ADVERTISEMENT

ಅನುಕರಣೆಯ ಅಪಾಯ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:20 IST
Last Updated 16 ಜೂನ್ 2018, 9:20 IST

ಅವನೊಬ್ಬ ರತ್ನ-ಬಂಗಾರದ ವ್ಯಾಪಾರಿ. ಅವನ ವ್ಯಾಪಾರ ಬಹಳ ದೊಡ್ಡದು. ಅದೆಷ್ಟು ಕೋಟಿ, ಕೋಟಿ ಹಣ ಗಳಿಸಿದ್ದನೋ? ಒಂದು ದಿನ ಯಾಕೋ ಅವನಿಗೆ ಹಣ ಗಳಿಕೆ ಸಾಕು ಎನ್ನಿಸಿತು. ವ್ಯಾಪಾರವನ್ನು ನಿಲ್ಲಿಸಿಬಿಟ್ಟ. ಕೂಡಿಟ್ಟ ಹಣವೇ ಬೇಕಾದಷ್ಟಿತ್ತು. ಮತ್ತೆ ಕೆಲವು ತಿಂಗಳುಗಳ ನಂತರ ಅವನಿಗೆ ಹಣದ ಬಗ್ಗೆಯೇ ಬೇಜಾರು ಬಂತು. ಎಲ್ಲವನ್ನೂ ದಾನ ಮಾಡಿ ಬಿಟ್ಟು ಸನ್ಯಾಸ ತೆಗೆದುಕೊಳ್ಳಲು ತೀರ್ಮಾನಿಸಿದ.

ಅದರಂತೆಯೇ ತನ್ನ ಅಂಗಡಿಗಳಲ್ಲಿಯ ವಸ್ತುಗಳನ್ನು, ತನ್ನ ಮನೆಯನ್ನು, ಸಕಲ ಸೌಭಾಗ್ಯಗಳನ್ನು ದಾನಮಾಡಿಬಿಟ್ಟ. ಹುಡುಕಿ, ಹುಡುಕಿ ತನ್ನದಾಗಿದ್ದ ಎಲ್ಲ ಪದಾರ್ಥಗಳನ್ನು ದಾನ ಮಾಡಿದ. ಎಷ್ಟರಮಟ್ಟಿಗೆ ದಾನಬುದ್ಧಿ ಬಂದಿತ್ತೆಂದರೆ ಆತನಿಗೆ ಮರುದಿನ ಬೆಳಿಗ್ಗೆ ಉಪಕಾರ ಮಾಡಲೂ ಸಾಧ್ಯಲ್ಲದಷ್ಟು ನಿರ್ಧನನಾಗಿಬಿಟ್ಟಿದ್ದ. ಆದರೆ ಅಂದು ರಾತ್ರಿ ಹಿಂದೆಂದಿಗಿಂತಲೂ ಹೆಚ್ಚು ನಿರಾಳವಾಗಿ ನಿದ್ರೆಮಾಡಿದ.

ಮರುದಿನ ಬೆಳಗಾಗಲು ಇನ್ನೆರಡು ಗಂಟೆ ಇತ್ತು. ಹೊಸದಾಗಿ ಸಂತನಾದ ಈತನಿಗೆ ಎಚ್ಚರವಾಯಿತು. ಕಣ್ಣು ತೆರೆದು ನೋಡಿದರೆ ಮುಂದೆ ಒಂದು ಅಸ್ಪಷ್ಟವಾದ ಆಕೃತಿ ನಿಂತಂತೆ ಕಂಡಿತು. ಒಬ್ಬ ಮನುಷ್ಯ ಗಾಳಿಯಲ್ಲಿ ತೇಲಾಡುತ್ತಿರುವಂತೆ ಭಾಸವಾಯಿತು. ನಿಧಾನವಾಗಿ ಆ ಆಕೃತಿಗೊಂದು ರೂಪ ಬಂದಿತು. ‘ಯಾರು ನೀನು?’ ಎಂದು ಕೇಳಿದ ಸಂತ. ‘ನಾನೇ? ನಾನು ನಿನ್ನ ಸುಕೃತದ ಮೂಲಸ್ವರೂಪ. ಇದುವರೆಗೂ ನೀನು ಮಾಡಿದ ಒಳ್ಳೆಯ ಕಾರ್ಯಗಳಿಂದಾಗಿ ನಾನು ನಿನ್ನ ಮುಂದೆ ಬಂದಿದ್ದೇನೆ. ನೀನು ಎಲ್ಲವನ್ನೂ ತ್ಯಾಗ ಮಾಡಿ ಬರಿದಾಗಿರುವೆ. ಆದರೂ ನೀನು ಮಾಡಿದ ಪುಣ್ಯಕಾರ್ಯಗಳಿಗಾಗಿ ನಿನ್ನನ್ನು ಕಾಪಾಡುವ ಜವಾಬ್ದಾರಿ ನನ್ನದಿದೆ. ಆದ್ದರಿಂದ ನಿನಗೆ ಯಾವಾಗಲಾದರೂ ಸಹಾಯ ಬೇಕಾದರೆ, ಹಣ ಬೇಕಾದರೆ ನನ್ನನ್ನು ನೆನೆಸಿಕೋ. ಆಗ ನಾನು ಸಂತನ ರೂಪದಲ್ಲಿ ನಿನ್ನ ಮುಂದೆ ಬರುತ್ತೇನೆ. ಬಂದು ನನ್ನ ಎಡಗೈ ಮೇಲಕ್ಕೆತ್ತುತ್ತೇನೆ. ನೀನು ಆಗ ಒಂದು ಕಟ್ಟಿಗೆಯನ್ನೋ, ಕೋಲನ್ನೋ, ಯಾವುದನ್ನೋ ತೆಗೆದುಕೊಂಡು ನನ್ನ ತಲೆಯ ಮೇಲೆ ಬಲವಾಗಿ ಹೊಡೆ. ನಾನು ಒಂದು ಬಂಗಾರದ ಮೂರ್ತಿಯಾಗಿ ಬಿದ್ದು ಬಿಡುತ್ತೇನೆ. ನೀನು ದೇಹದ ಯಾವುದಾದರೂ ಭಾಗವನ್ನು ಕಿತ್ತುಕೊಂಡು ಆ ಬಂಗಾರವನ್ನು ಬಳಸಿಕೋ. ನೀನು ಕತ್ತರಿಸಿದ ಭಾಗ ಮತ್ತೆ ಬೆಳೆದು ನಾನು ಸಾಮಾನ್ಯರೂಪ ತಾಳುತ್ತೇನೆ’ ಹೀಗೆ ಹೇಳಿ ಆಕೃತಿ ಮಾಯವಾಯಿತು.

ADVERTISEMENT

ಬೆಳಗಾಯಿತು. ಸಂತ ಹೊರಗೆ ನಡೆದ. ಈ ದಾನ ಮಾಡುವ ಗದ್ದಲದಲ್ಲಿ ಆತನಿಗೆ ಕ್ಷೌರಿಕನ ಕಡೆಗೆ ಹೋಗುವುದೇ ಆಗಿರಲಿಲ್ಲ. ತಲೆ, ಮುಖ ಎಲ್ಲ ಕರಡಿಯ ತರಹ ಆಗಿದೆ. ಒಬ್ಬ ಕ್ಷೌರಿಕನ ಕಡೆಗೆ ಹೋದ. ಕ್ಷೌರವಾದ ಮೇಲೆ ಆತನಿಗೆ ನೆನಪಾಯಿತು ತನ್ನ ಹತ್ತಿರ ಒಂದು ದಮಡಿಯೂ ಇಲ್ಲ. ತಕ್ಷಣ ತಾನು ಬೆಳಿಗ್ಗೆ ಕಂಡ ಆಕೃತಿಯ ನೆನಪಾಯಿತು. ಮರುಕ್ಷಣದಲ್ಲೇ ಆ ಕ್ಷೌರಿಕನ ಅಂಗಡಿಯಲ್ಲಿ ಒಬ್ಬ ಸಂತ ಪ್ರವೇಶ ಮಾಡಿ, ನಿಧಾನವಾಗಿ ಎಡಗೈಯನ್ನು ಮೇಲಕ್ಕೆತ್ತಿದ. ಅದಕ್ಕೇ ಕಾಯುತ್ತಿರುವವನಂತೆ ನಮ್ಮ ಸಂತ, ಮೂಲೆಯಲ್ಲಿದ್ದ ಕೋಲನ್ನು ತೆಗೆದುಕೊಂಡು ಅವನ ತಲೆಗೆ ಬಲವಾಗಿ ಒಂದೆರಡು ಬಾರಿ ಹೊಡೆದ. ತಕ್ಷಣ ಆ ಸಂತ ಬಂಗಾರದ ಮೂರ್ತಿಯಾಗಿ ಬಿದ್ದ. ಅವನ ಕೈ ಬೆರಳನ್ನು ಮುರಿದು ಕ್ಷೌರಿಕನ ಕೈಗಿತ್ತು ಹೊರಗೆ ನಡೆದ.

ಇದನ್ನು ನೋಡಿದ ಕ್ಷೌರಿಕ ಆಶ್ಚರ್ಯದಿಂದ ತೆರೆದಿದ್ದ ಬಾಯಿ ಮುಚ್ಚಲಿಲ್ಲ. ಅವನಿಗೇನು ಹಣಕಾಸಿನ ಕಷ್ಟ ಇರಲಿಲ್ಲವೇ? ಅವನೂ ಯೋಚಿಸಿದ. ಮರುದಿನ ಮನೆಗೆ ಐದಾರು ಜನ ಸಂತರನ್ನು ಊಟಕ್ಕೆ ಕರೆದ. ಅವರು ಬಂದು ಕುಳಿತ ಮೇಲೆ ಭಾರೀ ಕೋಲೊಂದನ್ನು ತೆಗೆದುಕೊಂಡು ಹಿಂದಿನಿಂದ ಅವರ ತಲೆ ಒಡೆಯುವಂತೆ ಅಪ್ಪಳಿಸಿದ. ಅವರ ತಲೆ ಒಡೆದು ಪ್ರಜ್ಞೆ ತಪ್ಪಿ ಬಿದ್ದರು. ಸುತ್ತಲಿದ್ದವರು ಗಾಬರಿಯಾಗಿ ಓಡಿಹೋದರು.

ಸ್ವಲ್ಪ ಸಮಯದಲ್ಲೇ ರಾಜಭಟರು ಬಂದು ಅವನನ್ನು ಹಿಡಿದುಕೊಂಡು ಹೋಗಿ ರಾಜನ ಮುಂದೆ ನಿಲ್ಲಿಸಿದರು. ಕ್ಷೌರಿಕ ನಡೆದದ್ದನ್ನು ಹೇಳಿದ. ಆಗ ರಾಜ ಸಂತನನ್ನು ಕರೆದು ವಿಷಯ ಏನೆಂದು ಕೇಳಿದ. ಸಂತನಿಗೆ ತಾನು ಮತ್ತೊಬ್ಬರ ಎದುರಿಗೆ ಪವಾಡ ಪ್ರದರ್ಶನ ಮಾಡಿದ್ದು ತಪ್ಪಾಯಿತೆಂಬ ಅರಿವಾಯಿತು. ಆಗ ಆತ ರಾಜನಿಗೆ ಹೇಳಿದ, ‘ಪಾಪ! ಕ್ಷೌರಿಕನಿಗೆ ಯಾವುದೋ ಭ್ರಮೆಯಾಗಿರಬೇಕು. ಆತ ಅರಿವಿಲ್ಲದೇ ಏನೋ ಮಾಡಿದ್ದಾನೆ. ಅವನು ಒಳ್ಳೆಯ ಕ್ಷೌರಿಕನಾದ್ದರಿಂದ ಮತ್ತು ಸಂತರಿಗೆ ಯಾವ ಪ್ರಾಣಾಪಾಯವೂ ಆಗದಿರುವುದರಿಂದ ಅವನನ್ನು ಕ್ಷಮಿಸಬೇಕು’ ಎಂದು ಕೇಳಿಕೊಂಡ.

ಮತ್ತೊಬ್ಬರು ಮಾಡಿದ ಹಾಗೇ ಮಾಡಬೇಕೆನ್ನುತ್ತದೆ ಮನಸ್ಸು. ಆದರೆ ಮತ್ತೊಬ್ಬರ ಅನುಕರಣೆ ಅಪಾಯಕಾರಿ. ಪ್ರತಿಯೊಬ್ಬರೂ ತಮ್ಮ ಶಕ್ತಿಗೆ, ಸಾಧನೆಗೆ ಅನುಗುಣವಾಗಿ ಕೆಲಸ ಮಾಡುತ್ತಾರೆ. ನಮ್ಮ ಶಕ್ತಿ, ಸಾಧನೆಗಳು ಬೇರೆಯಾದ್ದರಿಂದ ಫಲಿತಾಂಶ ಹಾಗೆಯೇ ಆದೀತೆಂದು ಭಾವಿಸುವುದು ಸರಿಯಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.