ADVERTISEMENT

ಕ್ಷಮಿಸಿ, ಇದು ಅಭಿನಂದನಾ ಚಳವಳಿ ಕಾಲ!

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:21 IST
Last Updated 16 ಜೂನ್ 2018, 9:21 IST

ಈ.ಚೆಗೆ ಸಾಂಸ್ಕೃತಿಕ ಅಥವಾ ಸಾಹಿತ್ಯದ ಸಭೆಗಳಿಗೆ ಹೋಗಿದ್ದರೆ ನೀವು ಇದನ್ನು ಗಮನಿಸಿರಬಹುದು: ಅಲ್ಲಿ ಅತಿಥಿಗಳು ಮಾತಾ ಡುವ ವೈಖರಿ ನೋಡಿದರೆ, ಸಾರ್ವಜನಿಕ ಸಭೆ­ಯೆಂದರೆ ಔಪಚಾರಿಕವಾಗಿ ಮಾತಾಡಲೇಬೇಕು ಎಂದು ಯಾರಾದರೂ ಫರ್ಮಾನು ಹೊರಡಿಸಿ­ದ್ದಾರೇನೋ ಎಂದು ನಿಮಗೆ ಅನುಮಾನ ಬರತೊಡಗುತ್ತದೆ. ಇನ್ನೂ ಸ್ವಲ್ಪ ಹೊತ್ತು ಕೂತಿದ್ದರೆ ಕನ್ನಡದ ಕ್ಲೀಷಮಯ ಹೊಗಳಿಕೆಗಳ ವಿಶೇಷಣಗಳು ಬಿಚ್ಚಿಕೊಳ್ಳತೊಡಗುತ್ತವೆ. ಅದು ಅಭಿನಂದನಾ ಸಭೆಯಾದರಂತೂ ಮುಗಿದೇ ಹೋಯಿತು. ‘ಒಳ್ಳೆಯ ಮಿತ್ರ’ ಎನ್ನಬಹುದಾದ ಕಡೆ ‘ಅದ್ಭುತ ಚಿಂತಕ’ ಎನ್ನಲಾಗುತ್ತದೆ; ಕನ್ನಡ­ವನ್ನು ಹಾಗೂ ಹೀಗೂ ಕಿರುಚುವ ವ್ಯಕ್ತಿ ‘ಕನ್ನಡದ ಕಟ್ಟಾಳು’ವಾಗುತ್ತಾನೆ; ಸುಮಾರಾಗಿ ಬರೆಯು­ವವನು ‘ಶ್ರೇಷ್ಠ ಸಾಹಿತಿ’; ಸಾಲ ಕೊಟ್ಟು ಮರೆತಿದ್ದರೆ ‘ತಾಯಿ ಕರುಳಿನ ವ್ಯಕ್ತಿ’; ಅಷ್ಟಿಷ್ಟು ಚಳ­ವಳಿ ಮಾಡಿದ್ದರೆ ‘ದಣಿವರಿಯದ ಹೋರಾಟಗಾರ!’

ಸಾಹಿತ್ಯದ ಸಭೆಗಳಲ್ಲೇ ಈ ಬಗೆಯ ಉತ್ಪ್ರೇಕ್ಷೆ­ಗಳ ಹಾವಳಿ ಇದ್ದರೆ, ಇನ್ನು ಪ್ರಾಯೋಜಿತ ರಾಜಕೀಯ ಸಭೆಗಳು ಹಾಗೂ ಸಾಂಸ್ಕೃತಿಕ ಸಭೆಗಳ ಕತೆ ಕೇಳುವಂತೆಯೇ ಇಲ್ಲ! ಭ್ರಷ್ಟ ರಾಜಕಾರಣಿಯೊಬ್ಬನನ್ನು ‘ಬಡವರ ಬಂಧು’ ಎಂದು ಬಾಡಿಗೆ ಭಾಷಣಕಾರರು ಹೇಳಿದ ತಕ್ಷಣ ಅವನ ಭ್ರಷ್ಟಾಚಾರವೆಲ್ಲ ಅಳಿಸಿ ಹೋಗುತ್ತದೆ. ಕನ್ನಡದ ಹೆಸರಲ್ಲಿ ಎಷ್ಟಾದರೂ ಲೂಟಿ ಹೊಡೆ­ದಿರಲಿ, ಆತ ‘ತಾಯಿ ಭುವನೇಶ್ವರಿಯ ವರಪುತ್ರ’ ಎಂದು ವರ್ಣಿಸಿದರೆ ಎಲ್ಲವೂ ಮಾಫಿ...

ಚಳವಳಿಗಳ ಕಾಲ ಮುಗಿದು ಹೋಯಿತು ಎನ್ನುವವರಿದ್ದಾರೆ. ಅಂಥ ಮುಗ್ಧರು ಇದು ಹುಸಿ ಮಾತಿನ ಅಭಿನಂದನಾ ಚಳವಳಿಗಳ ಕಾಲ ಎಂಬುದನ್ನು ಗಮನಿಸಿದಂತಿಲ್ಲ! ಸಾರ್ವಜನಿಕ ಜೀವನದಲ್ಲಿ ಈ ಬಗೆಯ ಹುಸಿ ಮಾತಿನ ವಿಜೃಂ­ಭಣೆಗೂ ನಮ್ಮ ಕಾಲದಲ್ಲಿ ಚಾಲ್ತಿಯಲ್ಲಿರುವ ಮಾರ್ಕೆಟ್ ಭಾಷೆಗೂ ಸಂಬಂಧವಿರುವುದನ್ನು ನೀವು ಕಂಡಿರಬಹುದು. ಇದು ಹೇಳಿಕೇಳಿ ಎಲ್ಲವನ್ನೂ ಆಕರ್ಷಕವಾಗಿಸಿ ಮಾರುವ ಯುಗ. ಮೊನ್ನೆಮೊನ್ನೆ ತಾನೆ ಚುನಾವಣೆಗೆ ನಿಂತವರ ಗಡ್ಡ, ಪೈಜಾಮಗಳಿಂದ ಹಿಡಿದು ಎಲ್ಲವನ್ನೂ ಹೊಗಳಿ ಮಾರ್ಕೆಟ್ ಮಾಡಿದ ಮೋಸದ ಜಾಲ ಇನ್ನೂ ನಮ್ಮ ಕಣ್ಣು ಕಿವಿಗಳಲ್ಲೇ ಇದೆ.

ಹೀಗೆ ರಾಜಕೀಯ ಸಂಸ್ಕೃತಿಯಲ್ಲಿ ಹಬ್ಬಿದ ರೋಗ ಮತ್ತೊಂದು ವಲಯಕ್ಕೆ ಹಬ್ಬುವುದು ತಡವಾಗ­ಲಾರದು. ಹಾಗೆಯೇ ಪ್ರದರ್ಶನದಲ್ಲೇ, ಮಾತಿನಲ್ಲೇ ಮರುಳು ಮಾಡಬಹುದೆನ್ನುವ ಮಾರುಕಟ್ಟೆಯ ರೋಗ ರಾಜಕೀಯಕ್ಕೆ, ಮಾಧ್ಯ­ಮ­ಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಹಬ್ಬಿದರೆ ಅದು ಆಶ್ಚರ್ಯವಲ್ಲ. ಆದರೆ ಅದು ಸೂಕ್ಷ್ಮ ಚಟುವ­ಟಿಕೆ­ಗಳ ಸಾಹಿತ್ಯಲೋಕದಲ್ಲೂ ಅತಿಯಾಗಿ ಕಾಣಿಸತೊಡಗಿದರೆ ಜನರಿಗೆ ಪ್ರಾಮಾಣಿಕ ಪ್ರತಿಕ್ರಿ­ಯೆಗಳ ಅಸಲಿ ಮಾದರಿಗಳೇ ಇಲ್ಲವಾಗುತ್ತವೆ.

ಉದಾಹರಣೆಗೆ, ಪುಸ್ತಕ ಬಿಡುಗಡೆ ಮಾಡುತ್ತಿರುವ ಹಿರಿಯ ಲೇಖಕರು ಇನ್ನೂ ಬಹು ದೂರ ಸಾಗಬೇಕಾದ ಉತ್ತಮ ಕವಿ­ಯೊಬ್ಬ­ನನ್ನು ‘ಈತ ಬೇಂದ್ರೆ ನಂತರದ ಮಹತ್ವದ ಕವಿ’ ಎಂದು ವರ್ಣಿಸಿದ ತಕ್ಷಣ ಕಾವ್ಯದ ಗಂಭೀರ ವಿದ್ಯಾರ್ಥಿಗಳಿಗೆಲ್ಲ ಆ ವರ್ಣನೆಯ ಸುಳ್ಳು ಎದ್ದು ಕಾಣತೊಡಗುತ್ತದೆ. ಈ ಥರದ ಸುಳ್ಳು ಹೊಗಳಿಕೆ, ಸೂಕ್ಷ್ಮಜೀವಿಗಳಲ್ಲಿ ಅಸಹ್ಯವನ್ನೂ ಮುಗ್ಧ ಸಾಹಿತ್ಯಜೀವಿಗಳಲ್ಲಿ ಗೊಂದಲಗಳನ್ನೂ ಹುಟ್ಟು ಹಾಕುತ್ತಿರುತ್ತದೆ; ಸ್ವತಃ ಈ ಬಗೆಯ ಉತ್ಪ್ರೇಕ್ಷಾಲಂಕಾರಕ್ಕೆ ತುತ್ತಾದ ಲೇಖಕನಲ್ಲಿ ಈ ಥರದ ಮಾತಿನಿಂದ ಚಣ ಒಣಹೆಮ್ಮೆ ಹುಟ್ಟಿದರೂ ಕ್ರಮೇಣ ಅವನೊಳಗೂ ಅನು­ಮಾನ ಒಸರತೊಡಗುತ್ತದೆ. ಒಂದು ಸಂಸ್ಕೃತಿಯ ಪ್ರಾಮಾಣಿಕ ಜನ ಕಷ್ಟಪಟ್ಟು ರೂಪಿಸಿಕೊಂಡು ಬಂದಿರುವ ಆರೋಗ್ಯಕರ ವಿಮರ್ಶೆಯ ಹತಾರಗಳು ಚಿಂದಿಯಾಗಿ ಹೋಗುತ್ತವೆ.

ಅಕಸ್ಮಾತ್ ಒಂದು ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಅಥವಾ ಅಭಿನಂದನೆಯ ಸಭೆಯಲ್ಲಿ ನಾಲ್ಕು ‘ಒಳ್ಳೆಯ’ ಮಾತಾಡಿದರೆ ಏನು ತಪ್ಪು ಎಂದು ಎಲ್ಲರಿಗೂ ಅನ್ನಿಸಬಹುದು. ಒಳ್ಳೆಯ ಮಾತಾಡುವುದನ್ನೇ ಅನುಮಾನಿ­ಸುವುದು ಸಿನಿಕತನ. ಆದರೆ ಯಾವುದೇ ‘ಒಳ್ಳೆಯ’ ಮಾತು ಸತ್ಯದಿಂದ ತೀರ ದೂರ ಸರಿದ ತಕ್ಷಣ ಜೊಳ್ಳಾಗುತ್ತದೆ. ಆಧುನಿಕ ವಿಮರ್ಶೆಯ ಕೆಲವು ನಿಷ್ಠುರ ಸೂತ್ರಗಳನ್ನು ರೂಪಿಸಿದ ಟಿ.ಎಸ್. ಎಲಿಯಟ್ ಕೂಡ ಎಳೆಯ ಕವಿಗಳಿಗೆ ಮುನ್ನುಡಿ ಬರೆದಾಗ ಕೊಂಚ ಉತ್ತೇಜನದ ಮಾತುಗಳನ್ನಾಡುತ್ತಿದ್ದ, ನಿಜ. ಆದರೆ ಆ ಎಳೆಯರಿಗೆ ಸುಮ್ಮನೆ ರೈಲು ಹತ್ತಿಸಿ ಅವರು ಮುಂದೆಂದೂ ಪ್ರಾಮಾಣಿಕವಾಗಿ ಬರೆಯದಂತೆ ಮಾಡುವ ಪಾಪಕ್ಕಿಳಿಯುತ್ತಿರಲಿಲ್ಲ. ‘ಪ್ರಾಮಾ­ಣಿಕ ವಿಮರ್ಶೆ ಹಾಗೂ ಸೂಕ್ಷ್ಮ ಮೆಚ್ಚುಗೆ ಕಾವ್ಯದ ಮೇಲೆ ಕೇಂದ್ರೀಕೃತವಾಗಿರಬೇಕೇ ಹೊರತು ಕವಿಯ ಮೇಲಲ್ಲ’ ಎಂಬ ತನ್ನ ನಿಲುವಿಗೆ ಅನು­ಗುಣವಾಗಿ ಎಲಿಯಟ್ ನಡೆದುಕೊಳ್ಳಲೆತ್ನಿ­ಸು­ತ್ತಿದ್ದ. ಎಲಿಯಟ್ ಥರದ ಲೇಖಕರು ಕಲಿಸುವ ಸೂಕ್ಷ್ಮಪಾಠಗಳನ್ನು ನಾವು ಎಂದೂ ಕಡೆಗಣಿಸಬಾರದು.

ಈ ಸೂಕ್ಷಗಳನ್ನು ಮರೆತು ಕೇವಲ ಒಣಮೆಚ್ಚುಗೆಯನ್ನು ಆಶ್ರಯಿಸಿರುವುದರಿಂದಲೇ ಸಿನಿಮಾ, ಜನಪ್ರಿಯ ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಕಲಾವಿದರು ಬೆಳೆಯದೆ ಮರಗಟ್ಟಿದಂತಿರುವುದು; ಜೊತೆಗೆ ತಮ್ಮನ್ನೇ ತಾವು ಮತ್ತೆ ಮತ್ತೆ ಕಾಪಿ ಹೊಡೆಯುತ್ತಿ­ರುವುದು! ಖ್ಯಾತ ನಟನೊಬ್ಬ ಶೂಟಿಂಗ್ ಮುಗಿಸಿದ ಕೂಡಲೇ ‘ಗ್ರೇಟ್ ಅಣ್ಣ!’ ಎಂದು ಹೇಳಲು ತುದಿಗಾಲಲ್ಲಿರುವ ಜನರು ಅವನ ಸುತ್ತಮುತ್ತ ಇರಬಲ್ಲರು. ಸಿನಿಮಾ ಸಂಗೀತ ನಿರ್ದೇಶಕನೊಬ್ಬ ಒಂದು ಹೊಸ ಟ್ಯೂನ್ ಹಾಕಿದ ತಕ್ಷಣ ಸುಮ್ಮಸುಮ್ಮನೆ ಎಕ್ಸಲೆಂಟ್ ಎನ್ನುವವರನ್ನು ನಾನೇ ಕಂಡಿದ್ದೇನೆ. ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಅಭ್ಯಾಸ ಬಲದಿಂದಲೋ ಅಥವಾ ಪ್ರಾಮಾಣಿಕವಾಗಿಯೋ ತೂಗುವ ಕತ್ತುಗಳು ಕೊಂಚ ಮೇಲೆದ್ದು ಸಂಗೀತಗಾರನ ಸಂಗೀತವನ್ನು ವಿಮರ್ಶಿಸುವ ಸಾಧ್ಯತೆ ಕಡಿಮೆ. ಇನ್ನು ಭರತನಾಟ್ಯ ಮಾಡುವ ಸುಂದರಿಯರನ್ನು ಹೊಗಳಲು ಬಹುತೇಕ ಪುರುಷರು ಮೊದಲೇ ರಿಹ­ರ್ಸಲ್ ಮಾಡಿಕೊಂಡು ಬಂದಂತೆ ಕಾಣುವು­ದರಿಂದ ಆ ನರ್ತಕಿಯರಿಗೆ ನಿಜ­ವಾದ ವಿಮರ್ಶೆ ಸಿಗುವ ಸಾಧ್ಯತೆ ತೀರ ಕಡಿಮೆ!

ಮೇಲೆ ಹೇಳಿದ ಪ್ರಸಂಗಗಳಲ್ಲಿ ಸ್ವತಃ ಕಲಾವಿದ, ಕಲಾವಿದೆಯರಿಗೆ ಸದಾ ತಮ್ಮ ಕಲೆಯನ್ನು ಪರೀಕ್ಷೆ ಮಾಡಿಕೊಳ್ಳುವ ಶಕ್ತಿ, ಓದಿನ ಬಲದಿಂದ ಅಥವಾ ಜ್ಞಾನಿಗಳ ವಿಶ್ಲೇಷಣೆಯಿಂದ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ನಿರಂತರವಾಗಿ ಬೆಳೆಯುವ ಹಂಬಲ ಇಲ್ಲದಿದ್ದರೆ ಅವರ ಕಲೆ ಸೊರಗತೊಡಗುತ್ತದೆ; ಅಷ್ಟು ಹೊತ್ತಿಗಾಗಲೇ ನಿಷ್ಠುರ ವಿಮರ್ಶೆಯನ್ನು ಕೇಳಿಸಿಕೊಳ್ಳಲಾರದಂತೆ ಅವರ ಕಿವಿ ಮುಚ್ಚಿಹೋಗಿದ್ದರಂತೂ ಅವರ ಕಲೆ ತೀರಿಕೊಂಡಂತೆಯೇ.

ಇನ್ನು ರಾಜಕೀಯ ಸಂಸ್ಕೃತಿಯಲ್ಲಂತೂ ಇದೆಲ್ಲ ಪ್ರತಿನಿತ್ಯ ಹೇಗೆ ನಡೆಯುತ್ತದೆ ಎಂಬುದು ಎಲ್ಲರಿಗೂ ಗೊತ್ತು: ಅಧಿಕಾರಸ್ಥರಿಗೆ ಸಂಬಂಧಿ­ಸಿದ ಎಲ್ಲವನ್ನೂ ತಂತಮ್ಮ ಲಾಭಕ್ಕಾಗಿ ಮೆಚ್ಚುವ ಕಿಲಾಡಿ ಮಂದಿ ಅವರ ಸುತ್ತ ಮುತ್ತುವುದು ಸಾಮಾನ್ಯ. ಹೀಗೆ ಮುತ್ತಿಕೊಳ್ಳುವವರು ಸತ್ಯ­ವನ್ನು ಸದಾ ಅಮಾನತಿನಲ್ಲಿಡುವುದು ಕೂಡ ಸತ್ಯ! ಕೆಲವೇ ದಶಕಗಳ ಕೆಳಗೆ, ಮುಖ್ಯಮಂತ್ರಿ­ಯಾದ ಶುರುವಿನಲ್ಲಿ ಅಷ್ಟಿಷ್ಟು ಕಟುವಿಮರ್ಶೆ­ಯನ್ನು ಕೇಳಿಸಿಕೊಳ್ಳಲೆತ್ನಿಸಿದ ರಾಮಕೃಷ್ಣ ಹೆಗಡೆಯಂಥವರು ತಮ್ಮ ಆಡಳಿತ ದುರ್ಬಲ­ವಾಗ­ತೊಡಗಿದಂತೆ ವಿಮರ್ಶೆ ಮಾಡುವ ವರ್ಗವನ್ನೇ ದೂರವಿಡತೊಡಗಿದರು.

ಸಂಜೆ ತಮಗೆ ಹಿತವಾದ ರಾಗ ಹಾಡುವ ಬುದ್ಧಿಜೀವಿ­ಗಳನ್ನು ಮಾತ್ರ ತಮ್ಮ ಸುತ್ತ ಸೇರಿಸಿಕೊಳ್ಳ­ತೊಡಗಿದರು. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರ ಸುತ್ತಲಂತೂ ವಿಮ­ರ್ಶೆಯ ಸಂಸ್ಕೃತಿಯೇ ಇರಲಿಲ್ಲ. ಹೀಗಾಗಿ ಅವರು ತಮ್ಮ ಕೊನೆಯನ್ನು ತಾವೇ ತಂದುಕೊಂಡರು. ಈಚೆಗೆ ಸಿದ್ದರಾಮಯ್ಯನವರ ಸುತ್ತಲೂ ಸುಮ್ಮನೆ ಹೊಗಳುವವರ ಸಂಖ್ಯೆ ಮೆಲ್ಲಗೆ ಹೆಚ್ಚುತ್ತಿದೆಯೆಂದು ಹೇಳುವವರಿದ್ದಾರೆ. ಪರಿಸ್ಥಿತಿ ಇಲ್ಲೇ ಹೀಗಿರುವಾಗ, ಇನ್ನು ದೂರದ ದಿಲ್ಲಿ­ಯಲ್ಲಿರುವ ನರೇಂದ್ರ ಮೋದಿಯವರ ಸುತ್ತ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಟ್ಟಂಗಿ­ಗಳು ಕುಣಿಯುತ್ತಿರುವುದನ್ನು ಪತ್ರಿಕಾ ವರದಿಗಳ ಮೂಲಕವೇ ಊಹಿಸಿಕೊಳ್ಳಬಹುದು.

ಇದನ್ನೆಲ್ಲ ನೋಡುತ್ತಿರುವವರಿಗೆ ಪ್ರತಿ ರಾಜ­ಕಾರ­ಣಿಯೂ ತನ್ನನ್ನು ಹೊಗಳುವ ವರ್ಗವನ್ನು ತಾನೇ ಸೃಷ್ಟಿಸಿಕೊಳ್ಳುತ್ತಲೂ ಇರಬಹುದು ಎನ್ನಿಸತೊಡಗುತ್ತದೆ; ಅಥವಾ ಎಲ್ಲರಂತೆ ರಾಜ­ಕಾರಣಿ ಕೂಡ ತನ್ನ ಆರಂಭದ ಪ್ರಾಮಾಣಿಕ ದಿನಗಳಲ್ಲಿ ವಿಮರ್ಶೆಯನ್ನು ಸ್ವಾಗತಿಸಲು ಸಿದ್ಧನಿರಬಹುದು; ಆದರೆ ಅವನ ಕಷ್ಟಗಳು ಹೆಚ್ಚಾದಂತೆಲ್ಲ ಅವನು ಸುಳ್ಳು ಹೇಳುವ ಪತ್ರಕರ್ತರನ್ನು, ಉಬ್ಬಿಸುವ ಸ್ನೇಹಿತರನ್ನು ಹೆಚ್ಚು ಇಷ್ಟಪಡಲಾರಂಭಿಸುತ್ತಾನೆ.

ಜೊತೆಗೆ, ಮಾಧ್ಯಮಗಳು ಅವನನ್ನು ಸೂಕ್ಷ್ಮ­ವಾಗಿ ತಿದ್ದುವ ರೀತಿಯಲ್ಲಿ ಮಾತಾಡದೆ ಬೇಜ­ವಾಬ್ದಾರಿಯಾಗಿ ಕೂಗತೊಡಗಿದಂತೆಲ್ಲ ಎಲ್ಲ ಬಗೆಯ ಟೀಕೆಗಳ ಬಗೆಗೆ ದಪ್ಪ ಚರ್ಮವನ್ನೂ ಬೆಳೆಸಿಕೊಳ್ಳತೊಡಗುತ್ತಾನೆ. ಇನ್ನು ಧರ್ಮಗುರು­ಗಳಂತೂ ಅಷ್ಟಿಷ್ಟು ವಿಮರ್ಶೆ ಮಾಡುವವರ ಜೊತೆಗಿರುವುದಿರಲಿ, ಕೊನೆಯ ಪಕ್ಷ ತಮ್ಮನ್ನು ಕೆಣಕುವ ಧಾರ್ಮಿಕ ಸಾಹಿತ್ಯವನ್ನು ಕೂಡ ಓದುವ ಧೈರ್ಯ ಮಾಡುವಂತೆ ತೋರುವುದಿಲ್ಲ. ಬಸವಣ್ಣನವರ ಮೂರು ನಾಲ್ಕು ವಚನಗಳನ್ನೇ ಮತ್ತೆ ಮತ್ತೆ ಒಪ್ಪಿಸುವ ಧರ್ಮಗುರುಗಳು ಅಲ್ಲಮನ ಕಟುಟೀಕೆಯ ವಚನಗಳು ಹುಟ್ಟಿಯೇ ಇಲ್ಲವೆಂಬಂತೆ ಮೌನ ತಾಳತೊಡಗುತ್ತಾರೆ. ಈ ವಿಮರ್ಶಾಹೀನ ಸ್ಥಿತಿ ಎಲ್ಲ ರಂಗಗಳಲ್ಲೂ ಹಬ್ಬತೊಡಗುತ್ತದೆ...
ಹಾಗಾದರೆ ಅದು ಸಾಹಿತ್ಯಲೋಕದಲ್ಲೂ ಆಗುವುದು ಸಹಜವಲ್ಲವೆ ಎನ್ನುವವರಿರ­ಬಹುದು.

ಆದರೆ ಅದು ಅಷ್ಟು ಸಹಜವೇನಲ್ಲ. ಕಾರಣ: ಸಾಹಿತ್ಯ ರಚನೆಯಲ್ಲಿ ತೊಡಗಿರುವವರ ಕೆಲಸವೇ ಎಲ್ಲವನ್ನೂ-– ಬರೆಯುವವರನ್ನೂ ಒಳ ಗೊಂಡಂತೆ ಎಲ್ಲರನ್ನೂ-– ಪರೀಕ್ಷೆಗೆ ಒಳಪಡಿ­ಸುವುದು. ಆದ್ದರಿಂದ ಸಾಹಿತ್ಯವಲಯ ಅಥವಾ ಬರೆವವರ ವಲಯ ಕೆಲವೊಮ್ಮೆಯಾದರೂ ಖಚಿತ ನಿಲುವು ತಳೆಯುವ, ಆಳವಾಗಿ ಅನ್ನಿಸಿದ್ದನ್ನು ಪರೀಕ್ಷೆಗೆ ಒಳಪಡಿಸಿ ತೀರ್ಮಾನ ಕೊಡುವ ಕೆಲಸವನ್ನು ಮಾಡುತ್ತಿರಲೇ­ಬೇಕಾ­ಗುತ್ತದೆ. ಲಾಭ, ನಷ್ಟದ ಹಂಗು ಬಿಟ್ಟು ಇಲ್ಲಾ­ದರೂ ಸತ್ಯಕ್ಕೆ ಹತ್ತಿರ ನಿಂತು ಮಾತಾಡುವುದು, ಬರೆಯುವುದು ಶುರುವಾದರೆ ಉಳಿದ ವಲಯಗಳ ಜನರಲ್ಲಿ ಕೊಂಚವಾದರೂ ಲಜ್ಜೆ ಆವರಿಸತೊಡಗುತ್ತದೆ.

ಅದನ್ನು ಬಿಟ್ಟು ತಮ್ಮ ಸರಕನ್ನು ಮಾರಲೇಬೇಕಾದ ಒತ್ತಡದಲ್ಲಿರುವ ಸೇಲ್ಸ್‌ಮನ್‌ಗಳಂತೆ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಂಶೋಧನೆಯ ವಲಯಗಳು ಮಾತಾಡತೊಡಗಿದರೆ ಒಂದು ಸಂಸ್ಕೃತಿಯಲ್ಲಿ ಯಾವ ಸೂಕ್ಷ್ಮತೆಯೂ ಉಳಿಯಲಾರದು. ‘ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿದರು’, ‘ಬೈದವನು ಬದುಕಲು ಹೇಳುತ್ತಾನೆ’ ಎಂಬ ರೀತಿಯ ಸರಳ ವಿವೇಕವನ್ನು ರೂಪಿಸಿರುವ ಸಮುದಾಯದಲ್ಲಿ ಹೊಗಳಿಕೆ, ಟೀಕೆಗಳ ಬಗ್ಗೆ ಖಚಿತ ನಿಲುವಿರುವಂತಿದೆ. ಈ ವಿವೇಕ ಇವತ್ತು ಹಿನ್ನೆಲೆಗೆ ಸರಿಯುತ್ತಿರುವುದು ಮಾರುಕಟ್ಟೆಯ ಭಾಷೆ ಇಡೀ ಸಂಸ್ಕೃತಿಯನ್ನು ಆವರಿಸಿ ಎಲ್ಲವನ್ನೂ ಅಳ್ಳಕಗೊಳಿಸುತ್ತಿರುವುದರ ವಿನಾಶಕಾರಿ ಸೂಚನೆಯಂತಿದೆ.

ಕೊನೆ ಟಿಪ್ಪಣಿ: ಕೆಪಿಎಸ್‌ಸಿ ಶುದ್ಧೀಕರಣ
ಕೆಪಿಎಸ್‌ಸಿ ಈಚಿನ ಆಯ್ಕೆಗಳನ್ನು ರದ್ದು­ಗೊಳಿಸಿದ ಕರ್ನಾಟಕ ಸರ್ಕಾರದ ನಿಲುವಿನ ಸುತ್ತ ಹಲ ಬಗೆಯ ರಾಜಕಾರಣಗಳು ಸೃಷ್ಟಿ­ಯಾಗುತ್ತಿವೆ. ಇಲ್ಲಿನ ಕೆಲವು ಭ್ರಷ್ಟ ಆಯ್ಕೆ­ಗಳನ್ನು ಕುರಿತು ಮೊದಲು ಮುಖ್ಯ ಪ್ರಶ್ನೆಗಳನ್ನು ಎತ್ತಿದ ಪ್ರೊ. ಬಿ.ಕೆ.ಚಂದ್ರಶೇಖರ್ ಅವರ ಬದ್ಧತೆಯನ್ನು ಎಲ್ಲ ಜಾತಿಯ ಪ್ರತಿಭಾವಂತರೂ ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕು. ಕೆಲವರು ಈ ಆಯ್ಕೆಯ ವಂಚನೆಗೆ ಸಾಮಾಜಿಕ ನ್ಯಾಯದ ಪ್ರಶ್ನೆ ಬೆರೆಸಿ ಮಾಡುತ್ತಿರುವ ಚಿಲ್ಲರೆ ರಾಜ­ಕಾರಣ ಅಸಹ್ಯಕರವಾಗಿದೆ. ಕೆಪಿಎಸ್‌ಸಿಯಂಥ ಸಂಸ್ಥೆಗಳು ಕೆಟ್ಟರೆ ಎಲ್ಲ ಜಾತಿಯ ಪ್ರತಿಭಾ­ವಂತರಿಗೂ ಅನ್ಯಾಯವಾಗುತ್ತದೆ. ಆದ್ದ­ರಿಂದ ಕೆಪಿಎಸ್‌ಸಿಯ ಶುದ್ಧೀಕರಣ ನಿಜಕ್ಕೂ ದಿಟ್ಟ ಹೆಜ್ಜೆ. ಈ ನಿಟ್ಟಿನಲ್ಲಿ ಮೊನ್ನೆ ಉನ್ನತ ಶಿಕ್ಷಣ ಮಂತ್ರಿ ದೇಶಪಾಂಡೆಯವರು ಪದವಿ ಕಾಲೇ ಜುಗಳಿಗೆ ಅಧ್ಯಾಪಕರನ್ನು ಆಯ್ಕೆ ಮಾಡಲು ಪ್ರವೇಶ­ಪರೀಕ್ಷೆಯನ್ನು ಮಾತ್ರ ಮಾನದಂಡ­ವಾಗಿಸುವ ನಿರ್ಧಾರ ಮುಖ್ಯವಾದುದು.

ಸಂದರ್ಶನದ ನಾಟಕವೇ ಎಲ್ಲ ಭ್ರಷ್ಟಾಚಾರದ ಮೂಲ. ಸಂದರ್ಶನವನ್ನು ಕಿತ್ತು ಹಾಕಿ ಇನ್ನಿತರ ಬಗೆಯ ಆಯ್ಕೆಯ ಮಾನದಂಡಗಳ ಬಗ್ಗೆ ಮುಕ್ತ ಸಾರ್ವಜನಿಕ ಚರ್ಚೆ ನಡೆಯಲಿ. ನಿಜವಾದ ಕಾಳಜಿಯಿದ್ದರೆ ಸರ್ಕಾರಗಳಿಂದ ಹಿಡಿದು ಯಾವು­ದನ್ನು ಬೇಕಾದರೂ ಶುದ್ಧಿಗೊಳಿಸ­ಬಹುದು ಎಂಬ ಬಗ್ಗೆ ನಾವು ಎಂದೂ ನಂಬಿಕೆ ಕಳೆದುಕೊಳ್ಳಬಾರದು.

(ಲೇಖಕರು ಕನ್ನಡದ ಪ್ರಮುಖ ಬರಹಗಾರ ಹಾಗೂ ಚಿಂತಕ)
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.