ADVERTISEMENT

ಶಾಲೆಯಲ್ಲಿ ಮಕ್ಕಳು ಕಲಿಯಬಾರದ ಪಾಠಗಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:15 IST
Last Updated 16 ಜೂನ್ 2018, 9:15 IST

ಜಗತ್ತಿನ ಯಾವ ಮೂಲೆಯಲ್ಲಾದರೂ ಮಗು ಹುಟ್ಟಲಿ, ಅದರ ಬಾಲ್ಯ ಸಹಜ­ವಾಗಿ ಅರಳಲು ಅಗತ್ಯವಾಗುವುದು ಮೊದಲು ಆಹಾರ, ನಂತರ ಅಕ್ಷರ. ಮಗು ಚೆನ್ನಾಗಿ ಬೆಳೆಯಲು ಬೇಕಾದ ಹಲವು ಸೌಲಭ್ಯಗಳಲ್ಲಿ ಮನೆಯ ನಂತರ ಶಾಲೆಗೆ ಮಹತ್ವದ ಸ್ಥಾನ.

ಬಾಲ್ಯ­ವೆಂಬ ಮರಳಿಬಾರದ ಅಮೂಲ್ಯ ಅವಧಿ ಮನೆ ಮತ್ತು ಶಾಲೆಯ ನಡುವೆ ಹಂಚಿ ಹರಡಿ­ಕೊಳ್ಳುವುದರಿಂದ, ಮಕ್ಕಳ ಪಾಲಿಗೆ ಮನೆ ಮನೆಯಾಗಿರಬೇಕು, ಶಾಲೆ ಶಾಲೆಯಾಗಿರ­ಬೇಕು. ಆದರೆ ಮನೆ, ಶಾಲೆ ಮತ್ತು ಅವುಗಳಾಚೆ ಇರುವ ದೊಡ್ಡವರು ಶಾಲೆಯನ್ನು ಬಳಸಿಕೊಂಡು ಮಕ್ಕಳಿಗೆ ಕಲಿಸಬಾರದ್ದನ್ನು ಕಲಿಸುವ ದುಷ್ಟ ಕೆಲಸಕ್ಕೆ ‘ಇಳಿಯು’ವುದುಂಟು.

ಮಕ್ಕಳಿಗೆ ಎಂದಿಗೂ ಒಳ್ಳೆಯದನ್ನು ಮಾಡದ ಆ ದೊಡ್ಡ­ವರ ಪಾಪಗಳು ನಿಜವಾಗಿ ಮನುಕುಲಕ್ಕೇ ಎರಗಿದ ಶಾಪಗಳು. ಇತ್ತೀಚೆಗೆ ಧರ್ಮಾಂಧತೆ ಮತ್ತು ಜಾತ್ಯಂಧತೆ ಎಂಬ ಎರಡು ಆಗ್ನೇಯಾಸ್ತ್ರಗಳನ್ನು ಹಿಡಿದ ಅಂಥ ದುಷ್ಟರು ಶಾಲೆಯ ಆವರಣದಲ್ಲಿ ಮಕ್ಕಳ ಮೇಲೆ ಕೆಂಡದ ಮಳೆ ಕರೆದರು.

ಧರ್ಮಾಂಧತೆ ಮತ್ತು ಜಾತ್ಯಂಧತೆ ಇವೆರಡೂ ಶತಮಾನಗಳು ಉರುಳಿದ ಹಾಗೆ ಎಷ್ಟೊಂದು ಬಗೆಯ ಉಗ್ರ ಅವತಾರಗಳನ್ನು ಎತ್ತುತ್ತಿವೆ ಎಂಬು­ದನ್ನು ನೋಡಿದರೆ ಯಾರಿಗಾದರೂ ದಿಗ್ಭ್ರಾಂತಿ ಮೂಡುತ್ತದೆ. ಯಾವ ಹೊಸ ಆಲೋಚನೆಯ ಶಸ್ತ್ರವೂ ನಮ್ಮನ್ನು ಛೇದಿಸು­ವುದಿಲ್ಲ, ಯಾವ ಹೊಸ ವಿಚಾರಾಗ್ನಿಯೂ ನಮ್ಮನ್ನು ಸುಡುವುದಿಲ್ಲ ಎಂದು ಅವು ಸವಾಲು ಹಾಕುತ್ತಿವೆ. ಜನರನ್ನು ಸಾಯಿಸುವುದಷ್ಟೇ ನಮ್ಮ ಕೆಲಸ, ನಮಗೆಂದೆಂದೂ ಸಾವಿಲ್ಲ ಎಂದು ಘೋಷಿಸುತ್ತಿವೆ.

ಹೊಸ ಆವಿಷ್ಕಾರಗಳು ಬಂದಂತೆ ಅವೆಲ್ಲವನ್ನೂ ತಮ್ಮ ನವೀಕರಣಕ್ಕೆ ಮತ್ತು ಜಾಗತೀ­ಕರಣಕ್ಕೆ ಬಳಸಿಕೊಳ್ಳುವ ಅವು ‘ಸಂಭ­ವಾಮಿ ಯುಗೇ ಯುಗೇ’ ಎಂದು ವಿಜೃಂಭಿ­ಸುತ್ತಿವೆ. ಜಗತ್ತಿನಲ್ಲಿ ಕೆಲವು ಅನಿಷ್ಟಗಳ ಹುಟ್ಟು ಹೇಗೆ ಎನ್ನುವುದು ಗೊತ್ತಿರುತ್ತದೆ, ಸಾವು ಹೇಗೆ ಎನ್ನುವುದು ಗೊತ್ತಿರುವುದಿಲ್ಲ. ಆದರೂ ಜಗತ್ತು ಬೆದರದೆ ಬೆಚ್ಚದೆ ಎರಡು ಯುದ್ಧಗಳನ್ನು ನಿರಂತರ­ವಾಗಿ ಮಾಡುತ್ತಿರಬೇಕಾಗುತ್ತದೆ– ಒಂದು ಹಸಿವಿನ ವಿರುದ್ಧ, ಇನ್ನೊಂದು ಇಂಥದರ ವಿರುದ್ಧ.

ಪಾಕಿಸ್ತಾನದ ಶಾಲೆಯ ಆವರಣದಲ್ಲಿ ಕೆಲವು ದಿನಗಳ ಹಿಂದೆ ನಡೆದ ನೂರಾರು ಅಮಾಯಕ ಮಕ್ಕಳ ಹತ್ಯೆ, ದೇಶಕಾಲಾತೀತವಾಗಿ ಉರಿಯು­ತ್ತಿ­ರುವ ಆ ಧರ್ಮಾಂಧತೆಯ ಹೊಸ ಅಬ್ಬರವಷ್ಟೆ. ಅದನ್ನು ಧರ್ಮಯುದ್ಧ ಅಥವಾ ಯುದ್ಧಧರ್ಮ ಎಂದು ಯಾವ ದುಷ್ಟ ಹೆಸರಿನಿಂದ ಅವರು ಕರೆದರೂ ಅದನ್ನು ಜೀರ್ಣಿಸಿಕೊಳ್ಳಲು ಅವರಿಗೆ ಬಿಟ್ಟು ಬೇರಾರಿಗೂ ಸಾಧ್ಯವಿಲ್ಲ.

ಮಹಾಭಾರತ­ವನ್ನು ಯಾವತ್ತು ಓದಿದರೂ ಯುದ್ಧ ಎಂದ­ರೇನು ಎಂಬುದನ್ನು ತಿಳಿಯದ ಮಕ್ಕಳಾದ ಉಪಪಾಂಡವರ ಹತ್ಯೆಗೆ ಮನ ಮರುಗುತ್ತದೆ­ಯಲ್ಲವೇ? ಅದೂ ಸೇರಿ, ಇಂದಿನವರೆಗೆ ನಡೆದಿ­ರುವ ದೊಡ್ಡವರ ಯುದ್ಧಗಳೆಲ್ಲ ಮಕ್ಕಳನ್ನು, ಅವರ ನಾಳೆಗಳನ್ನು ನಾಶಮಾಡಿವೆ. ಈ ವಿಷಯ­ದಲ್ಲಿ ಹೆಣ್ಣುಮಕ್ಕಳ ಪಾಡನ್ನಂತೂ ಹೇಳುವುದೇ ಬೇಡ.

ಕಳೆದ ಶತಮಾನದಲ್ಲಿ ಒಂದು ದೇಶದಲ್ಲಿ ಯುದ್ಧ ಮುಗಿದ ನಂತರದ ದಿನಗಳಲ್ಲಿ ಕೆಲವು ಹುಡುಗಿಯರು ಸೈನಿಕರ ಅತ್ಯಾಚಾರದಿಂದ ತಮಗೆ ಹುಟ್ಟಿದ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಅರ್ಜಿಯಲ್ಲಿದ್ದ ‘ತಂದೆಯ ಹೆಸರು’ ಎಂಬ ಜಾಗದಲ್ಲಿ ದೇಶದ ಅಧ್ಯಕ್ಷನ ಹೆಸರು ಬರೆದರಂತೆ. ಈ ಮಕ್ಕಳು ಹುಟ್ಟಿದ್ದು ಅವನು ಹೂಡಿದ ಯುದ್ಧದ ಕಾರಣದಿಂದ ತಾನೇ? ಧರ್ಮಾಂಧತೆ, ಮೂಲಭೂತವಾದ ಮುಂತಾದ ಕಾರಣಗಳನ್ನೂ ಸೇರಿಸಿದಂತೆ, ಯುದ್ಧ ಎನ್ನುವುದು ಯಾವ ಧರ್ಮಕ್ಕೆ ನಡೆದರೂ ಅಥವಾ ಧರ್ಮದ ಹೆಸರು ಹೇಳುತ್ತ ಸುಮ್ಮನೆ ‘ಧರ್ಮಕ್ಕೆ ನಡೆದರೂ’ ಅದರಲ್ಲಿ ಅಮಾಯಕ ಮಕ್ಕಳು ಸತ್ತೇ ಸಾಯು­ತ್ತಾರೆ. ಆದರೆ ಧರ್ಮಾಂಧರಿಗೆ ಕನಿಕರ ಇರುವು­ದಿಲ್ಲ: ಬಂದೂಕಿನ ಬಾಯಿಗೆ ಸಿಗದೇ ಉಳಿದ ಇಂದಿನ ಮಕ್ಕಳೇ ನಾಳೆಯ ಧರ್ಮಾಂಧರು ಎಂಬ ಭರವಸೆ ಅವರಿಗಿರಬಹುದು.

ಶಾಲೆಗೆ ನುಗ್ಗಿದ ಉಗ್ರರು ತಮ್ಮ ಗೆಳೆಯ ಗೆಳತಿಯರ ಕಣ್ಣಿಗೆ, ಮುಖಕ್ಕೆ, ತಲೆಗೆ, ಹೊಟ್ಟೆಗೆ ಗುಂಡಿಟ್ಟು ಒಬ್ಬೊಬ್ಬರನ್ನೇ ಸಾಯಿಸುವುದನ್ನು ಕಣ್ಣಾರೆ ನೋಡಿದ ಅಳಿದುಳಿದ ಮಕ್ಕಳ ಮನಸ್ಸಿನಲ್ಲಿ ಆ ದೃಶ್ಯಗಳು ಯಾವ ರೂಪದಲ್ಲಿ ಉಳಿಯುತ್ತವೆ ಎನ್ನುವುದು ಊಹೆಗೆ ಬಿಟ್ಟ ವಿಚಾರ. ಮಲಾಲಾ ಸೇರಿ ಶಾಲಾ ಮಕ್ಕಳ ಮೇಲೆ ಗುಂಡಿನ ಸುರಿಮಳೆ ಆಗಿರುವುದು ಹೊಸದಲ್ಲ­ವಾದರೂ ಪಾಕಿಸ್ತಾನದ ಈ ಮಕ್ಕಳ ಹತ್ಯೆಗೆ ಮಾನವೀಯ ಜಗತ್ತು ಮತ್ತೆ ಕಣ್ಣೀರಿಟ್ಟಿತು.

ಅನೇಕ ದೇಶಗಳಲ್ಲಿ ಶಾಲೆಯಿಂದ ಹೆಣ್ಣು ಮಕ್ಕಳನ್ನು ದೂರ ಇಟ್ಟಿರುವ ಇವರು, ಶಾಲೆಗೆ ಹೋಗಲು ಅವಕಾಶ ಪಡೆದಿರುವ ಇನ್ನಿತರ ದೇಶಗಳ ಮಕ್ಕಳಿಗೂ ಭಯಭೀತಿಯ ಭೀಕರ ಪಾಠಗಳನ್ನು ಹೇಳುತ್ತಿದ್ದಾರೆ. ಸನಾತನವಾದ ಮತ್ತು ಮೂಲಭೂತವಾದ ಯಾವ ಧರ್ಮ­ದ್ದಾದರೂ ಆಗಿರಲಿ ಮಹಿಳೆಯರು ಮತ್ತು ಮಕ್ಕಳ ಬದುಕನ್ನು ಅವು ನಿಯಂತ್ರಿಸುವ ರೀತಿ ನಿಜಕ್ಕೂ ಅಮಾನವೀಯ. ಧರ್ಮದ ನಿಘಂಟಿನ ಯಾವ ಪುಟದಲ್ಲಿ ‘ಮಾನವೀಯತೆ’ ಎಂಬ ಪದ­ವಿದೆಯೋ ಹುಡುಕಬೇಕು.

‘ದಯೆಯೇ ಧರ್ಮದ ಮೂಲವಯ್ಯ’ ಎಂದು ಹೇಳುವಾಗ ದಯ­ವಿಲ್ಲದಾ ಧರ್ಮ ಏನು ಮಾಡಲು ಸಾಧ್ಯ ಎಂಬ ಮಾತೂ ಇದೆ. ನಿಜ, ದಯವಿಲ್ಲದ ಧರ್ಮ ಏನೇನು ಮಾಡು­­ವುದಿಲ್ಲ! ಒಬ್ಬರಲ್ಲಾ ಒಬ್ಬರನ್ನು ಒಂದ­ಲ್ಲಾ ಒಂದು ಕಾರಣಕ್ಕೆ ದ್ವೇಷಿಸುವುದನ್ನೇ ಹೇಳುವ ಧರ್ಮಕ್ಕೆ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಮಾತು ಗೊತ್ತಿದ್ದಂತೆ ಕಾಣುವುದಿಲ್ಲ. 

ಧರ್ಮಾಂಧತೆಯ ಹಾಗೆಯೇ ಜಾತ್ಯಂಧತೆ ಕೂಡ ಅದಿರುವ ದೇಶ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದು ಹೊಸಕಾಲದಲ್ಲೂ ಎಲ್ಲೆಡೆ ಹೆಚ್ಚಾಗುತ್ತಿರುವುದು ಆತಂಕದ ವಿಚಾರ. ಅಕ್ಷರ ಲೋಕದಲ್ಲಿ ಅದರಿಂದಾಗಿರುವ ಅಪಾಯ­ಗಳು ವರ್ಣನಾತೀತ. ಶ್ರೇಣೀಕೃತ ಸಮಾಜದಲ್ಲಿ ಕೆಳಸ್ತರದ ಜಾತಿಗಳು ಮತ್ತು ಅಸ್ಪೃಶ್ಯ ಜಾತಿಗಳನ್ನು ಹತ್ತಿಕ್ಕಲು ಅಕ್ಷರವನ್ನೇ ಪ್ರಬಲ ಅಸ್ತ್ರ­ವಾಗಿ ಬಳಸಿಕೊಳ್ಳುವುದು ನಮಗೆ ಪರಂಪರೆ­ಯಿಂದ ಬಂದ ತಂತ್ರ– ಮಂತ್ರ. ಆದರೆ ಅಸ್ಪೃಶ್ಯತೆ­ಯನ್ನು ಮಕ್ಕಳಲ್ಲಿ ಬಿತ್ತಿ ಬೆಳೆಸಲು ಉಳಿದ ಸಕಲೆಂಟು ಜಾತಿಗಳೂ ಶಾಲೆಯ ಅಂಗಳವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ಆರಿಸಿಕೊಳ್ಳುತ್ತಿವೆ.

ಇತ್ತೀಚೆಗೆ ಮೈಸೂರು ಜಿಲ್ಲೆಯ ಕುಪ್ಪೇಗಾಲದ ಸರ್ಕಾರಿ ಶಾಲೆಗೆ ಹೋಗುತ್ತಿದ್ದ ತಮ್ಮ ಮಕ್ಕಳಿಗೆ ಅವರ ಮನೆಯ ದೊಡ್ಡವರು ಹೇಳಿದ ಪಾಠ ಮತ್ತು ನೀಡಿದ ಸಂದೇಶ ಅತ್ಯಂತ ಆತಂಕ ಹುಟ್ಟಿಸಿ, ದೇಶದ ಗಮನವನ್ನು ಸೆಳೆಯಿತು. ಮಕ್ಕಳ ಗಂಟಲಲ್ಲಿ ಸಿಕ್ಕಿಕೊಂಡ ಅಸ್ಪೃಶ್ಯತೆ ಮತ್ತು ಜಾತೀಯತೆಯ ಬಿಸಿಯೂಟದ ವಿಷ ಅವರಲ್ಲಿ ಬೆಳೆಯ­ಬಹುದಾದ ವಿಚಾರಶಕ್ತಿಯನ್ನು ಸಾಯಿಸ­ಬಾರದು.

ಏಕೆಂದರೆ ಎಷ್ಟಾದರೂ  ‘ಇಂದು ಹಾಲು ಕುಡಿದ ಮಕ್ಕಳೇ ಬದುಕುವುದು ಕಷ್ಟ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾರೆಯೇ?’
ಸರಿಯಾಗಿ ಎಂಬತ್ತು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿಯವರು ಇದೇ ಮೈಸೂರು ಸಂಸ್ಥಾನಕ್ಕೆ ನೀಡಿದ ತಮ್ಮ ಎರಡನೇ ಭೇಟಿಯಲ್ಲಿ ಅಸ್ಪೃಶ್ಯತೆಯನ್ನು ವಿರೋಧಿಸಿ ಹರಿಜನೋದ್ಧಾರದ ಪ್ರಬಲ ಪ್ರಚಾರ ಮಾಡಿದ್ದರು.

ಮೈಸೂರು ಮತ್ತು ಸುತ್ತಮುತ್ತ ಹಲವು ಹರಿಜನ ಕೇರಿಗಳಲ್ಲಿ ಸುತ್ತಾಡಿ ಅವರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದ್ದರು. ಹರಿಜನರು ನಿಮ್ಮ ಬಾವಿಗಳಲ್ಲಿ ನೀರು ಸೇದಲು ಬಿಡಿ, ಅವರಿಗೆ ದೇವಾಲಯಗಳ ಬಾಗಿಲು ತೆರೆಯಿರಿ ಎಂದು ಸವರ್ಣೀಯರಿಗೆ ಕರೆ ನೀಡಿದ ಗಾಂಧೀಜಿ, ‘ನಿಮ್ಮ ಹೃದಯಗಳಿಂದ ಅಸ್ಪೃಶ್ಯತೆಯನ್ನು ತೊಡೆದು­ಹಾಕಿ, ಅಸ್ಪೃಶ್ಯತೆಯನ್ನು ಗುಡಿಸಿ­ಹಾಕುವ ಸ್ವಚ್ಛತಾ ಕಾರ್ಯ ಕೈಗೊಳ್ಳಿ’ ಎಂಬಂಥ ಮಾತುಗಳನ್ನಾಡಿ ಬುದ್ಧಿ ಹೇಳಿದ್ದರು.

ಮುಂದೆ ಸ್ವತಂತ್ರ ಭಾರತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದಲ್ಲಿ ಅಸ್ಪೃಶ್ಯತೆಯನ್ನು ಅಳಿಸಿಹಾಕಲಾ­ಯಿತು. ಆದರೆ ಅಸ್ಪೃಶ್ಯತೆ ಸ್ವತಂತ್ರ ಅಲ್ಲ, ಅದು ನಮ್ಮ ಭಾರತೀಯ ಧರ್ಮ ಮತ್ತು ಜಾತಿ ಪದ್ಧತಿಯ ಮುಖ್ಯ ಭಾಗವಾದ್ದರಿಂದ ಅದನ್ನು ಅಷ್ಟು ಸುಲಭ­ವಾಗಿ ಅಳಿಸಲು ಆಗಲಿಲ್ಲ. ಅಸ್ಪೃಶ್ಯ ಜನರು ಇಂಥಿಂಥ ಜಾತಿಗಳ ಜನರಿಂದ ಇಷ್ಟಿಷ್ಟು ದೂರ­ದಲ್ಲಿ ನಿಲ್ಲಬೇಕು, ಊರೊಳಕ್ಕೆ ಬರುವುದು ಅನಿವಾರ್ಯವಾದರೆ ಅಸ್ಪೃಶ್ಯರು ಕೂಗುತ್ತಾ ಬರಬೇಕು, ಅವರಲ್ಲಿ ಕೆಲವರಂತೂ ಬೆಳಕಿನಲ್ಲಿ ಮನೆಯಿಂದ ಹೊರಗೆ ಬರದೆ ರಾತ್ರಿಯಲ್ಲಿ ಮಾತ್ರ ಕೆಲಸ ಮಾಡಬೇಕು ಎಂದೆಲ್ಲಾ ನಮ್ಮ ಧರ್ಮ ಕಟ್ಟುನಿಟ್ಟಾಗಿ ವಿಧಿವಿಧಾನಗಳನ್ನು ಹೇರಿದೆ.

ಸಾವಿರಾರು ವರ್ಷಗಳ ಪದ್ಧತಿ ಪರಂಪರೆಯ ಮುಂದೆ ನೂರಾರು ವರ್ಷಗಳ ಚಳವಳಿ ಏನೂ ಅಲ್ಲವಲ್ಲ. ಆದ್ದರಿಂದ ಗಾಂಧೀಜಿ, ಅಂಬೇಡ್ಕರ್, ಚಳವಳಿ, ಸಂವಿಧಾನ, ಕಾನೂನು, ನ್ಯಾಯಾಲಯ, ಸೆರೆಮನೆ ಶಿಕ್ಷೆ ಇತ್ಯಾದಿಗಳನ್ನು ಮುಟ್ಟಿಯೂ ಮುಟ್ಟಿಸಿಕೊಳ್ಳ­ದಂತೆ ಅಸ್ಪೃಶ್ಯತೆ ನಮ್ಮ ದೇಶದಲ್ಲಿ ಮುಂದು­ವರೆದಿದೆ. ಮೈಸೂರಿನ ಕುಪ್ಪೇಗಾಲದ ಶಾಲೆಯೂ ಸೇರಿ ದೇಶದ ಹಲವಾರು ಶಾಲೆಗಳು, ಹಲವು ವರ್ಷ­ಗಳಿಂದಲೂ ಅಸ್ಪೃಶ್ಯತೆ ಆಚರಣೆಯ ಬಲಪರೀಕ್ಷೆಯ ಪ್ರಯೋಗಶಾಲೆ­ಗಳಾಗಿವೆ.

ಅಸ್ಪೃಶ್ಯರು ತಯಾರಿಸಿದ ಬಿಸಿಯೂಟವನ್ನು ನಮ್ಮ ಮಕ್ಕಳು ತಿನ್ನಕೂಡದು ಎಂದು ಅಬ್ಬರಿಸುವ ಊರೊಳಗಿನ ಜನರು ಅಸ್ಪೃಶ್ಯತೆಯ, ಜಾತೀಯತೆಯ ಕಸವನ್ನು ಶಾಲೆಯಂಗಳಕ್ಕೆ ತಂದು ಸುರಿಯುವುದು ಕಲ್ಬುರ್ಗಿ, ಮೈಸೂರು, ಕೋಲಾರ ಮತ್ತು  ನೂರೆಂಟು ಕಡೆ ನಡೆಯುತ್ತಲೇ ಇದೆ. ಶತಮಾನಗಳುದ್ದಕ್ಕೂ ಕೊಳೆತ ಈ ಕಸದ ದುರ್ನಾತ ಶಾಲಾಮಕ್ಕಳ ಮೂಗು ಮನಸ್ಸುಗಳನ್ನು ಆವರಿಸಿಕೊಳ್ಳದೇ ಇರುವುದಿಲ್ಲ.

‘ಶಾಲೆಯ ಊಟ ತಿಂದರೆ ನಿಮ್ಮನ್ನು ಶಾಲೆಗೇ ಕಳಿಸುವುದಿಲ್ಲ’ ಎಂದು ಹೆದರಿಸಿ ದೊಡ್ಡವರು ಮನೆಯಿಂದಲೇ ಕೊಟ್ಟು ಕಳುಹಿಸಿದ್ದ ಊಟದ ಡಬ್ಬಿಗಳನ್ನು ಮಕ್ಕಳು ಟಿವಿ ಕ್ಯಾಮೆರಾದ ಎದುರು ಹಿಡಿದು ಅಲ್ಲಾಡಿಸುತ್ತಿದ್ದ ದೃಶ್ಯ, ದೇಶದ ಭವಿಷ್ಯವನ್ನೇ ಅಲ್ಲಾಡಿಸುವ ಅಪಾಯದ ಸಂಕೇತದಂತೆ ಕಂಡರೆ ಆಶ್ಚರ್ಯವಿಲ್ಲ.

ಹಳೆಯ ಕಾಲದ ದೇವಾಲಯ ಪ್ರವೇಶ ನಿಷೇಧದ ಜೊತೆಗೆ ಹೊಸಕಾಲದ ಹೋಟೆಲ್ ಗೂ ನಿಷೇಧ, ಹಳೆಯ ಕಾಲದ ನೀರಿನ ಬಾವಿ ಜೊತೆಗೆ ಹೊಸಕಾಲದ ಕೊಳವೆ ಬಾವಿಗೂ ನಿಷೇಧ, ಹಳೆಯ ಕಾಲದ ಕ್ಷೌರದ ಜೊತೆ ಹೊಸಕಾಲದ ಹೊಳೆಯುವ ಸೆಲೂನ್‌ಗಳಿಗೂ ನಿಷೇಧ– ಹೀಗೆ ಅಸ್ಪೃಶ್ಯತೆ ಹಳ್ಳಿಗಳಲ್ಲಿ ಕಾಲಕ್ಕೆ ತಕ್ಕಂತೆ ತನ್ನನ್ನು ನವೀಕರಿಸಿಕೊಳ್ಳುತ್ತಿತ್ತು. ಆಮೇಲೆ ಬಂದ ಶಾಲೆಗಳ ಬಿಸಿಯೂಟ, ಆ ತಣ್ಣನೆಯ ಕ್ರೌರ್ಯಕ್ಕೆ ಸಿಕ್ಕ ಹೊಸ ತುತ್ತು.

ನಮ್ಮ ದೇಶದಲ್ಲಿ ಅಸ್ಪೃಶ್ಯತೆಯ ಆಚರಣೆ ಎಪ್ಪತ್ತು ವಿಧಾನಗಳಲ್ಲಿ ನಡೆಯುತ್ತದೆ ಎಂದು ಮಧ್ಯಪ್ರದೇಶದ ಒಂದು ಸಮೀಕ್ಷೆ ಪಟ್ಟಿ ಮಾಡಿದೆ. ಪ್ರತ್ಯಕ್ಷ ಪರೋಕ್ಷ, ಗೋಚರ ಅಗೋಚರ ವಿಧಾನಗಳ ಅದರ ಸ್ವರೂಪ ಅತ್ಯಂತ ಸಂಕೀರ್ಣವಾಗಿದೆ. ಆದರೆ ಎಷ್ಟಾದರೂ ಸಂಕೀರ್ಣವಾಗಿರಲಿ, ಅಸ್ಪೃಶ್ಯತೆಯ ನಿವಾರಣೆ ಯಾರ ಹೊಣೆ? ಸಹಗಮನ ಪದ್ಧತಿ, ಬಾಲ್ಯವಿವಾಹ, ಹೆಣ್ಣುಮಕ್ಕಳ ಅನಕ್ಷರತೆ, ಗುಲಾಮಗಿರಿ ಇತ್ಯಾದಿ ಅನಿಷ್ಟಗಳನ್ನು ತೊಡೆಯಲು ತುಂಬಾ ಗಮನ ಕೊಟ್ಟ ಬ್ರಿಟಿಷರು ಅಸ್ಪೃಶ್ಯತೆ ತೊಡೆಯಲು ಎಷ್ಟು ಪ್ರಬಲ ಅಧಿಕಾರ ಪ್ರಯೋಗ ಮಾಡಿದರು?

ಛತ್ರಪತಿ ಶಾಹೂ, ನಾಲ್ವಡಿ ಕೃಷ್ಣರಾಜ ಮುಂತಾದ ಅಲ್ಲೊಬ್ಬ ಇಲ್ಲೊಬ್ಬ ಮಹಾರಾಜರು ಬಿಟ್ಟರೆ ನಮ್ಮ ದೇಶವನ್ನು ಆಳಿದ ಸಾವಿರಾರು ರಾಜರು ಅಸ್ಪೃಶ್ಯತೆ ಮತ್ತು ಜಾತೀಯತೆಯನ್ನು ಎಷ್ಟರ ಮಟ್ಟಿಗೆ ಪ್ರಶ್ನಿಸಿದರು? ಈಗ ಸರ್ಕಾರ, ಪೊಲೀಸ್ ಇಲಾಖೆ, ನ್ಯಾಯಾಂಗ, ಆಯೋಗ, ಜಾರಿ ನಿರ್ದೇಶ­ನಾಲಯ ಇವುಗಳ ನಡುವೆ ಈ ವಿಚಾರದಲ್ಲಿ ಬೇಕಾದ ಸಹಕಾರ ಕಾಣುವುದೇ ಇಲ್ಲ.

ಇನ್ನು ಚುನಾವಣೆ, ಮತದಾನಗಳಿಗೆ ಜಾತಿಪದ್ಧತಿಯ ಮತಬ್ಯಾಂಕ್‌ಗಳೇ ಜೀವಜೀವಾಳ­ವಾಗಿರು­ವುದ­ರಿಂದ ನಮ್ಮ ರಾಜಕಾರಣ ಮತ್ತು ರಾಜ­ಕೀಯ ವ್ಯವಸ್ಥೆಗಳು ಅಸ್ಪೃಶ್ಯತೆ ನಿವಾರಣೆ­ಯನ್ನು ಆದ್ಯತೆಯಾಗಿ ಪರಿಗ್ರಹಿಸುವುದು ಸಾಧ್ಯವೇ ಇಲ್ಲ. ಆದ್ದರಿಂದ ದಲಿತ ಸಚಿವರೂ ದೇವಾಲಯ ಪ್ರವೇಶಿಸುವ ಧೈರ್ಯ ಮಾಡು­ವುದಿಲ್ಲ.  ‘ಅಸ್ಪೃಶ್ಯತೆ ಎನ್ನುವುದು ಸಾವಿರ ಹೆಡೆ­ಗಳ ಸರ್ಪ’ ಎಂದು ಗಾಂಧೀಜಿ ಸುಮ್ಮನೆ ಹೇಳಿದರೇ?

ಅಸ್ಪೃಶ್ಯತೆಯ ಮೇಲ್ನೋಟದ ನಿವಾರಣೆಗೆ ಹಳ್ಳಿಗಳ ವಿನಾಶ ಮತ್ತು ನಗರೀಕರಣವೇ ದಾರಿ ಎಂದು ಯಾರಾದರೂ ಹೇಳಿದರೆ ಗ್ರಾಮೀಣ ಸಂಸ್ಕೃತಿ­ಪ್ರಿಯರು ದಾಳಿ ಮಾಡದೆ ಇರುವುದಿಲ್ಲ. ಇರಲಿ, ಆ ನಗರೀಕರಣ, ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣ ಇತ್ಯಾದಿಗಳ ಪ್ರಹಾರವನ್ನು ಎದುರಿಸಿ ಉಳಿಯುವ ಅಸ್ಪೃಶ್ಯತೆಯನ್ನು ಕಡಿಮೆ ಮಾಡಲು ಏನೇನು ಮಾಡಿದರೂ ಸಾಲದು.

ಎಲ್ಲ ಜಾತಿಗಳ ಸಹಪಂಕ್ತಿ ಭೋಜನ, ದಲಿತರ ಮನೆಯಲ್ಲಿ ಊಟ, ದಲಿತರ ಮನೆಗೆ ಗೃಹ­ಪ್ರವೇಶ, ದಲಿತರೊಡನೆ ದೇವಾಲಯ ಪ್ರವೇಶ, ಮಠದ ಸ್ವಾಮಿಗಳ ಪ್ರಯತ್ನ, ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಗಳಿಗೆ ಪ್ರೋತ್ಸಾಹ – ಎಲ್ಲವೂ ಅತ್ಯಗತ್ಯ ಮತ್ತು ಸ್ವಾಗತಾರ್ಹ. ಧರ್ಮಾಂಧತೆ ಮತ್ತು ಜಾತ್ಯಂಧತೆ­ಗಳನ್ನು ಧಿಕ್ಕರಿಸುವ ದಾರಿಯಲ್ಲಿ ಅವೆಲ್ಲವೂ ನಮ್ಮ ಮಕ್ಕಳಿಗೆ ಹಲವು ಪಾಠಗಳನ್ನು ಬೋಧಿಸುತ್ತವೆ. 
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT