ADVERTISEMENT

ಆತ್ಮಾಹುತಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:20 IST
Last Updated 16 ಜೂನ್ 2018, 9:20 IST

ನಮ್ಮ ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮ ಪ್ರಪಂಚದ ಇತಿಹಾಸದಲ್ಲಿ ಒಂದು ರೋಚಕ ಅಧ್ಯಾಯ.ನಮಗೆ ಸ್ವಾತಂತ್ರ್ಯ ಸುಲಭವಾಗಿ ಬರಲಿಲ್ಲ.ಅದಕ್ಕಾಗಿ ಸಹಸ್ರಾರು ಜನ ತಮ್ಮ ಬಿಸಿ ನೆತ್ತರನ್ನು ಬಸಿದಿದ್ದಾರೆ ಎಂಬುದು ನಮ್ಮ ದೇಶದ ಕಿರಿಯರಿಗೆ ಅರ್ಥವಾಗಬೇಕು, ಅರ್ಥಮಾಡಿಸಬೇಕು. ಈ ಸುರಮ್ಯ ಇತಿಹಾಸದಲ್ಲಿ ಅದೆಷ್ಟೋ ಜನ ಅನಾಮಧೇಯರು, ಸಣ್ಣ ಸಣ್ಣ ಸ್ಥಾನಗಳಲ್ಲಿದ್ದ ಜನ ತಮ್ಮ ಜೀವನವನ್ನು ಹಾಸಿ, ಬೀಸಿ ತ್ಯಾಗಿಗಳಾಗಿ ಹೋಗಿದ್ದಾರೆ.

ಇತಿಹಾಸದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿರುವ ಒಂದು ಅನನ್ಯ ಪುಟ್ಟ ಪಾತ್ರ ಝಲಾಕರಿಬಾಯಿಯದು.ಆಕೆ ಝಾನ್ಸಿ ಲಕ್ಷ್ಮೀಬಾಯಿಯ ಅರಮನೆಯಲ್ಲಿ ಆಪ್ತ ಸೇವಕಿಯಾಗಿದ್ದವಳು.ಝಾನ್ಸಿ ಕೋಟೆಯ ಮೇಲೆ ಭಾರಿ ಬ್ರಿಟಿಷ್ ದಾಳಿ ನಡೆಯುತ್ತಿತ್ತು. ರಾಣಿ ಲಕ್ಷ್ಮೀಬಾಯಿ ಎಷ್ಟೇ ವೀರಾವೇಶದಿಂದ ಹೋರಾಡಿದರೂ ಅವಳ ಸೈನಿಕರ ಸಂಖ್ಯೆ ತುಂಬ ಸಣ್ಣದು. ಅಲ್ಲದೇ ಬ್ರಿಟಿಷ್ ಸೈನ್ಯದ ಕಡೆಗೆ ಪ್ರಬಲವಾದ ಶಸ್ತಾಸ್ತ್ರಗಳಿದ್ದವು. ಕೋಟೆ ಒಡೆಯುವ ಹಂತಕ್ಕೆ ಬಂದಿತ್ತು.ಈಗ ರಾಣಿಯ ಹತ್ತಿರ ಹೆಚ್ಚು ಜನ ಸೈನಿಕರೂ ಇರಲಿಲ್ಲ.

ಮಂತ್ರಿಗಳಿಗೆ ಒಂದೇ ಚಿಂತೆ. ರಾಣಿ ಬ್ರಿಟಿಷ್‌ರ ಕೈಗೆ ಸಿಕ್ಕಿಬಿದ್ದರೆ ಅವಳನ್ನು ಬಹಳ ಕ್ರೂರವಾಗಿ ಶಿಕ್ಷಿಸುತ್ತಾರೆ.ಆಕೆಯನ್ನು ಹೇಗಾದರೂ ಅಲ್ಲಿಂದ ಪಾರು ಮಾಡಬೇಕು.ಆದರೆ ಅದಕ್ಕೆ ಸಮಯವೆಲ್ಲಿದೆ?ಹೀಗೆ ಎಲ್ಲ ಚಿಂತಿಸುತ್ತಿರುವಾಗ ಝಲಾಕರಿಬಾಯಿ ಅಲ್ಲಿಗೆ ಬಂದಳು. ಮಂತ್ರಿಗಳಿಗೆ ಹೇಳಿದಳು, ‘ನೀವು ಚಿಂತೆ ಮಾಡಬೇಡಿ. ನಾನು ರಾಣಿಯ ಹಾಗೆ ವೇಷ ಹಾಕಿಕೊಂಡು ಕೋಟೆಯ ಪ್ರಧಾನ ಬಾಗಿಲಿನ ಕಡೆಗೆ ಹೋಗಿ ಹೋರಾಟ ಮಾಡುತ್ತೇನೆ. ಅವರಿಗೆ ರಾಣಿ ಅಲ್ಲಿಯೇ ಇದ್ದಾಳೆ ಎಂಬ ಭ್ರಮೆ ಬರುವಂತೆ ಆಗುತ್ತದೆ. ಆಗ ರಾಣಿ ಹಿಂದಿನ ಬಾಗಿಲಿನಿಂದ ಕಾಲಾವಿಯ ಕಡೆಗೆ ಹೊರಟುಬಿಡಲಿ.’ ಬೇರೆ ದಾರಿಯೇ ಇರಲಿಲ್ಲ.
 

ಆಕೆ ವೀರವೇಷ ಧರಿಸಿ ಅಳಿದುಳಿದ ಸೈನಿಕರನ್ನು ಕರೆದುಕೊಂಡು ಕೋಟೆಯ ಮುಖ್ಯದ್ವಾರವನ್ನು ತೆಗೆಯಿಸಿ ರೋಷಾವೇಶದಿಂದ ಹೋರಾಡತೊಡಗಿದಳು. ಬ್ರಿಟಿಷ್ ಸೈನಿಕರು ಆಕೆಯನ್ನೇ ರಾಣಿಯೆಂದು ಭ್ರಮಿಸಿ ಅವರೂ ಹೋರಾಡಿದರು. ಆಗ ಝಾನ್ಸಿ ಲಕ್ಷ್ಮೀಬಾಯಿ ತನ್ನ ಆಪ್ತ ಬೆಂಬಲಿಗರೊಂದಿಗೆ ಕಾಲಾವಿಗೆ ಹೊರಟು ಹೋಗಿ ಪಾರಾದಳು.

ನಮ್ಮ ಇತಿಹಾಸದಲ್ಲಿ ನಾಯಕ, ನಾಯಕಿಯರಿದ್ದಂತೆಯೇ ದ್ರೋಹಿಗಳೂ ಇದ್ದಾರೆ.ಕೋಟೆಯ ಒಳಗಿದ್ದ ಒಬ್ಬ ದ್ರೋಹಿ ಹೋಗಿ ಬ್ರಿಟಿಷ್ ನಾಯಕರಿಗೆ ಹೇಳಿದ, ‘ಈಕೆ ರಾಣಿಯಲ್ಲ, ಆಕೆಯ ಸೇವಕಿ. ರಾಣಿಯನ್ನು ಹಿಂದಿನ ಬಾಗಿಲಿನಿಂದ ಸಾಗಿಸಿಯಾಗಿದೆ.’ ಆದರೆ ಝಲಾಕರಿಬಾಯಿ ಆ ಮಾತನ್ನು ಕೇಳಿಸಿಕೊಂಡು ತನ್ನ ಕುದುರೆಯನ್ನು ಆ ದ್ರೋಹಿಯತ್ತ ಓಡಿಸಿದಳು. ಅವನು ಗಾಬರಿಯಿಂದ ಬಾಯಿ ಮುಚ್ಚುವ ಮೊದಲೇ ಅವಳ ಹರಿತವಾದ ಖಡ್ಗ ಅವನ ತಲೆಯನ್ನು ದೇಹದಿಂದ ಬೇರೆ ಮಾಡಿತು. ಆಕೆ ರೋಷದಿಂದ ಕೂಗಿದಳು. ‘ಹೇಡಿಗಳೇ ನಾನೇ ಝಾನ್ಸೀ ಲಕ್ಷ್ಮೀಬಾಯಿ, ಬನ್ನಿ ನನ್ನನ್ನು ಎದುರಿಸಿ.’ ಮತ್ತೆ ಬ್ರಿಟಿಷ್ ಸೈನಿಕರಿಗೆ ಗೊಂದಲ.ಅಷ್ಟರಲ್ಲಿ ಮತ್ತೊಬ್ಬ ದ್ರೋಹಿ ಬಂದು ಅರುಹಿದ. ರಾಣಿ ಪಾರಾಗಿದ್ದಾಳೆ. ಈಕೆ ಆಕೆಯ ಸೇವಕಿ ಝಲಾಕರಿಬಾಯಿ.

ADVERTISEMENT

ಆಕೆಯ ರೋಷವನ್ನು ದೇಶಭಕ್ತಿಯನ್ನು ಕಂಡು ವೈರಿಯಾದರೂ ಆ ಬ್ರಿಟಿಷ್ ಸೈನ್ಯಾಧಿಕಾರಿ ಮೆಚ್ಚಿಕೊಂಡು ಹೇಳಿದ.‘ಭಾರತದಲ್ಲಿ ಶೇಕಡಾ ಒಂದರಷ್ಟು ಹೆಣ್ಣು ಮಕ್ಕಳು ಹೀಗೆ ದೇಶರಕ್ಷಣೆಗೆ ನಿಂತರೂ ನಾವು ಈ ದೇಶದಲ್ಲಿರುವುದು ಸಾಧ್ಯವಿಲ್ಲ.’ ಮರುಕ್ಷಣವೇ ನೂರಾರು ಸೈನಿಕರು ಆಕೆಯ ಮೇಲೆ ಮುಗಿಬಿದ್ದು ಆಕೆಯ ಬಲಿ ತೆಗೆದುಕೊಂಡರು. ಅದೆಂಥ ಆತ್ಮಾಹುತಿ! ಅದೆಂಥ ಉಜ್ವಲ ದೇಶಪ್ರೇಮ! ನಮ್ಮ ಪವಿತ್ರ ದೇಶದ ಪ್ರತಿಯೊಬ್ಬ ಯುವಕ-ಯುವತಿಯರ ಮೈಯಲ್ಲಿ ಈ ದೇಶಪ್ರೇಮ ಸತತವಾಗಿ ಮಿಡಿದದ್ದೇ ಆದರೆ ನಮ್ಮ ದೇಶವನ್ನು ಲೂಟಿ ಮಾಡುತ್ತಿರುವ ಭ್ರಷ್ಟರ, ಸ್ವಾರ್ಥಿಗಳ ಕೈಯಿಂದ ಅದನ್ನು ಮುಕ್ತಮಾಡಬಹುದೇನೋ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.