ADVERTISEMENT

ಇಲ್ಲೇ ಎಲ್ಲೋ ಇರುವ ಗಾಂಧೀಜಿ

ನಟರಾಜ ಹುಳಿಯಾರ್
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST
ಇಲ್ಲೇ ಎಲ್ಲೋ ಇರುವ ಗಾಂಧೀಜಿ
ಇಲ್ಲೇ ಎಲ್ಲೋ ಇರುವ ಗಾಂಧೀಜಿ   

ಮಹಾತ್ಮ ಗಾಂಧೀಜಿಯವರ ಸಿದ್ಧಾಂತ­ಗಳನ್ನು ಭಾರತೀಯ ಜನತಾ ಪಕ್ಷ ಗೌರವದಿಂದ ಕಂಡಿರುವುದಕ್ಕೆ ಹೆಚ್ಚಿನ ಪುರಾವೆ­ಗಳೇನೂ ಇಲ್ಲ! ಆದರೆ ಭಾರತದ ಪ್ರಜಾಪ್ರಭು­ತ್ವದ ಒತ್ತಡಗಳು ಹೇಗಿರುತ್ತವೆಂದರೆ ಗಾಂಧೀಜಿ­­ಯನ್ನು ಬಾಯಿಪ್ರಚಾರಕ್ಕಾದರೂ ನೆನೆಯ­ಬೇಕಾದ ಅನಿವಾರ್ಯ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಈಗ ಎದುರಾಗಿದೆ.

ಈ ಸಲ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಗಾಂಧಿ ಜಯಂತಿಯನ್ನು ‘ಸ್ವಚ್ಛತಾ ದಿನ’ವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ಕರೆ ನೀಡಿದೆ. ಈ ಕರೆಯಲ್ಲಿರುವ ಸ್ವಚ್ಛತೆಯ ವ್ಯಾಖ್ಯಾನ ಅತ್ಯಂತ ಸೀಮಿತವಾಗಿದೆ­ಯಷ್ಟೇ ಅಲ್ಲ, ಗಾಂಧಿ ಮಾರ್ಗವನ್ನು ವಾಚ್ಯವಾ­ಗಿಸಿ ಶಿಥಿಲಗೊಳಿಸುವ ಗುಪ್ತ ಯೋಜನೆಯೂ ಇದರ ಹಿಂದೆ ಇರುವಂತಿದೆ. ಆಶ್ವಾಸನೆ ಮತ್ತು ನಡವಳಿಕೆಗಳ ನಡುವಣ ಅಂತರವನ್ನು ಸಾಧ್ಯವಾ­ದಷ್ಟೂ ಕಡಿಮೆ ಮಾಡಿಕೊಳ್ಳುವುದೇ ವ್ಯಕ್ತಿತ್ವ­ವನ್ನು, ಸಮಾಜವನ್ನು ಸ್ವಚ್ಛಗೊಳಿಸುವ ಹಾದಿ ಎಂಬ ಸರಳ ಸತ್ಯ ನಮ್ಮ ರಾಜಕಾರಣಿಗಳಿಗೆ ತಿಳಿ­ದರೆ ಅವರ ಅನೇಕ ಬೂಟಾಟಿಕೆಗಳು ಕಡಿಮೆ­ಯಾ­ಗುತ್ತವೆ.

ಅದರ ಜೊತೆಗೇ, ಕೊನೆಯ ಪಕ್ಷ ಕಳೆದ 50 ವರ್ಷಗಳಿಂದ ಜಗತ್ತು, ಅದರಲ್ಲೂ ಭಾರತ, ಕಷ್ಟ­ದಲ್ಲಿದ್ದಾಗಲೆಲ್ಲ ಗಾಂಧೀಜಿಯನ್ನು ನೆನೆಸಿಕೊಳ್ಳು­ತ್ತಲೇ ಇದೆ ಎಂಬ ಸತ್ಯವನ್ನೂ ನಮ್ಮ ನಾಯಕರು ತಿಳಿಯಲಿ. ಗೆರಿಲ್ಲಾ ಯುದ್ಧ ಮಾಡಿ ಸ್ವಾತಂತ್ರ್ಯದ ಗುರಿ ತಲುಪಲಾಗದ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಕೊನೆಗೆ ಗಾಂಧಿ ಮಾರ್ಗವನ್ನೇ ಬಳಸ­ಬೇಕಾಯಿತು. ಹಿಂದೊಮ್ಮೆ  ದಕ್ಷಿಣ ಆಫ್ರಿಕಾದಲ್ಲಿ ಮೋಹನದಾಸ್ ಗಾಂಧಿ ಕಂಡುಕೊಂಡ ಅಹಿಂಸೆಯ ಸಾತ್ವಿಕ ಶಕ್ತಿಯನ್ನು ಮಂಡೇಲಾ ನಿಧಾನಕ್ಕೆ ಕಂಡುಕೊಂಡರು. ಅದಕ್ಕೂ ಮೊದಲು ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂನಿ­ಯರ್ ಅಮೆರಿಕದ ವರ್ಣಭೇದದ ವಿರುದ್ಧದ ಹೋರಾಟಕ್ಕೆ ಗಾಂಧಿಯಿಂದಲೂ ಪಾಠಗಳನ್ನು ಕಲಿತಿದ್ದರು.       

ಹೀಗೆ ಜಗತ್ತಿನ ದೊಡ್ಡ ನಾಯಕರು ಗಾಂಧೀಜಿ­ಯನ್ನು ಹುಡುಕಿಕೊಂಡಂತೆ, ಪ್ರತಿ ವ್ಯಕ್ತಿಯೂ ಒಂದಲ್ಲ ಒಂದು ಹಂತದಲ್ಲಿ ಗಾಂಧೀಜಿಯನ್ನು ಹುಡುಕಿಕೊಳ್ಳಲೇಬೇಕಾಗುತ್ತದೆ. ರಾಮ ಮನೋ­ಹರ ಲೋಹಿಯಾ ಹೇಳಿದ ಒಂದು ಮಾತು ನನಗೆ ಪ್ರತಿದಿನ ಅನುಭವಕ್ಕೆ ಬರುತ್ತಿರುತ್ತದೆ: ‘ವ್ಯಕ್ತಿ­ಯೊಬ್ಬನ ಹಿಂದೆ ವ್ಯಾಪಕ ಜನ ಹಾಗೂ ಸಂಸ್ಥೆಗಳ ಬೆಂಬಲವಿಲ್ಲದಿದ್ದರೂ, ಹೋರಾಡಲು ಯಾವ ಆಯು­ಧವಿಲ್ಲದಿದ್ದರೂ, ಅನ್ಯಾಯ ಹಾಗೂ ದಬ್ಬಾ­ಳಿ­ಕೆಯ ವಿರುದ್ಧ ಸೆಣಸಲು ಹಾಗೂ ಸಂಕಟ­ವನ್ನು ಗಂಭೀರವಾಗಿ ಸಹಿಸಲು ಪ್ರತಿಯೊಬ್ಬನ  ಅಂತ­ರಂಗದಲ್ಲೂ ಏನೋ ಒಂದು ಇದೆ ಎಂಬುದನ್ನು ಗಾಂಧೀಜಿ ತೋರಿಸಿದರು’.

ಆದ್ದರಿಂದಲೇ ಸಾಮಾನ್ಯ ಜನ ಕೂಡ ತಮ್ಮ ಕಷ್ಟದ ಗಳಿಗೆಗಳಲ್ಲಿ ಗಾಂಧೀಜಿಯನ್ನು ಹುಡುಕಿ­ಕೊಳ್ಳುತ್ತಲೇ ಇರುತ್ತಾರೆ. ಈಚೆಗೆ ಬೆಂಗಳೂರಿನ ಬಳಿಯ ಮಂಡೂರಿನ ಹೋರಾಟವನ್ನು ನೀವು ಗಮ­ನಿ­ಸಿರಬಹುದು: ಕಳೆದ ಐದಾರು ವರ್ಷಗ­ಳಿಂದ ಬೆಂಗಳೂರಿನ ಭೀಕರ ಕಸವನ್ನು ತಮ್ಮೂರಿನ ಮೇಲೆ ಸುರಿಸಿಕೊಂಡು ನರಳುತ್ತಿರುವ ಮಂಡೂ­ರಿನ ಜನಕ್ಕೆ ಅದನ್ನು ಪ್ರತಿಭಟಿಸಲು ಗಾಂಧಿ ಮಾರ್ಗ ಬಿಟ್ಟರೆ ಬೇರೆ ಹಾದಿಯೇ ಇರಲಿಲ್ಲ. ಕಸ­ದಲ್ಲೂ ರಾಜಕೀಯ ಮಾಡುವ ರಾಜಕಾರಣಿ­ಗಳು, ಕಂಟ್ರಾಕ್ಟರುಗಳ ದುಷ್ಟಜಾಲದ ಎದುರು ಮಂಡೂರಿನ ಅಸಹಾಯಕ ಜನ ಹಿರಿಯ ಗಾಂಧಿವಾದಿ ಎಚ್.ಎಸ್‌. ದೊರೆಸ್ವಾಮಿ ಅವ­ರನ್ನು, ಆಮ್ ಆದ್ಮಿ ಪಾರ್ಟಿಯ ರವಿಕೃಷ್ಣಾರೆಡ್ಡಿ ಅವರನ್ನು ಜೊತೆಗಿಟ್ಟುಕೊಂಡು ಹೋರಾಟ ನಡೆ­ಸಿದರು. ಜನಪ್ರತಿನಿಧಿಗಳ ಕಪಟ ಸಂಧಾನಕ್ಕೆ, ಸುಳ್ಳು ಆಶ್ವಾಸನೆಗಳಿಗೆ ಮಂಡೂರಿನ ಜನ ಬಗ್ಗ­ಲಿಲ್ಲ. ಕೊನೆಗೆ, ದೊರೆಸ್ವಾಮಿ ಅವರನ್ನು ಮುಂದಿ­ಟ್ಟುಕೊಂಡು ಸರ್ಕಾರ ಮತ್ತು ಬೆಂಗಳೂರು ಮಹಾ­ನಗರಪಾಲಿಕೆ ಮುಂದಿನ ನವೆಂಬರ್ 30ರ ತನಕ ಗಡುವು ಪಡೆಯಬೇಕಾಯಿತು. ನವೆಂಬರ್ ಕೊನೆಗೆ ಮಂಡೂರಿನಲ್ಲಿ ಕಸ ಸುರಿಯುವುದು ನಿಲ್ಲ­ದಿದ್ದರೆ ರಾಜ್ಯ ಸರ್ಕಾರಕ್ಕೆ ನಿರ್ಣಾಯಕ ಬಿಕ್ಕ–ಟ್ಟೊಂದು ಎದುರಾಗಲಿದೆ.

ಮಂಡೂರಿನ ಜನ ಯಾರಿಗೇ ವೋಟು ಹಾಕಿ­ರಲಿ, ಅವರು ‘ಜನಪ್ರತಿನಿಧಿ’ ಎಂದು ಕೊನೆಗೂ ನಂಬಿದ್ದು ಗಾಂಧೀಜಿಯ ಸ್ಪರ್ಶ ಪಡೆದ ದೊರೆ­ಸ್ವಾಮಿ­ಯವರನ್ನೇ ಹೊರತು ಕಾರ್ಪೊರೇಟರು­ಗಳನ್ನಾಗಲೀ ಮಂತ್ರಿಗಳನ್ನಾಗಲೀ ಅಲ್ಲ. ಈ ಅಂಶ ‘ಜನಪ್ರತಿನಿಧಿ’ಗಳು ಎಂದುಕೊಳ್ಳುವ ರಾಜಕಾರಣಿ­ಗಳನ್ನು ಜನ ಯಾವ ಕಾರಣಕ್ಕೂ ನಂಬದಂಥ ಸ್ಥಿತಿ ತಲುಪಿರುವುದನ್ನು ಸೂಚಿಸುತ್ತದೆ.  ಇಂಥ ಅಪ­ನಂಬಿಕೆಯ ಕಾಲದಲ್ಲೂ ಜನರ ಒಳಗಿರುವ ಸಾತ್ವಿಕ ಪ್ರಜ್ಞೆ ಗಾಂಧೀಜಿಯ ಅನುಯಾಯಿ­ಯೊ­ಬ್ಬರನ್ನು ನಂಬಿಕೆಗೆ ಅರ್ಹರೆಂದು ಗುರುತಿಸಿದ ರೀತಿ ಕಂಡಾದರೂ ಸಾರ್ವಜನಿಕ ಜೀವನದಲ್ಲಿರುವ ಎಲ್ಲರೂ ಆತ್ಮಪರೀಕ್ಷೆ ಮಾಡಿಕೊಳ್ಳಬೇಕು.

ಗಾಂಧೀಜಿಯವರ ವ್ಯಕ್ತಿತ್ವ ಜನರಲ್ಲಿರುವ ಒಳ್ಳೆ­ಯತನವನ್ನು ಹೊರತರುತ್ತಿದ್ದುದನ್ನು ಕುರಿತು ರಾಜಮೋಹನ ಗಾಂಧಿ ‘ಮೋಹನದಾಸ್: ಎ ಟ್ರೂ ಸ್ಟೋರಿ ಆಫ್ ಎ ಮ್ಯಾನ್, ಹಿಸ್ ಪೀಪಲ್ ಅಂಡ್ ಆ್ಯನ್ ಎಂಪೈರ್’ ಪುಸ್ತಕದಲ್ಲಿ ಬರೆಯು­ತ್ತಾರೆ. ಕಲ್ಕತ್ತಾದ (ಈಗ ಕೋಲ್ಕತ್ತ) ಪ್ರೊಫೆ­ಸ­ರೊಬ್ಬರು ದಾಖಲಿಸಿರುವ ಘಟನೆ ಇದು: ಭಾರ­ತಕ್ಕೆ ಸ್ವಾತಂತ್ರ್ಯ ಬಂದ ವರ್ಷ ಕಲ್ಕತ್ತಾದಲ್ಲಿ ಕೋಮು­ಹಿಂಸೆಯಲ್ಲಿ ತೊಡಗಿದ್ದವರ ಮನಸ್ಸನ್ನು ಪರಿವರ್ತಿಸಲು ಗಾಂಧೀಜಿ ಉಪವಾಸ  ಸತ್ಯಾಗ್ರಹ ಮಾಡುತ್ತಿದ್ದರು.

ಆಗ ಕೆಲವು ವಿದ್ಯಾರ್ಥಿಗಳು ತಮಗೆ ಎಷ್ಟೇ ಅಪಾಯಗಳಿದ್ದರೂ ಲೆಕ್ಕಿಸದೆ ಮನೆ­ಗಳಿಂದ, ಹಾದಿಬೀದಿಗಳಿಂದ ಆಯುಧಗಳನ್ನು ತಂದು ಗಾಂಧೀಜಿಯವರ ಮುಂದಿಟ್ಟು ತಾವು ಹಿಂಸೆಯ ಮಾರ್ಗದಿಂದ ದೂರ ಸರಿಯುತ್ತಿದ್ದೇವೆ ಎಂದು ಸೂಚಿಸಿದರು. ಇದಕ್ಕಿಂತ ಮಹತ್ವದ ಪ್ರತಿ­ಕ್ರಿಯೆ ಕಲ್ಕತ್ತಾದ ಮನೆಗಳಲ್ಲಿ ಕಂಡು ಬಂತು. ಕಲ್ಕತ್ತಾದ ಗಂಡಸರು ತಂತಮ್ಮ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಮರಳುವ ಹೊತ್ತಿಗೆ ಎಂದಿ­ನಂತೆ ಅವರ ಊಟ ರೆಡಿಯಾಗಿರುತ್ತಿತ್ತು. ಆದರೆ ಮನೆ­ಯಲ್ಲಿದ್ದ ಮಡದಿಯರು ಇಡೀ ದಿನ ಊಟ ಮಾಡಿದಂತಿರಲಿಲ್ಲ. ‘ಯಾಕೆ?’ ಎಂದು ಆ ಗಂಡ­ಸರು ತಮ್ಮ ಮಡದಿಯರನ್ನು ಕೇಳಿದರೆ ಅವರು ಕೊಟ್ಟ ಉತ್ತರ: ‘ಗಾಂಧೀಜಿ ನಾವು ಮಾಡಿದ ಪಾಪ­ಗಳಿಗಾಗಿ ಸಾಯುತ್ತಿದ್ದಾರೆ; ನಾವು ಹೇಗೆ ಊಟ ಮಾಡಲಿ?’ 

ಇನ್ನೂ ಮುಗ್ಧತೆಯನ್ನು ಉಳಿಸಿಕೊಂಡಿದ್ದ ಕಲ್ಕತ್ತಾದ ವಿದ್ಯಾರ್ಥಿಗಳು ಹಾಗೂ ಮಹಿಳೆ­ಯರ ಪ್ರತಿಕ್ರಿಯೆ ನಾಯಕನೊಬ್ಬ ಸ್ವಾರ್ಥವಿಲ್ಲದೆ ಜನರಿ­ಗಾಗಿ ಮಿಡಿಯುತ್ತಿರುವುದು ಖಾತ್ರಿಯಾ­ದರೆ ಅವನ ಮಾತನ್ನು ಕೆಲವರಾದರೂ ಕೇಳಿಸಿ­ಕೊ­ಳ್ಳು­ತ್ತಾರೆ ಎಂಬುದನ್ನೂ ಸೂಚಿಸುತ್ತದೆ. ಈಚೆಗೆ ಈ ಮನಕಲಕುವ ಪ್ರತಿಕ್ರಿಯೆ ಓದಿದ ನಂತರ, ಇತ್ತೀ­ಚಿನ ವರ್ಷಗಳಲ್ಲಿ ನಮ್ಮ ಬಹುತೇಕ ರಾಜ­ಕಾರಣಿಗಳು ಮನುಷ್ಯರೊಳಗಿನ ಈ ಮುಗ್ಧ­ತೆಗೆ ಮನವಿ ಮಾಡಿಕೊಳ್ಳುವ ಸಾಧ್ಯತೆಯನ್ನೇ ನಾಶ ಮಾಡಿದ್ದಾರಲ್ಲ ಎನ್ನಿಸಿ ವ್ಯಥೆಯಾಗ­ತೊಡ-­ಗಿತು.

ಮಾನವನೊಳಗಿನ ಮುಗ್ಧತೆ, ದಿಟ್ಟತನ, ಪಾಪ­ಪ್ರಜ್ಞೆ, ಒಳ್ಳೆಯತನ ಹಾಗೂ ಪ್ರತಿಯೊಬ್ಬ­ರಲ್ಲೂ ಅಡಗಿರಬಹುದಾದ  ಹೆಣ್ತನವನ್ನು ಗಾಂಧೀಜಿ ಹೊರ­ತರಲೆತ್ನಿಸುತ್ತಿದ್ದರು. ಪುರಾಣಗಳಲ್ಲಿರುವ ‘ಅರ್ಧ ನಾರೀಶ್ವರ’ನ ಸಾಂಕೇತಿಕತೆಯನ್ನು ಪ್ರತಿ ಗಂಡೂ ತಲುಪಬೇಕಾದ ಆದರ್ಶ ಎಂದು ಗಾಂಧಿ ವಿವರಿಸಿಕೊಂಡಿದ್ದನ್ನು ಹಲವರು ಗುರುತಿ­ಸಿ­ದ್ದಾರೆ. ಗಾಂಧೀಜಿಯವರಲ್ಲಿದ್ದ ಈ ಕೋಮ­ಲತೆಯನ್ನು ಲೋಹಿಯಾ ಗುರುತಿಸಿದ ರೀತಿ ಅತ್ಯಂತ ಅರ್ಥ­ಪೂರ್ಣವಾಗಿದೆ: ‘ಹೆಣ್ಣು ಹಾಗೂ ದೇವರು ಇವೆರಡೇ ಪ್ರಾಯಶಃ ಜೀವನದ ಉದ್ದೇ­ಶ­ಗಳು ಎಂದೊಮ್ಮೆ ನಾನು ಹೇಳಿದೆ. ನಾನು ದೇವರನ್ನು ಭೇಟಿಯಾಗಿಲ್ಲ ಹಾಗೂ ಹೆಣ್ಣು ನನಗೆ ಎಟುಕದೇ ಉಳಿದಿದ್ದಾಳೆ. ಆದರೆ ದೇವರು ಹಾಗೂ ಹೆಣ್ಣು­ಗಳೆರಡರ ಹೊಳಹುಗಳನ್ನುಳ್ಳ ಮನುಷ್ಯ­ನನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು’.

ಗಾಂಧೀಜಿಯವರಲ್ಲಿ ವ್ಯವಸ್ಥಿತ ಸಿದ್ಧಾಂತ­ಗ­ಳನ್ನು ಹುಡುಕಿ ಅವು ಅವರಲ್ಲಿಲ್ಲ ಎಂದು ಮೂಗು ಮುರಿಯುವವರಿಗೆ ಈ ಬಗೆಯ ಸೂಕ್ಷ್ಮ ಮುಖ­ಗಳು ಅಷ್ಟು ಸುಲಭವಾಗಿ ಕಾಣಲಾರವು. ಹಾಗೆ ನೋಡಿ­ದರೆ, ಜನರು ತಮ್ಮ ನಿತ್ಯದ ತಾಪತ್ರಯ­ಗಳ ಜೊತೆಗಿದ್ದುಕೊಂಡೇ ಬಳಸಬಹುದಾದ ಮಾರ್ಗ­ಗಳನ್ನೇ ಗಾಂಧೀಜಿ ರೂಪಿಸಲೆತ್ನಿಸು­ತ್ತಿ­ದ್ದರು. ಸುಳ್ಳು ಹೇಳಲು ಮನುಷ್ಯನಲ್ಲಿ ಇರಬಹು­ದಾದ ಹಿಂಜರಿಕೆಯನ್ನು ಸತ್ಯ ಕುರಿತ ಬದ್ಧತೆ­ಯ­ನ್ನಾಗಿಸಲು ಯತ್ನಿಸಿದರು. ಹಿಂಸೆಯ ಬಗೆಗೆ ಜನ­ರಿಗೆ ಇರಬಹುದಾದ ಅಳುಕನ್ನು ಅಹಿಂಸೆಯ ತತ್ವ­ವನ್ನಾಗಿಸಲು ಯತ್ನಿಸಿದರು. ಅನೇಕ ಸಲ ಇನ್ನೊಬ್ಬ­ರಿಗಾಗಿ ನವೆಯಲು ಉಪವಾಸ ಮಾಡುವ ಜನ­ರಿಂದ ಕಲಿತ ಪಾಠವನ್ನು ಸತ್ಯಾಗ್ರಹದ ಅಸ್ತ್ರವನ್ನಾ­ಗಿ­ಸಿದರು. ‘ಉಪವಾಸ ಮಾಡುವುದು ನನ್ನ ರಕ್ತ­ಮಾಂಸಗಳಲ್ಲಿ ಬೆರೆತುಬಿಟ್ಟಿದೆ. ನಾನು ಅದನ್ನು ತಾಯಮೊಲೆ ಹಾಲಿನಿಂದಲೇ ಪಡೆದುಕೊಂಡು­ಬಿಟ್ಟಿರುವೆ. ನನ್ನ ತಾಯಿ ಯಾರಿಗೋ ಕಾಯಿಲೆ­ಯಾ­ದರೆ ಉಪವಾಸ ಮಾಡುತ್ತಿದ್ದಳು. ಯಾವುದೋ ನೋವಿನಿಂದ ನರಳುತ್ತಿರು­ವಾ­ಗಲೂ ಉಪವಾಸ ಮಾಡುತ್ತಿದ್ದಳು. ಅದಕ್ಕೆ ಈ ಋತು, ಆ ಋತು ಎಂಬ ಭೇದವಿರಲಿಲ್ಲ.  ಅವಳ ಮಗ ನಾನು; ಅವಳಿಗಿಂತ ಹೇಗೆ ಭಿನ್ನವಾಗಿ­ದ್ದೇನು!’ ಎಂದು ಗಾಂಧೀಜಿ ಹೇಳುತ್ತಿದ್ದರು.

ಇತರರ ಮನಪರಿವರ್ತನೆಗಾಗಿ, ಸಮಾಜವನ್ನು ಬೆಸೆಯಲು, ವಸಾಹತುಶಾಹಿಯನ್ನು ಮಣಿಸಲು ದೇಹದಂಡನೆ ಮಾಡಿದ ಗಾಂಧೀಜಿಯವರ ಈ ಉಪವಾಸ ಬಾಬಾಸಾಹೇಬ ಅಂಬೇಡ್ಕರ್ ಅವರು ಮಂಡಿಸಿದ ಪ್ರತ್ಯೇಕ ಮತಕ್ಷೇತ್ರಗಳ ಬೇಡಿಕೆಯ ವಿರುದ್ಧವೂ ತಿರುಗಿದ್ದನ್ನು ಮಾತ್ರ  ನನ್ನಂಥವರಿಗೆ ಇವತ್ತಿಗೂ ಅರಗಿಸಿಕೊಳ್ಳಲಾಗಿಲ್ಲ. ದಲಿತರನ್ನು ಮುಖ್ಯವಾಹಿನಿಯಲ್ಲಿ ಒಂದು ಗೂಡಿ­ಸಲು ಗಾಂಧೀಜಿ ಉಪವಾಸ ಮಾಡಿದರು ಎಂದು ಯಾರು ಎಷ್ಟೇ ವಾದಿಸಿದರೂ ಈ ಉಪವಾಸ ಕ್ರೂರವಾಗಿತ್ತು ಎಂದೇ ಅನಿಸುತ್ತಿರುತ್ತದೆ.

ಆದರೆ ಇದೊಂದು ಚಾರಿತ್ರಿಕ ತಪ್ಪಿಗಾಗಿ ಗಾಂಧೀಜಿ­ಯವರ ಇನ್ನಿತರ ಸರಿಗಳನ್ನು ಕಡೆಗಣಿಸುವುದು ಬೇಡ. ಕಟ್ಟಕಡೆಯವರಿಗಾಗಿ ಚಿಂತಿಸಬೇಕಾದ ಅಗತ್ಯವನ್ನು ಭಾರತದ ಸಾಮಾಜಿಕ ಚಿಂತನೆ ಹಾಗೂ ರಾಜಕಾರಣದ ಕೇಂದ್ರಕ್ಕೆ ಗಾಂಧೀಜಿ ತಂದರೆಂಬುದನ್ನು ಹಾಗೂ ಇವತ್ತಿಗೂ ಆ ಕಾಳಜಿ ಸರ್ಕಾರಿ ಕಾರ್ಯಕ್ರಮಗಳ ಭಾಗವಾಗಿರಲು ಅವರು ಪ್ರೇರಣೆಯಾಗಿದ್ದಾರೆಂಬುದನ್ನು ಮರೆ­ಯ­ದಿ­ರೋಣ. ಒಮ್ಮೆ ತನ್ನ ಕ್ರಿಯೆಯ ಬಗ್ಗೆ ಅನು­ಮಾನದಲ್ಲಿದ್ದವರೊಬ್ಬರಿಗೆ ಗಾಂಧೀಜಿ ಒಂದು ಪುಟ್ಟ ಪರೀಕ್ಷೆ ಮಾಡಿಕೊಳ್ಳಲು ಹೇಳಿದರು. ಇದು ಎಲ್ಲ ಕಾಲಕ್ಕೂ ಅಗತ್ಯವಿರುವ ಮುಖ್ಯ ಪರೀಕ್ಷೆ­ಯಂತಿದೆ: ‘ನಿನಗೆ ಯಾವುದಾದರೂ ಕ್ರಿಯೆಯ ಬಗ್ಗೆ ಅನುಮಾನ ಬಂದಾಗ ಅಥವಾ ನೀನು ಅತಿ­ಯಾಗಿ ನಿನ್ನಲ್ಲೇ ಮುಳುಗಿಹೋದಾಗ ಈ ಪರೀಕ್ಷೆ ಮಾಡಿಕೋ: ನೀನು ನೋಡಿರುವ  ಅತ್ಯಂತ ಬಡವ­ನಾದ, ಅತ್ಯಂತ ದುರ್ಬಲನಾದ ಮನುಷ್ಯನ ಮುಖ­ವನ್ನು ನೆನೆಸಿಕೋ. ನೀನೀಗ ಮಾಡ­ಬೇ­ಕೆಂದು ಯೋಚಿಸುತ್ತಿರುವ ಕೆಲಸದಿಂದ ಅವನಿಗೇ­ನಾದರೂ  ಉಪಯೋಗವಿದೆಯೇ ಎಂಬ ಪ್ರಶ್ನೆ-­ಯನ್ನು ನಿನಗೆ ನೀನೇ ಕೇಳಿಕೋ. ಇದರಿಂದ ಅವನು ಏನನ್ನಾದರೂ ಪಡೆದಾನೇ? ನೀನು ಇಡಲಿರುವ ಹೆಜ್ಜೆ ಆ ಕಟ್ಟಕಡೆಯ ಮನುಷ್ಯ ತನ್ನ ಜೀವನ ಹಾಗೂ ವಿಧಿಯ ಮೇಲೆ ನಿಯಂತ್ರಣ ಸಾಧಿಸಲು ನೆರವಾದೀತೆ? ನಿನ್ನ ಈ ಕ್ರಿಯೆ ಹಸಿದಿರುವ ಹಾಗೂ ಚೈತನ್ಯ ಬತ್ತಿರುವ  ಲಕ್ಷಾಂತರ ಜನರು ತಮ್ಮ ಸ್ವರಾಜ್ಯವನ್ನು ಗಳಿಸುವತ್ತ ಕರೆದೊಯ್ದೀತೆ?’ 

ಅಕ್ಟೋಬರ್ ಎರಡರಂದು ಸುಮ್ಮನೆ ಗಾಂಧಿ­­ಯವರನ್ನು ನೆನೆಸಿಕೊಳ್ಳುವ ಎಲ್ಲರನ್ನೂ, ಮುಖ್ಯ­ವಾಗಿ ನಮ್ಮ ನಾಯಕರನ್ನು, ಕೊನೆಯ ಪಕ್ಷ ಈ ಮಾತುಗಳಾದರೂ ಸದಾ ಕಾಡುತ್ತಿರಲಿ. ಗಾಂಧಿ ಹಾಗೂ ಗಾಂಧಿವಾದ ಎನ್ನುವುದು ಸಿದ್ಧ ಪಾಕ­ವಲ್ಲ; ಅದು ನಾವು ಸದಾ ರೂಪಿಸಿಕೊಳ್ಳುವ ಆದರ್ಶ ಕೂಡ. ಆ ಆದರ್ಶವನ್ನು ಪ್ರತಿದಿನ ಹುಡು­ಕಿ­ಕೊಳ್ಳುತ್ತಾ ನಮ್ಮ ನಡೆನುಡಿಗಳ ಬಗ್ಗೆ ಒಂದು ಚಣವಾದರೂ ಪರೀಕ್ಷೆ ಮಾಡಿಕೊಳ್ಳು­ತ್ತಿ­ದ್ದರೆ ಮಾತ್ರ ನಮ್ಮ ಸಣ್ಣತನ, ಸುಳ್ಳುಗಳು, ದುರ­ಹಂಕಾರ ಹಾಗೂ ಅತಿಯಾದ ವ್ಯಕ್ತಿಕೇಂದ್ರತೆಯ ಸ್ವಾರ್ಥದಿಂದ ಬಿಡಿಸಿಕೊಳ್ಳಬಹುದೇನೋ!

ಕೊನೆ ಟಿಪ್ಪಣಿ: ಗಾಂಧೀಜಿಯ ಸ್ಪರ್ಶ ಮತ್ತು ಕನ್ನಡ ಸಾಹಿತ್ಯ
ಕನ್ನಡದಲ್ಲಿ ಕೆಲವರ ಬರಹಗಳನ್ನು ಓದುವಾ­ಗ­ಲೆಲ್ಲ ಅವರು ಗಾಂಧಿಯನ್ನು ಸ್ಪರ್ಶಿಸಿರುವ ರೀತಿ ಅಥವಾ ಗಾಂಧಿ ಅವರನ್ನು ಮುಟ್ಟಿರುವ ರೀತಿ ನನಗೆ ಅವ್ಯಕ್ತವಾಗಿ ಅನುಭವಕ್ಕೆ ಬರುತ್ತಿರುತ್ತದೆ. ತೇಜಸ್ವಿ ಸೃಷ್ಟಿಸಿದ ಕರ್ವಾಲೋನನ್ನು ವಿಮರ್ಶಕ­ರೊಬ್ಬರು ‘ಗಾಂಧಿಯನ್ ವಿಜ್ಞಾನಿ’ ಎಂದಾಗ ತೇಜಸ್ವಿಯವರ ಕಲ್ಪನೆಯಲ್ಲಿ ಗಾಂಧಿ ಬೆಳೆದ ಪರಿಗೆ ಬೆರಗಾಗಿತ್ತು. ಕುವೆಂಪು, ಬೇಂದ್ರೆ, ಕಾರಂತ, ಅನಂತಮೂರ್ತಿ, ಲಂಕೇಶ್, ಕಂಬಾರ,  ದೇವ­ನೂರ ಮಹಾದೇವ, ಪ್ರಸನ್ನರ ಬರಹಗಳು ಅಥವಾ ಎಚ್.ಎಸ್. ವೆಂಕಟೇಶಮೂರ್ತಿ, ಸವಿತಾ ನಾಗಭೂಷಣರ  ಪದ್ಯಗಳನ್ನು ಓದಿದಾ­ಗಲೆಲ್ಲ ಇಲ್ಲಿ ಎಲ್ಲೋ ಕಂಡೂ ಕಾಣದಂತೆ ಗಾಂಧಿ ಹರಿಯುತ್ತಿದ್ದಾರೆ ಎನ್ನಿಸತೊಡಗುತ್ತದೆ.

ಸ್ವಂತ­ವನ್ನು ಪರೀಕ್ಷಿಸುವ ಕ್ರಮ, ಮಾನವನ ಔದಾರ್ಯ­ವನ್ನು ಹುಡುಕುವ ರೀತಿ, ಅಲ್ಪಸಂಖ್ಯಾತರನ್ನು ಅರಿಯುವ ಬಗೆ, ಸಮಾಜವನ್ನು ರೂಪಿಸುವವರು ಅತ್ಯಂತ ಜವಾವ್ದಾರಿಯಿಂದ ಬರೆಯಬೇಕೆಂಬ ಕಾಳಜಿ, ಅನುಕಂಪದಿಂದ ಇತರರನ್ನು ಗ್ರಹಿಸುವ ಕ್ರಮ, ಮಾನವ ವರ್ತನೆಗಳನ್ನು ಅರಿಯುವಲ್ಲಿ­ರುವ ವ್ಯವಧಾನ, ಭಾಷೆಯ ಬಳಕೆ ಹೀಗೆ ಯಾವುದಾದರೊಂದು ಅಂಶದಲ್ಲಿ ಇವರಲ್ಲಿ ಗಾಂಧಿಸತ್ವ ಬೆರೆಯುತ್ತಿರುತ್ತದೆ.

ಇವರೆಲ್ಲರಿಗಿಂತ ಭಿನ್ನವಾಗಿ ಗಾಂಧಿ ಚಿಂತನೆಯನ್ನು ಗ್ರಹಿಸಿ, ವಿಸ್ತ­ರಿಸಿದ ಡಿ.ಎಸ್. ನಾಗಭೂಷಣರಂಥವರು ಕನ್ನಡ ದಲ್ಲಿದ್ದಾರೆನ್ನುವುದು ನಿಜ. ಆದರೆ, ಮೇಲೆ ಹೇಳಿ­ದ­ವರ ಬರಹಗಳ ಆಳದಲ್ಲಿ ಗಾಂಧೀಜಿಯ ಮರು­ದನಿಯಿದೆ ಎಂಬ ಕಾರಣಕ್ಕೆ ಅವರು ನನ್ನೊಳಗೆ ಇಳಿಯುತ್ತಿರುತ್ತಾರೆ. ಎರಡು ವರ್ಷಗಳ ಕೆಳಗೆ ಒಂದು ಸಭೆಯಲ್ಲಿ ಇದ್ದಕ್ಕಿದ್ದಂತೆ ನನ್ನೊಳಗಿನಿಂದ ಮೂಡಿಬಂದ ಮಾತು ಇದು: ‘ಕಿ.ರಂ.ನಾಗರಾಜ್ ಮತ್ತು ದೇವನೂರ ಮಹಾದೇವರನ್ನು ನೋಡಿ­ದಾಗ, ನೆನೆದಾಗ ಗಾಂಧಿ ಇಲ್ಲೇ ಎಲ್ಲೋ ಓಡಾ­ಡಿದ್ದರೆಂದು ನನಗೆ ಅನಿಸತೊಡಗುತ್ತದೆ’.  ಇದು ತೀರ ಉತ್ಪ್ರೇಕ್ಷೆಯಿರಲಿಕ್ಕಿಲ್ಲ  ಎಂದುಕೊಂಡಿರುವೆ.
‌ ‌
ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.