ADVERTISEMENT

ಸಾಹಿತ್ಯ ಅಕಾಡೆಮಿ ಸೃಷ್ಟಿಸಿದ ವಿಚಿತ್ರ ಬಿಕ್ಕಟ್ಟು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:21 IST
Last Updated 16 ಜೂನ್ 2018, 9:21 IST

ಕಳೆದ ತಿಂಗಳು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಪ್ರಶಸ್ತಿಗಳನ್ನು ವಾಪಸ್ ಕೊಟ್ಟ ಲೇಖಕ, ಲೇಖಕಿಯರನ್ನು ತಮ್ಮ ನಿಲುವು ಬದಲಿಸುವಂತೆ ಕೇಳಿಕೊಂಡಿದ್ದ ಅಕಾಡೆಮಿ ಮೊನ್ನೆ ‘ಇದುವರೆಗೆ ಪ್ರಶಸ್ತಿ ವಾಪಸ್ ಪಡೆದವರ ಪೈಕಿ ಮೂವತ್ತೈದು ಲೇಖಕರ ಚೆಕ್ ತಲುಪಿವೆ. ಪ್ರಶಸ್ತಿ ವಾಪಸ್ ನಿರ್ಧಾರವನ್ನು ಒಪ್ಪದ ಕಾರಣಕ್ಕೆ ನಾವು ಈ ಚೆಕ್‌ಗಳನ್ನು ಬ್ಯಾಂಕಿಗೆ ನಗದೀಕರಣಕ್ಕೆ ಕಳುಹಿಸಿಲ್ಲ’ ಎಂದು ಹೇಳಿದೆ. ಆ ಮೂಲಕ ವಿಚಿತ್ರವಾದ ಸಾಂಸ್ಕೃತಿಕ ಬಿಕ್ಕಟ್ಟೊಂದನ್ನೂ ಸೃಷ್ಟಿಸಿದೆ. ಆ ಸಂದರ್ಭದಲ್ಲಿ ಸಾಹಿತಿಗಳು ವಾಪಸ್ ಮಾಡಿದ ಪ್ರಶಸ್ತಿ ಫಲಕಗಳು ಏನಾಗಲಿವೆ ಎಂಬ ಬಗ್ಗೆ ಅದು ಏನೂ ಹೇಳಿದಂತಿಲ್ಲ.

ನಿಮಗೆ ನೆನಪಿರಬಹುದು: ಈ ಪ್ರಶಸ್ತಿಗಳು ಇಂಡಿಯಾದಲ್ಲಿ ಹೆಚ್ಚುತ್ತಿರುವ ಅಸಹನೆಯನ್ನು ಪ್ರತಿಭಟಿಸಿ ಹಿರಿಯ ಲೇಖಕ-ಲೇಖಕಿಯರಿಂದ ಹಿಡಿದು ಕಿರಿಯರವರೆಗೆ ದೇಶದ ವಿವಿಧ ಭಾಗಗಳ ಸಾಹಿತಿಗಳು ಅಕಾಡೆಮಿಗೆ ಮರಳಿಸಿದಂಥವು. ಸಿನಿಮಾ, ವಿಜ್ಞಾನಗಳಿಗೆ ಸಂಬಂಧಿಸಿದ ಸಂಸ್ಥೆಗಳು ತಮಗೆ ಹಿಂದಿರುಗಿಸಲಾದ ಪ್ರಶಸ್ತಿಗಳನ್ನು ಕುರಿತು ಯಾವ ನಿಲುವುಗಳನ್ನು ತಳೆದಿವೆಯೋ ತಿಳಿಯದು. ಕನ್ನಡ ಸಾಹಿತ್ಯ ಪರಿಷತ್ತು ತನ್ನ ಎಂದಿನ ಜಡ ಧಾಟಿಯಲ್ಲಿ ಸಾಹಿತಿಗಳು ಹಿಂದಿರುಗಿಸಿದ ಚೆಕ್ಕುಗಳು ಪರಿಷತ್ತಿನಲ್ಲೇ ಇರುತ್ತವೆ ಎಂದು ಹೇಳಿ ಸುಮ್ಮನಾಯಿತು. ಈ ನಿಟ್ಟಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಲುವು ಸರಿಯಾಗಿತ್ತು.

ಅದು ಮೊದಲು ತಾನು ಖಚಿತವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ವಿರುದ್ಧ ಇದ್ದೇನೆ ಎಂದು ಸ್ಪಷ್ಟಪಡಿಸಿ, ಸಾಹಿತಿಗಳನ್ನು ಪ್ರಶಸ್ತಿಗಳನ್ನು ವಾಪಸ್ ಮಾಡದಿರಲು ಕೇಳಿಕೊಂಡಿತು. ನಂತರ, ಸಾಹಿತಿಗಳು ಪ್ರಶಸ್ತಿ ವಾಪಸ್ ಮಾಡಲು ನೀಡಿರುವ ಕಾರಣಗಳನ್ನು ಕುರಿತ ವರದಿಯನ್ನು ಸಂಸ್ಕೃತಿ ಇಲಾಖೆಗೆ, ಸರ್ಕಾರಕ್ಕೆ ಸಲ್ಲಿಸಿತು; ಸಾಹಿತಿಗಳು ಹಿಂತಿರುಗಿಸಿದ ಚೆಕ್‌ಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಕೌಂಟಿಗೆ ಜಮಾ ಮಾಡಲಾಯಿತು. ಇದು ಸಾಹಿತಿಗಳ ಆಳದ ಭಾವನೆಗಳನ್ನು ಗೌರವಿಸುವ ಹಾಗೂ ತಾಂತ್ರಿಕವಾಗಿಯೂ ತಾತ್ವಿಕವಾಗಿಯೂ ಸರಿಯಾದ ನಡೆಯಾಗಿತ್ತು. ಆದರೆ, ಕೇಂದ್ರ ಸಾಹಿತ್ಯ ಅಕಾಡೆಮಿ ಮಾತ್ರ ಸಾಹಿತ್ಯದ ಪ್ರಾಣವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯನ್ನು ಪ್ರತಿಭಟಿಸಿರುವ ಸಾಹಿತಿಗಳ ಕೇಂದ್ರ ಪ್ರಶ್ನೆಯನ್ನೇ ಸರಿಯಾಗಿ ಗ್ರಹಿಸದೇ ಹೋಗಿದೆ.

ಒಂದು ಸಂಸ್ಥೆಯಾಗಿ ಅಕಾಡೆಮಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಪ್ರಶಸ್ತಿ ಮರಳಿಸಿದವರು ಆಯಾ ಅವಧಿಗಳ ಶ್ರೇಷ್ಠ ಕೃತಿಗಳನ್ನು ರಚನೆ ಮಾಡಿದವರೆಂದು ಸ್ವತಃ ಅಕಾಡೆಮಿಯೇ ಗುರುತಿಸಿ ಗೌರವಿಸಿರುವ ದೊಡ್ಡ ಸಾಹಿತಿಗಳು. ಅವರ ಆಳದ ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯನ್ನು ಅಕಾಡೆಮಿ ಹಂಚಿಕೊಂಡಿಲ್ಲವೆಂಬುದು ಅದರ ಯಾಂತ್ರಿಕ ‘ಸಾಂಸ್ಥಿಕ’  ಪ್ರತಿಕ್ರಿಯೆಯಲ್ಲಿ  ಸ್ಪಷ್ಟವಾಗಿದೆ. ಈ ಪ್ರತಿಭಟನೆಗಳು ನಡೆಯುತ್ತಿರುವಾಗ ಅಕಾಡೆಮಿ ಈ ಲೇಖಕ, ಲೇಖಕಿಯರ ಕಾಳಜಿಗೆ ಪ್ರತಿಕ್ರಿಯಿಸಲು ತೆಗೆದುಕೊಂಡ ಸುದೀರ್ಘ ಕಾಲ ಹಾಗೂ ಅಕಾಡೆಮಿಯ ವಕ್ತಾರರು ನೀಡಿದ ತಡವರಿಕೆಯ ಹೇಳಿಕೆಗಳನ್ನು ಗಮನಿಸಿದರೆ ಇಂಡಿಯಾದ ದೊಡ್ಡ ಸಾಹಿತ್ಯ ಸಂಸ್ಥೆ ಈ ಚಾರಿತ್ರಿಕ ಸ್ಫೋಟದ ಮಹತ್ವವನ್ನು ಗ್ರಹಿಸುವಲ್ಲಿ ಸಂಪೂರ್ಣವಾಗಿ ಸೋತಿದೆಯೆಂಬುದು ಸ್ಪಷ್ಟವಾಗುತ್ತದೆ.

ಈ ಜಡತೆ ಹಾಗೂ ಕಿಲಾಡಿತನ ಸಾಹಿತ್ಯ ಸಂಸ್ಥೆಗಳೂ ಸರ್ಕಾರಗಳನ್ನು ಓಲೈಸುವುದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ, ಅಷ್ಟೆ. ಆದರೆ ಸಾಕಷ್ಟು ಸ್ವಾಯತ್ತತೆಯಿರುವ ಸಂಸ್ಥೆಯಾದ ಅಕಾಡೆಮಿ ಹೀಗೆ ವರ್ತಿಸಬೇಕಾಗಿರಲಿಲ್ಲ. ಕೊನೆಯಪಕ್ಷ ಅದು ಈ ಎಲ್ಲ ಲೇಖಕ, ಲೇಖಕಿಯರನ್ನು ದೆಹಲಿಗೆ ಆಹ್ವಾನಿಸಿ, ಅವರೆಲ್ಲ ಎತ್ತಿರುವ ಪ್ರಶ್ನೆಗಳನ್ನು ಚರ್ಚಿಸುವ ದೊಡ್ಡ ಸಮಾವೇಶವನ್ನೋ ವಿಚಾರ ಸಂಕಿರಣವನ್ನೋ ಮಾಡಬಹುದಿತ್ತು. ಆ ಮೂಲಕ ದೊಡ್ಡ ಸಾಹಿತಿಗಳು ಎತ್ತಿರುವ ಪ್ರಶ್ನೆಗಳನ್ನು ದೇಶದ ಮುಂದೆ ಇಟ್ಟು, ಚಿಂತನೆಯ ಹೊಸ ಹಾದಿ ತೆರೆದು ನಿಜವಾದ ಸಾಂಸ್ಕೃತಿಕ ನಾಯಕನಾಗಬಹುದಿತ್ತು.

ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ: ದೆಹಲಿಯಲ್ಲಿರುವ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್, ನ್ಯಾಷನಲ್ ಬುಕ್ ಟ್ರಸ್ಟ್ ಅಥವಾ ಯು.ಜಿ.ಸಿ. ಸಂಸ್ಥೆಗಳಂತೆ ಕೇಂದ್ರ ಸರ್ಕಾರದಿಂದ ನೇಮಕವಾದ ಅಧ್ಯಕ್ಷರಿರುವುದಿಲ್ಲ. ಬದಲಿಗೆ, ಇಲ್ಲಿನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸಾಹಿತ್ಯ ವಲಯದ ಪ್ರತಿನಿಧಿಗಳು ಮತ ಹಾಕುವ ಮೂಲಕ ಆಯ್ಕೆ ಮಾಡುತ್ತಾರೆ. ಪ್ರತಿಯೊಂದು ರಾಜ್ಯ ಸರ್ಕಾರವೂ ಆಯ್ಕೆ ಮಾಡಿದ ಒಬ್ಬ ಸಾಹಿತಿ, ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು, ದೇಶದಾದ್ಯಂತ ಇರುವ ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಾಂಸ್ಕೃತಿಕ ಸಂಸ್ಥೆಗಳು ಸೂಚಿಸುವ ಲೇಖಕರು ಹಾಗೂ ಇವೆಲ್ಲ ವಲಯಗಳಲ್ಲೂ ನುಸುಳುವ ‘ಲೇಖಕ ವೇಷಧಾರಿಗಳು’; ಕೇಂದ್ರ ಸರ್ಕಾರದ ಹಣಕಾಸು, ಸಂಸ್ಕೃತಿ, ವಾರ್ತಾ ಇಲಾಖೆಗಳ ಮೂರು–ನಾಲ್ಕು ಸದಸ್ಯರು- ಇವರೆಲ್ಲ ಇರುವ ಅಕಾಡೆಮಿಯ ಕಾರ್ಯಕಾರಿಣಿ ಸಭೆ ದೇಶದ ಮುಖ್ಯ ಸಾಹಿತಿಗಳನ್ನು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತದೆ.

ಹೀಗೆ ಚುನಾವಣೆಯ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವ ಅಕಾಡೆಮಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮುಂಚೂಣಿ ವಕ್ತಾರನಾಗಿರುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ, ಇಲ್ಲಿ ನಡೆಯುವ ಚುನಾವಣೆಗಳಲ್ಲಿ ಮತದಾರರಾಗಿರುವ ಸಾಹಿತಿಗಳು ಜವಾಬ್ದಾರಿಯಿಂದ ಹಾಗೂ ಆತ್ಮಸಾಕ್ಷಿಯ ಮೂಲಕ ಮತ ಚಲಾಯಿಸಬೇಕಾದ ಅಗತ್ಯ ಮತ್ತೆ ಚರ್ಚೆಗೆ ಬಂದಿದೆ. ಅಲ್ಲಿ ಇರಬಹುದಾದ ಸ್ವತಂತ್ರ ಮನಸ್ಸಿನ ಸಾಹಿತಿಗಳು ಅಕಾಡೆಮಿಯ ನಿಲುವಿಗಿಂತ ಭಿನ್ನವಾದ ನಿಲುವುಗಳನ್ನು ಇನ್ನಿತರ ವೇದಿಕೆಗಳಲ್ಲಾದರೂ ತಳೆಯಬೇಕಾಗುತ್ತದೆ. ಸಾಹಿತ್ಯ ಸಂಸ್ಥೆಗಳೆಂದರೆ ಹೈಕಮಾಂಡ್ ಹೇಳಿದ್ದನ್ನು ಪಾಲಿಸುವ ಗುಲಾಮಪಕ್ಷಗಳಲ್ಲ ಎಂಬ ಪ್ರಾಥಮಿಕ ಸತ್ಯವನ್ನು ಸಾಹಿತಿಗಳು ಒತ್ತಿ ಹೇಳಬೇಕಾಗುತ್ತದೆ.  ಇತ್ತ ಮಳೆ ನಿಂತರೂ ಮರದ ಹನಿ ನಿಂತಿಲ್ಲವೆಂಬಂತೆ, ಈ ಅಂಕಣ ಬರೆಯುವ ದಿನ ಕೂಡ ಬಿಜೆಪಿ ವಕ್ತಾರ ಮುಕ್ತಾರ್ ಅಬ್ಬಾಸ್ ನಕ್ವಿ ಪ್ರಶಸ್ತಿಗಳನ್ನು ವಾಪಸ್ ಕೊಟ್ಟವರ ರಾಜಕಾರಣದ ವಿರುದ್ಧ ಮತ್ತೆ ಮಾತಾಡಿದ್ದಾರೆ.

ಆದರೆ ಇಂಥವರೆಲ್ಲ ಅರಿಯಬೇಕಾದ ಸತ್ಯವೆಂದರೆ, ಈ ಪ್ರತಿಕ್ರಿಯೆಗಳಲ್ಲಿರುವುದು ಚಿಲ್ಲರೆ ರಾಜಕಾರಣವಲ್ಲ; ಇಲ್ಲಿರುವುದು ಈ ದೇಶದಲ್ಲಿ ಹೊಸ ಎಚ್ಚರ ಹಾಗೂ ಚಿಂತನೆಯನ್ನು ರೂಪಿಸಬಲ್ಲ ಧೀಮಂತ ಸಾಂಸ್ಕೃತಿಕ ರಾಜಕಾರಣ. ನಾಡಿನ ವಿಜ್ಞಾನಿಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ನೂರಕ್ಕೂ ಹೆಚ್ಚು ಮಂದಿ ಪ್ರಶಸ್ತಿಗಳನ್ನು ವಾಪಸ್ ಕೊಟ್ಟ ಈ ಘಟನೆ ಚಾರಿತ್ರಿಕವಾದುದು. ಇದು ಈ ದೇಶದಲ್ಲಿ ಆತ್ಮಸಾಕ್ಷಿಯುಳ್ಳ ಚಿಂತಕ, ಚಿಂತಕಿಯರು ದಿಟ್ಟವಾಗಿ ಮಾತಾಡುವ ಹಾಗೂ ಜನರು ಅವರ ಮಾತುಗಳನ್ನು ಕೇಳಿಸಿಕೊಳ್ಳುವ ಕಾಲ ಮತ್ತೆ ಬಂದಿರುವುದನ್ನು ಸೂಚಿಸುತ್ತದೆ. ಈ ನೂರು ಮಂದಿ ಚಿಂತಕ, ಚಿಂತಕಿಯರ ಪ್ರತಿಕ್ರಿಯೆಯ ಅದ್ಭುತ ಪರಿಣಾಮವನ್ನು ಗಮನಿಸಿ: ಈ ಸಾಂಸ್ಕೃತಿಕ ಬಿರುಗಾಳಿಗೆ ಪಾರ್ಲಿಮೆಂಟಿನಲ್ಲಿ ಬೃಹತ್ ಸದಸ್ಯ ಬಲವುಳ್ಳ ಆಳುವ ಪಕ್ಷದ ಸ್ಥೈರ್ಯವೇ ಅಲುಗಾಡಿಹೋಯಿತು. ಈ ಪ್ರತಿಕ್ರಿಯೆಗಳ ವಿರುದ್ಧ ಅಸಂಬದ್ಧ ವಾದಗಳನ್ನು ಅದು ಬಿತ್ತರಿಸಲಾರಂಭಿಸಿತು;

ಬಲಪಂಥೀಯ ಪಕ್ಷಗಳನ್ನು ಬೆಂಬಲಿಸುವ ಲೇಖಕರು, ಕಲಾವಿದರು ಆ ಪಕ್ಷಗಳ ಹೇಳಿಕೆಗಳನ್ನು ಮತ್ತೆ ಮತ್ತೆ ಹೇಳಿ ಅದನ್ನೇ ಸತ್ಯ ಮಾಡುತ್ತೇವೆಂಬ ಜರ್ಮನಿಯ ಗೋಬೆಲ್ಸ್ ತಂತ್ರವನ್ನು ಬಳಸಿದರು. ಜನರು ಸಾಹಿತಿ, ಚಿಂತಕರ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾರೆಂಬ ಭಯದಿಂದಾಗಿ, ಬಿಜೆಪಿ ಪರವಿರುವ ಸಾಹಿತಿ, ಕಲಾವಿದರು ಈ ಚಿಂತಕರ ವಿರುದ್ಧ ಮೆರವಣಿಗೆ ಹೊರಟು ‘ಸರ್ಕಾರಿ ಸೇವೆ’ಯನ್ನೂ ಮಾಡಿದರು. ತಾವು ‘ತಟಸ್ಥ’ರೆಂದು ಕರೆದುಕೊಂಡು ‘ಪ್ರಶಸ್ತಿಗಳನ್ನು ವಾಪಸ್ ಕೊಡಬೇಡಿ’ ಎಂದು ಕ್ಷೀಣ ರಾಗ ಹಾಡಿದವರೂ ಅಂತಿಮವಾಗಿ ಸರ್ಕಾರದ ಧೋರಣೆಯನ್ನೇ ಬೆಂಬಲಿಸಿದಂತಾಯಿತು. ಇದರ ನಡುವೆ ಬುದ್ಧಿಜೀವಿಗಳ ಈ ಪ್ರಶಸ್ತಿ ವಾಪಸಾತಿಗೆ ಯುದ್ಧೋಪಾದಿಯಲ್ಲಿ ಪ್ರಚಾರ ಕೊಟ್ಟ ಮಾಧ್ಯಮಗಳು ಈ ನಿಲುವುಗಳನ್ನು ಬೆಂಬಲಿಸಿದ ರೀತಿ ಕೂಡ ಚಾರಿತ್ರಿಕವಾದುದು.  ಆದರೆ ಇದನ್ನು ಬಿಜೆಪಿ-ಕಾಂಗ್ರೆಸ್ ನಡುವಣ ಜಗಳ ಎಂದು ಬಿಂಬಿಸಲೆತ್ನಿಸಿದವರ ಕ್ಷುದ್ರ ಪ್ರಯತ್ನವೂ ಅದರೊಟ್ಟಿಗೇ ನಡೆಯುತ್ತಿತ್ತು.   

ಅದೇನೇ ಇದ್ದರೂ, ಈ ಅವಧಿಯಲ್ಲಿ ಈ ಪ್ರತಿಭಟನೆ ಪಡೆಯುತ್ತಿರುವ ವ್ಯಾಪಕ ತಾತ್ವಿಕತೆ ಮತ್ತೆ ಸಾಹಿತಿ, ಕಲಾವಿದರು ಹಾಗೂ ಒಟ್ಟಾರೆಯಾಗಿ ಜವಾಬ್ದಾರಿಯುತ ಬುದ್ಧಿಜೀವಿಗಳನ್ನು ಇಂಡಿಯಾದ ಆತ್ಮಸಾಕ್ಷಿಯ ಸಂರಕ್ಷಕರಾಗಿ ಕೇಂದ್ರ ರಂಗಕ್ಕೆ ತಂದು ನಿಲ್ಲಿಸಿದೆ. ಇದು ಸಾಧಾರಣವಾದ ಬೆಳವಣಿಗೆಯಲ್ಲ. ಸಾಹಿತಿಗಳು ಹಾಗೂ ವಿವಿಧ ವಲಯಗಳ ಬುದ್ಧಿಜೀವಿಗಳು ತಮ್ಮ ವ್ಯಕ್ತಿತ್ವವನ್ನು ಹಾಗೂ ನಿರ್ವಹಿಸಬೇಕಾದ ಪಾತ್ರಗಳನ್ನು ಮರುವ್ಯಾಖ್ಯಾನ ಮಾಡಿಕೊಳ್ಳಬೇಕಾದ ಕಾಲ ಮತ್ತೊಮ್ಮೆ ಬಂದಿದೆಯೆಂಬುದನ್ನೂ ಇಡೀ ಸ್ಫೋಟ ಸೂಚಿಸುತ್ತಿದೆ. ಆದ್ದರಿಂದಲೇ ಸಾಹಿತ್ಯ ಅಕಾಡೆಮಿ  ಪ್ರಶಸ್ತಿ ಹಣವನ್ನು ವಾಪಸ್ ಪಡೆಯದಿದ್ದರೆ, ಈ ಮೊತ್ತವನ್ನು ಈ ಎಲ್ಲ ಸಾಹಿತಿಗಳೂ ಒಗ್ಗೂಡಿಸಿ ಒಂದು  ಮಹತ್ವದ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸುವುದನ್ನು ಕುರಿತು ಯೋಚಿಸಬಹುದು. ಆ ಮೂಲಕ ಈ ಚಾರಿತ್ರಿಕ ಘಟ್ಟದ ಅಪೂರ್ವ ಸ್ಪಿರಿಟ್ಟನ್ನು ಸದಾ ಕಾಯ್ದಿರಿಸಿಕೊಳ್ಳಬಹುದು.

ಈ ಪ್ರಶಸ್ತಿಗೆ ‘ಆತ್ಮಸಾಕ್ಷಿ’ ‘ಮುಕ್ತ ಅಭಿವ್ಯಕ್ತಿ’ ‘ಸ್ವತಂತ್ರ ಅಭಿವ್ಯಕ್ತಿ’ ‘ಸಹನಾ ಪ್ರಶಸ್ತಿ’ ಅಥವಾ ಈ ಪ್ರತಿಭಟನೆಯ ಸ್ವರೂಪವನ್ನು ಬಿಂಬಿಸುವ ಇಂಥ ಯಾವುದಾದರೂ ಹೆಸರನ್ನು ಕೊಡಬಹುದು. ಇಂಥದೊಂದು ಪ್ರಶಸ್ತಿಯನ್ನು ರೂಪಿಸಿ, ಇಂಡಿಯಾದುದ್ದಕ್ಕೂ ಯಾವುದೇ ಕ್ಷೇತ್ರದಲ್ಲಿ ಈ ಬಗೆಯ ಹೋರಾಟದಲ್ಲಿ, ಚಿಂತನೆಯಲ್ಲಿ, ಕ್ರಿಯೆಯಲ್ಲಿ, ಬರವಣಿಗೆಯಲ್ಲಿ, ಸಂಶೋಧನೆಯಲ್ಲಿ ತೊಡಗಿರುವ ವ್ಯಕ್ತಿಯೊಬ್ಬರಿಗೆ ಈ ಪ್ರಶಸ್ತಿಯನ್ನು ಕೊಟ್ಟು ಪ್ರತಿ ವರ್ಷ ಅಭಿವ್ಯಕ್ತಿ, ಅಸಹನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಗಂಭೀರವಾಗಿ ಚರ್ಚಿಸಬಹುದು. ಇದನ್ನು ದೇಶದ ವಿಶಿಷ್ಟ ಪ್ರಶಸ್ತಿಯನ್ನಾಗಿ ಕೂಡ ರೂಪಿಸಬಹುದು.    ಈ ನಿಲುವನ್ನು ಕೇವಲ ಸಾಹಿತ್ಯ ವಲಯವಾದರೂ ತೆಗೆದುಕೊಳ್ಳಬಹುದು; ಅಥವಾ ಇನ್ನಿತರ ವಲಯದವರೂ ಸೇರಿ ತೆಗೆದುಕೊಳ್ಳಬಹುದು. ಆದರೆ ಇಂಥದೊಂದು ನಿಲುವನ್ನು ಇಡೀ ಪ್ರಶ್ನೆಯ ಬಿಸಿ ಆರಿ ಹೋಗುವ ಮುನ್ನ ತೆಗೆದುಕೊಳ್ಳುವ ಅಗತ್ಯವಿದೆ.

ಕೊನೆ ಟಿಪ್ಪಣಿ: ನೊಬೆಲ್ ಪ್ರಶಸ್ತಿಗೇ ‘ನೋ!’ ಎಂದವರು 1901. ಮೊದಲ ಬಾರಿಗೆ ನೊಬೆಲ್ ಪ್ರಶಸ್ತಿ ಕೊಟ್ಟ ವರ್ಷ. ಆ ಹೊತ್ತಿಗಾಗಲೇ ಆ ಕಾಲದ ಬಹುದೊಡ್ಡ ಲೇಖಕ ದಾಸ್ತೊವ್‌ಸ್ಕಿ ತೀರಿಕೊಂಡಿದ್ದ. ಆಗ ಬದುಕಿದ್ದ ಲೇಖಕರಲ್ಲಿ ದೊಡ್ಡವನಾದ ಟಾಲ್ ಸ್ಟಾಯ್‌ಗೆ ನೊಬೆಲ್ ಬರಬಹುದು ಎಂದು ಅವನ ಅಭಿಮಾನಿಗಳು ನಿರೀಕ್ಷಿಸಿದ್ದರು. ಆ ವರ್ಷ ಫ್ರೆಂಚ್ ಕವಿ ರೆನೆ ಸಲ್ಲಿ ಪ್ರಧೋಮ್‌ಗೆ ನೊಬೆಲ್ ಬಂತು. 1906ರಲ್ಲಿ ತನ್ನ ಹೆಸರನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ ಎಂಬ ಸುದ್ದಿ ಕಿವಿಗೆ ಬಿದ್ದಾಗ ಟಾಲ್ ಸ್ಟಾಯ್ ತನಗೆ ಪ್ರಶಸ್ತಿ ಕೊಡಬೇಡಿ ಎಂದು ನೊಬೆಲ್ ಸಮಿತಿಯನ್ನು ಕೇಳಿಕೊಂಡ. ಮುಂದಿನ ಒಂದೆರಡು ವರ್ಷಗಳಲ್ಲಿ ಟಾಲ್ ಸ್ಟಾಯ್‌ಗೆ ನೊಬೆಲ್ ಏಕೆ ಕೊಟ್ಟಿಲ್ಲವೆಂದು ಜನ ರೇಗುತ್ತಿದ್ದಾಗ, ಟಾಲ್ ಸ್ಟಾಯ್ ಬರೆದ: ‘ಮೊದಲನೆಯದಾಗಿ, ಇದು ಅಷ್ಟೊಂದು ಹಣವನ್ನು (1 ಲಕ್ಷ ಡಾಲರ್) ನಿಭಾಯಿಸುವ ಕಷ್ಟದಿಂದ ನನ್ನನ್ನು ಪಾರು ಮಾಡಿದೆ. ಯಾಕೆಂದರೆ, ನನ್ನ ಪ್ರಕಾರ ಅಂಥ ಹಣ ಕೇಡನ್ನು ಮಾತ್ರ ತರುತ್ತದೆ. ಎರಡನೆಯದಾಗಿ, ನಾನು ಎಂದೂ ಕಂಡಿರದ ಜನರಿಂದ ನನ್ನ ಬಗ್ಗೆ ಈಗ ವ್ಯಕ್ತವಾಗಿರುವ ಅನುಕಂಪ ನಿಜಕ್ಕೂ ದೊಡ್ಡ ಗೌರವವಾಗಿದೆ’.

ಮುಂದೆ, 1964ರಲ್ಲಿ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಿದ ಜಾನ್ ಪಾಲ್ ಸಾರ್ತರ್ ಹೇಳಿದ್ದು: ‘ನಾನು ಸದಾ ಎಲ್ಲ ಅಧಿಕೃತ ಗೌರವ-ಪ್ರಶಸ್ತಿಗಳನ್ನು ತಿರಸ್ಕರಿಸುತ್ತಾ ಬಂದಿದ್ದೇನೆ. ಬರಹಗಾರ ತಾನೇ ಒಂದು ಸಂಸ್ಥೆಯಾಗಿ ಪರಿವರ್ತನೆಯಾಗಬಾರದು.  ಈ ನಿಲುವು ಲೇಖಕನ ಕೆಲಸ ಕುರಿತಂತೆ ನನ್ನ ಮೂಲಗ್ರಹಿಕೆಯ ಭಾಗವೂ ಆಗಿದೆ. ರಾಜಕೀಯ, ಸಾಮಾಜಿಕ ಅಥವಾ ಸಾಹಿತ್ಯಕ ನಿಲುವುಗಳನ್ನು ಇಟ್ಟುಕೊಂಡಿರುವ ಲೇಖಕ ತನ್ನವೇ ಆಗಿರುವ ಸಾಧನಗಳೊಳಗೆ-ಅಂದರೆ, ಲಿಖಿತ ಶಬ್ದದಲ್ಲಿ- ಮಾತ್ರ ಕೆಲಸ ಮಾಡುತ್ತಿರಬೇಕಾಗುತ್ತದೆ.’ ಆದರೂ ಆ ಪ್ರಶಸ್ತಿಯ 21,000 ಪೌಂಡ್ ತೆಗೆದುಕೊಂಡಿದ್ದರೆ, ‘ಅದನ್ನು ವರ್ಣಭೇದದ ವಿರುದ್ಧ ಹೋರಾಡುತ್ತಿದ್ದ ‘ಅಪಾರ್ಥೈಡ್ ಕಮಿಟಿ ಇನ್ ಲಂಡನ್’ಗೆ ಕೊಡಬಹುದಿತ್ತು’ ಎಂಬ ವಿಷಾದವೂ ಸಾರ್ತರ್ ಮನಸ್ಸಿನಲ್ಲಿ ಉಳಿಯಿತು.  ಪ್ರಶಸ್ತಿಗಳ ಬಗ್ಗೆ ನಾವು ಕಾಲಕಾಲಕ್ಕೆ ತಳೆಯುವ ನಿಲುವುಗಳ ಜೊತೆಗೇ ಈ ಇಬ್ಬರು ದೊಡ್ಡ ಲೇಖಕರ ನಿಲುವುಗಳನ್ನು ಕುರಿತೂ ಧ್ಯಾನಿಸಬೇಕೆನ್ನಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT