–ಎಂ.ಎನ್. ಯೋಗೇಶ್
*
ಮಂಡ್ಯ: ಕುಂದನಿ ಪರ್ವತದ ಮೇಲೆ 78 ವರ್ಷದ ವೃದ್ಧ ಕಾಮೇಗೌಡರು ಕಟ್ಟಿರುವ ಕಟ್ಟೆ– ಕಾಲುವೆಗಳು ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ಜನ– ಜಾನುವಾರುಗಳಿಗೆ ಸಂಜೀವಿನಿಯಾಗಿವೆ.
ಮಳವಳ್ಳಿ ಪಟ್ಟಣದಿಂದ 10 ಕಿ.ಮೀ ದೂರದಲ್ಲಿ ಲಿಂಗಾಕಾರದಲ್ಲಿರುವ ಈ ಪರ್ವತವನ್ನು ಕುಂದೂರು ಬೆಟ್ಟ ಎಂದೂ ಕರೆಯುತ್ತಾರೆ. ಬೆಟ್ಟದ ತಪ್ಪಲಲ್ಲಿ ದಾಸನದೊಡ್ಡಿ, ಪಂಡಿತಹಳ್ಳಿ, ಹೊಸದೊಡ್ಡಿ, ತಿರುಮಳ್ಳಿ, ಪಣತಹಳ್ಳಿ ಸೇರಿ ಹತ್ತೂರುಗಳಿವೆ. ಕಳೆದ 40 ವರ್ಷಗಳಿಂದ ಈ ಬೆಟ್ಟಕ್ಕೆ ಕಾವಲುಗಾರನಂತಿರುವ ದಾಸನದೊಡ್ಡಿಯ ಕಾಮೇಗೌಡ, ಬೆಟ್ಟದ ಮೇಲೆ ಕಟ್ಟೆ, ಕಾಲುವೆ, ರಸ್ತೆ ನಿರ್ಮಿಸಿದ್ದಾರೆ. ಬೆಟ್ಟದ ತಪ್ಪಲಲ್ಲಿ ಸಾವಿರಾರು ಗಿಡ ನೆಟ್ಟು ಬೆಳೆಸಿರುವ ಅವರು ಈ ಭಾಗದಲ್ಲಿ ‘ಪರಿಸರ ಸಂರಕ್ಷಕ’ ಎಂದೇ ಖ್ಯಾತಿ ಗಳಿಸಿದ್ದಾರೆ.
ಶಾಲೆಯ ಮೆಟ್ಟಿಲನ್ನೇ ಕಾಣದ ಕಾಮೇಗೌಡರು ಸರ್ವ ಋತುಗಳಲ್ಲೂ ನೀರು ಆರದ ಕಟ್ಟೆ ಕಟ್ಟಿದ್ದಾರೆ. ಬೆಟ್ಟದ ಮಧ್ಯ ಭಾಗದಿಂದ ದಾಸನದೊಡ್ಡಿ ಗ್ರಾಮದ ತಪ್ಪಲಿನವರೆಗೆ ಐದು ಕಟ್ಟೆ ಕಟ್ಟಿದ್ದಾರೆ. ಒಂದು ಕಟ್ಟೆ ತುಂಬಿದರೆ ಸಾಕು, ಎಲ್ಲ ಕಟ್ಟೆಗಳಲ್ಲಿ ನೀರು ಬಸಿದುಕೊಳ್ಳುತ್ತದೆ. ಎತ್ತರದ ಜಾಗದಿಂದ ಇಳಿಜಾರಿನವರೆಗಿನ ಎಲ್ಲ ಕಟ್ಟೆಗಳನ್ನು ಸೇರಿಸಿ ಸಂಪರ್ಕ ಕಾಲುವೆ ನಿರ್ಮಿಸಿದ್ದಾರೆ. ಜಿಲ್ಲೆ ಬರದಿಂದ ತತ್ತರಿಸಿದರೂ ಈ ಕುಂದೂರು ಬೆಟ್ಟದ ತಪ್ಪಲಿನ ಗ್ರಾಮಗಳ ಜನ–ಜಾನುವಾರುಗಳಿಗೆ ಎಂದೂ ಕುಡಿಯುವ ನೀರು ಕುಂದುವುದಿಲ್ಲ.
ದಾಸನದೊಡ್ಡಿ ಭಾಗದಿಂದ ಈಗ ಪಣತಹಳ್ಳಿ ತಪ್ಪಲಿಗೆ ಕೈ ಹಾಕಿರುವ ಕಾಮೇಗೌಡ ಇನ್ನೂ ಎರಡು ಹೊಸ ಕಟ್ಟೆ ಕಟ್ಟುವ ಕಾರ್ಯಕ್ಕೆ ಚಾಲನೆ ಕೊಟ್ಟಿದ್ದಾರೆ. ಒಂದಕ್ಕೆ ಈಗಾಗಲೇ ಕಲ್ಲು ಕಟ್ಟುವ ಕೆಲಸ ಆರಂಭಿಸಿದ್ದಾರೆ. ಇನ್ನೊಂದು ಕಟ್ಟೆಗೆ ಜಾಗ ಗುರುತಿಸಿದ್ದು, ಅಲ್ಲಿಗೆ ತೆರಳಲು ದಾರಿ ನಿರ್ಮಿಸಿಕೊಳ್ಳುತ್ತಿದ್ದಾರೆ.
‘ಮಣ್ಣು ಪರಿಶೀಲಿಸಿ ಕಟ್ಟೆ ಕಟ್ಟುವ ಕೆಲಸಕ್ಕೆ ಕೈ ಹಾಕುತ್ತೇನೆ. ಯುಗಾದಿಯ ಬಿರು ಬಿಸಿಲಿನಲ್ಲಿ ಪಸಿಯಾದ ಮಣ್ಣು ಸಿಕ್ಕರೆ ಅದು ಕಟ್ಟೆಗೆ ಸೂಕ್ತವಾದ ಜಾಗ ಎಂದು ಗುರುತು ಮಾಡುತ್ತೇನೆ’ ಎನ್ನುತ್ತಾರೆ ಕಾಮೇಗೌಡ.
ಕುರಿ ಮಾರಿ ಕಟ್ಟೆ ಕಟ್ಟಿದರು: ಒಮ್ಮೆ ಕಟ್ಟೆ ಕಟ್ಟಲು ಕೈ ಇಟ್ಟರೆಂದರೆ ಮನೆಯ ವಸ್ತುಗಳನ್ನೂ ಮಾರಿ ಕೆಲಸ ಮುಗಿಸುವ ಛಾತಿ ಕಾಮೇಗೌಡ ಅವರದು. ಮನೆಯವರ ವಿರೋಧವನ್ನೂ ಲೆಕ್ಕಿಸದರೆ ಸಾಕಿದ ಕುರಿಗಳನ್ನು ಮಾರಿ ಐದು ಕಟ್ಟೆ ಕಟ್ಟಿದ್ದಾರೆ. ಇದುವರೆಗೆ ಕಟ್ಟೆ ಕಟ್ಟಲು ಅವರು ₹ 6 ಲಕ್ಷ ವ್ಯಯ ಮಾಡಿದ್ದಾರೆ. ತಮಗೆ ಬರುವ ಪಿಂಚಣಿ ಹಣವನ್ನೂ ಕಟ್ಟೆಗೆ ಸುರಿಯುತ್ತಿರುವ ಅವರು ಬೆಟ್ಟವನ್ನು ಮಗುವಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ.
‘ನನ್ನ ಸೊಸೆ ಗರ್ಭಿಣಿಯಾಗಿದ್ದಾಗ ಹೆರಿಗೆಗೆಂದು ₹ 20 ಸಾವಿರ ಕೂಡಿಟ್ಟಿದ್ದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಹಜವಾಗಿ ಹೆರಿಗೆಯಾಯಿತು. ಒಂದು ರೂಪಾಯಿಯೂ ಖರ್ಚಾಗಲಿಲ್ಲ. ಹಣ ಉಳಿಸಿದ ಮೊಮ್ಮಗನಿಗೆ ಕೃಷ್ಣ ಎಂದು ಹೆಸರಿಟ್ಟೆ, ಕೃಷ್ಟನ ಹೆಸರಲ್ಲಿ ಒಂದು ಕಟ್ಟೆ ಕಟ್ಟಿಸಿದೆ’ ಎನ್ನುತ್ತಾರೆ ಕಾಮೇಗೌಡ.
ಬೆಟ್ಟದ ಸುತ್ತಲೂ ಬಿಲ್ವಪತ್ರೆ, ಕೆಂಪು ಕಣಗಿಲೆ, ಬಿಳಿ ಕಣಗಿಲೆ, ಹುಣಸೆ, ಹೊಂಗೆ ಸೇರಿ ಸಾವಿರಾರು ಗಿಡ ನೆಟ್ಟು ಬೆಳೆಸಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಬೆಳೆಸಿರುವ ಮರ, ಗಿಡಗಳ ಕಾವಲು ಕಾಯುತ್ತಿದ್ದಾರೆ.
**
ಮರ, ಮರಳು ಕಳ್ಳರ ಕಾಟ
ಕಾಮೇಗೌಡರು ಕಟ್ಟಿರುವ ಕಟ್ಟೆ ಹಾಗೂ ಕಾಲುವೆಯಲ್ಲಿ ಮರಳು ಸಂಗ್ರಹವಾಗುತ್ತಿದೆ. ಮರಳು ಕದಿಯಲು ಬೆಟ್ಟಕ್ಕೆ ಬರುವ ಕಳ್ಳರು ಕಾಮೇಗೌಡರಿಗೆ ನಿತ್ಯ ಕಿರುಕುಳ ಕೊಡುತ್ತಿದ್ದಾರೆ. ಹಲವರು ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದಾರೆ. ಅಲ್ಲದೆ, ಬೆಳೆದು ನಿಂತಿರುವ ಮರಗಳನ್ನೂ ಕಳವು ಮಾಡುತ್ತಿದ್ದಾರೆ. ಕಳ್ಳರ ವಿರುದ್ಧ ಕಾಮೇಗೌಡರು ಹಲವು ಬಾರಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
‘ನನಗೆ ಪ್ರಾಣ ಭಯವಿಲ್ಲ. ನನ್ನನ್ನು ಕೊಂದು ಹಾಕಿದರೂ ಈ ಬೆಟ್ಟ ಬಿಟ್ಟು ಕದಲುವುದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ನನಗೆ ಕಳ್ಳಕಾಕರ ಭಯ ಇರುತ್ತಿರಲಿಲ್ಲ. ಈ ಜೀವ ಇರುವತಕನ ಈ ಬೆಟ್ಟದಜೀವವಾಗಿ ಹೋರಾಡುತ್ತೇನೆ’ ಎಂದು ಕಾಮೇಗೌಡರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.