ADVERTISEMENT

ಅಸ್ವಸ್ಥ ಸಮಾಜವೂ, ಓಬೀರಾಯನ ಕಾಲದ ಕಾನೂನೂ...

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:10 IST
Last Updated 16 ಜೂನ್ 2018, 9:10 IST

ಇಡೀ ವಾರ ಮನಸ್ಸು ಅಸ್ವಸ್ಥವಾಗಿದೆ. ನಾನು ಗಂಡಸು ಜಾತಿಗೆ ಸೇರಿದವನು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ನನ್ನ ಒಳಗಿನ ಶಿಕ್ಷಕ, ಮೇಲಧಿಕಾರಿ, ನೆರೆಮನೆಯ ಅಜ್ಜ, ಪೊಲೀಸ್‌ ಯಾರೂ ಒಳ್ಳೆಯವರು ಅಲ್ಲ ಎಂದು ಅನಿಸತೊಡಗಿದೆ. ಅವರೆಲ್ಲ ಮೃಗಗಳು, ಯಾವುದರ ಹಂಗೂ ಇಲ್ಲದ ಕಾಮಪಿಶಾಚಿಗಳು ಎಂದು ಭಯವಾಗುತ್ತಿದೆ. ಇದೆಲ್ಲ ಹೇಗೆ ಆಗಲು ಸಾಧ್ಯ? ಯಾರಾದರೂ ನಾಲ್ವರು ಗಂಡಸರನ್ನು ಯಾರಾದರೂ ಹೆಂಗಸರು ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಮುಳ್ಳು ಕಂಟಿಯಲ್ಲಿ ಬಿಸಾಕಬಾರದೇ ಎಂದು ಮನಸ್ಸು ಕೇಳುತ್ತಿದೆ.

ಪೊಲೀಸರು, ಆಡಳಿತಗಾರರು ನಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಲಾರರು ಎಂದು ಭಾಸವಾಗುತ್ತಿದೆ. ಅವರಿಗೆ ಬೇರೆ ಕೆಲಸಗಳು ಇದ್ದಂತೆ ಇವೆ. ಗೃಹ ಸಚಿವರು, ‘ನಾನೇನು ಮಾಡಲು ಸಾಧ್ಯ? ಎಲ್ಲರೂ ನನ್ನ ರಾಜೀನಾಮೆ ಏಕೆ ಕೇಳುತ್ತಿದ್ದಾರೆ’ ಎಂದು ಅನ್ನುತ್ತಿದ್ದಾರೆ. ಮುಖ್ಯಮಂತ್ರಿಗಳು, ‘ನಿಮ್ಮ ಸರ್ಕಾರದಲ್ಲಿ ಅದು ಮಾಡಲಿಲ್ಲವೇ? ಇದು ಮಾಡಲಿಲ್ಲವೇ’ ಎಂದು ನೆರಳು ಹುಡುಕುತ್ತಿದ್ದಾರೆ. ಯಾರಿಗೂ ಇದು ಒಂದು ನೈತಿಕ ಹೊಣೆ ಎಂದು ಅನಿಸುತ್ತಿಲ್ಲ. ಕೊಳೆತು ನಾರುತ್ತಿರುವ ನಮ್ಮ ಆತ್ಮಸಾಕ್ಷಿಗೆ ಹಿಡಿದ ಕನ್ನಡಿ ಎಂದು ತೋರುತ್ತಿಲ್ಲ. ದುರಂತ ನೋಡಿ, ಗಂಡಸಿಗೆ ಅವಮಾನ ಎಂಬುದು ಇಲ್ಲ. ಎಲ್ಲವನ್ನೂ ಈ ಸಮಾಜ ಹೆಣ್ಣಿಗೇ ಕೊಟ್ಟಂತಿದೆ. ಅದಕ್ಕೇ ಆಕೆ ಅಬಲೆಯಂತೆ ಕಾಣಿಸುತ್ತಿದ್ದಾಳೆ. ನನ್ನ ಸಹೋದ್ಯೋಗಿ ನಿನ್ನೆ ಬಂದು ನನ್ನ ಮಗಳನ್ನು ಎಲ್ಲಿ ಸುರಕ್ಷಿತವಾಗಿ ಇಡಲು ಸಾಧ್ಯ ಎಂದು ನನ್ನನ್ನು ಕೇಳಿದರು. ನಿಮ್ಮ ಹೊಟ್ಟೆ ಬಿಟ್ಟು ಬೇರೆ ಜಾಗ ಇದ್ದಂತೆ ಕಾಣುತ್ತಿಲ್ಲ ಎಂದೆ. ಅವರೂ ‘ಹೌದು’ ಎಂದು ಹೊರಗೆ ಹೋದರು. ಹೆಣ್ಣು ಹೆತ್ತವರ ಕಷ್ಟವನ್ನು ಏನು ಎಂದು ಹೇಳುವುದು?

ಆ ಹುಡುಗಿ ಏನು ತಪ್ಪು ಮಾಡಿದ್ದಳು? ಎಲ್ಲಿಯೋ ಓದಿಕೊಂಡು ಇದ್ದಳು. ತಂದೆ ಮನೆಗೆ ಎಂದು ಬಂದಳು. ಗೆಳೆಯನ ಜತೆ ರಾತ್ರಿ ಊಟ ಮಾಡಿದಳು. ಇನ್ನೇನು ಮನೆಯೊಳಗೆ ಹೋಗಬೇಕು. ಒಂದು ಕ್ಷಣ ಆತನ ಜತೆ ಮಾತನಾಡುತ್ತ ನಿಂತಿದ್ದಳು. ಕಾಯುತ್ತ ನಿಂತಿದ್ದ ಮೃಗ ಬಂದು ಪಂಜ ಬೀಸಿಯೇ ಬಿಟ್ಟಿತು. ಆಕೆ ದಿಟ್ಟೆ. ಎದುರಿಸಲು ಸಿದ್ಧಳಾಗಿದ್ದಾಳೆ. ಎಷ್ಟು ದಿನ? ಎರಡು ದವಡೆ ಮತ್ತು ಎರಡು ತೊಡೆಯ ನಡುವಿನದನ್ನು ನಿಯಂತ್ರಿಸಬೇಕಿದ್ದ ಮಾಸದಲ್ಲೇ ಆತ ಪಶುವಾಗಿದ್ದ. ದುರ್ದೈವ, ಯಾವ ಧರ್ಮವೂ ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತಿಲ್ಲ. ನಾವು ಇನ್ನಷ್ಟು, ಮತ್ತಷ್ಟು ದಾನವರೇ ಆಗುತ್ತಿದ್ದೇವೆ. ಆ ಹುಡುಗಿಗೆ ಆತ ಮಾತ್ರ ದಾನವನಾಗಿದ್ದನೇ? ಹಾಗೆ ಅನಿಸುತ್ತಿಲ್ಲ.

ಒಟ್ಟು ಸಮಾಜವೇ ಅಸೂಕ್ಷ್ಮವಾಗಿದೆ. ಇಂಥ ಯುವತಿ ಠಾಣೆಗೆ ಬಂದರೆ ಪೊಲೀಸ್‌ ಅಧಿಕಾರಿ ಆಕೆಯ ಹೇಳಿಕೆಯನ್ನು ಮಹಿಳಾ ಅಧಿಕಾರಿ ಕಡೆಯಿಂದ ಬರೆಯಿಸಿಕೊಳ್ಳಬೇಕು. ಆ ಠಾಣೆಯಲ್ಲಿ ಆ ಅಧಿಕಾರಿಣಿ ಇರಲೇ ಇಲ್ಲ. ಠಾಣೆಯ ಅಧಿಕಾರಿಯೂ ಖೂಳ. ಏನೋ ಮಾತನಾಡಿದ. ಆತನೊಬ್ಬನೇ ಖೂಳನೇ? ಕೋಲಾರದಲ್ಲಿಯೂ ಅಂಥವನೇ ಮತ್ತೊಬ್ಬ ಇದ್ದ. ಇದು  ಬೆಂಗಳೂರು, ಕೋಲಾರದ ಕಥೆ ಮಾತ್ರವಲ್ಲ, ಜೇವರಗಿಯಲ್ಲಿ, ಸಿಂದಗಿಯಲ್ಲಿ... ಎಲ್ಲಿ ಇಲ್ಲ ಹೇಳಿ? ಕೇಳಿದರೆ ಸಿಬ್ಬಂದಿಯ ಕೊರತೆ ಎಂಬ ಉತ್ತರ ಸಿಗುತ್ತದೆ. ಇದು ಸಿಬ್ಬಂದಿಯ ಕೊರತೆಯ ಪ್ರಶ್ನೆಯಲ್ಲ. ಠಾಣೆಯಲ್ಲಿ ಇರುವುದು ಮನುಷ್ಯತ್ವದ ಕೊರತೆ. ಪುಲಕೇಶಿನಗರದ ಠಾಣಾಧಿಕಾರಿಗೆ ಮನುಷ್ಯತ್ವ ಎಂಬುದು ಇದ್ದಿದ್ದರೆ ಆತ ಆ ಯುವತಿಯ ವೈಯಕ್ತಿಕ ವಿವರಗಳನ್ನು ಟೀವಿ ಚಾನೆಲ್‌ಗಳಿಗೆ ಕೊಡುತ್ತಿರಲಿಲ್ಲ. ಚಾನೆಲ್‌ ಗಳಿಗಾದರೂ ಒಂದಿಷ್ಟು ವಿವೇಕ ಎನ್ನುವುದು ಇದ್ದಿದ್ದರೆ ಆ ಯುವತಿಯ ಮುಖವನ್ನು ಮಾತ್ರ ತೆಳುವಾಗಿ ಮುಚ್ಚಿ ಉಳಿದ ದೇಹದ ಭಾಗವನ್ನು ತೋರಿಸುತ್ತಿರಲಿಲ್ಲ. ಆಕೆಯ ಮನೆಯನ್ನು, ಪರಿಸರವನ್ನು ತೋರಿಸುತ್ತಿರಲಿಲ್ಲ. ಇದು ಒಂದೇ ಘಟನೆಯಲ್ಲ. ಇಡೀ ವಾರ ಇಂಥದೇ ಘಟನೆಗಳು ನಡೆದಿವೆ. ಇಂಥದೇ ಲೋಪವನ್ನು ಚಾನೆಲ್‌ಗಳು ಮಾಡಿವೆ. ಉಳಿದ ಪ್ರಕರಣಗಳಲ್ಲಿ ಅತ್ಯಾಚಾರ ಎದುರಿಸಿದ ಬಾಲಕಿಯ, ಹುಡುಗಿಯ, ಯುವತಿಯ ಸಂಬಂಧಿಕರ ಸಂದರ್ಶನಗಳು ಪ್ರಸಾರವಾಗಿವೆ. ಮುದ್ರಣ ಮಾಧ್ಯಮಗಳೂ ಲಕ್ಷ್ಮಣ ರೇಖೆ ದಾಟಿವೆ. ಪುಲಕೇಶಿನಗರ ಅತ್ಯಾಚಾರ ಪ್ರಕರಣದ ಯುವತಿ ಎಲ್ಲಿ ಓದುತ್ತಿದ್ದರು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿವೆ. ರಾತ್ರಿ ಆ ಯುವತಿ ಮತ್ತು ಆಕೆಯ ಗೆಳೆಯ ತಡರಾತ್ರಿ ವರೆಗೆ ಮೋಜು ಮಾಡಿದರು ಎಂದು ಬರೆದಿವೆ!

ನಾವು ಮಾಧ್ಯಮದವರು ಸುದ್ದಿ ಮಾತ್ರ ಬರೆಯುತ್ತಿಲ್ಲ. ತೀರ್ಮಾನಗಳನ್ನು ಬರೆಯುತ್ತಿದ್ದೇವೆ. ತೀರ್ಮಾನಗಳನ್ನು ಕೊಡಲು ತವಕಿಸುತ್ತಿದ್ದೇವೆ. ಪ್ರದರ್ಶನದ ಹಪಹಪಿಗೆ ಬಿದ್ದಿದ್ದೇವೆ. ಅತ್ಯಾಚಾರ ಎದುರಿಸಿದ (survivor) ಹೆಣ್ಣುಮಗಳ ಹೆಸರು ಬಹಿರಂಗ ಮಾಡಬಾರದು ಎಂಬುದಷ್ಟೇ ನಮಗೆ ಗೊತ್ತಿದೆ. ಅತ್ಯಾಚಾರ ಎದುರಿಸಿದ ಹೆಣ್ಣುಮಗಳ ಮನೆಯನ್ನು, ಶಾಲೆಯನ್ನು, ಕಾಲೇಜನ್ನು ಗುರುತಿಸಬಾರದು. ಆಕೆಯ ಪಾಲಕರನ್ನು ಗುರುತಿಸಬಾರದು. ಆಕೆಯ ನಿವಾಸವನ್ನು ಗುರುತಿಸಬಾರದು. ಆಕೆಯ ಸಂಬಂಧಿಕರನ್ನು ಗುರುತಿಸಬಾರದು. ಅವರ ಸಂದರ್ಶನ ಪ್ರಕಟ ಮಾಡಬಾರದು ಇತ್ಯಾದಿ, ಇತ್ಯಾದಿ ನಿರ್ಬಂಧ ವಿಧಿಸಿದ್ದು  ಭಾರತೀಯ ಪತ್ರಿಕಾ ಮಂಡಳಿ, ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ, ನ್ಯಾಷನಲ್‌ ಬ್ರಾಡ್‌ಕಾಸ್ಟರ್ಸ್‌ ಅಸೋಸಿಯೇಷನ್‌, ನ್ಯಾಯಮೂರ್ತಿ ಜೆ.ಎಸ್.ವರ್ಮಾ ಸಮಿತಿ, ಸುಪ್ರೀಂ ಕೋರ್ಟಿನ ಅನೇಕ ತೀರ್ಪುಗಳು... ಎಲ್ಲ ಹೇಳಿದ್ದು ಮಾಧ್ಯಮ ಸಂಯಮ ವಹಿಸಬೇಕು ಎಂದೇ.

ಅತ್ಯಾಚಾರ ಎಂಬುದು ಒಬ್ಬ ಹೆಣ್ಣಿನ ಬದುಕಿನಲ್ಲಿ ಅಳಿಸಲಾಗದ ಗಾಯ; ಕಳಂಕ. ಯಾವ ಕುಟುಂಬದಲ್ಲಿ ಅಂಥ ಒಂದು ಘಟನೆ ನಡೆದರೂ ಅವರ ಇಡೀ ಬದುಕು ತತ್ತರಿಸಿ ಹೋಗುತ್ತದೆ. ಇಂಥದನ್ನೆಲ್ಲ ವರದಿ ಮಾಡಲೇಬೇಕು. ವ್ಯಕ್ತಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಜತೆಗೆ ಸಮಾಜದಲ್ಲಿ ನಡೆಯುವುದನ್ನು ತಿಳಿಯುವ ಹಕ್ಕೂ ಇದೆ. ಪತ್ರಿಕೆಗಳೂ ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿಯೇ ಕೆಲಸ ಮಾಡುತ್ತವೆ. ಜತೆಗೆ ಅವು ಸಮಾಜಕ್ಕೆ ಇರುವ ತಿಳಿಯುವ ಹಕ್ಕನ್ನೂ ಸಮಾಧಾನ ಮಾಡುತ್ತಿವೆ. ಆದರೆ, ಅದೇ ಸಂವಿಧಾನ, ವ್ಯಕ್ತಿಗೆ ಬದುಕುವ ಹಕ್ಕನ್ನೂ ಕೊಟ್ಟಿದೆ. ಖಾಸಗಿತನದ ಹಕ್ಕನ್ನೂ ನೀಡಿದೆ. ಬದುಕುವ ಹಕ್ಕಿನ ಅಡಿಯಲ್ಲಿಯೇ ಖಾಸಗಿತನದ ಹಕ್ಕೂ ಸೇರಿಕೊಂಡಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಅನೇಕ ತೀರ್ಪುಗಳು ಹೇಳಿವೆ. ಅತ್ಯಾಚಾರ ಎದುರಿಸಿದ ಹೆಣ್ಣು ಮಗಳಿಗೆ ಖಾಸಗಿತನದ ಹಕ್ಕು ಇದೆ. ಅದು ಆಕೆಯ ಬದುಕುವ ಹಕ್ಕು ಕೂಡ ಎಂದು ಮಾಧ್ಯಮಗಳು ತಿಳಿದುಕೊಳ್ಳಬೇಕಿದೆ. ಗಾಸಿಗೊಂಡ ಹೆಣ್ಣು ಮಗಳ ಮುಖಕ್ಕೆ ಒಂದಿಷ್ಟು ಕವಚ ಹಾಕಿ ಆಕೆಯ ತಾಯಿಯನ್ನೋ, ತಂಗಿಯನ್ನೋ ಕ್ಯಾಮೆರಾ ಎದುರು ನಿಲ್ಲಿಸಿ, ‘ಏನಾಯಿತು ಎಲ್ಲ ಹೇಳಿ’ ಎಂದು ಕೇಳಿದರೆ ಏನರ್ಥ? ಸಂಬಂಧಿಕರು ಏಕೆ, ಅತ್ಯಾಚಾರ ಎದುರಿಸಿದವರಿಗೇ ಕ್ಯಾಮೆರಾಗಳು ಈ ಪ್ರಶ್ನೆ ಕೇಳಿವೆ. ಆಕೆ ಅದೆಲ್ಲ ಏನು ಎಂದು ತಿಳಿಯದ ಮುಗ್ಧ ಹಸುಳೆ ಎಂದೂ ಕ್ಯಾಮೆರಾಗಳಿಗೆ ಗೊತ್ತಾಗಿಲ್ಲ.

ಸಮಾಜದಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ಹೇಳಬೇಕಾದುದು ಮಾಧ್ಯಮಗಳ ಹೊಣೆಗಾರಿಕೆ. ಆದರೆ, ಅತ್ಯಾಚಾರ ಎದುರಿಸಿದ ಕುಟುಂಬವನ್ನು ಹೊರಗೆ ಇಟ್ಟೂ ನಾವು ಇದನ್ನು ಹೇಳಲು ಏಕೆ ಸಾಧ್ಯವಿಲ್ಲ? ಸಮಾಜದಲ್ಲಿ ಅನುಕಂಪವನ್ನು, ದಯೆಯನ್ನು, ಮಾನವೀಯತೆಯನ್ನು ನಾವು ಬಿತ್ತಬೇಕು ನಿಜ. ಆದರೆ, ಅದನ್ನೇ ಸ್ಟುಡಿಯೊಗಳಲ್ಲಿ ಇಟ್ಟು ಮಾರಬಾರದು. ಮಾಧ್ಯಮಗಳು ಕಾಮವನ್ನು ಮಾರುತ್ತಿವೆ. ಕ್ರೌರ್ಯವನ್ನು ಮಾರುತ್ತಿವೆ. ಅಪರಾಧವನ್ನು ಮಾರುತ್ತಿವೆ. ಅದನ್ನೆಲ್ಲ ವೈಭವಿಸುವುದರಿಂದಲೇ ಅದು ಮಾರಾಟದ ಸರಕು ಎಂದು ಅನಿಸುತ್ತಿದೆ. ಹೀಗೆಲ್ಲ ಮಾಡಿದರೆ ಅತ್ಯಾಚಾರ ಎದುರಿಸಿದ ಜೀವಕ್ಕೆ, ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದು ನಾವು ಅಂದುಕೊಳ್ಳಬಹುದು. ಆದರೆ, ಆ ಪ್ರಕ್ರಿಯೆಯಲ್ಲಿ ಆಕೆ ಮತ್ತು ಅವರ ಇಡೀ ಕುಟುಂಬ ಮತ್ತೆ ಮತ್ತೆ ಅದೇ ಅವಮಾನವನ್ನು, ನರಕವನ್ನು, ನೋವನ್ನು ಅನುಭವಿಸುವಂತೆಯೂ ನಾವು ಮಾಡುತ್ತೇವಲ್ಲ! ನ್ಯಾಯ ಒದಗಿಸುವ ನಮ್ಮ ಕೆಲಸವೇ ಒಂದು ಶಿಕ್ಷೆ ಎನ್ನುವಂತೆ ಆದರೆ ನಾವು ಏನು ಸಾಧಿಸಿದಂತೆ ಆಯಿತು? ಅತ್ಯಾಚಾರ ಎದುರಿಸುವುದು ಒಂದು ಅವಮಾನ. ಠಾಣೆಯಲ್ಲಿ ಅದನ್ನು ಹೇಳುವುದು ಇನ್ನೊಂದು ಅವಮಾನ. ಪ್ರಕರಣದ ವಿಚಾರಣೆ ಎಷ್ಟು ದಿನ ನಡೆಯುತ್ತದೋ ಅಷ್ಟು ದಿನ ನ್ಯಾಯಾಲಯಕ್ಕೆ ಅಲೆದಾಡಿ ಪುರಾವೆ ಹೇಳುವುದು ಮತ್ತೊಂದು ಅವಮಾನ. ನಡುವೆ, ಮಾಧ್ಯಮದವರ ಮುಂದೆ ಎಲ್ಲವನ್ನೂ ಬಿಚ್ಚಿ ಇಡುವುದು ಇನ್ನೆಂಥ ಅಪಮಾನ! ಆ ಕುಟುಂಬಕ್ಕೆ ಇದೆಲ್ಲ ಬೇಕೇ? ಯಾರಾದರೂ ಕೇಳಿದ್ದೇವೆಯೇ? ಒಂದು ಸಾರಿ ಸಿಕ್ಕ ದೃಶ್ಯಗಳನ್ನೇ ದಿನವಿಡೀ ಹಾಕಿ ಚಚ್ಚುತ್ತ ಇದ್ದರೆ ಗಾಸಿಗೊಂಡವರು ಎಲ್ಲಿ ಹೋಗಿ ಅಡಗಿಕೊಳ್ಳಬೇಕು?

ಎಲ್ಲಿಯಾದರೂ ಅತ್ಯಾಚಾರ ನಡೆದರೆ ಸಾಕು. ಅದು ಘೋರವಾಗಿದ್ದರೆ ಇನ್ನೂ ಒಳ್ಳೆಯದು ಎನ್ನುವಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ನಿರ್ಭಯಾ ಪ್ರಕರಣದಲ್ಲಿ ಹೀಗೆಯೇ ಆಯಿತು. ಮುಂಬೈ ಛಾಯಾಗ್ರಾಹಕಿ ಪ್ರಕರಣದಲ್ಲಿಯೂ ಅದೇ ಆಯಿತು. ತರುಣ್‌ ತೇಜಪಾಲ್‌ ಪ್ರಕರಣದಲ್ಲಿ ಮತ್ತೆ ಅದು ಮರುಕಳಿಸಿತು. ಮುಂಬೈ ಛಾಯಾಗ್ರಾಹಕಿ ಅತ್ಯಾಚಾರ ಪ್ರಕರಣದಲ್ಲಿ ಒಂದು ದೊಡ್ಡ ರಾಷ್ಟ್ರೀಯ ಪತ್ರಿಕೆ ಆಕೆ ಯಾವ ಸಮುದಾಯಕ್ಕೆ ಸೇರಿದವಳು ಎಂಬ ಗುಟ್ಟನ್ನು ಮೊದಲ ದಿನವೇ ಬಿಟ್ಟುಕೊಟ್ಟಿತು. ಎರಡನೇ ದಿನ ಇನ್ನೊಂದು ರಾಷ್ಟ್ರೀಯ ಚಾನೆಲ್‌ನವರು ಆ ಯುವತಿ ವಾಸವಾಗಿದ್ದ ಫ್ಲಾಟಿಗೆ ಹೋಗಿ, ‘ಆಕೆ ಹೇಗೆ, ಏನು’ ಎಂದೆಲ್ಲ ವಿಚಾರಿಸಿತು. ಅಲ್ಲಿ  ಇದ್ದವರಿಗೆ ವಿಷಯವೇ ಗೊತ್ತಿರಲಿಲ್ಲ. ಇವರು ಹೋಗಿ ಕೇಳಿದ್ದೇ ತಡ, ಢಾಣಾ ಡಂಗುರವಾಯಿತು. ಫ್ರೇಜರ್‌ಟೌನ್‌ ಯುವತಿಗೂ ಈಗ ಅದೇ ಆಯಿತು. ಆಕೆ ಯಾವ ವಿಷಯದ ತರಗತಿಯಲ್ಲಿ ಓದುತ್ತಿದ್ದಳು ಎಂಬುದನ್ನು ಈಗ ಪತ್ರಿಕೆಗಳೇ ಬಹಿರಂಗ ಮಾಡಿವೆ. ಆಕೆಯ ವೇಷ ರಾಜ್ಯದ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ್ದು ಎಂಬುದನ್ನು ಆಕೆಯ ಮುಖ ಮಾತ್ರ ಮುಚ್ಚಿದ್ದ ದೇಹ ತೋರಿಸಿ ಟೀವಿ ಚಾನೆಲ್‌ಗಳು ಬಹಿರಂಗ ಮಾಡಿವೆ. ಈಗ ಆ ಯುವತಿ ಯಾರು ಎಂದು ಇಡೀ ಜಗತ್ತಿಗೇ ಗೊತ್ತಾಗಿದೆ. ಇಷ್ಟೆಲ್ಲ ಮಾಡಿಯೂ ನಾವು ನ್ಯಾಯ ಒದಗಿಸುತ್ತಿದ್ದೇವೆ ಎಂದು  ಹೇಳಿಕೊಳ್ಳಬಹುದೇ? ಯಾವ ಮುಖ ಇಟ್ಟುಕೊಂಡು?

ನಾವು ಅಸ್ವಸ್ಥರೂ, ಅಸೂಕ್ಷ್ಮರೂ ಆಗುತ್ತಿದ್ದೇವೆ. ಇಡೀ ಸಮಾಜವೇ ಹಾಗೆ ಆಗುತ್ತಿದೆ. ಅಸೂಕ್ಷ್ಮತೆ ಎಂಬುದು ಸಮಾಜದ ಒಂದು ಅಂಗದ ಲಕ್ಷಣವಾಗಿ ಈಗ ಉಳಿದಿಲ್ಲ. ವೈರಸ್ಸಿನ ಹಾಗೆ ಅದು ಎಲ್ಲವನ್ನೂ ವೇಗವಾಗಿ ವ್ಯಾಪಿಸುತ್ತಿರುವಂತಿದೆ. ನಿರ್ಭಯಾ ಪ್ರಕರಣ ನಮ್ಮ ಅಂತಃಕರಣ ಕಲಕಿತ್ತು. ಅದು ನಮ್ಮನ್ನು ಇನ್ನಷ್ಟು ಮಾನವೀಯ ಮಾಡಬೇಕಿತ್ತು. ಮೃದುಗೊಳಿಸಬೇಕಿತ್ತು. ನಿರ್ಭಯಾಳ ಹಿಂದೆಯೇ ಮುಂಬೈ ಛಾಯಾಗ್ರಾಹಕಿ ಮೇಲೆ ಅತ್ಯಾಚಾರ ನಡೆಯಿತು. ಪೆಟ್ಟಿನ ಮೇಲೆ ಮತ್ತೊಂದು ಪೆಟ್ಟು ಬಿತ್ತು. ನಾವು ಮತ್ತಷ್ಟು ಮೃದು ಆಗಬೇಕಿತ್ತು. ಮಾನವಂತರು ಆಗಬೇಕಿತ್ತು. ನಮ್ಮ ಮನೆಯಲ್ಲಿಯೂ ಹೆಣ್ಣು ಮಕ್ಕಳು ಇದ್ದಾರೆ, ಹಸುಗೂಸುಗಳು ಇವೆ ಎಂದು ನೆನಪು ಇಟ್ಟುಕೊಳ್ಳಬೇಕಿತ್ತು. ದಲಿತ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿ ಅವರನ್ನು ಮರಕ್ಕೆ ತೂಗು ಹಾಕುವ, ಪಂಚಾಯ್ತಿ ಕಟ್ಟೆಯಲ್ಲಿ ಅತ್ಯಾಚಾರಕ್ಕೆ ಆದೇಶ ನೀಡುವ ಒಂದು ಸಮಾಜ ಸ್ವಸ್ಥ ಎನಿಸಲು ಹೇಗೆ ಸಾಧ್ಯ? ನಮಗೆ ಇಲ್ಲಿ ಯಾರಿಗೂ ಕಾನೂನಿನ ಭಯ ಎಂಬುದೇ ಇಲ್ಲ. ಓಬೀರಾಯನ ಕಾಲದ ಕಾನೂನು ಇಟ್ಟುಕೊಂಡು ಅದರ ಭಯ ಹುಟ್ಟಿಸಲು ಹೇಗೆ ಸಾಧ್ಯ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.