ADVERTISEMENT

ಮೃಣಾಲಿನಿಯೂ ಕಾಗದವೆಂಬ ಅಸ್ತ್ರವೂ

ಎಂ.ಎಸ್.ಆಶಾದೇವಿ
Published 23 ಮಾರ್ಚ್ 2016, 9:02 IST
Last Updated 23 ಮಾರ್ಚ್ 2016, 9:02 IST
ಡಾ. ಸಿ. ರವೀಂದ್ರನಾಥ್‌
ಡಾ. ಸಿ. ರವೀಂದ್ರನಾಥ್‌   

ರವೀಂದ್ರನಾಥ ಠಾಗೋರರಿಗೆ ನೊಬೆಲ್ ಪ್ರಶಸ್ತಿ ಕೊಡುವುದರ ಹಿಂದಿನ ಸಾಂಸ್ಕೃತಿಕ ರಾಜಕಾರಣವೇನೇ ಇರಲಿ, ‘ಭಾರತೀಯ’ ಎನ್ನುವ ಮನೋಭೂಮಿಕೆಯನ್ನು ಕಟ್ಟುವುದರಲ್ಲಿ ಅವರ ಪಾಲು ದೊಡ್ಡದು (ಠಾಕೂರ್ ಎನ್ನುವುದು ಸರಿಯಾದ ಪದವೇ ಇದ್ದೀತು. ಆದರೆ ಯಾಕೋ ಠಾಕೂರ್ ಎನ್ನುವ ಪದ ಅಪ್ರಯತ್ನವಾಗಿ ಭದ್ರಲೋಕ್‌ನ ಜೊತೆ ತಳಕು ಹಾಕಿಕೊಳ್ಳುತ್ತದೆ ಎನಿಸಿ, ಠಾಗೋರ್ ಎನ್ನುವ ಇಂಗ್ಲಿಷ್ ಅಪಭ್ರಂಶವೇ ಹೆಚ್ಚು ಮುಕ್ತ ಅರ್ಥಛಾಯೆಯನ್ನು ಹೊಂದಿರುವಂತೆ ಕಾಣಿಸುತ್ತದೆ!).

ಇಡೀ ಭಾರತೀಯ ಬರವಣಿಗೆಗೇ ಅಧಿಕೃತತೆಯನ್ನು ತಂದುಕೊಟ್ಟ ಪ್ರಭಾವಳಿಯನ್ನು ಠಾಗೋರರ ವ್ಯಕ್ತಿತ್ವ ಇಂದಿಗೂ ಬೀರುತ್ತಿದೆ. ಸಾಹಿತ್ಯವೂ ಸೇರಿದಂತೆ ಕಲಾಪ್ರಪಂಚವೇ ಹಲವು ಬಗೆಯ ಅಧೀರತೆಗಳನ್ನು ಎದುರಿಸುತ್ತಿರುವ, ಕಲೆಯು ತನ್ನ ನಿರಂಕುಶಮತಿಯನ್ನು ಕಳೆದುಕೊಳ್ಳುತ್ತಲೇ ತನ್ನ ಅಸಾಧಾರಣವಾದ, ಯಾವುದೇ ರೂಪದ ನಿಯಂತ್ರಣಗಳನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದೆಯೋ ಎನ್ನುವ ಆತಂಕ ಕಾಡುತ್ತಿರುವ ಈ ನಮ್ಮ ಕಾಲದಲ್ಲಿ ಠಾಗೋರರನ್ನು ಮರಳಿ ನೋಡುವುದೇ ಒಂದು ರೋಚಕ ಅನುಭವ. ಅದೆಂಥ ಧೀಶಕ್ತಿಯಲ್ಲಿ, ನಿಲುವಿನ ದೃಢತೆಯಲ್ಲಿ, ಹುಡುಕಾಟಗಳ ಪ್ರಾಮಾಣಿಕತೆ ಮತ್ತು ತೆರೆದ ಅಂಚಿನಲ್ಲಿ, ವಿಸ್ತರಿಸಿಕೊಳ್ಳುತ್ತಲೇ ಹೋದ ಲೋಕದೃಷ್ಟಿಯಲ್ಲಿ, ಬದುಕನ್ನು ಕುರಿತ ಉತ್ಕಟ ಅನುರಕ್ತಿಯಲ್ಲಿ, ತುಸು ಹೆಚ್ಚಾಯಿತೇನೋ ಎಂದು ಕೆಲವೊಮ್ಮೆ ಭಾಸವಾಗುವ ಆತ್ಮಪ್ರತ್ಯಯದಲ್ಲಿ, ಭಾರತ ಎನ್ನುವ ಜೀವಕೋಶವನ್ನು ಅದರ ಸಮಗ್ರತೆಯಲ್ಲಿ ಪರಿಭಾವಿಸಿ ಅದನ್ನು ಮಂಡಿಸಿದ ಬಗೆಯಲ್ಲಿ, ಬದುಕು ಬಿಚ್ಚುತ್ತಾ ಹೋದ ಅನೂಹ್ಯ ಮಗ್ಗುಲುಗಳನ್ನು ‘ಕಾಣಿಸಿದ’ ನುಡಿಗಟ್ಟಿನಲ್ಲಿ... ಹೀಗೆ ಠಾಗೋರರು ನಮಗೆ ಸಂಗತವಾಗುವ ನೂರು ಅಂಶಗಳಿವೆ.

ಹೆಣ್ಣನ್ನು ಕುರಿತಂತೆ ತಳೆಯುವ ಮತ್ತು ಉಳಿಸಿಕೊಳ್ಳುವ ನಿಲುವೇ ಲೇಖಕ/ಲೇಖಕಿಯ ಯುಗಪ್ರವರ್ತಕತೆಯನ್ನು ಮಹತ್ವ ಮತ್ತು ಪ್ರಸ್ತುತತೆಯನ್ನು ನಿರ್ಧರಿಸುತ್ತದೆ ಎನ್ನುವುದರಲ್ಲಿ ಇಂದು ಅನುಮಾನಗಳು ಉಳಿದಿಲ್ಲ. ಇದು, ಕಲೆಯ ಆಚೆಗಿನ ಸಾರ್ವಜನಿಕ ವ್ಯಕ್ತಿತ್ವಗಳ ಮಟ್ಟಿಗೂ ನಿಜ. ಹೆಣ್ಣು ಮತ್ತು ಜಾತಿಯನ್ನು ಕುರಿತಂತೆ ವ್ಯಕ್ತಿತ್ವಗಳು ಹೊಂದಿರುವ, ಪಾಲಿಸುವ ದೃಷ್ಟಿಕೋನಗಳು ಮೂಲಭೂತ ಮಾನದಂಡಗಳೂ ಆಗುತ್ತಿರುವ ಸನ್ನಿವೇಶವೊಂದು ನಿಧಾನವಾಗಿ ರೂಪುಗೊಳ್ಳುತ್ತಿದೆ. ಭಾರತದ ಎಲ್ಲ ಮಹತ್ವದ ಲೇಖಕರೂ ಈಗ ಬೇಕಾಗಿ ಬೇಡವಾಗಿ ಈ ಪರೀಕ್ಷೆಗೆ ಒಳಗಾಗಲೇ ಬೇಕಾಗಿದೆ.

ಇಂಥ ಮರುಪರೀಕ್ಷೆಯಲ್ಲೂ ಹೆಣ್ಣನ್ನು ಕುರಿತಂತೆ ಠಾಗೋರರು ಇತರರಿಗೆ ಮಾದರಿಯಾಗುವಂಥ ನೆಲೆಯಲ್ಲೇ ಇದ್ದಾರೆ. ಮಹಿಳೆಯರಿಗಂತೂ ತಮ್ಮ ಶಕ್ತ ಪ್ರತಿನಿಧಿಯೊಬ್ಬನನ್ನು, ವಕ್ತಾರನೊಬ್ಬನನ್ನು ಕಂಡಷ್ಟು ಸಮಾಧಾನವಾಗುವಷ್ಟು ಸೂಕ್ಷ್ಮತೆಯಲ್ಲೂ ಗಾಂಭೀರ್ಯದಲ್ಲೂ ಸತ್ಯದ ಸ್ಪಷ್ಟತೆಯಲ್ಲೂ ಠಾಗೋರರು ಹೆಣ್ಣನ್ನು ತಮ್ಮ ಕೃತಿಗಳಲ್ಲಿ ಕಾಣಿಸುತ್ತಾರೆ. ಹೆಣ್ಣಿಗೆ ಮಾತ್ರ ಸಾಧ್ಯವಾಗಬಹುದು ಅನಿಸುವ ವ್ಯಗ್ರತೆ ಇವರ ಕೃತಿಗಳಲ್ಲೂ ಕಾಣಿಸುತ್ತದೆ ಎನ್ನುವ ಅಂಶವೇ ಹೆಣ್ಣಿನ ಪ್ರಶ್ನೆಗಳನ್ನು ಠಾಗೋರರು ಅವರ ಮೂಲ ಕೇಂದ್ರಗಳಲ್ಲಿ ಒಂದಾಗಿಸಿಕೊಂಡಿದ್ದರು ಎನ್ನುವ ಅಂಶವನ್ನು ಹೇಳುತ್ತದೆ.

‘ಚಿತ್ರಾಂಗದಾ’ ನಾಟಕವೂ ಸೇರಿದಂತೆ ಅವರ ವಿಪುಲವಾದ ಕಥಾ ಸಾಹಿತ್ಯದಲ್ಲಿಯೂ ಹೆಣ್ಣಿನ ಪ್ರಶ್ನೆಯ ಅನಂತ ಮುಖಗಳನ್ನು ಠಾಗೋರರು ಆಸ್ಥೆಯಿಂದ ಗಂಭೀರವಾಗಿ ಶೋಧಿಸಿದ್ದಾರೆ. ಅವರು ಬರವಣಿಗೆ ನಡೆಸಿದ ಕಾಲಘಟ್ಟದಲ್ಲಿ ಭಾರತವೇ ಹೊಸ ಚಹರೆಗಾಗಿ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸುತ್ತಿತ್ತಷ್ಟೆ. ವಸಾಹತುಶಾಹಿಯನ್ನು ಎದುರಿಸುವ, ಅದಕ್ಕೆ ಪ್ರತಿರೋಧವನ್ನು ಒಡ್ಡುವ ನಿರ್ಣಾಯಕವಾದ ಹೋರಾಟ ವನ್ನು ಭಾರತೀಯ ಸಮುದಾಯ ಹಿಂದೆಂದೂ ಇಲ್ಲದ ಐಕ್ಯತೆಯಲ್ಲಿ ಸಂಘಟಿಸಿದ ಆ ಕಾಲದಲ್ಲಿ ಹೆಣ್ಣಿನ ಪ್ರಶ್ನೆ ಸಹಜವಾಗಿಯೇ ಬಲು ಮುಖ್ಯವಾಗಿತ್ತು. ಅಕ್ಷರವೂ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿನ ಪಾಲ್ಗೊಳ್ಳುವಿಕೆಯ ಅವಕಾಶಗಳನ್ನು ಹೆಣ್ಣು ಪಡೆದ ಆ ಸಂದರ್ಭದಲ್ಲಿ ಅನೇಕ ವಿರೋಧಾಭಾಸಗಳು ಕಣ್ಣಿಗೆ ರಾಚುವಷ್ಟು ಸ್ಪಷ್ಟವಾಗಿದ್ದವು. ಹೆಣ್ಣನ್ನು ದೇವಿ-ದೆವ್ವದ ಆತ್ಯಂತಿಕ ತುದಿಗಳ ಮಿಥ್ಯೆಯಲ್ಲಿ ಸ್ಥಾಪಿಸಿ ಅವಳನ್ನು ಸುರಕ್ಷಿತ ಅಂತರದಲ್ಲಿಟ್ಟವರಿಗೆ, ಅವಳನ್ನು ಪಕ್ಕದಲ್ಲಿ ನಿಲ್ಲಿಸಿಕೊಳ್ಳುವುದು ಸುಲಭದ ಸಂಗತಿಯಾಗಿರಲಿಲ್ಲ.

ಹೆಣ್ಣುಮಕ್ಕಳು ಅವರು ಎಂದಿನಿಂದ ಕಾಯುತ್ತಿದ್ದ ಅವಕಾಶ ಸಿಕ್ಕಾಗ ಅದರ ಪೂರ್ಣ ಉಪಯೋಗ ಪಡೆದುಕೊಳ್ಳುವ ಹಂಬಲದಷ್ಟೇ ಜನ್ಮಜಾತವಾಗಿ ಎಂಬಂತೆ ಕಾಡುತ್ತಿದ್ದ ಸ್ವ ಅಪನಂಬಿಕೆಯನ್ನು ಮೀರಿಕೊಳ್ಳುವ ಸವಾಲನ್ನು ಎದುರಿಸುತ್ತಿದ್ದರು. ಅನೇಕ ಸಂದರ್ಭಗಳಲ್ಲಿ ತೋರಿಕೆಗೆ ಎಂಬಂತೆ, ಭೂಷಣಕ್ಕೆ ಎಂಬಂತೆ ಸತಿಶಿರೋಮಣಿಯರು ಸಹಧರ್ಮಿಣಿಯರಾಗಿ ಸಾರ್ವಜನಿಕ ರಂಗಕ್ಕೆ ಕಾಲಿಟ್ಟರು. ಆದರೆ ಈ ಎಲ್ಲ ಹೊತ್ತಿನಲ್ಲಿಯೂ ಮಹಿಳೆಯರು ತಮ್ಮ ಕಣ್ಣಳತೆ ಮತ್ತು ಕೈಯಳತೆಯನ್ನು ಮೀರಿ ಹೋಗದ ಎಚ್ಚರವನ್ನೂ ಆ ಕಾಲದ ಪುರುಷವರ್ಗ ಸದಾ ಉಳಿಸಿ ಕೊಂಡಿತ್ತು ಎನ್ನುವುದಕ್ಕೆ ಸಾವಿರಾರು ಉದಾಹರಣೆಗಳನ್ನು ಕೊಡಬಹುದು.

ಆದರೆ ಇತಿಹಾಸದುದ್ದಕ್ಕೂ ವ್ಯಂಗ್ಯವೋ ಎಂಬಂತೆ ಹೆಣ್ಣು ಮಾತ್ರ ತನ್ನ ಅದಮ್ಯ ಚೈತನ್ಯವನ್ನು ಆರದ ಬೆಳಕಿನಂತೆ ಉಳಿಸಿಕೊಳ್ಳುವ ಮೂಲಕವೇ ತನ್ನನ್ನು ಪಿತೃಸಂಸ್ಕೃತಿಯ ಅಸೀಮ ಶಕ್ತಿಯನ್ನು ಎದುರಿಸುತ್ತಾ ಬಂದಿದ್ದಾಳೆ. ಅವಳ ಪ್ರಯತ್ನಗಳನ್ನು ವ್ಯರ್ಥವೆಂಬಂತೆ, ಅವಳ ಗೆಲುವುಗಳನ್ನು ಸೋಲು ಎಂಬಂತೆ ವ್ಯಾಖ್ಯಾನಿಸುವುದು ಒಂದು ವಿರೋಧಾಭಾಸವಾದರೆ, ಹೆಣ್ಣಿನ ಸ್ಥಿತಿಗತಿಗಳಲ್ಲಿ ತಮ್ಮ ನಿಯಂತ್ರಣ ಮೀರದ ಹಿಡಿತವಿರಬೇಕು ಎನ್ನುವ ಪಿತೃಸಂಸ್ಕೃತಿಯ ಸುಧಾರಣಾವಾದದ ಅಗೋಚರ ಸ್ಥಾಪಿತ ಹಿತಾಸಕ್ತಿಯನ್ನು ಮಹಿಳೆಯರು ತಮ್ಮ ಆತ್ಮಚೈತನ್ಯದಿಂದ ಧಿಕ್ಕರಿಸಿದ ವಿರೋಧಾಭಾಸ ಇನ್ನೊಂದು ಕಡೆ.

ಹೆಣ್ಣಿನ ಇಂಥ ಸಂಕೀರ್ಣತೆಯ ಅನೇಕ ಮುಖಗಳ ಅನಾವರಣ ಠಾಗೋರರ ಕಥೆಗಳ ವಸ್ತು. ಠಾಗೋರರ ಸ್ತ್ರೀಕೇಂದ್ರಿತ ಕಥೆಗಳಲ್ಲೆಲ್ಲ ಮುಖ್ಯವಾದುದು ‘ಹೆಂಡತಿಯ ಕಾಗದ’. ಈ ಕಥೆಯ ನಾಯಕಿ ‘ಮೃಣಾಲ್’ ಹೆಣ್ಣಿನ ಮೃಣ್ಮಯ ಶಕ್ತಿಯ ಸಾಕಾರ ರೂಪ. ಠಾಗೋರರ ಕಾವ್ಯಮೀಮಾಂಸೆಯ ಪರಿಭಾಷೆಯನ್ನೇ ಬಳಸಿ ಹೇಳುವುದಾದರೆ, ಈಕೆ ಮೃಣ್ಮಯ ಮತ್ತು ಚಿನ್ಮಯ ಶಕ್ತಿ ಎರಡರ ಸಾಕ್ಷಾತ್ಕಾರವೂ ಹೌದು. (ಠಾಗೋರರು ಸಾಹಿತ್ಯ ಕೃತಿಗಳನ್ನು ಮೃಣ್ಮಯ ಮತ್ತು ಚಿನ್ಮಯ ಎಂದು ವರ್ಗೀಕರಿಸುತ್ತಾರೆ. ಅಪ್ಪಟ ಕೃತಿಯೊಂದರಲ್ಲಿ ಮಾತ್ರ ಈ ಎರಡನ್ನೂ ಕಾಣಲು ಸಾಧ್ಯವಿದೆ ಎನ್ನುವುದು ಇವರ ಮೂಲಮೀಮಾಂಸೆ).

‘ಹೆಂಡತಿಯ ಕಾಗದ’ ಕಥೆಯಲ್ಲಿ ಠಾಗೋರರು ಬಳಸಿರುವ ತಂತ್ರವೇ ಒಂದು ಅದ್ಭುತ ರೂಪಕ. ಗಂಡನೊಡನೆ ಹದಿನೈದು ವರ್ಷಗಳ ದಾಂಪತ್ಯ ನಡೆಸಿದ ಮೃಣಾಲ್ ತನ್ನ ನಿಲುವು ನಿರ್ಧಾರಗಳನ್ನು ಪ್ರಕಟ ಪಡಿಸಲು ಪತ್ರದ ಮಾಧ್ಯಮವನ್ನು, ಕಾಗದವನ್ನು, ಅಕ್ಷರಗಳನ್ನು, ಪರೋಕ್ಷವಾಗಿ ಆದರೆ ಅಲುಗಿಸಲಾಗದ ಸ್ಪಷ್ಟತೆಯಲ್ಲಿ ಹೇಳಲು ಬಳಸುವುದು ಸಾಮಾಜಿಕ ಸಂದರ್ಭದ ವಾಸ್ತವವನ್ನು, ಇನ್ನೂ ಬದಲಾಗಬೇಕಾಗಿರುವ ಸನ್ನಿವೇಶಗಳನ್ನು ಬದಲಿಸಲು ಹೆಣ್ಣು ನಡೆಸುತ್ತಿರುವ ಪ್ರಯತ್ನಗಳ ಸ್ವರೂಪವನ್ನೂ ಇದು ಸಂಕೇತಿಸುತ್ತಿದೆ. ನೇರ ಮುಖಾಮುಖಿಯಲ್ಲಿ ನಿಭಾಯಿಸಲಾಗದ್ದನ್ನು ಹೊಸದಾಗಿ ಪಡೆದ ಅಕ್ಷರ ಅಸ್ತ್ರದ ಮೂಲಕ ನಿಭಾಯಿಸಲು ಹೆಣ್ಣು ನಡೆಸುತ್ತಿರುವ ನಾಗರಿಕ ಯುದ್ಧವಾಗಿಯೂ ಇದನ್ನು ನೋಡಲು ಸಾಧ್ಯವಿದೆ.

ಈ ಕಥೆಯ ನಿರೂಪಣೆಯ ಧಾಟಿಯಂತೂ ಠಾಗೋರರ ಹೆಸರನ್ನು ಮರೆಮಾಚಿ ಓದಿದರೆ ಹೆಣ್ಣು ಮಾತ್ರ ಬರೆಯಲು ಸಾಧ್ಯವಿರುವ ಕಥೆಯೇನೋ ಅನಿಸಿಬಿಡುವಷ್ಟು ಸ್ತ್ರೀಧಾತುವಿನದ್ದಾಗಿದೆ. ವಾಹನ ವ್ಯವಸ್ಥೆಯೂ ಇಲ್ಲದ ಕುಗ್ರಾಮವೊಂದರಿಂದ ಬಂದ ಮೃಣಾಲ್ ತನ್ನನ್ನು ತಾನು ಅರ್ಥೈಸುವುದು, ವ್ಯಾಖ್ಯಾನಿಸುವುದು ಹೀಗೆ... ‘ನನ್ನಲ್ಲಿ ಬುದ್ಧಿವಂತಿಕೆ-ಜಾಣತನಗಳು ಜನ್ಮಜಾತವಾಗಿದ್ದವು. ವರ್ಷಗಳ ಕಾಲ ನಿಮ್ಮ ಮನೆ ವಾರ್ತೆ ನೋಡಿಕೊಂಡ ನಂತರವೂ ಅವು ನನ್ನನ್ನು ಬಿಟ್ಟು ಕದಲಲಿಲ್ಲ. ನನ್ನ ಜಾಣತನದ ಬಗ್ಗೆ ಅಮ್ಮನಿಗೆ ತುಂಬ ಚಿಂತೆಯಾಗಿತ್ತು. ಏಕೆಂದರೆ ಹೆಂಗಸಿಗೆ ಅದು ಶಾಪವಾಗಬಹುದಿತ್ತು’.

ಈ ಮಾತುಗಳು ವಿಶೇಷ ಹೆಣ್ಣಿನ ವರ್ಣನೆಗಿಂತ ಹೆಣ್ಣಿನ ವ್ಯಕ್ತಿತ್ವದ ವಿಶೇಷವನ್ನೇ ಹೇಳುತ್ತಿರುವಷ್ಟು ಆತ್ಮವಿಶ್ವಾಸದ್ದಾಗಿವೆ. ಇಡೀ ಕಥೆ, ಹೆಣ್ಣಿನ ಜನ್ಮಜಾತವಾದ, ಆದಿಮವಾದ ಆತ್ಮಪ್ರತ್ಯಯವನ್ನು ಒಡೆಯುವ ಪ್ರಯತ್ನಗಳ ವಿರುದ್ಧ ಹೆಣ್ಣು ನಡೆಸುವ ಜೀವನ್ಮರಣದ ಹೋರಾಟದ ಒಂದು ಮಾದರಿಯನ್ನು ಹೇಳುತ್ತಿದೆ. ಕಥೆಯ ಮಹತ್ವ ಇರುವುದು, ಹೆಣ್ಣಿನ ಆತ್ಮಜ್ಞಾನದ ಸಾಕ್ಷಾತ್ಕಾರದ ಅಮೃತ ಮುಹೂರ್ತವೆನ್ನುವುದು ಎಂತೆಂಥ ಕ್ಷುಲ್ಲಕವೆನಿಸುತ್ತಲೇ ಆದಿಮ ಕ್ರೌರ್ಯದ ಪ್ರತಿರೂಪಗಳೆನಿಸುವ ಸಂದರ್ಭಗಳಿಂದ ಸೃಷ್ಟಿಯಾಗಬಲ್ಲದು ಎನ್ನುವುದನ್ನು ತೋರಿಸುವುದರಲ್ಲಿ.
 

ಗುರುದೇವ ಎಂದೇ ಖ್ಯಾತರಾದ ಅಕ್ಷರಶಃ ಭಾರತದ ಮನೆಮಾತಾದ ಪ್ರಭಾವಶಾಲಿ ಲೇಖಕ ಮತ್ತು ವ್ಯಕ್ತಿತ್ವ ರವೀಂದ್ರನಾಥ ಠಾಗೋರರದು. ರಾಷ್ಟ್ರೀಯ ಚಳವಳಿಗೆ ಕಲಾವಂತಿಕೆಯ ಆಯಾಮವನ್ನು, ಭಿನ್ನ ಸ್ವರದ ಸಾಧ್ಯತೆಯನ್ನೂ ಕೊಟ್ಟವರು. ನೊಬೆಲ್ ಪ್ರಶಸ್ತಿಯ ಮೂಲಕ ಭಾರತೀಯರಿಗೆ ಅಗತ್ಯವಾಗಿ ಬೇಕಾಗಿದ್ದ ‘ಭಾರತೀಯತೆ’ಯ ಸ್ಪರ್ಶವನ್ನು ನೀಡಿದವರು. ರವೀಂದ್ರರ ‘ಗೀತಾಂಜಲಿ’ಗೆ ಮುನ್ನುಡಿ ಬರೆದ ಖ್ಯಾತ ಕವಿ ಡಬ್ಲು.ಬಿ. ಯೇಟ್ಸ್, ಈ ಅಪೂರ್ವ ಕೃತಿಗೆ ತಾನು ಪೂರ್ಣವಾಗಿ ಮಾರುಹೋಗಿರುವುದಾಗಿ, ಎಲ್ಲಿಗೆ ಹೋದರೂ ಅದನ್ನು ಒಯ್ಯುತ್ತಿದ್ದುದಾಗಿ, ಕೊನೆಗೆ ಮಲಗುವಾಗ ದಿಂಬಿನಡಿಗೆ ಅದನ್ನಿಟ್ಟು ಮಲಗುತ್ತಿದ್ದೆ ಎನ್ನುತ್ತಾನೆ. ನೂರಾರು ಕಥೆಗಳನ್ನು ಬರೆದ, ಹಲವಾರು ಕಾದಂಬರಿಗಳನ್ನು, ಅನೇಕ ನಾಟಕಗಳನ್ನು ಬರೆದಿರುವ ರವೀಂದ್ರರ ಮುಖ್ಯ ಕೃತಿಗಳು, ‘ಗೋರಾ’ (ಕಾದಂಬರಿ), ‘ಚಿತ್ರಾಂಗದಾ’ (ನಾಟಕ), ‘ಗೀತಾಂಜಲಿ’ (ಕಾವ್ಯ). ಅಹೋಬಲ ಶಂಕರ, ಶ್ರೀನಿವಾಸ್ ವಿ. ಸುತ್ರಾವೆ, ಕೆ.ಆರ್. ಪ್ರೇಮಾ ಅವರಿಂದ ಹಿಡಿದು ಜಿ.ಎನ್. ರಂಗನಾಥರಾವ್ ಅವರ ತನಕ ಠಾಗೋರರ ಕೃತಿಗಳನ್ನು ಕನ್ನಡಕ್ಕೆ ಹಲವರು ಅನುವಾದಿಸಿದ್ದಾರೆ. ಸಂಗೀತ ಮತ್ತು ಚಿತ್ರಕಲೆಯಲ್ಲಿಯೂ ಅಪಾರ ಆಸಕ್ತಿಯಿದ್ದ ರವೀಂದ್ರರ ಸಂಗೀತ ‘ರವೀಂದ್ರ ಸಂಗೀತ’ ಎಂದೇ ಪ್ರಸಿದ್ಧವಾಗಿದೆ.

ಮೃಣಾಲ್‌ಳ ಓರಗಿತ್ತಿಯ ತಂಗಿ ಬಿಂದು ಅನಾಥ ಅಸಹಾಯಕ ಸ್ಥಿತಿಯಲ್ಲಿ ಅಕ್ಕನ ಮನೆಗೆ ಆಶ್ರಯಕ್ಕಾಗಿ ಬರುತ್ತಾಳೆ. ಅಕ್ಕ ಅವಳಿಗಿಂತ ಅಸಹಾಯಕಳ ಹಾಗೆ, ತಂಗಿಯೇ ತನಗೊಂದು ಅಡ್ಡಿ ಎನ್ನುವಂತೆ ಅನಿವಾರ್ಯವಾಗಿ ನಡೆದುಕೊಳ್ಳುತ್ತಾಳೆ. ದಾಸಿಗಿಂತ ದಾಸಿಯಾಗಿ ಬಿಂದು ಬದುಕುತ್ತಿದ್ದರೂ ಮನೆಯವ ರಿಗೆ ತೀರದ ಅಸಹನೆ. (ಬಿಂದು ಎನ್ನುವ ಹೆಸರು ಕೂಡ ಸಾಂಕೇತಿಕವೇ). ಇಂಥ ಮೃಗೀಯ ನಡವಳಿಕೆಯ ಮಧ್ಯದಲ್ಲಿ ಮೃಣಾಲ್‌ಳ ಆತ್ಮಪ್ರಜ್ಞೆ ಜಾಗೃತವಾಗುತ್ತದೆ. ಬಿಂದುವನ್ನು ಕಾಪಾಡುವುದು, ಅವಳಿಗೆ ಆಸರೆಯಾಗುವುದೆಂದರೆ ತನ್ನನ್ನು ತಾನೇ ಕಾಪಾಡಿಕೊಳ್ಳುವಷ್ಟು ಮೂಲಭೂತವಾದದ್ದು ಎನ್ನು ವುದು ಅರಿವಾದದ್ದೇ ಮೃಣಾಲ್ ತನುಮನಧನಗಳನ್ನೂ ಬಳಸಿ ಅವಳನ್ನು ರಕ್ಷಿಸಲು ಮುಂದಾಗುತ್ತಾಳೆ. ಮನೆಯವರ, ಗಂಡನ ವಿರೋಧ, ತಿರಸ್ಕಾರ, ಪ್ರತೀಕಾರದ ನಡವಳಿಕೆಗಳು ಎಲ್ಲ ವನ್ನೂ ಮೆಟ್ಟಿ ನಿಲ್ಲುತ್ತಾಳೆ. ಕೊನೆಯ ಉಪಾಯವೆಂಬಂತೆ ಮನೆಯವರು ಬಿಂದುವನ್ನು ಹುಚ್ಚನೊಬ್ಬನಿಗೆ ಕೊಟ್ಟು ಮದುವೆ ಮಾಡುತ್ತಾರೆ. ಹಿಂಸೆಗೆ ಹೆದರಿ ಆ ಹುಡುಗಿ ಮರಳಿ ಇಲ್ಲಿಗೆ ಬಂದರೆ, ಸತಿಧರ್ಮದ ಹೆಸರಲ್ಲಿ ಅವಳನ್ನು ಮತ್ತೆ ಗಂಡನ ಮನೆಗೆ ಅಟ್ಟುತ್ತಾರೆ. ಅವಳನ್ನು ಪಾರು ಮಾಡುವ ಕೊನೆಯ ಉಪಾಯವಾಗಿ ಮೃಣಾಲ್ ಪುರಿಗೆ ಹೋಗುವ ಉಪಾಯ ಮಾಡಿ ತನ್ನ ತಮ್ಮನಿಗೆ ಬಿಂದುವನ್ನು ಆ ರೈಲು ಹತ್ತಿಸಲು ಹೇಳುತ್ತಾಳೆ. ತಮ್ಮ, ಬಿಂದುವಿನ ಮನೆಗೆ ಹೋಗುವ ಹೊತ್ತಿಗೆ ಅವಳು ತನ್ನ ಸೀರೆಗೆ ಬೆಂಕಿ ಹಚ್ಚಿಕೊಂಡು ಸತ್ತಿರುತ್ತಾಳೆ.  ನಿಜವಾದ ಕಥೆ ಆರಂಭವಾಗುವುದೇ ಇಲ್ಲಿಂದ ಎಂದರೂ ನಡೆಯುತ್ತದೆ. ಈ ಮೃಗಸದೃಶ ವ್ಯವಸ್ಥೆಯನ್ನು ಧಿಕ್ಕರಿಸಬೇಕು, ಧಿಕ್ಕರಿಸುವುದು ತನ್ನ ಆದ್ಯ ನಡೆ ಎನ್ನುವ ತೀರ್ಮಾನಕ್ಕೆ ಮೃಣಾಲ್ ಬರುತ್ತಾಳೆ. ಪುರಿಗೆ ಹೊರಟವಳು ಮತ್ತೆ ಮನೆಗೆ ಹಿಂತಿರುಗದಿರುವ ತೀರ್ಮಾನ ತೆಗೆದುಕೊಳ್ಳುತ್ತಾಳೆ. ಅಲ್ಲಿಂದಲೇ ಗಂಡನಿಗೆ ಪತ್ರ ಬರೆಯುತ್ತಾಳೆ.

ಆ ಪತ್ರವೆನ್ನುವುದು, ಹೆಣ್ಣು ಶತಮಾನಗಳಿಂದಲೂ ಬರೆಯುತ್ತಲೇ ಇರುವ ಬರವಣಿಗೆಯಂತೆ ಕಾಣಿಸುತ್ತದೆ. ಹೊರಿಸಲಾದ ವ್ಯಕ್ತಿತ್ವದ ಹೊರಗೆ ಒಳಗೆ ಹೆಣ್ಣಿಗಿರುವ ವ್ಯಕ್ತಿತ್ವ, ಆತ್ಮ, ದೇಹ, ಮನಸ್ಸುಗಳನ್ನೆಲ್ಲ ಈ ಪತ್ರ ಅದರೆಲ್ಲ ವಿವರಗಳಲ್ಲಿ ಚಿತ್ರಿಸುತ್ತದೆ.

‘ನಾನು ನಿಮ್ಮ ಕುಟುಂಬದ ಎರಡನೆಯ ಸೊಸೆ. ಹದಿನೈದು ವರ್ಷಗಳ ಕಾಲ ಸಮುದ್ರದ ಒಂದು ದಂಡೆಯಲ್ಲಿ ಬದುಕನ್ನು ಸವೆಸಿದ ನಂತರ, ನನಗೀಗ ಗೊತ್ತಾಗತೊಡಗಿದೆ, ನನಗೆ ಬೇರೆ ಸಂಬಂಧಗಳೂ ಉಂಟೆಂದು. ನನ್ನ ಬ್ರಹ್ಮಾಂಡದೊಂದಿಗೆ, ಆ ಬ್ರಹ್ಮಾಂಡವನ್ನಾಳುವ ಭಗವಂತನೊಂದಿಗೆ. ಅದೇ ನನಗೀಗ ಈ ಕಾಗದ ಬರೆಯುವ ಶಕ್ತಿಯನ್ನಿತ್ತಿರುವುದು. ಇದು ಎರಡನೆಯ ಸೊಸೆಯ ಪತ್ರವಲ್ಲ’.

ನೇರವಾಗಿ ತನ್ನ ಬದುಕು ದುರಂತದಲ್ಲಿಲ್ಲದಿದ್ದರೂ ಮೃಣಾಲ್ ತೆಗೆದುಕೊಳ್ಳುವ ತೀರ್ಮಾನ ಕುತೂಹಲಕರವಾಗಿ ಕಾಣುತ್ತದೆ, ಅನಗತ್ಯವಾಗಿ ಅವಳು ತನ್ನ ಬದುಕನ್ನು ಬಲಿಕೊಡುತ್ತಿದ್ದಾಳೋ ಎನ್ನುವ ಭಾವವೂ ಹಾದು ಹೋಗುತ್ತದೆ. ಆದರೆ ಮೃಣಾಲ್‌ಳಿಗೆ ತನ್ನ ತೀರ್ಮಾನದ ಬಗ್ಗೆ ನಂಬಿಕೆಯಿದೆ, ಅದು ಅನಿವಾರ್ಯವೆಂದೇ ಅವಳು ತಿಳಿಯುತ್ತಾಳೆ.

‘ನಾನು ಮತ್ತೆ ನಂ.27, ಮುಖಾನ್ ಬೊರಾಲ್ ರಸ್ತೆಯ ಅಂತಃಪುರಕ್ಕೆ ಹಿಂತಿರುಗಿ ಬರುವುದಿಲ್ಲ. ನಾನು ಬಿಂದುವನ್ನು ಕಂಡಿದ್ದೇನೆ. ನಿಮ್ಮ ಪ್ರಪಂಚದಲ್ಲಿ ಹೆಣ್ಣಿನ ಕಿಮ್ಮತ್ತೇನು ಎಂಬುದನ್ನೂ ಅರಿತಿದ್ದೇನೆ. ನನಗೆ ಸಾಕಾಗಿದೆ’. ಈ ಘಟ್ಟದಲ್ಲಿ ಮೃಣಾಲ್ ಹೇಳುವ ಮಾತು ವ್ಯಂಗ್ಯದ ತುತ್ತತುದಿಯಲ್ಲಿ ಪುರುಷರ ಆತ್ಮಸಾಕ್ಷಿಯನ್ನೇ ಉದ್ದೇಶಿಸಿದಂತಿದೆ. ‘ಬಂಗಾಳಿ ಸ್ತ್ರೀಯರು ಏಕೆ ತಮ್ಮ ಸೀರೆಗೆ ಬೆಂಕಿ ಹಚ್ಚಿಕೊಂಡು ಸಾಯುವ ನಾಟಕ ಆಡ್ತಾರೆ? ಅವರೇಕೆ ಬಂಗಾಳದ ಪುರುಷ ಸಿಂಹಗಳ ಧೋತಿಗಳೊಟ್ಟಿಗೆ ಬೆಂಕಿ ಹಚ್ಚಿಕೊಂಡು ಸಾಯುವುದಿಲ್ಲ?’

ಈ ನೋವಿನ ತೀರ್ಮಾನ ಹೆಣ್ಣು ಹಾಯಲೇಬೇಕಾದ ದಾರಿ ಯೆಂದು ಮೃಣಾಲ್ ತೀರ್ಮಾನಿಸುವುದನ್ನು ಕೊನೆಗೆ ನಾವೆಲ್ಲರೂ ಒಪ್ಪಲೇಬೇಕಾದ ಹಕ್ಕೊತ್ತಾಯವನ್ನು ಕಥೆ ಮಂಡಿಸುತ್ತದೆ. ಸ್ವರೂಪ, ಪ್ರಮಾಣದಲ್ಲಿನ ವ್ಯತ್ಯಾಸವನ್ನು ಬಿಟ್ಟರೆ, ಪಿತೃಸಂಸ್ಕೃತಿಯ ಮೂಲ ವಿನ್ಯಾಸದ ನಿಜ ತಿಳಿವು ಮೃಣಾಲ್‌ಳನ್ನು ಇಂಥ ತೀರ್ಮಾನದ ಕಡೆಗೆ ಚಲಿಸುವಂತೆ ಮಾಡುತ್ತದೆ. ಇದು ಅಂತಿಮ ಪರಿಹಾರವಲ್ಲ, ಇದೊಂದೇ ದಾರಿಯೂ ಅಲ್ಲ ನಿಜ, ಆದರೆ ಹದಿನೈದು ವರ್ಷಗಳ ಕಾಲದ ಅವಳ ದಾಂಪತ್ಯದ ಮತ್ತು ಕೌಟುಂಬಿಕ ಅನುಭವ ಅವಳ ವ್ಯಕ್ತಿತ್ವವನ್ನು ನುಚ್ಚುನೂರು ಮಾಡುವುದರಲ್ಲಿಯೇ ಮಗ್ನವಾಗಿರು ವಾಗ ಅದರ ಜೊತೆಗಿನ ಹೋರಾಟ ಸಾಕು ಎನಿಸಿದೆ ಅವಳಿಗೆ.

ಇದಿಷ್ಟೇ ಆಗಿದ್ದರೆ ಇದೊಂದು ಸಾಧಾರಣ ಕಥೆಯಾಗಿರುತ್ತಿತ್ತು. ಮೃಣಾಲ್‌ಳಿಗೆ ದಾಂಪತ್ಯ ಮತ್ತು ಕೌಟುಂಬಿಕ ವ್ಯವಸ್ಥೆ ಸಾಕಾಗಿದೆ ಎನಿಸಿದೆಯೇ ಹೊರತು ಬದುಕಲ್ಲ. ನಿಜವೆಂದರೆ ಮೃಣಾಲ್ ಬಂಧನದಿಂದ ಬಿಡುಗಡೆಯ ಕಡೆಗಿನ ಮಹಾಪ್ರಯಾಣಕ್ಕೆ ಹೊರಟಿದ್ದಾಳೆ. ತನಗೆ ಕವಡೆಯ ಕಿಮ್ಮತ್ತೂ ಇಲ್ಲದ ವ್ಯವಸ್ಥೆಯಿಂದ ತನ್ನನ್ನು ಒಪ್ಪುವ ಮೆಚ್ಚುವ ಗುರುತಿಸುವ ಬ್ರಹ್ಮಾಂಡದ ಜೊತೆಗೆ ಯಾವಾಗಲೂ ಇದ್ದೇ ಇರುವ ತಾನೇ ಕಡೆಗಣಿಸಿದ ಆದಿಮ ಪ್ರಕೃತಿಯ ಕಡೆಗೆ ದೃಢವಾದ, ಆತ್ಮಪ್ರತ್ಯಯದ, ಪ್ರಕೃತಿಯ ಚೆಲುವು ಮತ್ತು ಶಕ್ತಿಯನ್ನು ಪಡೆದ ಲಾಸ್ಯದ ನಡಿಗೆ ಇದು. ಪಲಾಯನವಾದವಲ್ಲ, ಅಸಹಾಯಕತೆಯಲ್ಲ, ಸೋಲಂತೂ ಅಲ್ಲವೇ ಅಲ್ಲ. ಸೀಮೆಯಿಂದ ನಿಸ್ಸೀಮೆಯ ಕಡೆಗಿನ ಇವಳ ಚಲನೆ ಆಲಯದಿಂದ ಬಯಲ ಕಡೆಗಿನ ಬ್ರಹ್ಮಾಂಡ ನಡಿಗೆಯಂತೆ ಭಾಸವಾಗುತ್ತದೆ. ಅವಳ ಮಾತುಗಳನ್ನು ನೋಡಿ, ‘ನನ್ನ ಭವ್ಯದಿವ್ಯಗಳಿಗೆ ಕೊನೆಯೇ ಇಲ್ಲ. ಯಾರು ನನ್ನೀ ತಿರಸ್ಕೃತ ಮುಖವನ್ನು, ಸುಖ ಸಂತೋಷಗಳ ಚಿಲುಮೆಯೆಂದು ಭಾವಿಸಿದ್ದಾರೋ ಅವರ ಪಾಲಿಗೆ ನಾನು ಇನ್ನಿಲ್ಲ. ನಾನು ಆ ಪರಮ ದಿವ್ಯಾನುಭೂತಿಗೆ ಕೈಚಾಚಿ ನಿಂತವಳು’.

ಈ ಮಾತುಗಳು ಪಾರಮಾರ್ಥಿಕಕ್ಕೆ ಅವಳು ಜಿಗಿಯಲು ಬಯಸುವುದನ್ನು ಮಾತ್ರವೇ ಹೇಳುತ್ತಿಲ್ಲ. ತನ್ನೊಳಗಿನ ಶಕ್ತಿಚೈತನ್ಯಗಳನ್ನು ತನಗೆ ತಾನೇ ಸಾಕ್ಷಾತ್ಕರಿಸಿಕೊಳ್ಳುತ್ತಿರುವುದನ್ನೂ ಹೇಳುತ್ತಿವೆ. ಹೆಣ್ಣಿಗೇ ವಿಶಿಷ್ಟವಾದ ಇನ್ನೊಂದು ಸಂಗತಿಯನ್ನೂ ಇಲ್ಲಿ ಪ್ರಸ್ತಾಪಿಸಬಹುದು. ಲೋಕ ಅಲೋಕಗಳನ್ನು ಭವ ದಿವ್ಯಗಳನ್ನು ಹೆಣ್ಣು ಏಕಕಾಲಕ್ಕೆ ಪಡೆಯಬಲ್ಲಷ್ಟು ಸಲೀಸಾಗಿ ಗಂಡು ಪಡೆಯಲಾರ. ಭವವನ್ನೇ ದಿವ್ಯವಾಗಿಯೂ ದಿವವಾಗಿಯೂ ರೂಪಾಂತರಿಸಿಕೊಳ್ಳಬಲ್ಲವಳು ಹೆಣ್ಣು. ತನ್ನ ಅಸೀಮ ಪ್ರೇಮದ, ಸೃಷ್ಟಿಯ ಮತ್ತು ಪೊರೆಯುವ ಶಕ್ತಿಯಿಂದ ಇದನ್ನು ಲೀಲಾಜಾಲವಾಗಿ ಪಡೆದುಕೊಳ್ಳಬಲ್ಲ ಹೆಣ್ಣಿನ ಮೂಲಚೈತನ್ಯವನ್ನು ಸ್ವಯಂಸಾಕ್ಷಾತ್ಕರಿಸಿಕೊಂಡಂತೆ ಇಲ್ಲಿನ ಮೃಣಾಲ್ ಕಾಣಿಸುತ್ತಾಳೆ. ಪ್ರಕೃತಿಯನ್ನು ಆಧರಿಸಿದ ತನ್ನ ವ್ಯಕ್ತಿತ್ವದ ಬಲದಿಂದ ಲೋಕದಿಂದ ಲೋಕಕ್ಕೆ ಜೀಕಾಡಬಲ್ಲ ಬದುಕಿನೆದುರು, ಆ ವಿಸ್ತಾರ ಮತ್ತು ಸಾಧ್ಯತೆಯೆದುರು ನೂರು ಬಂಧನಗಳ, ಕ್ರೌರ್ಯದ ಬದುಕು ಎರಡನೆಯದ್ದಾಗಿ, ಬೇಡದ್ದಾಗಿ ಕಾಣಿಸುವುದು ಸಹಜ ಎನ್ನುವ ಆತ್ಮಪ್ರಜ್ಞೆಯ ಹೆಣ್ಣು ಮೃಣಾಲ್.

ಹೆಣ್ಣನ್ನು ಹೀಗೆ ಶಕ್ತಿಸ್ವರೂಪಿಣಿಯಾಗಿ ಕಂಡ ರವೀಂದ್ರರು ಖರೆ ಸ್ತ್ರೀವಾದಿಯೆಂದೂ ಅವರಿಗೆ ನಮ್ಮ ಅಭಿನಂದನೆಗಳು ಸಲ್ಲಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT