ADVERTISEMENT

ಉತ್ತರ ಕರ್ನಾಟಕ ಎಂಬ ಅಳುವ ಕೂಸು

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:10 IST
Last Updated 16 ಜೂನ್ 2018, 9:10 IST

ಸತ್ಯವೇ ಹಾಗೆ. ಅದು ಕಹಿಯಾಗಿರುತ್ತದೆ, ಅರಗಿಸಿಕೊಳ್ಳಲು ಕಷ್ಟಕರವಾಗಿರುತ್ತದೆ, ಅರ್ಥ ಮಾಡಿಕೊಳ್ಳುವುದು ಬೇಡ ಎಂದು ಅನಿಸುತ್ತದೆ; ಎದುರಿಸುವುದೇ ಬೇಡ ಎಂದುಕೊಂಡರೂ ಮತ್ತೆ ಮತ್ತೆ ಎದುರು ಬಂದು ಧುತ್ತೆಂದು ನಿಲ್ಲುತ್ತದೆ. ಈಗ ಮತ್ತೆ ಎದ್ದು ಬಂದು ನಮ್ಮ ಮುಂದೆ ನಿಂತಿದೆ. ಕರ್ನಾಟಕವನ್ನು ಎರಡಾಗಿ ಒಡೆಯಬೇಕೇ ಎಂಬುದು ಆ ಪ್ರಶ್ನೆ. ಇದನ್ನು ಕೇಳಿದ ಶಾಸಕ ಉಮೇಶ ಕತ್ತಿಯವರೇನೂ ಮೊದಲಿಗರಲ್ಲ. ಬಹುಶಃ ಕೊನೆಯವರೂ ಆಗಿರಲಾರರು. ತೀರಾ ಮೊನ್ನೆ ಮೊನ್ನೆ ವರೆಗೆ ಹೈದರಾಬಾದ್ ಕರ್ನಾಟಕದಲ್ಲಿ ವೈಜನಾಥ ಪಾಟೀಲರು ಅದನ್ನೇ ಕೇಳುತ್ತಿದ್ದರು. ಅಳುವ ಕೂಸಿಗೆ ಮಾತ್ರ ಯಾರಾದರೂ ಹಾಲು ಕೊಡುತ್ತಾರೆ. ಸುಮ್ಮನಿದ್ದರೆ ಆಡಿಕೊಂಡು ಇರಲಿ ಬಿಡು ಎನ್ನುತ್ತಾರೆ. ಪ್ರಶ್ನೆಯನ್ನು ಎದುರಿಸುವುದೇ ಬೇಡ ಎಂದಾಗಲೆಲ್ಲ ಆ ಪ್ರಶ್ನೆ ಕೇಳಿದವರು ಯಾರು, ಅದಕ್ಕೆ ಹಿನ್ನೆಲೆಯೇನು, ಮುನ್ನೆಲೆಯೇನು ಎಂದು ಕಾರಣ ಹುಡುಕುತ್ತ ಪ್ರಶ್ನೆಯನ್ನೇ ಅವಗಣಿಸಿ ಬಿಡುವುದು ಇಂದು ನಿನ್ನೆಯ ವಿದ್ಯಮಾನವಲ್ಲ. ಕತ್ತಿಯವರ ವಿಚಾರದಲ್ಲಿಯೂ ಅದೇ ಆಗುತ್ತಿದೆ. ಅವರನ್ನು ಉಪೇಕ್ಷಿಸುವುದು ಸುಲಭ, ಅವರ ಮೈಮೇಲೆ ಬಿದ್ದು ಅವರನ್ನು ಅವಮಾನಿಸುವುದೂ ಸುಲಭ. ಮಾಧ್ಯಮಗಳಲ್ಲಿನ ಬಾಯಿಬಡಿಕರು/ ಮತ್ತು ಚಳವಳಿ ಹೆಸರಿನ ಪಡ್ಡೆ ಹುಡುಗರು ಅದನ್ನೇ ಮಾಡುತ್ತಿದ್ದಾರೆ. ಅದರಿಂದ ಅವರೇನು ಸಾಧಿಸುತ್ತಾರೆ ಗೊತ್ತಿಲ್ಲ. ಆದರೆ, ಮತ್ತೆ ಮತ್ತೆ ಎದ್ದು ಬರುವ ಒಂದು ನೈಜ ಪ್ರಶ್ನೆಯನ್ನು ಎದುರಿಸುವ ಬಗೆ ಇದಲ್ಲ. ಅದಕ್ಕೆ ಕಾರಣಗಳನ್ನು ಹುಡುಕಬೇಕು. ಅವರು ಏಕೆ ಹಾಗೆ ಹೇಳುತ್ತಿದ್ದಾರೆ ಎಂದು ಶೋಧಿಸಬೇಕು. ವೈಜನಾಥ ಪಾಟೀಲರನ್ನೂ ಹೀಗೆಯೇ ಹೀಗಳೆದೆವು. ಹೀಗಳೆಯಲು ಬಹಳ ದೊಡ್ಡ ಬುದ್ಧಿವಂತಿಕೆಯೇನೂ ಬೇಕಾಗಿಲ್ಲ. ಬಾಯಿ ಜೋರಾಗಿದ್ದರೆ ಸಾಕು. ಆದರೆ, ಬಾಯಿ ಇಲ್ಲದವರು ಅನೇಕ ಜನರು ವೈಜನಾಥ ಪಾಟೀಲರನ್ನೋ, ಉಮೇಶ ಕತ್ತಿಯವರನ್ನೋ ಬೆಂಬಲಿಸುತ್ತಿರಬಹುದು ಎಂದು ಅರ್ಥ ಮಾಡಿಕೊಳ್ಳುವ ತಾಳ್ಮೆ ನಮ್ಮಲ್ಲಿ ಇರಬೇಕು. ಕತ್ತಿಯವರು ಕೇಳಿದ ಕೂಡಲೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಿ ಬಿಡುವುದಿಲ್ಲ. ಆದರೆ, ಅದು ಒಂದು ಸಶಕ್ತ ಭಾಗವಾಗಿ ಒಟ್ಟು ಕರ್ನಾಟಕದಲ್ಲಿ ಅಳವಡಬೇಕು ಎನ್ನುವವರು ಕತ್ತಿಯಂಥವರ ಮಾತನ್ನು ಹತ್ತಿಕ್ಕಲು ಪ್ರಯತ್ನ ಮಾಡುವುದಿಲ್ಲ.

ಕತ್ತಿಯವರು ಪ್ರತ್ಯೇಕ ಕರ್ನಾಟಕ ಕೇಳುತ್ತಿರುವುದಕ್ಕೆ ತಕ್ಷಣದ ಬಲಿಷ್ಠ ಕಾರಣಗಳೇನೂ ಇದ್ದಂತೆ ಇಲ್ಲ. ಆದರೆ, ಐತಿಹಾಸಿಕವಾದ ಅನೇಕ ಕಾರಣಗಳು ಈಗಲೂ ಜ್ವಲಂತವಾಗಿವೆ. 1990ರ ದಶಕದಲ್ಲಿ ಎಚ್‌.ಕೆ.ಪಾಟೀಲರು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಉತ್ತರ ಕರ್ನಾಟಕಕ್ಕೆ ಎಲ್ಲೆಲ್ಲಿ ಅನ್ಯಾಯವಾಯಿತು ಮತ್ತು ಇನ್ನೂ ಆಗುತ್ತಿದೆ ಎಂಬ ಕುರಿತು ಅಂಕಿ–ಅಂಶಗಳ ಆಧಾರ ಸಮೇತ ದೊಡ್ಡ ಪುಸ್ತಕವನ್ನೇ ಬರೆದಿದ್ದರು. ಮುಂದೆ ಏನಾಯಿತು ಗೊತ್ತಾಗಲಿಲ್ಲ. ಅವರ ಸರ್ಕಾರ ಬಂತು. ಅವರೂ ಅದರಲ್ಲಿ ಸಚಿವರಾದರು. ಎಚ್‌.ಕೆ.ಪಾಟೀಲರು ನಂತರ ಆ ಸುದ್ದಿ ಮಾತನಾಡಿದ್ದು ನಮಗೆ ಗೊತ್ತಿಲ್ಲ. ಹಾಗೆಂದು ಉತ್ತರ ಕರ್ನಾಟಕದ ಎಲ್ಲ ಸಮಸ್ಯೆಗಳು ಪರಿಹಾರ ಆದುವೇ ಎಂದರೆ ಉತ್ತರ ಸಮಾಧಾನಕರವಾಗಿ ಇರುವುದಿಲ್ಲ.

ಎಚ್‌.ಕೆ.ಪಾಟೀಲರು ಸುಮ್ಮನಾದುದಕ್ಕೆ ಅವರು ಸಚಿವರಾಗಿದ್ದ ಎಸ್‌.ಎಂ.ಕೃಷ್ಣ ಸರ್ಕಾರ ಡಾ.ಡಿ.ಎಂ.ನಂಜುಂಡಪ್ಪ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚನೆ ಮಾಡಿದ್ದು ಕಾರಣವಾಗಿರಬಹುದು. 953 ಪುಟಗಳ 34 ಅಧ್ಯಾಯಗಳ ನಂಜುಂಡಪ್ಪ ಸಮಿತಿಯ ಸುದೀರ್ಘ ವರದಿಯಲ್ಲಿ ಇಡೀ ಕರ್ನಾಟಕದ ಅಸಮತೋಲನಕ್ಕೆ ಹಿಡಿದ ಕನ್ನಡಿ ಈಗಲೂ ನಮ್ಮ ಕಣ್ಣ ಮುಂದೆ ಇದೆ. ನಂಜುಂಡಪ್ಪ ಸಮಿತಿ ಬರೀ ಉತ್ತರ ಕರ್ನಾಟಕ ಮಾತ್ರ ಹಿಂದುಳಿದಿದೆ ಎಂದು ಹೇಳಲಿಲ್ಲ. ಆಗಿನ 175 ತಾಲ್ಲೂಕುಗಳ ಪೈಕಿ 114 ತಾಲ್ಲೂಕುಗಳು ಹಿಂದುಳಿದಿವೆ ಎಂದು ಅದು ಹೇಳಿತ್ತು. 2003ರಿಂದ 2010ರ ನಡುವಿನ ಅವಧಿಯಲ್ಲಿ 16,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಈ ಅಸಮತೋಲನವನ್ನು ನೀಗಿಸಬೇಕು ಎಂದೂ ವರದಿ ಹೇಳಿತ್ತು. ಕಳೆದ ಆರೇಳು ವರ್ಷಗಳಲ್ಲಿ ರಾಜ್ಯ ಸರ್ಕಾರ 10,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ, ಕರ್ನಾಟಕದ ಹಿಂದುಳಿದ ತಾಲ್ಲೂಕುಗಳ ಸ್ವರೂಪದಲ್ಲಿ ಏನಾದರೂ ಬದಲಾವಣೆ ಆಗಿದೆಯೇ ಎಂದರೆ ಉತ್ತರ ಕೊಡುವುದು ಕಷ್ಟ. ಒಂದು ಪ್ರದೇಶದ ಅಭಿವೃದ್ಧಿಗೆ ಗಟ್ಟಿಯಾದ ಬುನಾದಿ ಇರಬೇಕಾಗುತ್ತದೆ. ಆ ಬುನಾದಿ ಮೂಲ ಸೌಕರ್ಯಗಳದ್ದು.

ದುರಂತ ನೋಡಿ, ಕದಂಬರಿಂದ ಹಿಡಿದು ವಿಜಯನಗರದ ಅರಸರವರೆಗಿನ ಕರ್ನಾಟಕದ ಎಲ್ಲ ರಾಜ ಮನೆತನಗಳು ಉತ್ತರ ಕರ್ನಾಟಕದ ಮೂಲದವು. ವಿಜಯನಗರದ ಅರಸರ ಕಾಲದಲ್ಲಿ ರಸ್ತೆಯಲ್ಲಿ ಮುತ್ತು ರತ್ನ ಮಾರಿದ್ದೇ ಆಯಿತು. ನಂತರ ಆ ನಾಡು ಅತ್ತ ಹೈದರಾಬಾದಿನ ನವಾಬರ ಕೈಯಲ್ಲಿ ಇತ್ತ ಮರಾಠಾ ಸಂಸ್ಥಾನಿಕರ ಕೈಯಲ್ಲಿ ಸಿಕ್ಕು ನಲುಗಿ ಹೋಯಿತು. ಮೈಸೂರಿಗೆ ಅದೃಷ್ಟವಿತ್ತು: ಒಳ್ಳೆಯ ಅರಸರು ಸಿಕ್ಕರು. ಇನ್ನು ಎಷ್ಟು ವರ್ಷ ಕಳೆದರೂ ನಮ್ಮ ಹುಬ್ಬಳ್ಳಿ, ಬೆಳಗಾವಿ ಕಲ್ಬುರ್ಗಿಗಳು ಮೈಸೂರು ಆಗಲಾರವು. ಅಲ್ಲಿನ ಜನರು ಈಗಷ್ಟೇ ಒಳ್ಳೆಯ ರಸ್ತೆಗಳನ್ನು ನೋಡುತ್ತಿದ್ದಾರೆ! ಮೈಸೂರು ಭಾಗಕ್ಕೆ ಒಳ್ಳೆಯ ಅರಸರು ಮಾತ್ರವಲ್ಲ, ದಿವಾನರೂ ಸಿಕ್ಕರು. ಕನ್ನಂಬಾಡಿ ಮತ್ತು ಆಲಮಟ್ಟಿ ಅಣೆಕಟ್ಟೆಗಳ ನಿರ್ಮಾಣದ ನಡುವಿನ ಕಾಲದ ಅಂತರವನ್ನೇ ನೋಡಿಬಿಟ್ಟರೆ ಸಾಕು ಉತ್ತರ ಕರ್ನಾಟಕ ಹೇಗೆ ಮತ್ತು ಎಲ್ಲಿ ಹಿಂದೆ ಉಳಿಯಿತು ಎಂದು ತಿಳಿಯುತ್ತದೆ. ಹಸಿರು ಮತ್ತು ನೀರು ಇಲ್ಲದ ಊರುಗಳು ಬೆಳೆಯುವುದು ಕಷ್ಟ.

ನಂಜುಂಡಪ್ಪ ವರದಿಯ ಪ್ರಕಾರವೇ 114 ಹಿಂದುಳಿದ ತಾಲ್ಲೂಕುಗಳ ಪೈಕಿ 59 ತಾಲ್ಲೂಕುಗಳು ಉತ್ತರ ಕರ್ನಾಟಕದಲ್ಲಿಯೇ ಇವೆ. ಅದರಲ್ಲಿ 39 ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳು. ಅವು ಎಲ್ಲವೂ ಉತ್ತರದಲ್ಲಿಯೇ ಇವೆ. ಬೆಂಗಳೂರು ಮತ್ತು ಮೈಸೂರು ಕಂದಾಯ ವಿಭಾಗದ ಜಿಲ್ಲೆ ಮತ್ತು ತಾಲ್ಲೂಕುಗಳಿಗೆ ಹೋಲಿಸಿದರೆ ಉತ್ತರದ ಬೆಳಗಾವಿ ಮತ್ತು ಕಲ್ಬುರ್ಗಿ ಕಂದಾಯ ವಲಯಗಳಲ್ಲಿ ತಲಾವಾರು ಆದಾಯ ಈಗಲೂ ಕಡಿಮೆಯೇ ಇದೆ. ಒಂದು ಪ್ರದೇಶವನ್ನು ಹಿಂದುಳಿದ ಪ್ರದೇಶ ಎಂದು ಗುರುತಿಸಲು ಅನೇಕ ಮಾನದಂಡಗಳು ಇವೆ. ಈ ಯಾವ ಮಾನದಂಡಗಳಲ್ಲಿಯೂ ಉತ್ತರ ಕರ್ನಾಟಕದ ಜಿಲ್ಲೆಗಳು ಮುಂದೆ ಇಲ್ಲ.

ಒಂದು ಸಾರಿ ಒಂದು ಪ್ರದೇಶ ಹಿಂದುಳಿದುದು ಎಂಬ ತಲೆಪಟ್ಟಿ ಗಳಿಸಿಬಿಟ್ಟರೆ ಸಾಕು ಅಲ್ಲಿನ ಜನರು ಒರಟರು, ದಡ್ಡರು ಎಂಬ ಹಣೆಪಟ್ಟಿ ಹಚ್ಚಿಕೊಂಡು ಬಿಡುತ್ತಾರೆ. ಉತ್ತರ ಕರ್ನಾಟಕದ ಮಂದಿಗೆ ಈಗ ಆಗಿರುವುದೂ ಅದೇ. ಈಗ ಏಕೆ, ಆಗಿನ ಮೈಸೂರು ರಾಜ್ಯ ಒಂದಾಗಲು ದಕ್ಷಿಣದ ಮಂದಿ ಸಿದ್ಧರಿರಲಿಲ್ಲ. ಅವರಿಗೆ ಒಂದು ರಾಜ್ಯವಾಗದೇ ಇರಲು ಅನೇಕ ಕಾರಣಗಳು ಇದ್ದುವು. ಮುಖ್ಯವಾದುದು ರಾಜಕೀಯ ಅಧಿಕಾರ ತಮ್ಮ ಕೈ ಬಿಟ್ಟು ಹೋಗುತ್ತದೆ ಎಂದು ಅವರಿಗೆ ಗೊತ್ತಿತ್ತು. ಮುಂದೆ ಹಾಗೆಯೇ ಆಯಿತು ಕೂಡ. ಆದರೆ, ಮೈಸೂರಿನ ಜನರಿಗೆ ತಮ್ಮ ಪ್ರದೇಶದ ಬಗ್ಗೆ ಎಷ್ಟು ಹೆಮ್ಮೆ ಇತ್ತು ಎಂದರೆ ಒಂದು ಊರಿನ ಹೆಸರನ್ನು ಇಡೀ ರಾಜ್ಯಕ್ಕೂ ವಿಸ್ತರಿಸುವುದರಲ್ಲಿ ಅವರು ಯಶಸ್ವಿಯಾದರು. ಭಾಷಾವಾರು ಪ್ರಾಂತಗಳ ರಚನೆಯಾದಾಗ ಮದ್ರಾಸ್ ಅನ್ನು ಹೊರತುಪಡಿಸಿ ಹೀಗೆ ಒಂದು ಊರಿನ ಹೆಸರು ಇಡೀ ದೇಶದಲ್ಲಿ ಯಾವ ರಾಜ್ಯಕ್ಕೂ ಇಟ್ಟಿರಲಿಲ್ಲ. ರಾಜ್ಯದ ಹೆಸರು ಮೈಸೂರು ಹೋಗಿ ಕರ್ನಾಟಕ ಆಗಲು ಮತ್ತೆ 17 ವರ್ಷ ಕಾಯಬೇಕಾಯಿತು.

ಮೈಸೂರಿನವರು ಅಂದುಕೊಂಡ ಹಾಗೆಯೇ ಉತ್ತರ ಕರ್ನಾಟಕ ರಾಜ್ಯ ಸರ್ಕಾರದ ರಚನೆಯಲ್ಲಿ ದೊಡ್ಡ ಪಾಲನ್ನು ಹೊಂದಿತು. ಈ ಭಾಗದವರೇ ಮುಖ್ಯಮಂತ್ರಿಗಳೂ ಆದರು. ಅವರಿಗೆ ಇಚ್ಛಾಶಕ್ತಿ ಇರಲಿಲ್ಲವೋ, ಸಾಮರ್ಥ್ಯವೇ ಇರಲಿಲ್ಲವೋ ಅಥವಾ ಯಾರು ಮುಖ್ಯಮಂತ್ರಿಯಾದರೂ ಸರಿಪಡಿಸಬೇಕಾದ ಅಂತರ ಅಜಗಜಾಂತರ ಎನ್ನುವಂತೆ ಇತ್ತೋ ಉತ್ತರ ಕರ್ನಾಟಕ ಹಿಂದೆಯೇ ಉಳಿಯಿತು. ಆ ಭಾಗದಿಂದ ಆಯ್ಕೆಯಾಗಿ ಹೋದ ಬಹುಪಾಲು ಶಾಸಕರು ದೂರದೃಷ್ಟಿಯಿಲ್ಲದವರೂ, ಕಡುಭ್ರಷ್ಟರೂ, ವಿಲಾಸಿಗಳೂ, ಜಮೀನುದಾರರೂ, ಆಲಸಿಗಳೂ ಆಗಿದ್ದುದೂ ದಕ್ಷಿಣ ಕರ್ನಾಟಕದ ಸಮಕ್ಕೆ ಆ ಭಾಗ ಬರಲು ಸಾಧ್ಯವೇ ಆಗಲಿಲ್ಲ. ಅಭಿವೃದ್ಧಿ ಉದ್ದೇಶ ಇಟ್ಟುಕೊಂಡು ಅನೇಕ ಮಂಡಳಿಗಳೂ, ನಿಗಮಗಳೂ ರಚನೆಯಾದುವು. ಯಾರಿಗೆ ಒಳಿತಾಯಿತೋ ಗೊತ್ತಾಗಲಿಲ್ಲ. ಒಳ್ಳೆಯ ರಸ್ತೆಗಳು, ಒಳ್ಳೆಯ ಶಾಲೆಗಳು, ಒಳ್ಳೆಯ ಆಸ್ಪತ್ರೆಗಳು ಈಗಲೂ ಉತ್ತರ ಕರ್ನಾಟಕದ ಅನೇಕ ಊರುಗಳಿಗೆ ನಡುರಾತ್ರಿ ಬೀಳುವ ಕನಸುಗಳು. ಧಿಗ್ಗನೆ ಎದ್ದು ಕುಳಿತರೆ ಕಣ್ಣ ಮುಂದೆ ಬರೀ ಗಾಢಾಂಧಕಾರ! ಜನರೂ ಬಾಯಿ ಇಲ್ಲದವರು. ಹಳ್ಳಿಯಲ್ಲಿ ಕೆಲಸ ಇಲ್ಲವೇ? ಯಾರಿಗೂ ಶಾಪ ಹಾಕದೆ ಗಂಟು ಮೂಟೆ ಕಟ್ಟಿಕೊಂಡು, ಮನೆಗೆ ಬೀಗ ಹಾಕಿ ಪಕ್ಕದ ರಾಜ್ಯಕ್ಕೆ ವಲಸೆ ಹೋಗುವವರು. ಇಡೀ ಊರಿಗೆ ಊರೇ ವಲಸೆ ಹೋಗುವ ಎಷ್ಟು ಹಳ್ಳಿಗಳು ಉತ್ತರ ಕರ್ನಾಟಕದಲ್ಲಿ ಇಲ್ಲ? ದಕ್ಷಿಣ ಕರ್ನಾಟಕದ ಯಾವ ತಾಲ್ಲೂಕಿನಿಂದ ಜನರು ಹೀಗೆ ವಲಸೆ ಹೋಗುತ್ತಾರೆ? ನಂಜುಂಡಪ್ಪ ವರದಿ ಪ್ರಕಾರ ಚಾಮರಾಜನಗರ, ಕೋಲಾರ, ತುಮಕೂರು ಮತ್ತು ಮಂಡ್ಯ ಜಿಲ್ಲೆಯ ಹಲವು ತಾಲ್ಲೂಕುಗಳೂ ಹಿಂದುಳಿದವು. ಆದರೆ, ಅಲ್ಲಿನ ಯಾವ ತಾಲ್ಲೂಕಿನಿಂದಲೂ ಜನರು ಪಕ್ಕದ ರಾಜ್ಯಕ್ಕೆ ವಲಸೆ ಹೋಗುವುದಿಲ್ಲ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದಲೂ ಜನರು ವಲಸೆ ಹೋಗುತ್ತಾರೆ. ಆದರೆ, ಅವರು ವಿಮಾನದಲ್ಲಿ ಹೋಗುತ್ತಾರೆ. ವಿಮಾನದಲ್ಲಿ ಬರುತ್ತಾರೆ! ಎಷ್ಟೊಂದು ವ್ಯತ್ಯಾಸ? ಉತ್ತರ ಕರ್ನಾಟಕದ ಜನರು ನಗರಕ್ಕೆ ವಲಸೆ ಹೋಗಿ ಗುಡಿಸಲುಗಳಲ್ಲಿ ವಾಸ ಮಾಡುತ್ತಾರೆ. ಅಲ್ಲಿಯೇ ಹೆರುತ್ತಾರೆ, ಕಲ್ಲು ಹೊರುತ್ತಾರೆ, ಮಣ್ಣು ಹೊರುತ್ತಾರೆ, ಮನೆ ಕಟ್ಟುತ್ತಾರೆ; ಅಪಘಾತವಾಗಿ ರಸ್ತೆಗಳಲ್ಲಿಯೇ ಸತ್ತೂ ಹೋಗುತ್ತಾರೆ.

ಅಲ್ಲಿನ ಮಂದಿಗೆ ಅಭಿವೃದ್ಧಿಯ ಹಾಗೆ ರಾಜಧಾನಿಯೂ ದೂರವಾಗಿದೆ. ರಾಜಧಾನಿ ಎಂಬುದು ಅಧಿಕಾರದ ಕೇಂದ್ರ. ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನ. ಲಾಬಿ ಮಾಡುವವರ ತಾಣ. ಸ್ಥಾನಮಾನಗಳು ತೀರ್ಮಾನವಾಗುವ ಜಾಗ. ಮೈಸೂರು ವಿಶ್ವವಿದ್ಯಾಲಯಕ್ಕೆ ಇನ್ನೇನು ನೂರು ವರ್ಷ ತುಂಬುತ್ತದೆ. ಕಳೆದ 99  ವರ್ಷಗಳಲ್ಲಿ ಎಷ್ಟು ಮಂದಿ ಕುಲಪತಿಗಳು ಆಗಿ ಹೋದರೋ ಗೊತ್ತಿಲ್ಲ. ಆದರೆ, ಇದುವರೆಗೆ ಅಲ್ಲಿ ಆದ ಕುಲಪತಿಗಳಲ್ಲಿ ಒಬ್ಬರೇ ಒಬ್ಬರು ಉತ್ತರ ಕರ್ನಾಟಕದವರು. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಐವತ್ತು ವರ್ಷ ತುಂಬುತ್ತಿದೆ. ಇದುವರೆಗೆ ಉತ್ತರ ಕರ್ನಾಟಕದಿಂದ ಕುಲಪತಿಗಳು ಆದವರು ಒಬ್ಬರೋ ಇಬ್ಬರೋ? ಅದೂ ಆದುದು ಮರೆತು ಹೋಗುವಷ್ಟು ಹಿಂದಿನ ಕಾಲದಲ್ಲಿ. ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಮೂವತ್ತು ವರ್ಷ ತುಂಬಿದೆ. ಅಲ್ಲಿಯೂ ಇದುವರೆಗೆ ಆ ಭಾಗದಿಂದ ಕುಲಪತಿ ಆದವರು ಒಬ್ಬರೇ! ಉಳಿದವರೆಲ್ಲ ದಕ್ಷಿಣ ಕರ್ನಾಟಕದವರೇ! ಇಡೀ ರಾಜ್ಯದ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿ ಸ್ಥಾಪನೆಯಾಗಿ 16 ವರ್ಷಗಳೇ ಕಳೆದಿವೆ. ಉತ್ತರ ಕರ್ನಾಟಕದ ಒಬ್ಬರೂ ಅಲ್ಲಿ ಕುಲಪತಿ ಆಗಿಲ್ಲ. ಬೆಳಗಾವಿಯ ಸ್ನಾತಕೋತ್ತರ ಕೇಂದ್ರ ಬಡ್ತಿ ಪಡೆದು ವಿಶ್ವವಿದ್ಯಾಲಯ ಆಗಲು ಕಾಲು ಶತಮಾನವೇ ಬೇಕಾಯಿತು. ಅಲ್ಲಿಗೂ ದಕ್ಷಿಣ ಕರ್ನಾಟಕದವರೇ ಬಂದು ಕುಲಪತಿ ಆದರು. ನಮ್ಮದೂ ನಮಗೇ ಇರಲಿ, ನಿಮ್ಮದೂ ನಮಗೇ ಇರಲಿ ಎಂದು ಅವರು ಹೇಳುತ್ತಿದ್ದಾರೆಯೇ? ದಕ್ಷಿಣ ಕರ್ನಾಟಕದ ಬೌದ್ಧಿಕ ಪಾರುಪತ್ಯೆದಾರಿಕೆಗೆ ಇನ್ನೆಷ್ಟು ಉದಾಹರಣೆಗಳನ್ನು ಕೊಡಬೇಕು? ಬೇಕಾದಷ್ಟು ಕೊಡಬಹುದು. ಇದು ಎಲ್ಲ ವಿದ್ವತ್ತು, ಬುದ್ಧಿವಂತಿಕೆ, ಜಾಣ್ಮೆ, ಚಾಣಾಕ್ಷತನ ದಕ್ಷಿಣದಲ್ಲಿಯೇ ಇದೆ ಎಂಬ ಅಹಂಕಾರದ ಫಲ ಆಗಿರಬಹುದು; ಅಥವಾ ಅದು ನಿಜ ಎಂದು ಒಪ್ಪಿಕೊಳ್ಳುವ ಉತ್ತರದವರ ದಾಸ್ಯದ ಫಲವೂ ಆಗಿರಬಹುದು.

ಇದನ್ನೆಲ್ಲ ಇನ್ನೂ ಎಷ್ಟು ದಿನ ಎಂದು ಸಹಿಸುವುದು? ನಿಮ್ಮ ಜತೆ ಬಂದು ಸುಖವೇನೂ ಆಗಲಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಬೇಸತ್ತು ಹೇಳಿದರೆ ಎಲ್ಲರೂ ಎದ್ದು ಬಡಿಯಲು ಆರಂಭಿಸುತ್ತಾರೆ. ಸತ್ಯವನ್ನು ಹೇಳುವುದೇ ಬೇಡ ಎಂದರೆ ಹೇಗೆ? ಅದು ಕಹಿಯಾಗಿರುತ್ತದೆ; ಅರಗಿಸಿಕೊಳ್ಳಲು ಕಷ್ಟವಾಗಿರುತ್ತದೆ. ಆದರೆ, ಅರ್ಥ ಮಾಡಿಕೊಳ್ಳುವುದಾದರೂ ಬೇಡವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.