ಒಂದು ದಟ್ಟವಾದ ಕಾಡು. ಅಲ್ಲೊಂದು ದೊಡ್ಡ ಮರ. ಅದರ ಕೊಂಬೆಯ ತುದಿಗೆ ಒಂದು ದೊಡ್ಡ ಜೇನುಗೂಡು. ಗೂಡನ್ನು ಕಟ್ಟುವುದು ಹೆಣ್ಣು ಜೇನುಹುಳುಗಳು. ಅವು ಹೂವಿಂದ ಹೂವಿಗೆ ಹಾರುತ್ತ, ಅರಳಿನಿಂತ ಹೂವುಗಳನ್ನು ಗುರುತಿಸಿ, ಅವುಗಳಿಗೆ ಒಂದು ಚೂರೂ ತೊಂದರೆಯಾಗದಂತೆ ಮಧುವನ್ನು ಎಳೆದುಕೊಂಡು, ಈ ಉಪಕಾರಕ್ಕೆ ಪ್ರತಿಫಲದಂತೆ ತಮ್ಮ ಮೈಗೆಲ್ಲ ಪರಾಗಕಣಗಳನ್ನು ಅಂಟಿಸಿಕೊಂಡು ಮತ್ತೊಂದು ಹೂವಿಗೆ ಪರಾಗಸ್ಪರ್ಶ ಮಾಡಿಸಿ ಆ ಹೂವಿನ ಗಿಡಗಳ ವಂಶ ಬೆಳೆಯುವಂತೆ ಸಹಾಯ ಮಾಡುತ್ತಿದ್ದವು.
ಹನಿಹನಿಯಾಗಿ ಮಧುವನ್ನು ತಂದು ಗೂಡಿನಲ್ಲಿ ಶೇಖರಿಸಿ ಇಟ್ಟು ತಾವು ಒಂದು ಹನಿಯನ್ನೂ ಬಳಸದೇ ಪರರಿಗೆ ಒಪ್ಪಿಸಿ ತೃಪ್ತಿಪಡುವ ಈ ಜೇನುಹುಳಗಳು ಪರೋಪಕಾರಕ್ಕೆ ಒಂದು ಉದಾಹರಣೆಯಂತಿದ್ದವು. ಜೇನುಗೂಡು ಪೂರ್ತಿ ರುಚಿಯಾದ ಜೇನಿನಿಂದ ತುಂಬಿಕೊಂಡಿತ್ತು.
ಒಂದು ದಿನ ಬೆಳಿಗ್ಗೆ ಹೆಣ್ಣು ಜೇನುಹುಳಗಳೆಲ್ಲ ತಮ್ಮ ಕರ್ತವ್ಯಕ್ಕಾಗಿ ಹಾರಿ ಹೊರನಡೆದವು. ಮಧ್ಯಾಹ್ನ ತಮ್ಮ ಗೂಡಿಗೆ ಬರುವುದರೊಳಗೆ ತಮ್ಮ ಗೂಡಿನ ತುಂಬ ಗಂಡು ಜೇನುಹುಳಗಳು ತುಂಬಿಕೊಂಡಿದ್ದನ್ನು ನೋಡಿದವು. ‘ಅರೇ! ತಾವು ಕಟ್ಟಿದ್ದ ಗೂಡಿನಲ್ಲಿ ಇವರೇಕೆ ಸೇರಿಕೊಂಡರು’ ಎಂದು ಆಶ್ಚರ್ಯ ಅವಕ್ಕೆ. ‘ನಮ್ಮ ಮನೆಯಲ್ಲಿ ನೀವೇಕೆ ಸೇರಿಕೊಂಡಿದ್ದೀರಿ ಹೊರಗೆ ನಡೆಯಿರಿ’ ಎಂದು ಕೇಳಿದವು ಗಂಡು ಹುಳುಗಳನ್ನು. ಗಂಡುಹುಳುಗಳು ಸುಲಭವಾಗಿ ಒಪ್ಪಿಯಾವೇ? ‘ಇದು ನಮ್ಮದೇ ಮನೆ. ನೀವೇ ನಮ್ಮ ಮನೆಯಲ್ಲಿ ನುಗ್ಗುತ್ತಿದ್ದೀರಿ, ನಡೆಯಿರಿ ಹೊರಗೆ’ ಎಂದು ಗುಡುಗಿದವು. ಪಾಪ! ಹೆಣ್ಣು ಹುಳುಗಳಿಗೆ ದಿಕ್ಕೇ ತೋಚದಂತಾಯಿತು, ಗಾಬರಿಯಾದವು. ಅವುಗಳಲ್ಲೇ ಒಂದು ಧೈರ್ಯವಿದ್ದ ಹುಳು ಹೇಳಿತು. ‘ಇವರೊಂದಿಗೆ ವಾದ ಮಾಡುತ್ತ ನಿಲ್ಲುವುದರಿಂದ ಏನೂ ಅಗದು. ನಾವು ಹೋಗಿ ರಾಜರನ್ನು ಬೆಟ್ಟಿಯಾಗಿ ದೂರುಕೊಟ್ಟು ಅವರಿಂದ ನ್ಯಾಯ ಪಡೆಯೋಣ.’ ಎಲ್ಲ ಹುಳುಗಳು ಒಟ್ಟಾಗಿ ಹೋಗಿ ವನರಾಜ ಸಿಂಹದ ಮುಂದೆ ಗೋಳು ಹೇಳಿಕೊಂಡವು. ಅವುಗಳ ಮಾತು ಕೇಳಿ ಸಿಂಹ ಎಲ್ಲ ಗಂಡು ಹುಳುಗಳೂ ತಕ್ಷಣ ತನ್ನ ಮುಂದೆ ಹಾಜರಾಗುವಂತೆ ಆಜ್ಞೆ ಮಾಡಿತು.
ಬೇರೆ ಗತಿ ಇಲ್ಲದೇ ಗಂಡುಹುಳುಗಳು ಮುಂದೆ ಬಂದು ನಿಂತವು. ರಾಜ ಸಿಂಹ ಇಬ್ಬರ ವಾದಗಳನ್ನೂ ಕೇಳಿತು. ಎರಡೂ ಪಕ್ಷದವರು ಗೂಡು ತಮ್ಮದೇ ಎಂದು ಬಲವಾಗಿ ವಾದಿಸಿದವು. ಗಂಡುಹುಳುಗಳು ಹೆಚ್ಚು ಬಲವಾಗಿಯೇ ವಾದಿಸಿದವು. ಸಿಂಹಕ್ಕೆ ಒಂದು ವಿಚಾರ ಹೊಳೆಯಿತು. ‘ನೋಡಿ ನಿಮ್ಮಿಬ್ಬರಿಗೂ ಒಂದು ಅವಕಾಶ ಕೊಡುತ್ತೇನೆ. ನೀವು ಬೇರೆಯಾಗಿ ಒಂದೊಂದು ಮರದ ಮೇಲೆ ಒಂದು ಗೂಡು ಕಟ್ಟಿ. ಅದನ್ನು ನೋಡಿದ ಮೇಲೆ ತೀರ್ಪು ಕೊಡುತ್ತೇನೆ’ ಎಂದಿತು.
ಗಂಡುಹುಳುಗಳಿಗೆ ಗಾಬರಿಯಾಯಿತು. ಯಾಕೆಂದರೆ ಅವುಗಳಿಗೆ ಗೂಡುಕಟ್ಟಿ ಗೊತ್ತೇ ಇಲ್ಲ. ತಮ್ಮ ತಪ್ಪನ್ನು ಒಪ್ಪಿ ಕ್ಷಮೆ ಕೇಳಿ ನಂತರ ಜೇನುಗೂಡನ್ನು ಖಾಲಿ ಮಾಡಿದವು.
ನಮ್ಮ ಸಮಾಜದಲ್ಲಿ ಹಾಗೆಯೇ. ಕೆಲವರು ಕಷ್ಟಪಟ್ಟು, ರಕ್ತಸುರಿಸಿ, ಚಿಂತಿಸಿ ಸಂಸ್ಥೆಗಳನ್ನು ಕಟ್ಟುತ್ತಾರೆ. ಇನ್ನು ಕೆಲವರು ಎಲ್ಲವೂ ಸಿದ್ಧವಾದ ಮೇಲೆ ಒಳಗೆ ಸೇರಿಕೊಂಡು ತಮ್ಮದೇ ಎಂಬಂತೆ ಪ್ರಭುತ್ವ ನಡೆಸುತ್ತಾರೆ, ಕಟ್ಟಿದವರನ್ನು ಹೊರಗೆ ಅಟ್ಟುತ್ತಾರೆ. ಅವರಿಗೆ ಸಂಸ್ಥೆಗಳನ್ನು, ವ್ಯವಸ್ಥೆಗಳನ್ನು ಕಟ್ಟಲು ಬರುವುದಿಲ್ಲ. ಆದರೆ ಕಟ್ಟಿದವರನ್ನು ಹೊರಗೋಡಿಸಿ ತಮ್ಮ ಪಟ್ಟವನ್ನು ಭದ್ರಮಾಡಿಕೊಳ್ಳಲು ಚೆನ್ನಾಗಿ ಬರುತ್ತದೆ. ಕಟ್ಟುವ ಶಕ್ತಿ ಇಲ್ಲದೇ, ವ್ಯವಸ್ಥೆಯ ಬಗ್ಗೆ ಪ್ರೀತಿ ಇಲ್ಲದೇ ಕಬಳಿಸಿದ ಸಂಸ್ಥೆಗಳು ಅಂತೆಯೇ ಅಲ್ಪಾಯುಗಳಾಗಿಬಿಡುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.