ಕೆಲವೊಮ್ಮೆ ಜೀವನಕ್ಕೆ ಬೇಕಾದ ಬಹುದೊಡ್ಡ ತತ್ವಗಳು ತುಂಬ ಸಾಮಾನ್ಯವಾದ ಘಟನೆಗಳಲ್ಲಿ ಥಟ್ಟನೇ ಬಂದು ಮುಂದೆ ನಿಲ್ಲುತ್ತವೆ. ಕೆಲವರ್ಷಗಳ ಹಿಂದೆ ನಾನು ಒಬ್ಬ ಸ್ನೇಹಿತರ ಮನೆಗೆ ಹೋಗಿದ್ದೆ. ಅವರ ಚಿಕ್ಕ ಮಗ ಸುಮಾರು ಹತ್ತು-ಹನ್ನೆರಡು ವರ್ಷದವನು ಆಟವಾಡುತ್ತಿದ್ದ. ಆತ ಬಲು ಚೂಟಿಯಾದ ಹುಡುಗ. ಯಾವಾಗಲೂ, ಏನಾದರೂ ಮಾಡುತ್ತಲೇ ಇರುವವನು. ಅವತ್ತೂ ಏನೋ ಸರ್ಕಸ್ ಮಾಡುತ್ತಿದ್ದ. ನನ್ನನ್ನು ನೋಡಿ ಮತ್ತಷ್ಟು ಉತ್ಸಾಹದಿಂದ ಓಡಿ ಬಂದ.
`ಅಂಕಲ್ ನಿಮ್ಮ ಮನೆಯ ಬಚ್ಚಲು ಮನೆಯಲ್ಲಿ ಷವರ್ ಇದೆಯಾ' ಎಂದು ಕೇಳಿದ. ನಾನು ಇದೆಯೆಂದು ತಲೆ ಅಲ್ಲಾಡಿಸಿದೆ. ಆಗ ಅವನು, `ನಮ್ಮ ಮನೆಯಲ್ಲಿ ಷವರ್ ಇಲ್ಲ. ಆದರೆ ನಾನೊಂದು ಐಡಿಯಾ ಮಾಡಿ ಷವರ್‌ಮಾಡಿದ್ದೇನೆ' ಎಂದ. ಅದು ಹೇಗೋ? ಎಂದು ಕೇಳಿದಾಗ ನನ್ನ ಕೈ ಹಿಡಿದು ಎಳೆದುಕೊಂಡು ಬಚ್ಚಲುಮನೆಗೆ ನಡೆದ. ತನ್ನ ಚೀಲದಿಂದ ಒಂದು ಬಲೂನನ್ನು ಹೊರತೆಗೆದ. ಸ್ವಲ್ಪ ಊದಿದಂತೆ ಮಾಡಿ ಸ್ವಲ್ಪ ಹಿಗ್ಗಿಸಿದ. ನಂತರ ಅದರ ಬಾಯಿಯನ್ನು ನಲ್ಲಿಗೆ ಸಿಕ್ಕಿಸಿ ಚೆನ್ನಾಗಿ ದಾರ ಕಟ್ಟಿ ಬಿಗಿದ.
ಆಮೇಲೆ ನಿಧಾನವಾಗಿ ನಲ್ಲಿಯನ್ನು ತಿರುಗಿಸಿದ. ನೀರು ಬಲೂನನ್ನು ತುಂಬತೊಡಗಿತು. ಸಾವಕಾಶವಾಗಿ ಬಲೂನು ದೊಡ್ಡದಾಗುತ್ತ ಬಂದಿತು. ಹುಡುಗ ಅದನ್ನು ಗಮನಿಸುತ್ತಲೇ ಇದ್ದ. ಬಲೂನಿನಲ್ಲಿ ನೀರು ತುಂಬಿ ಅದು ಉಬ್ಬಿ ಇನ್ನೇನು ಹರಿದುಹೋಗುತ್ತದೆ ಎಂಬ ಹಂತಕ್ಕೆ ಬಂತು. ಆಗ ಹುಡುಗ ನೀರನ್ನು ನಿಲ್ಲಿಸಿ ಜೇಬಿನಿಂದ ಒಂದು ಪುಟ್ಟ ಸೂಜಿಯನ್ನು ತೆಗೆದ. ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಉಬ್ಬಿದ ಬಲೂನಿನ ಮೇಲೆ ಚುಚ್ಚಿದ. ನೀರು ತೂತಿನಿಂದ ಛಿಳ್ಳೆಂದು ನುಗ್ಗತೊಡಗಿತು.
ಆತ ಅದೇ ರೀತಿ ಮತ್ತೊಂದು, ಮತ್ತೊಂದರಂತೆ ಹತ್ತಾರು ತೂತುಗಳನ್ನು ಮಾಡಿದ. ಆಗ ಅವೆಲ್ಲ ತೂತುಗಳಿಂದ ನೀರು ಸಿಡಿಯತೊಡಗಿತು. ನಿಧಾನವಾಗಿ ಬಲೂನಿನ ಗಾತ್ರ ಚಿಕ್ಕದಾಗುತ್ತ ಬಂತು. ಆಗ ಆತ ಮತ್ತೆ ನಲ್ಲಿ ತಿರುಗಿಸಿ ನೀರಿನ ವೇಗವನ್ನು ಹೆಚ್ಚಿಸಿದ. ಆಗ ನೋಡಿ ತಮಾಷೆ. ನಲ್ಲಿಯ ನೀರು ಬಲೂನಿನಲ್ಲಿ ಬರುತ್ತಿದೆ. ಬಲೂನಿನಲ್ಲಿಯ ನೀರು ಹತ್ತಾರು ತೂತುಗಳಿಂದ ಹೊರಬಂದು ಸಿಡಿಯುತ್ತಿದೆ!
ಹುಡುಗ ಜೋರಾಗಿ ಕೂಗಿದ, ನೋಡಿ ಅಂಕಲ್, ನಮ್ಮ ಷವರ್ ತಯಾರಾಯಿತು. ಹೌದು! ಬಲೂನಿನಿಂದ ಷವರ್ ತರಹವೇ ನೀರು ಚಿಮ್ಮಿ ಬರುತ್ತಿದೆ. ಹುಡುಗ ನೀರಿನಲ್ಲಿ ಆಟವಾಡತೊಡಗಿದ.ಅದನ್ನು ನೋಡುತ್ತಿದ್ದಂತೆ ಹೊಸದೊಂದು ವಿಚಾರ ನನ್ನ ತಲೆಯಲ್ಲಿ ಸುಳಿಯತೊಡಗಿತು. ನಲ್ಲಿಯಿಂದ ನೀರು ಬರದಿದ್ದರೆ ಬಲೂನು ದೊಡ್ಡದಾಗಲಾರದು. ಹಾಗೆ ಬರುತ್ತಲೇ ಇದ್ದರೆ ದೊಡ್ಡದಾದ ಬಲೂನು ಒಡೆದು ಹೋಗುತ್ತದೆ. ಸಣ್ಣ ಸಣ್ಣ ರಂಧ್ರಗಳನ್ನು ಮಾಡಿದರೆ ಬಲೂನಿನಲ್ಲಿ ಹೆಚ್ಚಾದ ನೀರು ಹೊರಹೋಗಿ ಅದು ಒಡೆಯದಂತೆ ನೋಡಿಕೊಳ್ಳುತ್ತದೆ.
ಒಂದು ರೀತಿಯಿಂದ ನೋಡಿದರೆ ನಮ್ಮ ವೈಯಕ್ತಿಕ ಬದುಕು ಆ ಬಲೂನು ಇದ್ದಂತೆ. ಹೊರಗಡೆಯಿಂದ ಶಕ್ತಿ ಬಂದು ತುಂಬದಿದ್ದರೆ ನಾವು ದೊಡ್ಡವರಾಗುವುದೇ ಇಲ್ಲ. ಆ ಶಕ್ತಿ ಭಗವಂತನ ಕೃಪೆ ಇರಬಹುದು, ಇಲ್ಲವೇ ಸಮಾಜದಿಂದ ನಾವು ಪಡೆದ ಸಹಾಯವಾಗಿರಬಹುದು. ಆದರೆ ಬರೀ ಸ್ವಾರ್ಥಿಗಳಾಗಿ ನಾವೇ ತುಂಬಿಕೊಳ್ಳುತ್ತ ಹೋಗುವುದಾದರೆ ಬಲೂನಿನಂತೆ ನಮ್ಮ ಜೀವನವೂ ಒಡೆದುಹೋಗುತ್ತದೆ. ಅದು ಹಾಗಾಗದಂತೆ ಸರಿಯಾಗಿ ಉಳಿಯಬೇಕಾದರೆ ಬಲೂನಿನ ಹತ್ತಾರು ರಂಧ್ರಗಳಿಂದ ನೀರು ಚಿಮ್ಮುವಂತೆ ನಮ್ಮ ಪ್ರಯತ್ನ ಹತ್ತಾರು ದಿಕ್ಕಿನಲ್ಲಿ ಸಮಾಜಮುಖಿಯಾಗಬೇಕು.
ಹೀಗೆ ಆದಾಗ ಸಮಾಜದಿಂದ ದೊರೆತ ಸಹಾಯ, ಪ್ರೋತ್ಸಾಹಗಳಿಂದ ನಮ್ಮ ಬದುಕು ಹಿರಿದಾಗುತ್ತ, ನಾವು ಮಾಡುವ ಪ್ರಾಮಾಣಿಕ ಸೇವೆಯಿಂದ ಸಮತೋಲನ ಕಾಯ್ದುಕೊಂಡು ಹಗುರಾಗಿಸುತ್ತದೆ. ಇದು ಜೀವನದ ಯೋಗ-ಪಡೆದುಕೊಂಡದ್ದನ್ನು, ನೀಡುವುದಕ್ಕೆ ಹೊಂದಿಸುವುದು. ಹುಡುಗ ತೋರಿದ ಬಲೂನಿನ ಷವರ್ ಎಂಥ ದೊಡ್ಡ ತತ್ವವನ್ನು ತಿಳಿಸುತ್ತದಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.