ADVERTISEMENT

ದೋಪ್ದಿ ಎನ್ನುವ ಅಗ್ನಿಕನ್ಯೆ

ಎಂ.ಎಸ್.ಆಶಾದೇವಿ
Published 23 ಮಾರ್ಚ್ 2016, 8:58 IST
Last Updated 23 ಮಾರ್ಚ್ 2016, 8:58 IST

ಈ ಅಂಕಣದಲ್ಲಿ ಇನ್ನು ಮುಂದೆ ಕೆಲವು ಮಹತ್ವದ ಭಾರತೀಯ ಸ್ತ್ರೀಪಾತ್ರಗಳನ್ನು ಚರ್ಚಿಸುವ ಪ್ರಯತ್ನ ಮಾಡುತ್ತೇನೆ. ಸ್ತ್ರೀಪಾತ್ರಗಳನ್ನು ಹೀಗೆ ಕನ್ನಡದ, ಭಾರತೀಯ, ಜಾಗತಿಕ ಎಂದೆಲ್ಲ ವರ್ಗೀಕರಿಸುವುದೇ ಅನವಶ್ಯಕ ಎನ್ನುವುದು ನಿಜ. ದೇಶ ಕಾಲಾತೀತವಾಗಿ ಹೆಣ್ಣಿನ ಸ್ಥಿತಿ, ಅವಸ್ಥೆ ಮತ್ತು ಸವಾಲುಗಳಲ್ಲಿ ಕೆಲವು ಸಾಮಾನ್ಯತೆಗಳು ಪರಮ ಸತ್ಯದಂತೆ ಇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಹೆಣ್ಣಿನ ಆತ್ಮಬಲವನ್ನು ಹೆಚ್ಚಿಸುವ ದೃಷ್ಟಿಯಿಂದ ತೀರಾ ಅಗತ್ಯ. ಜನಪದ ಕವಿಯೊಬ್ಬಳು, ‘ಅಯ್ಯೋ ಆ ಸೀತಾದೇವಿಗೇ ಕಷ್ಟ ತಪ್ಪಲಿಲ್ಲವಂತೆ, ಇನ್ನು ನನಗೆ ತಪ್ಪೀತೇ’ ಎಂದು ಉದ್ಗರಿಸುವುದು ಇಂಥ ಸಮಾನವೇದಿಕೆಯ ರಚನೆಯ ಪ್ರಯತ್ನವೇ.

ಈ ಆಲೋಚನಾ ಕ್ರಮವೇ ಅಂತಿಮವಾಗಿ ಸಿಮೊನ್ ಗುರುತಿಸುವ ‘ಸಂಘಟನೆಯ ಕೊರತೆ’ಯ

ಸವಾಲನ್ನು ಮಹಿಳೆಯರು ವ್ಯವಸ್ಥಿತವಾಗಿ ಎದುರಿಸಲು ಸಹಕರಿಸುತ್ತದೆ ಎನ್ನುವ ಘೋಷಣೆಯು  ಸಾರ್ವತ್ರಿಕ ಮಹಿಳಾ ಸಂಕುಲವನ್ನು ಮುನ್ನೆಲೆಗೆ ತರುವ, ಅದರ ಒಗ್ಗಟ್ಟಿನ ಶಕ್ತಿಯ ದರ್ಶನವನ್ನು ಮಾಡಿಸುವ ಆಶಯದ್ದೇ ಆಗಿದೆ. ಕೆಲವು ವರ್ಷಗಳ ಹಿಂದೆ, ಈಶಾನ್ಯ ಭಾರತದಲ್ಲಿ ಮಹಿಳೆಯರ ಮೇಲಿನ ಮಿಲಿಟರಿ ಆಕ್ರಮಣವನ್ನು ವಿರೋಧಿಸಲು ಮಹಿಳೆಯರು ಮಿಲಿಟರಿ ಕಚೇರಿಯ ಮುಂದೆ, ವೃತ್ತಾಕಾರವಾಗಿ ನಿಂತು ಒಂದೇ ಉದ್ದನೆಯ ಸೀರೆಯನ್ನು ತಮ್ಮ ಬೆತ್ತಲೆ ಮೈಗೆ ಸುತ್ತಿಕೊಳ್ಳುವ ಮೂಲಕ ಪ್ರತಿಭಟನೆಯನ್ನು ನಡೆಸಿದ್ದರು.

ಸೆಮಿನಾರೊಂದರಲ್ಲಿ, ಹೆಣ್ಣು ದೈಹಿಕವಾಗಿ ದುರ್ಬಲಳು ಎನ್ನುವ ಮಿಥ್ಯೆಯ ಪುನರ್ ಪ್ರಸ್ತಾಪವಾಯಿತು. ಆದ್ದರಿಂದಲೇ ಹೆಣ್ಣಿನ ಮೇಲೆ ಅತ್ಯಾಚಾರಗಳು ಇದೇ ಕಾರಣಕ್ಕಾಗಿ ಎಂದೂ ಕೆಲವರು ಅಭಿಪ್ರಾಯ ಪಟ್ಟರು. ದೌರ್ಬಲ್ಯ ಎಂದರೆ ಏನು? ಎರಡು ವರ್ಷದ ಹಸುಕಂದನ ಮೇಲೆ ಎರಗುವ ಮೃಗೀಯತೆಯ ಎದುರಿಗೆ, ಅರವತ್ತರ ವೃದ್ಧೆಯ ಮೇಲೆ ಎರಗುವ ಮೃಗೀಯತೆಯ ಎದುರಿಗೆ ಅವರಿಬ್ಬರೂ ದುರ್ಬಲರು ಎಂದು ತೀರ್ಪು ಕೊಟ್ಟರೆ ಏನು ಹೇಳಿದಂತಾಯಿತು? ಮಠಾಧೀಶರೊಬ್ಬರು, ದೆಹಲಿಯ ಹುಡುಗಿಯ ಮೇಲಿನ ಆಕ್ರಮಣದ ಹೊತ್ತಿನಲ್ಲಿ, ಅವಳು, ಆ ದುರುಳರನ್ನು (ಹೊಗೆ ಮೊಗದ ಕಿಡಿಗಣ್ಣ ಕೆಮ್ಮೀಸೆಗಳ ಗುಜುರಿನ ಜುಂಜು ಗೇಶದ ವಿಗಡನೆದ್ದನು ಬಂದು ಹಿಡಿದನು ದ್ರೌಪದಿಯ ಸೆರಗ) ‘ಅಣ್ಣಂದಿರಾ ಬಿಟ್ಟು ಬಿಡಿ ನನ್ನನ್ನು’ ಎಂದು ಸೆರಗೊಡ್ಡಿ ಬೇಡಿಕೊಂಡಿದ್ದರೆ, ಆ ಅನಾಹುತವನ್ನು ತಪ್ಪಿಸಬಹುದಿತ್ತು ಎಂದು ಅಪ್ಪಣೆ ಕೊಡಿಸಿದ್ದರು!

ಇರಲಿ, ಅತ್ಯಾಚಾರವೂ ಸೇರಿದಂತೆ ಎಲ್ಲ ಬಗೆಯ ದೌರ್ಜನ್ಯಗಳೂ ದೌರ್ಜನ್ಯ ಮಾಡುವವರ ದೌರ್ಬಲ್ಯವನ್ನು ತೋರಿಸುತ್ತವೆ. ಹೀಗೆ ದೌರ್ಜನ್ಯವೆಸಗುವುದು ತಮ್ಮ ಅಧಿಕಾರವ್ಯಾಪ್ತಿಯಲ್ಲಿ ಬರುತ್ತದೆ ಎಂದು ಅವರು ತಿಳಿದಿರುವುದರ ಅಜ್ಞಾನವೇ ನಿಜವಾದ ದೌರ್ಬಲ್ಯ ಎನಿಸುತ್ತದೆ. ಹೀಗಾಗಿ ಅತ್ಯಾಚಾರಕ್ಕೊಳಗಾದವರ ಬಗೆಗಿನ ಕರುಣೆಯನ್ನು ತೋರಿಸುವುದು ಬಿಟ್ಟು ತಮ್ಮ ದೇಹ ಮನಸ್ಸು ಯಾವುದರ ಮೇಲೂ ನಿಯಂತ್ರಣವಿರದ ಆ ದುಷ್ಟ ದುರ್ಬಲರನ್ನು ಬಹಿಷ್ಕರಿಸುವುದರ ಕಡೆಗೆ ಯೋಚಿಸಬೇಕು. ಇದಕ್ಕಿಂತ ಹೆಚ್ಚಾಗಿ ಅತ್ಯಾಚಾರದ ವ್ಯಾಖ್ಯಾನ, ಅದನ್ನು ನೋಡುವ ನಮ್ಮ ದೃಷ್ಟಿಕೋನ, ವ್ಯವಸ್ಥೆ ಇದನ್ನು ನಿಭಾಯಿಸುವ ಬಗೆ ಈ ಎಲ್ಲವೂ ಸಂಪೂರ್ಣವಾಗಿ ಬದಲಾಗಬೇಕು.

ಆದರೆ, ಇದು ಅಸಾಧ್ಯವೇನೋ ಎನ್ನುವ ಪರಿಸ್ಥಿತಿಯೇ ಎಂದಿನಿಂದಲೂ ಮುಂದುವರಿದಿರುವುದರಿಂದ, ‘ನನಗಿಂತ ಮೊದಲೆ ಬದಲಾದ ಬಂಡೆಯ ಕಂಡೆ’ ಎನ್ನುವುದೇ ಕಣ್ಣೆದುರಿಗಿರುವ ಸತ್ಯವಾಗಿರುವುದರಿಂದ, ಹೆಣ್ಣೇ ಬದಲಾಗಬೇಕಾದ್ದು ಅನಿವಾರ್ಯ. ನಾನು ಬದಲಾಗುವುದೆಂದರೆ ಲೋಕ ಬದಲಾಗು ವುದೆಂದೇ ಅರ್ಥ ಎನ್ನುವುದು ಹೆಣ್ಣಿಗೆ ಅನ್ವಯಿಸುವಷ್ಟು ಅರ್ಥಪೂರ್ಣವಾಗಿ  ಇನ್ನಾರಿಗೂ ಅನ್ವಯಿಸಲಾರದು. ಈ ಬದಲಾವಣೆಯ ಪ್ರಕ್ರಿಯೆ ಯಾವ ಉತ್ಪ್ರೇಕ್ಷೆಯೂ ಇಲ್ಲದೆ ಒಂದು ಯುದ್ಧವೇ. ಈ ಯುದ್ಧವನ್ನು ಹೆಣ್ಣು ಇಬ್ಬಾಯ ಖಡ್ಗವನ್ನು ಹಿಡಿದೇ ಸಾಧಿಸಬೇಕು. ಏಕೆಂದರೆ ಈ ಯುದ್ಧದಲ್ಲಿ ಅವಳು ಸ್ವತಃ ತನ್ನ ವಿರುದ್ಧವೂ ಹೋರಾಡಬೇಕು. ಬೇಕಾಗಿ ಬೇಡವಾಗಿ ತಾನು ತೊಟ್ಟಿರುವ, ಹೊತ್ತಿರುವ ‘ದೇಹ ಸರ್ವಸ್ವದ’ ವೇಷ ಮತ್ತು ಭಾರವನ್ನು ಅವಳು ಕಳೆದುಕೊಳ್ಳಬೇಕಾದ ನಿರ್ಣಾಯಕ ಯುದ್ಧ ಇದು. ಆದ್ದರಿಂದಲೇ ಇಂಥ ಹೋರಾಟದ ವಿವರಗಳಿರುವ ಯಾವ ಕಲಾಪಠ್ಯಗಳೂ ನನಗೆ ರೂಪಕದ ಕತ್ತಿಗಳಂತೆ ಭಾಸವಾಗುತ್ತವೆ. ಇವು ಕಲಾಪಠ್ಯಗಳೆಷ್ಟೋ ಅಷ್ಟೇ ರಾಜಕೀಯ ಪಠ್ಯಗಳೆಂದೂ ನಾವು ಗಮನಿಸಬೇಕು. ಇತಿಹಾಸದ ಹೊಸ ನಕಾಶೆಯೊಂದರ ಮಹಾಪ್ರಯತ್ನಗಳು ಇವು.
***
ಮಹಾಶ್ವೇತಾದೇವಿ ನಿಸ್ಸಂದೇಹವಾಗಿ ಜಗತ್ತು ಕಂಡ ಅಪೂರ್ವ ಮಾನವತಾವಾದಿ ಲೇಖಕಿ ಮತ್ತು ಕಾರ್ಯಕರ್ತೆ. ಸ್ತ್ರೀವಾದವು ಅದರ ನಿಜದಲ್ಲಿ ಮಾನವತಾವಾದ ಎಂದು ಹೇಳುವುದಕ್ಕೆ ಅತ್ಯುತ್ತಮ ಉದಾಹರಣೆ ಮತ್ತು ಪ್ರತಿನಿಧಿಯೆಂದರೆ ಮಹಾಶ್ವೇತಾದೇವಿ. ಅವಕಾಶ ವಂಚಿತ ಆದಿವಾಸಿಗಳ ಪರವಾದ ಹೋರಾಟವನ್ನು ಜೀವನ್ಮರಣದ ತೀವ್ರತೆಯಲ್ಲಿ ಮತ್ತು ಬದ್ಧತೆಯಲ್ಲಿ ನಡೆಸುತ್ತಿರುವ ಮಹಾಶ್ವೇತಾದೇವಿ ತಮ್ಮ ಬರವಣಿಗೆಯನ್ನೂ ಇದರ ಅಖಂಡ ಭಾಗ ಎಂದೇ ತಿಳಿದಿರುವವರು. ‘ಅಗ್ನಿ ತತ್ವ’ ಅವರ ಬರವಣಿಗೆಯ  ಮೂಲತತ್ವ ಮಾತ್ರವಲ್ಲ, ಅವರ ಬದುಕಿನ ಮೂಲತತ್ವವೂ ಹೌದು. ಉರಿಯುವ ಬೆಂಕಿಯ ಎಲ್ಲ ಇತ್ಯಾತ್ಮಕ ಗುಣಗಳನ್ನೂ ಒಳಗೊಳ್ಳಲು ಇವರು ಹಾತೊರೆಯುತ್ತಾರೆ.

ವರ್ತಮಾನದ ಪರಿಸ್ಥಿಯ ದಾರುಣತೆಯನ್ನು ಅದರ ಎಲ್ಲ ಮಗ್ಗುಲುಗಳಲ್ಲಿ ಹಿಡಿಯಲು ಪ್ರಯತ್ನಿಸುತ್ತಲೇ ಅದರಲ್ಲಿ ಘಟಿಸಬೇಕಾಗಿರುವ ಬದಲಾವಣೆಗಳ ಬಗೆಗೆ ಸದಾ ಆಲೋಚಿಸುತ್ತಾ ಅವುಗಳನ್ನು ಪ್ರಯೋಗಿಸಲು ಉಧ್ಯುಕ್ತವಾಗಿರುವ ಮನಸ್ಥಿತಿಯೂ ಇವರ ಬರಹಗಳ ಮೂಲ ಸ್ವರೂಪವೇ ಆಗಿದೆ.  ಮಹಾಶ್ವೇತಾದೇವಿಯವರ ಬರವಣಿಗೆಯ ಬಹುದೊಡ್ಡ ಸಾಧನೆಯೆಂದರೆ, ಅವಕಾಶ ವಂಚಿತರ ಅವಸ್ಥೆಗೆ ಕಾರಣವಾದ ವ್ಯವಸ್ಥೆಯು ಆತ್ಮವಿಮರ್ಶೆ ಮಾಡಿಕೊಳ್ಳಲೇ ಬೇಕಾದ ಹಕ್ಕೊತ್ತಾಯದ ವಾತಾವರಣವನ್ನು ನಿರ್ಮಾಣ ಮಾಡುವುದು. ಸಾಮಾನ್ಯವಾಗಿ ಈ ಬಗೆಯ ಬರಹಗಳು ವಂಚಿತರು ಮತ್ತು ಶೋಷಿತರ ಬಗ್ಗೆ ನಮ್ಮಲ್ಲಿ ಮರುಕ ಹುಟ್ಟಿಸುತ್ತವೆ. ಕರುಣಾರಸ ಸಾಗರವೇ ಅಲ್ಲಿ ಹರಿಯುತ್ತದೆ. ಆದರೆ ಮಹಾಶ್ವೇತಾದೇವಿಯವರ ಬರವಣಿಗೆ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಚಲಿಸಿ, ಬಾಣ ಯಾರಿಗೆ ನಾಟಬೇಕೋ ಅವರಿಗೆ ನಾಟುವುದರಲ್ಲಿ ಯಶಸ್ವಿಯಾಗುತ್ತದೆ.

ದುರ್ದಮ್ಯವಾದ ಅನುಭವದ ತೀವ್ರತೆಯೇ ಕಲೆಯ ಮೂಲಗಳಲ್ಲಿ ಒಂದು ಎನ್ನುವುದು ಆದಿಮ ಕಲಾತತ್ವಗಳಲ್ಲಿ ಒಂದು. ಮಹಾಶ್ವೇತಾದೇವಿಯವರ ಸಾಹಿತ್ಯ ಇದನ್ನು ಅದ್ಭುತ ವಾಗಿ ಅನುಮೋದಿಸುತ್ತದೆ. ಸಾಹಿತ್ಯದ ಪ್ರಕಾರಗಳನ್ನು ಕುರಿತ ಪ್ರಜ್ಞಾಪೂರ್ವಕವಾದ ಯಾವ ಆಯ್ಕೆಗಳ ಬಗೆಗೂ ತಲೆಕೆಡಿಸಿಕೊಂಡವರಂತೆ ಇವರು ಕಾಣಿಸುವುದಿಲ್ಲ. ಆದರೆ, ಇವರು ಆರಿಸಿಕೊಂಡ ಪ್ರಕಾರಗಳ ಘನತೆ ಮತ್ತು ಸಾಧ್ಯತೆಯನ್ನು ಹೆಚ್ಚಿಸುವುದು ಇವರಿಗೆ ಸಾಧ್ಯವಾಗಿರುವುದು ಬದುಕನ್ನು ಕುರಿತ ದೃಷ್ಟಿಕೋನದ ಬಗೆಗಿನ ಇವರ ಬದ್ಧತೆ, ಪ್ರಾಮಾಣಿಕತೆ ಯಿಂದಾಗಿ.

ಆದಿವಾಸಿಗಳು ಮತ್ತು ಹೆಣ್ಣಿನ ಆದಿಮ ಶಕ್ತಿಗಳನ್ನು, ಸಾಧ್ಯತೆಗಳನ್ನು ಇವರಂತೆ ಗುರುತಿಸಿದವರು ಅಪರೂಪ. ಹೊರಗಿನಿಂದ ಕಡ ತಂದ ಅಥವಾ ಜ್ಞಾನೋದಯದ ನೆಲೆಯಲ್ಲಿ ಇವರು ಹೆಣ್ಣು ಮತ್ತು ಆದಿವಾಸಿಗಳನ್ನು ನೋಡುವುದಿಲ್ಲ. ಅದು ಅವರ ಮೂಲವ್ಯಕ್ತಿತ್ವದ ಸಾಕಾರ ಎನ್ನುವಂತೆ ಇವರು ನೋಡುವುದರಿಂದಲೇ ಅದಕ್ಕೆ ಇನ್ನಿಲ್ಲದ ಬೆಲೆ ಇದೆ.

‘ದೋಪ್ದಿ’ ಜಗತ್ತಿನ ಅತ್ಯುತ್ತಮ ಕಥೆಗಳಲ್ಲಿ ಒಂದು. ದ್ರೌಪದಿಯ ಆದಿವಾಸಿ ರೂಪ ದೋಪ್ದಿ. ಆರ್ಷೇಯ ಹೆಣ್ಣಿನ ಚಿತ್ರಣಕ್ಕೆ ತದ್ವತ್ ವಿರುದ್ಧ ಈ ದೋಪ್ದಿ. ಯಾವುದೆಲ್ಲ ಹೆಣ್ಣಿಗೆ ಅದರಲ್ಲೂ ಸಂಪನ್ನೆಯಾದ ‘ಒಳ್ಳೆಯ’ ಹೆಣ್ಣಿಗೆ ನಿಷಿದ್ಧವೋ ಅದೆಲ್ಲ ಇವಳಲ್ಲಿ ಸಮೃದ್ಧವಾಗಿ ಇದೆ. ಉಗ್ರಗಾಮಿಯೆಂದು ನಕ್ಸಲ್ ಎಂದು ಗುರುತಿಸುವುದಕ್ಕೆ ಬೇಕಾದ ಎಲ್ಲ ಗುಣಲಕ್ಷಣಗಳಿಂದಲೂ ಈ ದೋಪ್ದಿ ಕಂಗೊಳಿಸುತ್ತಾಳೆ.

ಕಥೆಯ ಪ್ರಾರಂಭದಲ್ಲೇ ದೋಪ್ದಿಯನ್ನು ಕುರಿತ ಸೈನ್ಯದವರ ಚಿತ್ರಣವೊಂದಿದೆ. ಇವಳ ವಿವರಗಳನ್ನು ಕೇಳುತ್ತಾ ಪೊಲೀಸನೊಬ್ಬ– ‘ಇವಳು ಎಷ್ಟೊಂದು ಕೇಸುಗಳಲ್ಲಿ ಬೇಕಾಗಿದ್ದಾಳಪ್ಪ’ ಎನ್ನುತ್ತಾನೆ. ದೋಪ್ದಿ ಮತ್ತು ಅವಳ ಗಂಡ ದುಲ್ನಾ ಅವರ ಹಳ್ಳಿಯ ಜಮೀನ್ದಾರನ ವಿರುದ್ಧ ಬಂಡೆದ್ದವರು. ಅವನ ಶೋಷಣೆಯ ವಿರುದ್ಧ ಜನರನ್ನು ಸಂಘಟಿಸಿದವರು. ಕೊನೆಗೊಂದು ದಿನ ಅವನ ಮನೆಯನ್ನು ಮುತ್ತಿ ಜಮೀನ್ದಾರನನ್ನು ಕಟ್ಟಿ ಹಾಕಿದಾಗ ಈ ದೋಪ್ದಿ ಮೇಝ್‌ನ್ ‘ನನ್ನನ್ನು ಯಾವಾಗಲೂ ಕೆಕ್ಕರುಗಣ್ಣಿನಿಂದ ನೋಡುತ್ತಿದ್ದ ಇವನ ಕಣ್ಣುಗಳನ್ನು ಕಿತ್ತು ಹಾಕುತ್ತೇನೆ’ ಎಂದು ಆಕ್ರೋಶದಿಂದ ಕೂಗಿದವಳು. ಇವರಿಬ್ಬರ ಮೇಲೂ ಫಿರ್ಯಾದು ದಾಖಲಾಗಿ ದೋಪ್ದಿಯನ್ನು ಹಿಡಿದು ಕೊಟ್ಟವರಿಗೆ ಬಹುಮಾನವನ್ನೂ ಘೋಷಿಸಲಾಗಿರುತ್ತದೆ.

ಕಾಡು ಪಾಲಾದ ಇವರಿಬ್ಬರನ್ನೂ ಹುಡುಕಲು ಸೈನ್ಯ ಮತ್ತು ಅಧಿಕಾರಿಗಳು ಭೂಮಿ ಆಕಾಶ ಒಂದು ಮಾಡುತ್ತಾರೆ. ಇವರೋ ಎಂಥ ಚಾಲಾಕಿಗಳೆಂದರೆ ಇವರ ಇಡೀ ಗುಂಪಿನ ಮೇಲೆ ಒಮ್ಮೆ ಗುಂಡಿನ ದಾಳಿ ನಡೆದಾಗ ಸತ್ತವರಂತೆ ಕೆಳಗೆ ಬಿದ್ದು ತಪ್ಪಿಸಿಕೊಂಡ ವರು. ಇಡೀ ಗುಂಪನ್ನು ಕೊಂದು ಮುಗಿಸಿದ ಸಂಭ್ರಮದಲ್ಲಿ ಎಲ್ಲ ಹೆಣಗಳನ್ನು ನೋಡಿದರೆ ಇವರಿಬ್ಬರ ಹೆಣಗಳೇ ಇಲ್ಲ! ಸೈನ್ಯಾಧಿಕಾರಿಗೆ ಹುಚ್ಚು ಹಿಡಿಯುವುದೊಂದು ಬಾಕಿ. ಇವಳನ್ನು ಸೆರೆ ಹಿಡಿಯುವುದು ಮಾತ್ರವಲ್ಲ ಇವಳನ್ನು ಮುಗಿಸುವ ಹಟ ಅವರಿಗೆ ಬರುತ್ತದೆ. ಈ ಅನಕ್ಷರಸ್ಥ, ಜುಜುಬಿ ಎಂದು ಅವರು ತಿಳಿದ ಹೆಣ್ಣು ಮಾತ್ರ ಆಗಾಗ ಕಾಡಿನಿಂದ ನಾಡಿಗೆ ಬಂದು, ಬೀಡಿ ಸೇದುತ್ತಲೇ ಇಲಾಖೆಗೆ ಹೊಸದಾಗಿ ಬಂದ ಪೊಲೀಸರ ಮತ್ತು ಜೀಪುಗಳ ಲೆಕ್ಕವನ್ನು ಕರಾರುವಾಕ್ಕಾಗಿ ತಿಳಿದುಕೊಳ್ಳುತ್ತಿರುತ್ತಾಳೆ. ಇವರನ್ನು ಬೆಂಬಲಿಸುತ್ತಿದ್ದ ಕುಟುಂಬ ‘ಈ ಬಾರಿ ಕಷ್ಟವೇನೋ, ಅವರಿಗೆ ತುಂಬಾ ಸಿಟ್ಟು ಬಂದ ಹಾಗಿದೆ, ಭಾರಿ ತಯಾರಿ ಮಾಡುತ್ತಿದ್ದಾರೆ’ ಎಂದರೆ, ತಣ್ಣಗೆ, ‘ಏನಾದರೂ ಸರಿ, ನಿಮ್ಮನ್ನು ಬಿಟ್ಟುಕೊಡುವುದಿಲ್ಲ’ ಎಂದು ಭರವಸೆ ಕೊಡುತ್ತಾಳೆ.

ಮೊದಲು ಇವಳ ಗಂಡ ದುಲ್ನ ಪೊಲೀಸರಿಗೆ ಬಲಿಯಾಗುತ್ತಾನೆ. ಕೊನೆಗೊಮ್ಮೆ ದೋಪ್ದಿಯನ್ನು ಅವರು ಸೆರೆ ಹಿಡಿಯುತ್ತಾರೆ. ಆ ಅಧಿಕಾರಿ ತನ್ನ ಸಹಾಯಕರನ್ನು ಕರೆದು, ‘ಇವಳಿಗೆ ಏನು ಮಾಡಬೇಕೋ ಅದನ್ನು ಸರಿಯಾಗಿ ಮಾಡ್ರೋ’ ಎಂದು ಸೂಚನೆಯನ್ನೂ ಪರವಾನಗಿಯನ್ನೂ ಕೊಡುತ್ತಾನೆ. ಮುಂದಿನದೆಲ್ಲ ನಿರೀಕ್ಷಿತವೇ. ದೋಪ್ದಿಗೆ ಎಚ್ಚರವಾದಾಗ, ಸಾವಿರಾರು ವರ್ಷಗಳೇ ಕಳೆದಿರಬೇಕೇನೋ ಅನಿಸುತ್ತದೆ. ಸಹಿಸಲಸಾಧ್ಯವಾದ ನೋವಿನ ಅನುಭವದ ಘಳಿಗೆಯಲ್ಲೇ ಹೊರಟ ‘ನೀರು’ ಎನ್ನುವ ಶಬ್ದವನ್ನು ಅವಳು ಬಾಯಲ್ಲಿ ತಡೆ ಹಿಡಿಯುತ್ತಾಳೆ. ತನ್ನ ಮೇಲೆ ಅದೆಷ್ಟು ಜನ ಹತ್ತಿ ಇಳಿದಿದ್ದಾರೋ ಎನ್ನುವ ಅರಿವಿನಲ್ಲಿಯೇ ಅವಳಿಗೆ ಅವರನ್ನು ಏನೂ ಕೇಳಬಾರದು ಎನ್ನುವ ತೀರ್ಮಾನಕ್ಕೆ ಬರುವುದೂ ಸಾಧ್ಯವಾಗುತ್ತದೆ. ‘ಕಣ್ಣ ಕೊನೆಯಲ್ಲಿ ಹರಿದ ಕಂಬನಿಗೆ ಅವಳು ಹೇಸಿದಳು’ ಎನ್ನುತ್ತಾರೆ, ಮಹಾಶ್ವೇತಾದೇವಿ. ಹೆಣ್ಣಿನ ಆತ್ಮಘನತೆಯ ತಿಳಿವಿನಿಂದ ಮಾತ್ರ ಹುಟ್ಟಬಹುದಾದ ಮಾತು ಇದು.

ಇಂಥ ಸನ್ನಿವೇಶಗಳಲ್ಲಿ ಆಕ್ರಂದನದಲ್ಲಿ, ‘ಕೇರೆ ಹೊರಳ್ದಂತೆ’ ಹೆಣ್ಣು ಹೊರಳಬೇಕು ಎನ್ನುವುದು ಪಿತೃಸಂಸ್ಕೃತಿಯ ನಿರೀಕ್ಷೆ ಮಾತ್ರವಲ್ಲ ಆಜ್ಞೆಯೂ. ಇದನ್ನು ಮೀರಬೇಕಾದ್ದೇ ಹೆಣ್ಣಿನ ನಿರ್ಣಾಯಕ ಯುದ್ಧ. ಇದರಲ್ಲಿ ದೋಪ್ದಿ ಅಭೂತಪೂರ್ವ ಗೆಲುವನ್ನು ಸಾಧಿಸುತ್ತಾಳೆ. ಅದೆಷ್ಟೋ ಜನ ಅವಳ ಮೇಲೆ ಆಕ್ರಮಣ ಮಾಡಿದ್ದಾದ ಮೇಲೆ ಮರು ದಿನ ಅವಳನ್ನು ಸಾಹೇಬರ ಎದುರಿಗೆ ಕರೆದೊಯ್ಯಬೇಕೆಂದು, ಅವಳಿಗೆ ಮಡಕೆಯಲ್ಲಿ ನೀರನ್ನೂ ಬಟ್ಟೆಯನ್ನೂ ಕೊಡಲಾಗುತ್ತದೆ. ಇವಳು ಆ ಮಡಕೆಯ ನೀರನ್ನು ಉರುಳಿಸಿ ಚೆಲ್ಲಿ, ಕೊಟ್ಟ ಬಟ್ಟೆಯನ್ನು ಬಾಯಿಂದಲೇ ಹರಿದು ಬಿಸಾಡುತ್ತಾಳೆ. ನೋಡುತ್ತಿದ್ದ ಗಾರ್ಡ್‌ಗೆ ಇವಳಿಗೆ ಹುಚ್ಚು ಹಿಡಿದಿದೆ ಎನಿಸಿ, ಹೆದರಿಕೆಯಿಂದಲೇ ಇವಳನ್ನು ಸಾಹೇಬನ ಬಳಿ ಕರೆದೊಯ್ಯುತ್ತಾನೆ. ಇವಳೊಂದು ಹಣ್ಣೋ ತರಕಾರಿಯೋ ಎನ್ನುವಂತೆ ಹರಿದು ತಿಂದವರು ಇವಳ ಈ ನಡೆಗೆ ಬೆಚ್ಚಿ ಹೋಗಿದ್ದಾರೆ. ಸೇನಾನಾಯಕ ಏನಿದೆಲ್ಲಾ ಎಂದು ಗರ್ಜಿಸಬೇಕು ಎಂದುಕೊಂಡವನು ಮಾತೇ ಹೊರಡದೆ ಮೂಕವಾಗುತ್ತಾನೆ.

‘ದ್ರೌಪದಿ ಅವನೆದುರೇ ಬಂದು ನಿಂತಳು. ಬಟ್ಟ ಬತ್ತಲೆಯಾಗಿ ಅವಳ ತೊಡೆ, ಗುಪ್ತಾಂಗದ ಕೂದಲುಗಳು ಒಣಗಿದ ರಕ್ತದಿಂದ ರಟ್ಟುಗಟ್ಟಿದ್ದವು. ಆ ಎರಡು ಮೊಲೆಗಳು ಎರಡು ವ್ರಣಗಳು.
ಆಘಾತಕ್ಕೊಳಗಾದ ಆ ಅಧಿಕಾರಿಯ ಹತ್ತಿರ ಹೋಗಿ, ದೊಡ್ಡದಾಗಿ ನಗುತ್ತಾ, ‘ದೋಪ್ದಿ ಮೇಝ್‌ನ್ ಳನ್ನು ಇದಕ್ಕಲ್ಲವೆ ಹುಡುಕಿದ್ದು? ಸರಿಯಾಗಿ ಮಾಡ್ರೋ ಅಂತ ಅವರಿಗೆಲ್ಲ ಹೇಳಿದೆಯಲ್ಲ, ಹೇಗೆ ಮಾಡಿದ್ದಾರೆ ಅಂತ ನೋಡಲ್ಲವೇನು?’ ಎಂದು ಸವಾಲೆಸೆಯುತ್ತಾಳೆ. ಗಾಯಗೊಂಡಿದ್ದ ಅವಳ ತುಟಿಗಳಲ್ಲಿ ಅವಳು ನಗಲುತೊಡಗಿದ್ದೇ ರಕ್ತ ಹರಿಯಲು ಶುರುವಾಗುತ್ತದೆ. ಬಾಯಿ ತುಂಬಾ ತುಂಬಿಕೊಂಡ ರಕ್ತವನ್ನು ಉಗಿಯಲು ಆ ಸೇನಾ ನಾಯಕನ ಬಿಳಿ ಅಂಗಿಯೇ ಸರಿಯಾದ ಭಾಗವೆಂದು ತೀರ್ಮಾನಿಸಿದವಳೇ ಕಾಲರ್ ಹಿಡಿದು, ಉಗಿದು ತನ್ನ ಭರತ ವಾಕ್ಯವನ್ನು ಉದ್ಘೋಷಿಸುತ್ತಾಳೆ, ‘‘ನಾನು ನಾಚಿಕೆಪಟ್ಟುಕೊಳ್ಳಬೇಕಾದ ಒಬ್ಬ ಗಂಡಸೂ ಇಲ್ಲಿಲ್ಲ. ನನಗೆ ಹೇಗೆ ಬಟ್ಟೆ ತೊಡಿಸ್ತೀರೋ ನೋಡೇ ಬಿಡ್ತೀನಿ. ನೀವಿನ್ನೇನು ತಾನೆ ಮಾಡಲು ಸಾಧ್ಯ? ಬನ್ರೋ, ಹಿಡೀರೋ ನನ್ನ, ಬನ್ರೋ ಹಿಡೀರೋ’’.
ತನ್ನ ರಕ್ತಸಿಕ್ತ ಮೊಲೆಗಳಿಂದ ಆ ಸೇನಾನಾಯಕನನ್ನು ಅತ್ತ ದೂಡಿ ಅವಳು ಮುಂದೆ ಸಾಗುತ್ತಾಳೆ. ಕತೆಯ ಕೊನೆಯ ವಾಕ್ಯ ಹೀಗಿದೆ– ‘ನಿಶ್ಶಸ್ತ್ರ ಎದುರಾಳಿಯ ಮುಂದೆ ನಿಲ್ಲಲು ಸಾಧ್ಯವಾಗದೆ ಸೇನಾನಾಯಕ ತತ್ತರಿಸಿ ನಡುಗಿದ’’.

ಬಾಳೆ ಉರುಳ್ದಂತೆ ಹೆಣ್ಣು ತಟ್ಟನೆ ಕೆಡೆದು ಬೀಳಬೇಕು ಎನ್ನುವ ನಿರೀಕ್ಷೆಗೆ ವಿರುದ್ಧವಾಗಿ, ತಾನು ಸೋತೆ, ತನ್ನ ಬದುಕು ಮುಗಿಯಿತು ಎಂದು ಹೆಣ್ಣು ಕುಗ್ಗಿ ಕಂಗಾಲಾಗುತ್ತಾಳೆ, ತಾನು ವಿಜಯ ದುಂದುಭಿ ಮೊಳಗಿಸಬಹುದು ಎಂದು ಪುರುಷ ಸಿಂಹಗಳು ಕ್ಷಣಗಣನೆ ಮಾಡುತ್ತಿರುವಾಗ, ಸಂದರ್ಭವೇ ಅದಲು ಬದಲು ಕಂಚಿ ಬದಲಾಗಿ ‘ಬಲಿಪಶು’ವಾಗಿದ್ದವಳೇ ವಿಜಯೋತ್ಸಾಹದ ಕಹಳೆ ಮೊಳಗಿಸುತ್ತಾಳೆ. ಹೆಣ್ಣಿನ ಮಟ್ಟಿಗೆ ದೇಹವೇ ಬಂಧನ ಮತ್ತು ಅದೇ ಬಿಡುಗಡೆಯ ಮಹಾದ್ವಾರವೂ ಹೌದು. ಯಾವುದರಿಂದ ತನ್ನನ್ನು ಹಿಡಿಯಲು ಪಿತೃಸಂಸ್ಕೃತಿ ಬಯಸುತ್ತಿತ್ತೋ ಅದನ್ನೇ ಬಳಸಿಕೊಂಡು ದೋಪ್ದಿ ಆತ್ಯಂತಿಕವೆನಿಸುವ ಬಿಡುಗಡೆಯನ್ನು ಇಲ್ಲಿ ಪಡೆಯುತ್ತಾಳೆ.

ಇದರಿಂದ ಎರಡನ್ನು ಆಕೆ ಏಕಕಾಲಕ್ಕೆ ಸಾಧಿಸುತ್ತಿದ್ದಾಳೆ. ಸ್ವತಃ ತಾನೂ ದೇಹವೆನ್ನುವ ಬಂಧನದಿಂದ ಅಥವಾ ಇನ್ನೂ ಮುಂದೆ ಹೋಗಿ ಹೇಳುವುದಾದರೆ, ಯಾವ ದೇಹದ ಮಡಿ ಮೈಲಿಗೆಯ ಚೌಕಟ್ಟಿನಲ್ಲಿ ತನ್ನನ್ನು ಕೂಡಿಹಾಕಲಾಗಿದೆಯೋ, ಅನೇಕ ಬಾರಿ ನಮ್ಮ ಅರಿವಿಗೇ ಬಾರದಂತೆ ನಮಗೆ ನಾವೇ ಕೈಕೋಳ ಹಾಕಿಕೊಂಡಿರುತ್ತೇವೋ ಅದರಿಂದ ಹಠಾತ್ತನೆ ಎಂಬಂತೆ ಬಿಡುಗಡೆ ಸಿಗುವ ಅವಕಾಶ ಅಥವಾ ಗಳಿಗೆ ಒಂದು ಕಡೆಯಾದರೆ, ಇನ್ನು ಈ ಅಸ್ತ್ರವನ್ನು ನನ್ನ ವಿರುದ್ಧ ಯಾರೂ ಬಳಸಲಾಗುವುದಿಲ್ಲ ಎನ್ನುವುದನ್ನು ಎದುರಿಗಿರುವವರಿಗೆ ಮನದಟ್ಟು ಮಾಡಿಕೊಡುವ ಗೆಲುವು ಇನ್ನೊಂದು ಕಡೆ. ಇವುಗಳನ್ನು ಸೋಲು ಗೆಲುವಿನ ಸೀಮಿತ ಅಥವಾ ಅಮೂರ್ತ ಆಯಾಮಗಳಲ್ಲಿ ಚರ್ಚಿಸುವುದು ಅಷ್ಟೊಂದು ಉಪಯುಕ್ತವಲ್ಲ ನಿಜ. ಆದರೆ, ಲೋಕಚರ್ಚೆಯಲ್ಲಿ ಈ ಮೂಲಭೂತ ನೆಲೆಗಳಿಂದಲೇ ಚರ್ಚೆ ಆರಂಭವಾಗುವುದು ಅನಿವಾರ್ಯವೂ ಹೌದು.

ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಆತ್ಮಘನತೆಯನ್ನು ಹೆಣ್ಣು ತನಗೆ ತಾನೇ ಸಾಕ್ಷಾತ್ಕರಿಸಿಕೊಳ್ಳುವ ಅಮೃತ ಮುಹೂರ್ತವಾಗಿಯೂ ಇದನ್ನು ನೋಡಬೇಕು. ಕಮಲಾದಾಸ್‌ರ ಹೇಳಿಕೆ ತುಂಬಾ ಮುಖ್ಯವಾಗುವುದು ಈ ಕಾರಣಕ್ಕೆ. ‘‘ಹುಚ್ಚು ನಾಯಿ ಕಚ್ಚಿದರೆ ಮನೆಗೆ ಹೋಗಿ ಡೆಟಾಲ್ ಹಚ್ಚಿ ತೊಳೆದು ಥೂ ಎಂದು ಉಗಿದು ಬಿಡುತ್ತೇವಲ್ಲ? ಅತ್ಯಾಚಾರ ನಡೆಸಿ ಬೀಗುವ ಗಂಡು ಅಹಂಕಾರಕ್ಕೆ ಅದು ಮಹಾ ಮದ್ದು’’. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಪಿತೃಸಂಸ್ಕೃತಿ ಸ್ವೇಚ್ಛೆಯಿಂದೆಂಬಂತೆ, ಆತ್ಮಾವಲೋಕನದಿಂದೆಂಬಂತೆ ಬದಲಾಗುವ ಸಾಧ್ಯತೆಗಳು, ನನಗಿಂತ ಮೊದಲೇ ಬದಲಾದ ಬಂಡೆಯಷ್ಟು ದೂರದ ಸಾಧ್ಯತೆಗಳು. ಆದ್ದರಿಂದಲೇ ನಾವು ಮತ್ತು ನಾವು ಲೋಕವನ್ನು ನೋಡುವ ದೃಷ್ಟಿಗಳು ಬದಲಾಗಬೇಕಾದ್ದು ಇವತ್ತಿನ ಅನಿವಾರ್ಯತೆ.

ಇಷ್ಟಿದ್ದೂ ಕೊನೆಯಲ್ಲಿ ಹೇಳಲೇಬೇಕಾದ ಇನ್ನೊಂದು ಮಾತಿದೆ. ಮಹಾಶ್ವೇತಾ ದೇವಿಯವರ ದೋಪ್ದಿ ಹೆಣ್ಣಿಗೆ ಒಂದು ಮಾದರಿಯಾದರೆ ಗಂಡಿಗೆ ಮಹಾ ಮಾದರಿ ಮತ್ತು ದಾರಿ.

ಮಹಾಶ್ವೇತಾ ದೇವಿ

ADVERTISEMENT

‘ಚರಿತ್ರೆಯ ನಿರ್ಮಾಣ ಜನಸಾಮಾನ್ಯರಿಂದ, ನನ್ನ ಮೂಲಕ ಬರೆದಿರುವವರು ಅವರೇ’ ಎಂದು ಗಾಢವಾಗಿ ನಂಬಿ ಬದುಕುತ್ತಿರುವ ಮಹಾಶ್ವೇತಾ ದೇವಿ ಹುಟ್ಟಿದ್ದು ಢಾಕಾದ ಶ್ರೀಮಂತ ಕುಟುಂಬದಲ್ಲಿ. ತಂದೆ ಮನೀಷ ಘಟಕ್ ಕಾದಂಬರಿಕಾರರಾದರೆ ತಾಯಿ ಧರಿತ್ರಿದೇವಿ ಲೇಖಕಿ ಮತ್ತು ಕಾರ್ಯಕರ್ತೆ. ಚಿಕ್ಕಪ್ಪ ರಿತ್ವಿಕ್ ಘಟಕ್ ಖ್ಯಾತ ಸಿನಿಮಾ ನಿರ್ದೇಶಕ. ರಾಷ್ಟ್ರೀಯ ಮತ್ತು ಎಡಪಂಥೀಯ ತಾತ್ವಿಕತೆಗಳಿಂದ ಗಾಢವಾಗಿ ಪ್ರಭಾವಿತರಾದವರು.

‘ಅರಣ್ಯೇರ್ ಅಧಿಕಾರ್’ (ಕನ್ನಡದಲ್ಲಿ ಕಾಡಿನ ದಾವೆದಾರ; ಅನು: ಜಿ.ಕುಮಾರಪ್ಪ, ಸಾಹಿತ್ಯ ಅಕಾಡೆಮಿ), ಹಜಾರ್ ಚುರಾಸೀರ್ ಮಾ, ಝಾನ್ಸಿರ್ ರಾಣಿ, ಉಲ್ಗುಲನ್ ಇವರ ಪ್ರಮುಖ ಕೃತಿಗಳು. ಹೆಚ್.ಎಸ್. ಶ್ರೀಮತಿ ಅವರು ‘ದೋಪ್ದಿ ಹಾಗೂ ಇತರ ಕಥೆಗಳು’ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಬರವಣಿಗೆ ಆಕ್ಟಿವಿಸಂನ ಒಂದು ಭಾಗ ಎಂದು ಗ್ರಹಿಸುವ ಇವರು ತಾವು ನಂಬಿದ ತಾತ್ವಿಕತೆಗೆ ಅನುಗುಣವಾಗಿ ಬದುಕುತ್ತಿರುವ ಅಪರೂಪದ ವ್ಯಕ್ತಿ ಮತ್ತು ಲೇಖಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.