ADVERTISEMENT

ಕವಡೆ ಮತ್ತು ಕೌಶಲ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:11 IST
Last Updated 16 ಜೂನ್ 2018, 9:11 IST

ನನಗೆ ಆಕಾರವಿಲ್ಲ್ಲ
ನಿನಗೆ ನೋಟವಿಲ್ಲ
ಕಾಣಿಸುವುದು ಹೇಗೆ?
ನನಗೆ ಭಾಷೆಯಿಲ್ಲ
ನಿನಗೆ ಕಿವಿಯಿಲ್ಲ
ಮಾತನಾಡುವುದು ಹೇಗೆ?
–ಪ್ರತಿಭಾ ನಂದಕುಮಾರ್

ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ. ‘ಹೊಸ ಹೆಣ್ಣು’ ಎನ್ನುವವಳು ಯಾರು? ಅವಳು ಹೇಗಿರುತ್ತಾಳೆ? ಅವಳ ವೇಷ ಭೂಷಣ, ನಡೆ ನುಡಿ ಹೇಗಿರುತ್ತವೆ? ಅವಳು ಲೂನಾ ಲಲನೆಯೆ? ಸಿನಿಮಾವೊಂದರಲ್ಲಿ ನಾಯಕಿ ಹಾಡುವಂತೆ, ‘ಈ ಶತಮಾನದ ಮಾದರಿ ಹೆಣ್ಣು, ಸ್ವಾಭಿಮಾನದ ಮಾದರಿ ಹೆಣ್ಣು, ಸಲಾಮು ಹೊಡೆಯೊಲ್ಲ,,,’ ಎನ್ನುವ ಹಾಗಿರುತ್ತಾಳೆಯೆ? ಈ ಹೊಸ ಹೆಣ್ಣಿಗೆ ನಿರ್ದಿಷ್ಟವಾದ ರೆಸಿಪಿ ಒಂದಿದೆಯೆ? ಹೊಸ ಹೆಣ್ಣು ಆಗುವುದೋ? ಇರುವುದನ್ನೇ ಕಂಡುಕೊಳ್ಳುವುದೊ? ಬಗೆ ಪೊಸತಪ್ಪುದೊ? ನೋಡುವ ಬಗೆ ಪೊಸತಪ್ಪುದೊ? ಕುಸುಮಬಾಲೆ ‘I want to be in my house’ ಎನ್ನುವುದು ರೊಮ್ಯಾಂಟಿಕ್ ಆದ ಕನಸೊ, ಹೆಣ್ಣಿನ ದುರ್ದಮ್ಯದವಾದ ಹುಡುಕಾಟವೊ? ಇಲ್ಲಿ ಹೌಸ್ ಎನ್ನುವುದು, ಹೆಣ್ಣು ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವುದಕ್ಕಾಗಿ ನಡೆಸುವ ಮೂರ್ತ ಅಮೂರ್ತ ಪ್ರಯತ್ನಗಳನ್ನು ಸಂಕೇತಿಸುತ್ತಿದೆಯೆ? ಸ್ತ್ರೀವಾದಿಗಳು ಮತ್ತೆ ಮತ್ತೆ ಹೇಳುವಂತೆ ಹೆಣ್ಣಿನ ಭಾಷೆಯನ್ನು ಡಿಕೋಡ್ ಮಾಡುವ ಪ್ರಯತ್ನಗಳು ಹೆಣ್ಣಿನ ಭಾಷೆಯ ಅನನ್ಯತೆಯನ್ನೂ ಅವಳ ಹೋರಾಟದ ಮಹತ್ವವನ್ನೂ ಬೇರೆಯದೇ ಆದ ವಿಸ್ತೃತ ಭಿತ್ತಿಯಲ್ಲಿ ಇಡಬಲ್ಲವೆ?– ಪ್ರಶ್ನೆಗಳನ್ನು ಕೇಳುತ್ತಲೇ ಹೋಗಬಹುದು.

ಹೊಸ ಹೆಣ್ಣು ಎನ್ನುವವಳು ಅನಾವರಣವೂ ಹೌದು, ಪಲ್ಲಟದ ದೃಷ್ಟಿಯೂ ಹೌದು. ಆದ್ದರಿಂದಲೇ ಈ ‘ಆಗುವಿಕೆ’ಯನ್ನು ಸಾವಯವ ಪ್ರಕ್ರಿಯೆ ಎಂದು ಕರೆಯುವುದು. ಇದೊಂದು ಸೃಷ್ಟಿಕ್ರಿಯೆಯ ಸಂಭ್ರಮದಷ್ಟೇ, ಪೊರೆ ಕಳಚಿಕೊಳ್ಳುವ ಅನಿವಾರ್ಯತೆಯಷ್ಟೇ, ರೂಪಾಂತರದ ಮತ್ತು ಆಯ್ಕೆಯ ದ್ವಂದ್ವದಷ್ಟೇ ಕಷ್ಟದ ಪ್ರಕ್ರಿಯೆಯೂ ಹೌದು. ಹೆಣ್ಣಿನ ಒಳ ಹೊರಗುಗಳೆರಡೂ ಅಪಾರ ತನ್ಮಯತೆಯಲ್ಲಿ ತೊಡಗಿಕೊಳ್ಳಬೇಕಾದ ಈ ಕ್ರಿಯೆ ಅನೇಕ ಬಾರಿ ಹೋಗುತ್ತ ಕೊಯ್ಯುವ ಬರುತ್ತ ಕೊಯ್ಯುವ ಮೂಲಭೂತ ಪಲ್ಲಟದ ನೆಲೆಯದ್ದು.
ಈ ಕಡು ಸವಾಲಿನ ಮೂಲವೆಂದರೆ, ಹೆಣ್ಣು ತನಗೆ ಕೊಡಮಾಡಲಾಗಿರುವ ವ್ಯಕ್ತಿತ್ವದ ಜೊತೆಯಲ್ಲಿ ಸಾಧಿಸಿಕೊಂಡು ಬಿಟ್ಟಿರುವ ತನ್ಮಯತೆಯದ್ದು ಮತ್ತು ನಂಬಿಕೆಯದ್ದು. ತನ್ನ ಲೋಕವೆಂದು, ಸರ್ವಸ್ವವೆಂದು ತಿಳಿದಿರುವ ‘ಸಂಸಾರ ವಿಶ್ವ’ವನ್ನು ಅದರ ಕೇಂದ್ರವನ್ನು ಉಳಿಸಿಕೊಂಡೇ ಹೆಣ್ಣು ತನ್ನ ಹೊಸ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಹೋರಾಟ ನಡೆಸುತ್ತಾಳೆ. ಸರಳವಾಗಿ ಹೇಳುವುದಾದರೆ, ತನ್ನ ಪಾತ್ರಗಳನ್ನು ಬಿಟ್ಟೇ ಬಿಡಲು ಅವಳು ಹಂಬಲಿಸುತ್ತಿಲ್ಲ, ಆ ಪಾತ್ರಗಳಿಗೆ ಅಧಿಕೃತತೆಯನ್ನೂ ಆ ಪಾತ್ರಗಳು ಅಧೀನ ನೆಲೆಯಿಂದ ಹೊರಬರಬೇಕೆನ್ನುವುದನ್ನೂ ಅವಳು ತನ್ನ ಹಕ್ಕೊತ್ತಾಯವೆಂಬಂತೆ ಪ್ರತಿಪಾದಿಸುತ್ತಿದ್ದಾಳೆ.

ಈ ದಾರಿಯ ಹರಿಕಾರಳಾಗಿ ಪ್ರತಿಭಾ ನಂದಕುಮಾರ್ ಅವರ ಕಾವ್ಯದ ನಾಯಕಿ ನಮಗೆ ಕಾಣಿಸುತ್ತಾಳೆ. ಕಾಲಿಟ್ಟಲ್ಲಿ ಕಾಲುದಾರಿಯೊಂದನ್ನು ನಿರ್ಮಿಸಿಕೊಳ್ಳುತ್ತಾ ಹೋಗುವ, ಸಂಭ್ರಮ, ನೋವು ನಲಿವುಗಳ ಜೊತೆಯಲ್ಲೇ, ಈ ದಾರಿಯನ್ನು ಕಟ್ಟಿಕೊಳ್ಳಬೇಕಾದ ಜವಾಬ್ದಾರಿಯ ಅರಿವಿನಿಂದಲೇ ಇದನ್ನು ಧೀರೋದಾತ್ತವಾಗಿ ನಿಭಾಯಿಸುವ ಹೆಣ್ಣಿನ ಚಹರೆಯೊಂದು ಇವರ ಕಾವ್ಯದಲ್ಲಿ ರೂಪುಗೊಳ್ಳುತ್ತಿದೆ.

ನಾನೊಬ್ಬನ ಪತ್ನಿ
ಮೂರುಮಕ್ಕಳ ತಾಯಿ
ಇನ್ನೂ ನನ್ನ ಸೀರೆ ಕುಪ್ಪಸ
ಬಟ್ಟು ಬೈತಲೆ
ಎಲ್ಲ ಅತ್ತೆ ಮಾವರ ಮರ್ಜಿ
ನನಗೆ ಅದೂ ಮನೆಯಲ್ಲ
ಇದೂ ಮನೆಯಲ್ಲ
ನನ್ನದೊಂದು ಮನೆಯೇ ಇಲ್ಲ.
ಆದರೂ ಮನೆ ಬಿಟ್ಟು ಹೋದರೆ
‘ಮನೆಯ ಮಾನ’ ಕಳೆಯುವ ಹೆದರಿಕೆ.
ಹಾಗಾಗಿ ಇದ್ದಲ್ಲೆ ಇರುತ್ತೇನೆ
ಹಾಗೇ ಕೆಸರೊಳಗೆ ಮುಳುಗುತ್ತಾ
ಕೊನೆಗೊಮ್ಮೆ ಇಲ್ಲವಾಗುತ್ತೇನೆ ಎನ್ನುವ ಸ್ವಗತದಿಂದ ಪ್ರತಿಭಾ ನಾಯಕಿಯ ಸ್ವಗತ ಶುರುವಾಗುತ್ತದೆ. ತನ್ನ ವ್ಯಕ್ತಿತ್ವ ‘ಲಯ’ವಾಗುವ ಕ್ರಮದ್ದು ಎನ್ನುವುದರ ಅರಿವೆ ಹೆಣ್ಣನ್ನು ಮುಂದಿನ ಹೋರಾಟಕ್ಕೆ ಸಜ್ಜುಗೊಳಿಸುತ್ತದೆ. ಇಲ್ಲವಾಗುವುದರಿಂದ ಆಗುವುದರ ಕಡೆಗಿನ ಪ್ರಯಾಣ ಆರಂಭವಾಗುತ್ತದೆ.

ಜುಮ್ಮೆನ್ನಿಸುವ ಆಲೋಚನೆಗಳನ್ನೆಲ್ಲಾ
ಹಾಗೇ ಡಬ್ಬಿಯೊಳಗೆ ಹಿಟ್ಟು ಒತ್ತಿದಂತೆ
ಒತ್ತಿ ಒತ್ತಿ ಗಟ್ಟಿ ಮಾಡುತ್ತೇವೆ...
ನಾವೇ ದುರಂತ ನಾಯಕಿಯರೆಂದು
ಭ್ರಮಿಸಿ ಎಲ್ಲರ ಅನುಕಂಪ ಬಯಸುತ್ತೇವೆ
(ನಾವು ಹುಡುಗಿಯರೇ ಹೀಗೆ)
ಈ ಜ್ನಾನೋದಯ ಹೆಣ್ಣಿನ ಮಟ್ಟಿಗೆ ಬಲು ಮುಖ್ಯ ಯಾಕೆಂದರೆ, ತನ್ನ ಎಲ್ಲ ಅವಸ್ಥೆಗೂ ‘ಅವರೇ’ ಕಾರಣ ಎನ್ನುವ ಬಲೆಯಿಂದ ಹೊರಬಂದು, ಸ್ವಬಂಧನಗಳ ಕಡೆ ಕಣ್ಣು ಹಾಯಿಸಲು ಇದು ಅನುವು ಮಾಡಿಕೊಡುತ್ತದೆ. ಯಾವುದು ಸ್ವಬಂಧನ, ಯಾವುದು ಮೌಲ್ಯವ್ಯವಸ್ಥೆಯ ಬಂಧನ ಎಂದು ವರ್ಗೀಕರಿಸಿಕೊಳ್ಳುವುದೇ ಅನೇಕ ಬಾರಿ ಹೆಣ್ಣಿನ ಮೂಲಭೂತ ಸವಾಲಾಗಿರುತ್ತದೆ. ಆ ಎರಡನ್ನು ಬೇರೆ ಬೇರೆ ಮಾಡಿಕೊಳ್ಳುವುದೇ ಒಂದು ಹೆಜ್ಜೆ ಮುಂದೆ ಎನ್ನುವಂಥ ಬೆಳವಣಿಗೆ. ಪ್ರತಿಭಾ ಕಾವ್ಯ ಈ ಬೆಳವಣಿಗೆಯನ್ನು ಸಾಧಿಸುತ್ತದೆ ಎಂದೇ ಅದಕ್ಕೆ ಮಹತ್ವದ ಸ್ಥಾನವಿದೆ.

ಈ ಸ್ವಬಂಧನದ ಜತೆಗಿನ ಮುಖಾಮುಖಿಯೇ ಪ್ರತಿಭಾ ಕಾವ್ಯದ ಪ್ರಧಾನ ಭಿತ್ತಿ ಮತ್ತು ಈ ಅಂಶವೇ ಪ್ರತಿಭಾ ಮತ್ತು ಮಹಿಳಾ ಕಾವ್ಯದ ಹೊಸ ಮಜಲನ್ನು ಸ್ಥಾಪಿಸುತ್ತದೆ. ಇದಕ್ಕೆ ಇನ್ನೊಂದು ಅತ್ಯುತ್ತಮ ಉದಾಹರಣೆಯೆಂದರೆ, ‘ಗೃಹಿಣಿ ಗೀತೆ’. ಬದಲಾಗುತ್ತಿರುವ ಸನ್ನಿವೇಶದಲ್ಲಿ ಹೆಣ್ಣು ತನ್ನ ಪಾತ್ರವನ್ನು ಹಿಗ್ಗಿಸಿಕೊಳ್ಳುತ್ತಾ ಬದಲಾಯಿಸಿಕೊಳ್ಳುತ್ತಾ ಹೋಗಲು ಏನೇನೋ ಕಾರ್ಯ ಮಾದರಿಗಳನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಿದ್ದಾಳಲ್ಲ, ಆ ಹಾಡು-ಪಾಡು, ಅದರ ಏಳು ಬೀಳುಗಳನ್ನು ಹೆಣ್ಣು ಹೇಗೆ ಅರ್ಥೈಸಿಕೊಳ್ಳಬೇಕು? ಈ ಇಡೀ ಕವಿತೆಯಲ್ಲಿ ಎಲ್ಲಿಯೂ ಗಂಡು ಗಂಡಿನ ಪ್ರಸ್ತಾಪವಿಲ್ಲ. ಗಂಡು ಪ್ರತಿಸ್ಪರ್ಧಿಯೆಂದೋ ಖಳನಾಯಕನೆಂದೋ ಎಲ್ಲಿಯೂ ನಾಯಕಿ ಆರೋಪ ಪಟ್ಟಿಯನ್ನು ಹೊರಿಸುವುದಿಲ್ಲ. ಗೃಹಿಣಿಯಾಗಿ ತನ್ನ ಪಾತ್ರ, ಜವಾಬ್ದಾರಿಯ ಸೀಮೆಯಿಲ್ಲದ ನಿಸ್ಸೀಮೆಯನ್ನು ಗೃಹಿಣಿ ತನಗೆ ತಾನೇ ವಿಸ್ತರಿಸಿಕೊಳ್ಳುತ್ತಾ, ತೆರಣಿಯ ಹುಳುವಿನ ಹಾಗೆ ತಾನೇ ಬಲೆಯನ್ನು ನೇಯ್ದುಕೊಳ್ಳುತ್ತಾ ಅದರಲ್ಲಿ ಬಂಧಿಯಾಗುವ ವಿಪರ್ಯಾಸವನ್ನು ಕವಿತೆ ಹೇಳುತ್ತದೆ. ಈ ಕವಿತೆಗೊಂದು ಆತ್ಮಶೋಧದ ಗುಣವೂ ಪ್ರಾಪ್ತವಾಗಿಬಿಡುತ್ತದೆ ಅದರ ಪ್ರಾಮಾಣಿಕತೆಯ ಉತ್ಕಟತೆಗಾಗಿ.

ಮನೆ ಮಂದಿಗೆ ಎಲ್ಲಕ್ಕಿಂತ ಉತ್ತಮ ಹಲ್ಲುಪುಡಿ
ಆರಿಸಿ ಘಮ್ಮೆನ್ನುವ ಸೋಪಿನಲ್ಲಿ ಮಿಂದು
ಹುಬ್ಬೇರುವ ತಾಜಾ ಪೌಡರು ಚಿಮುಕಿಸಿ
ಶೇಕಡಾ ಇಪ್ಪತ್ತು ರಿಯಾಯಿತಿಯ ಸೀರೆ ಉಟ್ಟವಳೇ
..............................................
ಎಷ್ಟು ಕೊಟ್ಟರೇ ನಿನ್ನ ನಗೆಗೆ?
.............................................
ನೂರು ದುಡಿತದ ಕೊನೆಗೆ ಗಾಢ ನಿದ್ದೆ
.............................................
ನಡು ರಾತ್ರಿ ಮಗಳೆದ್ದು ಹುಡುಕುತ್ತ ಬಂದಾಗ
ಕವನ ರಚಿಸುತ್ತಿದ್ದ ಕೈ ನಿಂತದ್ದನ್ನೂ ಮಗಳನ್ನು ಮಲಗಿಸಿ ಬಂದು ಕೂತರೆ, ಕವಿತೆಯೂ ನಿದ್ದೆ ಹೋದದ್ದನ್ನೂ ಹೇಳುತ್ತಾ ಕವಿತೆ ಹೆಣ್ಣಿನ ‘ಅವಸ್ಥೆ’ಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದೆ. ಇಲ್ಲಿ ಅವಸ್ಥೆ ಎನ್ನುವುದನ್ನು ಹೀನಾರ್ಥದಲ್ಲಿ, ಅಯ್ಯೋಪಾಪ ಎನ್ನುವ ಅನುಕಂಪದಲ್ಲಿ ನೋಡಬೇಕಿಲ್ಲ. ತಾನು ಎದುರಿಸಬೇಕಾಗಿರುವ ಸವಾಲು ಹಾಗೂ ಆ ಸವಾಲುಗಳನ್ನು ತನ್ನ ಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ರೂಪಿಸಿಕೊಳ್ಳಬೇಕಾದ ಕಾರ್ಯ ತಂತ್ರಗಳು, ತನ್ನ ಆಯ್ಕೆಯ ದ್ವಂದ್ವಗಳಲ್ಲಿ ಆದ್ಯತೆಯ ಪಟ್ಟಿಯೊಂದನ್ನು ಹೇಗೆ ಸಿದ್ಧ ಮಾಡಿಕೊಳ್ಳಬೇಕು ಎನ್ನುವುದರ ಗಾಢ ಚಿಂತನೆ ಇಲ್ಲಿದೆ.

ಅಚಾನಕ್ ಎನ್ನುವಂತೆ, ಇಳಾಭಟ್‌ರ ಮಾತೊಂದು ನೆನಪಾಗುತ್ತಿದೆ. ಮಹಿಳಾ ಕಾರ್ಮಿಕರ ಸಂಘಟನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ, ಗಾಂಧಿ ತಾತ್ವಿಕತೆಯ ಕೈಗಾರೀಕರಣವನ್ನು ಜಾರಿಗೆ ತರಲು ಅಪಾರವಾಗಿ ಶ್ರಮಿಸಿದ ಇಳಾ ಭಟ್, ಸಂದರ್ಶನವೊಂದರಲ್ಲಿ, ‘‘ಮಹಿಳೆಯರು ಅಗತ್ಯಕ್ಕಿಂತ ಹೆಚ್ಚು ಮನೆ ಕೆಲಸ ಮಾಡಬಾರದು, ಇದೇ ಅವರಿಗೆ ಅನೇಕ ಮಿತಿಗಳನ್ನು ಒಡ್ಡುತ್ತದೆ, ಗೃಹಕೃತ್ಯ ಎನ್ನುವುದೊಂದು ಕೊನೆಯಿಲ್ಲದ ಸಾಗರ, ನಾವು ಅದನ್ನು ಆದ್ಯತೆ ಮತ್ತು ಮೂಲಭೂತ ಅಗತ್ಯಗಳ ಆಧಾರದ ಮೇಲೆ ಮಾಡುವುದನ್ನು ಕಲಿಯಬೇಕು, ಮನೆಮಂದಿಗೂ ಅದನ್ನು ಕಲಿಸಬೇಕು’’ ಎನ್ನುತ್ತಾರೆ. ಭಾರತದ ಮಹಿಳೆಯರಂತೂ ಇದನ್ನು ಅಕ್ಷರಶಃ ಪಾಲಿಸಬೇಕು.

‘ಎಷ್ಟು ಕೊಟ್ಟರೇ ನಿನ್ನ ನಗೆಗೆ’ ಎನ್ನುವ ಮಾತು ಗಮನಿಸಿ. ಎಂಥ ಕಷ್ಟದಲ್ಲೂ ನಗುವ ಹೆಣ್ಣಿನ ಸಾಮರ್ಥ್ಯವನ್ನು ಮಾತ್ರ ಇದು ಹೇಳುತ್ತಿಲ್ಲ. ಅವಳ ನಗುವಿಗೂ, ಕೊನೆಯಿಲ್ಲದ ಶ್ರಮಕ್ಕೂ ಪ್ರತಿಯಾಗಿ ಯಾರೂ ಏನನ್ನೂ ಕೊಡುವುದಿಲ್ಲ ಎನ್ನುವುದನ್ನೂ ಇದು ಧ್ವನಿಸುತ್ತಿದೆ. ಇದೊಂದು ಥ್ಯಾಂಕ್‌ಲೆಸ್ ಎಂದು ಕರೆಯಬಹುದಾದ ಅಥವಾ ಹೆಣ್ಣು ಹಾಡಲೇಬೇಕಾದ ಗೀತೆ ಎನ್ನುವುದಾದರೆ, ಹೆಣ್ಣು ಇದನ್ನು ತನ್ನ ಸ್ವಾಂತ ಸುಖಾಯಕ್ಕಾಗಿ ಮಾಡುವುದೋ ಗೃಹಿಣಿಯ ಕರ್ತವ್ಯವೆಂದೋ ಕರಾರುಗಳೆಂದೋ ತಿಳಿಯಲಾಗಿರುವ ಕಾರಣಕ್ಕಾಗಿ ಮಾಡುತ್ತಿರುವುದೋ. ಈ ಪ್ರಶ್ನೆಗಳ ಜೊತೆಯಲ್ಲೇ ಇಲ್ಲಿನ ನಾಯಕಿ ತನ್ನ ಮೌನದಲ್ಲೇ ತನಗೇ ಹಾಕಿಕೊಳ್ಳುತ್ತಿರುವ ಪ್ರಶ್ನೆಯೆಂದರೆ– ಇದಕ್ಕೊಂದು ಮಿತಿಯನ್ನು ಅವಳು ಹಾಕಿಕೊಳ್ಳಬೇಕೆ ಬೇಡವೆ? ಅವಳದೇ ಆದ ಬದುಕಿನ, ವ್ಯಕ್ತಿತ್ವದ ರಚನೆಯನ್ನು, ಸಾಧ್ಯತೆಯನ್ನು ಬಲಿಕೊಟ್ಟು ಅವಳು ಇದನ್ನು ಮಾಡಬೇಕೆ? ಈ ಎರಡನ್ನೂ ಒಟ್ಟಿಗೇ ಸಂಭಾಳಿಸುವ ಪರಿಯೊಂದು ಇದೆಯೆ?
ಪ್ರತಿಭಾ ಕಾವ್ಯದ ಎರಡನೆಯ ಘಟ್ಟ ಇದನ್ನು ಆಳವಾಗಿ ಶೋಧಿಸುತ್ತದೆ.

ಗೃಹಿಿಣೀ ಗೀತದಿಂದ ಕೇರ್ ಫ್ರೀ ಮಹಿಳೆಯರಾಗುವ, ಈ ಇಕ್ಕಟ್ಟುಗಳಿಂದ ಬಿಡುಗಡೆಯಾಗಲು ಇನ್ನಷ್ಟು ದಾರಿಗಳನ್ನು ಹುಡುಕುವ ಪ್ರಯತ್ನಗಳನ್ನು ಮುಂದುವರಿಸಿ ಕಾಲುದಾರಿಗಳನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ ಇವರ ಕಾವ್ಯದ ನಾಯಕಿ. ದಾಂಪತ್ಯವೆನ್ನುವ ಅಗ್ನಿದಿವ್ಯವನ್ನು ಹಾಯುತ್ತಲೇ ತಮ್ಮನ್ನು ಹೊಸದಾಗಿ ಕಟ್ಟಿಕೊಳ್ಳಲು ಪ್ರಯತ್ನ ನಡೆಸುತ್ತಾರೆ. ಆಕಾರವಿಲ್ಲದ ಕಡೆ ಆಕಾರ ಕಟ್ಟಿಕೊಳ್ಳಲು, ನೋಟವಿಲ್ಲದ ಗಂಡಿಗೆ ಹೆಣ್ಣನ್ನು ಕುರಿತ ನೋಟವೊಂದನ್ನು ಪ್ರಯತ್ನಪೂರ್ವಕವಾಗಿ ಕೊಡಲು, ಭಾಷೆಯಿಲ್ಲದ ಹೆಣ್ಣು ಭಾಷೆಯನ್ನು ಕಟ್ಟಿಕೊಳ್ಳಲು, ಕಿವಿಯಿಲ್ಲದ ಅವರೂ ಪ್ರಯತ್ನಪೂರ್ವಕವಾಗಿ ಹೆಣ್ಣು ಭಾಷೆಯನ್ನು ಕೇಳುವ ಪ್ರಯತ್ನ ಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲು ಮುಂದಾಗುತ್ತಾಳೆ. ಆದರೆ ಈ ದಾರಿ ಅದೆಷ್ಟು ಕಷ್ಟದ ದಾರಿಯೆಂದರೆ,

ಎಂತೆಂತಹ ಕದನಗಳನ್ನು ಕಾದಿದೆವು ನಾವು
ಹರಿತ ಖಡ್ಗ ಚಾಚಿ ಸೀಳಿ 
ಕತ್ತರಿಸುವ ಮಾತು ಬಳಸಿ
ಯಾರಿಗ್ಯಾರು ಸೋಲಬೇಕು
ಯಾರಿಗೆ ಗೆಲುವು, ಯಾರ ಪಲಾಯನ

ಇದೊಂದು ನಿರ್ಣಾಯಕವಾದ ಯುದ್ಧ ಗಂಡು ಹೆಣ್ಣು ಇಬ್ಬರಿಗೂ. ಆದ್ದರಿಂದಲೇ ತಮ್ಮದೆಲ್ಲವನ್ನೂ ಪಣಕಿಟ್ಟು ಇಬ್ಬರೂ ರಣರಂಗದಲ್ಲಿದ್ದಾರೆ. ಬದಲಾಗಬೇಕಾದ ಅನಿವಾರ್ಯತೆ ಇಬ್ಬರಿಗೂ. ಆದರೆ ಅಧಿಕಾರ ಮೂಲವಾದ ಪಿತೃಸಂಸ್ಕೃತಿ ತನ್ನ ಸ್ವಯಂಸಿದ್ಧ ಅಧಿಕಾರ ಕೇಂದ್ರವನ್ನು ಉಳಿಸಿಕೊಳ್ಳಲು ಏನನ್ನು ಬೇಕಾದರೂ ಎಷ್ಟು ಬೇಕಾದರೂ ಬಳಸಲು ಸಿದ್ಧವಿದೆ. ಕೊಟ್ಟಂತೆ ಮಾಡುತ್ತಲೇ ಕೊಟ್ಟದ್ದರ ಎರಡರಷ್ಟನ್ನು ವಸೂಲು ಮಾಡಿಕೊಳ್ಳುವ ಎಲ್ಲ ತಂತ್ರಗಳೂ ಅದಕ್ಕೆ ಕರತಲಾಮಲಕ. ಇದರ ವಿವರಗಳಿಗೆ ನಾವು ಕಳೆದ ನಾಲ್ಕೈದು ದಶಕಗಳಲ್ಲಿ ಬಂದಿರುವ ಮಹಿಳಾ ಆತ್ಮಕಥೆಗಳಿಗೆ ಹೋಗಬೇಕು. ಹೆಣ್ಣಿನ ಧೀಶಕ್ತಿಯನ್ನು ದುರ್ಬಲಗೊಳಿಸುವ ಅದೆಷ್ಟು ದಾರಿಗಳಿವೆ ಎನ್ನುವುದರ ಅರಿವು ನಮ್ಮನ್ನು ಕಂಗೆಡಿಸುತ್ತದೆ. ಯಃಕಶ್ಚಿತ್ ಎನ್ನಬಹುದಾದ ವಿವರಗಳಿಂದ ಹಿಡಿದು ಗಂಭೀರವಾದ ವಿವರಗಳ ತನಕ ಪಿತೃಸಂಸ್ಕೃತಿಯು ತನ್ನ ಅಧಿಕಾರ ಹಸ್ತವನ್ನು ಸಾಧ್ಯವಿರುವ ಎಲ್ಲ ಅಧಿಕಪ್ರಸಂಗದಲ್ಲಿ ಚಾಚುತ್ತಲೇ ಇರುತ್ತದೆ.

ನೀರಾ ದೇಸಾಯಿ (ಆಧುನಿಕ ಭಾರತದ ಸಂದರ್ಭದಲ್ಲಿನ ಇನ್ನೊಬ್ಬ ಮುಖ್ಯ ಮಹಿಳೆ. ಮಹಿಳಾ ಅಧ್ಯಯನವೂ ಸೇರಿದಂತೆ ಎನ್ ಜಿ ಒ ಗಳ ಮೂಲಕ ಮಹಿಳಾ ಸಂಘಟನೆಯನ್ನು ಮಾಡಲು ಬದುಕಿನುದ್ದಕ್ಕೂ ಶ್ರಮಿಸಿದವರು) ಅವರ ಮಾವ ಆ ಕಾಲದ ಪ್ರಗತಿಪರ ಲೇಖಕರು ಮತ್ತು ಚಿಂತಕರಲ್ಲಿ ಮುಂಚೂಣಿಯವರಾಗಿದ್ದೂ ವೈಯಕ್ತಿಕ ಬದುಕಿನಲ್ಲಿ ಹೇಗೆ ಸಾಂಪ್ರದಾಯಿಕರಾಗಿದ್ದರು ಮತ್ತು ಇವರ ಮೇಲೆ ಆ ಒತ್ತಡಗಳನ್ನು ಮೌನವಾಗಿಯೇ ತರುತ್ತಿದ್ದರು ಎನ್ನುವುದನ್ನು ಹೇಳುತ್ತಾರೆ. ತಲೆಯ ಮೇಲೆ ಸೆರಗು ಹೊದೆಯುವುದರಿಂದ ಹಿಡಿದು ದಿನಪತ್ರಿಕೆ ಆ ಮನೆಯ ಹೆಣ್ಣುಮಕ್ಕಳ ಕೈಗೆ, ಮಧ್ಯಾಹ್ನದ ನಂತರವಷ್ಟೇ ಸಿಗುತ್ತಿದ್ದುದನ್ನೂ ಅವರ ಆತ್ಮಕಥಾನಕ ಲೇಖನದಲ್ಲಿ ವಿವರಿಸುತ್ತಾರೆ.

ಇಂಥ ಸಂಘರ್ಷಪೂರ್ಣ ಬದುಕಿನಲ್ಲಿ ಹಲವೊಮ್ಮೆ ಹೆಣ್ಣಿಗೆ ಆಯಾಸವಾಗುವುದೂ ಇದೆ, ಸಾಕೆನಿಸುವುದೂ ಇದೆ. ಆದರೆ, ಅದು ತಾತ್ಕಾಲಿಕ. ‘ಬದುಕು’ ಕವಿತೆಯಲ್ಲಿ ಬದುಕು ಅಜ್ಜಿಬಜ್ಜಿಯಾದದ್ದನ್ನೂ ಅದರಿಂದಲೇ ಫೀನಿಕ್ಸ್‌ನಂತೆ ಹೆಣ್ಣು ಪುಟಿದೇಳುವುದನ್ನೂ ಪ್ರತಿಭಾ ವರ್ಣಿಸುತ್ತಾರೆ. ನರಳುತ್ತಿರುವ ಬದುಕನ್ನು–
ನಾನು ಅದನ್ನು
ಅದು ನನ್ನನ್ನು
ಕಣ್ಕಣ್ಣು ಬಿಟ್ಟು ನೋಡಿದೆವು
ಒಮ್ಮೆಲೇ ಪ್ರೀತಿ ಉಕ್ಕಿ ಬಂದು

ಮತ್ತೆ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾರೆ. ಬದುಕಿಗೆ ಬೆನ್ನು ತಿರುಗಿಸದ ತನ್ನ ಧಾರಣಶಕ್ತಿಗೆ ಹೆಣ್ಣು ಮರಳುವ ಪರಮಸತ್ಯವನ್ನು ಈ ನಾಯಕಿ ನೆಚ್ಚುತ್ತಾಳೆ ಮತ್ತು ಅದೇ ತನ್ನ ಶಕ್ತಿಕೇಂದ್ರ ಎನ್ನುವ ಅರಿವಿನಲ್ಲಿ ಬದುಕಿನ ಹೋರಾಟವನ್ನು ಮುಂದುವರಿಸುತ್ತಾಳೆ. ‘ಕಾಮನಬಿಲ್ಲಿನ ಹಿಂದೆ ಓಡುವವರಿಗೆ ದಣಿವಿಲ್ಲ’ ಎನ್ನುವ ಇವರ ನಾಯಕಿಯ ಮಾತು ನಿಜದಲ್ಲಿ ಹೆಣ್ಣಿನ ಜೀವನ ದೃಷ್ಟಿಕೋನ ಎಂದರೂ ನಡೆಯುತ್ತದೆ. ದಣಿವನ್ನು ಧಾರಣಶಕ್ತಿಯಾಗಿ ಮಾರ್ಪಡಿಸಿಕೊಳ್ಳುವ ಮಾಂತ್ರಿಕ ಶಕ್ತಿ ತನಗಿದೆ ಎನ್ನುವ ತಿಳಿವಳಿಕೆ ಮತ್ತು ನಂಬಿಕೆ ಹೆಣ್ಣಿಗೆ ಕೊಡುವ ಶಕ್ತಿ ಅಪಾರ. ಲೋಕವನ್ನೇ ಆಶ್ರಯಿಸುವ ನೆಲೆಯಿಂದ ಅವಳು ತನ್ನನ್ನು ತಾನು ನಂಬುವ, ‘ನಿನಗೆ ನೀನೆ ಗೆಳಯ’ ಎನ್ನುವ ಅಡಿಗರ ಮಾತನ್ನು ಕೊಂಚ ಬದಲಾಯಿಸಿ ಹೇಳುವುದಾದರೆ ‘ನಿನಗೆ ನೀನೆ ಗೆಳತಿ’ ಎನ್ನುವ ಸ್ಪಷ್ಟತೆಯ ಕಡೆಗೆ ಚಲಿಸುತ್ತಾಳೆ. ಇದು ಏಕಾಂಗಿತನದ ಕೊರಗಲ್ಲ, ತನ್ನ ನ್ನು ತಾನು ರಚಿಸಿಕೊಳ್ಳಲು ಇರುವ ದಾರಿ ಎನ್ನು ಕಾರಣಕ್ಕೆ ಇದರ ಬಗೆಗೆ ಗೌರವವೂ ಅವಳಿಗಿದೆ.

ನನ್ನ ಮಗಳು ಅವಳ ತಂದೆಗೆ
ದಬಾಯಿಸಿದ ದಿನ ನಾನು ಹೋಳಿಗೆ ಮಾಡಿದೆ
ಎನ್ನುವುದು ಅದರೆಲ್ಲ ಲಘುತ್ವ ಮತ್ತು ಉತ್ಪ್ರೇಕ್ಷೆಯಲ್ಲಿಯೂ ಮಹತ್ವದ ನೋಟ ಪಲ್ಲಟವನ್ನು ದಾಖಲಿಸುತ್ತದೆ. ‘ಆವರಿಸಿದೆ ದೂರ ನಿಂತು ನಗುವ ತಂದೆಯ ನೆರಳು’– ಇದು ಅವರ ಬಯಕೆಯಲ್ಲ ನಿಜ, ಆದರೆ ನಮ್ಮ ಹಕ್ಕೊತ್ತಾಯವನ್ನು ಅವರು ನಿರ್ಲಕ್ಷಿಸಲಾಗುವುದಿಲ್ಲ ಎನ್ನುವುದೇ ಬದಲಾವಣೆಯ ಪ್ರಕ್ರಿಯೆಯ ಆರಂಭವನ್ನು ಸೂಚಿಸುತ್ತದೆ. ಇಷ್ಟೆಲ್ಲ ಆಗಿಯೂ,

ಎಲ್ಲ ಯಶಸ್ವಿ ಪುರುಷನ ಹಿಂದೆ
ಒಬ್ಬಳು ಮಹಿಳೆ
ಎಲ್ಲ ಯಶಸ್ವಿ ಮಹಿಳೆಯ ಹಿಂದೆ
ಒಬ್ಬ ಅತೃಪ್ತ ಪುರುಷ
ಬೇರೇನಲ್ಲದಿದ್ದರೂ ಈ ಸತ್ಯವನ್ನು ಎದುರಿಸಲು ಬೇಕಾಗುವ ಮನೋವಿನ್ಯಾಸವನ್ನು ಕಟ್ಟಿಕೊಳ್ಳುವುದೇ ಹೊಸಹೆಣ್ಣಿನ ಆಗಮನವನ್ನು ಸಾರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.