ADVERTISEMENT

`ಉತ್ತರ ಮುಖಿ' ರಾಜಕಾರಣದ ಕಷ್ಟಗಳು ನಿಷ್ಠುರಗಳು...

ಪದ್ಮರಾಜ ದಂಡಾವತಿ
Published 12 ಜನವರಿ 2013, 19:59 IST
Last Updated 12 ಜನವರಿ 2013, 19:59 IST

ಶತ್ರು ಪಾಳೆಯಕ್ಕೆ ದಾಳಿಯನ್ನು ತೆಗೆದುಕೊಂಡು ಹೋಗುವುದು ಎಂದರೆ ಹೀಗೆಯೇ ಇರಬೇಕು. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಭಾರತೀಯ ಜನತಾ ಪಕ್ಷ ಘೋಷಿಸಿಬಿಟ್ಟಿದೆ. ಸಾಮಾನ್ಯ ಸಂದರ್ಭದಲ್ಲಿ ಯಾವ ರಾಜಕೀಯ ಪಕ್ಷವೂ ಇಂಥ ಒಂದು ನಿರ್ಧಾರವನ್ನು ಪ್ರಕಟಿಸುವುದಿಲ್ಲ. ಹೀಗೆ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಪ್ರಕಟ ಮಾಡುವುದರಿಂದ ಅನುಕೂಲಗಳು ಇರುವ ಹಾಗೆ ಅನನುಕೂಲಗಳೂ ಇರುತ್ತವೆ. ಆದರೆ, ಬಿಜೆಪಿಗೆ ಎರಡು ದೃಷ್ಟಿಯಿಂದ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವುದು ಅನಿವಾರ್ಯವಾಗಿತ್ತು. ಒಂದು, ಕರ್ನಾಟಕ ಜನತಾ ಪಕ್ಷದ ಲಿಂಗಾಯತ ವೋಟ್‌ಬ್ಯಾಂಕಿಗೆ ಕನ್ನ ಹಾಕುವುದು. ಎರಡು, ಲಿಂಗಾಯತರಾದ ತಮಗೆ ಬಿಜೆಪಿ ಅನ್ಯಾಯ ಮಾಡಿತು ಎಂದು ಬಿ.ಎಸ್.ಯಡಿಯೂರಪ್ಪ ಹೇಳುತ್ತ ಹೋಗುವುದನ್ನು ತಡೆಯುವುದು. ಮೂರನೆಯ ಒಂದು ಕಾರಣವೂ ಇಲ್ಲಿ ಕೆಲಸ ಮಾಡಿದಂತೆ ಇದೆ. ರಾಜ್ಯದ ಕೋರ್ ಕಮಿಟಿ ಸಭೆ ಸೇರುವುದಕ್ಕಿಂತ ಮುಂಚೆಯೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, `ಶೆಟ್ಟರ್ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ' ಎಂದು ಗದಗಿನಲ್ಲಿ ಪ್ರಕಟಿಸಿದರು. ಅವರ ಪ್ರಕಟಣೆಗೆ ಕೋರ್ ಕಮಿಟಿ ನಂತರ ಸಮ್ಮತಿಯ ಮುದ್ರೆ ಒತ್ತಿತು. ತಮ್ಮ ತೀರ್ಮಾನವನ್ನು ಅನಂತಕುಮಾರ್ ಸಂಸದೀಯ ಮಂಡಳಿಗೂ ಒಯ್ದು ಅಲ್ಲಿಯೂ ಅದಕ್ಕೆ ಅನುಮತಿ ದೊರಕಿಸಿಕೊಂಡಿದ್ದಾರೆ. ಆ ಸುದ್ದಿಯನ್ನು ತಾವೇ ಆಸಕ್ತಿ ವಹಿಸಿ ಮಾಧ್ಯಮಗಳ ಎದುರು ಪ್ರಕಟಪಡಿಸಿದ್ದಾರೆ. ತಮ್ಮನ್ನು ಕಂಡ ಕಂಡಲ್ಲೆಲ್ಲ, ಅವಕಾಶ ಸಿಕ್ಕಾಗಲೆಲ್ಲ ಹೀಗಳೆದ ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ತಿರುಗೇಟು ಕೊಡಲು ಅನಂತಕುಮಾರ್, ಲಿಂಗಾಯತರಾದ ಶೆಟ್ಟರ್ ಅವರನ್ನೇ ಅಸ್ತ್ರವಾಗಿ ಬಳಸಿಕೊಂಡರು! ಕೆಲವರು ಆಡಿ ತೋರಿಸುತ್ತಾರೆ. ಇನ್ನು ಕೆಲವರು ಮಾಡಿ ತೋರಿಸುತ್ತಾರೆ. ಎಲ್ಲರೂ ಒಂದೇ ಗರಡಿಯಲ್ಲಿ ಪಳಗಿದವರು!

ಹೊಸ ವರ್ಷ ಆರಂಭವಾಗಿ ಎರಡೇ ದಿನವಾಗಿತ್ತು. ಯಡಿಯೂರಪ್ಪ ಹಿರಿಯ ಪತ್ರಕರ್ತರನ್ನು, ಸಂಪಾದಕರನ್ನು ಊಟಕ್ಕೆ ಕರೆದಿದ್ದರು. ಅವರು ತಮ್ಮ ಮುಂದಿನ ನಡೆಯ ಬಗ್ಗೆ ಎಷ್ಟೇ ನಿಗೂಢವಾಗಿ ಮಾತನಾಡುವಂತೆ ತೋರಿಸಿಕೊಂಡರೂ ಅದೇನು ಕುತೂಹಲ ಕೆರಳಿಸಲಿಲ್ಲ. ಅವರಿಗೂ ದ್ವಂದ್ವ: ಸರ್ಕಾರ ಬೀಳಿಸಿದರೆ ಹೇಗೆ, ಬೀಳಿಸದೇ ಇದ್ದರೆ ಹೇಗೆ ಎಂದು. ಯಡಿಯೂರಪ್ಪ ಅವರಿಗೆ ಸರ್ಕಾರ ಬೀಳಿಸುವ ಶಕ್ತಿ ಅವರೇ ನಿಗದಿ ಮಾಡಿದ ಸಂಕ್ರಾಂತಿ ಗಡುವಿನ ನಂತರವೂ ಬರುವಂತೆ ಕಾಣುವುದಿಲ್ಲ. ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟಾಗ ಅವರ ಜತೆಗೆ ಅರವತ್ತು ಎಪ್ಪತ್ತು ಮಂದಿ ಶಾಸಕರು ರಾಜಭವನಕ್ಕೆ ಬಂದಿರಬಹುದು. ಆದರೆ, ಈಗ ಅವರಲ್ಲಿ ಆ ಶಕ್ತಿ ಉಳಿದಂತೆ ಕಾಣುವುದಿಲ್ಲ. ತಾವೇ ಮುಖ್ಯಮಂತ್ರಿ ಮಾಡಿದ ಜಗದೀಶ ಶೆಟ್ಟರ್ ಮೇಲೆ ಯಡಿಯೂರಪ್ಪನವರಿಗೆ ಈಗ ಯಾವುದೇ ಪ್ರೀತಿ ಉಳಿದಿರಲು ಸಾಧ್ಯವಿಲ್ಲ. ಆದರೆ, ಯಡಿಯೂರಪ್ಪ ಬೆಂಬಲಿಗರು ಎನ್ನುವ ಸಚಿವರಲ್ಲಿಯೇ ಶೆಟ್ಟರ್ ಮೇಲಿನ `ಮೋಹ' ಕರಗಿಲ್ಲ; ಶಾಸಕರಲ್ಲಿಯೂ ಅಷ್ಟೇ. ಸರ್ಕಾರದ ಜತೆಗೆ ಇದ್ದರೆ ಒಂದೆರಡು ಕೆಲಸ ಆಗುತ್ತವೆ. ನಾಲ್ಕು ಕಾಸೂ ಸಿಗಬಹುದು!

ಯಡಿಯೂರಪ್ಪ ಜತೆಗೆ ಹೋದರೆ ಏನು ಸಿಗುತ್ತದೆ? ಸರ್ಕಾರ ಬೀಳಿಸಲು ಯಡಿಯೂರಪ್ಪ ದಿನ ಮುಂದೆ ಹಾಕುತ್ತಿರುವ ನಿಜವಾದ ಕಾರಣ ಇದು. ತಮ್ಮ ಜತೆಗೆ ಕನಿಷ್ಠ ಮೂವತ್ತು ಮಂದಿ ಶಾಸಕರು, ಏಳೆಂಟು ಮಂದಿ ಸಚಿವರು ಇದ್ದಾರೆ ಎಂದು ಯಡಿಯೂರಪ್ಪ ಚುನಾವಣೆ ವೇಳೆ ತೋರಿಸದೇ ಇದ್ದರೆ ಜನರು ಅವರ ಬೆಂಬಲಕ್ಕೆ ದೊಡ್ಡ ರೀತಿಯಲ್ಲಿ ನಿಲ್ಲುವುದು ಕಷ್ಟ. ಬಹುಶಃ ಅದಕ್ಕೇ ಯಡಿಯೂರಪ್ಪನವರು, ಶೆಟ್ಟರ್ ವಿಧಾನಸಭೆ ವಿಸರ್ಜಿಸಲಿ ಎಂದು ಸವಾಲು ಹಾಕುತ್ತಿರುವುದು. ಯಾರಾದರೂ ಈ ಸವಾಲನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ಬಿಜೆಪಿ, ಯಡಿಯೂರಪ್ಪ ಅವರಿಗೆ ಮತ್ತಷ್ಟು ಕಷ್ಟ ಒಡ್ಡಿದಂತೆ ಕಾಣುತ್ತದೆ. ಈಗ ಯಡಿಯೂರಪ್ಪನವರು ಜನರ ಮುಂದೆ ಏನು ದೂರು ಒಯ್ಯುತ್ತಾರೆ?

ಇದು ಬರೀ ಯಡಿಯೂರಪ್ಪನವರ ಕಷ್ಟ ಮಾತ್ರವಲ್ಲ ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ಸಿಗೂ ಕಷ್ಟ ತಂದಂತೆ ಕಾಣುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರೆ ಅವರ ವಿರುದ್ಧ ಹೇಳಲು ಬೇಕಾದಷ್ಟು ಇತ್ತು. ಈಗ ಜಗದೀಶ ಶೆಟ್ಟರ್ ಸರ್ಕಾರದ ವಿರುದ್ಧ ಹೇಳಲು ಅವರ ಬಳಿ ಏನೂ ಇದ್ದಂತೆ ಕಾಣುವುದಿಲ್ಲ. ಈಗ ರಾಜ್ಯದಲ್ಲಿ ಸರ್ಕಾರ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ. ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದಾಗಲೇ ರಾಜ್ಯದಲ್ಲಿ ಒಂದು `ಸಕ್ರಿಯ' ಸರ್ಕಾರ ಇದೆ ಎಂಬ ಅನಿಸಿಕೆ ಹೊರಟು ಹೋಗಿತ್ತು. ಈಗ ಅದಕ್ಕಿಂತ ಪರಿಸ್ಥಿತಿ ಸುಧಾರಿಸಿದೆ ಎಂದೇನೂ ಅನಿಸುವುದಿಲ್ಲ. ಕೊನೆಯ ದಿನಗಳ ಒಂದು ಸರ್ಕಾರ ಹೇಗೆ ಇರಬಹುದೋ ಇದೂ ಹಾಗೆಯೇ ಇದೆ. ಪತ್ರಿಕೆಗಳಲ್ಲಿ ದಿನಕ್ಕೊಂದು ಇಲಾಖೆಯ ಜಾಹೀರಾತು ಬರುತ್ತಿದೆ. ಸಂಪುಟ ಮತ್ತೆ ಮತ್ತೆ ಸಭೆ ಸೇರುತ್ತಿದೆ. ಕೋಟಿಗಟ್ಟಲೆ ವೆಚ್ಚದ ಯೋಜನೆಯ ಪ್ರಕಟಣೆಗಳು ಹೊರಗೆ ಬೀಳುತ್ತಿವೆ, ಅಷ್ಟೇ. ಅದನ್ನೆಲ್ಲ ಯಾರಾದರೂ ನಂಬುತ್ತಾರೆಯೇ? ಗೊತ್ತಿಲ್ಲ. ಹೀಗೆ ಒಂದು ಕಾಲ ತಳ್ಳುವ ಸರ್ಕಾರದ ವಿರುದ್ಧ ಹೇಳಲು ವಿರೋಧ ಪಕ್ಷಕ್ಕೆ ಏನೂ ಇರುವುದಿಲ್ಲ.

ಆದರೆ, ಯಡಿಯೂರಪ್ಪ ಮತ್ತು ಬಿಜೆಪಿಯ ಹಾಗೆಯೇ ಕಾಂಗ್ರೆಸ್ ಕೂಡ ಉತ್ತರ ಕರ್ನಾಟಕದಲ್ಲಿಯೇ ನೆಲೆ ಹುಡುಕುವುದು ಅನಿವಾರ್ಯ ಆಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಲ್ಲಿಯೇ 96 ಕ್ಷೇತ್ರಗಳು ಇವೆ. ಅಲ್ಲಿ ಬಹುಮತ ಗಳಿಸುವ ಪಕ್ಷವೇ ರಾಜ್ಯದಲ್ಲಿ ಸರ್ಕಾರ ರಚಿಸುತ್ತದೆ. ಆ ಭಾಗದಲ್ಲಿ ಲಿಂಗಾಯತ ಸಮುದಾಯ ಬಹುಸಂಖ್ಯಾತ ಆಗಿರುವುದು ಮತ್ತು ಆ ಸಮುದಾಯದಲ್ಲಿ ಹಿಂದೆಂದಿಗಿಂತ ಹೆಚ್ಚಿನ `ಅಸ್ಮಿತೆ'ಯನ್ನು ಯಡಿಯೂರಪ್ಪ ಹುಟ್ಟು ಹಾಕಿರುವುದು ಈ ಚುನಾವಣೆಯ ಮುಖ್ಯ ಸವಾಲು. ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಪ್ರಕಟಿಸಿರುವುದು ಈ ಸವಾಲನ್ನು ಎದುರಿಸುವುದಕ್ಕಾಗಿಯೇ, ಮತ್ತು ಉತ್ತರ ಕರ್ನಾಟಕದಲ್ಲಿ ನೆಲೆ ಭದ್ರಪಡಿಸುವುದಕ್ಕಾಗಿಯೇ. ಕಾಂಗ್ರೆಸ್ ಸದಸ್ಯರ ಮೊದಲ `ನಡಿಗೆ' ಕೂಡಲ ಸಂಗಮದಲ್ಲಿ ಪರ್ಯವಸಾನ ಆಗುತ್ತಿರುವುದು, ಎರಡನೇ ಹಂತದ `ನಡಿಗೆ' ಬಸವಕಲ್ಯಾಣದಿಂದ ಆರಂಭ ಆಗುತ್ತಿರುವುದು ಕೂಡ ಕೇವಲ ಆಕಸ್ಮಿಕವಲ್ಲ. ಹೈದರಾಬಾದ್-ಕರ್ನಾಟಕ ಭಾಗದ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಎಂದೂ ಯಾವ ಲಿಂಗಾಯತ ಸ್ವಾಮೀಜಿಯ ಪಾದಕ್ಕೆ ಬಿದ್ದವರಲ್ಲ. ಅವರು ಮೊನ್ನೆ ಸ್ವಾಮೀಜಿಯೊಬ್ಬರಿಗೆ ಸಾಷ್ಟಾಂಗ ನಮಸ್ಕಾರ ಹಾಕಿ `ಅಭಯ' ಕೇಳಿದರು. ಅವರು ಕೊಟ್ಟರೋ ಬಿಟ್ಟರೋ ಗೊತ್ತಿಲ್ಲ. ಆದರೆ, ಮುಂದಿನ ಚುನಾವಣೆಯಲ್ಲಿ `ಲಿಂಗಾಯತ' ಎಂಬ ಒಂದು ಅಂಶ ಎಷ್ಟು ಮುಖ್ಯವಾಗಿರುತ್ತದೆ ಎಂಬುದಕ್ಕೆ ಸಿಗುತ್ತಿರುವ ಇಂಗಿತಗಳು ಇವು.

ಜೆ.ಡಿ (ಎಸ್) ಕಷ್ಟ ಇನ್ನೊಂದು ಬಗೆಯದು. ಆ ಪಕ್ಷಕ್ಕೆ ಉತ್ತರ ಕರ್ನಾಟಕದಲ್ಲಿ ಅಂಥ ಬುನಾದಿ ಇಲ್ಲ. ಅಲ್ಲಿ ಇಲ್ಲಿ ಒಂದಿಷ್ಟು ಇರಬಹುದು. ಅದು ದೊಡ್ಡ ಬೆಂಬಲವಲ್ಲ. ಆ ಪಕ್ಷದಲ್ಲಿ ಇರುವ ಲಿಂಗಾಯತ ನಾಯಕರು ಸಮುದಾಯವನ್ನು ತಮ್ಮ ಜತೆಗೆ ಕರೆದುಕೊಂಡು ಬರುವವರೂ ಅಲ್ಲ. ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ ಕಾಂಗ್ರೆಸ್ ಪಕ್ಷಕ್ಕೆ ಆ ಭಾಗದಲ್ಲಿ ದೊಡ್ಡ ಮುನ್ನಡೆ ಸಿಗುವ ಲಕ್ಷಣ ಇದೆ. ಅಲ್ಲಿ ಒಂದಿಷ್ಟು ಪ್ರಭಾವವಿದ್ದ ಜೆ.ಡಿ.(ಎಸ್)ಗೆ ಈಗ ಇದೂ ಒಂದು ದೊಡ್ಡ ಅಡಚಣೆ ಆಗಬಹುದು. ಈಗ ಏನಿದ್ದರೂ ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಒಕ್ಕಲಿಗರು ಸಾಂದ್ರವಾಗಿರುವ ಪ್ರದೇಶದಲ್ಲಿಯೇ ಹೆಚ್ಚು ಸೀಟುಗಳನ್ನು ಗೆಲ್ಲಲು ಪ್ರಯತ್ನ ಮಾಡಬೇಕು. ಈ ತಂತ್ರದ ಭಾಗವಾಗಿಯೇ ಕಾವೇರಿ ವಿಚಾರದಲ್ಲಿ ದೇವೇಗೌಡರು ಅತ್ಯಂತ ಮುತ್ಸದ್ದಿತನದಿಂದ ನಡೆದುಕೊಂಡಿದ್ದಾರೆ, ನಡೆದುಕೊಳ್ಳುತ್ತಿದ್ದಾರೆ. ಅವರು ಆಡುವ ಪ್ರತಿಯೊಂದು ಮಾತಿನಲ್ಲಿಯೂ ಅವರ ರಾಜಕೀಯ ಅನುಭವ ವ್ಯಕ್ತವಾಗುತ್ತಿದೆ. ಕಾವೇರಿ ನ್ಯಾಯಮಂಡಳಿಯ ಅಂತಿಮ ಐತೀರ್ಪಿನ ಅಧಿಸೂಚನೆ ಹೊರಡಿಸಬಾರದು ಎಂದು ದೇವೇಗೌಡರು ಪ್ರಧಾನಿ ಬಳಿಗೆ ನಿಯೋಗ ತೆಗೆದುಕೊಂಡು ಹೋಗುವ ಮಾತು ಆಡಿದ್ದು, ಒಪ್ಪದಿದ್ದರೆ ಅವರ ಮನೆ ಮುಂದೆ ಧರಣಿ ಮಾಡುವ ಬೆದರಿಕೆ ಹಾಕಿದ್ದು, ಆ ನಿಯೋಗದ ನೇತೃತ್ವವನ್ನು ಎಸ್.ಎಂ.ಕೃಷ್ಣ ಅವರೇ ವಹಿಸಿಕೊಳ್ಳಲಿ ಎಂದು ಹೇಳಿದ್ದು, ಅದಕ್ಕಾಗಿ ತಾವು ಬೇಕಾದರೆ ಕೃಷ್ಣ ಮನೆಗೆ ಹೋಗಲು ಸಿದ್ಧ ಎಂದು ಹೇಳಿದ್ದು ಎಲ್ಲವೂ ಲೆಕ್ಕ ಹಾಕಿ ತೂಗಿದಂಥ ಮಾತುಗಳು. ಕೃಷ್ಣೆಯ ಕಡೆಗೆ ನಡಿಗೆ ಹೊರಟಿರುವ ಕಾಂಗ್ರೆಸ್ಸಿಗರಿಗೆ ಕಾವೇರಿ ನೆನಪು ಮಾಡುವ ಅವರ ಮಾತಿನಲ್ಲಿಯೂ ಇದೇ ಚಾಣಾಕ್ಷತನ ಇದೆ. ಕಾಂಗ್ರೆಸ್ಸಿಗರು ಕಾವೇರಿ ಮರೆತು ಕೃಷ್ಣೆ ಕಡೆ ಹೊರಟಿದ್ದಾರೆ ಎಂದು ಅವರು ದಕ್ಷಿಣ ಕರ್ನಾಟಕದ ಒಕ್ಕಲಿಗ ಮತದಾರರಿಗೆ ಹೇಳಿ ಕೊಡುವಂತೆ ಕಾಣುತ್ತಿದೆ. ಕಾವೇರಿ ವಿಚಾರದಲ್ಲಿ ಮೊದಲೇ ಮುಖ ಕಳೆದುಕೊಂಡ ಕಾಂಗ್ರೆಸ್ಸಿಗೆ ಇನ್ನಷ್ಟು ಮುಖಭಂಗ ಮಾಡುವ ಹುನ್ನಾರ ಇದು!

ದಕ್ಷಿಣ ಕರ್ನಾಟಕದಲ್ಲಿ ಕೃಷ್ಣ ಅವರನ್ನು ಎದುರು ಹಾಕಿಕೊಳ್ಳದೇ, ಕೆಣಕದೇ ರಾಜಕೀಯ ಮಾಡುವುದು ಜೆ.ಡಿ (ಎಸ್)ಗೆ ಸಾಧ್ಯವೇ ಇಲ್ಲ. ದೇವೇಗೌಡರು ಅದನ್ನು ಸೂಕ್ಷ್ಮವಾಗಿ ಮಾಡುತ್ತಿದ್ದರೆ ಕುಮಾರಸ್ವಾಮಿ ಕೊಂಚ ಒರಟಾಗಿಯೇ ಮಾಡಿದ್ದಾರೆ. ಟೆನ್ನಿಸ್ ಆಡುವ ಕೃಷ್ಣ ಅವರಿಗೆ ಪತ್ರಿಕೆಗಳ ಮುಖಪುಟದಲ್ಲಿ ಸಿಗುವ ಜಾಗ ಊರೂರು ಬಿಸಿಲಲ್ಲಿ ಅಲೆಯುವ ತಮಗೆ ಸಿಗುತ್ತಿಲ್ಲ ಎಂದು ಕುಮಾರಸ್ವಾಮಿ ದೂರಿದ್ದನ್ನು ಹೇಗೂ ಗ್ರಹಿಸಬಹುದು. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು ಇದೇ ದೂರು ಹೇಳಿದ್ದರು. ಆ ಕಾಲದಲ್ಲಿ ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಅವರು ಹೆಗಡೆಯವರ ನಿಕಟವರ್ತಿ.

ದೇವೇಗೌಡರು ಹೆಗಡೆಯವರ ವಿರುದ್ಧ, ಮಾಧ್ಯಮಗಳ ವಿರುದ್ಧ ಏನಾದರೂ ಹೇಳಬೇಕಿದ್ದರೆ, `ಶಾಮಣ್ಣನವರೇ ಏನು ಹೇಳುತ್ತಿರಿ?' ಎಂದು ಕೆಣಕುತ್ತಿದ್ದರು, ಕಿಚಾಯಿಸುತ್ತಿದ್ದರು. ಈಗಲೂ ಮಾಧ್ಯಮಗಳ ಬಗ್ಗೆ ಅವರಿಗೆ ಅಸಮಾಧಾನ ಕಡಿಮೆಯೇನೂ ಇಲ್ಲ. ದೊಡ್ಡ ಜಾತಿಯವರನ್ನು ಮತ್ತು ಇಂಗ್ಲಿಷ್ ಬಲ್ಲವರನ್ನು ಓಲೈಸುವುದು ಮಾಧ್ಯಮಕ್ಕೆ ಅಂಟಿದ ಸಹಜ ಅವಗುಣ. ಮುಖ್ಯಮಂತ್ರಿ ಆದಾಗ ತಮಗೆ ಅಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದಿದ್ದ ಕುಮಾರಸ್ವಾಮಿ ಮುಖ್ಯಮಂತ್ರಿ ಪದವಿ ಕಳೆದುಕೊಂಡ ನಂತರವಾದರೂ ಕಲಿಯಬಹುದಿತ್ತಲ್ಲ? ಮಾಧ್ಯಮಗಳಿಗೆ ಅಹಂಕಾರ, ಅವು ಸುಧಾರಿಸಿಕೊಳ್ಳುವುದಿಲ್ಲ. ಕುಮಾರಸ್ವಾಮಿಯವರೇ ಸರಿಪಡಿಸಿಕೊಳ್ಳಬೇಕು. ರಾಜಕಾರಣಿಗಳ ಕಷ್ಟ ಒಂದೇ ಎರಡೇ?!...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.