ಕಳೆದ ವಾರ ಭಾರತದ ಆಂಧ್ರ ಪ್ರದೇಶ ಮೂಲದ ನೀನಾ ದಾವುಲೂರಿ ‘ಮಿಸ್ ಅಮೆರಿಕಾ' ಆಗಿ ಆಯ್ಕೆಯಾದರು. ಅಮೆರಿಕ ಸಂಜಾತೆ ಭಾರತೀಯ ಹುಡುಗಿ ಅಮೆರಿಕ ಸುಂದರಿಯಾಗಿ ಕಿರೀಟ ಧರಿಸಿದ್ದನ್ನು ಅರಗಿಸಿಕೊಳ್ಳುವುದು ಅನೇಕ ಅಮೆರಿಕನ್ನರಿಗೆ ಕಷ್ಟವಾಯಿತು. ಈ ಕುರಿತಾದ ತಮ್ಮ ಪೂರ್ವಗ್ರಹಗಳು, ಅಸಹನೆಗಳ ವಾಗ್ಝರಿಯನ್ನು ‘ಟ್ವಿಟರ್'ನಂತಹ ಸಾಮಾಜಿಕ ಜಾಲ ತಾಣಗಳಲ್ಲಿ ಅಮೆರಿಕದ ಜನಾಂಗೀಯವಾದಿಗಳು ಹರಿಯಬಿಟ್ಟರು.
ಸೆಪ್ಟೆಂಬರ್ 11ರ ದಾಳಿ ನಂತರದ ‘ಇಸ್ಲಾಮೊ ಫೋಬಿಯಾ'ದಿಂದ ಅಮೆರಿಕವಿನ್ನೂ ಹೊರಬಂದಿಲ್ಲ ಎಂಬುದು ವಿವೇಚನಾರಹಿತ ಹಾಗೂ ಅಭಿರುಚಿಹೀನವಾದ ಈ ಅನೇಕ ಪ್ರತಿಕ್ರಿಯೆಗಳಿಂದ ವೇದ್ಯ. ‘ಮಿಸ್ ಅಲ್ ಖೈದಾ', ‘ಮಿಸ್ ಟೆರರಿಸ್ಟ್' ಎಂಬಂತಹ ನಿಂದನಾತ್ಮಕ ನುಡಿಗಳನ್ನು ಅಸಹನೆಯ ಕಿಡಿ ಕಾರಲು ಬಳಸಿಕೊಳ್ಳಲಾಯಿತು. ಭಾರತ ಮೂಲದ ಸೌಂದರ್ಯ ರಾಣಿಯನ್ನು ‘ಅರಬ್' ಎಂದು ಜರೆದು ತಮ್ಮ ಅಜ್ಞಾನ ಪ್ರದರ್ಶಿಸಿದ್ದೂ ಅಲ್ಲದೆ ‘ಬಿಳಿ ಮಹಿಳೆ ಈ ಕಿರೀಟ ಧರಿಸುವುದು ಯಾವಾಗ?' ಎಂಬ ಪ್ರಶ್ನೆಯನ್ನೂ ಎಸೆಯಲಾಯಿತು. ತಮ್ಮದೇ ರಾಷ್ಟ್ರದ ಘನತೆಯನ್ನು ಕುಗ್ಗಿಸುವಂತಹ ಈ ಬಗೆಯ ಪ್ರತಿಕ್ರಿಯೆಗಳು ಮಿಂಚಿನಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.
ಇಂದಿನ ನಾಗರಿಕ ಜಗತ್ತಿನಲ್ಲಿ ಬಹುಸಂಸ್ಕೃತಿಯ ಎಳೆ ಹಾಸುಹೊಕ್ಕಾಗಿದೆ. ಹೀಗಿದ್ದೂ ಈ ಬಗೆಯ ಕೂಗಾಟ, ಅರಚಾಟಗಳು, ಆಳವಾಗಿ ಬೇರೂರಿರುವ ಜನಾಂಗೀಯ ಪೂರ್ವಗ್ರಹಗಳಿಗೆ ದ್ಯೋತಕ. ಇಂದಿನ ತಾಂತ್ರಿಕ ಬೆಳವಣಿಗೆಗಳು ವಿಶಾಲ ವಿಶ್ವಕ್ಕೆ ಸಂಪರ್ಕವನ್ನು ಕಲ್ಪಿಸಿಕೊಡುತ್ತವೆ ಸರಿ. ಆದರೆ ಮನದೊಳಗಿನ ಪೂರ್ವಗ್ರಹಗಳನ್ನು ಕಳೆಯುವವರು ಯಾರು? ಅಮೆರಿಕದಲ್ಲೀಗ ಇರುವುದು ಕಪ್ಪು ಅಧ್ಯಕ್ಷರೆ. 30 ವರ್ಷಗಳಷ್ಟು ಹಿಂದೆಯೇ 1983ರಲ್ಲಿ ಆಫ್ರಿಕನ್ ಅಮೆರಿಕನ್ ಕಪ್ಪು ಮಹಿಳೆ ವ್ಯಾನೆಸ್ಸಾ ವಿಲಿಯಮ್ಸ್ ‘ಮಿಸ್ ಅಮೆರಿಕಾ' ಕಿರೀಟವನ್ನು ಧರಿಸಿಯೂ ಆಗಿದೆ. ಹೀಗಿದ್ದೂ ಇಂದಿನ ಆಧುನಿಕೋತ್ತರ ಯುಗದಲ್ಲಿ ಮೈಬಣ್ಣದ ಕುರಿತಾದ ಪೂರ್ವಗ್ರಹಗಳು, ಅಸಹನೆಗಳು ಅನಾವರಣಗೊಂಡಿದ್ದು ಮಾತ್ರ ವಿಪರ್ಯಾಸ.
‘ಇಂತಹ ಟೀಕೆಗಳೇನೂ ನನಗೆ ಅಚ್ಚರಿಯುಂಟುಮಾಡುವುದಿಲ್ಲ. ‘ಮಿಸ್ ನ್ಯೂಯಾರ್ಕ್' ಆಗಿ ಈ ಹಿಂದೆ ಆಯ್ಕೆಯಾಗಿದ್ದಾಗಲೂ ಇಂತಹದೇ ಬಿರುನುಡಿಗಳನ್ನು ಕೇಳಿದ್ದೆ. ಅಮೆರಿಕದ ಶಕ್ತಿಯಾಗಿರುವ ವೈವಿಧ್ಯದ ಸಂಸ್ಕೃತಿಯ ಅರಿವಿಲ್ಲದವರು ಈ ಟೀಕಾಕಾರರು' ಎಂಬಂತಹ ಮಾತುಗಳನ್ನಾಡಿರುವ ನೀನಾ ದಾವುಲೂರಿ ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ. ಆಫ್ರಿಕನ್ ಅಮೆರಿಕನ್ ಮಹಿಳೆ ವನೇಸಾ ವಿಲಿಯಮ್ಸ್ ಆಯ್ಕೆಯಾದಾಗಲೂ ಇಂತಹದೇ ಕುತ್ಸಿತ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ನಂತರ ಈ 30 ವರ್ಷಗಳಲ್ಲಿ ಸಮಾಜದಲ್ಲಿ ಅನೇಕ ಬದಲಾವಣೆಗಳಾಗಿವೆ. ಹೀಗಿದ್ದೂ ಇಂತಹ ಜನಾಂಗ ಹಾಗೂ ವರ್ಣದ್ವೇಷದ ಎಳೆಗಳು ಮತ್ತೆ ಮತ್ತೆ ಕಾಡಿಸುತ್ತವೆ ಏಕೆ?
ಈ ವಿಚಾರದಲ್ಲಿ ಭಾರತದ ಪರಿಸ್ಥಿತಿ ಹೇಗಿದೆ? ಕಪ್ಪು ಬಣ್ಣದ ಹುಡುಗಿ ನೀನಾ ಭಾರತದಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದು ಸಾಧ್ಯವಿತ್ತೆ? ಹೆಣ್ಣಿನ ತ್ವಚೆಯ ಕಪ್ಪು ಬಣ್ಣವನ್ನು ತಿಳಿಯಾಗಿಸುವ ಅಥವಾ ಬಿಳುಪು ಮಾಡುವ ಪ್ರಸಾಧನ ಉದ್ಯಮ ಬೃಹತ್ತಾಗಿ ಆವರಿಸಿ ಕೊಂಡಿರುವ ಭಾರತದಂತಹ ರಾಷ್ಟ್ರದಲ್ಲಿ ಇದು ಸಾಧ್ಯವೆ? ತ್ವಚೆಯ ಬಣ್ಣದ ಕುರಿತಾದ ಮೂದ ಲಿಕೆಗಳನ್ನು ಕೇಳಿಕೊಂಡೇ ಕಪ್ಪು ಚೆಲುವೆಯರು ಭಾರತದಲ್ಲಿ ಬೆಳೆಯಬೇಕಾಗುವಂತಹ ಸ್ಥಿತಿ ಇದೆಯಲ್ಲವೆ? ತ್ವಚೆಯನ್ನು ಗೌರವರ್ಣವಾ ಗಿಸುವ ಕ್ರೀಮ್‌ಗಳ ಜಾಹೀರಾತುಗಳು ಹೇಳುವ ಪ್ರಕಾರ, ಕಪ್ಪು ಹುಡುಗಿ ಹೆಚ್ಚು ಸ್ನೇಹಿತರಿಲ್ಲದ ಕೀಳರಿಮೆಯುಳ್ಳ ವ್ಯಕ್ತಿಯಾಗಿ ಬೆಳೆಯುವ ಸ್ಥಿತಿ ಇದೆಯಲ್ಲವೆ? ಎಂಬೆಲ್ಲಾ ಚರ್ಚೆಗಳಿಗೂ ಈ ಸಂದರ್ಭದಲ್ಲಿ ಚಾಲನೆ ಸಿಕ್ಕಿದೆ.
‘ಬೆಳ್ಳಗಿರುವುದೆಲ್ಲಾ ಹಾಲಲ್ಲ' ಎಂಬ ನಾಣ್ಣುಡಿ ನಮ್ಮಲ್ಲಿದೆ. ಆದರೆ ಮೈಬಣ್ಣದ ವಿಚಾರದಲ್ಲಿ ಮಾತ್ರ ‘ಬೆಳ್ಳಗಿದ್ದರೇ ಚೆಂದ' ಎಂಬುದರಲ್ಲಿ ಎರಡು ಮಾತಿಲ್ಲ. ಕೇಸರಿ ಮಿಶ್ರಿತ ಹಾಲನ್ನು ಗರ್ಭಿಣಿ ಕುಡಿಯತ್ತಿದ್ದಲ್ಲಿ ‘ಕೂಸು ಬೆಳ್ಳಗೆ ಹುಟ್ಟುತ್ತದೆ' ಎಂಬಂತಹ (ಮೂಢ!) ನಂಬಿಕೆ ನಮ್ಮಲ್ಲಿ ಪ್ರಚಲಿತವಿದೆ. ಎಂದರೆ ಹುಟ್ಟಲಿರುವ ಮಗು ಕಪ್ಪಗಿರುವುದು ಬೇಡ, ಬೆಳ್ಳಗಿರಲಿ ಎಂಬ ಆಕಾಂಕ್ಷೆ ಕೂಸು ಹುಟ್ಟುವ ಮುಂಚೆಯೇ ಆರಂಭವಾಗುತ್ತದೆ. ಚೆಲುವು ಅಥವಾ ಸೌಂದರ್ಯ ಎಂಬುದನ್ನು ದಂತದ ಮೈಬಣ್ಣ, ಶ್ವೇತ ವರ್ಣದ ಜೊತೆಗೆ ಸಮೀಕರಿಸುವುದು ನಡೆದುಕೊಂಡೇ ಬಂದಿದೆ.
ಹೆಚ್ಚಿನ ಭಾರತೀಯರು ಕಪ್ಪು, ಕಂದು, ಎಣ್ಣೆಗೆಂಪು, ನಸುಗಪ್ಪಿನ ಬಣ್ಣದವರೇ. ಗೌರವರ್ಣ ಅಥವಾ ಬಿಳಿಬಣ್ಣದ ಜನರ ಸಂಖ್ಯೆ ಕಡಿಮೆಯೇ. ಸಂಸ್ಕೃತ ಸಾಹಿತ್ಯದಲ್ಲಿ ‘ಶ್ಯಾಮಾ' (ಕಪ್ಪಾಗಿ ಇರುವವಳು) ಎಂದರೆ ನಿಜವಾಗಿಯೂ ಚಂದವಾಗಿರುವವಳೇ ಎಂದು ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಹೇಳುತ್ತಾರೆ. ‘ಸೌಂದರ್ಯ ಮತ್ತು ಮೈಬಣ್ಣ' ಲೇಖನದಲ್ಲಿ ಕಪ್ಪು ಬಣ್ಣದ ಕುರಿತು ಲೋಹಿಯಾ ದೊಡ್ಡ ಜಿಜ್ಞಾಸೆಯನ್ನೇ ನಡೆಸಿದ್ದಾರೆ. (ಲೋಹಿಯಾ ಅವರ ‘ರಾಜಕೀಯದ ಮಧ್ಯೆ ಬಿಡುವು' ಪುಸ್ತಕದಲ್ಲಿ ಈ ಲೇಖನವಿದೆ. ಅನುವಾದ: ಕೆ.ವಿ. ಸುಬ್ಬಣ್ಣ ).
ಹಾಗಿದ್ದರೆ ಬಿಳಿ ಮೈಬಣ್ಣದವರು ಸುಂದರ ಅಲ್ಲ ಎನ್ನೋಣವೆ ಎಂಬ ಪ್ರಶ್ನೆಯನ್ನು ಲೋಹಿಯಾ ಕೇಳುತ್ತಾರೆ. ಹಾಗೆ ಹೇಳುವುದು ಕೂಡ ಮತ್ತೆ ಅಸತ್ಯವೇ ಆದೀತು ಎನ್ನುತ್ತಾ ಹೆಣ್ಣಿನ ಚೆಲುವನ್ನು ಹೊಗಳುವ ಮನೋಹರ ವಾದ ಪದ್ಯದ ಸಾಲೊಂದನ್ನು ಉದಾಹರಿ ಸು ತ್ತಾರೆ. ಕಪ್ಪು ಕೂದಲಿಂದ ಆವೃತವಾಗಿ ಸೊಗ ಸುವ ಹೆಣ್ಣಿನ ಹಣೆಯನ್ನು ಅಷ್ಟಮೀ ಚಂದ್ರನಿಗೆ ಹೋಲಿಸುವಂತಹ ಕೋಮಲ ಪದ್ಯ ಸೂಕ್ತಿ ಯೊಂದಿದ್ದು ಅದು ಕೂಡ ಸಂಸ್ಕೃತದ್ದೇ ಎನ್ನು ತ್ತಾರೆ ಲೋಹಿಯಾ. ಎಂದರೆ ಪ್ರಾಚೀನ ಭಾರತ, ಮೈಬಣ್ಣ ಮತ್ತು ಚೆಲುವುಗಳನ್ನು ತೊಡರಿಕೆಯಿಲ್ಲದೆ ಬೇರಾಗಿ ನೋಡಬಲ್ಲ ಎಚ್ಚರ ವನ್ನು ಪ್ರಾಯಶಃ ಸಾಧಿಸಿಕೊಂಡಿತ್ತು. ಚೆಲುವು ಎಲ್ಲೇ ಇದ್ದರೂ ಅದನ್ನು ಕಾಣಬಲ್ಲ ಶಕ್ತಿಯನ್ನು ಸಿದ್ಧಿಸಿಕೊಂಡಿತ್ತು. ಕಪ್ಪು ಬಿಳುಪುಗಳ ಮಧ್ಯೆ ಪೂರ್ವಗ್ರಹ ಬಿಟ್ಟು ಅದರ ತೊಡಕಿಲ್ಲದೆ ಸೌಂದರ್ಯವನ್ನು ತೂಗಿನೋಡಬಲ್ಲ ಶಕ್ತಿ ಪಡೆ ದುಕೊಂಡಿದ್ದುದು ನಿರ್ವಿವಾದ. ಮುಂದಿನ ಪೀಳಿಗೆಗಳು ಸೌಂದರ್ಯಾನುಭವದ ಈ ವಿಶೇಷ ಪ್ರಬುದ್ಧತೆಯನ್ನು ಹೇಗೋ ಪೋಲು ಮಾಡಿ ಕೊಂಡುಬಿಟ್ಟವು ಎಂದು ಲೋಹಿಯಾ ವಿಶ್ಲೇಷಿಸುತ್ತಾರೆ.
‘ಭಾರತೀಯ ಪುರಾಣ ಕಲ್ಪನೆಯಲ್ಲಿ ಪರಿಮಳ ಸೂಸುವಂಥ ತುಂಬ ಚೆಲುವಾದ ಎರಡು ಪುಷ್ಪಗಳು ಕೃಷ್ಣ ಮತ್ತು ಕೃಷ್ಣೆ; ಒಬ್ಬ ಗಂಡಸು, ಇನ್ನೊಬ್ಬಳು ಹೆಂಗಸು. ಇಬ್ಬರೂ ಕಪ್ಪು' ಎನ್ನುತ್ತಾರೆ ಲೋಹಿಯಾ. ಹಾಗಿದ್ದಲ್ಲಿ ಕಪ್ಪು ಬಣ್ಣದ ಕುರಿತ ಕೀಳರಿಮೆ ಏಕೆ? ಬಿಳಿ ಬಣ್ಣದ ವ್ಯಾಮೋಹ ಸೃಷ್ಟಿಗೆ ಕಾರಣವಾದರೂ ಏನು ಎಂಬ ಪ್ರಶ್ನೆಗೆ ಉತ್ತರವನ್ನು ನಾವು ಕಂಡಕೊಳ್ಳಬೇಕಿರುವುದು ರಾಜಕಾರಣ ದಲ್ಲಿ. ‘ಬಹುಶಃ ಯೂರೋಪಿನ ಬಿಳಿಯರಂತೆ ಆಫ್ರಿಕಾದ ನೀಗ್ರೊಗಳು ಜಗತ್ತನ್ನು ಆಳಿದ್ದರೆ ಸೌಂದರ್ಯದ ಮಾನದಂಡಗಳೇ ಬೇರೆಯಾಗಿರುತ್ತಿದ್ದವು' ಎನ್ನುತ್ತಾರೆ ಲೋಹಿಯಾ.
ಭಾರತದಂತಹ ರಾಷ್ಟ್ರದಲ್ಲಿ ಜಾತಿಭೇದ ನೀತಿ, ಆರ್ಯ, ದ್ರಾವಿಡ ಸಂಸ್ಕೃತಿಯ ಜಿಜ್ಞಾಸೆ ಹಾಗೂ ವಸಾಹತುಶಾಹಿಯ ಇತಿಹಾಸ ಗಳೆಲ್ಲವೂ ಈ ಮೈಬಣ್ಣದ ನೀತಿಗೆ ಕೊಡುಗೆ ಸಲ್ಲಿಸಿವೆ. ಈಗ ನಮ್ಮನ್ನಾಳುತ್ತಿರುವುದು ಮಾರು ಕಟ್ಟೆ ಶಕ್ತಿಗಳು. ಮುಖ, ಕತ್ತು, ಕಾಲು, ಕಂಕುಳು, ಕಡೆಗೆ ಹೆಣ್ಣಿನ ಗುಪ್ತಾಂಗದ ತ್ವಚೆ ವರ್ಣ ತಿಳಿಯಾಗಿಸುವ ಕ್ರೀಮುಗಳ ಜಾಹೀರಾತುಗಳ ಲೋಕ ಇದು.
ಚಿತ್ರ ತಾರೆಯರಾದಿಯಾಗಿ ಅನೇಕ ಖ್ಯಾತ ನಾಮರು, ತ್ವಚೆ ಬಣ್ಣ ತಿಳಿಯಾಗಿಸುವ ಈ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಗೌರವರ್ಣ, ಸೌಂದರ್ಯ ಹಾಗೂ ಯಶಸ್ಸಿನ ಗುಟ್ಟು ಎಂಬುದನ್ನು ಈ ಜಾಹೀರಾತುಗಳು ಸಾರಿ ಸಾರಿ ಹೇಳುತ್ತಿವೆ. ಉದ್ಯೋಗ ಮಾರುಕಟ್ಟೆಯಲ್ಲಾಗಲಿ, ವಿವಾಹ ಮಾರುಕಟ್ಟೆಯಲ್ಲಾಗಲಿ ಯಶಸ್ಸು ಸಾಧಿಸಬೇ ಕಾದರೆ ನೈಸರ್ಗಿಕ ತ್ವಚೆಯ ವರ್ಣವನ್ನು ತಿಳಿಯಾಗಿಸಿಕೊಳ್ಳಬೇಕು ಎಂದು ಯುವತಿಯ ರಿಗಷ್ಟೇ ಅಲ್ಲ, ಈಚಿನ ದಿನಗಳಲ್ಲಿ ಯುವಕರಿಗೂ ಈ ಜಾಹೀರಾತುಗಳು ವಕಾಲತ್ತು ವಹಿಸುತ್ತಿವೆ. ಆಧುನಿಕ ತಾರತಮ್ಯಗಳನ್ನು ದೃಢಪಡಿಸುವ ಇಂತಹ ಸ್ವೀಕೃತ ಧೋರಣೆ ಹಾಗೂ ಪೂರ್ವಗ್ರ ಹಗಳಿಗೆ ಸವಾಲು ಹಾಕುವುದಕ್ಕಾಗಿ ‘ಡಾರ್ಕ್ ಈಸ್ ಬ್ಯೂಟಿಫುಲ್' ಅಭಿಯಾನವನ್ನು 2009 ರಿಂದ ಚೆನ್ನೈ ಮೂಲದ ‘ವಿಮೆನ್ ಆಫ್ ವರ್ತ್' ಸಂಘಟನೆ ಆರಂಭಿಸಿದೆ. ತ್ವಚೆಯ ವೈವಿಧ್ಯಮಯ ವರ್ಣಗಳ ಸೌಂದರ್ಯದ ಬಗ್ಗೆ ಅರಿವು ಮೂಡಿಸಲು ಈ ಅಭಿಯಾನ ಯತ್ನಿಸುತ್ತಿದೆ.
ಬಾಲಿವುಡ್‌ನ ರೇಖಾ, ಪ್ರಿಯಾಂಕ ಚೋಪ್ರಾ, ದಕ್ಷಿಣದ ಚಿತ್ರರಂಗದಲ್ಲಿ ಸರಿತಾ, ಶ್ರುತಿ - ಹೀಗೆ ಅಲ್ಲೊಬ್ಬರು ಇಲೊಬ್ಬರು ನಾಯಕಿಯರನ್ನು ಹೊರತು ಪಡಿಸಿದರೆ ಚಿತ್ರರಂಗದ ನಾಯಕಿಯರು ಸಾಮಾನ್ಯವಾಗಿ ದಂತದ ಬೊಂಬೆಗಳೆ. ನಾಯಕರಲ್ಲೂ ಬೆರಳೆಣಿಕೆಯ ಮಂದಿಯಷ್ಟೇ ಕೃಷ್ಣ ವರ್ಣದವರು. ತ್ವಚೆಯ ಬಣ್ಣ ತಿಳಿ ಇಲ್ಲದಿದ್ದಲ್ಲಿ ಸೌಂದರ್ಯವಿಲ್ಲ ಎಂಬ ಸಂದೇಶವೇ ಇಲ್ಲಿ ಪ್ರಧಾನ.
ಕಪ್ಪು ತ್ವಚೆ ಹೊಂದಿದ ಕೆಲವೇ ನಟಿಯರಲ್ಲಿ ಒಬ್ಬರಾಗಿರುವ ನಂದಿತಾ ದಾಸ್ ‘ಡಾರ್ಕ್ ಈಸ್ ಬ್ಯೂಟಿಫುಲ್' ಅಭಿಯಾನಕ್ಕೆ ಕೈಜೋಡಿಸಿದ್ದು ಸೌಂದರ್ಯ ಕುರಿತಂತೆ ಭಾರತೀಯ ಪರಿಕಲ್ಪನೆಗಳನ್ನು ಒಡೆಯಲು ಮುಂದಾಗಿದ್ದಾರೆ. ಕಪ್ಪು ಚರ್ಮ ಎಂದರೇ ಸರಿಪಡಿಸಿಕೊಳ್ಳಬೇಕಾದ ಸಮಸ್ಯೆ ಎಂಬ ಭಾವನೆ ಎಷ್ಟು ಸರಿ? ಆದರೆ ಇಂತಹದೊಂದು ತಪ್ಪು ಸಂದೇಶವನ್ನು ಜಾಹೀರಾತು ಪ್ರಪಂಚ ಪರಿಣಾಮಕಾರಿಯಾಗಿ ಜನಮಾನಸದಲ್ಲಿ ಬಿತ್ತಿದೆ. ಸುಶಿಕ್ಷಿತ ಹಾಗೂ ಮೇಲ್ವರ್ಗದ ಮಹಿಳೆಯ ಪಾತ್ರವನ್ನು ಮಾಡಬೇಕಾದಾಗ ‘ಚಿಂತಿಸಬೇಡಿ ನಿಮ್ಮ ತ್ವಚೆ ತಿಳಿಯಾಗಿಸುತ್ತೇವೆ' ಎಂಬಂಥ ಮಾತುಗಳನ್ನು ತಮಗೇ ಮೇಕಪ್ ಕಲಾವಿದರು ಹಾಗೂ ಚಿತ್ರ ನಿರ್ದೇಶಕರು ಹೇಳುತ್ತಿದ್ದುದನ್ನು ಕೃಷ್ಣಸುಂದರಿ ನಂದಿತಾ ದಾಸ್ ಪ್ರಸ್ತಾಪಿಸಿದ್ದಾರೆ. ಸುಶಿಕ್ಷಿತ ಹಾಗೂ ಮೇಲ್ವರ್ಗದ ಮಹಿಳೆಯರು ಬೆಳ್ಳಗೇ ಇರುತ್ತಾರೆ, ಇರಬೇಕು ಎಂಬಂಥ ಸ್ವೀಕೃತ ಧೋರಣೆಗಳು ಬದಲಾಗಬೇಕಾದ ಅವಶ್ಯಕತೆಯನ್ನು ಈ ಅಭಿಯಾನ ಪ್ರತಿಪಾದಿಸಿದೆ. ತ್ವಚೆ ಬಿಳಿಯಾಗಿಸುವ ಕ್ರೀಮ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದನ್ನು ಶಾರೂಖ್ ಖಾನ್ ನಿಲ್ಲಿಸಬೇಕೆಂಬ ಆಗ್ರಹವನ್ನೂ ಇತ್ತೀಚೆಗೆ ಈ ಅಭಿಯಾನ ಮುಂದಿಟ್ಟಿದೆ.
ಸೌಂದರ್ಯ ಕುರಿತಂತೆ ತಿರುಚಲಾದ ಇಂತಹ ಸಂವೇದನೆ, ಗ್ರಹಿಕೆಗಳನ್ನು ಬದಲಿಸುವುದಾದರೂ ಹೇಗೆ? ಇದಕ್ಕಾಗಿ ಸೌಂದರ್ಯ, ಬಲ ಹಾಗೂ ಯಶಸ್ಸಿನೊಂದಿಗೆ ಕಪ್ಪು ತ್ವಚೆಯನ್ನೂ ಸಮೀಕರಿಸುವಂತಹ ಸಂದೇಶಗಳು ಮಾಧ್ಯಮ ಗಳಲ್ಲಿ ಪರ್ಯಾಯವಾಗಿ ಒಡಮೂಡುವುದು ಅವಶ್ಯ. ‘ಡಾರ್ಕ್ ಈಸ್ ಬ್ಯೂಟಿಫುಲ್' ಅಭಿಯಾನದ ಗುರಿಯೂ ಇದೇ. ಈ ಪ್ರಚಾ ರಾಂದೋಲನದ ರಾಯಭಾರಿಯಾಗಿ ನಂದಿತಾ ದಾಸ್ ಕಾಣಿಸಿಕೊಂಡಿರುವ ಜಾಹೀರಾತುಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ಗಳಲ್ಲಿ ವ್ಯಾಪಕ ವಾಗಿ ಷೇರ್ ಆಗಿವೆ. ಆದರೆ ತ್ವಚೆಯನ್ನು ಗೌರವರ್ಣವಾಗಿಸುವ ಕ್ರೀಮುಗಳ ಸರ್ವಾಂತರ್ಯಾಮಿ ಜಾಹೀರಾತುಗಳ ಎದುರಿಗೆ ಇದರ ಬಲ ಕಡಿಮೆ.
ಕಪ್ಪು ಮೈ ಬಣ್ಣದ ಆದರ್ಶ ಮಾದರಿಗಳ ಅಗತ್ಯ ಕುರಿತು ಚರ್ಚೆಗಳು ನಡೆಯುತ್ತಿವೆ ಎಂಬುದೇ ಇಲ್ಲಿ ಮುಖ್ಯ. ಬಹು ನೆಲೆಗಳಲ್ಲಿ ಈ ಚರ್ಚೆಗಳು ಚಿಂತನೆಗೆ ಪ್ರೇರಣೆ ಒದಗಿಸುವಂತಾಗಬೇಕು. ‘ಸೌಂದರ್ಯವನ್ನು ಅಳೆಯುವಲ್ಲಿ ಮತ್ತು ಮೈಬಣ್ಣ ಹಾಗೂ ಸೌಂದರ್ಯಗಳ ಅಂತರವನ್ನು ಗುರುತಿಸುವಲ್ಲಿ ರಸಪ್ರಜ್ಞೆಯ ಒಂದು ಹೊಸ ಕ್ರಾಂತಿಯೇ ನಡೆಯಬೇಕು. ಅಂಥ ಕ್ರಾಂತಿ ಮಾತ್ರ ಯಾವುದೇ ರಾಜಕೀಯ ಅಥವಾ ಆರ್ಥಿಕ ಕ್ರಾಂತಿಗೆ ಸರಿಸಾಟಿಯಾಗಿ ಇಡೀ ಪ್ರಪಂಚದ ಮೇಲೆ ಸ್ವಾತಂತ್ರ್ಯದ ಹೊಸ ಗಾಳಿಯನ್ನೇ ತೂರಿಬಿಡಬಲ್ಲದು' ಎಂಬಂತಹ ಮಾತನ್ನು ಲೋಹಿಯಾ 60ರ ದಶಕದಲ್ಲಿ ಹೇಳಿದ್ದರು. ಇಂತಹ ರಸಪ್ರಜ್ಞೆಯ ಹೊಸ ಅರಿವು ಈಗಿನ್ನೂ ಕುಡಿಯೊಡೆದಿದೆ ಅಷ್ಟೇ. ಇದು ನಿರಂತರವಾಗಿ ಬೆಳಗಿ ಮನಸ್ಸುಗಳ ಕತ್ತಲೆಗಳನ್ನು ಕಳೆಯಬೇಕಿದೆ.
-ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.