- ತೆರೆದ ಬಾವಿಗಳು ಈಗ ಅಪರೂಪವಾಗುತ್ತಿವೆ. ಬಾವಿ ಸಂಸ್ಕೃತಿಯ ಪುನರುತ್ಥಾನ ಸಾಧ್ಯವಿಲ್ಲವೇ?
ಸಾಧ್ಯವಿದೆ. ಅದು ಇಂದಿನ ಅಗತ್ಯ ಕೂಡ. ತೆರೆದ ಬಾವಿಗಳಿಗೆ 5,000 ವರ್ಷಗಳ ಇತಿಹಾಸವಿದೆ. ಸಿಂಧೂ ಕೊಳ್ಳದ ನಾಗಕರಿಕತೆಯ ಕಾಲದಲ್ಲಿಯೇ (ಕ್ರಿ. ಪೂ. 2900) ತೆರೆದ ಬಾವಿಗಳಿದ್ದವು. ಹರಪ್ಪ ಮತ್ತು ಮೊಹೆಂಜೊದಾರೊ ನಗರಗಳಲ್ಲಿ ಪ್ರತಿ ಮೂರು ಮನೆಗಳಿಗೆ ಒಂದರಂತೆ ಬಾವಿಗಳಿದ್ದವು ಎನ್ನುವುದೂ ಸಂಶೋಧನೆಯಿಂದ ತಿಳಿದುಬಂದಿದೆ.
ದೇಶದ ಎಷ್ಟೊ ಕಡೆ 200,300, 500 ವರ್ಷಗಳ ಹಿಂದೆ ತೋಡಿದ್ದ ಬಾವಿಗಳಲ್ಲಿನ ನೀರನ್ನು ಜನ ಈಗಲೂ ಬಳಸುತ್ತಿದ್ದಾರೆ.
ರಾಜ್ಯದಲ್ಲಿ ಮಂಗಳೂರಿನಿಂದ ಕಾರವಾರದವರೆಗೆ ಕರಾವಳಿಯ ಉದ್ದಕ್ಕೂ ಮನೆ, ಮನೆಗಳಲ್ಲಿ ತೆರೆದ ಬಾವಿಗಳಿವೆ. ಮಲೆನಾಡಿನಲ್ಲೂ ತೆರೆದ ಬಾವಿಗಳಿವೆ.
ಹಳೆಯ ಬೆಂಗಳೂರಿನಲ್ಲಿಯೂ ಇಂತಹ ಬಾವಿಗಳಿದ್ದವು. ಆಧುನಿಕತೆಯನ್ನು ಅಪ್ಪಿಕೊಂಡ ನಾವು ಕೊಳವೆಬಾವಿಗಳ ಮೋಹಕ್ಕೆ ಸಿಲುಕಿದೆವು. ನೀರನ್ನು ಮನಸೋಇಚ್ಛೆ ಬಳಸಿಕೊಂಡೆವು.
- ತೆರೆದ ಬಾವಿಗಳಿಗೆ ಪುನಶ್ಚೇತನ ನೀಡುವ ಕೆಲಸ ನಡೆಯುತ್ತಿದೆಯಲ್ಲವೆ?
ಜನರಲ್ಲಿ ಈ ಬಗ್ಗೆ ನಿಧಾನಕ್ಕೆ ಅರಿವು ಮೂಡುತ್ತಿದೆ. ಬೆಂಗಳೂರಿನ ಹಲವೆಡೆ ಜನ ಮನೆ ಆವರಣದ ಹಳೆಯ ಬಾವಿಗಳನ್ನು ಮತ್ತೆ ಸ್ವಚ್ಛಗೊಳಿಸುತ್ತಿದ್ದಾರೆ. ಆ ಬಾವಿಗಳ ನೀರನ್ನು ಕುಡಿಯಲು ಅಲ್ಲದಿದ್ದರೂ ಗಿಡಗಳಿಗೆ ಉಣಿಸಲು, ಕಾರು ತೊಳೆಯಲು ಬಳಸುತ್ತಿದ್ದಾರೆ.
ಮತ್ತೆ ಕೆಲವರು ಮಳೆ ನೀರು ಸಂಗ್ರಹಕ್ಕಾಗಿ ಈ ಬಾವಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆಗ ಆ ಪ್ರದೇಶದಲ್ಲಿ ಅಂತರ್ಜಲ ಮಟ್ಟ ತಾನಾಗಿಯೇ ಏರುತ್ತದೆ.
ಒಂದು ಬಡಾವಣೆಯಲ್ಲಿ ಒಂದೆರಡು ತೆರೆದ ಬಾವಿಗಳಿದ್ದರೂ ಸಾಕು. ಅವು ಭೂಮಿಯೊಳಗೆ ನೀರು ಇಂಗಿಸುವ ಕೆಲಸ ಮಾಡುತ್ತವೆ.
- ತೆರೆದ ಬಾವಿಗಳಿಂದ ಮತ್ತೆ ನೀರು ಪಡೆದವರ ಬಗ್ಗೆ ಹೇಳಿ....
ಕೋಲಾರದ ಮುಳಬಾಗಿಲು ತಾಲ್ಲೂಕಿನ ಹಳ್ಳಿಯೊಂದು ನೀರಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿತ್ತು. ಕೆಲ ವರ್ಷಗಳಲ್ಲಿ ಕೊಳವೆ ಬಾವಿಗಳು ಬರಿದಾದವು. ಬ್ರಿಟಿಷ್ ಕಾಲದಲ್ಲಿ ಕಟ್ಟಿದ್ದ ಹಳೆಯ ಬಾವಿಯೊಂದು ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಹಳ್ಳಿಯ ಜನ ಆ ಬಾವಿಯನ್ನು ಸ್ವಚ್ಛಗೊಳಿಸಿದರು, ದುರಸ್ತಿ ಮಾಡಿದರು. ಒಂದೆರಡು ಮಳೆ ಬಿದ್ದ ನಂತರ ಆ ಬಾವಿ ತುಂಬಿತು. ಹಳ್ಳಿಯ ಜನರಿಗೆ ಈಗದು ಬದುಕು ನೀಡಿದೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ವಸತಿ ಸಮುಚ್ಚಯವೊಂದರಲ್ಲಿ ಹಳೆಯ ಬಾವಿಯೊಂದಿತ್ತು. ಮುಚ್ಚಿಹೋಗಿದ್ದ ಆ ಬಾವಿಯನ್ನು ಅಲ್ಲಿನ ನಿವಾಸಿಗಳು ಸ್ವಚ್ಛಗೊಳಿಸಿದರು. 100 ಲಾರಿಗಳಷ್ಟು ಕಸ ಹೊರತೆಗೆದರು. ಅಲ್ಲಿನ ನಿವಾಸಿಗಳ ನಿತ್ಯದ ಅಗತ್ಯ ಪೂರೈಸುವಷ್ಟು ನೀರು ಆ ದೊಡ್ಡ ಬಾವಿಯಲ್ಲಿದೆ.
ಬ್ರಿಟಿಷ್ ಕಾಲದ ಬಾವಿಗಳಿಗೆ ಮರುಜೀವ ನೀಡುವ ಪ್ರಯೋಗ ಬೆಳಗಾವಿ ನಗರದಲ್ಲೂ ನಡೆಯುತ್ತಿದೆ.
- ಸರ್ಕಾರದ ಮಟ್ಟದಲ್ಲಿ ಈ ರೀತಿ ಪ್ರಯತ್ನಗಳು ನಡೆದಿವೆಯೇ?
ಇಲ್ಲ ಎಂದೇ ಹೇಳಬಹುದು. ಕೆಲ ರಾಜಕೀಯ ನಾಯಕರು ನಾವು ಹೇಳುವುದನ್ನು ಆಸಕ್ತಿಯಿಂದ ಆಲಿಸಿದರೂ ನೀತಿ–ನಿರೂಪಣೆಯ ಮಟ್ಟದಲ್ಲಿ ಅಂತಹ ಕೆಲಸವಾಗಿಲ್ಲ.
ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಒಬ್ಬನೇ ಒಬ್ಬ ಭೂಜಲತಜ್ಞನಿಲ್ಲ (Hydrogeologist). ‘ಅಂತರ್ಜಲ’ – ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೇರಿದ ವಿಷಯ.
ವಿದ್ಯಾರಣ್ಯಪುರದಲ್ಲಿ ಬಾಲಸುಬ್ರಹ್ಮಣ್ಯಂ ಎನ್ನುವವರು ತಮ್ಮ ಹಳೆಯ ಬಾವಿ ಪುನಶ್ಚೇತನಗೊಳಿಸಿದರು. ಮಳೆ ನೀರು ಸಂಗ್ರಹಿಸಿ ಆ ಬಾವಿಗೆ ಬಿಡುತ್ತಿದ್ದರು. ಒಳಚರಂಡಿ ಪೈಪ್‌ಲೈನ್‌ಗೆ ಆ ಬಾವಿಯ ನೀರು ಹೋಗುತ್ತಿದೆ ಎಂಬ ಕಾರಣ ನೀಡಿ ಅವರಿಗೆ ಹೆಚ್ಚುವರಿ ತೆರಿಗೆ ವಿಧಿಸಲಾಯಿತು. ಇದು ನಮ್ಮ ವ್ಯವಸ್ಥೆ..!
ತೆರೆದ ಬಾವಿಗಳಿಗೆ ಪುನಶ್ಚೇತನ ನೀಡುವ ಕೆಲಸ ವೈಯಕ್ತಿಕ ಮಟ್ಟದಲ್ಲಿ ಆದರೆ ಸಾಲದು. ಅದೊಂದು ಜನಾಂದೋಲವಾಗಬೇಕು. ನೀರ ದಾರಿಯಲ್ಲಿ ಕಳಚಿದ ಕೊಂಡಿಯನ್ನು ಮತ್ತೆ ಜೋಡಿಸುವ ಕೆಲಸವಾಗಬೇಕು.