ಆ ಪ್ರೀತಿಯನ್ನು ಇನ್ನೆಲ್ಲಿ ಹುಡುಕಲಿ?
Published 29 ಡಿಸೆಂಬರ್ 2012, 19:59 IST Last Updated 29 ಡಿಸೆಂಬರ್ 2012, 19:59 IST ವಾರದಿಂದ ಮನಸ್ಸು ವಿಲ ವಿಲ ಒದ್ದಾಡುತ್ತಿದೆ. ತಪ್ಪು ಮಾಡಿದೆ ಎಂದು ಅನಿಸತೊಡಗಿದೆ. ರಾತ್ರಿಯಾಯಿತು ಎಂದೋ, ಮಲಗೋಣ ಎಂದೋ, ಇದು ನಿತ್ಯದ ಗೋಳು ಎಂದೋ ತಾತ್ಸಾರ ಮಾಡದೇ ಕೆಲವು ಮೆಟ್ಟಿಲು ಕೆಳಗೆ ಇಳಿದು ಬರಬೇಕಿತ್ತು. ಬರಲಿಲ್ಲ. ಬಂದಿದ್ದರೆ ಒಂದು ಮೂಕಪ್ರಾಣಿಯ ಜೀವ ಉಳಿಯುತ್ತಿತ್ತು.
ಎಷ್ಟು ದಿನಗಳಿಂದ ಆ ನಾಯಿ ನಮ್ಮ ಫ್ಲಾಟಿನಲ್ಲಿ ಇತ್ತು ನೆನಪಿಲ್ಲ. ಹತ್ತು ವರ್ಷವೇ ಆಗಿರಬೇಕು. ಬಿಳಿ ಬಣ್ಣದ ನಾಯಿ. ಯಾರೂ ಸಾಕಿದ್ದಲ್ಲ. ಹೇಗೋ ಏನೋ, ಗೇಟು-ಪಾಟು ಏನೂ ಇರದ ನಮ್ಮ ಫ್ಲಾಟಿನಲ್ಲಿ ಬಂದು ಸೇರಿಕೊಂಡಿತ್ತು. ಸಿಕ್ಕವರು ಒಂದಿಷ್ಟು ಹಾಲು, ಅನ್ನ, ಬ್ರೆಡ್ಡು ಎಂದು ಹಾಕುತ್ತಿದ್ದರು. ತಿಂದು ಒಂದು ಮೂಲೆಯಲ್ಲಿ ಬಿದ್ದಿರುತ್ತಿತ್ತು. ಅದನ್ನು ತಬ್ಬಿ, ಎತ್ತಿಕೊಂಡು ಆಡಿಸುವವರು ಯಾರೂ ಇರಲಿಲ್ಲ. ಸಾಕಿದ ಪಮೇರಿಯನ್ ನಾಯಿಗಳ ಹಾಗೆ ಅದು ಮುದ್ದು ಮುದ್ದೂ ಆಗಿರಲಿಲ್ಲ. ಅದರ ಮೈ ನೀರು ಕಂಡು ಎಷ್ಟು ವರ್ಷವಾಗಿತ್ತೋ ಏನೋ?
ಹೊಟ್ಟೆ ಹಸಿದಾಗ ಯಾರದಾದರು ಮನೆ ಬಾಗಿಲು ಕಾಯುತ್ತಿತ್ತು. ಯಾರು ತನಗೆ ಯಾವಾಗ ಊಟ ಕೊಡುತ್ತಾರೆ ಎಂದು ಅದಕ್ಕೆ ಗೊತ್ತಿತ್ತು; ಅಥವಾ ಕೊಟ್ಟಾರು ಎಂದು ನಿರುಕಿಸುತ್ತಿತ್ತು. ಅವರು ಬಾಗಿಲು ತೆಗೆದು ಹೊರಗೆ ಬಂದರೆ ಅವರ ಬಾಗಿಲ ಮುಂದೆ ಹೋಗಿ ನಿಂತುಕೊಳ್ಳುತ್ತಿತ್ತು. ಅವರು ಏನಾದರೂ ಹಾಕಿದರೆ ತಿನ್ನುತ್ತಿತ್ತು. ಹಾಕದಿದ್ದರೆ ಮತ್ತೆ ಬಂದು ಒಂದು ಮೂಲೆಯಲ್ಲಿ ಮಲಗುತ್ತಿತ್ತು. ಚಳಿ, ಮಳೆ, ಬೇಸಿಗೆ ಯಾವ ಕಾಲವಾದರೂ ಅಷ್ಟೇ. ಅದಕ್ಕೆ ಒಂದು ಗೂಡು ಎಂದು ಇರಲಿಲ್ಲ. ಕೆಳಗೆ ಹಾಸಿಗೆ ಇರಲಿಲ್ಲ. ಮೇಲೆ ಹೊದಿಕೆ ಇರಲಿಲ್ಲ. ಒಂದೊಂದು ಸಾರಿ ನಾವು ಮನೆ ಮುಂದೆ ಒಗೆದು ಒಣಗು ಹಾಕಿದ ಬಟ್ಟೆಗಳನ್ನೇ ಎಳೆದುಕೊಂಡು ಮಲಗಿಬಿಡುತ್ತಿತ್ತು!
ನನ್ನ ಜತೆಗೆ ಈಚೆಗೆ ಸ್ನೇಹ ಬೆಳೆಸಿಕೊಂಡಿತ್ತು. ಬೆಳಿಗ್ಗೆ ನಾನು ವಾಕಿಂಗ್ ಹೋಗಿ ಬರುವ ವೇಳೆಗೆ ಫ್ಲಾಟ್ ಮುಂಭಾಗದಲ್ಲಿ ಕಾಯುತ್ತಿತ್ತು. ಮುಂದಿನ ಎರಡೂ ಕಾಲನ್ನು ಉದ್ದ ಮಾಡಿ ಪ್ರೀತಿ ತೋರಿಸುತ್ತಿತ್ತು. ಬಾಲ ಅಲ್ಲಾಡಿಸುತ್ತ ಹತ್ತಿರ ಬರುತ್ತಿತ್ತು. ಐದಾರು ಪೇಪರ್ ಓದುವ ಧಾವಂತದಿಂದ ಅದರ ಪ್ರೀತಿ ಧಿಕ್ಕರಿಸಿ ಮನೆ ಒಳಗೆ ಹೊರಟು ಹೋಗುತ್ತಿದ್ದೆ. ಎರಡು ಮಹಡಿಯ ನಲವತ್ತು ಮೆಟ್ಟಿಲು ಹತ್ತುವವರೆಗೆ, ಕಾಲು ತೊಡಕು ಹಾಕುವವರಂತೆ ನನ್ನ ನೇವರಿಕೆ ಬಯಸಿ ಜತೆಜತೆಗೇ ಓಡಿ ಓಡಿ ಬರುತ್ತಿತ್ತು. ನಾನು ಅದರ ಮೈ ದಡವಲಿಲ್ಲ ಎಂದು ತಲೆ ತಗ್ಗಿಸಿ ನಿಂತುಕೊಳ್ಳುತ್ತಿತ್ತು. ಯಾವಾಗಲೋ ಒಂದು ಭಾನುವಾರ ವೇಳೆ ಇದ್ದರೆ, ಹೊರಗಿನ ಕಟ್ಟೆಯ ಮೇಲೆ ನಾನು ಕುಳಿತರೆ ಸಾಕು ನನ್ನ ಕಾಲ ನಡುವೆ ಬಂದು ಮೂತಿ ತೂರಿಸಿ ನಿಂತುಕೊಳ್ಳುತ್ತಿತ್ತು. ಇಡೀ ದೇಹವನ್ನು ಮೂಸುತ್ತಿತ್ತು. ಅದೇನು ಅಷ್ಟು ಸ್ವಚ್ಛವಾದ ನಾಯಿಯಲ್ಲ. ಯಾರೂ ಸಾಕದ ನಾಯಿಗೆ ಯಾರು ಸ್ನಾನ ಮಾಡಿಸಬೇಕು? ಅದರ ಮೈಯಲ್ಲಿ ಚಿಕ್ಕಾಡು ಇದ್ದಾವು ಎಂಬ ಭಯವೂ ನನಗೆ ಇತ್ತು. ಆದರೂ ಅದರ ಮೈಮೇಲೆ ಕೈಯಾಡಿಸಿ ನಾನೂ ಪ್ರೀತಿ ತೋರಿಸುತ್ತಿದ್ದೆ. ಒಳಗೆ ಬಂದು ಸಾಬೂನು ಹಚ್ಚಿ ಕೈ ತೊಳೆದುಕೊಳ್ಳುತ್ತಿದ್ದೆ.
ರಾತ್ರಿ ನಾನು ಮನೆಗೆ ಬಂದು ತಲುಪುವಾಗ ಯಾವುದಾದರೂ ಬೀದಿ ನಾಯಿ ಬೊಗಳುತ್ತ ಬಂದರೆ ನಮ್ಮ ನಾಯಿ ಧಾವಿಸಿ ಕೆಳಗೆ ಬಂದು ಅವುಗಳನ್ನೆಲ್ಲ ಓಡಿಸಲು ಮುಂದಾಗುತ್ತಿತ್ತು. ಇದೇನು ಅಂಥ ಧೈರ್ಯಸ್ಥ ನಾಯಿಯಲ್ಲ. ಒಂದಿಷ್ಟು ದೂರ ಹೋದಂತೆ ಮಾಡಿ ಮತ್ತೆ ಬಂದು ನಮ್ಮ ಹಿಂದೆ ರಕ್ಷಣೆ ಪಡೆಯುತ್ತಿತ್ತು. ಬಾಕಿ ಬೀದಿ ನಾಯಿಗಳಿಗೆ ಅದೇ ಸಿಟ್ಟು ಎಂದು ಕಾಣುತ್ತದೆ. ಅವೆಲ್ಲ ಹಗಲು ರಾತ್ರಿ ಬೀದಿ ಭಿಕಾರಿಗಳ ಹಾಗೆ ಸುತ್ತುತ್ತಿದ್ದಾಗ ಈ ನಾಯಿಗೆ ಮಾತ್ರ ಏನು ರಕ್ಷಣೆ ಎಂದು ಅವುಗಳಿಗೆ ಕೋಪ ಇದ್ದಂತೆ ಇತ್ತು. ಅವಕಾಶಕ್ಕಾಗಿ ಕಾಯುತ್ತಿದ್ದವೋ ಏನೋ?
ಫ್ಲಾಟು ನಿರ್ಮಾಣವಾಗಿ ಮೂವತ್ತು ವರ್ಷಗಳಾದ ಮೇಲೆ ಆಚೆ ಈಚೆ ಎರಡೂ ಕಡೆ ಮೊನ್ನೆ ಕಬ್ಬಿಣದ ಗೇಟು ಹಾಕಿಸಿದೆವು.ಆ ಕೆಲಸ ಮಾಡಿಸಲು ಫ್ಲಾಟಿನಲ್ಲಿ ಮಾಲೀಕರಾಗಿ ವಾಸವಾಗಿದ್ದ ನಮ್ಮಲ್ಲೇನೂ ಒಗ್ಗಟ್ಟು ಇರಲಿಲ್ಲ. ಹನ್ನೊಂದು ಮನೆಗಳು ಹನ್ನೊಂದು ಮುಖ! ಬಾಡಿಗೆಗೆ ಬಂದ ಪುಣ್ಯಾತ್ಮರೊಬ್ಬರು ಆಸಕ್ತಿ ವಹಿಸಿ ಗೇಟು ಹಾಕಿಸಿದರು. ನಮ್ಮ ನಾಯಿಗೆ ಮತ್ತಷ್ಟು ರಕ್ಷಣೆ ಸಿಕ್ಕಿತು. ಅದು ಹೊರಗೆ ಹೋಗುತ್ತಲೇ ಇರಲಿಲ್ಲ. ಅದಕ್ಕೂ ಪ್ರಾಣಭೀತಿ ಇತ್ತೇ? ಹೊರಗೆ ಸಾವು ಹೊಂಚು ಹಾಕುವುದು ಅದಕ್ಕೆ ತಿಳಿದಿತ್ತೇ? ಗೊತ್ತಿಲ್ಲ.
ಮೊನ್ನೆ ರಾತ್ರಿ ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ಹೋದೆ. ಗೇಟಿನ ಒಳಗೇ ಕಾಯುತ್ತ ನಿಂತಿತ್ತು. ಮತ್ತೆ ಮೂಸಿ ನೋಡಿತು. ಬಾಲ ಅಲ್ಲಾಡಿಸಿತು. ಎಲ್ಲ ನಲವತ್ತು ಮೆಟ್ಟಿಲು ನನ್ನ ಜತೆಗೇ ಏರಿಕೊಂಡು ಬಂತು. `ಲೇಟಾಯ್ತಪ್ಪ. ನಾಳೆ ಸಿಕ್ತೀನಿ' ಎಂದು ಹೇಳಿ ಮನೆ ಒಳಗೆ ಹೋದೆ. ಕಣ್ಣ ತುಂಬ ಪ್ರೀತಿ ತುಂಬಿಕೊಂಡು ನಿಂತಿದ್ದ ನಾಯಿ ಕೆಳಗೆ ಹೊರಟು ಹೋಯಿತು. ಅದು ನಮ್ಮ ಕೊನೆಯ ಭೇಟಿ ಆಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಮತ್ತೆ ಅರ್ಧ ಗಂಟೆ ತಡವಾಗಿ ಇನ್ನೊಂದು ಮನೆಯವರು ಗೇಟು ತೆಗೆದುಕೊಂಡು ಒಳಗೆ ಬಂದರು. ಆಗ ಏನಾಯಿತೋ ಗೊತ್ತಿಲ್ಲ. ನಮ್ಮ ನಾಯಿ ಹೊರಗೆ ಹೊರಟು ಹೋಯಿತೆಂದು ಕಾಣುತ್ತದೆ.
ಸ್ವಲ್ಪ ಹೊತ್ತಿನಲ್ಲೇ ಬೀದಿ ನಾಯಿಗಳ ಬೊಗಳಾಟ ಶುರುವಾಯಿತು. ಒಂದು ನಾಯಿ ಕುಂಯ್ಯ ಮರ‌್ರೋ ಎಂದು ಪ್ರಾಣ ಹೋದವರ ಹಾಗೆ ಕೂಗುತ್ತಿತ್ತು. ನಮ್ಮದೇ ಬೀದಿಯಲ್ಲಿ ಒಂದು ನಾಯಿ ಮರಿ ಹಾಕಿತ್ತು. ಆ ಮರಿಗಳಲ್ಲಿ ಒಂದನ್ನು ಯಾವುದಾದರೂ ನಾಯಿ ಹೊತ್ತುಕೊಂಡು ಹೋಯಿತೋ ಏನೋ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. ನಿತ್ಯ ರಾತ್ರಿ ನಾಯಿಗಳು ಬೊಗಳುವುದು ಸಾಮಾನ್ಯವಾದ್ದರಿಂದ ಆಲಸ್ಯದಿಂದ ಮಲಗಿಬಿಟ್ಟೆ. ಒಂದು ಕೋಲು ಹಿಡಿದುಕೊಂಡು ಕೆಳಗೆ ಬರಬೇಕಿತ್ತು. ಬಂದು ನೋಡಬೇಕಿತ್ತು. ಬರಲಿಲ್ಲ. ಮರುದಿನ ನಮ್ಮ ನಾಯಿ ಕಾಣಲಿಲ್ಲ. ಫ್ಲಾಟಿನವರಿಗೆಲ್ಲ ನಮ್ಮ ನಾಯಿ ಎಲ್ಲಿ ಹೋಯಿತು ಎಂದು ತಿಳಿಯಲಿಲ್ಲ. ರಸ್ತೆ ರಸ್ತೆ ಹುಡುಕಿದರೂ ಸಿಕ್ಕಲಿಲ್ಲ. ಒಂದು ಕ್ಷಣವೂ ಎಲ್ಲಿಯೂ ಹೋಗದ ನಾಯಿ ಇದ್ದಕ್ಕಿದ್ದಂತೆ ಎಲ್ಲಿ ಹೋಯಿತು? ಯಾರೂ ಸಾಕಿದ ನಾಯಿಯಲ್ಲ ಅದು. ಎಲ್ಲರೂ, `ಎಲ್ಲಿಯೋ ಹೋಗಿರಬೇಕು. ನಾಳೆ ಬಂದೀತು ಬಿಡು' ಎಂದು ಸುಮ್ಮನಾದರು. ಮೂರು ದಿನಗಳ ಹಿಂದೆ ಹತ್ತಿರದ ರಸ್ತೆಯ ಚರಂಡಿಯಲ್ಲಿ ರುಂಡ-ಮುಂಡ ಬೇರ್ಪಡೆಯಾದ ಒಂದು ನಾಯಿ ಬಿದ್ದ ಸುದ್ದಿ ಸಿಕ್ಕಿತು. ಹೋಗಿ ನೋಡಿದರೆ ಅಲ್ಲಿ ನಾಯಿ ಇರಲಿಲ್ಲ. ಆದರೆ ಅದು ನಮ್ಮದೇ ನಾಯಿ ಎಂದು ಗೊತ್ತಾಯಿತು. ಪಾಲಿಕೆಯವರು ಶವ ಸಾಗಿಸಿ ಬಿಟ್ಟಿದ್ದರು.
ಸಾಕಿದ ನಾಯಿ ಆಗಿದ್ದರೆ ಏನು ಕಥೆ ಆಗುತ್ತಿತ್ತೋ ಏನೋ? ನಾಯಿ ಸಾಕಿದವರ ಕಥೆ, ಅದು ಸತ್ತಾಗ ಅವರು ಸಂಕಟಪಟ್ಟ ಕಥೆ, ಅದನ್ನು ಮಣ್ಣು ಮಾಡಿದ ಕಥೆ, ಅದರ ಮೇಲೆ ಒಂದು ಸ್ಮಾರಕ ಕಟ್ಟಿದ ಕಥೆ ಕೇಳಿದ್ದೇನೆ. ನಾಯಿ ಸಾಕಿದವರು ಅದನ್ನು ಬಿಟ್ಟು ಪರ ಊರಿಗೆ ಹೋಗಲು ಆಗದೆ ಒದ್ದಾಡಿದ ಕಥೆಯನ್ನೂ ಕೇಳಿದ್ದೇನೆ. ಆದರೆ, ನಮ್ಮ ಫ್ಲಾಟಿನ ಸಾಕಿದ ನಾಯಿಯೂ ಅಲ್ಲದ, ಬೀದಿ ನಾಯಿಯೂ ಅಲ್ಲದ ನಮ್ಮ ನಾಯಿ ಹೀಗೆ ಬೀದಿ ಹೆಣವಾದ ಸುದ್ದಿ ಕೇಳಿ ನಾನೂ ಮಮ್ಮಲ ಮರುಗಿದೆ. ಸಾಯುವ ಹಾಗೆ ಕೂಗುತ್ತಿದ್ದ ಆ ನಾಯಿ ನಮ್ಮ ಫ್ಲಾಟಿನ ನಾಯಿಯೇ ಆಗಿತ್ತು. ಅದು ಜೀವ ಕಳೆದುಕೊಳ್ಳುವ ಮುನ್ನ, ಅದರ ರುಂಡ ಬೇರ್ಪಡುವ ಮುನ್ನ ನನ್ನನ್ನು, ನಮ್ಮ ಫ್ಲಾಟಿನವರನ್ನು ತನ್ನ ನೆರವಿಗೆ ಕರೆದಿರಬಹುದೇ? `ಒಬ್ಬರಾದರೂ ಬರ‌್ರೋ' ಎಂದು ಕೂಗಿರಬಹುದೇ? ಅಂದು ರಾತ್ರಿಯ ಅದರ ಕೂಗನ್ನು ನೆನಪಿಸಿಕೊಂಡರೆ ಹಾಗೆಯೇ ಅನಿಸುತ್ತದೆ.
ನಾವು ಯಾರಾದರೂ ಅದನ್ನು ಸಾಕಿದ್ದರೆ ಅದು ಹೀಗೆ ಬೀದಿ ಹೆಣವಾಗಲು ಬಿಡುತ್ತಿದ್ದೆವೆ? ನಮಗೆಲ್ಲ ಅಷ್ಟು ಪ್ರೀತಿ ತೋರಿದ ಮೂಕಪ್ರಾಣಿಯನ್ನು ನಾವು ಎಷ್ಟು ನಿಕೃಷ್ಟವಾಗಿ ಕಂಡುಬಿಟ್ಟೆವಲ್ಲ?
ಮನುಷ್ಯನೇ ಹಾಗೇನೋ? ಆತನಿಗಿಂತ ನಿಕೃಷ್ಟರು ಯಾರೂ ಇರಲಾರರೇನೋ? ಈಗ ಆ ನಾಯಿಯ ಪ್ರೀತಿಯನ್ನು ಎಲ್ಲಿ ಹುಡುಕೋಣ?