ADVERTISEMENT

ಕನಸು ಸಾಕಾರವಾಗುವ ಬಗೆ

ಡಾ. ಗುರುರಾಜ ಕರಜಗಿ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST
ಸುಮಾರು ಒಂದು ತಿಂಗಳಿನ ಹಿಂದೆ ರಾಯಚೂರು ಜಿಲ್ಲೆಯ ಅರಕೆರೆ ಎಂಬ ಸಣ್ಣ ಊರಿಗೆ ಶಿಕ್ಷಕರ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅದೊಂದು ಸಣ್ಣ ಸಭೆಯಾಗಿದ್ದಿರಬಹುದೆಂದು ಯೋಚಿಸಿ ಹೋಗಿದ್ದ ನನಗೆ ಆಶ್ಚರ್ಯ ಕಾದಿತ್ತು. ನನ್ನ ಉಪನ್ಯಾಸ ಕೇಳಲು ಬಂದಿದ್ದವರು ಸುಮಾರು ಮೂರು ಸಾವಿರದಷ್ಟು ಶಿಕ್ಷಕರು ಬಸ್ಸು, ಕಾರು, ಜೀಪುಗಳಲ್ಲಿ ಬರುತ್ತಲೇ ಇದ್ದರು. ಇನ್ನೊಂದೆಡೆಗೆ ಈ ಜನರಿಗೆಲ್ಲ ಊಟದ ವ್ಯವಸ್ಥೆಯಾಗುತ್ತಿತ್ತು.
 
ಕಾರ್ಯಕ್ರಮ ಸಂಜೆಯವರೆಗೆ ನಡೆಯಿತು. ಅದು ಮುಗಿದ ಮೇಲೆ ಅಲ್ಲಿಯ ಶಿಕ್ಷಣಾಧಿಕಾರಿಗಳು ನನ್ನೊಡನೆ ಮಾತನಾಡುತ್ತಿದ್ದಾಗ `ಸರ್, ಇಲ್ಲಿ ಹಂಪಣ್ಣ ಎಂಬ ವ್ಯಕ್ತಿ ನಿಮ್ಮನ್ನು ನೋಡಬೇಕೆನ್ನುತ್ತಾನೆ. ಆತ ಒಬ್ಬ ದೊಡ್ಡ ಸಾಧಕ' ಎಂದು ಹೇಳಿದರು. `ಏನು ಅವರ ಸಾಧನೆ' ಎಂದು ಕೇಳಿದೆ. ಆಗ ಅವರು,  `ಹಂಪಣ್ಣ ಅಲ್ಲೆೀ ಹತ್ತಿರದ ಬೇಡದ ಗಲ್ಲೇಕಲ್ ಎಂಬ ಗ್ರಾಮದವ. ಎರಡು ಎಕರೆ ಒಣ ಜಮೀನಿದೆ. ಕೂಲಿ ಮಾಡುತ್ತಾನೆ. ಆದರೆ ಒಂದು ಸುಂದರವಾದ, ಆದರ್ಶವಾದ ಶಾಲೆ ಕಟ್ಟಿದ್ದಾನೆ. ಅವನಿಗೆ ಶಿಕ್ಷಣದ ಬಗ್ಗೆ ಭಾರೀ ಹುಚ್ಚು. ಈಗ ಇಲ್ಲಿಗೆ ಬಂದು ಅಡಿಗೆ ವ್ಯವಸ್ಥೆಯನ್ನು ಅವನೇ ಮಾಡುತ್ತಿದ್ದಾನೆ' ಎಂದರು. ಕೃಷಿಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ವ್ಯಕ್ತಿ ಶಾಲೆ ಕಟ್ಟಿದ್ದೇಕೆ ಎಂಬ ಕುತೂಹಲ ಮೂಡಿ ಅವರನ್ನು ನೋಡಬಯಸಿದೆ.
 
ಹಂಪಣ್ಣ ಬಂದರು. ಬಿಳೀ ಶರ್ಟು, ಬಿಳೀ ಪಂಚೆಯನ್ನುಟ್ಟು, ಅತ್ಯಂತ ವಿನಯಭಾವದಿಂದ ಮುಂದಿಟ್ಟ ಕುರ್ಚಿಯ ಮೇಲೆ ಕೂಡ್ರಲೂ ಹಿಂಜರಿಯುತ್ತ ನಿಂತರು.  `ಸರ್ ತಾವು ಇಲ್ಲಿವರೆಗೂ ಬಂದಿದ್ದೀರಿ, ನಮ್ಮ ಶಾಲೆಗೆ ದಯವಿಟ್ಟು ಬಂದು ಹೋಗಿ, ಅದು ಇಲ್ಲೆೀ ಹತ್ತಿರದಲ್ಲೆೀ ಇದೆ' ಎಂದರು. `ಆಯ್ತು' ಎಂದು ನಾವು ಕೆಲವು ಜನ ಹೊರಟೆವು. ಊರಿನ ಹೆಸರು ಬೇಡರ ಗಣೇಕಲ್ಲನ್ನು ಬಿ. ಗಣೇಕಲ್ ಎಂದು ಚುಟುಕು ಮಾಡಿದ್ದಾರೆ. ಅದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿಗೆ ಸೇರಿದ್ದು. ತೀರ ಸಣ್ಣ ಹಳ್ಳಿ. ಯಾವ ವಿಶೇಷ ಸವಲತ್ತುಗಳೂ ಕಾಣಲಿಲ್ಲ. ಸುತ್ತಲೂ ದೊಡ್ಡ ದೊಡ್ಡ ಬಂಡೆಗಳಿಂದ ಕೂಡಿದ ಗುಡ್ಡಗಳು. ಆದರೆ ಈ ಶಾಲೆ ಮಾತ್ರ ಮರುಭೂಮಿಯಲ್ಲಿಯ ಓಯಸಿಸ್ ಇದ್ದಂತೆ.
 
ಶಾಲೆ ಬಂದ ಬಗೆಯನ್ನು ಹಂಪಣ್ಣ ವಿವರಿಸಿದರು. ಯಾರೋ ಶಿಕ್ಷಕರೊಬ್ಬರು ಅಲ್ಲಿಗೆ ಬಂದು ಶಾಲೆ ಮಾಡುವ ವಿಚಾರವನ್ನು ಇವರ ತಲೆಯಲ್ಲಿ ಬಿತ್ತಿ ಇವರಿಗೆ ಇದ್ದ ಸ್ವಲ್ಪ ಜಮೀನಿನಲ್ಲೆೀ ಮಾಡೋಣ ಎಂದರಂತೆ. ಹಂಪಣ್ಣನವರ ಕೈಯಿಂದಲೇ ಸುಮಾರು 40 ಸಾವಿರ ರೂಪಾಯಿ ಖರ್ಚು ಮಾಡಿಸಿ ಅವರು ಬಿಟ್ಟು ಹೋದರಂತೆ. ಇವರು ಮುಂದೇನು ಮಾಡುವುದು ತಿಳಿಯದೇ ತಾವೇ ನಡೆಸಲು ತೀರ್ಮಾನ ಮಾಡಿದರು. ಯಾರಯಾರದೋ ಕೈಕಾಲು ಹಿಡಿದುಕೊಂಡು ಅಭಿಪ್ರಾಯ ಪಡೆದು  ಶ್ರೀ ವಿದ್ಯಾಭಾರತಿ ಎಜುಕೇಷನ್ ಟ್ರಸ್ಟ್ ಸ್ಥಾಪನೆ ಮಾಡಿ ಶಾಲೆಗೆ ಶ್ರೀ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆ  ಎಂಬ ಹೆಸರಿಟ್ಟರು. ಹಂಪಣ್ಣ ಮತ್ತು ಅವರ ಹೆಂಡತಿ ರೇಣುಕಮ್ಮ ಕೂಲಿ ನಾಲಿ ಮಾಡಿ ಹಣ ತಂದು, ಸ್ವತಃ ಗಾರೆ ಕೆಲಸ ಮಾಡಿ ಅಕ್ಷರಶಃ ಇಟ್ಟಿಗೆಗಳನ್ನಿಟ್ಟು ಶಾಲೆ ನಿರ್ಮಿಸಿದರು. ತಾವಿದ್ದ ಮನೆಯ ಮೂಲೆಯ ಸ್ಥಳವನ್ನು ಸ್ವಚ್ಛ ಮಾಡಿ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಿದರು. ದೂರದ ಕಾರವಾರಕ್ಕೆ ಹೋಗಿ ಶಿಕ್ಷಕಿಯರನ್ನು ಕರೆತಂದರು. ತಮ್ಮ ಸ್ವಂತದ ಆಸೆ, ಅಪೇಕ್ಷೆಗಳನ್ನು ಒತ್ತೆ ಇಟ್ಟು ಹಣ ತಂದು ಸಂಬಳ, ಸಾರಿಗೆಗಳಿಗೆ ವ್ಯವಸ್ಥೆ ಮಾಡಿದರು. 
 
ಆ ಶಾಲೆಗೆ ಸರ್ಕಾರದ ಯಾವ ಸಹಾಯವೂ ಇಲ್ಲ, ಮಾನ್ಯತೆ ಮಾತ್ರ ನೀಡಿದೆ. ಅಂಥ ಹಿಂದುಳಿದ ಪ್ರದೇಶದಲ್ಲಿ, ಅಲ್ಲಿಯ ಮಕ್ಕಳಿಗೆ ಆದರ್ಶ ಶಿಕ್ಷಣ ನೀಡುತ್ತಿರುವ ಹಂಪಣ್ಣ ದಂಪತಿಗಳಿಗೆ ಇಂದಿಗೂ ಕಷ್ಟದ ಜೀವನವೇ. ದಿನದಿನಕ್ಕೂ ಹಣ ತಂದು ಸಂಸ್ಥೆಯ ಹೊಟ್ಟೆ ತುಂಬಿಸುವ ಚಿಂತೆ. ಈಗಲೂ ಕೂಲಿ ಮಾಡಿ ಬಂದ ಹಣವನ್ನು ಶಾಲೆಗೆ ಸುರಿಯುತ್ತಾರೆ. ಆದರೆ ಆ ಶಾಲೆಯನ್ನು ಒಮ್ಮೆ ನೋಡಬೇಕು. ಪಟ್ಟಣದ ಶಾಲೆಗಳಲ್ಲಿ ಕೂಡ ಕಾಣದ ಸ್ವಚ್ಛತೆ ಅಲ್ಲಿ ಕಾಣುತ್ತದೆ. ಸುಂದರವಾದ ತರಗತಿಗಳು, ಮುಂದೆ ಮೈದಾನ, ಅಲ್ಲಲ್ಲಿ ಮಕ್ಕಳಿಗೆ ಪ್ರಚೋದನೆ ನೀಡುವ ನೀತಿ ಮಾತುಗಳು ರಾರಾಜಿಸುತ್ತವೆ. ಬಾಲಕರಿಗೆ, ಬಾಲಕಿಯರಿಗೆ ಪ್ರತ್ಯೇಕ, ಸ್ವಚ್ಛವಾದ ಶೌಚಾಲಯಗಳು, ಪ್ರೀತಿಯಿಂದ ಪಾಠಮಾಡುವ ಶಿಕ್ಷಕಿಯರು ಮತ್ತು ಕಲಿಯಲು ಸಿದ್ಧವಾಗಿ ನಿಂತಿರುವ ಮುಗ್ಧ ಮಕ್ಕಳು ವಾತಾವರಣವನ್ನು ಆದರ್ಶವಾಗಿಸಿವೆ.
 
ಒಂದು ಕನಸು ಪರಿಶ್ರಮದ ಊರುಗೋಲಿಂದ ಹೇಗೆ ಸಾಕಾರವಾಗಿ ಸಮಾಜಕ್ಕೆ ಚೇತೋಹಾರಿಯಾಗಬಹುದು ಎಂಬುದಕ್ಕೆ ಹಂಪಣ್ಣನವರ `ಶ್ರೀ ವಿದ್ಯಾಭಾರತಿ ಶಾಲೆ' ಮಾದರಿ. ನಾವು ಸಾಧಕರು ಎಂದುಕೊಂಡಾಗ ದೊಡ್ಡ ದೊಡ್ಡ ಜನರನ್ನು ನೆನಪಿಸಿಕೊಳ್ಳುತ್ತೇವೆ. ಹಂಪಣ್ಣನಂಥವರು ಕಣ್ಣಿಗೆ ಕಾಣುವುದೇ ಇಲ್ಲ. ಆದರೆ ಅವರ ಸಾಧನೆ ಬೇರೆ ಯಾವುದಕ್ಕೂ ಕಡಿಮೆ ಇಲ್ಲ. ಹಂಪಣ್ಣ ಇತಿಹಾಸ ಓದಿರಲಿಕ್ಕಿಲ್ಲ. ಆದರೆ ತಮ್ಮ ಅನನ್ಯವಾದ, ನಿರಂತರ ಪರಿಶ್ರಮದಿಂದ ಇತಿಹಾಸವನ್ನು ಖಂಡಿತವಾಗಿ ನಿರ್ಮಿಸುತ್ತಾರೆ. ಅಂತಹವರಿಗೆ ನಮ್ಮೆಲ್ಲರ ಸಹಕಾರ, ಸಹಾಯ ಅಗತ್ಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.