ADVERTISEMENT

‘ಸ್ವಾಮೀಜಿ ಬಳಿಯ’ ಗರಿಗರಿ ನೋಟು ಆರೋಪಿಗಳಿಗಾಯ್ತು ವರದಾನ

ಸಿ.ವಿ.ನಾಗೇಶ್‌
Published 2 ಫೆಬ್ರುವರಿ 2016, 5:58 IST
Last Updated 2 ಫೆಬ್ರುವರಿ 2016, 5:58 IST
‘ಸ್ವಾಮೀಜಿ ಬಳಿಯ’ ಗರಿಗರಿ ನೋಟು ಆರೋಪಿಗಳಿಗಾಯ್ತು ವರದಾನ
‘ಸ್ವಾಮೀಜಿ ಬಳಿಯ’ ಗರಿಗರಿ ನೋಟು ಆರೋಪಿಗಳಿಗಾಯ್ತು ವರದಾನ   

ಅದು 70ರ ದಶಕ. ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ ಬಳಿ ಸ್ವಾಮೀಜಿಯೊಬ್ಬರು ನೆಲೆಸಿದ್ದರು. ಸರ್ವಸಂಗ ಪರಿತ್ಯಾಗಿ. ಆದರೆ ಇವರಿಗೂ ಉಗುರಿಗೂ ಅದೇನೋ ಅವಿನಾಭಾವ ಸಂಬಂಧ. ಅದಕ್ಕಾಗಿಯೇ 6–7 ಇಂಚು ಉದ್ದದಷ್ಟು ಉಗುರನ್ನು ಸದಾ ಬಿಡುತ್ತಿದ್ದರು. ಇದರಿಂದಾಗಿಯೇ ಇವರ ಹೆಸರು ‘ಉಗುರು ಸ್ವಾಮೀಜಿ’ಯಾಯಿತು. ಮೂಲ ಹೆಸರು ಗೊತ್ತಿಲ್ಲ!

ಈ ಸ್ವಾಮೀಜಿಯವರ ಒಂದು ವಿಶೇಷತೆ ಎಂದರೆ ಪ್ರತಿ ಗುರುವಾರವೂ ಮೌನವ್ರತ ಆಚರಿಸುವುದು. ಅಂದು ಬರೀ ಮೌನಿಯಾಗಿರುತ್ತಿರಲಿಲ್ಲ, ಬದಲಿಗೆ ಆ ದಿನ ಪೂರ್ತಿ ಉಪವಾಸ. ಹನಿ ನೀರನ್ನೂ ಸೇವಿಸುತ್ತಿರಲಿಲ್ಲ. ಈ ಸ್ವಾಮೀಜಿಯ ಕೃಪಾಕಟಾಕ್ಷಕ್ಕೆ ರಾಜ್ಯದ  ಮೂಲೆಮೂಲೆಗಳಿಂದ ಜನರು ಬರುತ್ತಿದ್ದರು. ತಮ್ಮ ಮನೋಕಾಮನೆ ಈಡೇರಿಸಿಕೊಳ್ಳಲು ದಾನ–ದೇಣಿಗೆ ರೂಪದಲ್ಲಿ ಹಣ, ಒಡವೆಗಳು ಸ್ವಾಮೀಜಿ ಬಳಿ ಹರಿದುಬರುತ್ತಿದ್ದವು. ಆದರೆ ಉಗುರು ಸ್ವಾಮೀಜಿಗೆ ಇದಾವುದರಲ್ಲೂ ಆಸಕ್ತಿ ಇರಲಿಲ್ಲ. ಆದರೂ ದಾನ–ದೇಣಿಗೆಯನ್ನು ಭಕ್ತರು ನಿಲ್ಲಿಸಲಿಲ್ಲ.

ಸ್ವಾಮೀಜಿಗೆ ಒಬ್ಬ ದತ್ತುಪುತ್ರಿ ಇದ್ದರು. ಅವರ ಹೆಸರು ಗೀತಾ (ಇವರ ಹೆಸರನ್ನು ಬದಲಾಯಿಸಲಾಗಿದೆ). ಹಾಗೆಯೇ ಸ್ವಾಮೀಜಿ ಬಳಿಯೇ ನೆಲೆಸಿ ಅವರ ಎಲ್ಲ ಕೆಲಸ ಕಾರ್ಯಗಳನ್ನು ನೋಡುತ್ತಿದ್ದವರು ಚಂದ್ರಶೇಖರ ಎಂಬ ಭಕ್ತ. ಗೀತಾ ಹಾಗೂ ಚಂದ್ರಶೇಖರ ಇಬ್ಬರ ನಡುವೆ ಅಗಾಧ ಸ್ನೇಹವೂ ಇತ್ತು. ಆಗಾಗ್ಗೆ ಅಲ್ಲಲ್ಲಿ ಒಟ್ಟಿಗೆ ಸುತ್ತಾಡಲೂ ಇದ್ದರು.

ADVERTISEMENT

ಇಂತಿಪ್ಪ ಸ್ವಾಮೀಜಿ ಒಂದು ಗುರುವಾರ ಕೊಲೆಯಾಗಿ ಹೋದರು. ಅವರನ್ನು ಉಸಿರುಗಟ್ಟಿಸಿ ಸಾಯಿಸಲಾಗಿತ್ತು. ಗೀತಾ, ಚಂದ್ರಶೇಖರ ಇಬ್ಬರೂ ಮನೆಯಲ್ಲಿ ಇಲ್ಲದ ವೇಳೆ ಈ ಕೊಲೆ ನಡೆದಿತ್ತು. ಮನೆಯಲ್ಲಿದ್ದ ಹಣ, ಒಡವೆ ಎಲ್ಲವೂ ನಾಪತ್ತೆಯಾಗಿದ್ದವು. ಅಸಂಖ್ಯ ಭಕ್ತರನ್ನು ಪಡೆದ ಈ ಸ್ವಾಮೀಜಿಯ ಕೊಲೆಯ ಸುದ್ದಿ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತು. ಅಪರಾಧಿಗಳನ್ನು ಕಂಡುಹಿಡಿಯುವುದು ಪೊಲೀಸ್‌ ಇಲಾಖೆಗೆ ದೊಡ್ಡ ಸವಾಲೇ ಆಯಿತು. ಕೊಲೆಗಾರರನ್ನು ಪತ್ತೆ ಮಾಡಲೇಬೇಕೆಂಬ ಒತ್ತಾಯ ಎಲ್ಲೆಡೆಯಿಂದ ಬರಲು ಶುರುವಾಯಿತು. ಸರಿ, ಕಾರ್ಯಾಚರಣೆ ನಡೆಸಿದ ಪೊಲೀಸರು ಎಲ್ಲಾ

ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದರು. ಘಟನೆಗೆ ಸಂಬಂಧಿಸಿದಂತೆ ದತ್ತುಪುತ್ರಿ ಗೀತಾ, ಚಂದ್ರಶೇಖರ್‌ ಸೇರಿದಂತೆ ಇನ್ನು ಕೆಲವರ ಹೇಳಿಕೆ ಪಡೆದರು. ಇವೆಲ್ಲಾ ಆಧಾರಗಳ ಮೇಲೆ ಚಂದ್ರಶೇಖರ್‌ ಸೇರಿದಂತೆ ನಂಜುಂಡಯ್ಯರ್‌, ರಾಜು  ಹಾಗೂ ಇನ್ನಿಬ್ಬರು ಸೇರಿ ಸ್ವಾಮೀಜಿಯ ಕೊಲೆ ಮಾಡಿದ್ದಾರೆ ಎಂಬ ನಿರ್ಣಯಕ್ಕೆ ಬಂದರು ಪೊಲೀಸರು.

ಪೊಲೀಸರ ಪ್ರಕಾರ ಸ್ವಾಮೀಜಿಗೆ ಬೇಡಬೇಡವೆಂದರೂ ಹರಿದು ಬರುತ್ತಿದ್ದ ಹಣ, ಚಿನ್ನಾಭರಣಗಳು ರಾಜು, ನಂಜುಂಡಯ್ಯರ್ ಮುಂತಾದವರ ಕಣ್ಣು ಕುಕ್ಕಿತು. ಅದನ್ನು ಹೇಗಾದರೂ ಲಪಟಾಯಿಸಬೇಕು ಎಂದು ನಿರ್ಧರಿಸಿದರು. ಸದಾ ಭಕ್ತರಿಂದ ಗಿಜಿಗುಡುತ್ತಿದ್ದ ಸ್ವಾಮೀಜಿಯ ಮನೆಯೊಳಕ್ಕೆ ಯಾರ ಕಣ್ಣಿಗೂ ಕಾಣಿಸಿಕೊಳ್ಳದೇ ಕನ್ನ ಹಾಕುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ಅವರು ಕಂಡುಕೊಂಡ ಉಪಾಯ ಸ್ವಾಮೀಜಿಯ ಆಪ್ತ ಭಕ್ತ ಚಂದ್ರಶೇಖರ. ಚಂದ್ರಶೇಖರನ ಸ್ನೇಹವನ್ನು ಸಂಪಾದಿಸುವಲ್ಲಿ ಇವರು ಯಶಸ್ವಿಯಾದರು.

ಸ್ವಾಮೀಜಿಯ ಬಳಿ ಎಷ್ಟು ಹಣವಿದೆ, ಎಷ್ಟು ಆಭರಣ ಇದೆ ಎಲ್ಲ ವಿಷಯಗಳನ್ನೂ ಈ ನಾಲ್ವರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟ ಚಂದ್ರಶೇಖರ. ಅವುಗಳನ್ನು ಕದಿಯಲು ಗುರುವಾರವೇ ಸೂಕ್ತ ಎಂದೂ ಹೇಳಿದ. ಏಕೆಂದರೆ ಆ ದಿನ ಸ್ವಾಮೀಜಿ ಧ್ಯಾನ, ಮೌನದಲ್ಲಿ ಇರುತ್ತಾರಲ್ಲ! ಅದಕ್ಕಾಗಿ ಒಂದು ಗುರುವಾರ ಮುಹೂರ್ತವೂ ನಿಗದಿಯಾಯಿತು. ಆ ದಿನ ಚಂದ್ರಶೇಖರ, ಗೀತಾ ಅವರನ್ನು ಕರೆದುಕೊಂಡು ಸಮೀಪದ ಹರಿಲಕ್ಷ್ಮಿ ಚಿತ್ರಮಂದಿರಕ್ಕೆ ಸಿನಿಮಾ ತೋರಿಸಲು ಹೋದ. (ಕಳುವಿಗೆ ಸಂಬಂಧಿಸಿದಂತೆ ತನ್ನ ಮೇಲೆ ಸಂದೇಹ ಬರಬಾರದು ಎಂಬ ಕಾರಣದಿಂದ ಇರಬಹುದೇನೋ! ) ಎಲ್ಲವೂ ಅಂದುಕೊಂಡಂತೆ ನಡೆಯಿತು.

ಸ್ವಾಮೀಜಿ ಮನೆಗೆ ನುಗ್ಗಿದ ನಂಜುಂಡಯ್ಯರ್, ರಾಜು ಹಾಗೂ ಇತರರು ಮನೆಯಲ್ಲಿದ್ದ ಹಣ, ಒಡವೆ ಎಲ್ಲವನ್ನೂ ದೋಚಿಯೇಬಿಟ್ಟರು. ಇದನ್ನು ಸ್ವಾಮೀಜಿಗಳು ಗಮನಿಸಿದರು ಎಂಬ ಕಾರಣಕ್ಕೆ ಸ್ವಾಮೀಜಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಪರಾರಿಯಾದರು... ಹೀಗೆ ಪೊಲೀಸರು ದೂರು ದಾಖಲಿಸಿಕೊಂಡರು. ಸರಿ. ಇದೇ ಆಧಾರದ ಮೇಲೆ ಆರೋಪಿಗಳ ಶೋಧನೆಗೆ ಪೊಲೀಸರು ಜಾಲ ಬೀಸಿದರು. ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದರು.  ಇವೆಲ್ಲಾ ಆಧಾರದ ಮೇಲೆ ಚಂದ್ರಶೇಖರ್‌ ಹಾಗೂ ಇತರ ನಾಲ್ವರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯೂ ಆದರು.

ಸ್ವಾಮೀಜಿಗಳಿಗೆ ಸೇರಿದ್ದು ಎನ್ನಲಾದ ಹಣ, ಆಭರಣಗಳನ್ನು ಆರೋಪಿಗಳಿಂದ ಜಪ್ತಿ ಕೂಡ ಮಾಡಲಾಯಿತು. ಕೆಲವೊಂದು ಆಭರಣಗಳನ್ನು ಆರೋಪಿಗಳು ಮಾರಿ ಹಣ ಪಡೆದುಕೊಂಡಿರುವುದಾಗಿ ತಿಳಿದ ಪೊಲೀಸರು ಅವುಗಳನ್ನೂ ವಶಪಡಿಸಿಕೊಂಡರು. ಐವರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಲಾಯಿತು.

ಅತ್ಯುತ್ಸಾಹದಲ್ಲಿ ಪೊಲೀಸರು
ಅತಿ ಸೂಕ್ಷ್ಮವೆನಿಸಿದ, ಇಡೀ ರಾಜ್ಯದ ಜನತೆಯಲ್ಲಿ ಆತಂಕ ಮೂಡಿಸಿದ್ದ ಪ್ರಕರಣವನ್ನು ಭೇದಿಸಿದ ಖುಷಿ ಪೊಲೀಸರದ್ದಾಗಿತ್ತು. ಅಪರಾಧಿಗಳನ್ನು ಕಂಡು ಹಿಡಿಯುವಂತೆ ಭಕ್ತಾದಿಗಳ ಒತ್ತಡವೂ ಇನ್ನೊಂದೆಡೆ ಇತ್ತಲ್ಲ! ಅದಕ್ಕಾಗಿಯೇ ಆರೋಪಿಗಳ ಮಾಹಿತಿಯ ಜೊತೆಗೆ ಸ್ವಾಮೀಜಿಗೆ ಸೇರಿದ್ದೆನ್ನಲಾದ ಹಣ, ಒಡವೆ ಜಪ್ತು ಮಾಡಿದ್ದನ್ನು ಜನರ ಮುಂದೆ ಇಡುವ ಅತ್ಯುತ್ಸಾಹ ಅವರದಾಗಿತ್ತು.

ಆ ಕ್ಷಣದಲ್ಲಿಯೇ ಜನರಿಗೆ ಸುದ್ದಿ ಮುಟ್ಟಿಸಲು ಈಗಿನಂತೆ 24/7 ನ್ಯೂಸ್‌ ಚಾನೆಲ್‌ಗಳು ಇರಲಿಲ್ಲವಲ್ಲ. ಏನಿದ್ದರೂ ಪತ್ರಿಕೆಯ ಮೂಲಕವೇ ಜನರಿಗೆ ತಲುಪಬೇಕಿತ್ತು. ನಾಳೆಯ ತನಕ ಕಾಯುವ ತಾಳ್ಮೆ ಕೂಡ ಅವರಲ್ಲಿ ಇರಲಿಲ್ಲ, ಅಷ್ಟು ಖುಷಿಯಾಗಿತ್ತು ಅವರಿಗೆ. ಆದ್ದರಿಂದ ಸಂಜೆ ಪತ್ರಿಕೆ ಸೇರಿದಂತೆ ಎಲ್ಲಾ ಪತ್ರಿಕೆಯವರನ್ನು ಕರೆದುಬಿಟ್ಟರು ಅಂದಿನ ಪೊಲೀಸ್‌ ಕಮಿಷನರ್‌ ಆಗಿದ್ದ ಕೆ.ಜಿ.ರಾಮಣ್ಣನವರು. ಹೀಗೆ ದಿಢೀರನೆ ಪತ್ರಿಕಾಗೋಷ್ಠಿ ಮಾಡದಂತೆ ಪೊಲೀಸ್‌ ಇಲಾಖೆಯ ಕೆಲವು ಅಧಿಕಾರಿಗಳು ಹೇಳಿದರೂ ಅದಕ್ಕೆ ಕಿವಿಗೊಡದ ರಾಮಣ್ಣನವರು ಪತ್ರಿಕಾಗೋಷ್ಠಿ ಮಾಡಿಯೇ ಬಿಟ್ಟರು.

ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪತ್ರಕರ್ತರ ಮುಂದೆ ಬಿಚ್ಚಿಟ್ಟ ಅವರು ಯಾವ ಯಾವ ಆರೋಪಿಗಳಿಂದ ಎಷ್ಟೆಷ್ಟು ಹಣ, ಎಷ್ಟೆಷ್ಟು ಒಡವೆ ಜಪ್ತಿ ಮಾಡಲಾಗಿದೆ ಎಂಬ ಸವಿಸ್ತಾರ ಮಾಹಿತಿಯುಳ್ಳ ಪ್ರೆಸ್‌ನೋಟ್‌ ಕೂಡ ಹಂಚಿದರು. ಎಲ್ಲ ಪತ್ರಿಕೆಗಳಲ್ಲೂ ಸುದ್ದಿ ಬಿತ್ತರಗೊಂಡಿತು. ಪ್ರಕರಣ ಸೆಷನ್ಸ್‌ ಕೋರ್ಟ್‌ಗೆ ಹೋಯಿತು.  ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ನಿಂತಿತ್ತು ಈ ಕೇಸು. (ನಾನು ಆರೋಪಿಗಳಲ್ಲಿ ಒಬ್ಬನಾದ ರಾಜು ಪರ ವಕೀಲನಾಗಿದ್ದೆ). ನಾಗಪ್ಪ ಎನ್ನುವವರು ಆಗ ಸೆಷನ್ಸ್‌ ಕೋರ್ಟ್‌ ನ್ಯಾಯಾಧೀಶ ಆಗಿದ್ದರು. ಈ ಪ್ರಕರಣ ಅವರ ಮುಂದೆ ವಿಚಾರಣೆಗೆ ಬಂದಿತ್ತು.

ಸ್ವಾಮೀಜಿಯವರಿಗೆ ಸೇರಿದ್ದು ಎನ್ನಲಾದ ನೋಟುಗಳು ಸೇರಿದಂತೆ ಪೊಲೀಸರಿಗೆ ಸಿಕ್ಕ ಎಲ್ಲಾ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್‌ ಪರ ವಕೀಲರು ಕೋರ್ಟ್‌ಗೆ ವಿಚಾರಣೆ ವೇಳೆ ಹಾಜರು ಪಡಿಸಿದರು.  ಪ್ರಮುಖ ಸಾಕ್ಷಿ ಎನಿಸಿಕೊಂಡ ಸ್ವಾಮೀಜಿ ಅವರ ದತ್ತುಪುತ್ರಿ ಗೀತಾ ಅವರು, ಚಂದ್ರಶೇಖರ ತಮ್ಮನ್ನು ಅಂದೇ ಸಿನಿಮಾಕ್ಕೆ ಕರೆದುಕೊಂಡು ಹೋದ ವಿಷಯ ತಿಳಿಸಿದರು. ಆ ದಿನ ಸ್ವಾಮೀಜಿ ಮೌನವ್ರತಧಾರಿಗಳಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಯಾರೂ ಮನೆಯಲ್ಲಿ ಇರಲಿಲ್ಲ ಎಂಬುದನ್ನೂ ಅವರು ತಿಳಿಸಿದರು.  ಪೊಲೀಸರು ತಾವು ಹೇಗೆಲ್ಲಾ ಆರೋಪಿಗಳನ್ನು ಪತ್ತೆ ಹಚ್ಚಿದೆವು ಎಂಬುದನ್ನು ಖುಷಿಯಿಂದ ಕೋರ್ಟ್‌ಗೆ ವಿವರಿಸುತ್ತಿದ್ದರು. ಇನ್ನೇನು, ಎಲ್ಲ ಸಾಕ್ಷ್ಯಾಧಾರಗಳು ಆರೋಪಿಗಳ ವಿರುದ್ಧವಾಗಿಯೇ ನಿಂತಿದ್ದವು.

ಪೊಲೀಸರ ಎಡವಟ್ಟು
ದೊಡ್ಡ ಸಾಹಸ ಮಾಡಿರುವ ಖುಷಿ ಪಡುತ್ತಿದ್ದ ಪೊಲೀಸರಿಗೆ ತಾವು ಮಾಡಿದ್ದ ಎರಡು ಪ್ರಮುಖ ಎಡವಟ್ಟು ತಿಳಿಯಲೇ ಇಲ್ಲ. ಅವರ ಎಡವಟ್ಟು ಆರೋಪಿ ಪರ ವಕೀಲರಾದ ನಮಗೆ ವರದಾನವಾಯಿತು. ಆರೋಪಿಗಳನ್ನು ಹಿಡಿದ ಸಂತೋಷದಲ್ಲಿ ಅಂದಿನ ಪೊಲೀಸ್‌ ಕಮಿಷನರ್‌ ನಡೆಸಿದ್ದ ಪತ್ರಿಕಾಗೋಷ್ಠಿಯ ವಿವರ ಅಂದೇ ಸಂಜೆ ಪತ್ರಿಕೆಯಲ್ಲೂ ಪ್ರಕಟಗೊಂಡಿತ್ತು. ಆದರೆ ಅದೇನು ಗೊಂದಲದಲ್ಲಿ ಪೊಲೀಸರು ಇದ್ದರೋ ಅಥವಾ ಅವರ ತಲೆಯಲ್ಲಿ ಏನು ಓಡುತ್ತಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಕೋರ್ಟ್‌ಗೆ ಸಲ್ಲಿಸಿದ್ದ ಲಿಖಿತ ಮಾಹಿತಿಯಲ್ಲಿ ಆರೋಪಿಗಳನ್ನು ಹಿಡಿದಿರುವ ದಿನಾಂಕವನ್ನು ಮಾರನೆಯ ದಿನ ಬೆಳಿಗ್ಗೆ 11 ಗಂಟೆ ಎಂಬಂತೆ ತೋರಿಸಿಬಿಟ್ಟಿದ್ದರು.

ಇದು ಇರಲಿ. ಇದಕ್ಕಿಂತ ಇನ್ನೊಂದು ಎಡವಟ್ಟು ಪೊಲೀಸರು ಮಾಡಿದ್ದರು. ಸ್ವಾಮೀಜಿಗೆ ಗರಿಗರಿ ನೋಟನ್ನು ಸಂಗ್ರಹ ಮಾಡುವ ಹವ್ಯಾಸ ಇತ್ತು ಎಂಬುದನ್ನು ತೋರಿಸಲು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಗರಿಗರಿ ನೋಟನ್ನು ಕೋರ್ಟ್‌ಗೆ ಹಾಜರು ಪಡಿಸಿದರು.  (ಆರೋಪಿಗಳಿಂದ ತಾವು ನಿಜವಾಗಿ ವಶಪಡಿಸಿಕೊಂಡ ನೋಟುಗಳು ಸ್ವಾಮೀಜಿಗೆ ಸೇರಿದ್ದು ಹೌದೋ ಅಲ್ಲವೋ ಎಂಬುದಾಗಿ ಕೋರ್ಟ್‌ ಸಂದೇಹ ವ್ಯಕ್ತಪಡಿಸಬಹುದು ಎಂಬ ಗುಮಾನಿಯಿಂದಲೋ ಏನೋ, ಗರಿಗರಿ ನೋಟಿನ ಮೊರೆ ಹೋಗಿದ್ದರು ಪೊಲೀಸರು). ಗೀತಾ ಕೂಡ ಹೊಸ ನೋಟುಗಳನ್ನು ಸಂಗ್ರಹಿಸುವ  ಹವ್ಯಾಸ ಸ್ವಾಮೀಜಿಗೆ ಇತ್ತು ಎಂದೂ ಹೇಳಿದರು (ಪೊಲೀಸರು ಹೇಳಿಸಿದ್ದರು!).

ಆರೋಪಿಗಳನ್ನು ಹಿಡಿದಿರುವುದಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ಮಾಡಿರುವ ದಿನಾಂಕ ಹಾಗೂ ಕೋರ್ಟ್‌ಗೆ ಪೊಲೀಸರು ನೀಡಿದ್ದ ಲಿಖಿತ ಹೇಳಿಕೆಯಲ್ಲಿ ವ್ಯತ್ಯಾಸ ಇರುವುದನ್ನು ಸಾಬೀತುಪಡಿಸುವುದು  ನಮಗೆ ಕಷ್ಟವಾಗಲಿಲ್ಲ. ಪತ್ರಿಕಾಗೋಷ್ಠಿ ನಡೆದ ದಿನವೇ ಸಂಜೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿದ್ದರಿಂದ ಅದನ್ನು ಸಾಬೀತುಪಡಿಸುವುದು ನಮಗೆ ಸುಲಭವಾಯಿತು. ಆದರೆ ‘ನೋಟಿನ ರಹಸ್ಯ’ದ ಕಥೆ ರೋಚಕವಾಗಿದೆ.

ಇನ್ನೂ ಘಮಘಮ ಎಂದು ಪರಿಮಳ ಸೂಸುವ ನೋಟುಗಳ ಬಗ್ಗೆ ನನಗೆ ಸಂದೇಹ ಬಂತು. ಸರ್ವಸಂಗ ಪರಿತ್ಯಾಗಿಯಾದ ಈ ಸ್ವಾಮೀಜಿಗೆ ಹೊಸಹೊಸ ನೋಟುಗಳನ್ನು ಸಂಗ್ರಹ ಮಾಡುವ ಆಸೆ ಇತ್ತಾ ಎಂಬ ಪ್ರಶ್ನೆ ಉದ್ಭವಿಸಿತು. ನಾನು ತಡ ಮಾಡಲಿಲ್ಲ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಬೆಂಗಳೂರು ಶಾಖೆಯಲ್ಲಿದ್ದ ನನ್ನ ಸ್ನೇಹಿತರೊಬ್ಬರ ನೆರವು ಪಡೆದು ಈ ನೋಟುಗಳ ಸಂಖ್ಯೆಗಳನ್ನು ಹೇಳಿದೆ. ಅವು ಯಾವಾಗ ಬ್ಯಾಂಕಿನಿಂದ ಬಿಡುಗಡೆಗೊಂಡಿದ್ದು ಎಂಬ ಬಗ್ಗೆ ತಿಳಿಸುವಂತೆ ಕೋರಿದೆ. ಅಚ್ಚರಿ ಕಾದಿತ್ತು. ಸ್ವಾಮೀಜಿ ಕೊಲೆಯಾದ ಕೆಲವು ದಿನಗಳ ನಂತರ ರಿಸರ್ವ್‌ ಬ್ಯಾಂಕ್‌ ಬಿಡುಗಡೆಗೊಳಿಸಿದ್ದ ನೋಟುಗಳು ಅವಾಗಿದ್ದವು! ಇವೆಲ್ಲವನ್ನೂ ನ್ಯಾಯಾಲಯಕ್ಕೆ ತಿಳಿಸಿದೆ.

ಇನ್ನೇನು ಕೇಸು ನಮ್ಮ ಪರವಾಗಿಯೇ ಆಗುತ್ತದೆ ಎಂದೆನಿಸಿತ್ತು. ಆದರೆ ನ್ಯಾಯಾಧೀಶರಾಗಿದ್ದ ನಾಗಪ್ಪ ಅವರು ನಮ್ಮ ವಾದವನ್ನು ಮಾನ್ಯ ಮಾಡದೇ, ನಾಲ್ವರಿಗೂ ಜೀವಾವಧಿ ಶಿಕ್ಷೆ ವಿಧಿಸಿದರು.  ನಾವು ಸುಮ್ಮನಾಗಲಿಲ್ಲ. ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆವು. ಏಕೆಂದರೆ ಎಲ್ಲವೂ ನಮ್ಮ ಪರವಾಗಿಯೇ ಇತ್ತಲ್ಲ, ಅದಕ್ಕೆ. ಪ್ರಕರಣ ಆಗ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿದ್ದ ಹೊನ್ನಯ್ಯ ಹಾಗೂ ಎನ್‌.ಎಸ್‌.ನೇಸರ್ಗಿ ಅವರ ಮುಂದೆ ಬಂತು. ವಾದ, ಪ್ರತಿವಾದ ಶುರುವಾದ ಮೊದಲ ದಿನವೇ ಪೊಲೀಸರು ಮಾಡಿರುವ ಎಡವಟ್ಟು ಗಮನಕ್ಕೆ ಬಂದು ಎಲ್ಲಾ ಆರೋಪಿಗಳನ್ನೂ ನ್ಯಾಯಮೂರ್ತಿಗಳು ಖುಲಾಸೆಗೊಳಿಸಿದರು. ಜೀವಾವಧಿ ಶಿಕ್ಷೆಯಿಂದ ನಾಲ್ವರೂ ಬಿಡುಗಡೆಗೊಂಡರು.

ಕೇಸು ನಮ್ಮ ಪರವಾಗಿಯೇ ಆಯಿತು ನಿಜ. ಆದರೆ ಪೊಲೀಸರು ಮಾಡುವ ಎಡವಟ್ಟಿನಿಂದ ಕೊಲೆ ಪ್ರಕರಣವೂ ಯಾವ ಸ್ವರೂಪ ಪಡೆಯುತ್ತದೆ ಎಂಬುದಕ್ಕೆ ಈ ಒಂದು ಘಟನೆಯೂ ಸಾಕ್ಷಿಯಾಗಿದೆ. ಕೇಸಿಗೆ ಸಂಬಂಧಪಡದ ಸಾಕ್ಷ್ಯಗಳನ್ನು (ಈ ಪ್ರಕರಣದಲ್ಲಿ ಗರಿಗರಿ ನೋಟು) ಕೋರ್ಟ್‌ಗೆ ಹಾಜರುಪಡಿಸಿದರೆ ಏನಾಗುತ್ತದೆ ಎಂಬ ಪಾಠವನ್ನು ಅಂದು ಪೊಲೀಸರು ಕಲಿತರು!

ಲೇಖಕ ಅಪರಾಧಿಕ ಪ್ರಕರಣಗಳ ಹೈಕೋರ್ಟ್‌ ಹಿರಿಯ ವಕೀಲ

ಮುಂದಿನ ವಾರ: ಪತ್ನಿಯನ್ನು ಜೀವಂತ ಹೂತಿಟ್ಟ ಶ್ರದ್ಧಾನಂದ ಸ್ವಾಮೀಜಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.