ADVERTISEMENT

ಮಹಿಳೆಯರಲ್ಲಿ ಭ್ರಷ್ಟಾಚಾರ ಕಡಿಮೆಯೇ?

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:22 IST
Last Updated 16 ಜೂನ್ 2018, 9:22 IST

1930ರಲ್ಲಿ ಗಾಂಧಿ  ಹೇಳಿದ ಮಾತುಗಳಿವು:  ಬಲ ಅಂದರೆ ಕ್ರೂರ ಬಲ ಎಂದಾದಲ್ಲಿ ಮಹಿಳೆ ಪುರುಷನಿಗಿಂತ ಕಡಿಮೆ ಕ್ರೂರಿ. ಬಲ ಅಂದರೆ ನೈತಿಕ ಶಕ್ತಿ ಎಂದಾದಲ್ಲಿ ಮಹಿಳೆ ಪುರುಷನಿಗಿಂತ ಮೇಲುಗೈ ಸಾಧಿಸುತ್ತಾಳೆ.

1999ರಷ್ಟು ಹಿಂದೆ 150 ರಾಷ್ಟ್ರಗಳಲ್ಲಿ ವಿಶ್ವ ಬ್ಯಾಂಕ್  ಸಂಶೋಧನೆಯೊಂದನ್ನು ನಡೆಸಿತ್ತು. ಈ ಪ್ರಕಾರ, ಮಹಿಳೆಯರು ಭ್ರಷ್ಟ ವ್ಯವಹಾರಗಳಲ್ಲಿ ಪಾಲ್ಗೊಳ್ಳುವುದು ಪುರುಷರಿಗಿಂತ ಕಡಿಮೆ.  ಕಾರಣ, ಮಹಿಳೆಯರು ಹೆಚ್ಚು ಅಪಾಯ  ಆಹ್ವಾನಿಸಿಕೊಳ್ಳುವುದಿಲ್ಲ. ಅಪಾಯಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುವುದೂ ಕಡಿಮೆ. ಪೋಷಿಸುವ ಸ್ವಭಾವ ಪಾರಂಪರಿಕವಾಗಿಯೇ ಅವರಲ್ಲಿ ಅಂತರ್ಗತ. ವ್ಯಕ್ತಿನಿಷ್ಠೆ ಹಾಗೂ ಅವಕಾಶವಾದಿತನ ಅವರಲ್ಲಿ ಕಡಿಮೆ.

ಇಂತಹದೊಂದು ಭಾವನೆ ಎಷ್ಟು ಸರಿ ಎಂಬುದನ್ನು ನಿಕಷಕ್ಕೆ ಒಡ್ಡಿರುವ ಉದಾಹರಣೆಗಳಿವೆ. ಕೆಲವು ರಾಷ್ಟ್ರಗಳು ಪ್ರಯೋಗಶೀಲವಾದ ಭ್ರಷ್ಟಾಚಾರ ವಿರೋಧಿ ಯೋಜನೆಗಳನ್ನು ಅಳವಡಿಸಿಕೊಂಡಿವೆ. ಪೆರು ರಾಷ್ಟ್ರದ ಮಾದರಿ ಇಲ್ಲಿ ಮುಖ್ಯವಾದದ್ದು. ವ್ಯಾಪಕವಾಗಿದ್ದ  ಭ್ರಷ್ಟಾಚಾರವನ್ನು ನಿಯಂತ್ರಿಸಿ ಕಾನೂನು ಜಾರಿ ವ್ಯವಸ್ಥೆಯಲ್ಲಿ ಜನರ ವಿಶ್ವಾಸವನ್ನು ಮರು ತುಂಬಲು ಪೆರುವಿನಲ್ಲಿ 1998ರಿಂದ ಸಂಚಾರ ಪೊಲೀಸ್ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಹೆಚ್ಚಾಗಿ ನಿಯೋಜಿಸಿಕೊಳ್ಳಲು ಆರಂಭಿಸಲಾಯಿತು.

ಈಗ ಪೆರುವಿನ ಲೀಮಾದಲ್ಲಿ ರಸ್ತೆ ಸಂಚಾರ ಪೊಲೀಸ್ ಪಡೆಯಲ್ಲಿ  ಶೇ 93ರಷ್ಟು  ಮಹಿಳೆಯರಿದ್ದಾರೆ. ಇದರಿಂದಾಗಿ ರಸ್ತೆಗಳಲ್ಲಿ ಪೊಲೀಸರಿಗೆ ಕೊಡಲಾಗುತ್ತಿದ್ದ ಲಂಚದ ಪ್ರಮಾಣ  ಕಡಿಮೆಯಾಗಿದೆ.  ಲೀಮಾದ  ಉದಾಹರಣೆಯನ್ನೇ ಮೆಕ್ಸಿಕೊ ಸಹ ಪಾಲಿಸಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಮಹಿಳಾ ಅಧಿಕಾರಿ ಗಳನ್ನು ನೇಮಿಸಿಕೊಂಡಿತ್ತು.

ಹಾಗೆಯೇ ಭಾರತದಲ್ಲಿ  ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಮೀಸಲು ಇದೆ. ಇದರಿಂದಾಗಿ ಅನೇಕ ಗ್ರಾಮಪಂಚಾಯಿತಿಗಳಲ್ಲಿ   ನೀರು, ನೈರ್ಮಲ್ಯ ಅಥವಾ  ಇತರ ಸಾರ್ವಜನಿಕ ಸೌಕರ್ಯಗಳ ವಿಚಾರ ಆದ್ಯತೆ ಪಡೆದುಕೊಳ್ಳುತ್ತದೆ  ಹಾಗೂ  ಭ್ರಷ್ಟಾಚಾರ ಪ್ರಮಾಣ ಕಡಿಮೆಯಾಗುತ್ತದೆ ಎಂದು ವಿಶ್ವ ಬ್ಯಾಂಕ್‌ನ ವಾರ್ಷಿಕ ವಿಶ್ವ ಅಭಿವೃದ್ಧಿ ವರದಿ ಹೇಳಿದೆ.

ಆದರೆ ಇದು ಇಷ್ಟೊಂದು ಸರಳವಾದ ವಿಚಾರವೆ?  ಲಂಚ ತೆಗೆದುಕೊಳ್ಳಲು ಮಹಿಳೆಯರು ಹಿಂಜರಿಯುತ್ತಾರೆ ಅಥವಾ ಸಾರ್ವಜನಿಕ ಹಿತದ ಮುಂದೆ ವೈಯಕ್ತಿಕ ಗಳಿಕೆ, ಸ್ವಜನಪಕ್ಷಪಾತದಂತಹ ವಿಚಾರಗಳು ಹಿನ್ನೆಲೆಗೆ ಸರಿಯುತ್ತವೆ ಎಂಬುದನ್ನು ಸಾರ್ವತ್ರಿಕಗೊಳಿಸುವುದು ಸಾಧ್ಯವೆ? ವಾಸ್ತವವಾಗಿ  ಲಿಂಗತ್ವ ಹಾಗೂ ಭ್ರಷ್ಟಾಚಾರದ ಮಧ್ಯದ ಸಂಬಂಧ   ಕ್ಲಿಷ್ಟಕರವಾದುದು. 
  
ಇಂತಹದೊಂದು ಭಾವನೆಗೆ ಪುಷ್ಟಿ ನೀಡುವಂತೆ ಬಿಜೆಪಿಯ ನಾಲ್ವರು ಮಹಿಳೆಯರು ಈಗ ಹಗರಣಗಳಲ್ಲಿ ಸಿಲುಕಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ  ಎನ್‌ಡಿಎ ಸರ್ಕಾರ  ಹಗರಣಗಳಿಲ್ಲದೆ ಒಂದು ವರ್ಷ ಪೂರೈ ಸಿದ ನಂತರ ಈ ವಿವಾದ ಭುಗಿಲೆದ್ದಿದೆ. ಹತ್ತು ವರ್ಷಗಳ ಯುಪಿಎ ಆಡಳಿತದ ಭ್ರಷ್ಟಾಚಾರದ ವಿರುದ್ಧದ ಹೋರಾ ಟವೇ 2014ರ ಲೋಕಸಭಾ ಚುನಾವಣೆಯಲ್ಲಿ  ಬಿಜೆಪಿಗೆ ಮುಖ್ಯ ವಿಷಯವಾಗಿತ್ತು.

ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಈ ಪ್ರಚಾರಾಂದೋಲನಕ್ಕೆ  ಜನ ಸ್ಪಂದಿಸಿದರು. ಪರಿಣಾಮ, 30 ವರ್ಷಗಳ ಅಂತರದ ನಂತರ  ಕೇಂದ್ರದಲ್ಲಿ ಪ್ರಬಲ ಬಹುಮತ ಗಳಿಸಿದ ಪಕ್ಷವಾಗಿ ಬಿಜೆಪಿ ಉದಯ ವಾಗಿತ್ತು. ಆದರೆ ಸರ್ಕಾರ ಒಂದು ವರ್ಷ ಪೂರೈಸುತ್ತಿದ್ದಂತೆಯೇ ಹಗರಣಗಳ ಉರುಳು ಸುತ್ತಿಕೊಂಡಿರುವುದು ವಿಪರ್ಯಾಸ. ಈ ವಿವಾದದಲ್ಲಿ ಸಿಲುಕಿರುವ ಬಿಜೆಪಿ ರಾಜಕಾರಣಿಗಳು ಮಹಿಳೆಯರು ಎಂಬುದು ವಿಶೇಷ.

ಕೇಂದ್ರ ಸರ್ಕಾರದ ಇತಿಹಾಸದಲ್ಲೇ ಮೊದಲ ಬಾರಿಗೆ ಆರು ಮಂದಿ ಸಂಪುಟ ದರ್ಜೆ ಸಚಿವೆಯರು ಸೇರಿ ಏಳು  ಸಚಿವೆಯರು ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದರು. ಈಗ ಕೇಂದ್ರದ ಇಬ್ಬರು ಪ್ರಮುಖ ಸಚಿವೆಯರೇ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.  ‘ಆದರೆ ನಮ್ಮ ಸಚಿವರು ರಾಜೀನಾಮೆ ನೀಡಬೇಕಿಲ್ಲ. ಇದೇನೂ ಕಾಂಗ್ರೆಸ್ ಸರ್ಕಾರವಲ್ಲ. ಇದು ಎನ್‌ಡಿಎ ಸರ್ಕಾರ’ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಈ ವಿವಾದ ಆರಂಭವಾದದ್ದು ಜೂನ್ 14ರಂದು. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್,  ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಗೆ  ಬ್ರಿಟಿಷ್ ಸರ್ಕಾರ ದಿಂದ ಪ್ರಯಾಣ ದಾಖಲೆಗಳನ್ನು  ಪಡೆದುಕೊಳ್ಳಲು ನೆರವಾಗಿದ್ದರು ಎಂಬ ವಿಚಾರ ಬಹಿರಂಗವಾಯಿತು. ನಂತರ, ರಾಜಸ್ತಾನ ಮುಖ್ಯಮಂತ್ರಿ  ವಸುಂಧರಾ ರಾಜೇ ಅವರೂ ಲಲಿತ್ ಮೋದಿ ವಲಸೆ ಸಂಬಂಧದ ಅಫಿಡವಿಟ್‌ಗೆ ಸಹಿ ಹಾಕಿದ್ದಾರೆ ಎಂಬ ವಿಚಾರ ಬಯಲಾಯಿತು.          
                                          
ಈ ಮಧ್ಯೆ,  ತಮ್ಮ ವಿದ್ಯಾರ್ಹತೆ ಬಗ್ಗೆ  ಕೇಂದ್ರ  ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ,  ಚುನಾವಣಾ ಆಯೋಗದ ಮುಂದೆ  ‘ತಪ್ಪು ಮಾಹಿತಿ’ ನೀಡಿದ್ದಾರೆ  ಎಂಬ ದೂರನ್ನು ದೆಹಲಿ ಮೆಟ್ರೊಪಾಲಿಟನ್ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿದೆ. ಪ್ರಜಾಪ್ರತಿನಿಧಿ ಕಾಯಿದೆ ಅನ್ವಯ ಸಚಿವೆಗೆ ಶಿಕ್ಷೆ  ವಿಧಿಸಬಹುದೆಂದು ಪ್ರತಿಪಾದಿಸಿ ಹವ್ಯಾಸಿ ಪತ್ರಕರ್ತ ಅಹಮರ್ ಖಾನ್  ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಸಮನ್ಸ್ ಪೂರ್ವ ಸಾಕ್ಷ್ಯದ ದಾಖಲೆಗಳ ಸಲ್ಲಿಕೆಗೆ ಆಗಸ್ಟ್  28ನೇ ದಿನಾಂಕವನ್ನು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆಕಾಶ್ ಜೈನ್ ಅವರು ನಿಗದಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಎಎಪಿ ಸಚಿವ ಜಿತೇಂದ್ರ ತೋಮರ್  ಸುಳ್ಳು ಕಾನೂನು ಪದವಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ದೆಹಲಿ ಪೊಲೀಸರು  ನಾಟಕೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಆದರೆ ಸ್ಮೃತಿ ವಿಚಾರದಲ್ಲಿ ಮೃದು ಧೋರಣೆ ಏಕೆ?  ಈ   ದ್ವಿಮುಖ ಧೋರಣೆಗಳು ಸರಿಯೇ ಎಂಬುದು   ಪ್ರಶ್ನೆ.

ಅದೇ ದಿನವೇ ಮುಂಬೈನಲ್ಲಿ  ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಪಂಕಜಾ ಮುಂಡೆ ವಿರುದ್ಧ  ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಭ್ರಷ್ಟಾಚಾರ ವಿರೋಧಿ ಬ್ಯೂರೋದಲ್ಲಿ ದೂರು ದಾಖಲಿಸಿದಂತಹ ಬೆಳವಣಿಗೆ ನಡೆಯಿತು. ಸರ್ಕಾರ ನಡೆಸುವ ಶಾಲೆಗಳಿಗೆ ವಿವಿಧ ವಸ್ತುಗಳ ಖರೀದಿ ಆದೇಶದಲ್ಲಿ ನಿಯಮ ಉಲ್ಲಂಘಿಸಿದ ಆರೋಪ ಅವರ ಮೇಲಿದೆ. ಒಂದೇ ದಿನ ದಲ್ಲಿ 24 ಸರ್ಕಾರಿ ನಿರ್ಣಯಗಳ ಮೂಲಕ  ₹ 206  ಕೋಟಿ ಮೊತ್ತದ ಖರೀದಿಗಳಿಗೆ ಟೆಂಡರ್ ಕರೆಯದೆಯೇ  ಅನುಮೋದನೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ₹ 3 ಲಕ್ಷಕ್ಕಿಂತ ಹೆಚ್ಚಿನ ಎಲ್ಲಾ  ಖರೀದಿಗಳನ್ನೂ ಇ-ಟೆಂಡರ್‌ಗಳನ್ನು ಆಹ್ವಾನಿಸಿದ ನಂತರವಷ್ಟೇ ಮಾಡುವುದು ಕಡ್ಡಾಯ. 

ಈ ಎಲ್ಲಾ ಮಹಿಳೆಯರೂ ವಿಭಿನ್ನ ಸಂದರ್ಭಗಳಲ್ಲಿ ಅಧಿಕಾರಕ್ಕೆ ಬಂದಿರುವವರು.  25ನೇ ವಯಸ್ಸಿಗೇ  ಸಚಿವೆಯಾದವರು ಸುಷ್ಮಾ ಸ್ವರಾಜ್.  ಎಲ್.ಕೆ. ಅಡ್ವಾಣಿಯವರ  ಅಚಲ ಬೆಂಬಲವನ್ನು ಅವರು ಅವಲಂಬಿಸಿದ್ದರು. ವೈಯಕ್ತಿಕ ನೆಲೆಯಲ್ಲಿ ಮೋದಿ ಹಾಗೂ ಸುಷ್ಮಾ ಬಾಂಧವ್ಯ ತೀರಾ ಸುಗಮವಾಗೇನೂ ಇಲ್ಲ. ಆದರೆ ಅವರು ದಕ್ಷ ನಾಯಕಿ, ಸಂಸದೆ ಹಾಗೂ ಸಚಿವೆಯಾಗಿ ಹೆಸರು ಗಳಿಸಿದ್ದಾರೆ. ನಮ್ಮ ಅನೇಕ ಮಹಿಳಾ ರಾಜಕಾರಣಿಗಳಂತೆಯೇ ಪಂಕಜಾ ಮುಂಡೆ ಅವರಿಗೂ ಕುಟುಂಬ ರಾಜಕಾರಣದ ಹಿನ್ನೆಲೆ ಇದೆ.

ತಂದೆ ಹಾಗೂ ಬಿಜೆಪಿ ಹಿರಿಯ ನಾಯಕ ಗೋಪಿನಾಥ್ ಮುಂಡೆ ಅವರ ಅನಿರೀಕ್ಷಿತ ಸಾವಿನ ನಂತರ ಅವರು ರಾಜಕೀಯ ಪ್ರವೇಶಿಸಿದ್ದಾರೆ. ವಸುಂಧರಾ ರಾಜೇ ರಾಜಕೀಯವಾಗಿ ರಾಜವಂಶದ ಮನೆತನದ ಹಿನ್ನೆಲೆ ಹೊಂದಿದವರು. ಅವರ ತಾಯಿ ವಿಜಯರಾಜೇ ಸಿಂಧಿಯಾ ಬಿಜೆಪಿಯ ಹಿರಿಯ ನಾಯಕಿ. ರಾಜಸ್ತಾನದಲ್ಲಿ ತಮ್ಮದೇ ನೆಲೆ ಬೆಳೆಸಿಕೊಂಡಿದ್ದಾರೆ.

ಸ್ಮೃತಿ ಇರಾನಿ,   ಮೋದಿಯವರು  ಗುಜರಾತ್ ಮುಖ್ಯ ಮಂತ್ರಿಯಾಗಿದ್ದ ಕಾಲದಿಂದಲೂ  ಅವರಿಗೆ ಹತ್ತಿರದವರು.  2014ರ  ಚುನಾವಣೆಯಲ್ಲಿ  ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಲು ಸ್ಮೃತಿಯನ್ನು ಆಯ್ಕೆ ಮಾಡಿದ್ದು ಅವರೇ.  ಸ್ಮೃತಿ ಇರಾನಿಗೆ ಅವರದೇ ಕ್ಷೇತ್ರವಿಲ್ಲ. ಸ್ವತಃ ಪ್ರಧಾನಿ ಅವರಿಂದಲೇ ಆಯ್ಕೆಗೊಂಡು  ಸಂಪುಟಕ್ಕೆ ಸೇರ್ಪಡೆಯಾದ ಸ್ಮೃತಿ ಒಂದಾದ ಮೇಲೆ ಒಂದು ವಿವಾದದಲ್ಲಿ ಸಿಲುಕುತ್ತಲೇ ಇದ್ದಾರೆ.

ಈ ನಾಲ್ವರೂ ಮಹಿಳೆಯರ  ವರ್ಚಸ್ಸು ಕುಂದಿದಲ್ಲಿ ಮತ್ತೆ ಪಕ್ಷದಲ್ಲಿ  ಎದ್ದು ಕಾಣಿಸುವವರು ಉಮಾ ಭಾರತಿ ಹಾಗೂ ಸಾಧ್ವಿ ನಿರಂಜನ್ ಜ್ಯೋತಿಯಂತಹವರು. ಸಾಧ್ವಿ ನಿರಂಜನ್ ಜ್ಯೋತಿ ಅವರ ಅತಿರೇಕದ ಹೇಳಿಕೆಗಳಿಗೆ ‘ಅವರು ಮೊದಲ ಬಾರಿ ಸಂಸತ್ ಸದಸ್ಯೆಯಾಗಿರುವವರು ಹಾಗೂ ಗ್ರಾಮೀಣ ಹಿನ್ನೆಲೆಯಿಂದ ಬಂದವರಾದ ಕಾರಣ ಅವರ ಭಾಷೆಯನ್ನು ಮನ್ನಿಸಬೇಕು’ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಮೇನಕಾ ಗಾಂಧಿ ಅವರು ಹೆಚ್ಚೇನೂ ಪ್ರಾಮುಖ್ಯ ಪ್ರದರ್ಶಿಸುತ್ತಿಲ್ಲ. ನಜ್ಮಾ ಹೆಫ್ತುಲ್ಲಾ ನಿವೃತ್ತಿಯ ಅಂಚಿನಲ್ಲಿದ್ದಾರೆ. ನಿರ್ಮಲಾ ಸೀತಾರಾಮನ್ ದಕ್ಷ ಸಚಿವೆ ಎನ್ನಲಾಗುತ್ತದೆ. ಆದರೆ ಅವರಿಗೂ ರಾಜಕೀಯ ನೆಲೆ ಇಲ್ಲ. ಇವು ಮಹಿಳಾ ರಾಜಕಾರಣಿಗಳಿಗೆ ಸೀಮಿತವಾದ ಸಮಸ್ಯೆಗಳಲ್ಲ. ಅಥವಾ ಬಿಜೆಪಿ ಮಹಿಳೆಯರಿಗಷ್ಟೇ ಸೀಮಿತವಾದುದೂ ಅಲ್ಲ. ಕಾಂಗ್ರೆಸ್‌ನ ಸೋನಿಯಾ ಗಾಂಧಿ ಶೈಕ್ಷಣಿಕ ಪದವಿ ವಿಚಾರವೂ ‌ಸಂಶಯದ ಸುಳಿಯಲ್ಲಿದೆ.

ಸಾರ್ವಜನಿಕ  ಅಧಿಕಾರವನ್ನು ಹೊಂದುತ್ತಿದ್ದಂತೆಯೇ ಮಹಿಳೆಯರೂ  ಕೂಡ ಪುರುಷ ಜಗತ್ತಿನ ಮೌಲ್ಯಗಳನ್ನೇ ಪ್ರತಿನಿಧಿಸಲು ತೊಡಗುತ್ತಾರೆಯೆ? ಅಧಿಕಾರ ಹೊಂದಿದ  ಮಹಿಳೆಯರೇನೂ ಆದರ್ಶದ   ವಿಶ್ವವನ್ನು ಸೃಷ್ಟಿಸುತ್ತಾರೆ ಎಂದೇನಿಲ್ಲ. ಆದರೆ ಕನಿಷ್ಠ ಕಡಿಮೆ ದೋಷ ಹೊಂದಿರುವ ಆಡಳಿತ ನೀಡಲೆಂಬ ನಿರೀಕ್ಷೆ ಸಹಜ.  ಈ ಸಾವಿರಾರು ವರ್ಷಗಳ ಕಾಲ ಪುರುಷರ ಆಳ್ವಿಕೆಯಲ್ಲಿ ಸೃಷ್ಟಿಯಾಗಿರುವ ಪ್ರಪಂಚಕ್ಕಿಂತ ದುರಾಸೆ ಹಾಗೂ ಹಿಂಸೆಯಿಂದ ಮುಕ್ತವಾದ ಪ್ರಪಂಚ ಸೃಷ್ಟಿಯಾಗಬೇಕೆಂಬ ಪರಿಕಲ್ಪನೆ ಇಲ್ಲಿದೆ.

ಆದರೆ ಅಧಿಕಾರ  ಎನ್ನುವುದೇ  ಜನರನ್ನು ಭ್ರಷ್ಟಗೊಳಿಸುವಂತಹದ್ದೆ? ಎಂಬುದು ಪ್ರಶ್ನೆ.  ಹೀಗಿದ್ದೂ ಸಾರ್ವಜನಿಕ ಬದುಕಿನಲ್ಲಿ ಸಾಚಾತನ ಅಥವಾ ಪ್ರಾಮಾಣಿಕತೆ ಕಾಪಾಡಿಕೊಳ್ಳುವ ಪ್ರಯತ್ನ ನಿರಂತರವಾಗಿರಬೇಕು ಎಂದು  ಜನ ನಿರೀಕ್ಷಿಸುತ್ತಾರೆ. ಇದಕ್ಕೆ ಪೂರಕವಾಗಿ  ಬಿಜೆಪಿ ಹಿರಿಯ ನಾಯಕ  ಅಡ್ವಾಣಿ ಅವರೂ ಮಾತನಾಡಿದ್ದಾರೆ.

ಹವಾಲಾ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದ ಕೂಡಲೇ ತಾವು ರಾಜೀನಾಮೆ ಸಲ್ಲಿಸಬೇಕಾಯಿತು ಎಂಬುದನ್ನು ಅವರು ಸ್ಮರಿಸಿಕೊಂಡಿದ್ದಾರೆ. ವಿಭಿನ್ನವಾದ ಪಕ್ಷ ತಮ್ಮದು ಎಂದು ಬಿಜೆಪಿ ಪ್ರತಿಪಾದಿಸಿಕೊಳ್ಳುತ್ತದೆ. ಆದರೆ ಅದು ಭ್ರಷ್ಟಾಚಾರ ವಿಚಾರವನ್ನು ತಿರುಚಿ ಹೊಸ ವ್ಯಾಖ್ಯಾನಗಳನ್ನು ನೀಡುತ್ತಿದೆ. ಏನು ವ್ಯತ್ಯಾಸ ಇದೆ ಇಲ್ಲಿ?  ಭಾರತದಲ್ಲಿ ರಾಜಕಾರಣಕ್ಕೆ ಮಹಿಳೆಯ ಪ್ರವೇಶಕ್ಕೆ ಎಷ್ಟೊಂದು ಅಡೆತಡೆಗಳಿವೆ. ಭವಿಷ್ಯದಲ್ಲಿ ಲಿಂಗತ್ವ ಸಮತೋಲನದ ಅವಕಾಶಗಳಿಗಾಗಿ  ಮಹಿಳಾ ರಾಜಕಾರಣಿಗಳ ಯಶಸ್ಸು ಭರವಸೆಯ ಕಿರಣಗಳಾಗುವಂತಹದ್ದು. ಆದರೆ  ಈಗ ಇಂತಹ ಬೆಳವಣಿಗೆ ನಿರಾಶಾದಾಯಕ.

ಸ್ವಜನ ಪಕ್ಷಪಾತ, ಹಣಕಾಸು ಅವ್ಯವಹಾರಗಳು, ತಂತ್ರಗಾರಿಕೆಗಳು ಬರೀ ಪುರುಷರಿಗೆ ಸೀಮಿತವಲ್ಲ ಎಂಬುದನ್ನು ಈ ವಿವಾದ ಸ್ಪಷ್ಟಪಡಿಸುತ್ತಿದೆ. ಹೆಚ್ಚಿನ ಮಹಿಳೆಯರ ಪ್ರವೇಶದಿಂದ  ರಾಜಕಾರಣ ಸ್ವಚ್ಛವಾಗುತ್ತದೆಂಬ ಕಲ್ಪನೆಗೇ ಇದು  ಪೆಟ್ಟು ನೀಡುವಂತಹದ್ದು.  ಹೀಗಿದ್ದೂ ಹೆಚ್ಚಿನ ಮಹಿಳೆಯರು ರಾಜಕಾರಣಕ್ಕೆ ಪ್ರವೇಶಿಸಬೇಕು.  ಅದು ಅವರ ಹಕ್ಕು.

ಏಕೆಂದರೆ, ವಿಶ್ವ ಆರ್ಥಿಕ ವೇದಿಕೆಯ ಲಿಂಗ ತಾರತಮ್ಯ ಸೂಚ್ಯಂಕದ (2014) ಪ್ರಕಾರ,  ಮಹಿಳಾ ರಾಜಕೀಯ ಸಬಲೀಕರಣಕ್ಕೆ ಸಂಬಂಧಿಸಿದಂತೆ 142 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 15ನೆಯದು. ವಿಶ್ವದ  ಅತಿ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ಭಾರತ.  ಆದರೆ ಸಂಸತ್‌ನಲ್ಲಿ ಈಗಲೂ ಮಹಿಳೆಯರು ಹೊಂದಿರುವ ಸ್ಥಾನಗಳು ಕೇವಲ 11.9%.

1966ರಷ್ಟು ಹಿಂದೆಯೇ ಮಹಿಳಾ ಪ್ರಧಾನಿ ಹೊಂದಿದ ರಾಷ್ಟ್ರ ಭಾರತ.  ಆದರೆ ಮಹಿಳೆಯರು ರಾಜಕೀಯದಲ್ಲಿ ಅಂಚಿನಲ್ಲೇ ಇದ್ದಾರೆ. ಪಶ್ಚಿಮ ಬಂಗಾಳದ ದೀದಿ ಮಮತಾ ಬ್ಯಾನರ್ಜಿ, ತಮಿಳುನಾಡಿನ ಅಮ್ಮ  ಜಯಲಲಿತಾ ಹಾಗೂ ಉತ್ತರಪ್ರದೇಶದ ಮಾಯಾವತಿ ಮೂವರೂ ಸಶಕ್ತ ರಾಜ ಕಾರಣಿಗಳು. ಇವರೆಲ್ಲರ ವಿರುದ್ಧ  ಏನೆಲ್ಲಾ ಆರೋಪಗಳಿ ದ್ದರೂ ಅವನ್ನೆಲ್ಲಾ ಮೀರಿ ತಮ್ಮದೇ ಗಟ್ಟಿ ನೆಲೆಗಳನ್ನು ರೂಪಿಸಿಕೊಂಡಿದ್ದಾರೆ. ವೈಯಕ್ತಿಕ ವರ್ಚಸ್ಸನ್ನೂ ಬೆಳೆಸಿಕೊಂಡಿದ್ದಾರೆ. 

ಆದರೆ ಇವರೆಲ್ಲಾ ಮಹಿಳಾ ವಿಚಾರಗಳನ್ನು ಕಡೆಗಣಿಸಿದವರು. ಪುರುಷ ಸಮಾಜದ ಮೌಲ್ಯಗಳನ್ನೇ ಮೈಗೂಡಿಸಿಕೊಂಡವರು. ಪುರುಷ ಪ್ರಾಧಾನ್ಯ, ಮಿಲಿಟರೀಕರಣ ಹಾಗೂ ವಾಣಿಜ್ಯೀಕರಣ ಪ್ರಾಧಾನ್ಯ ಗಳಿಸಿಕೊಳ್ಳುತ್ತಿರುವ ದಿನಗಳಿವು. ಇಂತಹ ಹೊತ್ತಿನಲ್ಲಿ ಈ ಜಗತ್ತಿನಲ್ಲಿ ಶಾಂತಿ ಮೂಡಲು ತಾಯ್ತನದ ಸ್ಪರ್ಶವಿರುವ ಆಡಳಿತ ಬೇಕಾಗಿದೆ ಎಂಬುದು ಪುರುಷ ಹಾಗೂ ಮಹಿಳಾ ರಾಜಕಾರಣಿಗಳೆಲ್ಲರೂ ಅರಿಯಬೇಕಾದ ಸತ್ಯ . 

ಅಕ್ರಮ  ಆಸ್ತಿ ವಿವಾದದಲ್ಲಿ ಜಯಲಲಿತಾ ಕೂಡ ಸಿಲುಕಿ,  ಸುಮಾರು ಎರಡು ತಿಂಗಳು ಜೈಲಿನಲ್ಲಿ ಕಳೆದಿದ್ದಾರೆ. ಇತ್ತೀಚೆಗಷ್ಟೇ  ಆರೋಪಗಳಿಂದ ಮುಕ್ತರಾಗಿ. ತಮಿಳುನಾಡು ಮುಖ್ಯಮಂತ್ರಿಯಾಗಿ ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ. 2 ಜಿ ತರಂಗಾಂತರ ಹಗರಣದಲ್ಲಿ  ಕರುಣಾನಿಧಿ ಪುತ್ರಿ ಹಾಗೂ ಡಿಎಂಕೆ ಸಂಸತ್ ಸದಸ್ಯೆ ಕನಿಮೋಳಿ  ಜೈಲು ಶಿಕ್ಷೆ ಅನುಭವಿಸಿದ್ದಾರೆ. ಉಮಾ ಭಾರತಿಯವರು 2004ರಲ್ಲಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಯಾಗಿದ್ದಾಗ, ಹುಬ್ಬಳ್ಳಿಯಲ್ಲಿನ 1994ರ ವಿವಾದಕ್ಕೆ ಸಂಬಂಧಿಸಿದಂತೆ  ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಇದರಿಂದ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.

ಈಗ ಮತ್ತೆ ರಾಜಕಾರಣದಲ್ಲಿ ಗಟ್ಟಿಯಾಗಿ ನೆಲೆಯೂರಿರುವ ಹಾಗೂ ಬೆಳೆಯುತ್ತಿರುವ ಬೆರಳೆಣಿಕೆಯ ರಾಜಕೀಯ ನಾಯಕಿಯರೂ ವಿವಾದಗಳಲ್ಲಿ ಸಿಲುಕುತ್ತಿರುವುದು ದುರದೃಷ್ಟಕರ. ಜುಲೈ 21ರಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಅಷ್ಟರಲ್ಲಿ ಈ ವಿವಾದ ಬಗೆಹರಿಯುತ್ತದೆಯೆ?

editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.