ರಾಜಕಾರಣಕ್ಕೆ ಒಂದು ಭರವಸೆ ಎಂದು ಇರಬೇಕು. ಅದು ಅಧಿಕಾರದ ಭರವಸೆ; ಇಂದಲ್ಲ ನಾಳೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಭರವಸೆ. ಆ ಭರವಸೆ ಕೈಗೂಡುವುದಿಲ್ಲ ಎಂದು ಅನಿಸತೊಡಗಿದರೆ ಭ್ರಮನಿರಸನ ಶುರುವಾಗುತ್ತದೆ. ಈಗ ಜನತಾದಳ (ಎಸ್)ದಲ್ಲಿ ಆಗುತ್ತಿರುವುದು ಅದೇ. ಯಾರು ಏನು ಸುತ್ತು ಬಳಸಿ ಹೇಳಿದರೂ ಆ ಪಕ್ಷದ ಶಾಸಕರಿಗೆ ‘ನಾವು ಹೀಗೆಯೇ ಇದ್ದರೆ, ಇದೇ ಪಕ್ಷದಲ್ಲಿ ಇದ್ದರೆ ಅಧಿಕಾರಕ್ಕೆ ಬರುವುದು ದುಸ್ತರ’ ಎಂದು ಅರ್ಥವಾಗತೊಡಗಿದೆ.
ಆ ಪಕ್ಷದಲ್ಲಿ ಅಧಿಕಾರ ಒಂದೇ ಮನೆಯಲ್ಲಿ ಇದೆ. ಅಬ್ಬಬ್ಬ ಎಂದರೆ ಎರಡು ಮನೆಗಳಲ್ಲಿ ಇರಬಹುದು. ಹಣವೂ ಅದೇ ಒಂದು ಅಥವಾ ಎರಡು ಮನೆಗಳಲ್ಲಿ ಕ್ರೋಡೀಕರಣ ಆಗಿದೆ. ಬೇರೆ ಯಾರೂ ಹೊಣೆ ಹೊರಲು ಮುಂದೆ ಬರುವುದಿಲ್ಲವಾದ್ದರಿಂದ ಅಥವಾ ಇಂಥ ಒಂದು ಪಕ್ಷವನ್ನು ನಡೆಸಲು ಬೇಕಾದ ಜನಪ್ರಿಯತೆ ಮತ್ತು ಹಣಕಾಸಿನ ಬೆಂಬಲವೆರಡೂ ಇತರ ಯಾರಿಗೂ ಇಲ್ಲವಾದ್ದರಿಂದಲೂ ಒಂದೇ ಕಡೆ ಅಧಿಕಾರ ಮತ್ತು ಹಣ ಕ್ರೋಡೀಕರಣ ಆಗಿರಬಹುದು.
ಜನತಾದಳ (ಎಸ್)ದಲ್ಲಿ ಈಗ ಆಗುತ್ತಿರುವ ತಳಮಳವನ್ನು ವಿಧಾನಸಭೆ ಚುನಾವಣೆಗಿಂತ ಮುಂಚೆಯೇ ಊಹಿಸಿದವರೂ ಇದ್ದರು. ಲೋಕಸಭೆ ಚುನಾವಣೆಯಲ್ಲಿಯೂ ಇದೇ ಪ್ರಶ್ನೆ ಉದ್ಭವಿಸಿತ್ತು. ವಿಧಾನಸಭೆ ಚುನಾವಣೆ ನಡೆಯುವಾಗಲೂ ದಳದ ನಾಯಕರು ‘ನಮ್ಮ ನೆರವು ಇಲ್ಲದೆ ರಾಜ್ಯದಲ್ಲಿ ಯಾರೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ’ ಎಂಬ ಭ್ರಮೆಯಲ್ಲಿಯೇ ಇದ್ದರು. ಆದರೆ, ಮತದಾರರು ಬೇರೆಯೇ ತೀರ್ಪು ನೀಡಿದರು. ನಂತರ ಲೋಕಸಭೆ ಚುನಾವಣೆಯಲ್ಲಿಯೂ ಅವರಿಗೆ ಅದೇ ಭರವಸೆ ಇತ್ತು.
ದೇವೇಗೌಡರು ಆಗ ತೃತೀಯ ರಂಗ ಎಂಬ ‘ಮಾರೀಚ’ನ ಬೆನ್ನು ಹತ್ತಿದ್ದರು. ಆದರೆ ತಾವೇ ಪ್ರಧಾನಿ ಆಗಬಹುದು, ಇಲ್ಲವಾದರೆ ಆಗುವವರು ತಮ್ಮನ್ನು ಕೇಳಿಯೇ ಆಗಬೇಕು ಎಂದು ಅವರು ಬಹಿರಂಗವಾಗಿಯೇ ಹೇಳಿದ್ದರು ಕೂಡ. ಅದೇ ಹೇಳಿದೆನಲ್ಲ, ರಾಜಕಾರಣಿ ಬದುಕುವುದು ಭರವಸೆಯ ಮೇಲೆ! ಮತ್ತೆ ಮತದಾರರ ತೀರ್ಪು ಬೇರೆಯೇ ಇತ್ತು. ಮೂವತ್ತು ವರ್ಷಗಳ ನಂತರ ಅವರು ಏಕಪಕ್ಷದ ಅಧಿಕಾರಕ್ಕೆ ಜನಾದೇಶ ನೀಡಿದ್ದಾರೆ. ಜನತಾದಳದ ನಾಯಕರ ಕನಸುಗಳೆಲ್ಲ ಈಗ ನುಚ್ಚು ನೂರಾಗಿವೆ.
ತಾವೆಲ್ಲ ಏಕಾಗಿ ರಾಜಕಾರಣ ಮಾಡಬೇಕು ಎಂಬ ಪ್ರಶ್ನೆ ಅವರ ಮುಂದೆ ಧುತ್ತೆಂದು ನಿಂತಿದೆ. ದಿನಗಳು ಕಳೆದಂತೆಲ್ಲ ಅವರ ಮುಂದೆ ಗಾಢಾಂಧಕಾರ ಬೆಳೆಯುತ್ತ ಹೋಗುತ್ತಿದೆ. ಆ ಕಡೆ, ಈ ಕಡೆ ಈಗಲೇ ನೋಡಲು ಶುರು ಮಾಡಿದರೆ ಮುಂದಿನ ವಿಧಾನಸಭೆ ಚುನಾವಣೆ ಬರುವ ವೇಳೆಗೆ ಒಂದು ಹುಲ್ಲುಗಾವಲು ಸಿಗಬಹುದು ಎಂಬುದು ಅವರ ಲೆಕ್ಕಾಚಾರ. ಈಗಿನದು ಹಳೆಯ ಜಮಾನ ಅಲ್ಲ. ಆಗಿನ ಮಂದಿ ತತ್ವಕ್ಕಾಗಿ, ಸಿದ್ಧಾಂತಕ್ಕಾಗಿ, ತಾವು ನಂಬಿದ ನಾಯಕರಿಗಾಗಿ ರಾಜಕಾರಣ ಮಾಡುತ್ತಿದ್ದರು. ಈಗಿನವರು ಬಹುತೇಕ ಮಂದಿ ಹಣಕ್ಕಾಗಿ ಮತ್ತು ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಾರೆ.
1994ರ ಚುನಾವಣೆ ನಂತರ ಜನತಾದಳದವರು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಅದಾಗಿ ವಿಧಾನ ಸಭೆಗೆ ಮೂರು ಚುನಾವಣೆ ನಡೆದಿವೆ. ಈಗ ಅವರು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲವೇ ಇಲ್ಲ. ಆಗ ಜನತಾದಳದಲ್ಲಿ ಇದ್ದ ಬಹುತೇಕ ನಾಯಕರು ಬಿಜೆಪಿಯಲ್ಲಿ ಆಶ್ರಯ ಪಡೆದಿದ್ದಾರೆ. ಅವರೆಲ್ಲ ಮತ್ತೆ ಜನತಾದಳದ ತೆಕ್ಕೆಗೆ ಬರುವ ಸಾಧ್ಯತೆಯೂ ಇಲ್ಲ. ರಾಜ್ಯದಲ್ಲಿ ಈಗ ಕಾಂಗ್ರೆಸ್ಸಿಗೆ ಬಿಜೆಪಿ ಪರ್ಯಾಯವೇ ಹೊರತು ಜನತಾದಳ ಅಲ್ಲ. ಅಧಿಕಾರ ಹಿಡಿಯಬೇಕು ಎನ್ನುವುದಾದರೆ ಜನತಾದಳದ ಮುಂದೆ ಇರುವುದು ಎರಡು ಪರ್ಯಾಯಗಳು: ಒಂದು, ಕಾಂಗ್ರೆಸ್ ಜತೆಗೆ ಕೈ ಜೋಡಿಸುವುದು, ಎರಡು, ಬಿಜೆಪಿ ಜತೆ ಕೈ ಜೋಡಿಸುವುದು.
ಈ ಎರಡೂ ಪ್ರಯೋಗಗಳನ್ನು ಆ ಪಕ್ಷ 2004ರಲ್ಲಿ ಮತ್ತು 2006ರಲ್ಲಿ ಮಾಡಿದೆ. ಹೀಗಾಗಿ ಅದರ ಮಡಿವಂತಿಕೆಯೆಲ್ಲ ತೋರಿಕೆಯದ್ದು ಅಥವಾ ಮತದಾರರಿಗೆ ಮಂಕುಬೂದಿ ಎರಚುವಂಥದು. 2004ರಲ್ಲಿ ಕಾಂಗ್ರೆಸ್ ಜತೆ ಚುನಾವಣೆ ನಂತರದ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದರೆ 2006ರಲ್ಲಿ ಬಿಜೆಪಿ ಜತೆ ಸೇರಿಕೊಂಡು ಕ್ಷಿಪ್ರಕ್ರಾಂತಿಯ ಮೂಲಕ ಜನತಾದಳ (ಎಸ್) ಅಧಿಕಾರ ಹಿಡಿದಿತ್ತು. ಆಗ ಎಳ್ಳಷ್ಟೂ ಮೈ ಕೈ ನೋಯಿಸಿಕೊಳ್ಳದೇ ಅಧಿಕಾರ ಹಿಡಿದವರು ಈಗ ಅಪಸ್ವರದ ರಾಗ ಹಾಡುತ್ತಿದ್ದಾರೆ.
ಒಂದು ಮಾತು ಸ್ಪಷ್ಟ : ದಳದ ನಾಯಕರ ಜಗಳಗಳಲ್ಲಿ ಎಂದೂ ಸೈದ್ಧಾಂತಿಕ ಬಿಕ್ಕಟ್ಟುಗಳು ಇರಲಿಲ್ಲ, ಈಗಲೂ ಇಲ್ಲ. ಇರುವುದೆಲ್ಲ ವೈಯಕ್ತಿಕ ಸೆಡವುಗಳು ಮಾತ್ರ. ಹಾಗೆ ನೋಡಿದರೆ, ಎಲ್ಲ ಪಕ್ಷಗಳೂ ಈಗ ಅನುಕೂಲಸಿಂಧುಗಳು. ಅಧಿಕಾರ ಹೇಗೆ ಹಿಡಿಯುವುದು ಎಂಬುದು ಒಂದೇ ಅವುಗಳ ಮುಂದೆ ಇರುವ ಪ್ರಶ್ನೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜನತಾದಳವು ‘ಮುಂದೇನು ಎಂಬ ಪ್ರಶ್ನೆಗೆ ಇಂದೇ ಉತ್ತರ ಕಂಡುಕೊಳ್ಳಬೇಕು’ (ದಿ : 20.04.2014) ಎಂದು ಬರೆದಿದ್ದೆ. ಈಗ ಆ ಪ್ರಶ್ನೆ ಎದ್ದು ಬಂದು ನಾಯಕರ ಮುಂದೆ ನಿಂತಿದೆ.
ದೇವೇಗೌಡರು ಸದ್ಯವೇ ಆ ಪ್ರಶ್ನೆಗೆ ಉತ್ತರ ಹುಡುಕಲು ಸಿದ್ಧರಿದ್ದಂತೆ ಕಾಣುವುದಿಲ್ಲ. ಅವರಿಗೆ ತಕರಾರು ತೆಗೆಯುತ್ತಿರುವವರ ಮಿತಿಗಳು ಏನು ಎಂದು ಗೊತ್ತಿದೆ. ಮಂಡ್ಯ, ಹಾಸನ, ರಾಮನಗರ, ತುಮಕೂರು ಮುಂತಾದ ಜಿಲ್ಲೆಗಳಲ್ಲಿ ತಮ್ಮ ವಿರುದ್ಧ ಎದ್ದು ನಿಂತವರನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಅವರಿಗೆ ಗೊತ್ತಿಲ್ಲದ್ದೇನೂ ಅಲ್ಲ. ಬಹುಶಃ ಅದಕ್ಕೇ ಅವರು ‘ಹೋಗುವವರು ಹೋಗಬಹುದು’ ಎಂದು ಅಪ್ಪಣೆ ಕೊಟ್ಟಿರಬಹುದು. ‘ಹೋಗುವವರು ಅಷ್ಟು ಸುಲಭವಾಗಿ ಹೋಗುವುದಿಲ್ಲ’ ಎಂದು ತಿಳಿಯದಷ್ಟು ಅನನುಭವಿಯೇನೂ ಅವರು ಅಲ್ಲ. ಆದರೆ, ಅವರಿಗೆ ಹೊರಗಿನ ಪ್ರಶ್ನೆಗಳಿಗಿಂತ ಮನೆಯ ಒಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ತ್ರಾಸದಾಯಕ ಆದಂತೆ ಕಾಣುತ್ತದೆ.
ಪದ್ಮನಾಭನಗರ (ದೇವೇಗೌಡರ ಮನೆ) ಮತ್ತು ಜೆ.ಪಿ.ನಗರದ (ಕುಮಾರಸ್ವಾಮಿಯವರ ಮನೆ) ನಡುವೆ ಇರುವ ಭೌತಿಕ ದೂರ ಹೆಚ್ಚೇನೂ ಇಲ್ಲ. ಆದರೆ, ಅವುಗಳ ನಡುವೆ ಸಂಪರ್ಕದ ಸೇತುವೆಯೇ ಕಡಿದು ಹೋದಂತೆ ಕಾಣುತ್ತದೆ. ಜತೆಗೆ ತಮ್ಮ ಮನೆಯಲ್ಲಿಯೇ ಲಿಂಗಭೇದವಿಲ್ಲದೇ ಹೆಚ್ಚುತ್ತಿರುವ ಅಧಿಕಾರದ ಆಕಾಂಕ್ಷೆಯೂ ಅವರನ್ನು ಚಿಂತಿತರನ್ನಾಗಿ ಮಾಡಿದಂತೆ ಕಾಣುತ್ತದೆ. ಹಾಸನದಲ್ಲಿ ವಾರದಲ್ಲಿ ನಾಲ್ಕು ದಿನ ಇರುವ ಅವರ ನಿರ್ಧಾರ, ಒಂದು ರೀತಿಯಲ್ಲಿ ಕೌಟುಂಬಿಕ ಕೋಟಲೆಗಳಿಂದ ದೂರ ಹೋಗಿ ನೆಮ್ಮದಿ ಅರಸುವ ವಿಧಾನವೂ ಆಗಿರಬಹುದು. ಆದರೆ, ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಇವತ್ತಲ್ಲ ನಾಳೆ ತಮ್ಮ ಪಕ್ಷದ ಭವಿಷ್ಯವೇನು, ಯಾವ ದಿಕ್ಕಿನಲ್ಲಿ ಅದು ಸಾಗಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೇಬೇಕು.
ಕೇಂದ್ರದಲ್ಲಿ ಅನೇಕ ವರ್ಷಗಳ ನಂತರ ಏಕ ಪಕ್ಷದ ಅಧಿಕಾರ ಬಂದಿರಬಹುದು. ಆದರೆ, ದೇಶದ ಅನೇಕ ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರಗಳೇ ಇವೆ. ಅಲ್ಲಿ ಅಲ್ಪಸ್ವಲ್ಪ ಅಸಮಾಧಾನಗಳು ಇದ್ದರೂ ಸುಸೂತ್ರವಾಗಿ ತಮ್ಮ ಅಧಿಕಾರದ ಅವಧಿಯನ್ನು ಪೂರೈಸುತ್ತಿವೆ. ಜಮ್ಮು–ಕಾಶ್ಮೀರದಿಂದ ಕೇರಳದವರೆಗೆ ಇಂಥ ಅನೇಕ ಉದಾಹರಣೆಗಳು ಇವೆ.
ನಮ್ಮ ನೆರೆಯ ಮಹಾರಾಷ್ಟ್ರದಲ್ಲಿಯೇ ಕಾಂಗ್ರೆಸ್ ಮತ್ತು ಎನ್.ಸಿ.ಪಿಗಳು ಎರಡು ಅವಧಿಗೆ ಅಧಿಕಾರ ಅನುಭವಿಸಿವೆ. ಶರದ್ ಪವಾರ್ ಅವರೇನು ದೇವೇಗೌಡರಿಗಿಂತ ಕಡಿಮೆ ಮಹತ್ವಾಕಾಂಕ್ಷಿಯಲ್ಲ. ಆದರೂ ಅವರು ಕೊಡು ತೆಗೆದುಕೊಳ್ಳುವ ಮನೋಭಾವದ ಮೂಲಕ ತಮ್ಮ ಪಕ್ಷದ ಕೈಯಲ್ಲಿ ಅಧಿಕಾರ ಉಳಿಸಿಕೊಂಡಿದ್ದಾರೆ. ಜನತಾದಳ (ಎಸ್) ನಾಯಕರ ಬಗೆಗೆ, ಅವರದು ಹಿಂಸಾನಂದದ ಸ್ವಭಾವ ಎಂಬ ಆಕ್ಷೇಪದ ಮಾತು ಇದೆ. ಈ ಹಿಂಸಾನಂದವನ್ನು ಮೌನವಾಗಿ ಅನುಭವಿಸಿದವರೇ ನನಗೆ ಹೇಳಿದ ಮಾತು ಇದು. ಇಲ್ಲವಾದರೆ, ಆಯತ ವೇಳೆಯಲ್ಲಿ ಕೈ ಕೊಟ್ಟು ಬಿಡುತ್ತಾರೆ ಎಂಬ ಇನ್ನೊಂದು ಆರೋಪ ಇದೆ. ಇವೆರಡೂ ನಮ್ಮ ಕಣ್ಣ ಮುಂದೆಯೇ ನಡೆದ ಇತಿಹಾಸದ ಪಾಠಗಳು.
ಬಿಹಾರದಲ್ಲಿ ನಿತಿಶ್ ಮತ್ತು ಲಾಲೂಪ್ರಸಾದ್ ಅವರು ಬದ್ಧ ರಾಜಕೀಯ ವೈರಿಗಳಾಗಿದ್ದರು. ಲಾಲೂ ಅವರನ್ನು ಮನೆಗೆ ಕಳುಹಿಸಿಯೇ ನಿತಿಶ್ ಅಧಿಕಾರಕ್ಕೆ ಬಂದಿದ್ದರು. ನಿತಿಶ್‌ಗೆ ಈಗ ಕಷ್ಟದ ಕಾಲ. ಅವರು ಲಾಲೂ ಜತೆಗೆ ಕೈ ಜೋಡಿಸಿದ್ದಾರೆ. ಈ ರಾಜಕೀಯ ಮೈತ್ರಿ ಇಬ್ಬರಿಗೂ ಅನುಕೂಲಕರವಾಗಿ ಪರಿಣಮಿಸಬಹುದು ಎಂದು ಕನಿಷ್ಠ ಈಚಿನ ಉಪಚುನಾವಣೆಯ ಫಲಿತಾಂಶವಾದರೂ ಸಾಬೀತು ಮಾಡಿದೆ. ಇದು ದೇವೇಗೌಡರಿಗೆ ಪಾಠ ಅಲ್ಲವೇ? ಕುಮಾರಸ್ವಾಮಿ ಜನಪ್ರಿಯ ನಾಯಕ ಎಂಬುದರಲ್ಲಿ ಅನುಮಾನವೇನೂ ಇಲ್ಲ.
ಅವರಿಗೂ ಏಕಾಕಿಯಾಗಿ ಅಧಿಕಾರಕ್ಕೆ ಬರುವ ನಂಬಿಕೆ ಇದ್ದಂತೆ ಇದೆ. ಅವರ ಪಕ್ಷಕ್ಕೆ ಎಲ್ಲ ಕ್ಷೇತ್ರಗಳಲ್ಲಿಯೂ ಕನಿಷ್ಠ ನಾಲ್ಕೆಂಟು ಸಾವಿರದಿಂದ ಗರಿಷ್ಠ ಹತ್ತಿಪ್ಪತ್ತು ಸಾವಿರ ಮತಗಳು ಇರಬಹುದು. ಆದರೆ, ಅಷ್ಟೇ ಮತಗಳು ಆ ಪಕ್ಷವನ್ನು ಅಧಿಕಾರದ ಗಾದಿಯವರೆಗೆ ತೆಗೆದುಕೊಂಡು ಹೋಗಿ ನಿಲ್ಲಿಸುವುದಿಲ್ಲ. 1990ರ ದಶಕದ ಹಾಗೆ ಈಗ ಅವರ ಪಕ್ಷದಲ್ಲಿ ಸಾಲು ಸಾಲು ನಾಯಕರೂ ಇಲ್ಲ. ಇರುವವರು ಪರಪುಟ್ಟಗಳು. ಅಧಿಕಾರವೂ ಗೌಡರ ಕುಟುಂಬದಿಂದಲೇ ಸಿಗಬೇಕು. ಅದಕ್ಕೆ ತಗಲುವ ವೆಚ್ಚವನ್ನೂ ಅವರೇ ಭರಿಸಬೇಕು.
ಬಂಡಾಯದ ದನಿ ಎತ್ತಿರುವ ಚೆಲುವರಾಯಸ್ವಾಮಿಯವರೇನೋ ಪಕ್ಷದ ಅಧ್ಯಕ್ಷ ಪದವಿಯನ್ನು ಒಕ್ಕಲಿಗರಲ್ಲದವರಿಗೆ ಕೊಡಬೇಕು ಎಂದು ಹೇಳಿದ್ದಾರೆ. ಅದರಲ್ಲಿ ಒಂದು ಜಾಣತನವೂ ಇದೆ. ಅವರು ತಮ್ಮನ್ನೂ ಅಧ್ಯಕ್ಷ ಪದವಿಯಿಂದ ಹೊರಗೆ ಇಟ್ಟಿದ್ದಾರೆ. ಹಾಗಾದರೆ, ಅಧ್ಯಕ್ಷರಾಗಲು ಯಾರು ಸಿದ್ಧರಿದ್ದಾರೆ? ಅವರ ಬಳಿ ಒಂದು ಪಕ್ಷವನ್ನು ನಡೆಸಿಕೊಂಡು ಹೋಗಲು ಬೇಕಾಗುವ ಸಂಪನ್ಮೂಲ ಇದೆಯೇ? ಯಾರಾದರೂ ಅಥವಾ ಬಸವರಾಜ ಹೊರಟ್ಟಿಯವರೋ, ಬಂಡೆಪ್ಪ ಕಾಶಂಪೂರರೋ ಅಧ್ಯಕ್ಷರಾದರೆ ಅವರ ಬಳಿ ಒಂದು ಪಕ್ಷವನ್ನು ನಿರ್ವಹಿಸಿಕೊಂಡು ಹೋಗುವಷ್ಟು ಸಂಪನ್ಮೂಲ ಇದೆಯೇ? ಇರಬಹುದು.
ಆದರೆ, ಯಾರೂ ತಮ್ಮ ಮನೆಯ ಹಣವನ್ನು ತಂದು ಹಾಕಿ ಪಕ್ಷವನ್ನು ನಡೆಸುವುದಿಲ್ಲ. ಆ ಕಾಲವೆಲ್ಲ ಮುಗಿದು ಹೋಯಿತು. ಯಾರೋ ಕೊಡಬೇಕು, ಇವರು ನಡೆಸಬೇಕು. ದೇವೇಗೌಡರ ಕುಟುಂಬದಲ್ಲಿಯೇ ಅಧಿಕಾರ ಉಳಿಯಲು ಇದೂ ಒಂದು ಕಾರಣ ಆಗಿರಬಹುದು. ಒಂದು ರಾಜಕೀಯ ಪಕ್ಷವನ್ನು ನಡೆಸುವುದು ಎಂದರೆ ಈಗ ಹಣ ಬಿತ್ತಿ ಹಣ ಬೆಳೆಯುವ ದಂಧೆಯಾಗಿದೆ. ಕೆಲವು ಸಾರಿ ಹಣವನ್ನು ಬಿತ್ತಿಯೂ ಬೆಳೆ ಬರದೇ ಕೈ ಕೊಟ್ಟು ಬಿಡಬಹುದು. ಜನತಾದಳ (ಎಸ್)ದ್ದು ಈಗ ಅದೇ ಸ್ಥಿತಿ.
ಮತ್ತೆ ಅದೇ ಪ್ರಶ್ನೆ. ಚದುರಂಗದ ಮಂಚದಿಂದ ಕಾಯಿಗಳು ಚದರಿ ಹೋಗುವಂತೆ ಕಾಣುತ್ತಿದೆ. ಈಗ ಅಲ್ಲದಿದ್ದರೂ ಮುಂದಿನ ವಿಧಾನಸಭೆ ಚುನಾವಣೆ ಸಮಯದಲ್ಲಿ ಜನತಾದಳ (ಎಸ್)ದ ಸ್ವರೂಪ ಹೀಗೆಯೇ ಇರುವುದಿಲ್ಲ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡುತ್ತಿರುವ ಆಟವೂ ಕಾರಣವಾಗಿರಬಹುದು. ಅವರಿಗೆ ತಾವು ಬಿಟ್ಟು ಬಂದ ಪಕ್ಷದ ಬಗೆಗೆ ಅಲ್ಲದಿದ್ದರೂ ಅದನ್ನು ನಡೆಸುತ್ತಿರುವವರ ಬಗೆಗೆ ವಿಪರೀತ ಸಿಟ್ಟು ಇದೆ!
ಇನ್ನು ಮೂರೂವರೆ ವರ್ಷಗಳಲ್ಲಿ ಸಿದ್ದರಾಮಯ್ಯನವರು ಏನೇನು ಚದುರಂಗ ಆಡುತ್ತಾರೋ ಈಗಲೇ ಹೇಳುವುದು ಕಷ್ಟ. ಅದಕ್ಕೆ ಪೂರಕ ಎನ್ನುವಂತೆ ಕುಮಾರಸ್ವಾಮಿಯವರಿಗೆ ಅಕಾಲ ವೈರಾಗ್ಯ. ಅವರಿಗೆ ಹೇಗೆ ಚದುರಂಗ ಆಡಬೇಕು ಎಂದು ಗೊತ್ತಾಗುತ್ತಿಲ್ಲ, ಅಥವಾ ಅದರಲ್ಲಿ ಅವರಿಗೆ ಆಸಕ್ತಿಯೇ ಇದ್ದಂತೆ ಇಲ್ಲ. ಕುಮಾರಸ್ವಾಮಿಯವರ ಈ ನಿರುತ್ಸಾಹ ಪಕ್ಷದ ವಿವಿಧ ಹಂತದಲ್ಲಿ ಬೇರೆ ಬೇರೆ ರೀತಿಯಲ್ಲಿ ಸಾಂಕ್ರಾಮಿಕವಾಗಿ ಹರಡುತ್ತಿದೆ.
ರಾಜಕಾರಣ ಎಂದರೆ ಅದು ಅಧಿಕಾರದ ಏಣಿ ಮತ್ತು ಆ ಏಣಿಯನ್ನು ಏರಲು ಸಾಧ್ಯ ಎಂಬ ಭರವಸೆಯನ್ನು ದಳದ ಮುಂಚೂಣಿ ನಾಯಕರು ಎರಡು ಮತ್ತು ಮೂರನೇ ಸಾಲಿನ ನಾಯಕರಲ್ಲಿ ಮೂಡಿಸದೇ ಇದ್ದರೆ ಕರ್ನಾಟಕದ ರಾಜಕೀಯದ ತೃತೀಯ ಶಕ್ತಿ ಎಂಬುದು ಕೇವಲ ಮೃಗಜಲ ಎನಿಸಿಬಿಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.