ಈಚೆಗೆ ಸರ್ಕಾರವು ಉರ್ದು ಸಾಹಿತ್ಯ ಅಕಾಡೆಮಿಯನ್ನು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯಿಂದ ಕಿತ್ತು, ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆಗೆ ಸೇರಿಸಿತು.
ಲೇಖಕರಾದ ಫಕೀರ್ ಮಹ್ಮದ್ ಕಟ್ಪಾಡಿಯವರು ಸೇರಿದಂತೆ ನಾವು ಕೆಲವರು, ಈ ಕ್ರಮ ಸರಿಯಲ್ಲವೆಂದು ಹೇಳಿದೆವು. ಆದರೆ ಅದು ಅಸರಾಗಲಿಲ್ಲ. ಇದಕ್ಕೆ ಉರ್ದು ಲೇಖಕರಿಂದ ಸಹ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಸರ್ಕಾರದ ಈ ಕ್ರಮ ಅವರಿಗಾದರೂ ಯಾವ ಕಾರಣಕ್ಕೆ ಸಮ್ಮತವೆನಿಸಿದೆಯೋ ತಿಳಿಯದು. ಬಹುಶಃ ಇದರಿಂದ ಅಕಾಡೆಮಿಗೆ ಹಿಂದಿಗಿಂತ ಹೆಚ್ಚು ಅನುದಾನ ಒದಗುತ್ತಿರಬಹುದು. ಆದರೆ ಸಾಂಸ್ಕೃತಿಕವಾಗಿ ನೋಡಿದರೆ, ಇದೊಂದು ಅಸೂಕ್ಷ್ಮವೂ ಅಸಾಹಿತ್ಯಕವೂ ಆದ ಕ್ರಮವಾಗಿದೆ. ತುಳು, ಕೊಡವ, ಕೊಂಕಣಿ ಸಾಹಿತ್ಯಕ್ಕೆ ಇಲ್ಲದ ಧಾರ್ಮಿಕ ಹಣೆಪಟ್ಟಿ ಉರ್ದು ಸಾಹಿತ್ಯಕ್ಕೇಕೆ ಬೇಕು?
ಭಾಷೆಗಳು ತಮ್ಮನ್ನಾಡುವ ಸಮುದಾಯಗಳ ಪಾಲಿಗೆ ಕೇವಲ ಅಭಿವ್ಯಕ್ತಿ ಮಾಧ್ಯಮ ಮಾತ್ರವಲ್ಲ; ಅವು ಸಂಸ್ಕೃತಿಯ ತಿರುಳನ್ನು ಧಾರಣೆ ಮಾಡಿ, ಮುಂದಣ ತಲೆಮಾರುಗಳಿಗೆ ದಾಟಿಸುವ ಕಾಯಕವನ್ನೂ ಮಾಡುತ್ತವೆ. ಈ ಕಾರಣದಿಂದ ಅವನ್ನು ಸಮುದಾಯಗಳ ಆಲೋಚನಾ ಕ್ರಮ, ಸಾಂಸ್ಕೃತಿಕ ವಿಶಿಷ್ಟತೆ, ಸೃಜನಶೀಲತೆ ಹಾಗೂ ಆಶೋತ್ತರಗಳ ಐಡೆಂಟಿಟಿ ಬಾವುಟಗಳೆನ್ನಬಹುದು.
ಆದರೆ ಭಾಷೆಗಳಿಗೆ ಸಾಂಸ್ಕೃತಿಕ ಅಸ್ಮಿತೆಯನ್ನು ಸಾರುವ ಬಾವುಟದ ಗುಣವಿರುವಂತೆಯೇ, ಸಹವಾಸಿ ಸಮುದಾಯಗಳ ನಡುವೆ ಸಂಬಂಧ ಬೆಳೆಸುವ ಬಳ್ಳಿಯ ಗುಣವೂ ಇದೆ.
ಬಾವುಟಕ್ಕೆ ಒಂಟಿಯಾಗಿ ನಿಂತು ತನ್ನ ಚಹರೆಯನ್ನು ಘೋಷಿಸುವ ಗುಣವಿದ್ದರೆ; ಬಳ್ಳಿಗೆ, ಬಾಗುವ ಬಳಕುವ, ಆಸರೆ ಸಿಕ್ಕರೆ ತನ್ನ ಕುಡಿಕಳಿಸಿ ತಬ್ಬಿಹಬ್ಬಿ ಬೆಳೆಯುವ, ಬೇಲಿಗಳನ್ನು ದಾಟುವ ಗುಣವಿದೆ.
ಭಾರತದಂತಹ ಬಹುಭಾಷಿಕ ಬಹುಧಾರ್ಮಿಕ ಬಹುಸಾಂಸ್ಕೃತಿಕ ದೇಶಗಳಲ್ಲಿ, ಭಾಷೆಗಳ ಈ ಬಳ್ಳಿಯ ಪಾತ್ರ ದೊಡ್ಡದು. ಭಾಷೆಯೊಂದು ತನ್ನ ಸಹಭಾಷೆಗಳ ಜತೆ ಬೆಳೆಸುವ ನಂಟು, ಶಬ್ದಗಳ ವಿನಿಮಯಕ್ಕೆ ಸೀಮಿತವಾಗಿರುವುದಿಲ್ಲ. ಅದು ಸಾಂಸ್ಕೃತಿಕ ವಿನಿಮಯವೂ ಆಗಿ ಚಾಚನ್ನು ಪಡೆಯುತ್ತದೆ. ಸಮುದಾಯಗಳ ನಡುವೆ ಮತಧರ್ಮಗಳ ಹೆಸರಲ್ಲಿ ಬಿರುಕು ಹುಟ್ಟಿಸುವ ಶಕ್ತಿಗಳು ನಿರತವಾಗಿರುವ ಸಮಾಜದಲ್ಲಿ, ಸಾಂಸ್ಕೃತಿಕ ವಿನಿಮಯದ ಈ ಚಾಚು ಮಹತ್ವದ್ದು.
ಅಕಾಡೆಮಿಯನ್ನು ಕನ್ನಡ ಸಂಸ್ಕೃತಿ ಇಲಾಖೆಯಿಂದ ಬೇರ್ಪಡಿಸಿರುವುದು ಆಡಳಿತಾತ್ಮಕವಾದ ಸಣ್ಣಸಂಗತಿ ಎನಿಸಬಹುದು. ಆದರೆ, ಅದರ ಹಿಂದಿನ ಚಿಂತನೆ- ಭಾಷೆ, ಸಮುದಾಯ, ಸಾಹಿತ್ಯ, ಸಂಸ್ಕೃತಿ, ಧರ್ಮಗಳ ನಡುವೆ ಇರುವ ಸೂಕ್ಷ್ಮ ಒಳಸಂಬಂಧಗಳ ದೃಷ್ಟಿಯಿಂದ- ಘಾತಕವಾದುದು.
ಉರ್ದುವಿನ ಹೆಸರಲ್ಲಿ ನಡೆದ ಕೆಲವು ವಿದ್ಯಮಾನಗಳನ್ನು ನೆನಪಿಸಿಕೊಂಡರೆ, ಮೇಲಿನ ಮಾತು ನಿಚ್ಚಳವಾಗಬಹುದು. ಹೈಸ್ಕೂಲ್ ಪಠ್ಯಕ್ರಮದಲ್ಲಿ ಸಂಸ್ಕೃತದ ಸ್ಥಾನಮಾನ ನಿರ್ಧರಿಸಲು ನೇಮಕವಾದ ಗೋಕಾಕ ಸಮಿತಿ, ಪ್ರಥಮ ಭಾಷೆಯ ಸ್ಥಾನದಲ್ಲಿ ಕನ್ನಡದ ಸ್ಥಾನ ಸ್ಥಾಪಿಸುವ ವರದಿಯೊಂದಿಗೆ ಹೊರಬಂತಷ್ಟೇ.
ಮೈಸೂರಿನಲ್ಲಿ ಕನ್ನಡ ಎಂಎ ಓದುತ್ತಿದ್ದ ನಾವೆಲ್ಲ (1982) ಈ ವರದಿ ಜಾರಿಯಾಗಬೇಕೆಂದು ಚಳವಳಿಯಲ್ಲಿ ಭಾಗವಹಿಸಿದೆವು; ಜೈಲಿಗೂ ಹೋದೆವು. ಆದರೆ ಚಳವಳಿಯಲ್ಲಿ ನುಸುಳಿಕೊಂಡಿದ್ದ ಕೆಲವರು ಕನ್ನಡ ಪರವಾದ ಈ ಹಕ್ಕೊತ್ತಾಯವನ್ನು ಉರ್ದುವಿನ ವಿರುದ್ಧ ತಿರುಗಿಸಲು ಯತ್ನಿಸುತ್ತಿದ್ದರು.
ಹೀಗಾಗಿ ಮುಸ್ಲಿಮರು ಹೇಗೆ ಕನ್ನಡ ವಿರೋಧಿಗಳು ಎಂದೆಲ್ಲ ಚರ್ಚೆಯಾಗುತ್ತಿತ್ತು. ಹೀಗೆ ಚರ್ಚಿಸುವವರು ಕನ್ನಡ ಬಳಸದ ಅಜೀಜ್ ಸೇಟರನ್ನೇ ಉಲ್ಲೇಖಿಸುತ್ತಿದ್ದರು; ನಜೀರ್ ಸಾಬರನ್ನಲ್ಲ. ಕೆಲವರು `ಕನ್ನಡ ಮಾತಾಡದಿದ್ದರೆ ಸೇಟರು ದೇಶಬಿಟ್ಟು ಹೋಗಬೇಕು~ ಎಂದೂ ಹೇಳಿದ್ದರು. ಉರ್ದು ಮನೆಮಾತಿನ ಆದರೆ ಕನ್ನಡ ಮಾತಾಡುವ ಜನರ ಜತೆ ಗಾಢ ಸಂಬಂಧಗಳಿದ್ದ ಕುಟುಂಬದಿಂದ ಬಂದ ನನಗೆ, ಇದೆಲ್ಲ ವಿಚಿತ್ರವಾಗಿ ಕಾಣುತ್ತಿತ್ತು.
`ಮುಸ್ಲಿಮರು ಕನ್ನಡ ಕಲಿಯುವುದಿಲ್ಲ~ ಎಂಬ ಈ ಅರೆಸತ್ಯದ ಗ್ರಹಿಕೆಯು ಈಗಲೂ ಪ್ರಚಲಿತದಲ್ಲಿದೆ. (ಇದು ತಮಿಳರ ಮೇಲೂ ಇದ್ದು, ಹಲ್ಲೆಗಳಿಗೆ ಕಾರಣವಾಗಿದೆಯಷ್ಟೇ).
ಇದಕ್ಕೆ ತಕ್ಕಂತೆ ಕನ್ನಡ ಬಳಸದ, ಸಾರ್ವಜನಿಕ ಬದುಕಿಗೆ ಹೊರಗಾಗಿ ಮನೆಯಲ್ಲೇ ಇರಬೇಕಾದ ಮಹಿಳೆಯರು ಮತ್ತು ಎಲೈಟ್ ಕುಟುಂಬದ ಇಂಗ್ಲಿಷ್ ಮಾತಾಡುವ ಮಧ್ಯಮವರ್ಗದ ಕೆಲವರುಂಟು. ಆದರೆ ಕರ್ನಾಟಕದ ಬಹುಸಂಖ್ಯಾತ ಮುಸ್ಲಿಮರಿಗೆ, ಅದರಲ್ಲೂ ರೈತಾಪಿ ಮತ್ತು ದುಡಿವ ವರ್ಗದವರಿಗೆ, ಸಾರ್ವಜನಿಕ ಸಂಪರ್ಕವು ಅವರ ನಿತ್ಯಬದುಕಿನ ಭಾಗವಾಗಿದ್ದು, ಪರಿಸರದ ಭಾಷೆಯಾದ ಕನ್ನಡವು ಸಹಜವಾಗಿ ದಕ್ಕಿಹೋಗಿದೆ.
ಹಾಗೆ ಕಂಡರೆ, ಕರ್ನಾಟಕದ ಎಷ್ಟೋ ಮುಸ್ಲಿಮರ ಮನೆಮಾತು ಉರ್ದುವಲ್ಲ. ಭಟ್ಕಳದ ನವಾಯತರದು ಕೊಂಕಣಿ; ಕರಾವಳಿ ಮುಸ್ಲಿಮರದು ಬ್ಯಾರಿ ಅಥವಾ ಮಲೆಯಾಳ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಬಹುತೇಕ ಮುಸ್ಲಿಮರಿಗೆ ಉರ್ದು ಬಾರದು. ವಿಶೇಷವೆಂದರೆ, ಪಿಂಜಾರ ಮುಸ್ಲಿಮರ ಮನೆಮಾತು ಕನ್ನಡವಾದರೆ, ಮುಸ್ಲಿಮರಲ್ಲದ ಕಲಾಲರ (ಕಾಟಿಗರ) ಮನೆಮಾತು ಉರ್ದು.
ವಾಸ್ತವವು ಹೀಗೆ ಬಹುಮುಖಿಯಾಗಿದ್ದರೂ, ಉರ್ದುವನ್ನು ಮುಸ್ಲಿಮರ ಭಾಷೆಯೆಂದೇ ಬಿಂಬಿಸಲಾಗುತ್ತಿದೆ. ಹಿಂದಿ ಸಿನಿಮಾಗಳಲ್ಲಿ ದಕ್ಷಿಣ ಭಾರತೀಯರನ್ನು `ಮದರಾಸಿ~ಗಳೆಂದು ವ್ಯಂಗ್ಯವಾಗಿ ಚಿತ್ರಿಸುವಂತೆ, ಕನ್ನಡ ಸಿನಿಮಾಗಳಲ್ಲಿ ಮುಸ್ಲಿಮರನ್ನು ಚಿತ್ರಿಸಲಾಗುತ್ತದೆ; ಆ ಪಾತ್ರಗಳ ಮೂಲಕ `ನಮ್ದೂಕೆ ಬೀವಿ ಒಳ್ಳೇ ಬಿರಿಯಾನಿ ಮಾಡ್ತಾರೆ~ ಎಂಬ ಕೃತಕವಾದ ಉರ್ದುಗನ್ನಡ ಮಾತಾಡಿಸಲಾಗುತ್ತದೆ.
ಕೆಲವು ಕಂಪನಿ ನಾಟಕಗಳಲ್ಲಿಯೂ, ಗೊರೂರರ ಹಳ್ಳಿಯ ಚಿತ್ರಗಳಲ್ಲೂ, ಕೈಲಾಸಂ ನಾಟಕಗಳಲ್ಲೂ ಇಂತಹ ಪಾತ್ರಗಳಿವೆ. ಈ ಸಿನಿಮಾ ಮಾಡಿದವರು ಮತ್ತು ಸಾಹಿತ್ಯ ಬರೆದವರು ಹಳೇಮೈಸೂರು ಭಾಗದವರು ಎಂಬುದು ಗಮನಾರ್ಹ.
ಇಂತಹ ಸ್ಟೀರಿಯೊಟೈಪ್ ಪಾತ್ರಗಳನ್ನು ಉತ್ತರ ಕರ್ನಾಟಕದ ಲೇಖಕರು ಚಿತ್ರಿಸಲು ಸಾಧ್ಯವೇ ಇಲ್ಲ. ಇಂತಹ ಜನಪ್ರಿಯ ಗ್ರಹಿಕೆಗಳೇ ಉರ್ದು ಅಕಾಡೆಮಿಯನ್ನು ಅಲ್ಪಸಂಖ್ಯಾತ ಇಲಾಖೆಯೊಳಗೆ ಸೇರಿಸಿದಾಗ, `ಕಟ್ಟೆಯ ಕಲ್ಲು ಕಟ್ಟೆಗೆ ಸೇರಿತು~ ಎನ್ನಿಸಲು ಕಾರಣವಾಗಿರಬೇಕು.
ಭಾಷೆಯನ್ನು ಧಾರ್ಮಿಕ ಸಮುದಾಯಕ್ಕೆ ಲಗತ್ತಿಸಿ ನೋಡುವ ಅಡ್ಡ ಪರಿಣಾಮಗಳು ದಾರುಣವಾಗಿರಬಲ್ಲವು. ದೂರದರ್ಶನದಲ್ಲಿ ಉರ್ದುವಾರ್ತೆ ಪ್ರಸಾರ ಮಾಡುವುದರ ವಿರುದ್ಧ ಹುಟ್ಟಿದ ಕೋಮು ಗಲಭೆಗಳಲ್ಲಿ ನಡೆದ ಒಂದು ಪ್ರಕರಣ ಇದಕ್ಕೆ ಸಾಕ್ಷಿ.
ಡಾ.ದ್ವಾರಕಾನಾಥ್ ಅವರು ವರದಿ ಮಾಡಿದಂತೆ, ಆಗ ಕೋಲಾರದಲ್ಲಿ ಉರ್ದು ಭಾಷಿಕನೊಬ್ಬನ್ನು `ಮುಗಿಸಲು~ ಒಬ್ಬ ಕತ್ತಲು ಮುಸುಕಿದ ಮೈದಾನದಲ್ಲಿ ಕಾದಿದ್ದನು; ಅಷ್ಟರಲ್ಲಿ ಒಬ್ಬ ತರುಣ ಮೈದಾನದೊಳಗೆ ಹಾದು ಬಂದನು. ಅವನ ಹಿನ್ನೆಲೆ ತಿಳಿಯಲು ಚಾಕು ಹಿಡಿದವನು `ಕ್ಯಾರೇರೇ~ ಎಂದು ಕೇಳಿದನು; ಆ ತರುಣ `ಕ್ಯಾಬಿನೈ ರೇ~ ಎಂದುತ್ತರಿಸಿದನು. ಕೂಡಲೆ ಅವನೆದೆಗೆ ಚಾಕು ಇಳಿಯಿತು.
ವಾಸ್ತವದಲ್ಲಿ ಜೀವಕಳೆದುಕೊಂಡ ತರುಣ ಒಬ್ಬ ಬ್ರಾಹ್ಮಣರ ಹುಡುಗನಾಗಿದ್ದನು. ಆದರೆ ಅವನಾಡಿದ ಭಾಷೆಯೇ ಅವನಿಗೆ ಮುಳುವಾಯಿತು. ಮಾತು ಹುಟ್ಟಲು ದೇಹದೊಳಗಿನ ಉಸಿರನ್ನು ಕ್ರಮಬದ್ಧವಾಗಿ ಹೊರಬಿಡಬೇಕು. ಆದರೆ ಇಲ್ಲಿ ಆಡಿದ ಮಾತು ದೇಹದೊಳಗಿದ್ದ ಕೊನೆಯುಸಿರನ್ನು ತೆಗೆದುಬಿಟ್ಟಿತು. `ಭಾಷೆಯೆಂಬುದು ಪ್ರಾಣಘಾತಕ~ -ಇದು ಅಲ್ಲಮನ ಹೇಳಿಕೆ. ಇದನ್ನು ನಮ್ಮ ಕಾಲ ಬೇರೆ ಅರ್ಥದಲ್ಲಿ ರುಜುವಾತು ಮಾಡಿಬಿಟ್ಟಿತು!
25 ವರ್ಷದ ಹಿಂದೆ ಇರಬೇಕು, ಕರ್ನಾಟಕದ ಉರ್ದು ಮತ್ತು ಕನ್ನಡ ಲೇಖಕರು ಒಟ್ಟಿಗೆ ಕೂಡಿ, ಪರಸ್ಪರರ ಸಾಹಿತ್ಯವನ್ನು ಅಂಗ್ರೇಜಿಯ ಮಧ್ಯಸ್ಥಿಕೆಯಿಲ್ಲದೆ ನೇರವಾಗಿ ತರ್ಜುಮೆ ಮಾಡಿಕೊಳ್ಳಬೇಕು ಎಂದು ಒಂದು ಯತ್ನ ನಡೆಯಿತು. ಅದರಲ್ಲಿದ್ದ ಮುದ್ದಣ್ಣ, ಶಾಂತರಸ ಮುಂತಾದ ಉರ್ದು ವಿದ್ವಾಂಸರನ್ನು ನೋಡಿ ನನಗೆ ವಿಸ್ಮಯವಾಯಿತು.
ರಾಯಚೂರಿನ ಮುದ್ದಣ್ಣನವರಂತೂ `ಮಂಜರ್~ ಎಂಬ ಕಾವ್ಯನಾಮದಲ್ಲಿ ಉರ್ದುವಿನಲ್ಲೇ ಬರೆಯುತ್ತಿದ್ದವರು. ಭಾರತ ಮಟ್ಟದಲ್ಲಿಯೂ ಇದೇ ಹಕೀಕತ್ತಿದೆ.
ಉರ್ದುವಿನಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು, ರಘುಪತಿ ಫಿರಾಕ್ ಗೋರಖಪುರಿ; ಗೋಪಿಚಂದ್ ನಾರಂಗ್ ಉರ್ದುವಿನ ದೊಡ್ಡ ವಿದ್ವಾಂಸರು. ಈಚೆಗೆ ನಾನು ಭೇಟಿಮಾಡಿದ- ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಉರ್ದುವಿಗಾಗಿ ಪಡೆದ- ಜೋಧಪುರದ `ಶೀನ್‌ಕಾಫ್ ನಿಜಾಂ~ ಕೂಡ ಮುಸ್ಲಿಮರಲ್ಲ.
ಲೇಖಕರು ತಮ್ಮ ಬರಹದ ಅನುಭವವನ್ನು ಹಂಚಿಕೊಳ್ಳುವ `ರೈಟರ್ಸ್ ಮೀಟ್~ ಸಭೆಯಲ್ಲಿ ಮಾತಾಡುತ್ತ ನಿಜಾಂ ಹೇಳಿದ ಒಂದು ಸಂಗತಿ, ಎಲ್ಲರನ್ನೂ ಕಲಕಿತು. ಅದೆಂದರೆ, ರಾಜಸ್ತಾನದ ಕೆಲವು ಲೇಖಕರು `ಮುಸ್ಲಿಮರಲ್ಲದ ನೀವು ಹೇಗೆ ತಾನೇ ಉರ್ದುವಿನಲ್ಲಿ ಸಾಹಿತ್ಯ ರಚಿಸಬಲ್ಲಿರಿ?~ ಎಂದು ಕೆಣಕುತ್ತಿದ್ದರಂತೆ. ಇದುವೇ ಛಲವಾಗಿ, ಉರ್ದುವಿನಲ್ಲಿ ಸಾಹಿತ್ಯ ರಚಿಸಲು ತಮಗೆ ಪ್ರಚೋದನೆ ಕೊಟ್ಟಿತು ಎಂದು ನಿಜಾಂ ಹೇಳಿದರು.
ನಾನು ಬೆಂಗಳೂರು ವಾಸಿಯಾಗಿರುವ ಉರ್ದುಕವಿ ಹಾಗೂ ಖವಾಲರಾದ ಶ್ರೀ ಪಾವಾಜಿ ಅವರನ್ನು ಈಚೆಗೆ ಭೇಟಿ ಮಾಡಿದೆ. ಅವರೂ ಮುಸ್ಲಿಮರೇನಲ್ಲ. ಭಾಷೆಯನ್ನು ಸಮುದಾಯಕ್ಕೆ ಸೀಮಿತಗೊಳಿಸುತ್ತಾ ಹೋದರೆ, ಹೊಸ ಸಾಧ್ಯತೆಗಳೇ ಇಲ್ಲವಾಗಿಬಿಡುತ್ತವೆ.
ಉರ್ದುವನ್ನು ಮುಸ್ಲಿಮರ ಜತೆಗೆ ಸಮೀಕರಿಸಿ ನೋಡುವ ಪ್ರಕ್ರಿಯೆ, ಚಾರಿತ್ರಿಕವಾಗಿ ದೇಶ ವಿಭಜನೆಯ ಘಟ್ಟದಿಂದಲೇ ಶುರುವಾಗಿಬಿಟ್ಟಿತು. ಉರ್ದು ಲೇಖಕರಾದ ಕೃಷ್ಣಚಂದರ ಮೇಲೆ `ನೀವು ಇನ್ನು ಮುಂದೆ ಹಿಂದಿಯಲ್ಲಿ ಬರೆಯಬೇಕು~ ಎಂದು ಒತ್ತಡ ಹಾಕಲಾಯಿತು;
1947ರ ಬಳಿಕ ಉರ್ದುವಿನಲ್ಲಿ ಬರೆಯುತ್ತಿದ್ದ ಅನೇಕ ಲೇಖಕರು ತಮ್ಮ ಲಿಪಿಯನ್ನು ದೇವನಾಗರಿಗೆ ಬದಲಾಯಿಸಿಕೊಂಡರು. ಭಾಷಾವಿಜ್ಞಾನದ ಪ್ರಕಾರ, ಉರ್ದು-ಹಿಂದಿ ವಿಭಿನ್ನ ಭಾಷೆಗಳೇ ಅಲ್ಲ. ಅವುಗಳು ವಿಭಿನ್ನ ಲಿಪಿ ಬಳಸುತ್ತಿರುವುದರಿಂದಲೂ, ಅವುಗಳಲ್ಲಿ ಫಾರಸಿ ಮತ್ತು ಸಂಸ್ಕೃತ ಭಾಷೆಯ ಶಬ್ದಗಳು ಹೆಚ್ಚಿರುವ ಕಾರಣದಿಂದಲೂ, `ಬೇರೆ~ಯೆಂದು ಭಾಸವಾಗುತ್ತದೆ ಅಷ್ಟೆ. ಪದ ಮತ್ತು ವಾಕ್ಯರಚನಾ ವಿಧಾನದಲ್ಲಿ ಅವು ಒಂದೇ ಪಾತಳಿಗೆ ಸೇರಿದವು.
ಆದರೂ ಉರ್ದು ವಿದೇಶದಿಂದ ಬಂದ ಭಾಷೆ ಎಂಬ ಗ್ರಹಿಕೆ, ಅಕ್ಷರಸ್ಥರಲ್ಲೂ ಇದ್ದಂತಿದೆ. ನಾನು ಬರೋಡಾದಲ್ಲಿ ಸುಪ್ರಸಿದ್ಧ ಚಿತ್ರಕಲಾವಿದರೂ ಗುಜರಾತಿ ಕವಿಯೂ ಆದ ಗುಲಾಂ ಮಹಮ್ಮದ್ ಶೇಕ್ ಅವರನ್ನು ಭೇಟಿಮಾಡಿದಾಗ, ಉರ್ದುವಿನಲ್ಲಿ ಮಾತು ಆರಂಭಿಸಿದೆ. ಅವರು ತಮ್ಮ ಮನೆಮಾತು ಗುಜರಾತಿಯೆಂದೂ ತಮಗೆ ಉರ್ದು ಬರುವುದಿಲ್ಲವೆಂದೂ ಹೇಳಿದರು.
ಉರ್ದು, ಭಾರತದ ಉಪಖಂಡದಲ್ಲೇ ಹುಟ್ಟಿದ ಮತ್ತು ಇಲ್ಲಿ ಮಾತ್ರ ಇರುವ ಜನಭಾಷೆ ಮತ್ತು ಒಮ್ಮೆ ಭಾರತದ ಭಾಗವಾಗಿದ್ದು ಈಗ ಬೇರೆಯಾಗಿರುವ ಪಾಕಿಸ್ತಾನದಲ್ಲಿ ಅದಿದೆ, ದಿಟ. ಆದರೆ ಅದು ಇಡೀ ಭಾರತದ ಮುಸ್ಲಿಮರ ಭಾಷೆಯೇನಲ್ಲ.
ರಾಜಸ್ತಾನ, ಗುಜರಾತು, ತಮಿಳುನಾಡು, ಕೇರಳ, ಬಂಗಾಳ, ಅಸ್ಸಾಂ ರಾಜ್ಯಗಳಲ್ಲಿ ಮುಸ್ಲಿಮರ ಮನೆಮಾತು ಉರ್ದುವಲ್ಲ. ಬಾಂಗ್ಲಾದೇಶದಲ್ಲಿ ಉರ್ದು ಇಲ್ಲ. ದೇಶ ವಿಮೋಚನೆಯ ಹೋರಾಟದಲ್ಲಿ ಬಾಂಗ್ಲಾದೇಶಿಗರಿಗೆ `ಬಂಗಾಳಿಗಳಾದ ನಮ್ಮ ಮೇಲೆ ಪಾಕಿಸ್ತಾನವು ಉರ್ದು ಹೇರುತ್ತಿದೆ~ ಎನ್ನುವುದು ಪ್ರಮುಖವಾದ ಕಾರಣವಾಗಿತ್ತು.
ಒಂದು ಧರ್ಮವು ದೇಶವನ್ನು ಒಟ್ಟಿಗೆ ಹಿಡಿದಿಡಲಾರದು; ಆದರೆ ಭಾಷೆ ದೇಶವೊಂದು ಸ್ವತಂತ್ರವಾಗಲು ಪ್ರೇರಣೆ ನೀಡಬಲ್ಲದು. ಈಗಲೂ ಬಾಂಗ್ಲಾದೇಶದ ರಾಷ್ಟ್ರಗೀತೆ `ಅಮರ್ ಸೋನಾರ್ ಬಾಂಗ್ಲಾ~ ರವೀಂದ್ರರು ಬರೆದಿದ್ದು.
ಕೊಲಕತ್ತೆಯ ಬುಕ್‌ಫೇರಿಗೆ ಬಂದಿದ್ದ ಬಾಂಗ್ಲಾದೇಶದ ಪುಸ್ತಕದಂಗಡಿಯಲ್ಲಿ, ನನಗೆ ಕಂಡಿದ್ದೆಲ್ಲ ಬಂಗಾಳಿ ಪುಸ್ತಕಗಳೇ; ಅದರಲ್ಲೂ ಹೆಚ್ಚಿನವು ರವೀಂದ್ರರಿಗೆ ಸಂಬಂಧಿಸಿದ್ದವು. ದೇಶ ತುಂಡಾದರೂ, ಬಂಗಾಳಿ ಭಾಷಿಕ ಸಂಸ್ಕೃತಿಯ ಎಳೆಗಳು ಹರಿದಿಲ್ಲ. ಹರಿದರೂ ಹಬ್ಬುವ ಭಾಷೆಯ ಬಳ್ಳಿಗುಣವಿದು.
ಮೊಗಲರು, ಬಹಮನಿಗಳು, ಆದಿಲಶಾಹಿಗಳು ಆಳ್ವಿಕೆ ಮಾಡುವಾಗ, ಅವರ ರಾಜಧಾನಿ ನಗರಗಳಲ್ಲಿ ಬೇರೆಬೇರೆ ಭಾಷೆಯನ್ನಾಡುವ ಜನ, ವ್ಯಾಪಾರ, ಸೈನಿಕಸೇವೆ, ಇನ್ನಿತರ ನೌಕರಿಗಳಿಗೆಂದು ಬಂದು ಸೇರಿಕೊಂಡರು. ಹೀಗೆ ಸೇರಿದ ಜನ, ತಂತಮ್ಮ ಭಾಷೆಗಳನ್ನು ಬೆರೆಸುತ್ತ ತಮಗೊಂದು ಸಾಮಾನ್ಯ ಸಂಪರ್ಕ ಭಾಷೆಯನ್ನು ಸೃಷ್ಟಿಸಿಕೊಂಡರು. ಅದುವೇ ಉರ್ದು.
ಹೀಗಾಗಿಯೇ ಉರ್ದು ಹುಟ್ಟಿನಲ್ಲಿ ಕರ್ನಾಟಕದ ಗುಲಬರ್ಗ, ಬೀದರ, ಬಿಜಾಪುರಗಳ ಪಾಲಿದೆ. ಇವು ಈಗಲೂ ಉರ್ದು ಭಾಷಿಕರ ಕೇಂದ್ರಗಳಾಗಿವೆ. ಆದರೆ ಈ ನಗರಗಳಾಚೆ ಇರುವ ಗ್ರಾಮೀಣ ಮುಸ್ಲಿಮರ ಮನೆಮಾತು ಮಾತ್ರ ಕನ್ನಡ. ಬಿಜಾಪುರಕ್ಕೆ ಸಮೀಪವಿರುವ ಗೊಳಸಂಗಿಯಲ್ಲಿ ಇದನ್ನು ನಾನು ಕಂಡುಕೊಂಡೆ.
ಹೈದರಾಬಾದ್ ನಿಜಾಮರ ಆಡಳಿತ ಭಾಷೆ ಉರ್ದುವಾಗಿದ್ದಾಗಲೂ, ಹೈದರಾಬಾದ್ ಕರ್ನಾಟಕದ ಬಹಳಷ್ಟು ಗ್ರಾಮೀಣ ಮುಸ್ಲಿಮರ ಮನೆ ಮಾತು ಕನ್ನಡವಾಗಿಯೇ ಉಳಿಯಿತು. ಆದರೆ ಇದೇ ಹೊತ್ತಲ್ಲಿ ಈ ಸೀಮೆಯ ಎಲ್ಲ ಉಚ್ಚವರ್ಗದವರು, ಧರ್ಮಾತೀತವಾಗಿ ರಾಜಭಾಷೆಯಾದ ಉರ್ದುವನ್ನು ಕಲಿತು ಲೌಕಿಕ ಪ್ರಯೋಜನ ಪಡೆದರು.
ನಾನೊಮ್ಮೆ ಗುಲಬರ್ಗದಲ್ಲಿ ಬಸವಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ನನ್ನ ಪಕ್ಕ ಕುಳಿತಿದ್ದ ಭೀಮಣ್ಣ ಖಂಡ್ರೆಯವರು, ಭಾಷಣದ ಟಿಪ್ಪಣಿಗಳನ್ನು ಉರ್ದು ಲಿಪಿಯಲ್ಲೇ ಮಾಡಿಕೊಳ್ಳುತ್ತಿದ್ದರು.
ಉರ್ದು, ಧರ್ಮಾತೀತವಾಗಿ ಹಲವು ಭಾಷೆಗಳ ಮಿಲನದಿಂದ ಹುಟ್ಟಿದರೂ, ನಂತರ ಮುಸ್ಲಿಮರ ಭಾಷೆಯೆಂಬ ಹಣೆಪಟ್ಟಿ ಪಡೆಯುತ್ತಾ ಹೋಯಿತು. ಆದರೂ ಧರ್ಮಾತೀತವಾಗಿ ಅದರ ಬಳಕೆಯ ಅವಕಾಶಗಳು ನಿಂತಿಲ್ಲ. ಈಗಲೂ ಬಹುತೇಕ `ಹಿಂದಿ~ ಸಿನಿಮಾ ಹಾಡುಗಳ ಭಾಷೆ ಉರ್ದು. ರಸಿಕರು ಧ್ವನಿರೂಪದಲ್ಲಿ ಅವುಗಳ ಕೇಳಿಕೆ-ಹಾಡಿಕೆ ಮಾಡುವುದರಿಂದ, ಅವರಿಗದು ಉರ್ದುವೆಂದು ಗೊತ್ತಾಗುವುದಿಲ್ಲ.
ಸಿನಿಮಾಗೀತೆ ಬರೆಯುತ್ತಿರುವ ಉರ್ದುಕವಿ `ಗುಲ್ಜಾರ್~ ಅವರ ಹೆಸರು ಸಂಪೂರ್ಣಸಿಂಗ್ ಎಂಬುದನ್ನೂ ಅವರು ಪತ್ತೆ ಮಾಡಲು ಹೋಗುವುದಿಲ್ಲ. ಇಲ್ಲಿಯೇ ತಮ್ಮ ಉರ್ದು ಕವಿತೆಗಳನ್ನು ನನಗೆ ಕಳಿಸಿ ಓದಿಸುತ್ತಿರುವ ಮಿತ್ರರಾದ ಕುಂದಾಪುರದ ಶಶಿಧರ ಹೆಮ್ಮೋಡಿ ಹಾಗೂ ಉಡುಪಿಯ ಸಂವರ್ತ ನೆನಪಾಗುತ್ತಿದ್ದಾರೆ. ಇವರಿಗೆ ಉರ್ದು ಲಿಪಿ ಗೊತ್ತಿಲ್ಲ. ಆದರೆ ಉರ್ದು ಅವರ ಅಭಿವ್ಯಕ್ತಿಯ ಭಾಷೆಯಾಗಿದೆ.
ಭಾಷೆಯನ್ನು ಧರ್ಮದ ಜತೆ ಸಮೀಕರಿಸದಿದ್ದರೆ ಇಂತಹ ಸಾಧ್ಯತೆಗಳು ಇರುತ್ತವೆ.
ಭಾಷೆಯನ್ನು ಧರ್ಮಕ್ಕೆ ಲಗತ್ತಿಸಿ ನೋಡುವ ಗೀಳು, ಉರ್ದು ವಿಷಯದಲ್ಲಿ ಮಾತ್ರವಲ್ಲ ಕನ್ನಡದ ವಿಷಯದಲ್ಲಿ ಇದೆ. ಶಿವಮೊಗ್ಗೆಯಲ್ಲಿ ಕಾಲೇಜು ಓದುವಾಗ ಉರ್ದು ವಿದ್ಯಾರ್ಥಿಗಳು, ಕನ್ನಡ ತರಗತಿಗಳಲ್ಲಿರುತ್ತಿದ್ದ ನನ್ನನ್ನು ಪರಕೀಯನಂತೆ ನೋಡುತ್ತಿದ್ದರು.
ನಾನು ಮೈಸೂರಿಗೆ ಮುಸ್ಲಿಂ ಹಾಸ್ಟೆಲ್ ಸೇರಲು ಹೋದಾಗ, ಅದರ ವಾರ್ಡನ್ ವಿಸ್ಮಯದಿಂದ `ನೀನು ಮುಸ್ಲಿಮನೇ?~ ಎಂದು ಬಹುಬಗೆಯಲ್ಲಿ ಪರೀಕ್ಷಿಸಿದರು. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಕೆಲಸ ಮಾಡುವುದು ಧರ್ಮ ವಿರುದ್ಧವಾದ ಕೆಲಸವೇನಲ್ಲ ಎಂದು ಅವರಿಗೆ ನಂತರ ಮನವರಿಕೆ ಆಗಿರಬೇಕು- ನನ್ನನ್ನು ಹೊತ್ತು ಮೆರೆಸಿದರು- ಅದು ಬೇರೆಮಾತು.
ನನ್ನ ತಲೆಮಾರಿಗೇ ಈ ಸ್ಥಿತಿಯಿತ್ತು. ಇನ್ನು ಹಿರಿಯ ತಲೆಮಾರಿಗೆ ಸೇರಿದ ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅನುಭವ ಹೇಗಿದೆಯೊ? ಕನ್ನಡದಲ್ಲಿ ಬರೆಯುವ ಮುಸ್ಲಿಮರಿಗೆ `ನಿಮ್ಮಳಗಿದ್ದೂ ನಿಮ್ಮಂತಾಗದ~ ಕಷ್ಟವು, ಅವರದೇ ಧಾರ್ಮಿಕ ಸಮುದಾಯದೊಳಗೂ ಅನುಭವಕ್ಕೆ ಬರುವಂತಹದ್ದಾಗಿದೆ.
ಉರ್ದು ಅಥವಾ ಬ್ಯಾರಿ ಮನೆಮಾತಿನ `ಮುಸ್ಲಿಂ~ ಲೇಖಕರು, ಕನ್ನಡದಲ್ಲಿ ಬರೆಯುತ್ತಿರುವುದರಿಂದಲೇ ಅವರಿಗೆ ವಿಶೇಷ ಮನ್ನಣೆ ಸಿಗುತ್ತಿದೆಯೇನು? ಉರ್ದು, ಮುಸ್ಲಿಂ ಇಸ್ಲಾಂ ಚಹರೆಗಳಿಗೆ ದೂರವಾಗಿ ಬದುಕುವುದು `ಸೆಕ್ಯುಲರ್~ ಮುಸ್ಲಿಮನಾಗುವ ಲಕ್ಷಣವೆಂಬ ಗ್ರಹಿಕೆ ನಮ್ಮ ಸುತ್ತ ಠಳಾಯಿಸುತ್ತಿದೆಯೇನು? ಎಂಬ ಶಂಕೆ ಒಮ್ಮಮ್ಮೆ ಬಂದು, ಗಾಬರಿಯೂ ಆಗುತ್ತದೆ.
ಕನ್ನಡ ಸಾಹಿತ್ಯದಲ್ಲಿ ಕೆಲಸ ಮಾಡುತ್ತಿರುವ ಕೊಂಕಣಿ, ತಮಿಳು, ತೆಲುಗು, ಮರಾಠಿ ಮನೆಮಾತಿನ ಕನ್ನಡ ಲೇಖಕರಿಗಿಲ್ಲದ ಚರಿತ್ರೆಯ ಈ ಭಾರ, ಉರ್ದು ಭಾಷಿಕರ ಮೇಲೆಯೇ ಯಾಕಿದೆ? ಯಾವುದೇ ಭಾಷೆಯನ್ನು ಮಾತು ಮತ್ತು ಬರಹದಲ್ಲಿ ಬಳಸುವುದಕ್ಕೆ ಧಾರ್ಮಿಕ ಹಿನ್ನೆಲೆ ಚೋದಕವೂ ತೊಡಕೂ ಆಗಬಾರದು. ಅದನ್ನು ಸಮಸ್ತರ ಸೊತ್ತಾಗಿದ್ದರೆ, ಅದಕ್ಕಿರುವ ಧ್ವಜದ ಸೊಕ್ಕು ಕಡಿಮೆಗೊಂಡು ಬಳ್ಳಿಯ ನಮ್ರತೆ ಹೆಚ್ಚುತ್ತದೆ.
ಉರ್ದು ಮುಸ್ಲಿಮರ ಜತೆಗೆ ಸಮೀಕರಣಗೊಳ್ಳುವುದಕ್ಕೆ ಹಲವು ಚಾರಿತ್ರಿಕ ಕಾರಣಗಳಿವೆ, ನಿಜ. ಆದರೆ ಅದರ ಅಡ್ಡಫಲಿತಗಳು ಮಾತ್ರ ವಿಭಜಕವಾಗಿವೆ. ಭಾಷೆ ಮತ್ತು ಧರ್ಮದ ಸಮೀಕರಣಗಳು ಸಮುದಾಯ ಭಾಷೆ ಧರ್ಮ ಮತ್ತು ಸಂಸ್ಕೃತಿಗಳನ್ನು ನಡುಗಡ್ಡೆಗಳಾಗಿಸುತ್ತದೆ. ಕನ್ನಡ ಶಾಲೆಗಳಲ್ಲಿ ಹೆಚ್ಚಾಗಿ ಕಾಣದ ಟಿಪ್ಪುವಿನ ಚಿತ್ರ, ಉರ್ದು ಶಾಲೆಗಳಲ್ಲಿ ಕಡ್ಡಾಯವಾಗಿ ಕಾಣುವುದನ್ನು ಗಮನಿಸಿ.
ಟಿಪ್ಪು ಹುಟ್ಟಿನಿಂದ ಮುಸ್ಲಿಮನಾಗಿರಬಹುದು; ಅವನ ಮನೆಮಾತು ಉರ್ದುವಿರಬಹುದು. ಆದರೆ ಅವನೊಬ್ಬ ಕನ್ನಡಿಗನಲ್ಲವೇ? ಅವನು ಶೃಂಗೇರಿ ಮಠಕ್ಕೆ ಬರೆದಿರುವ ಪತ್ರಗಳು ಕನ್ನಡದಲ್ಲಿಲ್ಲವೇ? ಈ ಹೊತ್ತಲ್ಲಿ ನನಗೆ ಶಿರಹಟ್ಟಿಯ ಎರಡನೇ ಫಕೀರಸ್ವಾಮಿಗಳ ಸಮಾಧಿ ಕಟ್ಟಡದ ಮೇಲಿರುವ ಅರಬ್ಬಿ ಶಾಸನವೂ; ಹಂಪಿಯ ಕಟ್ಟಿಗೆಖಾನ್ ಮಸೀದಿಯಲ್ಲಿರುವ ದೇವರಾಯನನ್ನು ಸ್ತುತಿಸುವ ಕನ್ನಡ ಶಾಸನವೂ ನೆನಪಾಗುತ್ತಿವೆ. ಈ ಶಾಸನಗಳನ್ನು ಯಾವ ಧರ್ಮಗಳ ಅಡಿ ವಿಂಗಡಿಸುವುದು?
ಮಸೀದಿ ಮತ್ತು ಗುಡಿಗಳನ್ನು ವಕ್ಫ್ ಮತ್ತು ಮುಜರಾಯಿ ಖಾತೆಯಡಿ ತರುವಂತೆ, ಜನಭಾಷೆ ಮತ್ತು ಸಾಹಿತ್ಯಗಳನ್ನು ಮತ ಸಂಬಂಧಿ ಖಾತೆಗಳಿಗೆ ಸೇರಿಸಬಾರದು. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ, ಏಕಕಾಲಕ್ಕೆ ಉರ್ದು ಮತ್ತು ಕನ್ನಡದಲ್ಲಿ ಹಾಡು ಕಟ್ಟಿ ಹಾಡುವ ನೂರಾರು ಜನಪದ ಕವಿಗಳೂ ಗಾಯಕರೂ ಇದ್ದಾರೆ. ಅವರಲ್ಲಿ ಅನೇಕರು ಮುಸ್ಲಿಮರಲ್ಲ.
ಉರ್ದು-ಕನ್ನಡ ದ್ವಿಭಾಷಿಕ ಕವಿಗಳಾದ ಸಾಲಗುಂದಿ ಗುರುಖಾದರಿ, ಶಿಶುನಾಳ ಶರೀಫ ಮುಂತಾದವರನ್ನು ಯಾವ ಧರ್ಮದಡಿ ಸೇರಿಸಬೇಕು? ಇಂತಹದೊಂದು ದ್ವಿಭಾಷಿಕ ಕಾವ್ಯ ಪರಂಪರೆ ಕರ್ನಾಟಕದಲ್ಲಿದೆ ಎಂಬ ಖಬರಾದರೂ ಉರ್ದು ಅಕಾಡೆಮಿಗೆ ಇದೆಯೋ ಇಲ್ಲವೋ ತಿಳಿಯದು. ಉರ್ದು ಅಕಾಡೆಮಿಯಲ್ಲಿ, ಮುಸ್ಲಿಮರಲ್ಲದ ಉರ್ದು ಲೇಖಕರು ಹಾಗೂ ಕನ್ನಡ-ಉರ್ದು ದ್ವಿಭಾಷಿಕ ಜನಪದ ಗಾಯಕರು ಇದ್ದು ಕೆಲಸ ಮಾಡುವಂತಾಗಬೇಕು.
ಆಗ ಎರಡೂ ಸಾಹಿತ್ಯ ಪರಂಪರೆಗಳ ನಡುವೆ ಸಾಂಸ್ಕೃತಿಕ ವಿನಿಮಯದ ಒದಗೆಗಳು ಮತ್ತಷ್ಟು ಹೆಚ್ಚು ನಿರ್ಮಾಣವಾಗುತ್ತವೆ; ನಾಡಿನ ಎಲ್ಲ ಭಾಷೆ ಮತ್ತು ಸಾಹಿತ್ಯಗಳು, ಕರ್ನಾಟಕ ಸಂಸ್ಕೃತಿಯ ವಿಶಾಲ ಚೌಕಟ್ಟಿನಲ್ಲಿ ಅರ್ಥಪೂರ್ಣ ಸಂವಾದ ನಡೆಸಲು ಸಾಧ್ಯವಾಗುತ್ತದೆ.
ಶತಮಾನಗಳ ಕಾಲದಿಂದ ಹಿಂದೂಸ್ತಾನಿ ಸಂಗೀತದಲ್ಲಿ ತಮ್ಮ ಪ್ರತಿಭೆಯನ್ನು ಪ್ರಕಟಿಸಿರುವ, `ಮುಸ್ಲಿಂ~ ಎಂದು ಕರೆಯಲಾಗುವ ಸಂಗೀತಗಾರರು, ಭಾಷೆ ಧರ್ಮ ಸಂಸ್ಕೃತಿಗಳ ನಡುವೆ ಸೇತುವೆಯನ್ನು ಕಟ್ಟಿದ್ದಾರೆ. ಆದರೆ ಈ ಅಪೂರ್ವ ಸೇತು ಪರಂಪರೆಯು, ಭಾಷೆ-ಕಲೆಗಳನ್ನು ಧರ್ಮಗಳ ಜತೆ ಸಮೀಕರಿಸುವ ಪ್ರವೃತ್ತಿಯಿಂದ ಖಿಲವಾಗುತ್ತಲಿದೆ.
ನಾಡಿನ ಮುಖ್ಯ ಪ್ರವಾಹದಲ್ಲಿ ಮುಸ್ಲಿಮರು ಬೆರೆಯುವುದಿಲ್ಲ ಎಂದು ಆಕ್ಷೇಪಿಸುವುದು, ಬೆರೆತಿದ್ದರೆ ಅಲಾಯಿದ ಮಾಡಿ ಹೊರಗಿಡುವುದು- ಇದೆಂತಹ ರಾಜಕಾರಣ? ಭಾಷೆ ಮತ್ತು ಸಾಹಿತ್ಯಗಳಿಗೆ ಸಮುದಾಯಗಳನ್ನು ಕೂಡಿಸಬಲ್ಲ ಬಳ್ಳಿಕೊಂಡಿಗಳಿರುತ್ತವೆ. ಅವನ್ನು ಚಿವುಟಬಾರದು. ನಮಗೆ ಜರೂರಾಗಿ ಬೇಕಿರುವುದು ಬಾವುಟಗಳಲ್ಲ, ಬಳ್ಳಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.