ADVERTISEMENT

ಎಲ್ಲೋ ಹಚ್ಚಿದ ಬೆಂಕಿ; ಇನ್ನೆಲ್ಲೋ ಸಿಡಿದ ಪಟಾಕಿ!

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:21 IST
Last Updated 16 ಜೂನ್ 2018, 9:21 IST

ಭಾನುವಾರ ಬೆಳಗ್ಗೆ ಒಂಬತ್ತು ಗಂಟೆಗಾಗಲೇ ಬಿಹಾರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಸಿಡಿದ ಪಟಾಕಿಯ ಸದ್ದು ಮುಂದಿನ ಒಂದೇ ಗಂಟೆಯಲ್ಲಿ ಜೆಡಿಯು ಹಾಗೂ ಆರ್‌ಜೆಡಿ ಪಕ್ಷದ ಕಚೇರಿಗಳಲ್ಲಿ ಪ್ರತಿಧ್ವನಿ ಪಡೆದ ಕ್ಷಿಪ್ರ ಬೆಳವಣಿಗೆ ವಿಸ್ಮಯಕರವಾಗಿತ್ತು!  ಬಿಹಾರದ ಚುನಾವಣೆ ಇಂಡಿಯಾಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ಅದು ಪಾಕಿಸ್ತಾನದ ಪಟಾಕಿಗಳಿಗೂ ಸಂಬಂಧಿಸಿದೆ ಎಂಬುದನ್ನು ತಮ್ಮ ವಿಚಿತ್ರ ಪತ್ತೇದಾರಿಯ ಮೂಲಕ ಕಂಡುಕೊಂಡಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಚ್ಚಿದ ಬೆಂಕಿಗೆ ತಕ್ಷಣ ಸಿಡಿಯಬಲ್ಲ ಗುಜರಾತಿನ ಪಟಾಕಿಗಳು ಬಿಹಾರದಲ್ಲಿ ಸಿಕ್ಕಲಿಲ್ಲ!

ದೆಹಲಿಯಂತೆ ಬಿಹಾರ ಚುನಾವಣೆಯಲ್ಲೂ ಮೊದಲೇ ಯುದ್ಧ ಗೆದ್ದ ಶೈಲಿಯಲ್ಲಿ ಹೊರಟಿದ್ದಕ್ಕೆ ಮೋದಿ-ಅಮಿತ್ ಷಾ ಜೋಡಿ ಈಗ ತಮ್ಮನ್ನು ತಾವೇ ಹಳಿದು ಕೊಳ್ಳುತ್ತಿರಬಹುದು. ದೇಶದ ಪ್ರಧಾನಮಂತ್ರಿ ಒಂದು ರಾಜ್ಯದ ಸಾಮುದಾಯಿಕ ನಾಯಕನನ್ನು ‘ಶೈತಾನ್’ ಎಂದಾಗಲೇ ಈ ಚುನಾವಣೆ ಲಾಲು ಪ್ರಸಾದ್ ಪರವಾಗಿ ವಾಲಬಹುದು ಎನ್ನಿಸತೊಡಗಿತ್ತು. ಲಾಲು ವಿರುದ್ಧ ಬಿಜೆಪಿ ದಾಳಿ ಮಾಡಿದಷ್ಟೂ ಲಾಲುಗೆ ಲಾಭವಾಗತೊಡಗಿತು.  ಮೋದಿ- ಷಾ ಬೈಗುಳಗಳಿಗೆ ಅದೇ ಭಾಷೆಯಲ್ಲಿ ತಿರುಗಿಸಿ ಕೊಡತೊಡಗಿದ ಲಾಲು ಭಾಷೆಯಲ್ಲಿ ಮತ್ತೊಂದು ಮುಖವೂ ಇತ್ತು. ಗೋಮಾತೆಯ ‘ರಕ್ಷಣೆ’ಯ ಹುಸಿ ಪ್ರಶ್ನೆ ಎತ್ತಿದವರಿಗೆ ಲಾಲು ತಮ್ಮ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ  ಹಸುಗಳ ಕೊರಳು ಸವರುತ್ತಾ ‘ನಾನು ಅಸಲಿ ಗೋಪಾಲಕ; ಅವರೆಲ್ಲ ಯಾವ ಸೀಮೆಯ ಗೋರಕ್ಷಕರು!’ ಎಂದು ವ್ಯಂಗ್ಯವಾಗಿ ನಗುತ್ತಾ ಉತ್ತರ ಕೊಟ್ಟರು.

ಒಂದು ಟೆಲಿಚಾನಲ್ ನಲ್ಲಿ ಮತ್ತೆ ಮತ್ತೆ ಬರುತ್ತಿದ್ದ ಈ ಚಿತ್ರ ಜನರನ್ನು ತಟ್ಟಿರಬಹುದು. ಆದರೆ ಈ ಚುನಾವಣೆಯ  ಇಂಟರ್ವಲ್‌ನಲ್ಲಿ ಪ್ರಧಾನಮಂತ್ರಿಯವರ ವಿದೇಶಯಾತ್ರೆಯ ಚಿತ್ರಗಳ ಮೂಲಕ ಕಟ್ಟಲೆತ್ನಿಸಿದ ಇಮೇಜುಗಳು ಬಿಹಾರದ ಹೊಸ ತಲೆಮಾರಿನ ಮತದಾರರನ್ನೂ ಪ್ರಭಾವಿಸಲಿಲ್ಲ. ಕೊನೆಗೂ ಲಾಲು  ಒಗರು, ನಿತೀಶ್ ಸರಳತೆ ಹಾಗೂ ಅವರು ಮಾಡಿದ ಕೆಲಸ ಮೂರೂ ಪಕ್ಷಗಳ ಕೈ ಹಿಡಿದವು. ಹಾಗೆಯೇ ಮಹಾಮೈತ್ರಿ ಒಂದು ಧ್ವನಿಯಲ್ಲಿ ಮಾತಾಡತೊಡಗಿದ್ದು ಕೂಡ ಈ ಗೆಲುವಿಗೆ ಕಾರಣವಿರಬಹುದು. ಅದರ ಜೊತೆಗೇ ಬಿಜೆಪಿಯ ಎಂದಿನ ಕೆಲವು ಕಾರ್ಯತಂತ್ರಗಳು ಕೈಕೊಟ್ಟವು. ಒಂದು ನಿರ್ಣಾಯಕ ಘಟ್ಟದಲ್ಲಿ ಹಲವರನ್ನು ಹಲವು ಧ್ವನಿಗಳಲ್ಲಿ ಮಾತಾಡುವಂತೆ ಮಾಡುವುದು ಅದರ ಹಳೆಯ ತಂತ್ರ.

ಇಂಡಿಯಾದ ಅನೇಕ ರಾಜಕೀಯ ಪಕ್ಷಗಳು ಈ ತಂತ್ರವನ್ನು ಬಳಸಿದರೂ ಈ ತಂತ್ರವನ್ನು ಬಳಸಲು ಹಲ ಬಗೆಯ ವೇದಿಕೆಗಳು ಹಾಗೂ ವಾಚಾಳಿಗಳ ಬಲ ಬಿಜೆಪಿಗೆ ಹೆಚ್ಚು ಇದೆ. ಒಬ್ಬರು ಮೀಸಲಾತಿಯ ಮರು ಪರಿಶೀಲನೆಗೆ ಕರೆ ಕೊಡುವುದು, ಅದೇ ಪಕ್ಷದ ಮತ್ತೊಬ್ಬರು ಮೀಸಲಾತಿಯ ಮುಂದುವರಿಕೆಗೆ ತಾವು ಕಟಿಬದ್ಧರಾಗಿದ್ದೇವೆ ಎಂದು ಹೇಳುವುದು ಅದರ ಕಾರ್ಯತಂತ್ರ. ಅದೇ ರೀತಿ ಕಾಲಕಾಲಕ್ಕೆ ಗೋವಿನ ರಾಜಕಾರಣವನ್ನೋ ಪಾಕಿಸ್ತಾನದ ಬೆದರಿಕೆ
ಯನ್ನೋ ಮುಂದೊಡ್ಡುವುದು, ಮುಸ್ಲಿಂ ಜನಸಂಖ್ಯೆಯ ಹೆಚ್ಚಳದ ಬಗ್ಗೆ ಮಾತಾಡುವುದು- ಇವೆಲ್ಲ ಮೊದಲೇ ನಿರ್ಧರಿಸಿ ಪ್ರಯೋಗಿಸಲಾದ ನಾಟಕದ ದೃಶ್ಯಗಳು. ಇವುಗಳ ಬಗೆಗಷ್ಟೇ ಜನ ತಲೆ ಕೆಡಿಸಿಕೊಂಡು, ಗೊಂದಲಗೊಂಡು ಮುಖ್ಯ ಪ್ರಶ್ನೆಗಳನ್ನು ಮರೆಯಲಿ ಎಂಬುದು ಈ ಯೋಜಿತ ತಂತ್ರದ ಒಂದು ಭಾಗ. ಆದರೆ ಎಲ್ಲವೂ ಎಲ್ಲರಿಗೆ ಗೊತ್ತಾಗುತ್ತಿರುವ ಈ ಕಾಲದಲ್ಲಿ ನೇರವಾಗಿ ಮಾತಾಡುವುದೇ ಒಳ್ಳೆಯದು ಎಂದು ಹೊರಟ ಲಾಲು-ನಿತೀಶ್-ರಾಹುಲ್ ಟೀಂ ಗೆದ್ದಿದೆ. ಈ ಗೆಲುವು ಸ್ವತಃ ಅವರಿಗೇ ಆಶ್ಚರ್ಯ ತಂದಿದೆಯೆನ್ನಿಸುತ್ತದೆ.    

ಲಾಲುಗೆ ಹೋಲಿಸಿದರೆ ನಿತೀಶರ ಜಾತ್ಯತೀತ ನಿಲುವು ಅಷ್ಟೇನೂ ಗಟ್ಟಿಯಾದುದಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಸೋನಿಯಾಗಾಂಧಿಯವರ ವಿದೇಶಿ ಮೂಲದ ಪ್ರಶ್ನೆ ಬಂದಾಗ ಗಟ್ಟಿಯಾಗಿ ಸೋನಿಯಾ ಪರವಾಗಿ ನಿಂತವರು ಲಾಲು. ಅಡ್ವಾಣಿಯ ರಥಯಾತ್ರೆಯನ್ನು ದಿಟ್ಟವಾಗಿ ವಿರೋಧಿಸಿದವರು ಲಾಲು. ಈ ಸಲ ಕೂಡ ಮೋದಿ ಆರ್ಭಟವನ್ನು ಸಮರ್ಥವಾಗಿ ಎದುರಿಸಿದವರು ಲಾಲು. ಐದು ವರ್ಷಗಳ ಕೆಳಗೆ ನಡೆದ ಬಿಹಾರ ಚುನಾವಣೆಯ ಸಂದರ್ಭದಲ್ಲಿ ಎನ್‌ಡಿಎ ಜೊತೆಗಿದ್ದ ನಿತೀಶ್, ಮೋದಿ ಬಿಹಾರದಲ್ಲಿ ಚುನಾವಣಾಪ್ರಚಾರಕ್ಕೆ ಬರದಂತೆ ನೋಡಿಕೊಂಡದ್ದು ಒಂದು ಕಾರ್ಯತಂತ್ರ ಮಾತ್ರವಾಗಿತ್ತು. ಬಿಜೆಪಿ ಜೊತೆಗಿನ ಸಂಬಂಧವನ್ನು ಹರಿದುಕೊಂಡ ಮೇಲೆಯೇ ನಿತೀಶ್ ಹೆಚ್ಚು ‘ಸೆಕ್ಯುಲರ್’ ರೀತಿ ಕಾಣಿಸಿಕೊಳ್ಳತೊಡಗಿದ್ದು.

ಈ ಸಲ ಮುಸ್ಲಿಮರ ಮತಗಳು ಲಾಲು ಕಾರಣದಿಂದಾಗಿ ಮಹಾಮೈತ್ರಿಗೆ ಹೆಚ್ಚು ಬಿದ್ದಿವೆಯೆಂದು ನನ್ನ ಊಹೆ. ಅದರ ಜೊತೆಗೆ, ದಲಿತರ ಮಹಾವಿರೋಧಿಗಳಾದ ಭೂಮಿಹಾರರು ಎನ್‌ಡಿಎ ಪರವಾಗಿದ್ದುದರಿಂದ, ಅಲ್ಲಿ ಪಾಸ್ವಾನ್, ಮಾಂಝಿ ಎಂಬ ಇಬ್ಬರು ದಲಿತ ನಾಯಕರಿದ್ದರೂ ಅವರ ಕ್ಷೇತ್ರಗಳನ್ನು ಬಿಟ್ಟರೆ, ಉಳಿದಂತೆ ದಲಿತರ ಮತಗಳು ಎನ್‌ಡಿಎಗೆ ಹೆಚ್ಚು ಬಿದ್ದಂತಿಲ್ಲ. ಲೇಖಕರು, ಕಲಾವಿದರು, ವಿಜ್ಞಾನಿಗಳು ನಿತ್ಯ ಪ್ರಶಸ್ತಿಗಳನ್ನು ವಾಪಸ್ ಕೊಟ್ಟ ರೀತಿ ಕೂಡ, ಈ ಚುನಾವಣೆಯನ್ನು ಒಂದು ಮಟ್ಟದಲ್ಲಿ ಪ್ರಭಾವಿಸಿದಂತಿದೆ. ಬೆರಳೆಣಿಕೆಯ ಬುದ್ಧಿಜೀವಿಗಳ ಸಾಂಕೇತಿಕ ಕ್ರಿಯೆಗಳಿಂದ ಏನು ಮಹಾ ಆಗುತ್ತದೆ ಎಂದು ಠೇಂಕಾರ ತೋರುವವರಿಗೆ, ಬುದ್ಧಿಜೀವಿಗಳ ಅಂತಸ್ಸಾಕ್ಷಿಯ ನಿವೇದನೆ ಹಾಗೂ ಪ್ರಾಮಾಣಿಕ ಸಿಟ್ಟು ಸಾಮಾನ್ಯ ಜನರಲ್ಲಿ ಪ್ರತಿಧ್ವನಿ ಪಡೆಯುವ ಕ್ರಮದ ಬಗ್ಗೆ ಅರಿವಿರಲಾರದು.

ಕೇಂದ್ರದಲ್ಲಿ ಮೆಜಾರಿಟಿಯಿದೆಯೆಂಬ ಹಮ್ಮು, ಐವತ್ತು ಸಾವಿರ ಕೋಟಿ ಪ್ಯಾಕೇಜಿನ ‘ದಾನ’ ಕೊಡುವ ಧ್ವನಿ ಹಾಗೂ ಬಹುಸಂಖ್ಯಾತ ಹಿಂದೂಗಳ ಸ್ವಯಂಘೋಷಿತ ವಕ್ತಾರರು ತಾವೆಂದು ತಮ್ಮ ಆಯ್ಕೆಗಳನ್ನು ದೇಶದ ಮೇಲೆ ಹೇರುವವರ ಅಹಂಕಾರ, ಸರ್ಕಾರಿ ಭಯೋತ್ಪಾದನೆ, ಅತಿ ಪ್ರಚಾರ ಎಲ್ಲವನ್ನೂ ಬಿಹಾರ ತಿರಸ್ಕರಿಸಿದೆ. ಹಿಂದೊಮ್ಮೆ ಅಧಿಕಾರದಾಹದಿಂದ ಕಿತ್ತಾಡಿ ಬಿಹಾರದಲ್ಲಿ ಮತೀಯ ಶಕ್ತಿಗಳನ್ನು ಬೆಳೆಯಲು ಬಿಟ್ಟ ಲಾಲು, ನಿತೀಶ್ ಈಗ ಕೊಂಚ ಮಾಗಿರಬಹುದು. ಈ ಮಾಜಿ ಸಮಾಜವಾದಿ ಜೋಡಿ ಹಾಗೂ ರಾಹುಲ್ ಬಂದ ನಂತರ ಕೊಂಚ ವಿನಯದ ಭಾಷೆ ಬಳಸಲು ಯತ್ನಿಸುತ್ತಿರುವ ಕಾಂಗ್ರೆಸ್- ಮೂವರೂ ಸೇರಿ ಬಿಹಾರದಲ್ಲಿ ಮುಂದೆ ತೋರಲಿರುವ ಜವಾಬ್ದಾರಿ ಹೇಗಿರಲಿದೆ ಎಂಬುದರ ಮೇಲೆ ಇಂಡಿಯಾದ ವಿರೋಧ ಪಕ್ಷಗಳ ರಾಜಕಾರಣದ ಹೊಸ ದಿಕ್ಕು ಹಾಗೂ ಸಾಮರ್ಥ್ಯಗಳು ನಿರ್ಧಾರವಾಗಲಿವೆ.

ಭಾನುವಾರ ಎಲ್ಲ ಸೀಟುಗಳ ಫಲಿತಾಂಶ ಬಂದ ನಂತರ ಮಧ್ಯಾಹ್ನ ಲಾಲು ಯಾದವ್ ಮನೆಗೆ ನಿತೀಶ್ ಬಂದರು. ನಿತೀಶರನ್ನು ತಬ್ಬಿಕೊಂಡ ಲಾಲು ಯಾದವ್  ಯಾವ ಗೊಂದಲಕ್ಕೂ ಎಡೆ ಮಾಡದೆ ‘ನಿತೀಶ್ ನಮ್ಮ ಮುಂದಿನ ಮುಖ್ಯಮಂತ್ರಿ’ ಎಂದು ತಕ್ಷಣ ಘೋಷಿಸಿದ್ದು ಕೂಡ ಒಂದು ಪ್ರಬುದ್ಧ ನಡೆಯಾಗಿತ್ತು.  ಕೊನೆಗೂ ಜಯಪ್ರಕಾಶ್ ನಾರಾಯಣರ ಇಬ್ಬರು ಶಿಷ್ಯರು ಮತ್ತೆ ಒಂದಾಗಿರುವುದನ್ನು ಕುರಿತು ರಾಜಕೀಯ ವಿಶ್ಲೇಷಕರು ಉತ್ಸಾಹದಿಂದ ಮಾತಾಡುತ್ತಿದ್ದಾರೆ. ಜೆ.ಪಿ. ಶತಮಾನೋತ್ಸವವನ್ನು ಆಚರಿಸುತ್ತಿರುವ ಈ ವರ್ಷ ಚುನಾವಣೆ ಗೆದ್ದಿರುವ ಈ ಜೆ.ಪಿ.-ಲೋಹಿಯಾ ಶಿಷ್ಯರ ಎದುರು ದೊಡ್ಡ ಸವಾಲಿದೆ.

ಈ ಸವಾಲನ್ನು ಅರವಿಂದ ಕೇಜ್ರಿವಾಲ್ ಈಗಾಗಲೇ ಸೂಚಿಸಿದ್ದಾರೆ. ರಾಜ್ಯಗಳ ವಿಚಾರದಲ್ಲಿ ಕೇಂದ್ರದ ಅನಗತ್ಯ ಹಸ್ತಕ್ಷೇಪ ತಪ್ಪಬೇಕು ಹಾಗೂ ಕೇಂದ್ರ- ರಾಜ್ಯಗಳ ಸಂಬಂಧಗಳ ಬಗ್ಗೆ ಹೊಸ ರೀತಿಯ ಗಂಭೀರ ಚರ್ಚೆ ಶುರುವಾಗಬೇಕು ಎಂಬ ಆಶಯ ಕೇಜ್ರಿವಾಲ್ ಮಾತಿನಲ್ಲಿ ಇತ್ತು. ಅದೇನೇ ಇದ್ದರೂ, ಚುನಾವಣೆಯ ಫಲಿತಾಂಶದ ಪರಿಣಾಮವಾಗಿಯಾದರೂ ಕೋಮುಶಕ್ತಿಗಳಿಗೆ ಕೊಂಚ ಕಡಿವಾಣ ಬೀಳಲಿದೆ ಹಾಗೂ ಜಾತ್ಯತೀತ ಶಕ್ತಿಗಳಿಗೆ ಅಷ್ಟಿಷ್ಟಾದರೂ ಹುರುಪು ಬರಲಿದೆ. ಈ ಎರಡೂ ಮಹತ್ವದ ಬೆಳವಣಿಗೆಗೆ ಕಾರಣವಾದ ಬಿಹಾರದ ಅಜ್ಞಾತ ಮತದಾರರಿಗೆ ಈ ದೇಶ ಕೃತಜ್ಞವಾಗಿರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.