ಮೊನ್ನೆ ಮೈಸೂರಿನ ರಂಗಾಯಣದಲ್ಲಿ ಅನಂತಮೂರ್ತಿಅವರ ‘ಸಂಸ್ಕಾರ’ ಕಾದಂಬರಿಯ ರಂಗರೂಪದ ತಾಲೀಮು ನೋಡುತ್ತಿರುವಾಗ, ಈ ವರ್ಷ ‘ಸಂಸ್ಕಾರ’ಕ್ಕೆ 50 ತುಂಬಿತು ಎಂಬ ಸುದ್ದಿ ಕೇಳಿ ಬೆರಗಾಯಿತು. ನನ್ನ ಹದಿನೇಳು-ಹದಿನೆಂಟನೆಯ ವಯಸ್ಸಿನ ನಡುವೆ ಸಿಕ್ಕ ಈ ಕಾದಂಬರಿ ನನ್ನಲ್ಲಿ ಹುಟ್ಟಿಸಿದ ಕಂಪನಗಳೆಲ್ಲ ನೆನಪಾಗತೊಡಗಿದವು. ಕರ್ನಾಟಕದಲ್ಲಿ, ಇಂಡಿಯಾದಲ್ಲಿ, ಇಂಡಿಯಾದ ಆಚೆಗೂ ಚರ್ಚೆಗೆ ಒಳಗಾದ ‘ಸಂಸ್ಕಾರ’ ನಾನು ಮತ್ತೆ ಮತ್ತೆ ಓದಿದಂತೆಲ್ಲ, ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅದನ್ನು ಪಾಠ ಮಾಡಿದಂತೆಲ್ಲ ಬೆಳೆಯುತ್ತಲೇ ಬಂದಿದೆ.
ಅನಂತಮೂರ್ತಿಯವರ ತೀವ್ರ ಭಾವಗೀತಾತ್ಮಕ ಪ್ರಜ್ಞೆ ಹಾಗೂ ತೀಕ್ಷ್ಣ ವೈಚಾರಿಕತೆ; ಸಂಸ್ಕೃತಿ, ನಾಗರಿಕತೆ, ಧರ್ಮಗಳ ಬಗೆಗಿನ ಮೂಲಭೂತ ಪ್ರಶ್ನೆಗಳು, ಲೋಹಿಯಾರ ಜಾತಿವಿನಾಶದ ಕಲ್ಪನೆ, ಶಾಂತವೇರಿ ಗೋಪಾಲಗೌಡರ ಸಖ್ಯ, ಪಶ್ಚಿಮದ ಸಂದೇಹವಾದ, ಬಂಡಾಯ ಗುಣ, ಭೂತಕಾಲದ ಮೌಲ್ಯಗಳನ್ನು ತೀವ್ರ ಪರೀಕ್ಷೆಗೆ ಒಳಪಡಿಸುವ ಆಧುನಿಕ ನಿರೂಪಕ, ಲಾರೆನ್ಸ್ ಕಾದಂಬರಿಗಳು ಹಾಗೂ ‘ಸೆವೆಂತ್ ಸೀಲ್’ ಸಿನಿಮಾದ ಪ್ರಭಾವ… ಹೀಗೆ ಅನೇಕ ಅಂಶಗಳು ಈ ಕಾದಂಬರಿಯನ್ನು ರೂಪಿಸಿದಂತಿವೆ.
ಎಲ್ಲಕ್ಕಿಂತ ಮುಖ್ಯವಾಗಿ, ಈ ಕೃತಿ ಸ್ಥಗಿತಗೊಳ್ಳದೆ ಕಾಲಕಾಲಕ್ಕೆ ಸಾಂಸ್ಕೃತಿಕ ಪಠ್ಯವಾಗಿ ಬೆಳೆಯುತ್ತಾ ಹೊಸ ತಲೆಮಾರುಗಳ ವ್ಯಾಖ್ಯಾನಗಳನ್ನು ಪಡೆಯುತ್ತಾ ಬಂದಿರುವುದು ಅದರ ಭಾಗ್ಯ. ಕನ್ನಡದ ಕೆಲವೇ ಕೃತಿಗಳಿಗೆ ಈ ಭಾಗ್ಯ ಸಿಕ್ಕಂತಿದೆ. ಈ ಕಾದಂಬರಿಯನ್ನು ಓದದವರಿಗೆ ಅದರ ಪುಟ್ಟ ಕಥಾಹಂದರವನ್ನಿಲ್ಲಿ ಕೊಡಬಹುದು: ಅದು ಇಂಡಿಯಾದ ಸ್ವಾತಂತ್ರ್ಯ ಚಳವಳಿ ನಡೆಯುತ್ತಿದ್ದ ಕಾಲ. ದೂರ್ವಾಸಪುರವೆಂಬ ಅಗ್ರಹಾರದ ಬ್ರಾಹ್ಮಣರ ಯಾಂತ್ರಿಕ ಆಚರಣೆಗಳನ್ನು ಪ್ರಶ್ನಿಸುತ್ತಾ, ತನ್ನ ಇಚ್ಛೆಯಂತೆ ಬದುಕುವ ಬಂಡುಕೋರ ಬ್ರಾಹ್ಮಣ ನಾರಣಪ್ಪ ಜಡ ಸಮಾಜಕ್ಕೆ ಸವಾಲಾಗಿದ್ದಾನೆ.
ಅದೇ ಅಗ್ರಹಾರದಲ್ಲಿ ಕಾಯಿಲೆಯಿಂದ ಹಾಸಿಗೆ ಹಿಡಿದ ಹೆಂಡತಿಯ ಆರೈಕೆ ಮಾಡುತ್ತಾ, ಈ ಸೇವೆಯಿಂದ ‘ಇನ್ನಷ್ಟು ಹದವಾದೆ’ನೆಂದು ಹಿಗ್ಗುವ ‘ವೇದಾಂತ ಶಿರೋಮಣಿ’ ಪ್ರಾಣೇಶಾಚಾರ್ಯರು ಜನರಿಗೆ ಧರ್ಮಸೂಕ್ಷ್ಮಗಳನ್ನೂ ಸಂಸ್ಕೃತದ ಶೃಂಗಾರ ಕಾವ್ಯಗಳನ್ನೂ ವಿವರಿಸುತ್ತಾ ಬದುಕುತ್ತಿದ್ದಾರೆ. ನಾರಣಪ್ಪನನ್ನು ಅವರು ಬದಲಿಸಲೆತ್ನಿಸಿದರೆ, ನಾರಣಪ್ಪನೂ ಅವರನ್ನು ಬದಲಿಸಲೆತ್ನಿಸುತ್ತಾನೆ; ಅವರ ಪಾವಿತ್ರ್ಯದ ಕಲ್ಪನೆಗಳಿಗೆ ಸವಾಲೆಸೆಯುತ್ತಾನೆ.
ಇಂಥ ನಾರಣಪ್ಪ ಇದ್ದಕ್ಕಿದ್ದಂತೆ ತೀರಿಕೊಂಡಾಗ, ಕೆಳಜಾತಿಯ ಚಂದ್ರಿಯ ಜೊತೆ ಬದುಕುತ್ತಿದ್ದ ಅವನ ಶವಸಂಸ್ಕಾರವನ್ನು ತಾವು ಮಾಡಬಹುದೋ ಇಲ್ಲವೋ ಎಂಬ ಪ್ರಶ್ನೆ ಅವನ ಸಂಬಂಧಿಗಳಿಗೆ ಎದುರಾಗುತ್ತದೆ. ಈ ಪ್ರಶ್ನೆಗೆ ಪ್ರಾಣೇಶಾಚಾರ್ಯರು ತಿರುವಿ ಹಾಕುವ ಧರ್ಮಶಾಸ್ತ್ರಗಳಲ್ಲೂ ಉತ್ತರವಿಲ್ಲ; ಕೊನೆಗೆ ಮಾರುತಿಯಲ್ಲಿ ಕೂಡ ಉತ್ತರ ಸಿಕ್ಕುವುದಿಲ್ಲ. ಆ ಘಟ್ಟದಲ್ಲಿ ಕಾಡಿನಲ್ಲಿ ಅವರು ಹಠಾತ್ತನೆ ಚಂದ್ರಿಯನ್ನು ಕೂಡುತ್ತಾರೆ. ‘ಅನುಭವವೆಂದರೆ ಆಘಾತ’. ಅಲ್ಲಿಂದಾಚೆಗೆ ಅವರ ಜೀವನದ ದಿಕ್ಕು ಬದಲಾಗುತ್ತದೆ. ಹಾಸಿಗೆ ಹಿಡಿದ ಅವರ ಹೆಂಡತಿ ಕೂಡ ಈ ನಡುವೆ ತೀರಿಕೊಳ್ಳುತ್ತಾಳೆ. ಅವರು ಊರು ಬಿಟ್ಟು ನಡೆಯುತ್ತಾರೆ.
ಈ ಹೊಸ ಪಯಣದಲ್ಲಿ ಎದುರಾಗುವ ಮಾಲೇರ ಪುಟ್ಟ ಪ್ರಾಣೇಶರಿಗೆ ಜಾತ್ರೆಯನ್ನೂ ಮತ್ತೊಬ್ಬ ಹೆಣ್ಣನ್ನೂ ತೋರಿಸುತ್ತಾನೆ. ಮೊದಲ ಬಾರಿಗೆ ಕೋಳಿಕಾಳಗ ಕಂಡ ಪ್ರಾಣೇಶರಿಗೆ ‘ಇದು ರಾಕ್ಷಸ ಲೋಕ’ ಎನ್ನಿಸಿ ದಿಗ್ಭ್ರಮೆಯಾಗುತ್ತದೆ. ಜಾತ್ರೆಯಿಂದ ತಪ್ಪಿಸಿಕೊಂಡು ಹೊರಟ ಪ್ರಾಣೇಶರಿಗೆ ಇನ್ನು ತನ್ನ ಜೀವನಕ್ಕೆ ತಾನೇ ಜವಾಬ್ದಾರನಾಗಬೇಕಾದ ಅಸ್ತಿತ್ವವಾದಿ ಸವಾಲು ಎದುರಾಗುತ್ತದೆ.
ಅತ್ತ ದೂರ್ವಾಸಪುರವನ್ನು ಪ್ಲೇಗ್ ಮುತ್ತಿ ಜನ ಸಾಯುತ್ತಿದ್ದಾರೆ. ಎಲ್ಲಿಗೆ ಹೋಗುವುದು? ದೂರ್ವಾಸಪುರಕ್ಕೆ ಮರಳುವುದೇ? ಚಂದ್ರಿಯಿದ್ದಲ್ಲಿಗೆ ಹೋಗಿಬಿಡುವುದೇ? ಈ ಪ್ರಶ್ನೆಗಳು ಮುತ್ತುತ್ತವೆ. ದೂರ್ವಾಸಪುರದ ಕಡೆಗೆ ಹೊರಟ ಎತ್ತಿನ ಗಾಡಿ ಹತ್ತಿದ ‘ಪ್ರಾಣೇಶಾಚಾರ್ಯರು ನಿರೀಕ್ಷೆಯಲ್ಲಿ, ಆತಂಕದಲ್ಲಿ ಕಾದರು’ ಎಂಬ ಸಾಲಿನೊಂದಿಗೆ ಕಾದಂಬರಿ ಮುಗಿಯುತ್ತದೆ. ಪ್ರಾಣೇಶರ ನಿಜವಾದ ಬದುಕು ಅಲ್ಲಿಂದ ಶುರುವಾಗಬೇಕಾಗಿದೆಯೆಂಬ ಸೂಚನೆಯೂ ಇಲ್ಲಿದೆ.
ನಾರಣಪ್ಪನ ಬಂಡಾಯದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಚಳವಳಿಯ ಹೊಸ ರಾಜಕೀಯವೂ ಇದೆ; ಇಂಡಿಯಾವನ್ನು ಪ್ರವೇಶಿಸಿರುವ ಹೊಸ ರಂಗಭೂಮಿ ಜಡ ಸಮಾಜವೊಂದರಲ್ಲಿ ಹುಟ್ಟಿಸಿರುವ ಹೊಸ ಕಲಾ ಕಂಪನವೂ ಇದೆ. ಆ ಕಾಲದಲ್ಲಿ ಮತ್ತೆ ಮತ್ತೆ ಕಿವಿಗೆ ಬೀಳುತ್ತಿದ್ದ ‘ಸ್ವಾತಂತ್ರ್ಯ’ ಎಂಬ ಶಬ್ದ ಅಗ್ರಹಾರದ ವಿಧವೆಯರಲ್ಲಿ, ಸಂಪ್ರದಾಯದಡಿ ಸಿಕ್ಕು ನರಳುತ್ತಿರುವವರಲ್ಲಿ ಹಲಬಗೆ ಸ್ವಾತಂತ್ರ್ಯಗಳ ಅಸ್ಪಷ್ಟ ನಿರೀಕ್ಷೆ ಮೂಡಿಸುತ್ತಿರುವ ಸೂಚನೆಯೂ ಕಾಣುತ್ತದೆ. ಸಂಸ್ಕೃತಿಗಳು ತಮ್ಮನ್ನು ತಾವು ತೀವ್ರ ಪರೀಕ್ಷೆಗೆ ಒಡ್ಡಿಕೊಳ್ಳಬೇಕಾದ ತುಡಿತವೂ ಈ ಚಾರಿತ್ರಿಕ ಸನ್ನಿವೇಶದಲ್ಲಿ ಸೃಷ್ಟಿಯಾಗಿದೆ.
ಗಾಂಧೀ ಪ್ರೇರಣೆಯಿಂದ ಕಾಂಗ್ರೆಸ್ ಆರಂಭಿಸಿದ್ದ ದಲಿತರ ದೇವಾಲಯ ಪ್ರವೇಶ ಚಳವಳಿಯ ಪ್ರತಿಧ್ವನಿಯೂ ಇಲ್ಲಿದೆ. ಚರಿತ್ರೆಯ ಚಲನೆಯ ಅಪ್ರಜ್ಞಾಪೂರ್ವಕ ಸಾಧನವೂ ಆಗಿರುವ ನಾರಣಪ್ಪ ಪ್ರಾಣೇಶರಿಗೆ ಹೇಳುತ್ತಾನೆ: ‘ಇನ್ನು ನಿಮ್ಮ ಶಾಸ್ತ್ರ ನಡೆಯೋದಿಲ್ಲ. ಮುಂದೆ ಬರೋದು ಕಾಂಗ್ರೆಸ್ಸು. ಪಂಚಮರನ್ನ ದೇವಸ್ಥಾನದೊಳಕ್ಕೆ ಬಿಡಬೇಕು’. ಕಾಡು, ನಡುರಾತ್ರಿ, ಪ್ಲೇಗ್, ನಿರ್ಜೀವ ಅಗ್ರಹಾರ, ಬೆಂಕಿ, ಸತ್ತು ಬಿದ್ದ ಇಲಿಗಳು…ಮುಂತಾದ ಅನೇಕ ಸಂಕೇತಗಳನ್ನು ಬಳಸಿರುವ ಈ ಕಾದಂಬರಿಯಲ್ಲಿ ‘ಪ್ಲೇಗ್’ ಪಾತ್ರವಾಗಿಯೂ ಭಿತ್ತಿಯಾಗಿಯೂ ಬರುತ್ತದೆ.
ಹೀಗೆ ಕಾದಂಬರಿಯ ಕೊನೆಯಲ್ಲಿ ಪಿಡುಗು, ಬೆಂಕಿ, ಪ್ರವಾಹ ಇತ್ಯಾದಿಗಳು ಬಂದು ಊರು ನಾಶವಾಗುವ ಭಾಗಗಳನ್ನು ‘ನಿಹಿಲಿಸ್ಟ್ ಇಮ್ಯಾಜಿನೇಷನ್’ (ಸರ್ವ ಶೂನ್ಯವಾದಿ ಕಲ್ಪನಾವಿಲಾಸ) ಪರಿಕಲ್ಪನೆಯ ಮೂಲಕ ಗ್ರಹಿಸಬಹುದೆಂಬುದನ್ನು ಒಮ್ಮೆ ಡಿ.ಆರ್. ನಾಗರಾಜ್ ಸೂಚಿಸಿದ್ದರು. ಉದಾಹರಣೆಗೆ, ಲಂಕೇಶರ ‘ಮುಸ್ಸಂಜೆಯ ಕಥಾಪ್ರಸಂಗ’ ಕಾದಂಬರಿಯ ಕೊನೆಗೆ ಬೆಂಕಿ ಬೀಳುತ್ತದೆ; ಪೂರ್ಣಚಂದ್ರ ತೇಜಸ್ವಿಯವರ ‘ಚಿದಂಬರ ರಹಸ್ಯ’ ಕಾದಂಬರಿಯಲ್ಲಿ ಮತೀಯವಾದದ ಬೆಂಕಿಗೆ ಸಿಕ್ಕು ಕೆಸರೂರು ಉರಿದು ಹೋಗುತ್ತದೆ.
‘ಸಂಸ್ಕಾರ’ದಲ್ಲಿ ಪ್ಲೇಗ್ ಬಡಿದು ಅಗ್ರಹಾರ ನಾಶವಾಗುತ್ತದೆ. ಇವೆಲ್ಲ ನಿಹಿಲಿಸ್ಟ್ ಇಮ್ಯಾಜಿನೇಷನ್ನಿನ ರೂಪಗಳು. ಆದರೂ ಇಂಥ ಮುಕ್ತಾಯಗಳಲ್ಲಿ ಹಳೆಯದೆಲ್ಲ ಸುಟ್ಟು ಹೋಗಿ ಹೊಸತು ಮೂಡಬಹುದು ಎಂಬ ಆಶಾವಾದವೂ ಇರಬಹುದು. ‘ಸಂಸ್ಕಾರ’ದಲ್ಲಿ ವ್ಯಕ್ತಿಗಳ ಬಿಕ್ಕಟ್ಟು ಸಂಸ್ಕೃತಿಯ ಬಿಕ್ಕಟ್ಟೂ ಆಗುವುದರಿಂದ, ಜಡ ಆಚರಣೆಯಲ್ಲಿ ಮಲೆತು ಹೋದ ಸಾಂಪ್ರದಾಯಿಕ ಸಮಾಜ ಪ್ಲೇಗಿನಿಂದ ನಾಶವಾಗಿ, ಆನಂತರ ಅಲ್ಲಿ ಹೊಸ ಜೀವನದ ಸಾಧ್ಯತೆಗಳು ಮೂಡಬಹುದು ಎಂಬ ಸೂಚನೆಯೂ ಇದೆ.
‘ಸಂಸ್ಕಾರ’ ಕುರಿತು ಕನ್ನಡದ ಮುಖ್ಯ ವಿಮರ್ಶಕರೆಲ್ಲ ಬರೆದಿದ್ದಾರೆ. ಕನ್ನಡದಾಚೆಗೂ ಈ ಕೃತಿಯ ವ್ಯಾಖ್ಯಾನಗಳು ಬಂದಿವೆ. ಇಂಡಿಯಾದ ಮುಖ್ಯ ವಿಮರ್ಶಕಿಯರ ಸಾಲಿನಲ್ಲಿರುವ ಮೀನಾಕ್ಷಿ ಮುಖರ್ಜಿ ಈ ಕಾದಂಬರಿಯಲ್ಲಿ ಕಿಕ್ಕಿರಿದಿರುವ ಜಡತೆಯನ್ನು ಸೂಚಿಸುವ ವಿವರಗಳು ಸಾಂಪ್ರದಾಯಿಕ ಸಮಾಜದಲ್ಲಿ ಗಂಡು, ಹೆಣ್ಣುಗಳಿಗೆ ಹಾಗೂ ಒಟ್ಟು ಸಮಾಜಕ್ಕೆ ಬಡಿದಿರುವ ಜಡತೆಯನ್ನು ಬಿಂಬಿಸುವುದನ್ನು ತೋರಿಸಿದ್ದಾರೆ. ಜಗತ್ತಿನ ದೊಡ್ಡ ಲೇಖಕರ ಗಂಭೀರ ವಿಶ್ಲೇಷಣೆಯೂ ‘ಸಂಸ್ಕಾರ’ಕ್ಕೆ ದಕ್ಕಿದೆ.
ವೆಸ್ಟ್ ಇಂಡೀಸಿನ ಖ್ಯಾತ ಲೇಖಕ ವಿ.ಎಸ್.ನೈಪಾಲ್ ‘ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ಅನಂತಮೂರ್ತಿ ಒಂದು ಬರ್ಬರ ನಾಗರಿಕತೆಯನ್ನು ಚಿತ್ರಿಸಿರುವುದನ್ನು’ ಗಮನಿಸುತ್ತಾರೆ. ಮುಖ್ಯ ಮನೋವಿಜ್ಞಾನಿಗಳಲ್ಲೊಬ್ಬರಾದ ಎರಿಕ್ ಎರಿಕ್ಸನ್ ‘ಸಂಸ್ಕಾರ’ ಸಿನಿಮಾ ನೋಡಿ, ಇದು ಕಾಮದ ಅನುಭವ ಪಡೆಯದೆ ವೃದ್ಧನಾಗುವ ಆತಂಕವನ್ನು ಕುರಿತ ಕತೆ ಎಂದು ಬರೆದದ್ದನ್ನು ಓದಿದಾಗ ಚಣ ಅಚ್ಚರಿಯಾಗಿತ್ತು.
ವ್ಯಕ್ತಿಯ ಅಪ್ರಜ್ಞೆಯನ್ನು ಶೋಧಿಸುವ ಫ್ರಾಯ್ಡಿಯನ್ ಮನೋವಿಜ್ಞಾನಿ ಎರಿಕ್ ಎರಿಕ್ಸನ್ ‘ಸಂಸ್ಕಾರ’ವನ್ನು ಹೀಗೆ ನೋಡಿದ್ದು ಕನ್ನಡ ಓದುಗರಿಗೆ ಸೀಮಿತ ಎನ್ನಿಸಬಹುದು. ಆದರೆ ನಾವು ‘ಸಂಸ್ಕಾರ’ವನ್ನು ಅತಿಯಾದ ಸಮಾಜಶಾಸ್ತ್ರೀಯ ಪರಿಭಾಷೆಯಲ್ಲಿ ಓದಿ ಓದಿ ಅದರ ಇನ್ನಿತರ ಸಾಧ್ಯತೆಗಳನ್ನೇ ಕಳೆದುಹಾಕಿದ್ದೇವೆ ಎನ್ನಿಸುತ್ತಿರುತ್ತದೆ. ಸಾಮಾನ್ಯವಾಗಿ ‘ಸಂಸ್ಕಾರ’ವನ್ನು ಅಗ್ರಹಾರದ ಏಳುಬೀಳಿನ ಕತೆಯನ್ನಾಗಿ ಓದುವ ನಾವು ಅದು ಸಾಂಕೇತಿಕವಾಗಿ ಎಲ್ಲ ಜಾತಿಗಳ ಸ್ಥಗಿತತೆ, ಕೊಳೆಯುವಿಕೆಯನ್ನೂ ಸೂಚಿಸುತ್ತಿರುವುದನ್ನು ಮರೆಯುತ್ತೇವೆ.
ಅಂದರೆ, ಪ್ರಾಣೇಶರ ಬಿಕ್ಕಟ್ಟು, ದೇವರು ಸತ್ತನೆಂಬ ದಿಗ್ಭ್ರಮೆ ಇನ್ನಿತರ ಜಾತಿಗಳ ಧರ್ಮಗುರುಗಳಿಗೂ ಎದುರಾಗಬಹುದು; ಅಗ್ರಹಾರದ ಸಂಪ್ರದಾಯಸ್ಥರು ಸೃಷ್ಟಿಸಿಕೊಂಡಿರುವ ನರಕ, ಅಲ್ಲಿ ನರಳುವ ವಿಧವೆಯರ ಸ್ಥಿತಿ ಇನ್ನಿತರ ಜಾತಿಗಳಿಗೂ ಅನ್ವಯವಾಗಬಹುದು. ಒಂದು ಕಾದಂಬರಿಯನ್ನು ಸಾರ್ವತ್ರಿಕಗೊಳಿಸುವ ಸೂಕ್ಷ್ಮತೆಯನ್ನು ಕಳೆದುಕೊಂಡಿರುವ ಈಚಿನ ದಶಕಗಳ ಬಹುಪಾಲು ಕನ್ನಡ ವಿಮರ್ಶೆ, ಸಾಹಿತ್ಯ ಬೋಧನೆಗಳು ‘ಸಂಸ್ಕಾರ’ದಂಥ ಕೃತಿಗಳ ಅರ್ಥಗಳನ್ನು ತೀರಾ ಸಂಕುಚಿತಗೊಳಿಸತೊಡಗಿವೆ.
‘ಸಂಸ್ಕಾರ’ಕ್ಕೆ 50 ತುಂಬಿದ ಈ ಘಟ್ಟದಲ್ಲಿ ಅದು ತೆರೆದ ‘ಸಂಸ್ಕೃತಿ ಸ್ವವಿಮರ್ಶೆ’ಯ ಮಾದರಿಗಳು ಕನ್ನಡ ಸಾಹಿತ್ಯಕ್ಕೆ ಮುಖ್ಯವಾದವು ಎಂಬುದನ್ನು ನೆನೆಯಬೇಕು. ‘ಸಂಸ್ಕಾರ’ದ ನಂತರ ಬರೆದ ‘ಕಾದಂಬರಿ ಮತ್ತು ಹೊಸ ನೈತಿಕ ಪ್ರಜ್ಞೆ’ ಲೇಖನದಲ್ಲಿ ಅನಂತಮೂರ್ತಿ ‘ಬಿಗಿ ಬಂಧದ ಕಾದಂಬರಿ ಓದುಗರ ನೈತಿಕ ಪ್ರಜ್ಞೆಯನ್ನು ಬದಲಾಯಿಸುತ್ತದೆ’ ಎಂಬ ಆರ್ಟಿಗಾ ಗ್ಯಾಸೆಯ ವಾದವನ್ನು ಸಮರ್ಥಿಸಿದ್ದರು.
ಯಾವುದೇ ಬರವಣಿಗೆ ಓದುಗರ ಪೂರ್ವಗ್ರಹಗಳನ್ನು ಅಥವಾ ಜಡ ನೈತಿಕ ಮೌಲ್ಯಗಳನ್ನು ಸ್ಥಿರೀಕರಿಸಿದರೆ ಅದು ಕಳಪೆ ಬರವಣಿಗೆ; ಪೂರ್ವಗ್ರಹಗಳಿಂದ ಹೊರಬರುವಂತೆ ಮಾಡಿದರೆ ಮಾತ್ರ ಅದು ಅರ್ಥಪೂರ್ಣ ಬರವಣಿಗೆ ಎಂದು ನಂಬುವ ನನಗೆ ಕನ್ನಡದಲ್ಲಿ ‘ಸಂಸ್ಕಾರ’ ಓದುಗರಲ್ಲಿ ಹೊಸ ನೈತಿಕ ಪ್ರಜ್ಞೆ ಮೂಡಿಸಬಲ್ಲ ಕಾದಂಬರಿ ಎಂದು ಸದಾ ಅನ್ನಿಸಿದೆ. ಕಳೆದ ಐವತ್ತು ವರ್ಷಗಳಲ್ಲಿ ಅದು ಸೂಕ್ಷ್ಮ ಓದುಗರನ್ನು, ಬೋಧಕ ಬೋಧಕಿಯರನ್ನು ಸೃಷ್ಟಿಸುವಲ್ಲಿ ನೆರವಾಗಿದೆ; ಲೇಖಕ, ಲೇಖಕಿಯರಿಗೆ ಸ್ವವಿಮರ್ಶೆ ಹಾಗೂ ಸ್ವಸಮಾಜ ವಿಮರ್ಶೆಯ ರೀತಿಗಳನ್ನೂ ಕಲಿಸಿಕೊಟ್ಟಿದೆ. ಕಾದಂಬರಿಯೊಂದು ಇತರರ ಬರಹಗಳ ಮೂಲಕವೂ ಉಳಿದು ಬೆಳೆಯುವ ಈ ಕ್ರಮ ಕುತೂಹಲಕರವಾದುದು.
ಅನಂತಮೂರ್ತಿಯವರಿಗೆ ಜ್ಞಾನಪೀಠ ಬಂದಾಗ ಕೊಟ್ಟ ಸಂದರ್ಶನವೊಂದರಲ್ಲಿ ಹೇಳಿದ ಮಾತು: “... ‘ನವಿಲುಗಳು’ ಕತೆಯನ್ನು ನಾನು ಎಡವಿಬಿಟ್ಟೆ. ಆದ್ದರಿಂದಲೇ ಅದು ಸುಂದರವಾಗಿದೆ”. ‘ಸಂಸ್ಕಾರ’ ಕೂಡ ಆ ಬಗೆಯ ಎಡವಿನಿಂದ ಹಾಗೂ ವಿಚಿತ್ರ ಸೃಜನಶೀಲ ಉಕ್ಕಿನಿಂದ ಬಂದದ್ದು ಎಂದು ಈಗ ಅನಿಸುತ್ತಿದೆ. ಆ ಬಗೆಯ ತೀವ್ರತೆಯನ್ನು ಮತ್ತೆ ಸಾಧಿಸಲು ಸ್ವತಃ ಅನಂತಮೂರ್ತಿಯವರಿಗೇ ಆದಂತಿಲ್ಲ. ಮತ್ತೊಂದು ಸಂದರ್ಶನದಲ್ಲಿ ‘ಮುಟ್ಟಿದರೆ ಮಿಡಿಯುವಂತೆ ಬರೆಯುವ ಆಸೆ ನನಗೆ’ ಎಂದೂ ಹೇಳಿದ್ದರು.
ಅದೂ ಕೂಡ ‘ಸಂಸ್ಕಾರ’ದಲ್ಲೇ ಹೆಚ್ಚು ಆದಂತಿದೆ. ಇವತ್ತು ‘ಸಂಸ್ಕಾರ’ದ ಭಾವಗೀತಾತ್ಮಕ ಶೈಲಿಯಲ್ಲಿ ಕೆಲಬಗೆಯ ಕೃತಕತೆಗಳು ಕಾಣಬಹುದು. ನಾರಣಪ್ಪನ ಶವಸಂಸ್ಕಾರದ ಪ್ರಶ್ನೆ ತೀರ ಸಾಧಾರಣ ಅನ್ನಿಸಬಹುದು. ಆದರೆ ಈ ಕಾದಂಬರಿಯ ಸಾಂಕೇತಿಕ ಅರ್ಥಗಳ ಒರತೆ ಇನ್ನೂ ಬತ್ತಿಲ್ಲ. ಇದೇ 26ರ ಭಾನುವಾರ ಸಂಜೆ ಮೈಸೂರಿನ ರಂಗಾಯಣದಲ್ಲಿ ನಡೆಯಲಿರುವ ‘ಸಂಸ್ಕಾರ’ದ ರಂಗಪ್ರಯೋಗ (ರಂಗರೂಪ: ಓ.ಎಲ್. ನಾಗಭೂಷಣಸ್ವಾಮಿ; ನಿರ್ದೇಶನ: ಜನ್ನಿ) ಈ ಕಾದಂಬರಿಯ ಈ ಕಾಲದ ತಾಜಾ ವ್ಯಾಖ್ಯಾನಗಳಿಗೆ ಎಡೆ ಮಾಡಿಕೊಡುವಂತಾಗಲಿ.
ಕೊನೆ ಟಿಪ್ಪಣಿ: ‘ಸಂಸ್ಕಾರ’ ಸಿನಿಮಾ ಮತ್ತು ಇಬ್ಬರು ‘ಮಿತ್ರರು’!:
ಅನಂತಮೂರ್ತಿಯವರನ್ನು ಪ್ರಾಣೇಶಾಚಾರ್ಯರಿಗೆ ಹೋಲಿಸಿ ಗೇಲಿ ಮಾಡುತ್ತಿದ್ದ ಪಿ.ಲಂಕೇಶ್, ಪಟ್ಟಾಭಿರಾಮರೆಡ್ಡಿ ನಿರ್ದೇಶಿಸಿದ ‘ಸಂಸ್ಕಾರ’ ಸಿನಿಮಾದಲ್ಲಿ ನಾರಣಪ್ಪನ ಪಾತ್ರ ಮಾಡಿದ್ದರು. ಎರಡು ವರ್ಷದ ಕೆಳಗೆ ಅನಂತಮೂರ್ತಿಯವರು ಫೋನಿನಲ್ಲಿ ನನ್ನೊಡನೆ ಮಾತಾಡುತ್ತಾ ‘ಸಂಸ್ಕಾರ ಸಿನಿಮಾದ ಹೊಸ ಪ್ರಿಂಟ್ ಬಂದಿದೆ. ಸಿನಿಮಾ ನಿಜಕ್ಕೂ ಚೆನ್ನಾಗಿದೆ. ನೀವೆಲ್ಲಾ ಅದನ್ನು ಸರಿಯಾಗಿ ಗಮನಿಸಿಯೇ ಇಲ್ಲ’ ಎಂದರು.
ನಾನು ನಗುತ್ತಾ ‘ಅದು ಗ್ರೇಟ್ ಫಿಲ್ಮ್ ಆಗಿರಲೇಬೇಕು’ ಎಂದೆ. ‘ಯಾಕೆ?’ ಎಂದರು ಅನಂತಮೂರ್ತಿ. ‘ಯಾಕೆಂದರೆ ನಮ್ಮ ಗುರು ಲಂಕೇಶರೇ ಅದರ ಹೀರೋ ತಾನೆ!’ ಎಂದೆ. ಅನಂತಮೂರ್ತಿ ನಕ್ಕು, ಸಿನಿಮಾ ಶೂಟಿಂಗಿನ ಗಳಿಗೆಗಳನ್ನು ನೆನಸಿಕೊಂಡರು: ‘ಒಂದು ತಮಾಷೆ ಹೇಳ್ತೀನಿ- ಲಂಕೇಶ್ ಆ ಪಾತ್ರ ಮಾಡುವಾಗ ‘ನಿಜವಾದ’ ಬಿಯರ್ ಕುಡಿದು ಪ್ರಾಣೇಶಾಚಾರ್ಯನ್ನ ಎಷ್ಟು ಜೋರಾಗಿ ಬಯ್ತಾ ಇದ್ದಾ ಗೊತ್ತಾ? ನನ್ನನ್ನೇ ಬಯ್ತಿದೀನಿ ಅನ್ನೋ ಹಾಗೆ!’ ನೇರವಾಗಿಯೇ ಆ ಕೆಲಸ ಮಾಡುತ್ತಿದ್ದ ಲಂಕೇಶರು ತಮ್ಮ ಸಿನಿಮಾ ಪಾತ್ರದ ಮೂಲಕವೂ ಅದನ್ನು ಮುಂದುವರಿಸಿದ್ದರೆ ಅಚ್ಚರಿಯಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.