ ದೌರ್ಬಲ್ಯವೇ ಬಿಜೆಪಿ ನೇತೃತ್ವದ ಈ ಸರ್ಕಾರದ ಬಲಗಳಲ್ಲಿ ಒಂದು ಎನ್ನುವ ಬಗ್ಗೆ ಎಲ್ಲರ ಸಮ್ಮತಿ ಇರುತ್ತದೆ. ಕಾಂಗ್ರೆಸ್ ಪಕ್ಷದ ಗತಿ ಇದಾದರೆ ಇನ್ನು ಉಳಿದ ವಿರೋಧ ಪಕ್ಷಗಳ ವಿಚಾರ ಹೇಳುವುದೇ ಬೇಡ. ಇತ್ತೀಚಿನ ನೋಟು ಅಮಾನ್ಯೀಕರಣದಂಥ ಅತ್ಯಂತ ಪ್ರಮುಖ ಆರ್ಥಿಕ ಬದಲಾವಣೆಯಲ್ಲಿ ಸರ್ಕಾರಕ್ಕೆ ಸಿಂಹಸ್ವಪ್ನವಾಗಿ ಕಾಡಬೇಕಾದ ವಿರೋಧ ಪಕ್ಷಗಳ ಸಮೂಹ, ಕೇವಲ ಕಲ್ಲೆಸೆಯುವ ಪುಂಡ ಹುಡುಗರ ಗುಂಪಿನಂತೆ ಕಾಣಿಸಿಕೊಂಡಿತು.
ಸರಿಯಾಗಿ ಏನು ಹೇಳಲೂ ತಿಳಿಯದೆ ತೊದಲಿದ, ತಡಬಡಾಯಿಸಿದ ಇವರ ಮಾತುಗಳನ್ನು ಯಾರೂ ಗಂಭೀರವಾಗಿ ಕೇಳಿಸಿಕೊಳ್ಳಲಿಲ್ಲ. ತೊಂದರೆಗೊಳಗಾದ ಸಾಮಾನ್ಯ ಜನರು ಪರಿಹಾರಕ್ಕೆ ಇವರತ್ತ ನೋಡಲಿಲ್ಲ, ಬದಲಿಗೆ ತೊಂದರೆ ಕೊಟ್ಟವರತ್ತಲೇ ನೋಡಿದರು. ಮಕ್ಕಳು ಆಟ ಆಡುವಾಗ ಬಚ್ಚಿಟ್ಟುಕೊಂಡವರನ್ನು ಹುಡುಕಲು ಒಬ್ಬೊಬ್ಬರು ಒಂದೊಂದು ಕಡೆ ಎಡತಾಕುವಂತೆ ವಿರೋಧ ಪಕ್ಷಗಳು ಒಂದೊಂದು ದಾರಿ ಹಿಡಿದವು. ತತ್ವ ಸಿದ್ಧಾಂತಗಳು ಸೇರಿ ಯಾವ ವಿಚಾರಕ್ಕೂ ನಮ್ಮ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿಲ್ಲ. ಅಮಾನ್ಯೀಕರಣದ ಈ ಪ್ರಸಂಗ ಅವರಲ್ಲಿನ ಒಡಕನ್ನು ಇನ್ನಷ್ಟು ಹೆಚ್ಚಿಸಿತು. ಹಣಕಾಸು ವಿಚಾರದಲ್ಲಿ ಬೃಹತ್ ಬದಲಾವಣೆ ತರಬಯಸಿದ ಆಡಳಿತ ಪಕ್ಷಕ್ಕೆ ಯಶಸ್ಸು ಸಿಗುತ್ತದೋ ಇಲ್ಲವೋ ಆದರೆ ಈ ವಿಚಾರಕ್ಕೆ ವಿರೋಧ ಪಕ್ಷಗಳಲ್ಲಿ ಒಡಕು ಹೆಚ್ಚಿದ್ದೇ ಅದಕ್ಕೆ ತತ್‌ಕ್ಷಣಕ್ಕೆ ಸಿಕ್ಕಿದ ಬಹಳ ದೊಡ್ಡ ಬೋನಸ್! ಇದು ಬಯಸದೆ ಬಂದ ಭಾಗ್ಯ!
ವಿರೋಧ ಪಕ್ಷಗಳ ಈ ರಾಜಕೀಯ ಸೋಲು, ಭಾರತೀಯ ಜನತಾ ಪಕ್ಷದ ಮುಖದ ಮೇಲೆ ಗೆಲುವಿನ ನಗೆ ಮೂಡಿಸಿರಬಹುದು. ಪ್ರಜಾಪ್ರಭುತ್ವಕ್ಕೆ ಮಾತ್ರ ಇದು ದುಃಖದ ಸಮಾಚಾರ. ಗಟ್ಟಿದನಿಯ ವಿರೋಧ ಪಕ್ಷ ಇಲ್ಲದಿದ್ದರೆ ಯಾವ ಸರ್ಕಾರವೂ ಹೆಚ್ಚು ಕಾಲ ಸುಭದ್ರವಾಗಿ ಇರಲು ಸಾಧ್ಯವಿಲ್ಲ. ‘ವಿರೋಧ ಪಕ್ಷ ಅನ್ನುವುದು ನಿಜವಾಗಿ ಎಲ್ಲಿದೆ, ಇರುವುದೆಲ್ಲವೂ ತೋರಿಕೆಯ ವಿರೋಧದ ಮತ್ತು ಹೊಂದಾಣಿಕೆಯ ಗುಂಪುಗಳೇ ಅಲ್ಲವೇ’ ಎಂಬ ಟೀಕೆ ನಿಜವೇ ಇರಬಹುದು. ವಿರೋಧ ಅನ್ನುವುದರ ವ್ಯಾಖ್ಯಾನ ಕೇವಲ ಶಾಸನ ಸಭೆ ಮತ್ತು ಸಂಸತ್ತಿನಲ್ಲಿ ಕಲಾಪ ನಡೆಯದಂತೆ ಮಾಡುವುದು ಎಂಬಲ್ಲಿಗೆ ನಿಂತಿರುವುದೂ ಸುಳ್ಳಲ್ಲ.
ವಿರೋಧಕ್ಕಾಗಿ ವಿರೋಧ ನಟಿಸಿ, ವಿನಿಮಯ ಸೂತ್ರದಲ್ಲಿ ತಮಗೆ ಬೇಕಾದುದನ್ನು ಪಡೆಯಲು ವಿರೋಧವನ್ನು ಮಾರಿಕೊಳ್ಳುವ ರಾಜಕೀಯ ವ್ಯಾಪಾರ ಹೆಚ್ಚಿರುವುದೂ ಖಂಡಿತಾ ನಿಜ. ಕತ್ತೆ–ನಾಯಿಗಳನ್ನು ಮೆರವಣಿಗೆ ಮಾಡುತ್ತಾ ವಿಷಯಕ್ಕೆ ವಿರೋಧದ ಬದಲು ವಿನೋದ ಬೆರೆಸುವ ಲೊಳಲೊಟ್ಟೆ ರಾಜಕೀಯವೂ ಇದೆ. ವಿರೋಧ ಹೆಚ್ಚು ಮಾಡಿದಷ್ಟೂ ಆಳುವ ಪಕ್ಷ, ಸರ್ಕಾರದೊಂದಿಗೆ ತಮ್ಮ ಚೌಕಾಸಿ ಶಕ್ತಿ ಹೆಚ್ಚುತ್ತದೆ ಎನ್ನುವುದು ರಾಜಕಾರಣಿಗಳಿಗೆ ಗೊತ್ತು. ಆದರೆ ವಿರೋಧ ಎಂದರೆ ಇಷ್ಟೇ ಏನು?
ಅಮಾನ್ಯೀಕರಣ ಎನ್ನುವುದು ರೂಪಾಯಿ ನೋಟುಗಳದಷ್ಟೇ ಅಲ್ಲ, ನಮ್ಮ ದೇಶದ ಎಲ್ಲ ವಿರೋಧ ಪಕ್ಷಗಳ ಇದ್ದಬದ್ದ ಮಾನ ಮರ್ಯಾದೆಯ ಅಮಾನ್ಯೀಕರಣವನ್ನೂ ಮಾಡಿಬಿಟ್ಟಿದೆ. ತಮ್ಮ ಶಕ್ತಿಯನ್ನು ಜನರ ಮಾರುಕಟ್ಟೆಯಲ್ಲಿ ನಗದು ಮಾಡಿಕೊಳ್ಳುವ ಒಳ್ಳೆಯ ಅವಕಾಶವನ್ನು ಅವು ಕಳೆದುಕೊಂಡಿವೆ. ಬ್ಯಾಂಕುಗಳ ಖಾತೆಗಳು ತುಂಬಿ ತುಳುಕುತ್ತಿರಬಹುದು, ಆದರೆ ವಿರೋಧ ಪಕ್ಷಗಳ ನಂಬಿಕೆಯ ಖಾತೆ ಖಾಲಿಖಾಲಿಯಾಗಿದೆ. ಹೀಗೆಂದ ಮಾತ್ರಕ್ಕೆ ವಿರೋಧ ಪಕ್ಷಗಳಿಗೆ ಈಗ ವ್ಯವಸ್ಥೆಯನ್ನು ಬುಡಮೇಲು ಮಾಡುವ ಅಥವಾ ಸರ್ಕಾರವನ್ನು ಉರುಳಿಸುವ ಅವಕಾಶ ಒದಗಿಬಿಟ್ಟಿತ್ತು ಎಂದು ಅರ್ಥವಲ್ಲ.
ಜನರ ನೋವು ಸಂಕಟಗಳಿಗೆ ಕನ್ನಡಿ ಹಿಡಿದ ಮಾಧ್ಯಮಗಳ ಕೆಲಸಕ್ಕಿಂತ ಹೆಚ್ಚಿನದೇನನ್ನೂ ಅವು ಮಾಡಲಿಲ್ಲ. ಮತ್ತೆ ಅದನ್ನು ಮಾಡಲೂ ಮಾಧ್ಯಮಗಳನ್ನೇ ಬಳಸಿಕೊಂಡವು. ವಿರೋಧ ಪಕ್ಷಗಳ ನಾಯಕರ ನಡವಳಿಕೆಗಳಿಂದ ವಿಷಯದ ವಿಷಮತೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ದುರಂತವೂ ಆಯಿತು. ಜನಾಭಿಪ್ರಾಯ ರೂಪಿಸುವುದು, ಜನಾಂದೋಲನ ಸಂಘಟಿಸುವುದು ಮುಂತಾದ ಮಾತುಗಳನ್ನೆಲ್ಲ ಮರೆತೇ ಬಿಟ್ಟಿರುವ ವಿರೋಧ ಪಕ್ಷಗಳಿಗೆ ಜನ ಅಂದರೆ ಮತದಾರರು ಮಾತ್ರವೇನು?
ನಮ್ಮ ದೇಶದಲ್ಲಿ ವಿರೋಧ ಪಕ್ಷಗಳ ಸ್ವರೂಪ ಯುರೋಪ್ ಅಥವಾ ಅಮೆರಿಕದ ರಾಜಕಾರಣಕ್ಕಿಂತ ತುಂಬಾ ಭಿನ್ನವಾದದ್ದು ಎನ್ನುವುದನ್ನು ಬಹಳ ಮಂದಿ ಗುರುತಿಸಿದ್ದಾರೆ. ಶತಮಾನದ ಇತಿಹಾಸ ಹೊಂದಿದ್ದ ಕಾಂಗ್ರೆಸ್ ಪಕ್ಷವನ್ನು ಎದುರಿಸುತ್ತಾ ಜನತಾ ಪಕ್ಷ, ಜನತಾ ದಳ, ಭಾರತೀಯ ಜನತಾ ಪಕ್ಷ ರಾಷ್ಟ್ರಮಟ್ಟದಲ್ಲಿ ಬೆಳೆದದ್ದನ್ನು ಗಮನಾರ್ಹ ರಾಜಕೀಯ ಬೆಳವಣಿಗೆ ಎಂದು ಹೇಳಲೇಬೇಕು. ಪ್ರಾದೇಶಿಕ ಪಕ್ಷಗಳಂತೂ ಹೆಸರೇ ಹೇಳುವ ಹಾಗೆ ಆಯಾ ಅಗತ್ಯಗಳಿಗೆ ಅನುಗುಣವಾಗಿ ಹುಟ್ಟಿ ಬೆಳೆದಿವೆ.
ಸಿದ್ಧಾಂತಗಳ ನೆಲೆಯಲ್ಲಿ ಬೆಳೆದ ಪಕ್ಷಗಳೂ ಪ್ರಾದೇಶಿಕ ಪಕ್ಷಗಳಾಗಿ ಉಳಿದುಕೊಂಡಿವೆ. ಇವೆಲ್ಲವೂ ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಕಾಂಗ್ರೆಸ್‌ಗೆ ಹಾಕಿದ ಸವಾಲುಗಳಲ್ಲಿ ಕೆಲವು ಹೊಸ ರಾಜಕೀಯ ಸಂಕಥನಗಳಾಗಿ ಮಾನ್ಯವಾಗಿವೆ. ಇಂಥ ಇತಿಹಾಸವಿರುವ ನಮ್ಮ ರಾಜಕಾರಣದಲ್ಲಿ ಈಗ ಹೊಸ ಒಗ್ಗಟ್ಟು ಏಕೆ ಹುಟ್ಟುತ್ತಿಲ್ಲವೋ ಚಿಂತನೆ ಮಾಡಬೇಕು. ಆಗ ಕಾಂಗ್ರೆಸ್ ವಿರೋಧಿಗಳಿಗೆ ಸಾಧ್ಯವಾದದ್ದು ಈಗ ಕಾಂಗ್ರೆಸ್ ಪಕ್ಷಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?
ಕಾಂಗ್ರೆಸ್ ಪಕ್ಷಕ್ಕೆ 2014ರ ಚುನಾವಣೆಯಲ್ಲಿ ಏನಾಯಿತು ಮತ್ತು 2019ರ ಚುನಾವಣೆಯಲ್ಲಿ ಏನಾಗುತ್ತದೆ ಎನ್ನುವ ಚೌಕಟ್ಟಿನಲ್ಲಿ ಮಾತ್ರ ಅದರ ಸ್ಥಿತಿಗತಿಯನ್ನು ವಿಶ್ಲೇಷಿಸಬಾರದು. ದೇಶದಲ್ಲಿ ಪ್ರಜಾಸತ್ತಾತ್ಮಕ ಸಂವಾದವನ್ನು ಸಂರಕ್ಷಿಸಲು ಒಂದು ಪ್ರಬಲ ವಿರೋಧ ಪಕ್ಷ ಅತ್ಯಗತ್ಯವಾಗಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಯೋಚಿಸಬೇಕು. ಪ್ರಜಾಪ್ರಭುತ್ವಕ್ಕೆ ವಿರೋಧವಾಗಿ ಸರ್ವಾಧಿಕಾರವನ್ನು ತುರ್ತು ಪರಿಸ್ಥಿತಿಯ ರೂಪದಲ್ಲಿ ದೇಶಕ್ಕೆ ಪರಿಚಯಿಸಿದ್ದು ಕಾಂಗ್ರೆಸ್ ಪಕ್ಷವೇ ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ.
ಆದರೆ ಸಂವಿಧಾನದ ಆಶಯಗಳ ಮೂಲಕ ಧರ್ಮನಿರಪೇಕ್ಷತೆ, ಜಾತ್ಯತೀತತೆ, ಅಲ್ಪಸಂಖ್ಯಾತರ ರಕ್ಷಣೆ, ಅಸ್ಪೃಶ್ಯತೆಗೆ ವಿರೋಧ ಮುಂತಾದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪರಿಚಯಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಅಧಿಕಾರಕ್ಕಾಗಿ ಅವುಗಳ ಜೊತೆ ಆಟವಾಡುವುದನ್ನು ಕಲಿಸಿದ್ದೂ ಇದೇ ಪಕ್ಷ. ‘ಇಷ್ಟು ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಜನರಿಗೆ ಕೊಟ್ಟಿದ್ದು ಬಡತನ ಮಾತ್ರ.
ಕಾಂಗ್ರೆಸ್ ಪಕ್ಷ ನಿರ್ನಾಮವಾಗದೆ ನಮ್ಮ ದೇಶ ಉದ್ಧಾರ ಆಗುವುದಿಲ್ಲ’ ಎಂದು ಶಪಿಸುವುದು ಸುಲಭ. ಆದರೆ ಹಾಗೆ ಶಪಿಸುವುದರ ಮೂಲಕ ಬೇರೆ ಯಾವ ಆಶಯಗಳಿಗೆ ಆಶ್ರಯ ಕೊಡಲಾಗುತ್ತದೆ ಎನ್ನುವುದು ಬಹಳ ಮುಖ್ಯ. ಕಾಂಗ್ರೆಸ್ ಪಕ್ಷ ನಿರ್ನಾಮವಾಗಬೇಕೇ ಅಥವಾ ಕೆಲವಾದರೂ ಜವಾಬ್ದಾರಿಗಳನ್ನು ನಿರ್ವಹಿಸಲು ಅದು ಪುನಶ್ಚೇತನ ಪಡೆಯಬೇಕೇ ಎನ್ನುವುದು ಈಗಿನ ರಾಜಕೀಯ ಪ್ರಶ್ನೆ.
ಈ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ಜನತಾ ಪಕ್ಷ ಇವೆರಡೇ ರಾಷ್ಟ್ರೀಯ ಪಕ್ಷಗಳಾಗುವ ಲಕ್ಷಣಗಳನ್ನು ಹೊಂದಿವೆ ಎನ್ನುವುದು ನಿರ್ವಿವಾದ. ಅನೇಕ ರಾಜ್ಯಗಳಲ್ಲಿ ಅವೆರಡರಲ್ಲಿ ಒಂದಕ್ಕೆ ಅಧಿಕಾರ ಇಲ್ಲದಿರಬಹುದು, ಆದರೆ ಅಲ್ಲಿ ಅವಕಾಶಗಳಿವೆ ಎನ್ನುವುದು ನಿಜ. ಪ್ರಾದೇಶಿಕ ಪಕ್ಷಗಳು ಆಯಾ ಪ್ರದೇಶದ ಹಿತಾಸಕ್ತಿಗಳನ್ನು ರಕ್ಷಿಸಿದರೂ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವುದೇ ಅವುಗಳ ಪರಮಗುರಿ. ರಾಷ್ಟ್ರ ಮಟ್ಟದಲ್ಲಿ ಅವುಗಳು ಬೇರೊಂದು ಪಾತ್ರ ವಹಿಸಿ, ಅದಕ್ಕೆ ತಕ್ಕ ಭಕ್ಷೀಸು ಪಡೆಯುತ್ತವೆ.
ರಾಷ್ಟ್ರೀಯ ಪಕ್ಷಗಳಿಗೆ ಅವು ಯಾವಾಗ ಶತ್ರು, ಯಾವಾಗ ಮಿತ್ರ ಆಗುತ್ತವೆ ಎನ್ನುವುದು ಅಂದಂದಿನ ಅಗತ್ಯವನ್ನು ಅವಲಂಬಿಸುತ್ತದೆ. ಮೈತ್ರಿಗೆ ಇಂಥ ಹಗುರ ವ್ಯಾಖ್ಯಾನಗಳು ಕಳೆದ ನಾಲ್ಕು ದಶಕಗಳಲ್ಲಿ ಹಲವಾರು ಕಾಣುತ್ತವೆ. ವಿರೋಧ ಪಕ್ಷಗಳಲ್ಲಿರುವ ವಂಶಾಧಿಕಾರ, ಕುಟುಂಬ ರಾಜಕಾರಣ, ಪ್ರದೇಶದ ಸಂಪನ್ಮೂಲಗಳ ಲೂಟಿ ಅಧಿಕಾರ, ಸಂಕುಚಿತ ಭಾವನೆಗಳ ಓಲೈಕೆ ಇತ್ಯಾದಿ ಅಪಸವ್ಯಗಳ ನಡುವೆಯೂ ಅವುಗಳಿಗೆ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅವಕಾಶಗಳು ಒದಗುತ್ತವೆ. ಅಷ್ಟು ಬಿಟ್ಟು ಕೆಲವು ಸಂದರ್ಭಗಳಲ್ಲಾದರೂ ಅವು ವಿರೋಧ ಪಕ್ಷಗಳಾಗಿ ಇರುತ್ತವೆ.
ಬಹಳ ಮುಖ್ಯವಾಗಿ, ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ನ ಸ್ವರೂಪ ಈಗ ಇರುವಂತೆಯೇ ಇದ್ದರೆ, ಯಾರು ತಲೆ ಚಚ್ಚಿಕೊಂಡರೂ ಏನೂ ಬದಲಾಗುವುದಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಂಥವರು ಅಧ್ಯಕ್ಷ, ಉಪಾಧ್ಯಕ್ಷ ಯಾವ ಸ್ಥಾನದಲ್ಲಿದ್ದರೂ ಅಲ್ಲಿ ಬೇಕಾಗಿರುವುದು ‘ದಕ್ಷ’ ಸಾಮರ್ಥ್ಯ ಮಾತ್ರ. ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಮತಯಾಚನೆ ಸಲ್ಲದು ಎನ್ನುವ ಸುಪ್ರೀಂ ಕೋರ್ಟ್‌ನ ಆದೇಶವೇ ಈಗ ಕಾಂಗ್ರೆಸ್ ಪಕ್ಷದ ಹೊಸ ಜನ್ಮಕ್ಕೆ ಪ್ರೇರಣೆ ಒದಗಿಸಬೇಕು. ಆದರೆ ಅದಕ್ಕೆ ಮೊದಲು ಬೇಕಾಗಿರುವುದು ಹೊಸ ಜನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.