ADVERTISEMENT

ನಮ್ಮ ನ್ಯಾಯದ ತಕ್ಕಡಿಯ ಅಸಮತೋಲನ

ಬಾರ್ ಮತ್ತು ಬೆಂಚ್‌ಗಳಲ್ಲಿನ ಪೂರ್ವಗ್ರಹಗಳು ನ್ಯಾಯಮೂರ್ತಿಗಳ ನೇಮಕಾತಿಗಳಲ್ಲಿ ಪ್ರತಿಫಲಿಸುತ್ತಿವೆ

ಸಿ.ಜಿ.ಮಂಜುಳಾ
Published 7 ಆಗಸ್ಟ್ 2018, 19:30 IST
Last Updated 7 ಆಗಸ್ಟ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಉತ್ತರಾಖಂಡದ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರ ನೇಮಕದ ವಿಚಾರ, ಸರ್ಕಾರ ಹಾಗೂ ನ್ಯಾಯಾಂಗದ ಮಧ್ಯದ ಮುಸುಕಿನ ಗುದ್ದಾಟವಾಗಿರುವ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಜನವರಿ ತಿಂಗಳಲ್ಲಿ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ್ದ ಹೆಸರುಗಳಲ್ಲಿ ಜೋಸೆಫ್ ಅವರ ಹೆಸರನ್ನು ಕೈಬಿಟ್ಟು ಅವರ ಜೊತೆಗೇ ಹೆಸರಿಸಲಾಗಿದ್ದ ವಕೀಲೆ ಇಂದು ಮಲ್ಹೋತ್ರಾ ಅವರ ನೇಮಕಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಇದು ಕೊಲಿಜಿಯಂ ಹಾಗೂ ಕೇಂದ್ರದ ಮಧ್ಯೆ ಸಂಘರ್ಷ ಹುಟ್ಟುಹಾಕಿತ್ತು. ನಂತರ ಜುಲೈ ತಿಂಗಳಲ್ಲಿ ಮರುಕಳುಹಿಸಲಾದ ಜೋಸೆಫ್ ಅವರ ಹೆಸರಿನ ಜೊತೆಗೆ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ವಿನೀತ್ ಶರಣ್ ಅವರ ಹೆಸರುಗಳೂ ಇದ್ದವು. ಈ ನೇಮಕಗಳಿಗೆ ಒಪ್ಪಿಗೆ ಸೂಚಿಸಿ ಕೇಂದ್ರ ಕಳುಹಿಸಿದ ಪಟ್ಟಿಯಲ್ಲಿ ಜೋಸೆಫ್ ಅವರ ಹೆಸರು ಕೊನೆಯಲ್ಲಿದ್ದದ್ದರಿಂದ ಅವರ ಸೇವಾ ಹಿರಿತನ ಕಡೆಗಣಿಸಿದಂತಾಗಿದೆ ಎಂಬುದು ಮತ್ತೊಂದು ವಿವಾದಕ್ಕೆ ಕಾರಣವಾಯಿತು. 2016ರಲ್ಲಿ ಉತ್ತರಾಖಂಡದಲ್ಲಿನ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿ ಕಾಂಗ್ರೆಸ್ ಸರ್ಕಾರದ ಪುನರ್‍ಸ್ಥಾಪನೆಗೆ ಅವಕಾಶ ಮಾಡಿಕೊಡುವ ತೀರ್ಪನ್ನು ಜೋಸೆಫ್ ನೀಡಿದ್ದರು. ಇದು ಜೋಸೆಫ್ ವಿರುದ್ಧ ಕೇಂದ್ರದ ಅಸಮಾಧಾನಕ್ಕೆ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ಎಲ್ಲಾ ವಿವಾದಗಳ ಬಿಸಿಯಲ್ಲಿ ಇಬ್ಬರು ಮಹಿಳೆಯರು ಈ ವರ್ಷ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ ಎಂಬುದು ಹೊಸಬೆಳವಣಿಗೆ. ನ್ಯಾಯಾಂಗ ನೇಮಕಗಳ ಕುರಿತಾದ ವಾಗ್ವಾದವನ್ನು ಮತ್ತೊಂದು ನೆಲೆಯಲ್ಲಿ ವಿಸ್ತರಿಸಲು ಅನುಕೂಲಕರವಾದ ನಡೆ ಇದು.

ನಿನ್ನೆ (ಆ.7) ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಪ್ರಮಾಣವಚನ ಸ್ವೀಕರಿಸಿದ ನಂತರ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಸುಪ್ರೀಂ ಕೋರ್ಟ್‌ನಲ್ಲಿ ಮೂರಕ್ಕೇರಿದೆ. ಏಕಕಾಲದಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿರುವುದು ಸುಪ್ರೀಂ ಕೋರ್ಟ್‌ನ 68 ವರ್ಷಗಳ ಈವರೆಗಿನ ಇತಿಹಾಸದಲ್ಲಿ ಇದೇ ಮೊದಲು. 2014ರಿಂದ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಆರ್. ಭಾನುಮತಿ ಅವರು, ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿ ತೀರ್ಪು ನೀಡಿದ ನ್ಯಾಯಮೂರ್ತಿಗಳ ಪೀಠದಲ್ಲಿದ್ದವರು.

1950ರಲ್ಲಿ ಸುಪ್ರೀಂ ಕೋರ್ಟ್‌ ಸ್ಥಾಪನೆಯಾದಾಗಲಿಂದ ಈವರೆಗೆ ನ್ಯಾಯಮೂರ್ತಿಗಳಾಗಿ ನೇಮಕಗೊಂಡ ಮಹಿಳೆಯರು ಕೇವಲ 8. ಪುರುಷ ನ್ಯಾಯಮೂರ್ತಿಗಳು 220ಕ್ಕೂ ಹೆಚ್ಚು. ಉನ್ನತ ನ್ಯಾಯಾಂಗದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿರುವ ಲಿಂಗಾನುಪಾತ ಅಸಮತೋಲನದ ಬಗ್ಗೆ ಚರ್ಚೆಗಳಾಗಿವೆ. ಸುಪ್ರೀಂ ಕೋರ್ಟ್‌ ಸ್ಥಾಪನೆಯಾದ ನಂತರ ಮೊದಲ ಮಹಿಳಾ ನ್ಯಾಯಮೂರ್ತಿ ನೇಮಕಕ್ಕೇ 39 ವರ್ಷಗಳು ಬೇಕಾದವು. ನ್ಯಾಯಮೂರ್ತಿ ಫಾತಿಮಾ ಬೀವಿ ನೇಮಕಗೊಂಡಿದ್ದು 1989ರಲ್ಲಿ . ನಂತರ ಎರಡನೇ ನ್ಯಾಯಮೂರ್ತಿ ನೇಮಕಕ್ಕೆ ಮತ್ತೆ 7 ವರ್ಷಗಳು ಕಾಯಬೇಕಾಯಿತು. ನ್ಯಾಯಮೂರ್ತಿ ಸುಜಾತಾ ವಿ.ಮನೋಹರ್ ನೇಮಕವಾದದ್ದು 1994ರಲ್ಲಿ. ನಂತರದ 24 ವರ್ಷಗಳಲ್ಲಿ ಕೇವಲ ಆರು ಮಹಿಳಾ ನ್ಯಾಯಮೂರ್ತಿಗಳು ನೇಮಕಗೊಂಡಿದ್ದಾರೆ. ದುಡಿಯುವ ಸ್ಥಳಗಳಲ್ಲಿಲೈಂಗಿಕ ಕಿರುಕುಳ ವಿಚಾರದ ವಿಚಾರಣೆ ನಡೆಸಿ ವಿಶಾಖಾ ಮಾರ್ಗದರ್ಶಿ ಸೂತ್ರಗಳ ಬಗ್ಗೆ ತೀರ್ಪು ನೀಡಿದ ಮೂವರು ನ್ಯಾಯಮೂರ್ತಿಗಳ ಪೀಠದಲ್ಲಿ ಒಬ್ಬರಾಗಿದ್ದವರು ನ್ಯಾಯಮೂರ್ತಿ ಸುಜಾತಾ ವಿ.ಮನೋಹರ್. 1997ರಲ್ಲಿ ಈ ಮಹತ್ವದ ತೀರ್ಪು ಹೊರಬಿದ್ದಿತ್ತು. 1999ರಲ್ಲಿ ನ್ಯಾಯಮೂರ್ತಿ ಸುಜಾತಾ ಮನೋಹರ್ ಅವರು ನಿವೃತ್ತಿಯಾದ ನಂತರ 2000ದಲ್ಲಿ ನ್ಯಾಯಮೂರ್ತಿ ರುಮಾ ಪಾಲ್ ನೇಮಕಗೊಂಡರು. 2006ರಲ್ಲಿ ಅವರ ನಿವೃತ್ತಿಯ ನಂತರ 2010ರಲ್ಲಿ ನ್ಯಾಯಮೂರ್ತಿ ಗ್ಯಾನ್‌ ಸುಧಾ ಮಿಶ್ರಾ ಅವರ ನೇಮಕವಾಗುವವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಯೇ ಇರಲಿಲ್ಲ.

ADVERTISEMENT

ಹೆಸರಿಗೊಬ್ಬರು ಎಂಬಂತೆ ಸಾಂಕೇತಿಕವಾಗಿ ಒಬ್ಬೊಬ್ಬರೇ ಮಹಿಳಾ ನ್ಯಾಯಮೂರ್ತಿ ಇರುತ್ತಿದ್ದ ವ್ಯವಸ್ಥೆ, 2011ರಲ್ಲಿ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇಮಕದೊಂದಿಗೆ ಬದಲಾಯಿತು. ಸುಪ್ರೀಂ ಕೋರ್ಟ್‌ನಲ್ಲಿ ಪ್ರಥಮ ಬಾರಿಗೆ ಇಬ್ಬರು ಮಹಿಳಾ ನ್ಯಾಯಮೂರ್ತಿಗಳಾದ ಗ್ಯಾನ್‌ ಸುಧಾ ಮಿಶ್ರಾ ಹಾಗೂ ರಂಜನಾ ಪ್ರಕಾಶ್ ದೇಸಾಯಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಪ್ರಾಪ್ತವಾಯಿತು. 2014ರ ಏಪ್ರಿಲ್‌ನಲ್ಲಿ ನ್ಯಾಯಮೂರ್ತಿ ಗ್ಯಾನ್‌ ಸುಧಾ ಮಿಶ್ರಾ ಅವರ ನಿವೃತ್ತಿಯೊಂದಿಗೆ ನ್ಯಾಯಮೂರ್ತಿ ರಂಜನಾ ದೇಸಾಯಿ, ಮತ್ತೆ ಸ್ವಲ್ಪ ಕಾಲ ಒಬ್ಬರೇ ಮಹಿಳಾ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದರು. 2014ರ ಆಗಸ್ಟ್‌ನಲ್ಲಿ ನ್ಯಾಯಮೂರ್ತಿ ಆರ್‌. ಭಾನುಮತಿ ಅವರು ನೇಮಕಗೊಂಡ ನಂತರ ಮತ್ತೆ ಇಬ್ಬರು ಮಹಿಳಾ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ನಲ್ಲಿ ಏಕಕಾಲಕ್ಕೆ ಕಾರ್ಯನಿರ್ವಹಿಸಿದಂತಾಯಿತು. 2014ರಲ್ಲಿ ನ್ಯಾಯಮೂರ್ತಿ ರಂಜನಾ ದೇಸಾಯಿ ನಿವೃತ್ತಿಯೊಂದಿಗೆ, ನ್ಯಾಯಮೂರ್ತಿ ಭಾನುಮತಿ ಅವರು ಮತ್ತೆ ಏಕೈಕ ಮಹಿಳಾ ನ್ಯಾಯಮೂರ್ತಿಯಾಗಿದ್ದರು. ಈ ವರ್ಷ ಏಪ್ರಿಲ್‌ನಲ್ಲಿ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಹಾಗೂ ಈಗ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇಮಕದೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ ಎಂಬುದು ಹೊಸ ದಾಖಲೆ.‌‌‌‌‌‌ ವಕೀಲರಾಗಿದ್ದವರು ನೇರವಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾದ ಪ್ರಥಮ ಮಹಿಳೆ ಎಂಬ ಅಭಿದಾನವೂ ಇಂದು ಮಲ್ಹೋತ್ರಾ ಅವರಿಗೆ ಸಲ್ಲುತ್ತದೆ. ಆದರೆ ಈಗಿರುವ 25 ಮಂದಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಮೂವರು ಮಾತ್ರ ಮಹಿಳೆಯರು ಎಂದರೆ ಕೇವಲ ಶೇ 12.

ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿರುವ ಸಮಾನತೆಯ ತತ್ವಗಳನ್ನು ಎತ್ತಿಹಿಡಿಯುತ್ತಾ ತೀರ್ಪುಗಳನ್ನು ನೀಡುವ ಸುಪ್ರೀಂ ಕೋರ್ಟ್ ಕೂಡ ಪುರುಷಮಯವಾಗಿದೆ ಎಂಬುದೇ ಸಂವಿಧಾನದ ಅಣಕ. ಇದನ್ನು ಸರಿಪಡಿಸುವಲ್ಲಿ ಕಾಳಜಿಯೂ ವ್ಯಕ್ತವಾಗದಿರುವುದು ವಿಪರ್ಯಾಸ. ನೇಮಕಾತಿ ಹಾಗೂ ಬಡ್ತಿ ವಿಚಾರಗಳಲ್ಲಿ ಮಹಿಳೆ ವಿರುದ್ಧ ವ್ಯಕ್ತವಾಗುವ ಪೂರ್ವಗ್ರಹಗಳನ್ನು ಹಲವು ಪ್ರಮುಖ ವಕೀಲರು ಹಾಗೂ ನ್ಯಾಯಮೂರ್ತಿಗಳು ವಿವರಿಸಿರುವುದು ದಾಖಲಾಗಿದೆ. ಈ ವರ್ಷ ಫೆಬ್ರುವರಿ ತಿಂಗಳಲ್ಲಿ ಬಿಡುಗಡೆಯಾದ ‘ವಿಧಿ– ಸೆಂಟರ್ ಫಾರ್‌ ಲೀಗಲ್ ಪಾಲಿಸಿ’ ವರದಿಯಲ್ಲಿ ಈ ಕೆಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ನ್ಯಾಯಮೂರ್ತಿ ಹುದ್ದೆಗೆ ತಾವು ಶಿಫಾರಸು ಮಾಡಿದ ಮಹಿಳಾ ವಕೀಲರನ್ನು ಆಕೆ ‘ಒರಟು’ (ರೂಡ್) ಎಂಬ ನೆಲೆಯಲ್ಲಿ ತಿರಸ್ಕರಿಸಲಾಗಿತ್ತು ಎಂಬುದನ್ನು ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ. ಷಾ ವಿವರಿಸಿದ್ದರು. ಆದರೆ ಅಂತಹದೇ ವರ್ತನೆ ಪ್ರದರ್ಶಿಸಿದ ಪುರುಷ ವಕೀಲನ ಬಗ್ಗೆ ಅಷ್ಟು ಕೆಟ್ಟದಾಗಿ ತೀರ್ಪು ನೀಡಿಬಿಡುವುದಿಲ್ಲ ಎಂಬ ಮಾತನ್ನೂ ಅವರು ಹೇಳಿದ್ದರು. ತಮ್ಮ ನೇತೃತ್ವದ ಪೀಠ ನೀಡಿದ ತೀರ್ಪುಗಳನ್ನು ಮತ್ತೊಂದು ದೊಡ್ಡ ಪೀಠ ಎತ್ತಿ ಹಿಡಿದಾಗಲಷ್ಟೇ ಅದನ್ನು ಗುರುತಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ನಮತ್ತೊಬ್ಬರು ನಿವೃತ್ತ ಮಹಿಳಾ ನ್ಯಾಯಮೂರ್ತಿ ಹೇಳಿಕೊಂಡಿದ್ದರು. ಮತ್ತೊಬ್ಬರು ಮಹಿಳಾ ನ್ಯಾಯಮೂರ್ತಿ ಒಮ್ಮೆ ತಮ್ಮ ಸಹೋದ್ಯೋಗಿ ನ್ಯಾಯಮೂರ್ತಿಗೆ ರೇಗಬೇಕಾಯಿತು. ವಿಚಾರದ ಬಗೆಗಿನ ತಮ್ಮ ಗ್ರಹಿಕೆಯನ್ನು ಸದಾ ಪ್ರಶ್ನಿಸುತ್ತಿದ್ದ ಆ ಪುರುಷ ಸಹೋದ್ಯೋಗಿಗೆ ಅವರು ಗಟ್ಟಿಯಾಗಿ ಈ ಮಾತು ಹೇಳಬೇಕಾಯಿತು…‘ಜಡ್ಜ್‌ ಅನ್ನು ‘ಜಡ್ಜ್‌’ ಮಾಡುವುದು ನಿಲ್ಲಿಸಿ. ವಿಚಾರದ ‘ಜಡ್ಜ್ ’ ಮಾಡಿ’.

ಬಡ್ತಿ ನೀಡುವಾಗಲಂತೂ ಪುರುಷ ನ್ಯಾಯಮೂರ್ತಿಗಳಿಗೆ ಹೋಲಿಸಿದರೆ ಮಹಿಳೆಯರ ವಿಚಾರದಲ್ಲಿ ಉನ್ನತ ಮಾನದಂಡಗಳನ್ನು ಅಳವಡಿಸಿ ಅಳೆಯಲಾಗುತ್ತದೆ ಎಂದು ನ್ಯಾಯಮೂರ್ತಿ ಗ್ಯಾನ್‌ ಸುಧಾ ಮಿಶ್ರಾ ಹೇಳಿದ್ದರು. ನ್ಯಾಯಮೂರ್ತಿ ರುಮಾ ಪಾಲ್ ಅವರು ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಬೇಕಿತ್ತು. ಆದರೆ ಪುರುಷ ಸಹೋದ್ಯೋಗಿಯೊಬ್ಬರ ಜೊತೆಗೇ ನೇಮಕಗೊಂಡಿದ್ದರೂ ರುಮಾ ಪಾಲ್‌ ಅವರು ಬೇರೊಂದು ದಿನ ಪ್ರಮಾಣ ವಚನ ಸ್ವೀಕರಿಸಿದ್ದರೆಂಬುದು ಅವರಿಗೆ ಈ ಹುದ್ದೆ ತಪ್ಪಲು ಕುಂಟುನೆಪವಾಯಿತು. ರುಮಾ ಪಾಲ್ ಅವರು ಆರು ವರ್ಷಗಳ ಸುದೀರ್ಘ ಅವಧಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ ಮಹಿಳೆ ಎಂಬುದು ಈಗಲೂ ದಾಖಲೆಯಾಗಿ ಉಳಿದಿದೆ. ಸಾಂವಿಧಾನಿಕ ಕಾನೂನು, ಕುಟುಂಬ ಕಾನೂನು, ತೆರಿಗೆ ಕಾನೂನು ಕ್ಷೇತ್ರಗಳಲ್ಲಿ ಅವರ ತೀರ್ಪುಗಳು ಅವರ ಶೈಕ್ಷಣಿಕ ವಿದ್ವತ್ತಿಗೆ ಸಾಕ್ಷಿ. ನ್ಯಾಯಾಂಗ ನೇಮಕಾತಿಗಳಲ್ಲಿ ಪಾರದರ್ಶಕತೆಯ ಕೊರತೆಯನ್ನು ಅವರು ಬಹಿರಂಗವಾಗಿ ಟೀಕಿಸಿಯೂ ಇದ್ದಾರೆ.

ಕಾನೂನು ವೃತ್ತಿಗೆ ಪ್ರವೇಶ ಪಡೆಯುವ ಮಹಿಳೆಯರ ಪ್ರಮಾಣ ಪುರುಷರಿಗೆ ಸಮಾನವಾಗಿಯೇ ಇರುತ್ತದೆ. ಆದರೆ ವೃತ್ತಿಯ ಏಣಿಯ ಮೆಟ್ಟಿಲುಗಳನ್ನು ಏರುತ್ತಾ ಸಾಗಿದಂತೆ, ವಕೀಲಿಕೆ ವೃತ್ತಿಗೆ ಅರ್ಧಕ್ಕೇ ತಿಲಾಂಜಲಿ ನೀಡುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತದೆ. ಉನ್ನತ ಮಟ್ಟಕ್ಕೆ ಚಲಿಸುವಲ್ಲಿನ ಸಾಂಸ್ಥಿಕ ಸಂಕೀರ್ಣತೆಗಳನ್ನು ದಾಟುವಲ್ಲಿ ಮಹಿಳೆ ಹಿಂದುಳಿಯುವುದು ಆರಂಭವಾಗುತ್ತದೆ. ಉನ್ನತ ನ್ಯಾಯಾಂಗಕ್ಕೆ ಸೇರ್ಪಡೆಯಾದ ಮೇಲೂ ಮಹಿಳೆಯರನ್ನು ಹೆಚ್ಚು ಕಠಿಣವಾಗಿ ನಿರಂತರವಾಗಿ ಅವರ ಕೆಲಸದ ಮೇಲೆ ಪರಿವೀಕ್ಷಣೆ ನಡೆಸುತ್ತಾ ತೀರ್ಪು ನೀಡಲಾಗುತ್ತಲೇ ಇರುತ್ತದೆ. ಬರೀ ಮಹಿಳಾ ನ್ಯಾಯಮೂರ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಅಷ್ಟೇ ಸಾಕೇ? ಅವರಿಗೆ ಸಾಂವಿಧಾನಿಕವಾಗಿ ಮುಖ್ಯವಾಗುವ ಪ್ರಕರಣಗಳನ್ನು ಹಂಚಿಕೆ ಮಾಡುವುದೂ ಅಷ್ಟೇ ಮುಖ್ಯ. ‘ತ್ರಿವಳಿ ತಲಾಖ್ ಅಸಾಂವಿಧಾನಿಕ, ಇಸ್ಲಾಮ್ ವಿರೋಧಿ’ ಎಂದು ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠದಲ್ಲಿ ಮಹಿಳಾ ನ್ಯಾಯಮೂರ್ತಿ ಇರಲಿಲ್ಲ. ಐವರು ನ್ಯಾಯಮೂರ್ತಿಗಳೂ ವಿಭಿನ್ನ ಧರ್ಮಗಳಿಗೆ ಸೇರಿದವರೆಂದು ಬಹಳಷ್ಟು ವಿಶ್ಲೇಷಣೆಗಳನ್ನು ನಡೆಸಲಾಯಿತು. ಆದರೆ ಈ ಪೀಠದಲ್ಲಿ ಮಹಿಳಾ ನ್ಯಾಯಮೂರ್ತಿ ಇರಲಿಲ್ಲ ಎಂಬ ಬಗ್ಗೆ ಹೆಚ್ಚಿನ ಟೀಕೆಟಿಪ್ಪಣಿಗಳಾಗಲೀ, ವ್ಯಾಖ್ಯಾನಗಳಾಗಲೀ ಬರಲಿಲ್ಲ. ಹಾಗೆಯೇ ‘ಖಾಸಗಿತನ ಎಂಬುದು ಮೂಲಭೂತ ಹಕ್ಕು’ ಎಂಬಂಥ ಈ ಕಾಲದ ಅತ್ಯಂತ ಮುಖ್ಯವಾದ ತೀರ್ಪನ್ನು ಒಂಬತ್ತು ನ್ಯಾಯಮೂರ್ತಿಗಳಿದ್ದ ಪೀಠ ನೀಡಿತು. ಈ ಪೀಠದಲ್ಲೂ ಮಹಿಳೆ ಇರಲಿಲ್ಲ. ಮಹಿಳಾ ನ್ಯಾಯಮೂರ್ತಿಗಳು ವಿಭಿನ್ನ ಅನುಭವವನ್ನು ಪೀಠಕ್ಕೆ ತರುವುದು ಸಾಧ್ಯವಿದೆ ಎಂಬುದನ್ನು ಕಡೆಗಣಿಸುವುದು ಸಮಾಜದಲ್ಲಿ ಅಂತರ್ಗತವಾಗಿದೆ.

ಮಹಿಳೆಯರೂ ಸ್ವತಃ ತಮ್ಮ ಹಕ್ಕುಗಳ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿರುವ ದಿನಮಾನಗಳು ಇವು.ಮುಟ್ಟನ್ನು ಸೂತಕವಾಗಿ ಪರಿಗಣಿಸಿ ಮಹಿಳೆಗೆ ಶಬರಿಮಲೆಪ್ರವೇಶ ನಿಷೇಧಿಸಬೇಕೆ? ಪಾರ್ಸಿಯೇತರ ವ್ಯಕ್ತಿಯನ್ನು ಮದುವೆಯಾದ ಪಾರ್ಸಿ ಮಹಿಳೆ ತನ್ನ ಸ್ವಂತ ಧರ್ಮದ ಹಕ್ಕು ಕಳೆದುಕೊಳ್ಳುತ್ತಾಳೆಯೇ? ಎಂಬಂತಹ ವಿಚಾರಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಪ್ರಕ್ರಿಯೆಯಲ್ಲಿವೆ. ಮಹಿಳಾ ಹಕ್ಕುಗಳನ್ನು ಎತ್ತಿ ಹಿಡಿದಿರುವ ಅನೇಕ ತೀರ್ಪುಗಳನ್ನು ಪುರುಷ ನ್ಯಾಯಮೂರ್ತಿಗಳು ನೀಡಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಲಿಂಗತ್ವದ ವಿಚಾರದ ಬಗ್ಗೆ ಮಹಿಳಾ ನ್ಯಾಯಮೂರ್ತಿಗಳು ಅನುಕೂಲಕರ ತೀರ್ಪು ನೀಡುತ್ತಾರೆ ಎಂದು ಭಾವಿಸುವುದೂ ಸರಿಯಲ್ಲ. ಹಾಗೆಂದು ಸಾರ್ವಜನಿಕ ಬದುಕಲ್ಲಿ ಮಹಿಳೆ ಉಪಸ್ಥಿತಿ ಕಡೆಗಣನೆಗೆ ಒಳಗಾಗುತ್ತಾ ಸಾಗುವುದು ಎಷ್ಟು ಸರಿ?

ಉನ್ನತ ನ್ಯಾಯಾಂಗದಲ್ಲಿ ಮಹಿಳಾ ನ್ಯಾಯಮೂರ್ತಿಗಳ ಹೆಚ್ಚಿನ ಪ್ರಾತಿನಿಧ್ಯದ ಅಗತ್ಯವನ್ನು ಸಾಂವಿಧಾನಿಕ ಪೀಠದ ಮುಂದೆ 2015ರಲ್ಲಿ ಸುಪ್ರೀಂ ಕೋರ್ಟ್ ವಿಮೆನ್ಸ್ ಲಾಯರ್ಸ್ ಅಸೋಸಿಯೇಷನ್ ಮಂಡಿಸಿತ್ತು. ಆದರೆ ಇದಕ್ಕೆ ಸೂಕ್ತ ಸ್ಪಂದನ ಸಿಗದಿದ್ದುದೂ ನ್ಯಾಯಾಂಗ ವ್ಯವಸ್ಥೆಯ ಸಂವೇದನಾಶೀಲತೆಯ ಕೊರತೆಗೆ ಸಂಕೇತ. ಪ್ರಜಾಪ್ರಭುತ್ವದ ಪ್ರಮುಖ ಅಂಗಗಳಾದ ನ್ಯಾಯಾಂಗ, ಕಾರ್ಯಾಂಗಗಳಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ, ನಿರ್ವಹಿಸಬೇಕಾಗಿರುವ ಆದ್ಯತೆಯ ಸಂಗತಿಗಳಾಗಬೇಕು. ಆದರೆ ‘ದಿ ಮಿಂಟ್‌’ ಪತ್ರಿಕೆಯ ಇತ್ತೀಚಿನ ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ನ ಸಿಡಬ್ಲ್ಯುಸಿ, ಎಐಸಿಸಿ ಹಾಗೂ ಬಿಜೆಪಿಯ ನಿರ್ಣಯ ಕೈಗೊಳ್ಳುವ ಪ್ರಮುಖ ಅಂಗಸಂಸ್ಥೆಗಳಾದ ಎನ್‌ಇ ಹಾಗೂ ಸಂಸದೀಯ ಮಂಡಳಿಗಳು ಪುರುಷ ಕೇಂದ್ರಿತವಾಗುತ್ತಿವೆ. ಕಳೆದ 10 ವರ್ಷಗಳ ಅಂಕಿಅಂಶಗಳ ವಿಶ್ಲೇಷಣೆಯಲ್ಲಿ ಇದು ವ್ಯಕ್ತ.ಎಂದರೆ ರಾಜಕೀಯ ಕಾರ್ಯಾಂಗದಲ್ಲಿ ಮಹಿಳೆ ಅಧಿಕಾರ ಗಳಿಸಿಕೊಳ್ಳುವುದಾದರೂ ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.