ADVERTISEMENT

ತಲ್ಲಣಿಸದಿರು ಕಂಡ್ಯ ತಾಳು ಮನವೇ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:20 IST
Last Updated 16 ಜೂನ್ 2018, 9:20 IST

 ತಾಹೀರ್, ಮಹಾರಾಜನ ದರ್ಬಾರಿನಲ್ಲಿ ಮುಖ್ಯಮಂತ್ರಿ ಅವನ ಮೇಲೆ ಎಲ್ಲರಿಗೂ ತುಂಬ ನಂಬಿಕೆ, ವಿಶ್ವಾಸ. ಮಹಾರಾಜನಂತೂ ತಾಹೀರನನ್ನು ಕೇಳದೇ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ.ಹೀಗಾಗಿ ಎಲ್ಲರ ನಂಬಿಕೆಗೆ ದ್ರೋಹಬಾರದಂತೆ ಕೆಲಸ ಮಾಡಲು ಆತ ಹಗಲೂ ರಾತ್ರಿ ದುಡಿಯುತ್ತಿದ್ದ.ಅವನ ಪರಿಶ್ರಮಕ್ಕೆ ತಕ್ಕಂತೆ ರಾಜ ಅವನಿಗೆ ಸಕಲ ಸಂಪತ್ತು, ವೈಭೋಗಗಳನ್ನು ಒದಗಿಸಿದ್ದ. 

ಒಂದು ಬಾರಿ  ಆತನಿಗೆ ಇದೆಲ್ಲ ಅಧಿಕಾರ, ಸಂಪತ್ತು, ದರ್ಪ ಸಾಕು ಎನ್ನಿಸಿತು. ಎಲ್ಲವನ್ನೂ ತೊರೆದು ಸಂತನಾಗಿ ಬಿಡಲೇ ಎಂದು ಯೋಚಿಸಿದ. ಮತ್ತೊಮ್ಮೆ ಮನಸ್ಸು ಅವನನ್ನು ಎಚ್ಚರಿಸುತ್ತಿತ್ತು. ಅವಸರ ಬೇಡ.ಒಮ್ಮೆ ಅಧಿಕಾರ ಹೋಗಿಬಿಟ್ಟರೆ ಹಣದ ದಾರಿ ಬದಲಾಗಿ ಬಿಡುತ್ತದೆ.ನಂತರ ಪ್ರತಿ ಊಟಕ್ಕೂ ಪರದಾಡುವಂತಾಗುತ್ತದೆ. ಸಂತನಾಗಿ ಬಿಡುತ್ತೇನೆ ಎನ್ನುವುದು ಸುಲಭ, ಆದರೆ ಸಂತನಾಗಿ ಬದುಕುವುದು ಬಹುಕಷ್ಟ.ಎಲ್ಲವನ್ನೂ ತೊರೆದರೆ ಇರುವುದು ಎಲ್ಲಿ? ದಿನನಿತ್ಯದ ಊಟ ಬರುವುದು ಎಲ್ಲಿಂದ? ಹೀಗೆ ಚಿಂತಿಸಿ, ಚಿಂತಿಸಿ ಅವನ ತಲೆ ಬಿಸಿಯಾಯಿತು.ಯಾವ ನಿರ್ಧಾರಕ್ಕೂ ಬಾರದಂತೆ ಮನಸ್ಸು ಹೊಯ್ದಾಡಿತು.

ಒಂದು ದಿನ ಸಂಜೆ ಪ್ರಾರ್ಥನೆ ಮುಗಿಸಿ ತಾಹೀರ್ ಊಟ ಮಾಡಲು ಕುಳಿತ. ಅಂದು ಅವನೊಬ್ಬನೇ ಕುಳಿತಿದ್ದ. ಆಗ ಅಲ್ಲಿಗೊಂದು ಬೆಕ್ಕು ಬಂದಿತು.ಇವನ ಮುಖವನ್ನು ನೋಡಿ ‘ಮಿಯ್ಯಾಂ’ ಎಂದು ಮೆಲ್ಲಗೆ ಕೂಗಿತು. ಅದರ ಧ್ವನಿಯಲ್ಲಿ ಏನೋ ನಡುಕವಿದ್ದಂತಿತ್ತು. ತಕ್ಷಣ ತಾಹೀರ್ ತನ್ನ ತಟ್ಟೆಯಿಂದ ಒಂದು ತುಂಡು ರೊಟ್ಟಿಯನ್ನು ಅದರೆಡೆಗೆ ಎಸೆದ. ಅದು ಪಟಕ್ಕನೇ ಹಾರಿ ಅದನ್ನು ಕಚ್ಚಿ, ಬಾಯಲ್ಲಿ ಹಿಡಿದುಕೊಂಡು ಹೊರಗೋಡಿತು.

ಮತ್ತೆ ಎರಡು ಕ್ಷಣಗಳಲ್ಲಿ ಅದು ಹಾಜರ್. ಬಹುಶಃ ಅದಕ್ಕೆ ಬಹಳ ಹಸಿವಾಗಿರಬೇಕೆಂದುಕೊಂಡು ಮತ್ತೊಂದು ತುಂಡನ್ನು ಅದಕ್ಕೆ ಹಾಕಿದ.ಅದನ್ನು ಹಿಡಿದುಕೊಂಡು ಹೊರಗೆ ಓಡಿತು. ಅವನಿಗೆ ಆಶ್ಚರ್ಯ! ಮತ್ತೆ ಐದು ನಿಮಿಷಗಳಲ್ಲಿ ಬೆಕ್ಕು ಪ್ರತ್ಯಕ್ಷವಾಯಿತು. ಇದೆಂಥ ಆಸೆಬುರುಕ ಬೆಕ್ಕು ಎಂದು ಮತ್ತೊಂದು ಚೂರನ್ನು ಎಸೆದ.

ಇದೇ ರೀತಿ ಮತ್ತೆರಡು ಬಾರಿ ನಡೆಯಿತು. ಈಗ ತಾಹಿರ್‌ನಿಗೆ ಕುತೂಹಲ. ಇಷ್ಟು ತುಂಡುಗಳನ್ನು ಬೆಕ್ಕು ಏನು ಮಾಡುತ್ತದೆ, ಯಾರಿಗೆ ಕೊಡುತ್ತದೆ ಎಂದು ನೋಡಲು ಮೆಲ್ಲಗೆ ಅದರ ಹಿಂದೆಯೇ ಹೋದ. ಈ ಬೆಕ್ಕು ಅವನ ಮನೆಯ ಹಿಂಭಾಗಕ್ಕೆ ಹೋಗಿ ಅಲ್ಲಿ ಒಣ ಕಟ್ಟಿಗೆಗಳನ್ನು ಒಟ್ಟಿದ್ದ ಮೂಲೆಯಲ್ಲಿ ಕುಳಿತಿದ್ದ ಮತ್ತೊಂದು ಬೆಕ್ಕಿನ ಮುಂದೆ ತುಂಡುಗಳನ್ನು ಹಾಕುತ್ತಿತ್ತು. ಪಾಪ! ಅದೊಂದು ಕುರುಡು ಬೆಕ್ಕು.

ತಕ್ಷಣ ತಾಹೀರ್‌ನ ಹೃದಯದಲ್ಲೊಂದು ಬೆಳಕು ಚಿಮ್ಮಿತು. ತಾನು ಅಧಿಕಾರ ಬಿಟ್ಟು ಸಂತನಾದರೆ ತನಗೆ ದಿನನಿತ್ಯವೂ ಊಟ ಕೊಡುವವರು ಯಾರು? ಯಾರು ತನ್ನನ್ನು ಸಲಹುವವರು ಎಂದೆಲ್ಲ ಯೋಚಿಸಿದ್ದೆನಲ್ಲವೇ? ಒಂದು ಕುರುಡು ಬೆಕ್ಕಿಗೆ ಆಹಾರವನ್ನು ಯೋಜಿಸಿದ ಭಗವಂತ ನನ್ನ ಕಾಳಜಿ ಮಾಡದೇ ಇರುವನೇ? ಆ ಕುರುಡು ಬೆಕ್ಕಿಗೆ ಇರುವ ನಂಬಿಕೆಯೂ ನನಗಿಲ್ಲವಾಯಿತೇ ಎಂದು ಚಿಂತಿಸಿ ಮರುದಿನವೇ ಭಗವಂತನ ಸೇವಕನಾಗಿ ನಡೆದುಬಿಟ್ಟ. ಜಗತ್ತಿಗೆ ಶ್ರೇಷ್ಠ ಗುರುವಾದ. ಅದಕ್ಕೇ ದಾಸರು ಹೇಳಿದ್ದು ತಲ್ಲಣಿಸದಿರು ಕಂಡ್ಯ ತಾಳು ಮನವೇ, ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು ಘಟ್ಯಾಗಿ ಸಲಹುವನು ಅದಕೆ ಸಂಶಯ ಬೇಡ ಎಂದು. ವಿಶ್ವಾಸ ಬಲವಾದಾಗ ಶ್ರದ್ಧೆ ಮೂಡುತ್ತದೆ. ಶ್ರದ್ಧೆ ಸಾಧನೆ ಮಾಡಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.