ADVERTISEMENT

ಮಾತೃತ್ವ ‘ಮಿಥ್ಯೆ’: ಮುರಿದು ಕಟ್ಟುವ ನಡೆ

ಮಗುವನ್ನು ಹೆರುವುದು ವೃತ್ತಿಗೆ ಅಡ್ಡಿಯಾಗಬೇಕಿಲ್ಲ ಎಂಬಂತಹ ಸಶಕ್ತ ಸಂದೇಶ ಇಲ್ಲಿದೆ

ಸಿ.ಜಿ.ಮಂಜುಳಾ
Published 26 ಜೂನ್ 2018, 18:55 IST
Last Updated 26 ಜೂನ್ 2018, 18:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಳೆದ ವಾರ ಹೆಣ್ಣುಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್ ಪ್ರಧಾನಿ ಜಸಿಂದಾ ಆರ್ಡೆರ್ನ್ ಅವರು ಆರು ವಾರಗಳ ಹೆರಿಗೆ ರಜೆ ಪಡೆದಿದ್ದಾರೆ. ಈ ವೇಳೆ ಉಪಪ್ರಧಾನಿ ವಿನ್ಸ್ಟನ್ ಪೀಟರ್ಸ್ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಮುಖ್ಯ ವಿಷಯಗಳ ತೀರ್ಮಾನ ಕೈಗೊಳ್ಳಬೇಕಾಗಿ ಬಂದಾಗ ತಾನು ಸದಾ ಲಭ್ಯವಿರುವುದಾಗಿಯೂ ಆರ್ಡೆರ್ನ್ ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಹುದ್ದೆಯಲ್ಲಿರುವಾಗ ಮಗುವಿಗೆ ಜನ್ಮ ನೀಡಿದಂತಹ ಎರಡನೇ ಪ್ರಧಾನಿ ಆರ್ಡೆರ್ನ್. ಈ ಮುಂಚೆ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೊ ಅವರೂ ಪ್ರಧಾನಿಯಾಗಿದ್ದಾಗ 1990ರಲ್ಲಿ ತಮ್ಮ ಮಗಳು ಬಕ್ತಾವರ್‌ಗೆ ಜನ್ಮ ನೀಡಿದ್ದರು. 37ರ ಹರೆಯದ ಜಸಿಂದಾ, ನ್ಯೂಜಿಲೆಂಡ್‌ನ ಅತಿ ಕಿರಿಯ ಪ್ರಧಾನಿಯಾಗಿದ್ದು, ಕಳೆದ ವರ್ಷವಷ್ಟೇ ನಡೆದ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.ಜಸಿಂದಾ ಅವರು ಅವಿವಾಹಿತೆ ಹಾಗೂ ತಮ್ಮ ಸಂಗಾತಿಯ ಜೊತೆ ಬದುಕುತ್ತಿದ್ದಾರೆ. ಹೆರಿಗೆ ರಜೆ ಮುಗಿದ ನಂತರ ಅವರ ಸಂಗಾತಿ ಮಗುವಿನ ಪಾಲನೆಯ ಹೆಚ್ಚಿನ ಹೊಣೆ ಹೊತ್ತುಕೊಳ್ಳಲಿದ್ದಾರೆ. ಟಿ.ವಿ. ನಿರೂಪಕರಾಗಿದ್ದ ಅವರು ಸದ್ಯಕ್ಕೆ ಮನೆಯಲ್ಲೇ ಇರುವ ತಂದೆ. ಬಸಿರು ಹಾಗೂ ತಾಯ್ತನವನ್ನು ತನ್ನದೇ ದೃಢತೆಯಲ್ಲಿ ಸ್ವೀಕರಿಸುವ ರಾಜಕೀಯ ನಾಯಕಿಯಾಗಿಆರ್ಡೆರ್ನ್ ಅವರು ಹೊಸದೊಂದು ಮಾದರಿ ಕಟ್ಟಿದ್ದಾರೆ ಎಂಬುದು ಇಲ್ಲಿ ಮುಖ್ಯ.ಮಹಿಳೆ ಕುರಿತಾದ ದೃಷ್ಟಿಕೋನ ಹಾಗೂ ಪೂರ್ವಗ್ರಹಗಳ ವಿರುದ್ಧದ ಹೋರಾಟಕ್ಕೆ ಇದು ಅಗತ್ಯ. ಕೋಟ್ಯಂತರ ದುಡಿಯುವ ಮಹಿಳೆಯರಿಗೆ ಇಲ್ಲಿರುವ ಸಂದೇಶ ಒಂದೇ.ಯಾವುದೇ ಕೆಲಸ ಮಾಡುತ್ತಿರಲಿ, ಅದು ದೇಶ ನಡೆಸುವುದೂ ಆಗಿರಬಹುದು, ತಾಯ್ತನ ಎಂಬುದು ವೃತ್ತಿಗೆ ತೊಡಕಾಗಬೇಕಿಲ್ಲ. ಆದರೆ ದುಡಿಯುವ ಸ್ಥಳಗಳಲ್ಲಿ ಪೂರಕ ವಾತಾವರಣ ಹಾಗೂ ಸಮಾಜದ ಬೆಂಬಲ ಬೇಕು ಅಷ್ಟೆ.

ಕಳೆದ ವರ್ಷ ಲೇಬರ್ ಪಕ್ಷದ ನಾಯಕಿಯಾಗಿ ಕಿರಿಯ ವಯಸ್ಸಿನ ಆರ್ಡೆರ್ನ್ ಅವರು ಆಯ್ಕೆಯಾದಾಗ, ಟಿ.ವಿ. ಟಾಕ್ ಷೋಗಳಲ್ಲಿ ತಾಯ್ತನದ ಯೋಜನೆಗಳ ಬಗ್ಗೆ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿತ್ತು. ಭವಿಷ್ಯದ ಕುಟುಂಬದ ಯೋಜನೆಗಳು ತನ್ನ ಖಾಸಗಿ ವಿಚಾರಗಳಾದ್ದರಿಂದ ಆ ಕುರಿತು ಹೇಳಬೇಕಾದ ಅಗತ್ಯವಿಲ್ಲ ಎಂದು ಆಗ ಅವರು ಹೇಳಿದ್ದರು. ‘ಒಬ್ಬ ಪುರುಷ ಇದೇ ಸ್ಥಾನದಲ್ಲಿದ್ದಲ್ಲಿ ಇದೇ ಪ್ರಶ್ನೆಯನ್ನು ಆತನಿಗೂ ಕೇಳುತ್ತೀರಾ’ ಎಂದೂ ಅವರು ಪ್ರಶ್ನಿಸಿದ್ದರು. ಜಗತ್ತು 2017ನೇ ಇಸವಿಯಲ್ಲಿರುವಾಗ ಉದ್ಯೋಗ ಸಂದರ್ಶನಗಳಲ್ಲೂ ಮಹಿಳೆಗೆ ಈ ಬಗೆಯ ಪ್ರಶ್ನೆಗಳನ್ನು ಉದ್ಯೋಗದಾತರು ಕೇಳುವುದು ಸಲ್ಲದು ಎಂಬಂತಹ ಮಾತನ್ನೂ ಅವರು ಟಿ.ವಿ. ಸಂದರ್ಶನದಲ್ಲಿ ಹೇಳಿದ್ದರು. ನಂತರ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಧಾನಿಯಾಗಿಆರ್ಡೆರ್ನ್ ಅವರು ಅಧಿಕಾರ ಸ್ವೀಕರಿಸಿದ್ದಲ್ಲದೆ ಈ ವರ್ಷ ಜನವರಿ ತಿಂಗಳಲ್ಲಿ ತಾನು ಗರ್ಭಿಣಿ ಎಂಬುದನ್ನೂ ಪ್ರಕಟಿಸಿದ್ದರು.ಮಗುವನ್ನು ಹೆರುವುದು ವೃತ್ತಿಗೆ ಅಡ್ಡಿಯಾಗಬೇಕಿಲ್ಲ ಎಂಬಂತಹ ಸಶಕ್ತ ಸಂದೇಶ ಇಲ್ಲಿದೆ. ‘ರಾಷ್ಟ್ರದ ಚುಕ್ಕಾಣಿ ಹಿಡಿದಾಗಲೇ ಮಗುವನ್ನು ಹೆರುವುದು ಈಗಿನಂತೆ ಹೊಸ ಸಂಗತಿ ಆಗದೆ ಮಾಮೂಲಾಗುವಂತಹ ದಿನಗಳೂ ಮುಂದೆ ಬರಲಿ’ ಎಂಬಂತಹ ಆರ್ಡೆರ್ನ್ ಅವರ ಆಶಯ ಸರಿಯಾದುದು.

ನ್ಯೂಜಿಲೆಂಡ್ ಆಡಳಿತ ಮೈತ್ರಿಯ ಭಾಗವಾಗಿರುವ ನ್ಯೂಜಿಲೆಂಡ್ ಗ್ರೀನ್ ಪಾರ್ಟಿಯ ನಾಯಕ ಜೇಮ್ಸ್ ಷಾ ಅವರು ‘ಪ್ರಧಾನಿಯ ಮಗುವಿನ ಜನನ ನ್ಯೂಜಿಲೆಂಡ್ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ’ ಎಂದಿದ್ದಾರೆ. ‘ನ್ಯೂಜಿಲೆಂಡ್‍ನ ಪ್ರಧಾನಿಯಾಗಿ ಅಧಿಕಾರದಲ್ಲಿರುವಾಗಲೇ ಮಗುವನ್ನೂ ಹೆರುವ ಆಯ್ಕೆಯನ್ನು ಹೊಂದಲು ಸಾಧ್ಯವಿದೆ ಎಂಬುದು ನಾವು ಎಂತಹ ರಾಷ್ಟ್ರ ಎಂಬ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ನಾವು ಆಧುನಿಕರು, ಪ್ರಗತಿಪರರು, ಎಲ್ಲರನ್ನೂ ಒಳಗೊಂಡು ಸಮಾನರಾಗಿಯೂ ಇರಬಹುದು ಎಂಬುದನ್ನು ಇದು ಪ್ರತಿಪಾದಿಸುತ್ತದೆ’ ಎಂದೂ ಅವರು ಹೇಳಿದ್ದಾರೆ.ಮಾಜಿ ಪ್ರಧಾನಿ ಹೆಲೆನ್ ಕ್ಲಾರ್ಕ್ ಹೇಳಿರುವ ಮಾತುಗಳಿವು: ‘ವಿಶ್ವಕ್ಕೆ ಇದರಲ್ಲಿ ಏನು ಪಾಠವಿದೆ?ಪ್ರಧಾನಿಯಾಗಿದ್ದುಕೊಂಡೂ ಮಗು ಹೆರುವ ಪ್ರಕ್ರಿಯೆ ನಿರ್ವಹಿಸಿಕೊಳ್ಳುವುದು ಸಾಧ್ಯವಿದೆ. ಪುರುಷರು ಪೂರ್ಣ ಪ್ರಮಾಣದ ಪಾಲಕರಾಗುವುದೂ ಸಾಧ್ಯವಿದೆ’. ‘ಒಬ್ಬ ಮಹಿಳೆಗೆ ಇದು ಸಣ್ಣ ಹೆಜ್ಜೆ. ಆದರೆ ಹೆಣ್ಣುಕುಲಕ್ಕೆ ದೊಡ್ಡ ಜಿಗಿತ. ಸಾಧಾರಣವಾದದ್ದನ್ನು ಮೀರುವಂತಹ ಅಸಾಧಾರಣ ಕ್ಷಣ ಇದು’ ಎಂಬಂತಹ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.

ADVERTISEMENT

ಜಸಿಂದಾ ಆರ್ಡೆರ್ನ್‌ರ ಈ ಅನುಭವಕ್ಕೆ ಹೋಲಿಸಿದರೆ ಬೆನಜೀರ್ ಭುಟ್ಟೊ ಅನುಭವವೇ ಬೇರೆ ರೀತಿಯದು. ವೈರುಧ್ಯ ಎದ್ದು ಕಾಣಿಸುವಂತಹದ್ದು. 1990ರಜನವರಿ 25ರಂದು ಬಕ್ತಾವರ್ ಜನಿಸುವವರೆಗೆ ಬೆನಜೀರ್ ಗರ್ಭವತಿಯಾಗಿದ್ದರೆಂಬುದು ಪಾಕಿಸ್ತಾನದಲ್ಲಿ ಯಾರಿಗೂ ತಿಳಿದಿರಲಿಲ್ಲ. ‘ಪ್ರಧಾನಿ ಶೀಘ್ರದಲ್ಲೇ ತಾಯಿಯಾಗುತ್ತಿದ್ದಾರೆಂಬುದು ಸಂಪುಟದಲ್ಲಿ ಯಾರಿಗೂ ಅರಿವಿರಲಿಲ್ಲ’ ಎಂದು ಅವರ ಸಂಪುಟದ ಸದಸ್ಯರಾಗಿದ್ದ ಜಾವೇದ್ ಜಬ್ಬರ್ ಬಿಬಿಸಿಗೆ ಹೇಳಿದ್ದರು.ಕರಾಚಿ ಆಸ್ಪತ್ರೆಗೆ ರಹಸ್ಯವಾಗಿ ಹೋಗಿ ಸಿಸೇರಿಯನ್ ಹೆರಿಗೆ ಮೂಲಕ ಮಗು ಹೆತ್ತು ಮತ್ತೆ ಕೆಲಸಕ್ಕೆ ಹಾಜರಾದದನ್ನು ಭುಟ್ಟೊ ಹೇಳಿಕೊಂಡಿದ್ದಾರೆ. ತನ್ನನ್ನು ಅಧಿಕಾರದಿಂದ ಪದಚ್ಯುತಗೊಳಿಸಬಹುದೆಂಬ
ಭೀತಿ ಅವರಲ್ಲಿತ್ತು. ‘ಹೆರಿಗೆಯಾದ ಮರುದಿನವೇ ಕರ್ತವ್ಯಕ್ಕೆ ಹಾಜರಾಗಿ ಸರ್ಕಾರಿ ಫೈಲ್‌ಗಳನ್ನು ಓದುತ್ತಾ ಸಹಿ ಹಾಕುವ ಕಾರ್ಯದಲ್ಲಿ ನಿರತಳಾಗಿದ್ದೆ’ ಎಂದು ಬೆನಜೀರ್‌ ಹೇಳಿಕೊಂಡಿದ್ದಾರೆ. ಮುಸ್ಲಿಂ ಬಹುಸಂಖ್ಯಾತರಿರುವ ರಾಷ್ಟ್ರದ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಬೆನಜೀರ್ ಭುಟ್ಟೊ 2007ರಲ್ಲಿ ಹತ್ಯೆಯಾಗಿದ್ದು ಈಗ ಇತಿಹಾಸ.

ತಾಯ್ತನ ಹಾಗೂ ಪೂರ್ಣಾವಧಿ ವೃತ್ತಿಯನ್ನು ಒಟ್ಟಾಗಿ ಸರಿದೂಗಿಸಿಕೊಂಡು ಹೋಗಲಾಗದು ಎಂಬಂತಹ ಸ್ಥಿತಿ ಸಮಾಜದಲ್ಲಿ ಇದ್ದೇ ಇದೆ. ತಾಯ್ತನದ ದಂಡ ತೆತ್ತು ವೃತ್ತಿ ತೊರೆಯುವವರ ನಿದರ್ಶನಗಳೂ ಸರ್ವೇಸಾಮಾನ್ಯ ವಿದ್ಯಮಾನ ಎಂಬಂತಾಗಿದೆ.ವಿಶ್ವದಾದ್ಯಂತ ಮಗುವಿನ ಪಾಲನೆ ತಾಯಿಯದೇ ಹೊಣೆಯಾಗಿದೆ. ಆದರೆ ಇಂತಹ ಮನೋಭಾವಗಳಲ್ಲಿ ದಶಕಗಳ ಕಾಲದ ಸ್ತ್ರೀವಾದಿ ಚಳವಳಿಯಿಂದಾಗಿ ಬದಲಾವಣೆಗಳೂ ಕಾಣಿಸಿಕೊಳ್ಳುತ್ತಿರುವಂತಹ ಸಂಕ್ರಮಣ ಕಾಲ ಇದು. ಆದರೆ ಈ ಬೆಳವಣಿಗೆಗಳನ್ನು ಪಾಕಿಸ್ತಾನದ ಕ್ರಿಕೆಟ್ ಆಟಗಾರ ಹಾಗೂ ರಾಜಕೀಯ ನಾಯಕ ಇಮ್ರಾನ್ ಖಾನ್ ಇತ್ತೀಚೆಗೆ ತುಚ್ಛವಾಗಿ ಕಂಡಿರುವುದು ಅಸಂಗತ. ‘ಮಕ್ಕಳ ಮೇಲೆ ತಾಯಿಯ ಪ್ರಭಾವ ಅತಿ ಹೆಚ್ಚಿನದು… ಸ್ತ್ರೀವಾದಿ ಚಳವಳಿ ಎಂಬ ಈ ಪಾಶ್ಚಿಮಾತ್ಯ ಪರಿಕಲ್ಪನೆಯನ್ನು ನಾನು ಒಪ್ಪುವುದಿಲ್ಲ. ಇದು ತಾಯಿಯ ಪಾತ್ರವನ್ನು ಕೆಳದರ್ಜೆಗೆ ಇಳಿಸುತ್ತದೆ. ನನ್ನ ಬದುಕಿನ ಮೇಲೆ ನನ್ನ ತಾಯಿಯ ಪಾತ್ರ ದೊಡ್ಡದು’ ಎಂದು ಇತ್ತೀಚೆಗೆ ಟಿ.ವಿ. ಸಂದರ್ಶನವೊಂದರಲ್ಲಿ ಅವರು ಹೇಳಿದ್ದು ಪಾಕಿಸ್ತಾನದಲ್ಲಿ ದೊಡ್ಡ ವಿವಾದವಾಯಿತು. ಪಾಕಿಸ್ತಾನ ಸೆನೆಟ್‌ನ ಪ್ರತಿಪಕ್ಷದ ನಾಯಕಿ ಶೆರ‍್ರಿ ರೆಹಮಾನ್ ಅವರು ‘ಮಕ್ಕಳ ಪಾಲನೆಯಲ್ಲಿರುವ ದ್ವಿಮುಖ ಧೋರಣೆಗೆ ಸ್ತ್ರೀವಾದ ವಿರೋಧವಾಗಿದೆ ಅಷ್ಟೆ. ತಾಯಿಯ ಪಾತ್ರವನ್ನು ಸ್ತ್ರೀವಾದ ಕೆಳಮಟ್ಟಕ್ಕೆ ಇಳಿಸುವುದಿಲ್ಲ. ತಂದೆಗಿರುವ ಜವಾಬ್ದಾರಿಯನ್ನೂ ನೆನಪಿಸುತ್ತದೆ’ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆದ ವಾಗ್ವಾದಗಳಲ್ಲಿಒಂದು ಟ್ವೀಟ್ ಹೀಗಿದೆ: ‘ಸ್ತ್ರೀವಾದ ತಾಯ್ತನವನ್ನು ಎಂದೂ ಕೀಳಾಗಿ ನೋಡುವುದಿಲ್ಲ. ಮಕ್ಕಳನ್ನು ನೋಡಿಕೊಳ್ಳುವುದಕ್ಕಾಗಿ ತಾಯಂದಿರು ಉದ್ಯೋಗ ಬಿಡುವುದನ್ನು ತಪ್ಪಿಸಲು ವೇತನಸಹಿತ ರಜೆ ಸೇರಿದಂತೆ ಹಲವು ಕಾನೂನುಗಳು ಹಾಗೂ ಸುರಕ್ಷತಾ ವ್ಯವಸ್ಥೆ ರೂಪುಗೊಳ್ಳಲು ಸ್ತ್ರೀವಾದಿಗಳು ಕಾರ್ಯನಿರ್ವಹಿಸಿದ್ದಾರೆ. ಇದನ್ನು ಮೊದಲು ತಿಳಿದುಕೊಳ್ಳಿ’.

ಇಮ್ರಾನ್ ಖಾನ್ ಅಧ್ಯಕ್ಷರಾಗಿರುವ ಪಾಕಿಸ್ತಾನ ತೆಹ್ರೀಕ್-ಎ- ಇನ್ಸಾಫ್ (ಪಿಟಿಐ) ಪಕ್ಷ ಪಾಕಿಸ್ತಾನದಲ್ಲಿಸದ್ಯದಲ್ಲೇ ನಡೆಯಲಿರುವ ಚುನಾವಣೆಯಲ್ಲಿ ಪ್ರಮುಖ ಸ್ಪರ್ಧಿಯಾಗಿದೆ.ಆದರೆ ಕಳೆದ ಕೆಲವು ತಿಂಗಳುಗಳಿಂದ ಪಿಟಿಐ ಹಲವು ವಿವಾದಗಳ ಕೇಂದ್ರಬಿಂದುವಾಗಿದೆ. ಈಗ ತಾಯ್ತನ ಕುರಿತಂತಹ ಮಾತುಗಳೂ ವ್ಯಾಪಕ ಟೀಕೆಗಳಿಗೆ ಕಾರಣವಾಗಿವೆ. ಈ ಹೇಳಿಕೆ ವಿರೋಧಿಸಿ ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ ‘ಡಾನ್‍’ ಸಂಪಾದಕೀಯವನ್ನೂ ಬರೆದಿದೆ.

ಪ್ರಪಂಚದ ಎಲ್ಲೆಡೆ ಮಹಿಳೆ ಕುರಿತಾಗಿ ಈ ಬಗೆಯ ದ್ವಿಮುಖ ಧೋರಣೆಗಳು ಪ್ರದರ್ಶಿತವಾಗುತ್ತಲೇ ಇರುತ್ತವೆ.ಮಕ್ಕಳಿಲ್ಲದ ಮಹಿಳಾ ರಾಜಕಾರಣಿಗಳನ್ನೂ ಸುಮ್ಮನೆ ಬಿಡುವುದಿಲ್ಲ ಎಂಬುದು ಮತ್ತೊಂದು ವಿಪರ್ಯಾಸ. ಆಸ್ಟ್ರೇಲಿಯಾದಲ್ಲಿ ಮಾಜಿ ಪ್ರಧಾನಿ ಜೂಲಿಯಾ ಗಿಲ್ಲರ್ಡ್ ಅವರಿಗೆ ಮಕ್ಕಳಿಲ್ಲ ಎಂದು ನಿಯಮಿತವಾಗಿ ಟೀಕಿಸಲಾಗುತ್ತಿತ್ತು. ಒಬ್ಬ ಸೆನೆಟರ್ ಅಂತೂ ‘ಆಕೆ ಉದ್ದೇಶಪೂರ್ವಕವಾಗಿ ಬಂಜೆಯಾಗಿದ್ದಾರೆ’ ಎಂದು ಹೇಳಿದ್ದರು. ಹಾಗೆಯೇ ಡೇವಿಡ್ ಕ್ಯಾಮರೊನ್ ನಂತರ ಬ್ರಿಟನ್ ಪ್ರಧಾನಿ ಯಾರೆಂಬ ಚರ್ಚೆ ನಡೆದಿದ್ದಾಗ, ತೆರೆಸಾ ಮೇ ಅವರಿಗೆ ಮಕ್ಕಳಿಲ್ಲದ ಕಾರಣ ಪ್ರಧಾನಿಯಾಗಲು ತನಗೆ ಹೆಚ್ಚು ಅರ್ಹತೆ ಇದೆ ಎಂದು ಮಾಜಿ ಸಚಿವೆ ಆಂಡ್ರಿಯಾ ಲೀಡ್‌ಸಮ್ ಹೇಳಿದ್ದು ವರದಿಯಾಗಿತ್ತು. ಏಕೆಂದರೆ ತಮಗೆ ಮಕ್ಕಳಾಗುವ ಸಾಧ್ಯತೆ ಇಲ್ಲ ಎಂದು ಮೇ ಇದಕ್ಕೂ ಮುಂಚೆ ಸಾರ್ವಜನಿಕವಾಗಿ ಹೇಳಿಕೊಂಡಿದ್ದರು. ಮತಪೆಟ್ಟಿಗೆಯನ್ನು ಇಟ್ಟಿರುವ ತೊಟ್ಟಿಲ ಸುತ್ತ ಸ್ಕಾಟ್‍ಲೆಂಡ್‍ನ ಆಡಳಿತ ಪಕ್ಷದ ನಾಯಕಿ (ಫಸ್ಟ್ ಮಿನಿಸ್ಟರ್) ನಿಕೊಲಾ ಸ್ಟರ್ಜನ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಹಾಗೂ ಬ್ರಿಟನ್‌ನ ಲೇಬರ್ ಪಕ್ಷದ ಎಂಪಿ ಲಿಜ್ ಕೆಂಡಾಲ್ ನಿಂತಿರುವ ಚಿತ್ರವನ್ನು ‘ನ್ಯೂ ಸ್ಟೇಟ್ಸ್‌ಮನ್’ಪತ್ರಿಕೆ ತನ್ನ ಮುಖಪುಟದಲ್ಲಿ 2015ರಲ್ಲಿ ಪ್ರಕಟಿಸಿತ್ತು. ಆ ಮುಖಪುಟದ ವರದಿಯ ಶೀರ್ಷಿಕೆ ಹೀಗಿತ್ತು: ‘ತಾಯ್ತನದ ಬಲೆ; ಅನೇಕ ಯಶಸ್ವಿ ಮಹಿಳೆಯರಿಗೆ ಮಕ್ಕಳಿಲ್ಲ ಏಕೆ?’ ಆದರೆ 2011ರಲ್ಲಿ 40ನೇ ವಯಸ್ಸಿನಲ್ಲಿ ತನಗೆ ಗರ್ಭಪಾತವಾಗಿದ್ದ (ಮಿಸ್‌ಕ್ಯಾರಿಯೇಜ್) ವಿಚಾರವನ್ನು ಸ್ಟರ್ಜನ್ ಕಳೆದ ವರ್ಷ ಮೊದಲಬಾರಿಗೆ ಹೇಳಿಕೊಂಡರು. ‘ಆ ನೋವಿನ ಅನುಭವವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಸುಲಭವಲ್ಲ. ಆದರೆ ಮಕ್ಕಳಿಲ್ಲದ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಲ್ಲಿಸಲು ಹಾಗೂ ಗರ್ಭಪಾತದ ಸುತ್ತಲಿನ ಅಸ್ಪೃಶ್ಯತಾ ಭಾವವನ್ನು ಮುರಿಯುವುದು ಇದರ ಉದ್ದೇಶ’ ಎಂದೂ ಅವರು ಆಗ ಹೇಳಿದ್ದರು.

ಮಗುವಿನ ಪಾಲನೆಯಲ್ಲಿ ಮಹಿಳೆಯೇ ನಿರ್ವಹಿಸಬೇಕಾದ ಕೆಲವು ಹೊಣೆಗಾರಿಕೆಗಳೂ ಇವೆ ಎಂಬುದೂ ನಿಜ. ಆದರೆ ಆ ಹೊಣೆಗಾರಿಕೆ ನಾಯಕತ್ವದ ಪಾತ್ರಕ್ಕೆ ಅಡ್ಡಿಯಾಗಬೇಕಿಲ್ಲ ಎಂಬುದನ್ನು ಇತ್ತೀಚೆಗೆಇಬ್ಬರು ಮಹಿಳಾ ರಾಜಕಾರಣಿಗಳು ಸಾಬೀತುಮಾಡಿದ್ದಾರೆ.ಐಸ್‌ಲ್ಯಾಂಡ್‌ನ ಎಂಪಿ ಉನ್ನುರ್ ಬ್ರಾ ಕೊನ್ರಾಡ್ಸ್‌ಡೊಟಿರ್ ಹಾಗೂ ಆಸ್ಟ್ರೇಲಿಯಾದ ಮಾಜಿ ಸೆನಟರ್ ಲಾರಿಸ್ಸಾ ವಾಟರ್ಸ್ ಇಬ್ಬರೂ ತಮ್ಮ ರಾಷ್ಟ್ರಗಳ ಸಂಸತ್‌ಗಳಲ್ಲಿ ಭಾಷಣ ಮಾಡುವಾಗ ತಂತಮ್ಮ ಮಕ್ಕಳಿಗೆ ಎದೆ ಹಾಲೂಡಿ ಹೊಸ ಇತಿಹಾಸ ನಿರ್ಮಿಸಿದ್ದರು. ‘ದಯವಿಟ್ಟು ದಿಟ್ಟಿಸಿ ನೋಡಬೇಡಿ, ನಾವು ಮೊಲೆಹಾಲೂಡಬೇಕು’ ಎಂಬಂತಹ ಚಿತ್ರಶೀರ್ಷಿಕೆಯೊಂದಿಗೆ ರೂಪದರ್ಶಿ,ನಟಿ, ಕವಯಿತ್ರಿ ಗಿಲು ಜೋಸೆಫ್‌ ಮಗುವಿಗೆ ಎದೆ ಹಾಲುಣಿಸುತ್ತಿರುವ ಚಿತ್ರವನ್ನು ಪ್ರಕಟಿಸಿದ್ದ ಮಲಯಾಳಂ ಪತ್ರಿಕೆ ‘ಗೃಹಲಕ್ಷ್ಮಿ’ ಕೆಲವರ ಕೆಂಗಣ್ಣಿಗೆ ಕಾರಣವಾದದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಆದರೆ, ಅಶ್ಲೀಲತೆ ನೋಡುವವರ ಕಣ್ಣಲ್ಲಿದೆ ಎಂದು ಕೇರಳ ಹೈಕೋರ್ಟ್ ಕಳೆದವಾರ ತೀರ್ಪು ನೀಡಿದೆ. ಎಂದರೆ,ತಾಯ್ತನದ ವಾಸ್ತವ ಅನುಭವಗಳಿಗಿಂತ ತಾಯ್ತನ ಕುರಿತಾದ ಪಿತೃಪ್ರಧಾನ ನಂಬಿಕೆಗಳು ಮಹಿಳಾ ದಮನದ ಮೂಲ ಎಂದು ವ್ಯಾಖ್ಯಾನಿಸುವಆಡ್ರೀನ್ ರಿಚ್ ವಾದ ಇಲ್ಲಿ ಪ್ರಸ್ತುತ. ಹೀಗಾಗಿ ಸಾಂಸ್ಕೃತಿಕವಾಗಿ ಬದಲಾವಣೆಗಳಾಗಬೇಕಿದ್ದು ಅದಕ್ಕೆ ಪೂರಕವಾದ ಸಾರ್ವಜನಿಕ ನೀತಿಗಳೂ ಬೇಕಿವೆ. ಭಾರತದಲ್ಲೂ ಪಿತೃತ್ವ ರಜೆ ನೀಡುವ ಬಗ್ಗೆ ಕಾನೂನು ರೂಪಿಸುವ ಮಾತುಗಳು ಇತ್ತೀಚೆಗೆ ಕೇಳಿಬಂದಿವೆ. ಆದರೆ 26 ವಾರಗಳ ವೇತನ ಸಹಿತ ಹೆರಿಗೆ ರಜೆ ನೀಡಬೇಕಾದ ಹೊಸ ಕಾನೂನು ರಾಷ್ಟ್ರದಲ್ಲಿ ಜಾರಿಗೆ ಬಂದ ನಂತರ ಕಂಪೆನಿಗಳಲ್ಲಿ ಮಹಿಳೆಯರ ಉದ್ಯೋಗ ನೇಮಕಾತಿ ಇಳಿಮುಖವಾಗುತ್ತಿದೆ ಎಂಬುದು ಹೊಸ ವರದಿ. ಮಹಿಳೆಯರನ್ನು ಒಳಗೊಳ್ಳಬೇಕೆಂಬ ನೀತಿಗಿಂತ ಕಂಪೆನಿಗಳಿಗೆ ವೆಚ್ಚ ಅಧಿಕವಾಗುತ್ತದೆ ಎಂಬುದು ಇಲ್ಲಿರುವ ತರ್ಕ. ಎಂದರೆ ಮಹಿಳೆ ಪರವಾದ ಕಾನೂನುಗಳ ಲಾಭಗಳೂ ಅವಳಿಗೆ ದಕ್ಕುವುದು ಎಷ್ಟು ಕಷ್ಟ ಎಂಬುದಕ್ಕೆ ಈ ಬೆಳವಣಿಗೆ ಮತ್ತೊಮ್ಮೆ ಸಾಕ್ಷಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.