ತೋರಿಸಿಕೊಳ್ಳುವ ಹಂಬಲ
ಡಾ. ಗುರುರಾಜ ಕರಜಗಿ Published 19 ಡಿಸೆಂಬರ್ 2012, 17:22 IST Last Updated 19 ಡಿಸೆಂಬರ್ 2012, 17:22 IST ನನಗೆ ಇದು ತುಂಬ ಇಷ್ಟವಾದ ಪ್ರಸಂಗ, ಯಾರೋ ಸ್ನೇಹಿತರು ಹೇಳಿದ್ದು.ಒಬ್ಬ ಮನುಷ್ಯ ಯಾವಾಗಲೂ ಅಭದ್ರತೆಯಲ್ಲೇ ನರಳುತ್ತಿದ್ದ. ಯಾವಾಗಲೂ ತನಗೆ ದೊರಕಬೇಕಾದ ಸ್ಥಾನ, ಗೌರವ, ಮರ್ಯಾದೆ ದೊರಕಲಿಲ್ಲವೆಂದು ಕೊರಗುತ್ತಿದ್ದ. ಅವನು ಸರ್ಕಾರಿ ನೌಕರಿಯಲ್ಲಿದ್ದ. ಎಷ್ಟೋ ವರ್ಷಗಳ ನಂತರ ಅವನಿಗೆ ಡೆಪ್ಯೂಟಿ ಸೆಕ್ರೆಟರಿ ಸ್ಥಾನಕ್ಕೆ ಬಡ್ತಿ ಸಿಕ್ಕಿತು. ಅವನಿಗೆ ಅಪಾರವಾದ ಸಂತೋಷ. ಡೆಪ್ಯೂಟಿ ಸೆಕ್ರೆಟರಿ ಎಂದರೆ ಸಣ್ಣ ಹುದ್ದೆಯೇ ಎಂದು ಆಕಾಶಕ್ಕೆ ನೆಗೆದು ಹಾರಾಡುವಂತಾಯಿತು. ಮರುದಿನ ಅವನು ಅಧಿಕಾರ ವಹಿಸಿಕೊಂಡ. ಅವನಿಗಾಗಿ ನಿಗದಿಯಾಗಿದ್ದ ಕೊಠಡಿ ಪ್ರವೇಶಿಸಿದ.
ಅಲ್ಲಿದ್ದ ತನ್ನ ಕುರ್ಚಿಯನ್ನು ನಾಲ್ಕಾರು ಬಾರಿ ಮುಟ್ಟಿ ಸಂತೋಷಪಟ್ಟ. ಮುಂದಿದ್ದ ಟೇಬಲ್ಲಿನ ಮೇಲೆ ಎಷ್ಟೊಂದು ಫೈಲುಗಳು! ಇವನ ಆಜ್ಞೆಗೇ ಕಾಯುತ್ತಿವೆ. ತಾನು ಈಗ ಎಷ್ಟು ಪ್ರಭಾವಶಾಲಿ, ಎಷ್ಟೊಂದು ಜನರ ಭವಿಷ್ಯ ನಿರ್ಧರಿಸುವ ಫೈಲುಗಳು ನನ್ನ ತೀರ್ಮಾನಕ್ಕೆ ಕಾದಿವೆ ಎನ್ನುವುದೇ ಒಂದು ಭಾರಿ ಅಭಿಮಾನದ ಕೆಲಸವಾಯಿತು. ಸಂದರ್ಶಕರ ಕುರ್ಚಿಗಳ ಹಿಂದೆ ಒಂದು ಸೋಫಾ ಸೆಟ್ ಇದೆ. ಕುರ್ಚಿಯ ಎಡಭಾಗದಲ್ಲಿ ಹವಾನಿಯಂತ್ರಣ ಯಂತ್ರವಿದೆ. ಎಲ್ಲವೂ ಸೇರಿ ಸ್ವರ್ಗವನ್ನೇ ನಿರ್ಮಿಸಿದಂತೆ ಕಾಣುತ್ತಿದೆ. ಹೋಗಿ ತನ್ನ ಕುರ್ಚಿಯ ಮೇಲೆ ಕುಳಿತ. ತಾನು ತುಂಬ ಶಕ್ತಿವಂತನಾದಂತೆ ಎನ್ನಿಸಿತು.
ಅಷ್ಟರಲ್ಲಿ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ` ಯಾರದು, ಒಳಗೆ ಬನ್ನಿ' ಎಂದು ಧ್ವನಿಯನ್ನು ಆದಷ್ಟು ಅಧಿಕಾರಯುತವಾಗಿ ಮಾಡಿಕೊಂಡ. ಬಾಗಿಲನ್ನು ತಳ್ಳಿಕೊಡು ಒಬ್ಬ ಮನುಷ್ಯ ಒಳಗೆ ಬಂದ. ಅವನೇನೋ ಹೇಳಬೇಕೆಂದಿದ್ದ. ಆದರೆ ಅಧಿಕಾರಿಗೆ ತನ್ನ ಗತ್ತು, ಪ್ರಭಾವ ತೋರಿಸಲು ಒಬ್ಬ ವ್ಯಕ್ತಿ ಸಿಕ್ಕಂತಾಯಿತು. `ಒಂದು ನಿಮಿಷ ಇರಿ, ಬಹು ಮುಖ್ಯವಾದ ಫೋನ್ ಮಾಡಬೇಕಾಗಿದೆ' ಎಂದು ಹೇಳಿ ಯಾವುದೋ ಸಂಖ್ಯೆ ತಿರುಗಿಸಿ ಫೋನ್‌ನಲ್ಲಿ ಮಾತನಾಡತೊಡಗಿದ.
`ನಮಸ್ಕಾರ, ಮುಖ್ಯ ಕಾರ್ಯದರ್ಶಿಯವರಿಗೆ. ಹೌದು, ಹೌದು ನಾನು ಇಂದೇ ಡೆಪ್ಯೂಟಿ ಸೆಕ್ರೆಟರಿಯಾಗಿ ಅಧಿಕಾರ ತೆಗೆದುಕೊಂಡಿದ್ದೇನೆ. ಹ್ಞಾ, ಹ್ಞಾ ನಿಮ್ಮ ಶುಭಾಶಯಗಳಿಗೆ ಕೃತಜ್ಞತೆಗಳು. ಹೌದಲ್ವೇ. ಅಧಿಕಾರದಲ್ಲಿ ನಾವು ಮೇಲೆ ಕೆಳಗೆ ಇದ್ದರೂ ಇಬ್ಬರೂ ಹಳೆಯ ಸ್ನೇಹಿತರಲ್ವೇ. ನೀವು ಯಾವ ಚಿಂತೆಯನ್ನೂ ಮಾಡಬೇಡಿ. ಎಂಥ ಸಮಸ್ಯೆಯನ್ನು ನಾನು ಕ್ಷಣ ಮಾತ್ರದಲ್ಲಿ ಪರಿಹರಿಸಿಬಿಡುತ್ತೇನೆ. ನಿಮಗೆ ಗೊತ್ತಲ್ಲ. ನಮ್ಮ ಇಲಾಖೆಯ ಮಂತ್ರಿ ಕೂಡ ನನ್ನ ಸ್ನೇಹಿತ.
ಶಾಲೆಯಲ್ಲಿದ್ದಾಗ ಮಹಾಮೂರ್ಖನಾಗಿದ್ದ. ಈಗ ಮಂತ್ರಿಯಾಗಿದ್ದಾನೆ. ಆದರೆ ನಾನು ಹೇಳಿದ ಒಂದು ಮಾತನ್ನೂ ತೆಗೆದು ಹಾಕುವುದ್ಲ್ಲಿಲ. ಅವನಿಗೂ, ಮುಖ್ಯಮಂತ್ರಿಗಳಿಗೂ ಚೆನ್ನಾಗಿದೆ. ನಿಮಗೆ ಏನಾದರೂ ಸಹಾಯಬೇಕಾದರೆ ನನಗೆ ಹೇಳಿ, ಸಂಕೋಚ ಬೇಡ. ನನಗೆ ಇಷ್ಟೊಂದು ಜನರ ಬೆಂಬಲವಿರುವಾಗ ಯಾರ ಭಯ. ಆಯ್ತು, ನೀವು ನಮ್ಮ ಮನೆಗೆ ಬನ್ನಿ ವಿರಾಮವಾಗಿ ಮಾತನಾಡೋಣ. ಫೋನ್ ಇಡಲಾ. ಸರಿ' ಎಂದು ಅತ್ಯಂತ ಸಂಭ್ರಮದಿಂದ, ತೃಪ್ತಿಯಿಂದ ಫೋನನ್ನು ಕೆಳಗಿಟ್ಟು ಈ ಮಾತುಗಳನ್ನೇ ಕೇಳುತ್ತ ಬೆರಗಾಗಿ ನಿಂತಿದ್ದ ಅಧಿಕಾರಿಯನ್ನು ಕಂಡು ಗತ್ತಿನಿಂದ, `ನಿಮಗೆ ಏನಾಗಬೇಕಿತ್ತು' ಎಂದು ಕೇಳಿದರು.
ಆತ ಇವರ ಮುಖವನ್ನೇ ನೋಡುತ್ತ ಹೇಳಿದ, `ಸರ್, ನಾನು ಟೆಲಿಫೋನ್ ಇಲಾಖೆಯವನು. ನಿಮ್ಮ ಟೆಲಿಫೋನಿಗೆ ಸಂಪರ್ಕ ಕಲ್ಪಿಸಬೇಕಿತ್ತು. ಇದುವರೆಗೂ ಅದಕ್ಕೆ ಯಾವ ಸಂಪರ್ಕವೂ ಇಲ್ಲ'. ಸಾಹೇಬರ ಮುಖ ಬಿಳಿಚಿಕೊಂಡಿತು. ನಮಗೆ ಸಣ್ಣ ಸಣ್ಣ ಬೆಳವಣಿಗೆಯಾದರೆ, ಪುಟ್ಟ ಸಾಧನೆಯಾದರೆ ಅದೆಷ್ಟು ಹೇಳಿಕೊಳ್ಳುವ, ತೋರಿಸಿಕೊಳ್ಳುವ ಕಾತುರ. ಜನ ನನ್ನನ್ನು ಮೆಚ್ಚಬೇಕೆಂಬ, ಗೌರವಿಸಬೇಕೆಂಬ ಹುಚ್ಚು ದಾರಿ ತಪ್ಪಿಸುತ್ತದೆ, ಸರಿಯಾದ ಸಮಯದಲ್ಲಿ ಮರ್ಯಾದೆ ತೆಗೆಯುತ್ತದೆ.