ಕಾದಂಬರಿಗಳ ಸಾಮ್ರಾಟ್ ಎಂದು ಸಾಹಿತ್ಯಪ್ರಿಯರಿಂದ ಕರೆಸಿಕೊಂಡ ಮುನ್ಶಿ ಪ್ರೇಮಚಂದ ನಿಜವಾಗಿಯೂ ಹಿಂದಿ ಸಾಹಿತ್ಯದ ಧ್ರುವತಾರೆ! ಬಹುದೊಡ್ಡ ಹೆಸರು. ಅವರ ಒಂದೊಂದು ಕಾದಂಬರಿ ಸಾಮಾಜಿಕ ಆಂದೋಲನವನ್ನು ಮಾಡುವಷ್ಟರ ಮಟ್ಟಿಗೆ ಪ್ರಖರವಾಗಿದ್ದವು. ಅವರ ಗಬನ್, ಗೋದಾನ್, ನಿರ್ಮಲಾ ಮತ್ತಿತರ ಕಾದಂಬರಿಗಳು ಅಂದಿನ ಸಮಾಜದ ಓರೆಕೋರೆಗಳನ್ನು ಗುರುತಿಸಿ, ಟೀಕಿಸಿ ಸರಿಯಾದ ಮಾರ್ಗ ತೋರುವಲ್ಲಿಯೂ ಸಮರ್ಥವಾಗಿದ್ದವು. ಅವರ ಹನ್ನೆರಡು ಕಾದಂಬರಿಗಳು ಒಂದೊಂದು ರತ್ನವಿದ್ದಂತೆ. ಅಂತೆಯೇ ಅವರು ಬರೆದ ಮುನ್ನೂರಕ್ಕೂ ಹೆಚ್ಚು ಕಥೆಗಳು ತುಂಬ ಸುಂದರ, ಸರಸ ಹಾಗೂ ಮಾರ್ಮಿಕ.
ಅವರು ತಮ್ಮ ‘ಸೋನೇಕಿ ವತನ್’ ಕಾದಂಬರಿ ಬರೆದಾಗ ಬ್ರಿಟಿಷ್ ಸರಕಾರಕ್ಕೆ ತುಂಬ ಇರಿಸುಮುರಿಸಾಯಿತು. ಆಗ ಆ ಪುಸ್ತಕಕ್ಕೆ ಬಹಿಷ್ಕಾರ ಹಾಕಿ, ಪುಸ್ತಕಗಳನ್ನೆಲ್ಲ ಒಟ್ಟುಗೂಡಿಸಿ ಬೆಂಕಿಗೆ ಇಟ್ಟು ತಮ್ಮ ಕೋಪ ತೋರಿಸಿದರಂತೆ. ಸ್ವಾತಂತ್ರ್ಯ ಪ್ರೇಮಿ ಪ್ರೇಮಚಂದ ಈ ಇಕ್ಕಟ್ಟಿನಿಂದ ಪಾರಾಗಲು ತಮ್ಮ ಡೆಪ್ಯೂಟಿ ಇನ್ಸಪೆಕ್ಟರ್ ಹುದ್ದೆಗೆ ರಾಜೀನಾಮೆ ಕೊಟ್ಟು ಸರ್ಕಾರದ ಕಪಿಮುಷ್ಟಿಯಿಂದ ಹೊರಬಂದು ಸಕ್ರಿಯವಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೇರಿಕೊಂಡರು.
ಆ ಸಂದರ್ಭದಲ್ಲಿ ಒಂದು ವಿಶೇಷ ಘಟನೆ ನಡೆಯಿತು. ಅವರು ಮನೆಯಲ್ಲಿ ಕುಳಿತಿದ್ದಾಗ ಆಗಿನ ಉತ್ತರ ಪ್ರದೇಶದ ಗವರ್ನರ್ ಸರ್. ಹ್ಯಾಲಿಯ ವೈಯಕ್ತಿಕ ದೂತ, ಅವರ ಮನೆಗೆ ಬಂದ. ಅವರಿಗೊಂದು ಲಕೋಟೆಯನ್ನು ನೀಡಿದ. ಅದೊಂದು ಗೋಪ್ಯ ದಾಖಲೆ. ಅದನ್ನು ಕೇವಲ ಪ್ರೇಮಚಂದರಿಗೇ ನೀಡಬೇಕೆಂಬ ಆಜ್ಞೆಯಾಗಿತ್ತು. ಅದನ್ನು ಅವರಿಗೆ ಒಪ್ಪಿಸಿ ಆತ ನಡೆದ. ಪ್ರೇಮಚಂದರಿಗೂ ಆಶ್ಚರ್ಯ. ಒಡೆದು ನೋಡಿದರೆ ಅದರಲ್ಲಿ ಸರ್ಕಾರೀ ಆಜ್ಞೆ. ಬ್ರಿಟಿಷ್ ಸರ್ಕಾರ ಪ್ರೇಮಚಂದರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ಅವರಿಗೆ ರಾಯ ಸಾಹೇಬ್ ಎಂಬ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿದೆ!
ಅದನ್ನು ನೋಡಿ ಪ್ರೇಮಚಂದ ಸಂತೋಷಪಡಲಿಲ್ಲ, ಬದಲಿಗೆ ಅಂತರ್ಮುಖಿಯಾದರು. ಈ ಪತ್ರದ ಹಿಂದಿನ ಉದ್ದೇಶ ಏನಿದ್ದಿರಬೇಕು ಎಂದು ಚಿಂತಿಸಿ ನಕ್ಕರು. ಆಗ ಅವರ ಹೆಂಡತಿ ಪತ್ರದ ವಿಷಯವನ್ನು ಕೇಳಿ ತಿಳಿದು ‘ಈಗ ಏನು ಮಾಡಬೇಕೆಂದಿದ್ದೀರಿ? ಈ ಪ್ರಶಸ್ತಿ ಒಳ್ಳೆಯದಲ್ಲವೇ? ಸಾಮಾನ್ಯರಿಗೆ ದೊರಕುವುದಲ್ಲ’ ಎಂದರು. ಆಗ ಪ್ರೇಮಚಂದ, ಇಲ್ಲ, ‘ನಾನು ಈಗ ಈ ಪ್ರಶಸ್ತಿ ಬೇಡ ಎಂದು ಬರೆದು ತಿಳಿಸುವವನಿದ್ದೇನೆ’ ಎಂದು ನುಡಿದರು. ‘ಯಾಕೆ ಇದರಿಂದ ಏನು ತೊಂದರೆ?’ ಹೆಂಡತಿ ಮರುಪ್ರಶ್ನೆ ಮಾಡಿದರು.
‘ಇದೊಂದು ಸೂಕ್ಷ್ಮ ವಿಷಯ. ಇದುವರೆಗೂ ನಾನು ನಿರ್ಭಯವಾಗಿ ನನಗೆ ಸರಿ ಎನಿಸಿದ್ದನ್ನು ಬರೆದು ಜನರ ರಾಯಸಾಹೇಬ್ ಆಗಿದ್ದೆ. ಈ ಪ್ರಶಸ್ತಿ ನಡೆದರೆ ನಾನು ಸರ್ಕಾರದ ರಾಯಸಾಹೇಬ್ ಆಗಿ ಕೇವಲ ಅವರು ಅಪೇಕ್ಷಿಸಿದ್ದನ್ನು ಬರೆಯಬೇಕಾಗುತ್ತದೆ. ನನಗೆ ಸರ್ಕಾರದ ಮುಖವಾಣಿಯಾಗುವುದು ಇಷ್ಟವಿಲ್ಲ. ನಾನು ನನ್ನ ಜನರ ರಾಯಸಾಹೇಬ್ ಆಗಿಯೇ ಉಳಿಯುತ್ತೇನೆ’ ಎಂದರು ಪ್ರೇಮಚಂದ. ಅದರಂತೆ ಖಚಿತ ಮಾತುಗಳಲ್ಲಿ ತಮ್ಮ ಅಭಿಪ್ರಾಯ ಬರೆದು ಕಳುಹಿಸಿಬಿಟ್ಟರು. ಅದು ಆತ್ಮಾಭಿಮಾನ.
ಸಣ್ಣ ಸಣ್ಣ ಪ್ರಶಸ್ತಿಗಳಿಗಾಗಿ, ಸಣ್ಣ ಸಣ್ಣ ಹುದ್ದೆಗಳಿಗಾಗಿ ಅರ್ಜಿ ಗುಜರಾಯಿಸಿಕೊಂಡು, ತಾತ್ಪೂರ್ತಿಕವಾಗಿ ಆಧಿಕಾರದಲ್ಲಿರುವ ಜನರ ಮನೆಯ ಮೆಟ್ಟಿಲು ಸವೆಸುವವರನ್ನು ಕಂಡಾಗ ಪ್ರೇಮಚಂದರಂತಹ ಧೀಮಂತರ ನೆನಪಾಗುತ್ತದೆ. ಅವರ ಸ್ವಾಭಿಮಾನ ನಮ್ಮ ಸ್ವಾಭಿಮಾನವನ್ನು ಸೆಟೆದು ನಿಲ್ಲಿಸುತ್ತದೆ. ಮನಸ್ಸು ಸಣ್ಣ ಪ್ರಲೋಭನೆಗೆ ಸಿಲುಕಿ ನರಳದಂತೆ ಪ್ರಚೋದಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.