ADVERTISEMENT

ರಿಂಕಿ ಅಂದ್ರೆ ಬೆಂಕಿ; ಇಂದು ಅಂದ್ರೆ ಇನ್ನೊಂದು!

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:04 IST
Last Updated 16 ಜೂನ್ 2018, 9:04 IST

ಅದೊಂಥರಾ ಚಕ್ರ ಸುತ್ತಿನ ಕೋಟೆ. ಹಾಸ್ಟೆಲ್ ವಾಸ ಅಂದರೆ ಹೊರಗಿದ್ದದ್ದನ್ನ ಒಳಗೆ ಇರಲೀಂತ ಬೇಡೋದು. ಒಳಗೆ ಇದ್ದದ್ದು ಹೊರಗೂ ಇದ್ದಿದ್ದರೆ ಚೆನ್ನಾಗಿತ್ತಲ್ಲ ಅಂತ ಬಯಸೋದು. ಮನೆ ಊಟ, ಹಾಸ್ಟೆಲಿನ ಸ್ವಾತಂತ್ರ್ಯ-ಸ್ವೇಚ್ಛೆ ಎರಡನ್ನೂ ಹದವಾಗಿ ಬೆರೆಸಿದರೆ ಎವೆರೆಸ್ಟ್ ಹತ್ತಬೋದಿತ್ತು, ಮನೆ ತುಂಬಾ ದುಡ್ಡು ಕೂಡಿಡಬಹುದಿತ್ತು ಅಥವಾ ಸರ್ವಜ್ಞನಷ್ಟೇ ಅದ್ಭುತವಾದ ತ್ರಿಪದಿಗಳನ್ನು ಬರೆಯಬಹುದಿತ್ತು ಎಂದು ದೃಢವಾಗಿ ನಂಬಿದವರು ಬಹಳ. ವಯಸ್ಸೇ ಅಂಥದ್ದು.

ವಿಜಿ, ರಶ್ಮಿಯರ ಜೀವನಗಳು ಹಾಸ್ಟೆಲಿನ ದೆವ್ವದ ರೂಮಿನಲ್ಲಿ ಆರಾಮವಾಗಿ ಸಾಗುತ್ತಿರುವಾಗ ಧುತ್ತೆಂದು ಒಂದು ಸುದ್ದಿ ಸಿಡಿಲಿನಂತೆ ಬಂದೆರಗಿತು. ಅದೇನೆಂದರೆ, ಇವರಿದ್ದ ರೂಮಿಗೆ ಇನ್ನೊಬ್ಬ ಇನ್ ಮೇಟ್ ಅನ್ನು ಕೊಡುವ ವಿಚಾರ ವಿನಿಮಯ ಆಗಿ ವಾರ್ಡನ್ ಅಂಗೀಕಾರ ಹಾಕಿದ್ದಾರೆನ್ನುವ ವಿಷಯ.

ಕಾರಣವಿಷ್ಟೆ. ಇವರಿಬ್ಬರೂ ಇದ್ದ ರೂಮು ಬಹಳ ದೊಡ್ಡದಿತ್ತು. ಅಲ್ಲದೆ ಇವರಿಬ್ಬರೂ ಇರಲು ಶುರು ಮಾಡಿದ ಮೇಲೆ ಯಾವ ದೆವ್ವಕ್ಕೆ ಸಂಬಂಧಿಸಿದ ಯಾವ ಘಟನೆಗಳೂ ನಡೆದಿರಲಿಲ್ಲ. ಹಾಗಾಗಿ, ರೂಮು ಸೇಫ್ ಅಂತಾಗಿತ್ತು. ಹೊಸ ಅಡ್ಮಿಷನ್‌ಗಳಿಗೆ ಇದ್ದ ರೂಮುಗಳ ಸಂಖ್ಯೆಯಲ್ಲೇ ಮ್ಯಾನೇಜ್ ಮಾಡಬೇಕಿತ್ತು. ಒಡಿಶಾ ಮೂಲದ ಹುಡುಗಿಯೊಬ್ಬಳು ತಡವಾಗಿ ಪ್ರವೇಶ ಕೋರಿ ಬಂದಿದ್ದಳು. ಅವರ ಅಪ್ಪ ಒಡಿಶಾದಲ್ಲಿ ಪಾರಾದೀಪ್ ಪೋರ್ಟ್ ಟ್ರಸ್ಟ್ ಎನ್ನುವ ಬಂದರಿನಲ್ಲಿ ಸರ್ಕಾರೀ ನೌಕರರಾಗಿದ್ದು ಮಗಳ ಅಡ್ಮಿಷನ್ ಸಲುವಾಗಿ ಸಾಕಷ್ಟು ಒತ್ತಡವನ್ನೂ ತಂದಿದ್ದರು. ಅವಳಿಗೆ ಜಾಗ ಕೊಡುವುದು ಅನಿವಾರ್ಯವಾಗಿತ್ತು.

ಅದೇ ಸಮಯಕ್ಕೆ ವಿಜಿ-ರಶ್ಮಿಯರಿದ್ದ ದೆವ್ವದ ರೂಮಿನ ಪಕ್ಕದಲ್ಲಿ ಅಂಥದ್ದೇ ಇನ್ನೊಂದು ರೂಮೂ ಇದ್ದು, ಅಲ್ಲಿಗೆ ಇಬ್ಬರು ಕೊಡವರ ಹುಡುಗಿಯರು ಮತ್ತು ಜೆಡಿಎಸ್‌ ನಾಯಕ ದೇವೇಗೌಡರ ಸಂಬಂಧಿಯೊಬ್ಬಳನ್ನು ಹಾಕುವುದೆಂದು ತೀರ್ಮಾನವಾಗಿತ್ತು. ಇವೆಲ್ಲ ಬದಲಾವಣೆಗಳು ಒಟ್ಟೊಟ್ಟಿಗೇ ಬಂದು ರಶ್ಮಿ-ವಿಜಿಯರ ಭಾವನಾ ಪ್ರಪಂಚದ ಮೇಲೆ ಯುದ್ಧ ಪ್ರಾರಂಭವಾಗುವ ಮುನ್ಸೂಚನೆಯಂತೆ ಕಂಡವು.

ಒಡಿಶಾ ಮೂಲದ ಹುಡುಗಿ ರಿಂಕಿ ಮೊದಲು ಬಂದಿಳಿದಳು. ಅವಳ ಸೂಟ್ಕೇಸುಗಳು ರೂಮನ್ನು ತುಂಬಿದವು. ಸಪೂರವಾದ ಚಂದದ ನಗುವಿನ ಹುಡುಗಿ ಆಕೆ. ಸದಾ ಜೀನ್ಸ್ ಪ್ಯಾಂಟು, ಕಾಟನ್ ಸಲ್ವಾರುಗಳನ್ನು ತೊಟ್ಟು ಬಹಳ ಸಂಕೋಚದ ಸ್ವಭಾವದವಳಂತೆ ಇದ್ದಳು.

ಆದರೆ ಅದೆಲ್ಲ ಬರೀ ಮೇಲ್ನೋಟಕ್ಕೆ ಮಾತ್ರ ಎಂದು ಗೊತ್ತಾಗಲು ಬಹಳ ಕಾಲ ಹಿಡಿಯಲಿಲ್ಲ. ಹುಡುಗಿಯರು ಕ್ಲಾಸಿಗೆ ಹೊರಡುತ್ತಿದ್ದ ಒಂದು ಮುಂಜಾನೆ ಐದು ಸೂಟ್ ಕೇಸ್ ಸುತ್ತುವರಿಸಿಕೊಂಡು ನಿಂತ ಭಾರೀ ದೇಹವೊಂದು ಭರ್ಜರಿ ಗಲಾಟೆ ಮಾಡುತ್ತಿತ್ತು. ‘ನಾನ್ ಬೆಳಿಗ್ಗೆ ಬರ್ತೀನಿ ಅಂತ ಹೇಳಿದ್ರೂ ನೀವ್ ಕೀ ತೆಗೆದು ಇಟ್ಟಿಲ್ವಲ್ಲ? ಯಾಕೆ? ರೆಸ್ಪಾನ್ಸಿಬಿಲಿಟಿ ಇಲ್ವಾ?’ ‘ಹೊಟ್ಟೆಗ್ ತಿನ್ನಕ್ ಗೊತ್ತಾಗುತ್ತೆ ಅಂದ್ರೆ ಕೆಲ್ಸ ಮಾಡಾಕೆ ಗೊತ್ತಾಗಲ್ವಾ?’ ಇತ್ಯಾದಿ ಸಹಸ್ರನಾ ಮಾರ್ಚನೆ ಕಾರಿಡಾರಿನಲ್ಲಿ ಅವ್ಯಾಹತವಾಗಿ ಸಾಗಿತ್ತು.

ಅದಕ್ಕೆ ಉತ್ತರವಾಗಿ ಮೋನ ಬೇಡುವ ದನಿಯಲ್ಲಿ ಮೆಲ್ಲಗೆ ಮಾತನಾಡಿರೆಂದು ಅಲವತ್ತುಕೊಳ್ಳುತ್ತಿದ್ದ. ಅದನ್ನು ಕೇಳಿದ ದನಿಯ ಒಡತಿ ಇನ್ನೂ ತಾರಕ ಸ್ವರದಲ್ಲಿ ಅವನಿಗೆ ಬಯ್ಯುತ್ತಿದ್ದಳು. ರಶ್ಮಿ-ವಿಜಿ ಇಬ್ಬರೂ ಮಕ್‌ಮಕ ನೋಡಿಕೊಂಡರು. ಏನಾಯಿತು ಎಂದು ಕೇಳಲು ಹೋದರೆ ಎತ್ತರ ದನಿಯ ಹೆಂಗಸು ಇವರಿಬ್ಬರನ್ನೂ ಯಾವ ಪರಿ ದುರುಗುಟ್ಟಿ ನೋಡಿದಳೆಂದರೆ ಇಬ್ಬರೂ ಬಾಲ ಮುದುರಿಕೊಂಡು ಕ್ಲಾಸಿಗೆ ಪರಾರಿಯಾದರು.

ಇಬ್ಬರ ಗೆಸ್ ವರ್ಕ್ ಪ್ರಕಾರ ಅವರು ಇಲ್ಲಾ ವಾರ್ಡನ್ ಸಂಬಂಧಿ ಇರಬೇಕು ಅಥವಾ ಯಾರೋ ಹುಡುಗಿಯ ತಾಯಿ ಇರಬೇಕು. ನೋಡಲು ಬೇರೆ ಬಹಳ ಹೆವಿ ಇದ್ದರು. ಕ್ಲಾಸಿನಿಂದ ವಾಪಾಸು ಬಂದಾಗ ಪಕ್ಕದ ರೂಮಿನ ಬಾಗಿಲು ತೆಗೆದು ಯಾರೋ ಗೃಹ ಪ್ರವೇಶ ಮಾಡಿದಂತಿತ್ತು. ಸರಿ, ಅನಿವಾರ್ಯವಾದಾಗ ಎಲ್ಲವನ್ನೂ ಸಹಿಸಿಕೊಳ್ಳುವುದು ಎಂದುಕೊಂಡು ರಶ್ಮಿ-ವಿಜಿ ಪಕ್ಕದ ರೂಮಿನವರನ್ನು ಪರಿಚಯ ಮಾಡಿಕೊಳ್ಳೋಣ ಎಂದು ಒಳಗೆ ಅಡಿಯಿಟ್ಟರು. ನೋಡಿದರೆ ಬೆಳಿಗ್ಗೆ ಮೋನನಿಗೆ ಸುಪ್ರಭಾತ ಕೇಳಿಸುತ್ತಿದ್ದ ಸುಬ್ಬು ಲಕುಮಿ ಮಂಚದ ಮೇಲೆ ಬಿದ್ದುಕೊಂಡು ನಿದ್ದೆ ಮಾಡುತ್ತಿದ್ದಳು. ಅವಳೇ ಇವಳು!!. ಹೇಳಲೋ ಬೇಡವೋ ಎಂದುಕೊಂಡು ‘ಹೆಲೋ’ ಎಂದಳು ವಿಜಿ.

‘ಯಸ್ಸ್’ ಎಂದು ಲಕುಮಿ ಗಂಡು ವಾಯ್ಸಿನಲ್ಲಿ ಉತ್ತರ ಕೊಟ್ಟಳು. ‘ಈ ರೂಮಿಗೆ...’ ಎಂದು ವಾಕ್ಯ ಸಂಪೂರ್ಣ ಮಾಡುವಷ್ಟರಲ್ಲಿ ಲಕುಮಿ ಇಬ್ಬರ ಬಾಯನ್ನೂ ಮುಚ್ಚಿಸುವಂತೆ ‘ಯಸ್...ನಾನೇ ಬಂದಿರೋದು. ನನ್ ಹೆಸ್ರು ಇಂದುಮತಿ. ಮತ್ತೆ ಇಬ್ಬರ್ ಇನ್ನ್ ಸ್ವಲ್ಪ ಹೊತ್ತಲ್ಲಿ ಬರ್ತಾರೆ’ ಎಂದಳು.

‘ಅಲ್ಲಾ ನೀವೂ...’ (ನಿಮ್ಮ ಮಗಳಿಗೆ ಅಂದುಕೊಂಡ್ವಿ ಅಂತ ಹೇಳುವುದನ್ನು ಕಷ್ಟಪಟ್ಟು ತಡೆಹಿಡಿದು). ‘ಹೌದು ನಾನೇ. ಯಾಕೆ?’
‘ಛೆ ಏನಿಲ್ಲ ಬಿಡಿ. ಬೆಳಿಗ್ಗೆ ತೊಂದ್ರೆ ಆಯ್ತಲ್ಲಾ ಅಂತ ಕೇಳಿದೆ ಅಷ್ಟೇ. ವೆಲ್ ಕಮ್! ನಾವ್ ಪಕ್ಕದ್ ರೂಮ್ ನೋರು’ ‘ಗುಡ್. ಪರಿಚಯ ಆಯ್ತಲ್ಲ ಆಗಾಗ ಸುಮ್ನೆ ಬಂದು ತೊಂದ್ರೆ ಕೊಡ್ಬೇಡಿ. ಹೊರಡಿ’ ಅಂತ ತಾಕೀತು ಮಾಡಿ ನಿಂತ ಕಾಲಲ್ಲಿ ಹೊರಗೆ ಹೊರಡಿಸಿದಳು. ಈ ತೆರನಾಗಿ ಪಕ್ಕದ ರೂಮಿನಲ್ಲಿ ಬೊಳ್ಳಮ್ಮ, ಕಾವೇರಿ ಮತ್ತು ಇಂದುಮತಿ ಸಂಸಾರ ಹೂಡಿದರು.

ತನ್ನ ರಾಜಕೀಯ ಪ್ರಭಾವದಿಂದಾಗಿ ಇಂದುಮತಿ ಅಲಿಯಾಸ್ ಇಂದು ಬರುವ ಮೊದಲೇ ಭಾರೀ ಕುತೂಹಲ ಕೆರಳಿಸಿದ್ದಳು. ಮೊದಮೊದಲಿಗೆ ಹೆಸರು ಕೇಳಿದಾಗ ವಿಜಿಗೆ ಇಂದುಮತಿಯ ಬಗ್ಗೆ ಒಂದು ರೀತಿಯ ಅಚ್ಚರಿ ಬೆರೆತ ಇಮ್ಯಾಜಿನೇಶನ್ ಇತ್ತು. ಇಂದುಮತಿ...ಆಹಾ...ಉದ್ದ ಜಡೆ, ಬುದ್ಧಿವಂತೆ, ಮಿತಭಾಷಿ, ಗುಳಿ ಕೆನ್ನೆ ಎಲ್ಲಾ ಇರಬಹುದು ಎಂದುಕೊಂಡಿದ್ದಳು.

ವ್ಯಕ್ತಿ ನೋಡಿದರೆ ತದ್ವಿರುದ್ಧವಾಗಿತ್ತು. ಮೊದಲ ಭೇಟಿಯೇ ಹಿಂಗೆ... ಇನ್ನು ಇವಳ ಕೈಲಿ ಇನ್ನೇನು ಕಾದಿದೆಯೋ ಅಂತ ವಿಜಿ-ರಶ್ಮಿ ಸ್ವಲ್ಪ ಮಟ್ಟಿಗೆ ಚಿಂತಾಕ್ರಾಂತರಾದರು. ದೆವ್ವ ಇದೆ ಅಂತಿದ್ದ ಮೋಹನ... ದೆವ್ವಕ್ಕೆ ಅಡ್ಮಿಷನ್ ಬೇರೆ ಕೊಡ್ತಾರೆ ಅಂತ ಹೇಳಲೇ ಇಲ್ಲವಲ್ಲಾಂತನ್ನೋದು ಇವರ ಜ್ವಲಂತ ಸಮಸ್ಯೆಯಾಗಿ ಮಾರ್ಪಾಡಾಗಿತ್ತು. ರೂಮಿಗೆ ಮರಳಿದರೆ ಇವರಿಬ್ಬರ ಚಿಂತಾಭರಿತ ಮುಖ ಗಮನಿಸಿದ ರಿಂಕಿ ಕೇಳಿದಳು.

‘ಕ್ಯಾ ಹುವಾ?’ (ಏನಾಯ್ತು?)
ಮುಂದಿನ ಸಂಭಾಷಣೆ ಹರುಕು-ಮುರುಕು ಹಿಂದಿ ಮಿಶ್ರಿತ ಇಂಗ್ಲೀಷಿನಲ್ಲಿ ಸಾಗಿತು.
‘ಪಕ್ಕದ್ ರೂಮಿಗೆ ಮೂರ್ ಜನ ಬಂದಿದಾರೆ’
‘ತೋ?’ (ಅದಕ್ಕೆ?). ­ಇಂದುಮತಿಯಿಂದಾದ ಸ್ವಪ್ನವಿಭ್ರಮೆಯನ್ನು ವರ್ಣಿಸಲು ಸಾಧ್ಯವಾಗಲಿಲ್ಲವಾದರೂ ನೆರೆಯವರು ‘ಅನ್ ಫ್ರೆಂಡ್ಲಿ’ ಇದಾರೆ ಅನ್ನುವ ಸಂದೇಶವನ್ನು ನೀಡಲಾಯಿತು.

ರಿಂಕಿಗೆ ಹಾಸ್ಟೆಲ್ ವಾಸದ ಬಗ್ಗೆ ಯಾವ ಹಿಂಜರಿಕೆಯೂ ಇದ್ದಂತಿರಲಿಲ್ಲ. ತನ್ನ ನೆಲವಾದ ಒಡಿಶಾದಿಂದ ಇಷ್ಟು ದೂರ ಬಂದಿದ್ದೀನಿ ಎನ್ನುವ ಆತಂಕ ಅವಳಲ್ಲಿ ವಿಶೇಷವಾಗಿ ಕಾಣುತ್ತಿರಲಿಲ್ಲ. ಅದಕ್ಕೆ ಕಾರಣ ಅವಳ ಬಾಲ್ಯ ಮತ್ತು ಬೆಳವಣಿಗೆ. ಮೂರನೇ ಕ್ಲಾಸಿನಿಂದಲೇ ಹಾಸ್ಟೆಲಿನಲ್ಲಿ ಬೆಳೆದವಳಂತೆ ಅವಳು. ಅಪ್ಪ ಅಮ್ಮನ ಜೊತೆ ಬಹಳ ಭಾವನಾತ್ಮಕ ಸಂಬಂಧವೇನೂ ಇರಲಿಲ್ಲ. ಇದ್ದದ್ದೆಲ್ಲಾ ಲಘು ವ್ಯಾವಹಾರಿಕ ಸಂಬಂಧ.

‘ಅಯ್ಯೋ! ಅಷ್ಟೇನಾ? ಈಗ್ಲೇ ಮಾತಾಡಿಸಿಕೊಂಡು ಬರ್ತೀನಿ ಇರು. ಹಾಸ್ಟೆಲಲ್ಲಿ ಯಾರೂ ಹಾಗೆಲ್ಲ ಬಹಳ ದಿನ ಇರಕ್ಕೆ ಸಾಧ್ಯವಿಲ್ಲ’ ಎಂದು ಡಿಕ್ಲೇರ್ ಮಾಡಿಬಿಟ್ಟಳು. ಮಾಡಿದ್ದಷ್ಟೇ ಅಲ್ಲ, ಪಕ್ಕದ ರೂಮಿಗೆ ಹೊರಟೂ ಬಿಟ್ಟಳು. ವಿಜಿ-ರಶ್ಮಿಗೆ ತಮಗಾದ ಅನುಭವವನ್ನು ವಿಷದವಾಗಿ ತಿಳಿಸುವ ಅವಕಾಶವೂ ದೊರೆಯಲಿಲ್ಲ. ಸರಿ, ಆದದ್ದಾಯಿತು ಎಂದು ಸುಮ್ಮನೇ ರೂಮಿನಲ್ಲಿ ಕಾದರು.

ಸುಮಾರು ಇಪ್ಪತ್ತು ನಿಮಿಷದ ನಂತರ ನಗು ಮುಖದಲ್ಲಿ ರಿಂಕಿ ರೂಮಿಗೆ ಹಿಂತಿರುಗಿದಳು. ರಶ್ಮಿ ವಿಜಿ ಕಾತರದಿಂದ ನೋಡುತ್ತಿದ್ದರು. ‘ಹೇ ಭಗವಾನ್! ಹಂಗೇನು ನೋಡ್ತಿದ್ದೀರಿ?’
‘ಉಗೀಲಿಲ್ವಾ ಅವಳು ನಿಂಗೆ?’
‘ಇಲ್ಲವಲ್ಲಾ! ಬದಲಾಗಿ ಕನ್ನಡ ಕಲಿಸ್ತೀನಿ ಅಂತ ಪ್ರಾಮಿಸ್ ಮಾಡಿದಾಳೆ. ಇಲ್ಲೇ ಎರಡು ವರ್ಷ ಇರ್ತೀನಲ್ವಾ? ಕನ್ನಡ ಕಲೀಬೇಕು ನಾನು’
ವಿಜಿಗೆ ರಿಂಕಿಯನ್ನು ಗುದ್ದಿ ಸಾಯಿಸಿಬಿಡಬೇಕೆನ್ನುವಷ್ಟು ಸಿಟ್ಟು ಬಂತು. ಆದರೂ ಇವಳು ನಿನ್ನೆ ಮೊನ್ನೆ ಬಂದವಳು ಅಂತ ಸುಮ್ಮನಾಗಿ ಕೇಳಿದಳು.

‘ಅಲ್ಲಾ ಕಣೆ ಲೇಯ್! ಕನ್ನಡ ಬೇಕೂಂದ್ರೆ ನಾವೇ ಕಲಿಸುತ್ತಿರಲಿಲ್ವಾ? ಆ ದೊಣ್ಣೆ ಹತ್ರ ಯಾಕೆ ಕನ್ನಡ ಕಲಿಸು ಅಂತ ಕೇಳಿದೆ?’
‘ನಾನ್ ಕೇಳಲಿಲ್ಲ. ಅವಳೇ ಹೇಳಿದಳು. ಕನ್ನಡ ಕಲ್ತುಕೊಂಡ್ರೆ ಒಳ್ಳೇದು ಅಂತ ಕೂಡ ತಾಕೀತು ಮಾಡಿದಳು’
‘ಅದೇನು? ನಿಂಗೂ ಅವಳಿಗೂ ಮೊದ್ಲಿಂದ ಪರಿಚಯಾನಾ? ನಮ್ ಮುಂದೆ ಸುಮ್ನೆ ನಾಟ್ಕ ಕಟ್ತಿದ್ರಾ?’
‘ಇಲ್ವಲ್ಲಾ? ಆ ರೂಮಿಗ್ ಹೋಗಕ್ಕೆ ಮುಂಚೆ ಅವ್ಳ್ ಮುಖಾ ಸೈತ ನೋಡಿರ್ಲಿಲ್ಲ ನಾನು’
‘ಮತ್ತೆ ಏನ್ ನಿಮ್ ದೂರುದ್ ಚಿಗಪ್ಪನ ಮಗ್ಳು ಅನ್ನೋ ತರಾ ಮಾತಾಡ್ಸಿರೋದೂ ಅಲ್ದೆ ಅವ್ಳತ್ರ ಕನ್ನಡ ಕಲಿಯೋ ಪ್ಲಾನೂ ಇಟ್ಟಿದೀಯಾ?’
‘ಅದೆಲ್ಲಾ ನಿಮಗೆ ಅರ್ಥ ಆಗಲ್ಲ’

‘ಇರ್ಲಿ ಹೇಳು. ನಮ್ಮಂಥಾ ಪಾಮರರಿಗೂ ಅರ್ಥ ಆಗಲಿ’. ರಿಂಕಿ ಆಮೇಲೆ ಹೇಳಿದ್ದೆಲ್ಲಾ ಜೀವನ ದರ್ಶನದ ಬಗೆ. ಆವತ್ತು ಹಾಗೆ ಅನ್ನಿಸದಿದ್ದರೂ ಹಾಸ್ಟೆಲ್ ಜೀವನದ ಬಗ್ಗೆ, ಅಲ್ಲಿ ಇರುವ ಜೀವಗಳ ಬಗ್ಗೆ ಒಂದು ರೀತಿಯ ದಿಗ್ದರ್ಶನವಾದದ್ದಂತೂ ಸತ್ಯ. ಅದರ ಪರಿಣಾಮವಾಗಿ ವಿಜಿ ರಶ್ಮಿ ಮುಂದೆ ಜೀವನದಲ್ಲಿ ಹಾಸ್ಟೆಲಿನಲ್ಲಿ ಇರುವವರ ಬಗ್ಗೆ ಒಂದು ಬಗೆಯ ಸಹಾನುಭೂತಿ, ಅಚ್ಚರಿಯನ್ನೂ ಬೆಳೆಸಿಕೊಂಡರು.

ಹಾಸ್ಟೆಲುಗಳಲ್ಲಿ ಬೆಳೆದ ಹುಡುಗರು ಹೇಗಿರುತ್ತಾರೋ ಗೊತ್ತಿಲ್ಲ. ಆದರೆ ಹಾಸ್ಟೆಲಿನಲ್ಲಿ ಬೆಳೆದ ಹುಡುಗಿಯರು ಮಾತ್ರ ಪ್ರಪಂಚದ ಬಗ್ಗೆ ಒಂದು ಬಗೆಯ ಒಳಗಣ್ಣನ್ನು ಬೆಳೆಸಿಕೊಳ್ಳುತ್ತಾರೆ. ಏಕೆಂದರೆ ಹಾಸ್ಟೆಲಿನ ಒಳಗಿನ ಜಗತ್ತು ಅಧಿಕಾರದೊಂದಿಗಿನ ನಿರಂತರ ಘರ್ಷಣೆ. ಚಿಕ್ಕವರಿದ್ದಾಗ ಆಯಾಗಳೂ ಟೀಚರುಗಳೂ ಅವರನ್ನು ಸದಾ ಒಂದು ವ್ಯವಸ್ಥೆಯ ಮೂಸೆಯಲ್ಲಿ ಹಾಕಿ ಬೀಗ ಜಡಿಯಲು ಪ್ರಯತ್ನಿಸುತ್ತಿರುತ್ತಾರೆ. ಎಲ್ಲವೂ ಅಧಿಕಾರವಾಣಿಯಲ್ಲೇ ನಡೆಯುತ್ತದೆ.

ಮನೆಯಲ್ಲಿ ಇರುವ ಹಾಗೆ ವಾತಾವರಣದಲ್ಲಿ ಒಂದು ಬಗೆಯ ‘ಈಕ್ವಲೈಸರ್’ ಇರುವುದಿಲ್ಲ. ಅಪ್ಪನೋ ಅಮ್ಮನೋ ಬಯ್ಯಲು ಶುರು ಮಾಡಿದರೆ ಅಜ್ಜನೋ ಅಜ್ಜಿಯೋ ಅಥವಾ ತಮ್ಮ-ತಂಗಿಯೋ ಸಮಾಧಾನ ಪಡಿಸಲು ಯತ್ನಿಸುವಂತೆ ಹಾಸ್ಟೆಲಿನಲ್ಲಿ ಯಾರೂ ಯಾರ ಸಹಾಯಕ್ಕೂ ಬರುವುದಿಲ್ಲ. ತಮ್ಮ ರಕ್ಷಣೆ ತಾವೇ ಮಾಡಿಕೊಳ್ಳಬೇಕು.

ಸದಾ ಘರ್ಷಣೆಯ ವಾತಾವರಣದಲ್ಲಿ ಬೆಳೆದ ಮಕ್ಕಳು ಸಹಜವಾಗಿಯೇ ಒಂದು ಒಳವ್ಯಕ್ತಿತ್ವವನ್ನು ಹೊಂದುತ್ತಾರೆ. ಅದು ಅವರನ್ನು ಪೊರೆಯುವಂಥದ್ದು, ಸಮಾಧಾನ ತರುವಂಥದ್ದು. ಅಲ್ಲದೆ, ಹಾಸ್ಟೆಲಿನಲ್ಲಿ ಬೆಳೆದವರಿಗೆ ಬಹುತೇಕ ಒಂದು ಹಾಬಿ ಇದ್ದೇ ಇರುತ್ತದೆ. ಅದೇ ಅವರನ್ನು ಕಷ್ಟದ ಕಾಲದಲ್ಲಿ ಸಲಹುವಂಥದ್ದು. ಬಹಳ ನೊಂದಿದ್ದರೆ ಅಥವಾ ಹತ್ತಿರದವರ ಆಸರೆ ಇಲ್ಲದೆ ಹೋದರೆ ಇಂಥ ಜೀವಗಳು ಭಾವನಾತ್ಮಕವಾಗಿ ತೆರೆದುಕೊಳ್ಳುವುದು ಕಷ್ಟ. ಅದು ಅಹಂಕಾರ ಅಂತಲ್ಲ, ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಬಗೆ ಮಾತ್ರ.

ಒಂದು ಬಗೆಯ ಘಾತಕ ವಾತಾವರಣದಲ್ಲಿ ಬದುಕಿದ್ದರೆ, ಅವರಿಗೆ ಇನ್ನೊಬ್ಬರ ವಿಶ್ವಾಸ ಹುಟ್ಟಲು ಸಾಕಷ್ಟು ಕಾಲ ಹಿಡಿಯುತ್ತದೆ. ಈ ಎಲ್ಲವೂ ಹಾಸ್ಟೆಲಿನ ಹೊರಗೆ ಬೆಳೆದವರ ಬಗ್ಗೆಯೂ ಹೇಳಬಹುದು. ಆದರೆ, ಪ್ರಸ್ತುತದಲ್ಲಿ ರಿಂಕಿ, ಇಂದುಮತಿಯ ಬಗ್ಗೆ ಇನ್ನಿಬ್ಬರಿಗೆ ಹೇಳಬೇಕಾಗಿ ಬಂದಾಗ ಈ ಎಲ್ಲ ವಿಷಯಗಳನ್ನು ಬಿಡಿಸಿ-ಬಿಡಿಸಿ ಅವರಿಗೆ ಅರ್ಥವಾಗುವಂತೆ ಹೇಳಿದಳು. ಒಂಥರಾ ಸೆಮಿ-ಸೈಕಾಲಜಿ ಕ್ಲಾಸ್ ಆಯಿತು.

‘ಅದೆಲ್ಲ ಸರಿ. ಆದ್ರೆ ಅವ್ಳು ನಂ ಹತ್ರ ಮಾತಾಡ್ದೆ ನಿನ್ ಹತ್ರ ಮಾತಾಡಿದ್ದು ಹೆಂಗೆ? ಉರ್ರ್ ಅನ್ನೋದಾದ್ರೆ ನಿಂಗೂ ಹಂಗೇ ಅನ್ನಬೇಕಲ್ವಾ?’ ವಿಜಿ ರಿಂಕಿಯನ್ನು ಕೇಳಿದಳು.

‘ನಂಗೂ ಮೊದಲಿಗೆ ಉರ್ರ್ ಅಂದ್ಲು. ಅವಳು ಹಾಗಂದಾಗ ನನಗೆ ಇದು ಹಾಸ್ಟೆಲ್ ಬಾಲ್ಯದ ಪರಿಣಾಮ ಅಂತ ಗೊತ್ತಾಯ್ತು. ಅದಕ್ಕೆ ನಾನೂ ಹಾಸ್ಟೆಲಿನಲ್ಲೇ ಬೆಳೆದದ್ದು ಅನ್ನೋ ವಿಷಯ ಅವಳಿಗೆ ತಿಳಿಸಿದೆ. ಆಮೇಲೆ ಮೆತ್ತಗಾದಳು. ಬೆಂಗಳೂರಿನವಳಂತೆ. ಅವರಪ್ಪ ಅವಳನ್ನು ಹಾಸ್ಟೆಲ್ಲಿಗೆ ಸೇರಿಸಲೂ ಬಂದಿರಲಿಲ್ಲವಂತೆ. ಅವರಮ್ಮ ಇವಳು ಚಿಕ್ಕವಳಿದ್ದಾಗಲೇ ತೀರಿ ಹೋಗಿದ್ದಾರಂತೆ. ಇವಳ ಮಲತಾಯಿಗೆ ಇವಳನ್ನೂ ಇವಳ ತಂಗಿಯನ್ನೂ ನೋಡಿಕೊಳ್ಳುವುದು ಕಷ್ಟ ಅಂತ ಮೊದಲಿನಿಂದಲೂ ಹೊರಗೇ ಇಟ್ಟಿದ್ದಾರಂತೆ...’

ಅಬ್ಬಬ್ಬಾ! ಏಕ ರೀತಿಯ ಜೀವನ ಕಂಡ ಇಬ್ಬರು ಹುಡುಗಿಯರ ನಡುವೆ ಒಂದು ಸೇತುವೆ ಬೆಳೆಯಕ್ಕೆ ಸಾವಿರ ಪುಟ್-ಪುಟಾಣಿ ಲೆಕ್ಕಾಚಾರಗಳು ಜೀವ ತಳೆದು ಸಂಬಂಧದ ಒಟ್ಟೂ ಪ್ರಾಂಗಣಕ್ಕೆ ಕಲ್ಲನ್ನು ಜೋಡಿಸುತ್ತಾ ಹೋಗುತ್ತವೆ! ಇನ್ನೊಬ್ಬರ ಬಗ್ಗೆ ಒಳನೋಟ, ಸಹಾನುಭೂತಿ, ಅರ್ಥೈಸುವ ಪರಿ, ಆತ್ಮವಿಶ್ವಾಸ ಎಲ್ಲವೂ ಬರೀ ಗಳಿಗೆಗಳ ಅಂತರದಲ್ಲಿ ಸೃಷ್ಟಿಯಾಗಿ ಪ್ರಾಣ ಪ್ರತಿಷ್ಠಾಪನೆಯೂ ಆಗಿಬಿಡುತ್ತದೆ! ಒಗಟಾಗಿದ್ದ ಇಂದುಮತಿಯ ಬಗೆಗಿನ ದೃಷ್ಟಿಕೋನ ಚಪಾತಿ ಹಿಟ್ಟಿನ ಹದಕ್ಕೆ ಬಂತು. ಅದು ಒಳಗೆ ಇಳಿದು ಜೀವ ತಂಪಾಗಿಸಲು ಇನ್ನೂ ಸ್ವಲ್ಪ ಸಂಕೀರ್ಣ ಪ್ರಕ್ರಿಯೆ ಮತ್ತು ಕಾಲಾವಕಾಶ ಬೇಕಿತ್ತು.

ಸಂಜೆಗೆಂಪಿನ ಸೂರ್ಯ ಅಪ್ಯಾಯಮಾನವಾಗುತ್ತಿದ್ದ. ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಬಹಳ ಸಲವಲ್ಲದಿದ್ದರೂ ಕೆಲವು ಸಲ ರಿಂಕಿ, ವಿಜಿ, ರಶ್ಮಿ ನಡೆದುಹೋಗಿ ಬರುತ್ತಿದ್ದರು. ಒಳಗೆ ಒಂದು ಪುಟ್ಟ ಪ್ರಪಂಚ ಕಸುವು ಪಡೆದುಕೊಳ್ಳುತ್ತಿತ್ತು. ಒಂದು ಸಂಜೆ ವಿಜಿ ಜಗಜೀತ್ ಸಿಂಗನ ಗಝಲಿನ ಮಧುಶಾಲೆಯ ಬಟ್ಟಲಿನಲ್ಲಿ ಆತ್ಮವನ್ನು ಇಳಿಸಿ ಜೀವವನ್ನು ನೆನೆಸಿ ಹಿಪ್ಪೆ ಮಾಡಿಕೊಂಡು ಸ್ವ-ರತಿಯಲ್ಲಿ ಜಗಜೀತನ ಥರಾ ಒಬ್ಬ ಪ್ರೇಮಿ ಸಿಕ್ಕರೆ ಜೀವನ ಸಾರ್ಥಕವಾದೀತು ಎಂದು ಮಲಗಿಕೊಂಡು ಸುಳ್ಳು-ಸುಳ್ಳೇ ಒದ್ದಾಡುತ್ತಿರುವಾಗ... ರಿಂಕಿ ಇದ್ದಕ್ಕಿದ್ದಂತೆ ಬರಸಿಡಿಲಿನಂತೆ ರೂಮಿನೊಳಕ್ಕೆ ದಾಳಿಯಿಟ್ಟಳು.

‘ಹೇಯ್ ಗರ್ಲ್ಸ್!‘ನ್ನಾನ್ ನೀನಗ್ ಬ್ಯಾಡ್ವಾ’ ಕಾ ಮತ್ಲಬ್ ಕ್ಯಾ?’ (ಮತ್ಲಬ್- ಅರ್ಥ) ವಿಜಿ ಮಂಚದಿಂದ ಕುಮಟಿ ಬಿದ್ದಳು.
‘ಯಾರಿಗ್ ಹೇಳಿದೆ ಇದನ್ನ?’
‘ನಂ ಕ್ಲಾಸ್ ಹುಡುಗನಿಗೆ, ಬೇಲೂರಿನವನು. ಸಖತ್ ಕ್ಯೂಟ್ ಇದಾನೆ. ಕಾಂಪ್ಲಿಮೆಂಟ್ ಮಾಡಕ್ಕೆ ಹೇಳ್ದೆ. ಅವ್ನು ನಾಚ್ಕೊಂಡು ಹೋದ’.

ರಿಂಕಿಗೆ ಇಂದುಮತಿ ಕಲಿಸಿದ ವಾಕ್ಯ ‘ನಾನ್ ನಿನಗೆ ಬ್ಯಾಡ್ವಾ?’. ಹಾಗಂದರೆ ‘ನೀನು ತುಂಬಾ ಒಳ್ಳೆಯವನು’ ಅಂತ ಅಂತೆ. ಬೇಲೂರಿನ ಹುಡುಗ ಇವಳ ಕನ್ನಡದಲ್ಲಿ ಒಳ್ಳೆಯವನು ಅಂತ ಹೇಳಿಸಿಕೊಳ್ಳುವಾಗ ಕ್ಲಾಸಿನ ಎಲ್ಲರೂ ಇದ್ದರಂತೆ. ಅವನ ಪ್ರತಿಕ್ರಿಯೆ ಇವಳು ಹೇಳಿದ ಮಾತಿಗೆ ಹೊಂದಲಿಲ್ಲವಾಗಿ ರಿಂಕಿಗೆ ತಾನು ಹೇಳಿದ್ದರ ಅರ್ಥದ ಬಗ್ಗೆ ಅನುಮಾನ ಶುರುವಾಗಿತ್ತು.

‘ಯಾರ್ ಹೇಳ್ಕೊಟ್ರು ನಿಂಗೆ ಇದನ್ನ?’
‘ಈಂದುಮಾಟಿ’
‘ಸರಿಯಾಗ್ ಹೇಳ್ಕೊಟ್ಟಿದಾಳೆ ಬಿಡು’
ಕನ್ನಡ ಕಲಿಕೆಯ ಕ್ಲಾಸಿನ ನಾಂದಿಗೀತೆ ಹೇಗಿತ್ತು ಅನ್ನೋದನ್ನು ಹೇಳೋಕೆ ಪಾಮರರ ಯೋಗ್ಯತೆಯಾದರೂ ಏನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.