ADVERTISEMENT

ಮಣಿಯದ ಚೇತನ, ನಮ್ಮ ನಡುವಿನ ‘ಗಾಂಧಿ’

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:22 IST
Last Updated 16 ಜೂನ್ 2018, 9:22 IST

ಮಣಿಪುರದ ಇರೊಮ್ ಶರ್ಮಿಳಾ ಚಾನು ಕಳೆದ ವಾರ ಮತ್ತೊಮ್ಮೆ ಬಂಧನಕ್ಕೊಳಗಾಗಿದ್ದಾರೆ. ಅನಿರ್ದಿಷ್ಟ ಉಪ­ವಾಸ ಸತ್ಯಾಗ್ರಹದ ಮೂಲಕ ಆತ್ಮಹತ್ಯೆಗೆ ಯತ್ನಿಸಿದ ಆರೋಪವನ್ನು ಶರ್ಮಿಳಾ ವಿರುದ್ಧ ಹೊರಿಸಲಾಗಿದೆ.

ಮಣಿಪುರ ಹಾಗೂ ಭಾರತದ ಈಶಾನ್ಯ ಪ್ರದೇಶದ ಬಹುತೇಕ ಭಾಗಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (1958) ಜಾರಿಯಲ್ಲಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಾರಂಟ್ ಇಲ್ಲದೆ ಬಂಧಿಸಲು ಅಥವಾ  ಹತ್ಯೆ ಮಾಡು­ವಂತಹ ಅಪಾರ ಹಾಗೂ ಅನಿಯಂತ್ರಿತ ಅಧಿಕಾರ ಈ ಕಾಯಿದೆ­ಯಡಿ ಭದ್ರತಾ ಪಡೆಗಳಿಗೆ  ಪ್ರಾಪ್ತವಾಗುತ್ತದೆ. ಹೀಗಾಗಿ ಈ ಕರಾಳ ಕಾಯಿದೆ­ಯನ್ನು ಹಿಂತೆಗೆದು­ಕೊಳ್ಳಬೇಕು ಎಂದು ಸರ್ಕಾರ­ವನ್ನು ಒತ್ತಾಯಿಸಿ  ಕಳೆದ 14 ವರ್ಷಗಳಿಂದ ಶರ್ಮಿಳಾ ಉಪವಾಸ ಸತ್ಯಾಗ್ರಹ ಮಾಡುತ್ತಿ­ದ್ದಾರೆ. ಈ ಕಠಿಣ ಉಪ­ವಾಸ ಸತ್ಯಾಗ್ರಹವನ್ನು ಶರ್ಮಿಳಾ ಆರಂಭಿಸಿದ್ದು 2000ದ ನವೆಂಬರ್ 4ರಂದು. ಹೀಗಾಗಿ ಕಳೆದ ನವೆಂಬರ್ ತಿಂಗಳಿಗೇ 14 ವರ್ಷಗಳು ಪೂರ್ಣ­ಗೊಂಡಿದೆ.  ಈಗ ಈ ಉಪವಾಸ ಸತ್ಯಾಗ್ರಹ 15ನೇ  ವರ್ಷಕ್ಕೆ ಕಾಲಿಟ್ಟಿದೆ.

ಅಂದು 2000ದ ನವೆಂಬರ್ 2ನೇ ದಿನ.  ಇಂಫಾಲ ಬಳಿಯ ಪುಟ್ಟ ಗ್ರಾಮ ಮಲೋಮ್‌ನ ಬಸ್ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದ ಜನ­ಸಾಮಾನ್ಯರ ಮೇಲೆ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ 10 ಮುಗ್ಧ ಜೀವಗಳು ಬಲಿ­ಯಾಗಿದ್ದವು. ಇದಕ್ಕೆ ಕಾರಣ, ಅಸ್ಸಾಂ ರೈಫಲ್ಸ್ ಕ್ಯಾಂಪ್‌ನಲ್ಲಿ, ಬಾಂಬೊಂದು ಸ್ಫೋಟ­ಗೊಂಡಿತ್ತು.  ಈ ಸ್ಫೋಟಕ್ಕೆ ಕಾರಣರಾಗಿದ್ದವರು ಅಪರಿಚಿತ ಬಂಡುಕೋರರು. ಆದರೆ  ತನ್ನ ಆಕ್ರೋಶವನ್ನು ಅಸ್ಸಾಂ ರೈಫಲ್ಸ್ ಹರಿಯ­ಬಿಟ್ಟಿದ್ದು ಮುಗ್ಧ ಜನರ ಮೇಲೆ. ಈ ಹತ್ಯಾಕಾಂಡ ನಡೆಸಿದವರಿಗೆ ಶಿಕ್ಷೆಯಾಗುವುದು ಸಾಧ್ಯವಿರ­ಲಿಲ್ಲ. ಏಕೆಂದರೆ ಅವರಿಗೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯ  ಬಲ ಇದ್ದದ್ದು ಗೊತ್ತಿದ್ದ ಸಂಗತಿ.

ಈ ದುರಂತಕ್ಕಷ್ಟೇ ಅಲ್ಲ ಭದ್ರತಾಪಡೆಗಳ ಇಂತಹ ಇನ್ನೂ ಅನೇಕ ದೌರ್ಜನ್ಯಗಳಿಗೆ ಪ್ರತಿ­ರೋಧ ತೋರಲು ಉಪವಾಸ ಸತ್ಯಾಗ್ರಹವನ್ನು ಇರೊಮ್ ಶರ್ಮಿಳಾ ಆರಂಭಿಸಿದ್ದು ಆಗಲೇ.  ಆದರೆ ಇದನ್ನು ಆತ್ಮಹತ್ಯೆ ಯತ್ನ ಎಂದು ಬಿಂಬಿಸಿ ಶರ್ಮಿಳಾರನ್ನು ಬಂಧಿಸಲಾಗುತ್ತದೆ. ಐಪಿಸಿ  309ನೇ ಸೆಕ್ಷನ್ ಅನ್ವಯ ಆತ್ಮಹತ್ಯೆ ಯತ್ನಕ್ಕೆ ಗರಿಷ್ಠ  ಒಂದು ವರ್ಷ ಜೈಲು ಶಿಕ್ಷೆ ಇದೆ. ಹೀಗಾಗಿ ಪ್ರತಿ 12 ತಿಂಗಳಿಗೊಮ್ಮೆ  ಶರ್ಮಿಳಾ ಬಿಡುಗಡೆ­ಯಾಗುತ್ತಾರೆ. ಆದರೆ ಮತ್ತೆ ಅವರನ್ನು ಬಂಧಿಸಿ ಬಲವಂತವಾಗಿ ಮೂಗಿಗೆ ನಳಿಕೆ ಹಾಕಿ ಅದರ  ಮೂಲಕ ದ್ರವಾಹಾರ ನೀಡುತ್ತಾ ಅವರ ಜೀವವುಳಿಸಿಕೊಂಡು ಬರಲಾಗುತ್ತಿದೆ. ಇಂಫಾ­ಲದ ಜವಾಹರಲಾಲ್ ನೆಹರೂ ಆಸ್ಪತ್ರೆಯ ಭದ್ರತಾ ವಾರ್ಡ್ ಶರ್ಮಿಳಾರ ಕಾಯಂ ಸೆರೆಮನೆಯಾಗಿದೆ.

ಕಳೆದ ವರ್ಷ 2014ರ ಆಗಸ್ಟ್ 19ರಂದು  ಶರ್ಮಿಳಾರನ್ನು ಬಿಡುಗಡೆ ಮಾಡಬೇಕೆಂದು ಮಣಿಪುರ ನ್ಯಾಯಾಲಯ ಹೇಳಿತು.  ಶರ್ಮಿಳಾರ ಉಪವಾಸ ಸತ್ಯಾಗ್ರಹ ‘ಕಾನೂನಿನ ವ್ಯಾಪ್ತಿಯಲ್ಲಿ ಅವಕಾಶವಿರುವ ರಾಜಕೀಯ ಬೇಡಿಕೆ’ ಎಂದೂ ಅದು ವ್ಯಾಖ್ಯಾನಿಸಿತು. ಹೀಗಿದ್ದೂ ಆತ್ಮಹತ್ಯೆ ಯತ್ನದ ಆರೋಪ ಹೊರಿಸಿ ಮೂರು ದಿನಗಳ ನಂತರ ಮತ್ತೆ ಆಗಲೂ ಶರ್ಮಿಳಾ­ರನ್ನು ಬಂಧಿಸಲಾಯಿತು. ಆದರೆ ಈ ಮಧ್ಯೆ  ಮತ್ತೊಂದು ವಿಪರ್ಯಾಸ ಎದುರಾಗ­ಲಿದೆ. ಆತ್ಮಹತ್ಯೆ ಯತ್ನವನ್ನು ಅಪರಾಧಮುಕ್ತ­ಗೊಳಿಸುವುದಕ್ಕಾಗಿ ಐಪಿಸಿ ಸೆಕ್ಷನ್ 309 ರದ್ದುಪಡಿಸಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಹೇಳಿದೆ.

ಈಗ ಈ ವಾದಗಳೇನೇ ಇರಲಿ, ಶಾಂತಿಯುತ ಪ್ರತಿರೋಧ ತೋರಿದ್ದಕ್ಕಾಗಿ ಇರೊಮ್ ಶರ್ಮಿಳಾ ಬಂಧನದಲ್ಲಿರಬೇಕು  ಎಂಬುದು ಸರಿ­ಯಲ್ಲ.  ಅವರು ಎತ್ತಿರುವ ವಿಚಾರಗಳು ಹಾಗೂ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕಾದುದು ಮುಖ್ಯ. ಸಮಸ್ಯೆಗಳನ್ನು ಪರಿಹರಿಸುವ ಪ್ರಕ್ರಿಯೆ­ಯಲ್ಲಿ ರಾಜಕೀಯ ನೇತಾರರು ಹಾಗೂ ಅಧಿಕಾರಿಗಳು ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದು ‘ಆಮ್ನೆಸ್ಟಿ ಇಂಟರ್‌ನ್ಯಾಷನಲ್’ ಈಗ  ಒತ್ತಾಯಿಸಿದೆ.

ಈಗಾಗಲೇ ಹೇಳಿದಂತೆ, ಶರ್ಮಿಳಾ ಅವರ ಶಾಂತಿಯುತ ಹೋರಾಟಕ್ಕೆ 14 ವರ್ಷಗಳಾ­ಗಿವೆ. ಇದೇನೂ ಕಡಿಮೆ ಅವಧಿಯಲ್ಲ. ಹೀಗಾಗಿ ಇದು 43 ವರ್ಷ ವಯಸ್ಸಿನ  ಈ ಯುವ ಸಾಮಾಜಿಕ ಕಾರ್ಯಕರ್ತೆಯ ದೊಡ್ಡ  ಗೆಲುವು ಎಂದೇ ವ್ಯಾಖ್ಯಾ­ನಿಸಬೇಕಾಗುತ್ತದೆ. ಪ್ರತಿ ಬಾರಿಯೂ ಶರ್ಮಿಳಾರ ಸತ್ಯಾಗ್ರಹದ ಎದುರು ಸರ್ಕಾರ ಸೋಲಬೇಕಾಗುತ್ತದೆ. ಶರ್ಮಿಳಾರನ್ನು ಬಂಧಿ­ಸುವ ಒತ್ತಡಕ್ಕೆ ಸಿಲುಕುತ್ತದೆ ಸರ್ಕಾರ. ಇದರ ಉದ್ದೇಶ ಶರ್ಮಿಳಾರ ಜೀವರಕ್ಷಣೆ.  ಆದರೆ ಬಂಧ­­ನದ ಔಚಿತ್ಯ ಪ್ರಶ್ನಾರ್ಹ. ಏಕೆಂದರೆ ಆಕೆ ಯಾವ ಅಪರಾಧವನ್ನೂ ಮಾಡಿಲ್ಲ ಎಂದೇ ನ್ಯಾಯಾ­ಲಯ ಹೇಳುತ್ತದೆ. ಅಲ್ಲದೆ  ಶರ್ಮಿಳಾ­ರಂತಹ ರಾಜಕೀಯ ಪ್ರತಿಭಟನಾಕಾರರಿಗೆ ‘ಆತ್ಮಹತ್ಯೆ ಯತ್ನ’ ಎಂಬಂಥ ಅಪರಾಧ ಹೊರಿ­­­ಸು­ವುದು ಎಷ್ಟು ಸರಿ? ಇನ್ನುಮುಂದೆಯಂತೂ  ಆತ್ಮಹತ್ಯೆ ಯತ್ನವೂ ಅಪರಾಧವಲ್ಲ. ಆದರೆ ಸರ್ಕಾರಕ್ಕೆ ಆಯ್ಕೆ ಇಲ್ಲ.  ಶರ್ಮಿಳಾ ತನ್ನ ವಶ­ದಲ್ಲಿದ್ದಾಗ ಮಾತ್ರವೇ ಮೂಗಿನ ನಳಿಕೆಯಿಂದ ಬಲವಂತ­ವಾಗಿ ದ್ರವಾಹಾರ ಹಾಕಲು ಅದಕ್ಕೆ ಸಾಧ್ಯ.

ನಿಜ ಹೇಳಬೇಕೆಂದರೆ ಮಣಿಪುರದ ಈ ಉಕ್ಕಿನ ಮಹಿಳೆ ರಾಷ್ಟ್ರದ ಸಾಕ್ಷಿಪ್ರಜ್ಞೆಯ ಪ್ರತೀಕ. ಆದರೆ ರಾಷ್ಟ್ರಮಟ್ಟದಲ್ಲಿ ಈ ಮಹಿಳೆಯ ಹೋರಾಟಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಲಿಲ್ಲ ಎಂಬುದು ನಿಜ. ಹಿರಿಯ ಹೋರಾಟಗಾರ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿಸಿ, ಲೋಕಪಾಲ್ ಮಸೂದೆಗೆ ಒತ್ತಾಯಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ­ದಾಗ ಸಾವಿರಾರು ಜನ ಅವರನ್ನು ಬೆಂಬಲಿಸಿ­ದ್ದರು. ಕಡೆಗೆ ಸರ್ಕಾರವೂ ಮಣಿದು ಲೋಕ­ಪಾಲ ಮಸೂದೆ ಜಾರಿಗೊಳಿಸಿದ್ದು ಈಗ ಇತಿ­ಹಾಸ.  ಅಣ್ಣಾ ಹಜಾರೆಯವರ ಆ ತಂಡದಲ್ಲಿದ್ದ ಮುಖಂಡರು ಈಗ ಮುಖ್ಯವಾಹಿನಿಯ ರಾಜ­ಕೀಯ ಪಕ್ಷಗಳ ನೇತಾರರಾಗಿಯೂ ಪರಿವರ್ತಿತ­ರಾಗಿದ್ದಾರೆ.

ಆದರೆ ಇರೊಮ್ ಶರ್ಮಿಳಾರದ್ದು ಏಕಾಂಗಿ ಹೋರಾಟ.  ಉಪವಾಸದ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅವರು ಯಾವುದೇ ಗುಂಪು ಅಥವಾ ತಂಡದ ಸದಸ್ಯರಾಗಿರಲಿಲ್ಲ. ಅಥವಾ ಯಾವುದೇ ಸಂಘಟನೆಯ ಭಾಗವಾಗಿಯೂ ಈ ಉಪವಾಸ ಸತ್ಯಾಗ್ರಹ ಆರಂಭಿಸಲಿಲ್ಲ. ಬದಲಿಗೆ ಉಪವಾಸದ ಕುರಿತಾಗಿ ಅವರ ಈ ವ್ಯಕ್ತಿಗತ ನಿರ್ಧಾರ ಸಮುದಾಯದ ಸಂಕಲ್ಪದ ಜೊತೆಗೆ ಬೆಸೆದುಕೊಂಡಿದೆ. ಈ ದೃಢ ನಿಶ್ಚಯದ, ಛಲ ಬಿಡದ ಉಪವಾಸದ ಮೂಲಕ  ಶರ್ಮಿಳಾ ಅವರು ಅಸಂಖ್ಯ ಪ್ರಶ್ನೆಗಳಿಗೆ ಧ್ವನಿ­ಯಾಗಿದ್ದಾರೆ ಎಂಬುದು ನಿಜ.

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ ಹಿಂತೆಗೆದುಕೊಳ್ಳಬೇಕೆಂಬುದು ಅವರ ಉಪವಾಸ ಸತ್ಯಾಗ್ರಹದ ಮುಖ್ಯ ಆಗ್ರಹ. ಆದರೆ ಆಳದಲ್ಲಿ ಸರ್ಕಾರ ಹಾಗೂ ನೀತಿ ನಿರೂಪಕರು ಸೇರಿದಂತೆ ಜನರನ್ನು ಸೂಕ್ಷ್ಮಗೊಳಿಸುವ ಪ್ರಯತ್ನವೂ ಈ ಸತ್ಯಾಗ್ರಹದಲ್ಲಿದೆ.

2004ರಲ್ಲಿ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ, ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯ ಪರಾಮರ್ಶೆಯ ಅಗತ್ಯ ಮನಗಂಡು  ಈ ಬಗ್ಗೆ ಅಧ್ಯಯನಕ್ಕಾಗಿ ಸುಪ್ರೀಂ­ಕೋರ್ಟ್ ಮಾಜಿ ನ್ಯಾಯಮೂರ್ತಿಗಳಾದ ಬಿ.ಪಿ. ಜೀವನ್ ರೆಡ್ಡಿ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆಯನ್ನು ರದ್ದುಪಡಿಸಬೇಕೆಂಬ ಶಿಫಾರಸನ್ನು ಈ ಸಮಿತಿ ನೀಡಿತ್ತು. ಅಕ್ರಮ ಚಟುವಟಿಕೆಗಳ (ತಡೆ) ಕಾಯಿದೆಗೆ ತಿದ್ದುಪಡಿ ತಂದು   ಅದನ್ನೇ ವಿಧ್ವಂಸಕ ಕೃತ್ಯಗಳು ಹಾಗೂ ಸಂಘರ್ಷಗಳ ತಡೆಗೆ  ಪರಿಣಾಮಕಾರಿಯಾಗಿ ಬಳಸಬಹುದು ಎಂದೂ ಈ ಸಮಿತಿ ಅಭಿಪ್ರಾಯ­ಪಟ್ಟಿತ್ತು. ಹೀಗಿದ್ದೂ ಸರ್ಕಾರ ಈವರೆಗೆ ಏನೂ ಕ್ರಮ ಕೈಗೊಂಡಿಲ್ಲ. ಆದರೆ, ಶರ್ಮಿಳಾರ ಉಪ­ವಾಸ ಸತ್ಯಾಗ್ರಹ, ಈ ವಿಶೇಷ ಕಾಯಿದೆಯ ಕುರಿತಾದ ಚರ್ಚೆಯನ್ನು ಜೀವಂತವಾಗಿಯೇ ಇರಿಸಿಕೊಂಡು ಬಂದಿದೆ.

ಮಾನವ ಹಿಂಸಾಚಾರಗಳು ಅಂತ್ಯವಾಗ­ಬೇಕೆಂಬ ಆಗ್ರಹ ಶರ್ಮಿಳಾ ಅವರ ಉಪ­ವಾಸದ ಹಿಂದಿರುವ ಆಶಯ. ಈ ಬದಲಾವಣೆಗೆ ಮುಖ್ಯ­ವಾಗಿ ಬೇಕಾದುದು ಹೃದಯ ಪರಿವರ್ತನೆ.  ಇಂತಹದೊಂದು ವಿಚಾರ ಈ ರಾಜಕೀಯ ಬೇಡಿಕೆಗೆ ಅಧ್ಯಾತ್ಮದ ಆಯಾಮವನ್ನು ಒದಗಿಸಿ­ಕೊಡುತ್ತದೆ. ಹೀಗಾಗಿ ದೇಹವನ್ನೇ ಆಯುಧ­ವಾಗಿ ಬಳಸಿಕೊಂಡು ಸತ್ಯದ ಪರವಾಗಿ ಮಾತ­ನಾಡುವ ಇರೊಮ್ ಶರ್ಮಿಳಾರ ಹೋರಾಟದ ಆಯಾಮಗಳು ಹೆಚ್ಚಿನದಾಗುತ್ತವೆ.

ಎಂದರೆ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ನೀಡಿರುವ ಕಾನೂನು ಹಿಂತೆಗೆದುಕೊಳ್ಳ­ಬೇಕಾ­ದುದು ಆದ್ಯತೆಯ ಸಂಗತಿ. ಈ ಪ್ರಕ್ರಿಯೆಯಲ್ಲಿ ಆಗಬೇಕಾಗಿರುವುದು ಹೃದಯ ಪರಿವರ್ತನೆ. ರಾಷ್ಟ್ರವನ್ನಾಳುವವರ ಚಿಂತನೆ, ಪ್ರಜ್ಞೆಯಲ್ಲಿ ಈ ಪರಿವರ್ತನೆಯಾಗಬೇಕು.  ಹಾಗಾದಾಗಷ್ಟೇ  ರಾಜಕೀಯ ನೀತಿಗಳಲ್ಲಿ ಗಣನೀಯ ಬದ­ಲಾ­ವಣೆ­ಗಳನ್ನು ಕಾಣುವುದು ಸಾಧ್ಯ. ಶರ್ಮಿಳಾರ  ಈ ಬೇಡಿಕೆಗೆ ಸಂಕೀರ್ಣ ಸ್ವರೂಪವಿದೆ. ಅವರ ಬೇಡಿಕೆಗೆ ಬಗ್ಗಲು ಸರ್ಕಾರ ತಯಾರಿಲ್ಲ. ಹೀಗಾಗಿ ಉಪವಾಸ ಅನಿರ್ದಿಷ್ಟವಾಗಿ ಮುಂದು­ವರಿಯುತ್ತದೆ.

‘ನನ್ನದೇ ಕೈಗಳಿಂದ ತಿನ್ನಬೇಕು, ಕುಡಿಯಬೇಕು ಎಂಬ ಆಸೆ ನನಗೂ ಇದೆ.  ಆದರೆ ಈವರೆಗೆ ನನ್ನ ಮೂಗಿನಲ್ಲಿರುವ ಈ ನಳಿಕೆಯ ಮೂಲಕ ನಾನು ಬದುಕಿದ್ದೇನೆ.ನಿಮ್ಮದೇ ಕೈಗಳಲ್ಲಿ ತಿನ್ನಿ ಅಥವಾ ಮೂಗಿನಲ್ಲಿ ನಳಿಕೆಯ ಮೂಲಕ ಬಲಾತ್ಕಾರ­ದಿಂದ ತಿನ್ನಿಸಿಕೊಳ್ಳಿ ನೀವು ಬದುಕಲೇ­ಬೇಕೆಂದಿದ್ದರೆ ಅದರಿಂದೇನೂ ವ್ಯತ್ಯಾಸವಾಗದು.  ಬದುಕಿನ ಈ ಘಟ್ಟದಲ್ಲಿ  ನನಗೆ ಬೇಕಾದದ್ದು ನಾನು ಮಾಡ­ಲಾರೆ. ನನ್ನದೇ ಕೈಗಳಿಂದ ತಿನ್ನಲಾರೆ. ಮೊಲೆ ಹಾಲು ಕುಡಿಯುವ ಶಿಶುವಿನಂತಾಗಿದ್ದೇನೆ ನಾನು. ನನಗೆ ಏನನ್ನು ತಿನ್ನಬೇಕು ಅಥವಾ ಯಾವಾಗ ತಿನ್ನಬೇಕು ಎನ್ನುವುದನ್ನು ನಾನು ನಿಯಂತ್ರಿಸಲಾರೆ.  ಹೀಗಾಗಿ ನನ್ನ ದೇಹದೊಳಗೆ ಹಾದು ಹೋಗಿರುವ ನಳಿಕೆಗಳಿಗೆ ನಾನು ಪ್ರತಿ­ರೋಧ ತೋರುವುದಿಲ್ಲ. ಜೈಲು ವಾರ್ಡನ್‌ಗಳು ನನ್ನ ಮೂಗಿನೊಳಗೆ ಈ ನಳಿಕೆಗಳನ್ನು ಬಲವಂತ­ವಾಗಿ ಇಳಿಬಿಡುತ್ತಾರೆ. ಆ ಬಗ್ಗೆ ಅಥವಾ ಯಾವು­ದರ ಬಗೆಗೂ ಈಗ ನಾನೇನೂ ಮಾಡಲಾರೆ.  ....ನಾನು ನನ್ನ ಹಲ್ಲುಗಳನ್ನೂ ಅನೇಕ ವರ್ಷ ಉಜ್ಜಿರಲಿಲ್ಲ.  ಆದರೆ ವ್ಯತ್ಯಾಸವೆಂದರೆ ನಾನು ಮಾಡುತ್ತಿರುವ ಕ್ರಿಯೆ ಬಗ್ಗೆ ನನಗೆ ಒಳ್ಳೆಯ­ದೆನಿಸುತ್ತದೆ. ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ನಾನೇ ನಾನಾಗಿ ತಿನ್ನಲಾರೆ, ಕುಡಿಯ­­ಲಾರೆ– ನನಗೆ ಬೇಕಾದ್ದನ್ನು ನನ್ನ ಕಣ್ಣುಗಳು ನೋಡುವಂತೆ ಮಾಡಲಾರೆ, ನನಗೆ ಖುಷಿ ಕೊಡುವುದನ್ನು ಮಾಡಲಾಗುವುದಿಲ್ಲ– ಇವೆಲ್ಲಾ  ಈಗ ನನಗೆ ಏನೇನೂ ಅಲ್ಲ. ನಾನು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಒಳ್ಳೆಯ­ದೆನಿಸುವುದಷ್ಟೇ ಮುಖ್ಯ’ ಎಂದು ಶರ್ಮಿಳಾ  ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ಪರಿತ್ಯಾಗವನ್ನು ಶರ್ಮಿಳಾ ದೊಡ್ಡ­ದೆಂದೂ ಪರಿಗಣಿಸುವುದಿಲ್ಲ. ಅಹಿಂಸಾತ್ಮಕ ಸಾಮಾಜಿಕ ವ್ಯವಸ್ಥೆಗಾಗಿ  ಗಾಂಧಿಯವರು ಕೆಲವೊಂದು ವ್ರತಗಳನ್ನು   ಗುರುತಿಸುತ್ತಾರೆ.  ಇವುಗಳಲ್ಲಿ ಬಹು ಮುಖ್ಯ­ವಾದದ್ದು ಅಹಿಂಸೆ, ಸತ್ಯ, ಆಸ್ತೇಯ  (ಕಳ್ಳತನ­ದಿಂದ ದೂರವಿರುವುದು), ಬ್ರಹ್ಮಚರ್ಯ, ಅಸಂಗ್ರಹ, ಶರೀರಾಶ್ರಮ (ದೈಹಿಕ ಶ್ರಮ), ಆಸ್ವಾದ್, ಅಭಯ, ಸರ್ವ ಧರ್ಮ ಸಮ ಭಾವ,  ಸ್ವದೇಶಿ ಹಾಗೂ  ಸ್ಪರ್ಶಭಾವನ  (ಅಸ್ಪೃಶ್ಯತೆ ತೊಲಗಿಸಿ).

ಬಹುತೇಕ ಈ ಎಲ್ಲಾ ಆದರ್ಶಗಳನ್ನು ಶರ್ಮಿಳಾ ತಮ್ಮದಾಗಿಸಿಕೊಂಡಿದ್ದಾರೆ. ಗಾಂಧಿ ತತ್ವಗಳನ್ನು ಇಷ್ಟೊಂದು ನಿಷ್ಠೆಯಿಂದ ಪಾಲಿಸುವ ಮತ್ತೊಬ್ಬರನ್ನು ಕಾಣುವುದು ಕಷ್ಟ. ಸತ್ಯವೇ ಬದುಕಿನ ಆಧಾರ ಎಂಬುದನ್ನು ಗಾಂಧಿ ಕಂಡುಕೊಂಡಿದ್ದರು.

ಸತ್ಯ ಹಾಗೂ ಅಹಿಂಸೆ ಅವರು ಅನುಸರಿಸಿದ ಆದರ್ಶ.  ಅಹಿಂಸೆಯ ಮಾರ್ಗದಲ್ಲಿ ಸತ್ಯದ ಸಾಕ್ಷಾತ್ಕಾರ­ಕ್ಕಾಗಿ ನಡೆಸುತ್ತಿರುವ ಶರ್ಮಿಳಾರ ಈ ಹೋರಾಟಕ್ಕೆ ಅಂತ್ಯವೆಲ್ಲಿ? ಈಗಾಗಲೇ ಮಾನವ ಇತಿಹಾಸದಲ್ಲಿ ಅತಿ ದೀರ್ಘವಾದ ಉಪವಾಸ ಸತ್ಯಾಗ್ರಹ ಇದಾಗಿದೆ.

ನಾಗರಿಕ ಅಸಹಕಾರ ಸಿದ್ಧಾಂತದ ಪ್ರತಿಪಾದಕ ಥೋರೊ, ‘ಅಸಮರ್ಪಕ ಕಾನೂನುಗಳನ್ನು ಪಾಲಿಸಬೇಡಿ’ ಎಂದೇ ಜನರಿಗೆ ಸಲಹೆ ನೀಡು­ತ್ತಿದ್ದ.  ತತ್ವನಿಷ್ಠವಾದ ಪ್ರತಿರೋಧ ನ್ಯಾಯಯುತ­ವಾಗಿ ಚಿಂತಿಸುವ ನಾಗರಿಕನ ಕರ್ತವ್ಯ ಎಂಬು­ದನ್ನು ಮರೆಯಲಾಗದು.
ಬಂಡುಕೋರರು ಹಾಗೆಯೇ ಭದ್ರತಾಪಡೆಗಳ ಹಿಂಸಾಚಾರಗಳನ್ನು ವಿರೋಧಿಸುತ್ತಾ ಮಣಿ­ಪುರದ ನೆಲದಲ್ಲಿ ಶಾಂತಿಗಾಗಿ ಹೋರಾಡುತ್ತಾ ತನ್ನ ಜೀವವನ್ನೇ ಪಣಕ್ಕಿಟ್ಟಿದ್ದಾರೆ ಶರ್ಮಿಳಾ.   

        ನನ್ನ ಹುಟ್ಟೂರಿನಿಂದ
    ವಿಶ್ವದ ಮೂಲೆಮೂಲೆಗೆ
    ಪಸರಿಸುವೆ ಶಾಂತಿಯ ಕಂಪು

ಎಂದು ಶರ್ಮಿಳಾ ತಾವು ಬರೆದ ಪದ್ಯ­ವೊಂದ­ರಲ್ಲಿ ಹೇಳಿಕೊಂಡಿದ್ದಾರೆ.  ಅವರ ಈ  ಆಶಯ ಎಲ್ಲರದೂ ಆಗಿರಬೇಕಾದ ಹೊತ್ತು ಇದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.