ADVERTISEMENT

ತೆರೆದ ಹೊಸ ಕಿಟಕಿ

ಡಾ. ಗುರುರಾಜ ಕರಜಗಿ
Published 11 ಡಿಸೆಂಬರ್ 2012, 19:39 IST
Last Updated 11 ಡಿಸೆಂಬರ್ 2012, 19:39 IST

ಪ್ರೊಕ್ಟರ್ ಮತ್ತು ಗ್ಯಾಂಬಲ್ ಕಂಪನಿ ಸುಮಾರು ನೂರೈವತ್ತಕ್ಕೂ ಹೆಚ್ಚು ವರ್ಷದ ಇತಿಹಾಸ ಉಳ್ಳದ್ದು. ಇಂದು ಅದು ಅದೆಷ್ಟೋ ಶತಕೋಟಿ ಡಾಲರ್ ಬೆಲೆಬಾಳುವ ಕಂಪನಿಯಾಗಿದೆ. ಕೆಲವೊಂದು ಕಂಪನಿಗಳು ಕೆಲವೇ ವರ್ಷಗಳಲ್ಲಿ ಹೆಸರಿಲ್ಲದಂತೆಯೇ ಮಾಯವಾಗಿ ಹೋಗುತ್ತವೆ. ಆದರೆ ಕೆಲವು ಮಾತ್ರ ಉನ್ನತ ಸ್ತರದಲ್ಲಿಯೇ ಉಳಿದು ಬೆಳೆಯುತ್ತಲೇ ಹೋಗುತ್ತವೆ.

ಅದು ಹೇಗೆ ಎಂದು ಯೋಚಿಸುತ್ತಿರುವಾಗ ಈ ಪ್ರೊಕ್ಟರ್ ಮತ್ತು ಗ್ಯಾಂಬಲ್ ಕಂಪನಿಯಲ್ಲಿ ಬಹಳ ಹಿಂದೆ ಆದಂತಹ ಘಟನೆ ನೆನಪಿಗೆ ಬಂತು. 1879ರ ಹೊತ್ತಿಗೆ ಪ್ರೊಕ್ಟರ್ ಮತ್ತು ಗ್ಯಾಂಬಲ್ ಕಂಪನಿ ಮೇಣದ ಬತ್ತಿಗಳನ್ನು ಮಾರುವುದರಲ್ಲಿ ಹೆಸರುವಾಸಿಯಾಗಿತ್ತು.

ಆಗೆಲ್ಲ ಮನೆ ಬೆಳಕಿಗೆ ಮೇಣದ ಬತ್ತಿಗಳೇ ಆಧಾರ. ಅಮೆರಿಕದಲ್ಲಿ ನಮ್ಮ ದೇಶದ ಹಾಗೆ ಕಂದೀಲುಗಳನ್ನು ಹೆಚ್ಚಾಗಿ ಬಳಸದೇ ಮೇಣದಬತ್ತಿಗಳನ್ನೇ ಉಪಯೋಗಿಸುತ್ತಿದ್ದರು. ತರತರಹದ, ಬಣ್ಣದ, ಗಾತ್ರದ ಮೇಣದ ಬತ್ತಿಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದವು.

ADVERTISEMENT

ಒಂದು ದಿನ ಈ ಕಂಪನಿಯ ನಾಯಕರಿಗೆ ಭಯ ಪ್ರಾರಂಭವಾಯಿತು. ಯಾಕೆಂದರೆ ಆಗ ಥಾಮಸ್ ಎಡಿಸನ್ ಕಂಡುಹಿಡಿದಿದ್ದ ವಿದ್ಯುತ್ ಬಲ್ಬುಗಳು ಜನಪ್ರಿಯವಾಗತೊಡಗಿದ್ದವು. ಹೆಚ್ಚು ಬೆಳಕು ಕೊಡುವ ಮತ್ತು ಸುಲಭದ ಈ ಉಪಕರಣಗಳು ಮನೆಮನೆಗಳನ್ನು ಸೇರತೊಡಗಿದ್ದವು. ಹೀಗೆಯೇ ಮುಂದುವರೆದರೆ ತಮ್ಮ ಮೇಣದ ಬತ್ತಿಯ ವ್ಯಾಪಾರಕ್ಕೆ ಧಕ್ಕೆ ಬರುತ್ತದೆಂಬ ಚಿಂತೆ ಕಾಡತೊಡಗಿತು.

ಅವರು ಚಿಂತಿಸಿದಂತೆ ಮುಂದೆರಡು ವರ್ಷಗಳಲ್ಲಿ ಮೇಣಬತ್ತಿಯ ವ್ಯಾಪಾರ ನಿಂತೇ ಹೋಗುವ ಸ್ಥಿತಿಗೆ ಬಂದಿತು. ಕೆಲವೊಂದು ವಿಶೇಷ ಪ್ರಸಂಗಗಳಿಗೆ, ಅಲಂಕಾರಕ್ಕೆ ಮಾತ್ರ ಮೇಣದಬತ್ತಿಗಳನ್ನು ಜನ ಕೊಳ್ಳಲು ಪ್ರಾರಂಭಿಸಿದರು.

 ಕಂಪನಿ ಮುಚ್ಚುವ ಸ್ಥಿತಿಗೆ ಬಂದಿತು. ಈ ಸಂದರ್ಭದಲ್ಲಿ ಸಿನ್‌ಸಿನಾಟಿ ಪ್ರದೇಶದಲ್ಲಿದ್ದ ಅವರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮನುಷ್ಯನೊಬ್ಬ ಬೇಜವಾಬ್ದಾರಿಯಿಂದ ನಡೆಯುತ್ತಿದ್ದ ಯಂತ್ರವನ್ನು ಬಂದು ಮಾಡದೇ ಹಾಗೆಯೇ ಊಟಕ್ಕೆ ಹೋಗಿಬಿಟ್ಟಿದ್ದ. ಯಂತ್ರ ಗರಗರನೇ ತಿರುಗುತ್ತ ಕರಗಿದ್ದ ಮೇಣ ಕಡೆಯುತ್ತಿತ್ತು.

ಈ ಮಂಥನ ಅತಿಯಾಗಿ ಅದು ನೊರೆನೊರೆಯಾಗಿ ಗಾಳಿಯ ಗುಳ್ಳೆಗಳನ್ನು ತುಂಬಿಕೊಂಡು ಯಂತ್ರದ ಹೊರಗೆ ಹೊರಸೂಸಿ ಹರಿಯುತ್ತಿತ್ತು. ಊಟ ಮಾಡಿ ಬಂದ ಕೆಲಸಗಾರ ಇದನ್ನು ಕಂಡು ಗಾಬರಿಯಾದ. ಅದನ್ನು ಹೊರಹಾಕಬೇಕೆಂದು ಬಳಿಯತೊಡಗಿದ.

ಗಾಳಿ ತುಂಬಿಕೊಂಡ ನೊರೆ ಎಷ್ಟು ಹಗುರಾಗಿತ್ತೆಂದರೆ ಬಕೆಟ್ಟಿನಲ್ಲಿ ತುಂಬಲೂ ಆಗುತ್ತಿರಲಿಲ್ಲ. ಆಗ ಅವನ ಮೇಲಾಧಿಕಾರಿ ಬಂದು ಇದನ್ನು ನೋಡಿದ. ಇವನನ್ನು ಬೈಯುವ ಬದಲು ಆಶ್ಚರ್ಯದಿಂದ ಆ ನೊರೆಯನ್ನು ನೋಡಿದ, ಕೈಯಲ್ಲಿ ಹಿಡಿದು ಉಜ್ಜಿ ಉಜ್ಜಿ ನೋಡಿದ. ನಂತರ ಅದನ್ನು ನೀರು ತುಂಬಿದ ಬಕೆಟ್ಟಿಗೆ ಹಾಕಿದ. ಈ ನೊರೆ ತೇಲುತ್ತಿತ್ತು! ಅವನ ತಲೆಯಲ್ಲೇನೊ ಹೊಸ ವಿಚಾರ ಬಂತು.

ತಾನು ಸ್ನಾನಕ್ಕೆ ಬಳಸುತ್ತಿದ್ದ ಸೋಪಿನ ನೊರೆಯನ್ನು, ಜೆಲ್‌ನ್ನು ತಂದು ಇದಕ್ಕೆ ಸೇರಿಸಿ ಮತ್ತಷ್ಟು ಯಂತ್ರಕ್ಕೆ ಹಾಕಿ ಕಡೆದ. ಒಂದು ಗಟ್ಟಿಯಾದ ವಡೆಯಂಥದ್ದು ಸಿದ್ಧವಾಯಿತು. ಅದಕ್ಕೆ ಸಾಬೂನಿನ ಗುಣವಿದೆ. ಮೇಣದ ಗುಳ್ಳೆಗಳಿರುವುದರಿಂದ ತುಂಬ ಹಗುರಾಗಿದೆ. ಆ ಸಾಬೂನಿನ ವಡೆಯನ್ನು ನೀರಿಗೆ ಹಾಕಿದ. ಅದೂ ತೇಲತೊಡಗಿತು. ಅದಕ್ಕೆ  ಐವರಿ ಸೋಪ್  ಎಂದು ಹೆಸರಿಟ್ಟ.

ಕೆಲವೇ ದಿನಗಳಲ್ಲಿ ಅದೊಂದು ಅತ್ಯಂತ ವಿಶೇಷವಾದ ಸಾಬೂನು ಎಂದು ಪ್ರಖ್ಯಾತವಾಯಿತು. ಪ್ರವಾಸಕ್ಕೆ ಹೋಗುವವರಿಗೆ ಭಾರವಾಗದಂತೆ ಇತ್ತು. ನದಿಯಲ್ಲಿ, ಕೊಳದಲ್ಲಿ ಸ್ನಾನಮಾಡುವಾಗ ದಂಡೆಗೆ ಬಂದು ಸಾಬೂನನ್ನು ಇಟ್ಟು ಮತ್ತೆ ನೀರಿಗೆ ಹೋಗುವ ಗೋಜಿಲ್ಲ. ಹಾಗೆಯೇ ನೀರನಲ್ಲೇ ಬಿಟ್ಟರಾಯಿತು, ತೇಲುತ್ತಲೇ ಇರುತ್ತದೆ. ಈ  ಐವರಿ ಸೋಪ್  ಮನೆಮನೆಯ ಮಾತಾಯಿತು.

ಪ್ರಾಕ್ಟರ್ ಮತ್ತು ಗ್ಯಾಂಬಲ್ ಕಂಪನಿ ಮತ್ತೆ ಪುಟಿದೆದ್ದಿತು. ಮೇಣಬತ್ತಿ ಹೋಗಿ ಸಾಬೂನು ಬಂದಿತು. ಒಂದು ಕಿಟಕಿ ಮುಚ್ಚಿದರೆ ಮತ್ತೆ ಎರಡು ಹೊಸ ಕಿಟಕಿಗಳು ತೆರೆದುಕೊಳ್ಳುತ್ತವೆ. ಆದರೆ ಅದನ್ನು ಗಮನಿಸಲು ಸೃಜನಶೀಲತೆಯ ತೆರೆದ ಮನಸ್ಸಿರಬೇಕು, ಹತಾಶೆಯ ಭಾವನೆ ತೊರೆಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.