ADVERTISEMENT

ಮುಕ್ತರಾಗುವ ರೀತಿ

ಡಾ. ಗುರುರಾಜ ಕರಜಗಿ
Published 5 ಜೂನ್ 2013, 19:59 IST
Last Updated 5 ಜೂನ್ 2013, 19:59 IST

ಗುರುಗಳ ಉಪನ್ಯಾಸ ನಡೆದಿತ್ತು. ನೂರಾರು ಜಿಜ್ಞಾಸುಗಳು ಕುಳಿತು ತದೇಕಚಿತ್ತದಿಂದ ಅವರ ಮಾತುಗಳನ್ನು ಕೇಳುತ್ತಿದ್ದರು. `ಪ್ರಪಂಚ ಒಂದು ಮಾಯೆ ಎಂದು ಗೊತ್ತಿದ್ದರೂ ಅದಕ್ಕೇ ಬಲವಾಗಿ ಅಂಟಿ ಕುಳಿತುಕೊಂಡಿದ್ದೇವೆ. ನಾವು ಒಮ್ಮೆ ಮುಕ್ತರಾಗಬೇಕು. ಅದೇ ನಮ್ಮ ಬದುಕಿನ ಗುರಿ. ಆಗ ಮಾತ್ರ ನಾವು ಭಗವಂತನನ್ನು ಕಾಣಲು ಸಾಧ್ಯ' ಎಂದು ಗುರುಗಳು ಒತ್ತಿ ಹೇಳಿದರು.

ಉಪನ್ಯಾಸ ಮುಗಿದ ಮೇಲೆ ಒಬ್ಬ ಹಿರಿಯರು ಗುರುಗಳ ಹತ್ತಿರ ಹೋಗಿ ಕೇಳಿದರು, `ಸ್ವಾಮೀ ತಮ್ಮ ಮಾತು ನಮ್ಮ ಮೇಲೆ ಬಹಳ ಪ್ರಭಾವ ಬೀರಿದೆ. ನಾವೂ ಮುಕ್ತರಾಗಬೇಕು ಎನ್ನಿಸುತ್ತದೆ. ಆದರೆ ಹೇಗೆ ಮುಕ್ತರಾಗಬೇಕು ಎನ್ನುವುದು ತಿಳಿದಿಲ್ಲ. ದಯವಿಟ್ಟು ತಿಳಿಸಿಕೊಡುತ್ತೀರಾ?'. ಗುರುಗಳು ಬರೀ ನಕ್ಕರು. ನಂತರ ತಮ್ಮ ಶಿಷ್ಯರಿಗೆ ಸನ್ನೆ ಮಾಡಿ ಒಂದು ದೊಡ್ಡ ತೆಂಗಿನಕಾಯಿಯನ್ನು ತರಿಸಿದರು. ಅದನ್ನು ಈ ಹಿರಿಯರ ಕೈಗೆ ಕೊಟ್ಟು, `ಈ ತೆಂಗಿನಕಾಯಿಯಲ್ಲಿರುವ ತಿರುಳನ್ನು ನನಗೆ ತೆಗೆದುಕೊಡುತ್ತೀರಾ?
ಆದರೆ ಎರಡು ಕರಾರುಗಳು. ತಿರುಳು ಸಿಪ್ಪೆಗೆ ಅಂಟಿರಬಾರದು ಮತ್ತು ತಿರುಳು ಇಡಿಯಾಗಿರಬೇಕು, ಹೋಳಾಗಿರಬಾರದು' ಎಂದರು.

ಹಿರಿಯರು, `ಇದು ಅಸಾಧ್ಯ ಸ್ವಾಮಿ. ತಿರುಳು ಸಿಪ್ಪೆಗೆ ಅಂಟಿಕೊಂಡೇ ಇರುತ್ತದೆ. ಅದಲ್ಲದೇ ತಿರುಳು ತೆಗೆಯಲು ಕಾಯಿಯನ್ನು ಒಡೆಯಲೇ ಬೇಕು. ಹಾಗೆ ಒಡೆದಾಗ ತಿರುಳೂ ಹೋಳಾಗುತ್ತದೆ' ಎಂದರು. ಆಗ ಗುರುಗಳು,  `ಈ ಕಾಯಿಯನ್ನು ಜೋಪಾನವಾಗಿ ಮನೆಗೆ ತೆಗೆದುಕೊಂಡು ಹೋಗಿ ದೇವರ ಮುಂದೆ ಇಡಿ. ನಾನು ಮತ್ತೆ ನಾಲ್ಕು ತಿಂಗಳುಗಳ ನಂತರ ಈ ಊರಿಗೆ ಬರುತ್ತೇನೆ. ಆಗ ಇದನ್ನು ತೆಗೆದುಕೊಂಡು ಬನ್ನಿ'  ಎಂದು ಹೇಳಿ ಎದ್ದರು. ತಮ್ಮ ಪ್ರಶ್ನೆಗೆ ಸರಿಯಾದ ಉತ್ತರ ದೊರೆಯಲಿಲ್ಲ ಎಂದು ಶಿಷ್ಯರ ಮುಖ ಸಣ್ಣಗಾಯಿತು.

ಹೇಳಿದಂತೆ ಗುರುಗಳು ನಾಲ್ಕು ತಿಂಗಳುಗಳ ನಂತರ ಬಂದರು. ಅವರ ಅಪ್ಪಣೆಯಂತೆ ಹಿರಿಯರು ಆ ತೆಂಗಿನಕಾಯಿಯನ್ನು ಹಿಡಿದುಕೊಂಡು ಹೋದರು. ಇವರನ್ನು ನೋಡಿದೊಡನೆ ಗುರುಗಳು ನಕ್ಕು, `ಒಹೋ ತೆಂಗಿನಕಾಯಿ ತಂದಿದ್ದೀರೋ? ಸರಿ, ಅದನ್ನು ಈಗ ಒಡೆಯಿರಿ' ಎಂದರು. ಹಿರಿಯರು ಅವರ ಮುಂದೆಯೇ ಕಾಯಿಯನ್ನು ನೆಲಕ್ಕೆ ಅಪ್ಪಳಿಸಿದಾಗ ಅದರ ಚಿಪ್ಪು ಒಡೆಯಿತು.

ಆದರೆ ಒಳಗಿನ ಕೊಬ್ಬರಿ ಒಣಗಿ ಗಿಟುಕಾಗಿ ಪೂರ್ತಿ ಹಾಗೆಯೇ ಹೊರಗೆ ಬಂತು. ಗುರುಗಳು ಕೇಳಿದರು, `ಅಂದು ನೀವು ಹೇಳಿದಿರಿ, ತಿರುಳು ಚಿಪ್ಪಿಗೆ ಅಂಟದಂತೆ ಮತ್ತು ತಿರುಳು ಹೋಳಾಗದಂತೆ ತೆಗೆಯುವುದು ಸಾಧ್ಯವಿಲ್ಲವೆಂದು? ಈಗ ಕೊಬ್ಬರಿ ಚಿಪ್ಪಿಗೆ ಅಂಟಿಕೊಂಡಿಲ್ಲ, ಮತ್ತೂ ಹೋಳಾಗಲೂ ಇಲ್ಲ'. ಹಿರಿಯರೆಂದರು,  `ಸ್ವಾಮೀ, ಈ ನಾಲ್ಕು ತಿಂಗಳಲ್ಲಿ ಕಾಯಿ ಒಣಗಿದೆ. ಅದಕ್ಕೇ ಇದು ಸಾಧ್ಯವಾಯಿತು'. ಗುರುಗಳು ವಿವರಿಸಿದರು, `ಮನುಷ್ಯ ಜೀವನವೂ ಹೀಗೆಯೇ.

ಒಳಗಡೆ ನೀರಿರುವವರೆಗೆ ಹೊರಗಿನ ಚಿಪ್ಪಿಗೆ ಕಾಯಿ ಅಂಟಿಕೊಂಡಿರುವಂತೆ ನಮ್ಮಳಗಿನ ಆಸೆಗಳು, ವ್ಯಾಮೋಹಗಳು ಹೊರಗಿನ ಪ್ರಪಂಚಕ್ಕೆ ನಮ್ಮನ್ನು ಕಟ್ಟಿ ಹಾಕುತ್ತವೆ. ಅದಕ್ಕೆ ತಾಳ್ಮೆ ಮುಖ್ಯ. ಮನಸ್ಸನ್ನು ಆದಷ್ಟು ಮಟ್ಟಿಗೆ ಒಳಕ್ಕೆ ತಿರುಗಿಸಿಕೊಂಡು ಸಹನೆಯಿಂದ ಕಾಯಬೇಕು. ನಿಧಾನವಾಗಿ ಮನಸ್ಸಿನಲ್ಲಿಯ ಅಪೇಕ್ಷೆಗಳು, ಸೆಳೆತಗಳು ಇಂಗಿದಾಗ ಜೀವನದ ತಿರುಳು ಹೊರಜಗತ್ತೆಂಬ ಚಿಪ್ಪಿನ ಸಹವಾಸ ಬಿಡುತ್ತದೆ. ಆಗ ಹೊರಜಗತ್ತಿನಿಂದ ವಿಮುಖವಾಗಿ ಇಡಿಯಾಗಿ ಹೊರಬರುತ್ತದೆ. ಅದೇ ಮುಕ್ತತೆಯ ಹಂತ'.

ಹೊರಜಗತ್ತಿನ ಸೆಳೆತ ವಿಪರೀತ. ಈ ಸೆಳೆತ ಹೆಚ್ಚಾಗುವುದು ಒಳಗಿನ ಆಸೆಗಳ ಭಾರ ಹೆಚ್ಚಾದಂತೆ. ನಾವು ಎಲ್ಲವನ್ನೂ ತೊರೆದು ಸನ್ಯಾಸಿಯಾಗುವುದು ಬೇಡ. ಅದರೆ ಕ್ಷಣಿಕ ಲಾಭಗಳ ಪೂರವನ್ನು ಕಡಿಮೆ ಮಾಡಲು ಸ್ವಲ್ಪ ಅಂತರ್‌ಮುಖಿಗಳಾದರೆ ಹೊರಗಿನ ಸೆಳೆತದಲ್ಲಿ ಕಡಿತವಾಗುತ್ತದೆ. ಆಗ ನಮ್ಮ ಜೀವನ, ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ದಿಮ್ಮಿಯಂತಾಗದೇ ಪ್ರವಾಹದ ಪಕ್ಕದಲ್ಲೇ ಭದ್ರವಾಗಿ ನಿಂತು ಎಲ್ಲವನ್ನೂ ಸಂತೋಷದಿಂದ ವೀಕ್ಷಿಸುವ ಬೃಹತ್ ಮರದಂತಾಗುತ್ತದೆ. ದಿಮ್ಮಿಯಾಗುವ ಇಲ್ಲವೇ ಮರವಾಗುವ ಆಯ್ಕೆ ನಮ್ಮ ಕೈಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.