ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆಯ ದಿನ (ಮೇ 03) ಬೆಂಗಳೂರಿನಲ್ಲಿ ಇಬ್ಬರು ಹಿರಿಯ ಮರಾಠಿ ಪತ್ರಕರ್ತೆಯರು ಪರ್ಯಾಯ ಪತ್ರಿಕೋದ್ಯಮದ ಸಾಧ್ಯತೆಗಳನ್ನು ಕುರಿತು ಸುದೀರ್ಘವಾಗಿ ಮಾತನಾಡಿದ್ದು ವಿಶೇಷವಾಗಿತ್ತು. ಈ ಮಾತುಕತೆಗೆ ಅವಕಾಶ ಕಲ್ಪಿಸಿದ್ದು ಕರ್ನಾಟಕ ಲೇಖಕಿಯರ ಸಂಘ ಹಾಗೂ ‘ನಮ್ಮ ಮಾನಸ’ ಬಳಗ.
ಮಹಿಳಾ ಚಳವಳಿ ಹಾಗೂ ಸ್ತ್ರೀವಾದದ ಬೇರಿನೊಂದಿಗೆ ರೂಪು ತಳೆದ ಮರಾಠಿ ಮಾಸ ಪತ್ರಿಕೆ ‘ಮಿಳೂನ್ ಸಾರ್ಯಾಜಣೀ’ಗೆ ಈಗ 25ನೇ ವರ್ಷದ ಸಂಭ್ರಮ. 25 ವರ್ಷಗಳಿಂದ ನಿರಂತರವಾಗಿ ಪ್ರಕಟಣೆ ಕಾಣುತ್ತಿರುವ ಈ ಪತ್ರಿಕೆ, ವ್ಯಕ್ತಿಗಳಾಗಿ ತಮ್ಮನ್ನು ತಾವು ಅರ್ಥ ಮಾಡಿಕೊಳ್ಳಲು ಮರಾಠಿ ಮಹಿಳೆಯರಿಗೆ ಅಂದಿನಿಂದಲೂ ನೆರವಾಗುತ್ತಾ ಬಂದಿದೆ. ಬದುಕಿನ ಸವಾಲುಗಳನ್ನು ಅರ್ಥೈಸಿಕೊಂಡು ಸಮರ್ಥವಾಗಿ ಬದುಕು ಕಟ್ಟಿಕೊಳ್ಳಲು ತಮ್ಮ ಮೇಲೆ ಈ ಪತ್ರಿಕೆ ಬೀರಿದ ಪ್ರಭಾವಗಳನ್ನು ಬೆಂಗಳೂರಿನಲ್ಲಿ ನೆಲೆಸಿರುವ ಅನೇಕ ಮರಾಠಿ ಮಹಿಳೆಯರು ಈ ಸಭೆಯಲ್ಲಿ ನೆನಪಿಸಿಕೊಂಡಿದ್ದು ಅರ್ಥಪೂರ್ಣವಾಗಿತ್ತು. ಸಾವಿರಾರು ಜನರನ್ನಷ್ಟೇ ತಲುಪುವ ಅಲ್ಪ ಪ್ರಸಾರದ ಇಂತಹ ಪತ್ರಿಕೆಗಳು, ಗಂಭೀರ ನೆಲೆಗಳಲ್ಲಿ ಸಾಮಾಜಿಕ ವಾಗ್ವಾದಗಳನ್ನು ಬೆಳೆಸುತ್ತಾ ಜನರನ್ನು ಪ್ರಭಾವಗೊಳಿಸುವ ‘ಮಾಂತ್ರಿಕತೆ’ ಈ ಮಾತುಕತೆಗಳಲ್ಲಿ ಅನಾವರಣಗೊಂಡಿತು.
ಪುಣೆ ಮೂಲದ ಈ ಪತ್ರಿಕೆಯ ಸಂಸ್ಥಾಪಕ ಸಂಪಾದಕಿ ವಿದ್ಯಾ ಬಾಳ ಹಾಗೂ ಈಗಿನ ಸಂಪಾದಕಿ ಡಾ ಗೀತಾಲೀ ವಿ. ಎಂ. ಅವರು ಪತ್ರಿಕೆ ನಡೆದು ಬಂದ ಹಾದಿಯನ್ನು ಸವಿಸ್ತಾರವಾಗಿ ವಿವರಿಸಿದರು.
ವಿದ್ಯಾ ಬಾಳ ಅವರಂತೂ ಕಳೆದ 45 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಈಗ ಅವರಿಗೆ 75 ವರ್ಷ. ಈ ಇಳಿವಯಸ್ಸು ಅವರ ಚೈತನ್ಯವನ್ನು ಕುಗ್ಗಿಸಿಲ್ಲ ಎಂಬುದೇ ಅಚ್ಚರಿಯ ಸಂಗತಿ. ಪತ್ರಿಕೆಯ ದಿನನಿತ್ಯದ ಆಗುಹೋಗುಗಳಲ್ಲಿ ಈಗ ಪೂರ್ಣಪ್ರಮಾಣದಲ್ಲಿ ಪಾಲ್ಗೊಳ್ಳದಿದ್ದರೂ ಪತ್ರಿಕೆಯ ಜೊತೆ ಈಗಲೂ ಅವರು ಸಕ್ರಿಯರಾಗೇ ಇದ್ದಾರೆ. ಹಳ್ಳಿಹಳ್ಳಿಗಳಲ್ಲಿ ಪ್ರವಾಸ ಮಾಡುವುದನ್ನು ಅವರು ಮುಂದುವರಿಸಿದ್ದಾರೆ.
ವಿದ್ಯಾ ಬಾಳ ಅವರ ವೃತ್ತಿಜೀವನ ಆರಂಭವಾದದ್ದು ಹಾಗೂ ಬೌದ್ಧಿಕ ಬದುಕು ಅರಳಿದ್ದು ಕಿರ್ಲೊಸ್ಕರ್ ಗ್ರೂಪ್ ನ ‘ ಸ್ತ್ರೀ ‘ ಪತ್ರಿಕೆ ಜೊತೆಗೆ. 1964ರಲ್ಲಿ ಈ ಪತ್ರಿಕೆಗೆ ಸೇರಿಕೊಂಡ ಅವರು ಈ ಮುಖ್ಯವಾಹಿನಿಯ ಪತ್ರಿಕೆಯಲ್ಲಿ 22 ವರ್ಷ ಕಾಲ ಕೆಲಸ ಮಾಡಿದರು . 1930ರಲ್ಲಿ ಆರಂಭವಾಗಿದ್ದ ಈ ಪತ್ರಿಕೆ ಆ ಕಾಲಕ್ಕೆ ಪ್ರಗತಿಪರ ವೆನಿಸಿತ್ತು. ಇದನ್ನು ಆರಂಭಿಸಿದ ಶಂಕರರಾವ್ ಕಿರ್ಲೊಸ್ಕರ್ ಅವರು ಆ ಕಾಲಕ್ಕೇ ಮಹಿಳಾ ಪರ ಕಾಳಜಿಗಳನ್ನು ಹೊಂದಿದ್ದವರು.
ಪತ್ರಿಕೆ ಆರಂಭವಾದಾಗ ಮೊದಲ ಸಂಪಾದಕೀಯದಲ್ಲಿ ಶಂಕರರಾವ್ ಕಿರ್ಲೊಸ್ಕರ್ ಬರೆದಿದ್ದ ಮಾತುಗಳು ಇದಕ್ಕೆ ದ್ಯೋತಕ. ‘ಈ ಪತ್ರಿಕೆ ಮನರಂಜನೆಗಲ್ಲ. ಮಹಿಳೆಯರ ಸ್ಥಿತಿಗತಿ ಸುಧಾರಣೆಗೆ’ ಎಂದು ಬರೆದಿದ್ದ ಅವರು ಪತ್ರಿಕೆಯ ಘನ ಉದ್ದೇಶವನ್ನು ಎತ್ತಿ ಹೇಳಿದ್ದರು. 1986 ರಲ್ಲಿ ‘ ಸ್ತ್ರೀ ’ ಪತ್ರಿಕೆಯನ್ನು ಮುಚ್ಚಿ ಬೇರೆ ಪತ್ರಿಕೆ ಶುರು ಮಾಡುವ ಪ್ರಯತ್ನ ಶುರುವಾದಾಗ ವಿದ್ಯಾ ಬಾಳ ಆ ಕೆಲಸದಿಂದ ಹೊರಬಂದರು. ಆಗ ಅವರಿಗೆ 50 ವರ್ಷ. ಆ ವಯಸ್ಸಿನಲ್ಲಿ ಮತ್ತೊಂದು ಹೊಸ ಪತ್ರಿಕೆಯನ್ನು ಸೇರಲು ಬಯಸದೆ ಗ್ರಾಮೀಣ ವಿಚಾರಗಳಿಗೆ ಸಂಬಂಧಿಸಿದ ಯೋಜನೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದರು. ನಂತರ 1989ರ ಆಗಸ್ಟ್ ನಲ್ಲಿ ತಮ್ಮ ಅಪಾರ್ಟ್ ಮೆಂಟ್ ಅನ್ನೇ ಕಚೇರಿಯಾಗಿಸಿಕೊಂಡು ‘ಮಿಳೂನ್ ಸಾರ್ಯಾಜಣೀ’ ಪತ್ರಿಕೆಯನ್ನು ಶುರು ಮಾಡಿದರು.
ಪತ್ನಿ, ಮಗಳು, ತಾಯಿಯ ಪಾತ್ರಗಳಿಗಷ್ಟೇ ಮಹಿಳೆ ಸೀಮಿತಳಲ್ಲ. ಆಕೆ ಸ್ವತಂತ್ರ ವ್ಯಕ್ತಿತ್ವದ ವ್ಯಕ್ತಿಯೂ ಹೌದು ಎಂಬುದನ್ನು ಅರ್ಥ ಮಾಡಿಸುವ ಉದ್ದೇಶ ಈ ಪತ್ರಿಕೆಯದ್ದು.
ಸಾಮಾಜಿಕ ಬದಲಾವಣೆಯ ಪ್ರಕ್ರಿಯೆ ಯಾವುದೇ ಲಿಂಗ ತಾರತಮ್ಯದಿಂದ ಮುಕ್ತವಾಗಿರಬೇಕೆಂಬ ನಂಬಿಕೆ ಪತ್ರಿಕೆಯದು. ಎಲ್ಲರನ್ನೂ ಒಳಗೊಳ್ಳುವ ಪ್ರಗತಿಯ ತರ್ಕಕ್ಕೆ ಅನುಗುಣವಾಗಿ ಈ ಪತ್ರಿಕೆಯ ಮೊದಲ ಸಂಚಿಕೆ ಮುಖಪುಟದಲ್ಲಿದ್ದ ಚಿತ್ರ ಕವುದಿಯದು. ವಿಭಿನ್ನ ಬಣ್ಣ, ವಿನ್ಯಾಸ, ಎಳೆಗಳು ಕವುದಿಯಲ್ಲಿ ಒಟ್ಟಾಗಿ ಸೇರುತ್ತವೆ. ಕವುದಿಯ ಬೆಚ್ಚಗಿನ ಭಾವ ಆಪ್ತವಾದದ್ದು. ಎಲ್ಲರೂ ಒಟ್ಟಾಗಿ ಸಾಮಾಜಿಕ ಬದಲಾವಣೆಗೆ ನಿಲ್ಲುವಂತಹ ಚೈತನ್ಯಕ್ಕೆ ಈ ಕವುದಿ ಪ್ರತೀಕ.
‘ಮಿಳೂನ್ ಸಾರ್ಯಾಜಣೀ’ ಎಂಬ ಹೆಸರೇ ( ನಾವೆಲ್ಲಾ ಒಂದಾಗಿರುವ ಮಹಿಳೆಯರು) ವಿಭಿನ್ನವಾದುದು. ಮಹಿಳಾ ಕೇಂದ್ರಿತ ಪತ್ರಿಕೆ ಇದು ಎಂಬುದನ್ನು ಈ ಹೆಸರೇ ಸೂಚಿಸುತ್ತದೆ. ಮಹಿಳೆಯರ ಅಭಿವ್ಯಕ್ತಿಗಳಿಗೆ ನೆಲೆ ಇದು. ಆದರೆ ಬರ ಬರುತ್ತಾ ಈ ಪತ್ರಿಕೆಯ ದಿಕ್ಕು ಬದಲಾಯಿತು. ಈಗ ಪತ್ರಿಕೆಯೊಳಗಿನ ಹೂರಣ ‘ಬರೀ ಮಹಿಳೆಯರಿಗಷ್ಟೇ ಅಲ್ಲ’. ಮಹಿಳಾ ಆಂದೋಲನ ಕುರಿತಂತೆ ತಿಳಿವಳಿಕೆ ಇಲ್ಲದ ಪುರುಷರನ್ನು ತಲುಪಲೂ ಈ ಪತ್ರಿಕೆ ಯತ್ನಿಸುತ್ತದೆ ಎಂಬುದು ಈ ಪತ್ರಿಕೆಯ ವಿಶೇಷ. ಓದುಗರಾಗಿ ಹಾಗೂ ಲೇಖಕರಾಗಿ ಎಲ್ಲಾ ಪುರುಷರನ್ನೂ ಸ್ವಾಗತಿಸುತ್ತದೆ ಈ ಪತ್ರಿಕೆ.
ದೇಹಕ್ಕೆ ವಯಸ್ಸಾಗುವಿಕೆಯ ವಿರುದ್ಧ ಸೆಣಸುವ ಜೊತೆಜೊತೆಗೇ ವ್ಯಕ್ತಿಗಳಾಗಿ ಆಂತರಿಕ ಬೆಳವಣಿಗೆಗೂ ಪ್ರಜ್ಞಾಪೂರ್ವಕವಾಗಿ ಸೆಣಸುವಂತಹವರು ಈ ಸಾರ್ಯಾಜಣೀಗಳು ( ಮಹಿಳೆಯರು). ಹೀಗಾಗಿ ಈ ಮಹಿಳೆಯರು ಸ್ತ್ರೀ ತನದಲ್ಲೇ ಮುಳುಗಿಹೋಗಿಲ್ಲ. ಆ ಬಗೆಗಷ್ಟೇ ಕೊಚ್ಚಿಕೊಳ್ಳುತ್ತಿಲ್ಲ. ಬದಲಾಗಿ ಲಕ್ಷ್ಮಣರೇಖೆಯನ್ನು ದಾಟಿ ಈ ಪಯಣದಲ್ಲಿ ಪುರುಷರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವವರಾಗಿದ್ದಾರೆ ಈ ಮಹಿಳೆಯರು. ಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿ ಪುರುಷರಿದ್ದಾರೆ.
ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣಗಳ ಸುನಾಮಿಯ ನಂತರ ನಮ್ಮ ಬದುಕಿನಲ್ಲಿ ಪಲ್ಲಟಗಳಾಗುತ್ತಿವೆ. ಈ ಸುನಾಮಿಯನ್ನು ತಡೆಗಟ್ಟಲಾಗದಿದ್ದರೂ ನಾವು ನಿಂತಿರುವ ನೆಲೆ ಕಳೆದುಕೊಳ್ಳಬಾರದು ಎಂಬ ನಿಲುವು ಪತ್ರಿಕೆಯದ್ದು.
ಪತ್ರಿಕೋದ್ಯಮ ಹಾಗೂ ಆ್ಯಕ್ಟಿವಿಸಂ ಎರಡನ್ನೂ ಬೆರೆಸುವ ಪ್ರಯತ್ನ ಇಲ್ಲಿ ಮುಖ್ಯ. ನಿಜಕ್ಕೂ ಈ ಪತ್ರಿಕೆಯ ಬೇರು ಸ್ತ್ರೀವಾದವೇ. ಆದರೆ ಸ್ತ್ರೀವಾದಿ ಚಳವಳಿಯ ವಕ್ತಾರವಾಗುವುದಿಲ್ಲ ಈ ಪತ್ರಿಕೆ. ಸ್ತ್ರೀವಾದಿ ಚಳವಳಿಯಷ್ಟೇ ಅಲ್ಲ, ಪರಿಸರ, ಜಾತಿ, ಪರಮಾಣು, ಮೂಢನಂಬಿಕೆ ವಿರೋಧದ ಚಳವಳಿಗಳಿಗೂ ಈ ಪತ್ರಿಕೆ ಸ್ಪಂದಿಸುತ್ತದೆ. ಹೀಗಾಗಿ ಇದು ಬಹುರೂಪಗಳ ಆಂದೋಲನಗಳ ಧ್ವನಿಯಾಗಿದೆ. ಕಥೆ, ಕವಿತೆ, ಸಂದರ್ಶನ ಹಾಗೂ ಲೇಖನಗಳನ್ನೂ ‘ಮಿಳೂನ್ ಸಾರ್ಯಾಜಣೀ’ ಪ್ರಕಟಿಸುತ್ತದೆ. ಮರಾಠಿಯ ಎಲ್ಲಾ ಖ್ಯಾತ ಪುರುಷ ಹಾಗೂ ಮಹಿಳಾ ಲೇಖಕರು, ಸಾಹಿತಿಗಳು ಈ ಪತ್ರಿಕೆಗೆ ಬರೆಯುತ್ತಾರೆ. ಹೊಸ ಲೇಖಕರಿಗೂ ಅವಕಾಶವಿದೆ. ಆದರೆ ‘ಇದು ಸಾಹಿತ್ಯಕ ಪತ್ರಿಕೆಯಲ್ಲ. ಸಾಮಾಜಿಕ ಪತ್ರಿಕೆ’ ಎಂಬುದು ವಿದ್ಯಾ ಬಾಳ ಅವರ ವ್ಯಾಖ್ಯಾನ.
ನಗರ ಹಾಗೂ ಗ್ರಾಮೀಣ ಬದುಕಿನ ಸಂಪರ್ಕ ಕಡಿದುಹೋಗದಂತೆ ಆರಂಭದಿಂದಲೂ ಪತ್ರಿಕೆ ಎಚ್ಚರ ವಹಿಸಿಕೊಂಡು ಬಂದಿದೆ. ಈಗಲೂ 58 ಪುಟಗಳ ಈ ಪತ್ರಿಕೆಯಲ್ಲಿ 8 ಪುಟಗಳು ಗ್ರಾಮೀಣ ಬದುಕಿನ ಘಟನಾವಳಿಗಳು, ನಿರೀಕ್ಷೆಗಳು ಹಾಗೂ ಪ್ರಯೋಗಗಳಿಗೆ ಸಂಬಂಧಿಸಿದ ವಿಚಾರಗಳಿಗೆ ಮೀಸಲು. ಪುಣೆಯಲ್ಲಿರುವ ಸಣ್ಣದೊಂದು ಕಚೇರಿಯಿಂದ ಪ್ರಕಟವಾಗುವ ಈ ಪತ್ರಿಕೆ ಸುಮಾರು 300 ನಗರಗಳು ಹಾಗೂ ಪಟ್ಟಣಗಳಿಗೆ ತಲುಪುತ್ತದೆ.
ಈಚಿನ ದಿನಗಳಲ್ಲಿ ಲೈಂಗಿಕ ಕಿರುಕುಳ ಕಾಯಿದೆ ಹಾಗೂ 498 ಎ ಕಾನೂನುಗಳಿಂದಾಗಿ ಪುರುಷರಲ್ಲೂ ಅಭದ್ರತೆಯ ಭಾವನೆಗಳು ಕಾಡುತ್ತಿವೆ. 25 ವರ್ಷಗಳ ಹಿಂದೆ ಮಹಿಳೆಯರಿಗೆ ತಮ್ಮ ಅಳಲುಗಳನ್ನು ನಿರೂಪಿಸಲು ‘ಸ್ಪೀಕ್ ಔಟ್ ಸೆಂಟರ್’ಗಳಿದ್ದವು. ಈಗ ಮುಂಬೈನಲ್ಲಿ ಪುರುಷರಿಗೆ ತಮ್ಮ ಅಳಲುಗಳನ್ನು ಹೇಳಿಕೊಳ್ಳಲು ‘ಸ್ಪೀಕ್ ಔಟ್ ಸೆಂಟರ್’ಗಳಿವೆ. ವಾಸ್ತವವಾಗಿ ಪಿತೃ ಪ್ರಧಾನ ಮೌಲ್ಯಗಳ ವ್ಯವಸ್ಥೆಯಲ್ಲಿ ಪುರುಷನೂ ಬಂದಿಯಾಗಿದ್ದಾನೆ.
ಪುರುಷ ಎಂದರೆ ಅಸೂಕ್ಷ್ಮ ಎನಿಸುವಷ್ಟು ಮಟ್ಟಿಗಿನ ಶಕ್ತಿಶಾಲಿ ಎಂಬಂತಹ ಕೃತಕ ಪೊರೆಗಳಲ್ಲಿ ಮಾನವೀಯತೆಯ ಸೆಲೆ ಬತ್ತಿ ಹಿಂಸಾತ್ಮಕವಾದ ಪರಿವೇಷಗಳ ಹೇರುವಿಕೆಗೆ ಕಾರಣವಾಗುವ ಸಾಮಾಜಿಕ ವ್ಯವಸ್ಥೆ ಇದೆ. ಇಂತಹ ವಿಚಾರಗಳ ಮುಕ್ತ ಚರ್ಚೆಗಳಿಗೆ ಇವು ವೇದಿಕೆಗಳಾಗಿವೆ. ‘ಮಿಳೂನ್ ಸಾರ್ಯಾಜಣೀ’ ಪತ್ರಿಕೆಯೂ ಇದಕ್ಕೆ ಧ್ವನಿ ಒದಗಿಸಿದೆ. ಪುಣೆಯಲ್ಲಿರುವ ‘ಪುರುಷ್ ಉವಾಚ್’ ಹಾಗೂ ಮುಂಬೈನಲ್ಲಿರುವ ‘ಮೆನ್ ಎಗೇನ್ಸ್ಟ್ ವಯಲೆನ್ಸ್ ಅಂಡ್ ಅಬ್ಯೂಸ್’ (ಮಾವಾ) ಸಂಘಟನೆಗಳು, ಕಳೆದ ಎರಡು ದಶಕಗಳಿಂದ ಪುರುಷತ್ವ ಪರಿಕಲ್ಪನೆಯನ್ನು ಮರುಪರಿಶೀಲನೆಗೊಳಪಡಿಸುವ ಪ್ರಯತ್ನಗಳನ್ನು ನಡೆಸಿಕೊಂಡು ಬಂದಿವೆ.
ಸಾಂಪ್ರದಾಯಿಕ ಪುರುಷ ಪ್ರಧಾನ ದೃಷ್ಟಿಕೋನಗಳಿಗೆ ಕಾರಣವಾಗುವಂತಹ ದೋಷಪೂರ್ಣ ಸಾಮಾಜೀಕರಣದ ಸಮಸ್ಯೆಗಳನ್ನು ಈ ಸಂಘಟನೆಗಳ ಸಂವೇದನಾಶೀಲ ಪುರುಷರು ವಿಶ್ಲೇಷಿಸುತ್ತಾ ಬಂದಿದ್ದಾರೆ. ಜಾತಿ ವಿರೋಧಿ ಹಾಗೂ ಲಿಂಗ ನ್ಯಾಯ ಹರಿಕಾರರಾದ ಮಹಾತ್ಮ ಜೋತಿಬಾ ಫುಲೆ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರು ನಡೆಸಿದ ಸಾಮಾಜಿಕ ಆಂದೋಲನಗಳ ಶ್ರೀಮಂತ ಪರಂಪರೆ ಮಹಾರಾಷ್ಟ್ರದಲ್ಲಿ ಇದ್ದೇ ಇದೆ.
ಇದು ಈಗ ಹೊಸ ಪೀಳಿಗೆಯಲ್ಲಿ ಮುಂದುವರಿದಿದೆ. 1996ರಿಂದ ಪ್ರತಿ ದೀಪಾವಳಿ ಸಂದರ್ಭದಲ್ಲಿ ‘ಪುರುಷ ಸ್ಪಂದನ’ ಎಂಬ ವಾರ್ಷಿಕ ಮರಾಠಿ ಪತ್ರಿಕೆಯನ್ನು ‘ಮಾವಾ’ ಹಾಗೂ ‘ಪುರುಷ್ ಉವಾಚ್’ ಸಂಘಟನೆಗಳು ಹೊರತರುತ್ತಿವೆ. ಮಹಾರಾಷ್ಟ್ರದ ಸಾಮಾಜಿಕ ಹಾಗೂ ಸಾಹಿತ್ಯಕ ವಲಯದಲ್ಲಿ ಈ ಪತ್ರಿಕೆ ಅಪಾರ ಮನ್ನಣೆಯನ್ನೂ ಗಳಿಸಿಕೊಂಡಿದೆ. ಲಿಂಗತ್ವ ಕುರಿತಂತೆ ಪುರುಷರ ಕಾಳಜಿ, ಭಾವನೆ ಹಾಗೂ ವಿಶ್ಲೇಷಣೆಗಳಿಗೆ ಅಭಿವ್ಯಕ್ತಿ ನೀಡುವ ಅಗತ್ಯವೇ ಈ ಪತ್ರಿಕೆಯ ಹುಟ್ಟಿಗೆ ಕಾರಣ.
ಮಹಿಳೆ ಪರವಾದ ಪ್ರತಿಯೊಂದು ಸಭೆ, ಸಮಾರಂಭಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತು ‘ಮಹಿಳೆಗೆ ಮಹಿಳೆಯೇ ಶತ್ರು’. ಹಾಗಿದ್ದಲ್ಲಿ ಪುರುಷ, ಪುರುಷರು ಸದಾ ಸ್ನೇಹಿತರಾಗಿರುತ್ತಾರೆಯೇ? ಮನೆಯೊಳಗಿನ ದಾಯಾದಿ ಕಲಹ ಇರಬಹುದು, ಬೀದಿಯೊಳಗಿನ ರಂಪಾಟ, ಕೊಲೆ, ಸುಲಿಗೆಗಳಿರಬಹುದು – ಇಂತಹ ಸಂದರ್ಭಗಳಲ್ಲೇಕೆ ‘ಪುರುಷನಿಗೆ ಪುರುಷನೇ ಶತ್ರು ’ ಎಂದು ಹೇಳುವುದಿಲ್ಲ? ಪಿತೃ ಪ್ರಧಾನ ವ್ಯವಸ್ಥೆ ಕಟ್ಟಿಕೊಡುವ ಇಂತಹ ಚೌಕಟ್ಟುಗಳನ್ನು ಮೀರಿ ಬೆಳೆದಾಗಲೇ ಮಾನವೀಯವಾದ ಸಮಾಜ ನಿರ್ಮಾಣ ಸಾಧ್ಯ.
ಕುಟುಂಬ ವ್ಯವಸ್ಥೆ ಪ್ರಜಾಸತ್ತಾತ್ಮಕವಾಗಿಲ್ಲ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕುಟುಂಬಗಳು ಪ್ರಜಾಸತ್ತಾತ್ಮಕವಾಗುವುದು ಮುಖ್ಯ. ಇದಕ್ಕೆ ಬೇಕಾದದ್ದು ಮಹಾತ್ಮ ಫುಲೆ ಹಾಗೂ ಗಾಂಧೀಜಿ ಪ್ರತಿಪಾದಿಸಿದ ಸಿದ್ಧಾಂತ. ಅದು ಪುರುಷರನ್ನು ಅಹಂಕಾರಗಳ ಕೋಟೆಯಿಂದ ಮುಕ್ತಗೊಳಿಸಿ ಮಾನವೀಯಗೊಳಿಸುವುದು ಹಾಗೂ ಮಹಿಳೆಯರನ್ನು ಸಬಲೀಕರಣಗೊಳಿಸುವುದು. ಮಹಿಳೆಯರು, ಪುರುಷರು ಒಟ್ಟಾಗಿ ಸಮಾಜ ಕಟ್ಟುವ ಆದರ್ಶ ಇದು. ಈ ನಿಟ್ಟಿನ ವಿಚಾರಗಳ ಅಭಿವ್ಯಕ್ತಿಗೆ ವೇದಿಕೆಯಾಗಿ ‘ಮಿಳೂನ್ ಸಾರ್ಯಾಜಣೀ’ ಪತ್ರಿಕೆ ಕಳೆದ 25 ವರ್ಷಗಳಿಂದ ಪ್ರಯೋಗಶೀಲವಾಗಿ ಮುಂದುವರಿಯುತ್ತಲೇ ಸಾಗಿದೆ ಎಂಬುದು ಅಭಿನಂದನೀಯವಲ್ಲವೆ?
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.