ADVERTISEMENT

ಪ್ರಪಂಚ ಒಂದು ಅದ್ಭುತ

ಡಾ. ಗುರುರಾಜ ಕರಜಗಿ
Published 24 ಜನವರಿ 2013, 19:59 IST
Last Updated 24 ಜನವರಿ 2013, 19:59 IST

ಆಶಾವಾದ ಬಗ್ಗೆ ಮತ್ತು ಧನಾತ್ಮಕ ಚಿಂತನೆಯ ಬಗ್ಗೆ ಅನೇಕ ಗ್ರಂಥಗಳನ್ನು ಬರೆದು ಪ್ರಸಿದ್ಧರಾದ ನಾರ್ಮನ್ ವಿನ್ಸೆಂಟ ಪೀಲ್ ಅವರು ತಮ್ಮ ಜೀವನದಲ್ಲಿ  ನಡೆದ ಒಂದು ಪುಟ್ಟ ಘಟನೆಯ ಬಗ್ಗೆ ತುಂಬ ಭಾವನಾತ್ಮಕವಾಗಿ ಬರೆಯುತ್ತಾರೆ.  ಪೀಲ್ ಅವರ ತಾಯಿ ಒಬ್ಬ ಅದ್ಭುತ ವ್ಯಕ್ತಿ. ಆಕೆ ಸದಾ ಕಾಲ ಅತ್ಯುತ್ಸಾಹದಲ್ಲೇ ಇರುತ್ತಿದ್ದರು. ಅವರಿಗೆ ಪ್ರತಿಯೊಂದು ವಿಷಯದ ಬಗ್ಗೆ ಆಸಕ್ತಿ, ಪ್ರತಿಯೊಂದು ವಸ್ತುವನ್ನು ಪ್ರೀತಿಯಿಂದ, ಉತ್ಸಾಹದಿಂದ ನೋಡುವರು. ಮತ್ತೊಬ್ಬರಿಗೆ ಅತ್ಯಂತ ಸಾಧಾರಣ ಎಂದು ತೋರುವ ಘಟನೆ ಅವರಿಗೆ ತುಂಬ ಆಕರ್ಷಕವಾಗಿ, ಧನಾತ್ಮಕವಾಗಿ ತೋರುವುದು. ಆಕೆ ಪ್ರಪಂಚವನ್ನು ಸಾಕಷ್ಟು ಬಾರಿ ಸುತ್ತಿ ಬಂದಿದ್ದರೂ ಯಾವುದರಲ್ಲಿಯೂ ಉದಾಸೀನತೆ ಇರಲಿಲ್ಲ. ಒಂದು ಬಾರಿ ಪೀಲ್, ತಮ್ಮ ಪರಿವಾರದೊಂದಿಗೆ ಅಮೆರಿಕದ ನ್ಯೂಜೆರ್ಸಿಯಿಂದ ನ್ಯೂಯಾರ್ಕಿಗೆ ದೋಣಿಯಲ್ಲಿ  ಪ್ರವಾಸ ಮಾಡುತ್ತಿದ್ದರು. ಅಂದು ವಿಪರೀತ ಮಂಜು ಮುಸುಕಿತ್ತು. ಸುಮಾರು ಹದಿನೈದು ಅಡಿಗಳಿಗಿಂತ ಮುಂದಿನದು ಯಾವುದೂ ಕಾಣುತ್ತಿರಲಿಲ್ಲ. ಪರಿವಾರದವರೆಲ್ಲ ನಿರಾಸೆಯಿಂದ. ಛೇ ಏನೂ ಕಾಣುವುದಿಲ್ಲ ಎಂದು ಗೊಣಗುತ್ತಿದ್ದರು.

ಈ ಪ್ರವಾಸದಲ್ಲಿ  ವಿಶೇಷವಾದದ್ದೇನೂ ಪೀಲ್‌ರಿಗೆ ಕಾಣಲಿಲ್ಲ. ಆದರೆ ಅವರ ತಾಯಿ ಪೀಲ್‌ರ ಬೆನ್ನು ತಟ್ಟಿ, `ಮಗೂ ನಾರ್ಮನ್, ಈ ದೃಶ್ಯ ಎಷ್ಟು ಅದ್ಭುತವಾಗಿದೆಯಲ್ಲ. ನನಗಂತೂ ರೋಮಾಂಚನವಾಗುತ್ತಿದೆ'  ಎಂದರು. ಇವರು ಆಶ್ಚರ್ಯದಿಂದ,  `ಅಮ್ಮೋ ಇದರಲ್ಲಿ  ಏನು ಅದ್ಭುತವಿದೆ'  ಎಂದು ಕೇಳಿದರು. ಆಗ ತಾಯಿ ಕಣ್ಣರಳಿಸಿ,  `ಏನು ನಿನಗೆ ಯಾವ ಅದ್ಭುತವೂ ಕಾಣಲಿಲ್ಲವೇ. ಛೇ ಅದೆಂತಹ ಸುಂದರವಾದ ಮಂಜಿನ ಮುಸುಕನ್ನು ಭಗವಂತ ನಮ್ಮ ಸುತ್ತ ಹೊದಿಸಿದ್ದಾನೆ. ನೋಡಿದೆಯಾ ನಮ್ಮ ಪರಿವಾರದ ಪ್ರವಾಸದ ಏಕಾಂತಕ್ಕೆ ಭಂಗಬಾರದಂತೆ ಎಂಥ ಸುಂದರ ವ್ಯವಸ್ಥೆಯಾಗಿದೆ!

ಅದೋ ದೂರದ ದೀಪಗಳು ಈ ಮಂಜಿನಲ್ಲಿ  ಕರಗಿ ಮತ್ತೆ ಹೊಳೆಯುವ ಪರಿಯನ್ನು ಕಂಡೆಯಾ ಅದು ಎಂತಹ ಸುಂದರವಾದ ವಿಜ್ಞಾನದ ಪರಿ'  ಎಂದರು. ಅಷ್ಟರಲ್ಲಿ  ಹತ್ತಿರದಲ್ಲಿ  ಹೊರಟ ಮತ್ತೊಂದು ದೋಣಿ ಜೋರಾಗಿ ಸದ್ದು ಮಾಡುತ್ತ ಮುಂದುವರೆಯಿತು. ಆ ದೋಣಿ ಹೋದ ರಭಸಕ್ಕೆ ಸುತ್ತಲಿನ ಮಂಜು ಸ್ವಲ್ಪ ಚೆಲ್ಲಾಪಿಲ್ಲಿ ಯಾಗಿ ದೂರದ ಚಿತ್ರಗಳು ಸ್ಪಷ್ಟವಾಗಿ ಮತ್ತೆ ಕ್ಷಣದಲ್ಲಿ  ಅಸ್ಪಷ್ಟವಾದವು. ಪೀಲ್‌ರು ತಮ್ಮ ತಾಯಿಯ ಮುಖವನ್ನೇ ನೋಡುತ್ತಿದ್ದರು. ಆಕೆಯ ಮುಖದಲ್ಲಿ  ಒಂದು ಪುಟ್ಟ ಮಗುವಿನ ಉತ್ಸಾಹದ ಕುಣಿತವಿತ್ತು. ಪೀಲ್‌ರಿಗೆ ಇದು ವಿಚಿತ್ರವೆನಿಸಿತು. ಅವರಿಗೆ ಇದೊಂದು ಅನಿವಾರ್ಯವಾದ ಪ್ರವಾಸ. ಎಷ್ಟು ಬೇಗ ಮುಗಿದರೆ ಅಷ್ಟು ಒಳ್ಳೆಯದು ಎಂದುಕೊಂಡಿದ್ದರು.

ರಾತ್ರಿ ಊಟವಾದ ಮೇಲೆ ತಾಯಿ ಮಗನ ಹತ್ತಿರ ಬಂದು ಕುಳಿತು ಹೇಳಿದರು,  `ನಾರ್ಮನ್, ನೀನು ಪುಟ್ಟ ಮಗುವಾಗಿದ್ದಾಗಿನಿಂದ ನಿನಗೆ ನಾನು ಅನೇಕ ಸಲಹೆಗಳನ್ನು ನೀಡುತ್ತ ಬಂದಿದ್ದೇನೆ. ಅವುಗಳಲ್ಲಿ  ಕೆಲವನ್ನು ಪಾಲಿಸಿದ್ದೀಯಾ, ಕೆಲವನ್ನು ಬಿಟ್ಟಿದ್ದೀಯಾ. ಆದರೆ ನಾನು ಈಗ ನಿನಗೊಂದು ಸಲಹೆ ಕೊಡುತ್ತಿದ್ದೇನೆ. ಅದನ್ನು ದಯವಿಟ್ಟು ಪಾಲಿಸು, ನಿನ್ನ ಜೀವನ ಸದಾ ಸಂತೋಷಮಯವಾಗಿರುತ್ತದೆ.

ಈ ಜಗತ್ತು ಒಂದು ಅದ್ಭುತ, ಸೌಂದರ್ಯದ ಖನಿ ಮತ್ತು ಸದಾ ಚೇತೋಹಾರಿಯಾದದ್ದು. ಇದನ್ನು ಹೃದಯದಾಳದಿಂದ ಪ್ರೀತಿಸು, ಜನರನ್ನು ಪ್ರೀತಿಸು, ಜಗತ್ತಿನ ಸೌಂದರ್ಯವನ್ನು ಪ್ರತಿ ಕ್ಷಣವೂ ಆರಾಧಿಸು. ಜೀವನದ ಪ್ರತಿ ಘಟನೆಯನ್ನು, ವಸ್ತುವನ್ನು, ವ್ಯಕ್ತಿಯನ್ನು ಇದೇ ಕಡೇ ಬಾರಿ ನೋಡುತ್ತೇನೆ. ಮುಂದೆಂದೂ ದೊರೆಯಲಾರದು ಎಂಬಂಥ ತೀವ್ರತೆಯಿಂದ ಗಮನಿಸು. ಆಗ ಬದುಕಿನಲ್ಲಿ  ಬೇಸರದ, ನಿರಾಸೆಯ ಕ್ಷಣ ಎಂದಿಗೂ ಬರಲಾರದು'.  ಈ ಮಾತು ಪಿಲ್‌ರ ಜೀವನದಲ್ಲಿ  ಆಶಾವಾದಕ್ಕೆ, ಧನಾತ್ಮಕ ಚಿಂತನೆಗೆ ಬುನಾದಿಯಾಯಿತು.

ಪ್ರಪಂಚದಲ್ಲಿ  ಸಂತೋಷವಾಗಿರುವುದು ಅಥವಾ ದುಃಖಿಯಾಗಿರುವುದು ನಮ್ಮದೇ ಆಯ್ಕೆ. ಜಗತ್ತಿನಲ್ಲಿ  ಎಲ್ಲವೂ ಇದೆ. ಯಾವುದನ್ನು ನಾವಾಗಿಯೇ ಆಯ್ಕೆ ಮಾಡಿ ತಂದು ಜೀವನದಲ್ಲಿ  ತುಂಬಿಕೊಳ್ಳುತ್ತೇವೋ ಅದೇ ನಾವಾಗುತ್ತೇವೆ. ಹೀಗೆಂದಾಗ ಪ್ರಪಂಚದಲ್ಲಿ  ಕೆಟ್ಟದ್ದು, ವಿಕಾರವಾದದ್ದು ದುಃಖಪ್ರದವಾದದ್ದು ಇಲ್ಲವೇ ಇಲ್ಲ ಎಂಬ ನಿರಾಕರಣೆಯ ಮಾತು ಇದಲ್ಲ. ಅದೆಲ್ಲ ಇದೆ ಎಂದು ಒಪ್ಪಿಕೊಂಡರೂ  ಅದನ್ನೇ ಅಪ್ಪಿಕೊಂಡು ಕೂಡ್ರುವುದು ಜಾಣ್ಮೆಯ ಬದುಕಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT