ADVERTISEMENT

ತೋಟ ಉಳಿಸಿದ ‘ತಳ ನೀರಾವರಿ’ ವಿಧಾನ

ಗಾಣಧಾಳು ಶ್ರೀಕಂಠ
Published 22 ಮಾರ್ಚ್ 2018, 19:31 IST
Last Updated 22 ಮಾರ್ಚ್ 2018, 19:31 IST
ಸಿಟಿ ಶಿವನಂಜಯ್ಯ.
ಸಿಟಿ ಶಿವನಂಜಯ್ಯ.   

ಚಿತ್ರದುರ್ಗ: ಬರದಲ್ಲಿ ತೋಟ ಉಳಿಸಿಕೊಳ್ಳುವುದು ಸವಾಲಿನ ಕೆಲಸ. ತೋಟ ಉಳಿಸಿಕೊಂಡರೂ ಅದನ್ನು ಕಾಪಿಡುವುದು ಇನ್ನೂ ಕಷ್ಟ. ಆದರೆ, ಸಣ್ಣದೊಂದು ತಾಂತ್ರಿಕತೆ ಅಳವಡಿಸಿಕೊಳ್ಳುವ ಮೂಲಕ ಲಭ್ಯವಿರುವ ನೀರಲ್ಲೇ ತೋಟವನ್ನು ಹಸಿರಾಗಿಸಿಕೊಂಡಿದ್ದಾರೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ.ಪುರದ ಪ್ರಗತಿಪರ ಕೃಷಿಕ ಬಾಳೆಕಾಯಿ ಶಿವನಂಜಯ್ಯ.

ಅವರದ್ದು ನಾಲ್ಕು ಎಕರೆ ತೋಟ. ನಾಲ್ಕು ದಶಕಗಳಿಂದ ಉಳುಮೆ ನಿಲ್ಲಿಸಿ, ಸಹಜ ಕೃಷಿ ಪದ್ಧತಿ ಅಳವಡಿಸಿಕೊಂಡರು. ತೋಟದ ತುಂಬಾ ಮುಚ್ಚಿಗೆ ಬೆಳೆಗಳಿವೆ. ಸೂರ್ಯನ ಕಿರಣ ನೆಲ ತಾಗದಷ್ಟು ‘ಹೊದಿಕೆ ಬೆಳೆ’ ಹರಡಿಕೊಂಡಿದೆ. ಪ್ರತಿ ಅಡಿಕೆ, ತೆಂಗಿನ ಮರದ ಬುಡಕ್ಕೆ ಅಡಿಕೆ ಸಿಪ್ಪೆ, ತೆಂಗಿನ ಸಿಪ್ಪೆಯ ಮುಚ್ಚಿಗೆ ಮಾಡಿದ್ದಾರೆ. ಇಡೀ ತೋಟಕ್ಕೆ ಇರುವುದು ಒಂದೇ ಕೊಳವೆಬಾವಿ. ಕಳೆದ ವರ್ಷದ (2017) ಕಠಿಣ ಬೇಸಿಗೆಗೆ ಆ ಕೊಳವೆಬಾವಿಯಲ್ಲಿ ನೀರು ತುಂಬಾ ಕಡಿಮೆಯಾಗಿ, ಒಂದು ಇಂಚು ಇಳುವರಿಗೆ ಇಳಿಯಿತು.

ಬಿರು ಬೇಸಿಗೆಯಲ್ಲಿ ಒಂದು ಇಂಚು ನೀರಿನಲ್ಲಿ ನಾಲ್ಕು ಎಕರೆಯಲ್ಲಿನ 1,200 ಅಡಿಕೆ, 120 ತೆಂಗು, ನೂರಾರು ಮಿಶ್ರಬೆಳೆಗಳನ್ನು ಸಂಭಾಳಿಸುವುದು ಸವಾಲಿನ ಕೆಲಸ. ಹೊಸ ಕೊಳವೆಬಾವಿ ಕೊರೆಸಲು ಶಿವನಂಜಯ್ಯ ಅವರ ಮನಸ್ಸು ಒಪ್ಪಲಿಲ್ಲ. ಕೊನೆಗೆ ಈ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿದ ಅವರು, ಗೆಳೆಯರೊಬ್ಬರ ತೋಟದಲ್ಲಿ ನೋಡಿಕೊಂಡು ಬಂದಿದ್ದ ‘ತಳ ನೀರಾವರಿ’ ವಿಧಾನವನ್ನು ಅಳವಡಿಸಿದರು.

ADVERTISEMENT

(ಅಡಿಕೆ ಮರದ ಬುಡದಲ್ಲಿ ಪಿವಿಸಿ ಕೊಳವೆಗೆ ಮೈಕ್ರೋ ಟ್ಯೂಪ್ ಮೂಲಕ ನೀರು ಹನಿಸುತ್ತಿರುವ ‘ತಳ ನೀರಾವರಿ’ ದೃಶ್ಯ.)

ಏನಿದು ತಳ ನೀರಾವರಿ ವಿಧಾನ ?:
ಅಡಿಕೆ ಮರದ ಬುಡದಿಂದ ಒಂದು ಅಡಿ ದೂರದಲ್ಲಿ ಒಂದು ಅಡಿ ಆಳ ಮತ್ತು ಮುಕ್ಕಾಲು ಅಡಿ ಸುತ್ತಳತೆಯ ಗುಂಡಿ ತೆಗೆಯಬೇಕು. ಆ ಗುಂಡಿಯೊಳಕ್ಕೆ 20 ಸಣ್ಣ ರಂಧ್ರಗಳನ್ನು ಮಾಡಿ ಮುಕ್ಕಾಲು ಇಂಚು ಸುತ್ತಳತೆ, ಒಂದೂ ಕಾಲು ಅಡಿ ಉದ್ದದ ಪಿವಿಸಿ ಕೊಳವೆ ಇಡಬೇಕು. ಅದರ ಹೊರಸುತ್ತಲೂ ಇದ್ದಿಲು (ಬಯೋಚಾರ್) ತುಂಬಬೇಕು. ನಂತರ ಒಂದು ಕಿರುಕೊಳವೆಯಿಂದ (‌ಮೈಕ್ರೋ ಟ್ಯೂಬ್‌) ಡ್ರಿಪ್ ಮುಖಾಂತರ, ಪಿವಿಸಿ ಪೈಪ್ ಒಳಗೆ ನೀರು ಬೀಳುವಂತೆ ಮಾಡಬೇಕು. ಹೀಗೆ ಬೀಳುವ ನೀರು ನೇರವಾಗಿ ಅಡಿಕೆ ಮರದ ಬೇರಿನ ಭಾಗಕ್ಕೆ ನಿಧಾನವಾಗಿ ತಲುಪುತ್ತದೆ. ಪಕ್ಕದಲ್ಲಿರುವ ಇದ್ದಿಲೂ ನೀರನ್ನು ಹೀರಿ
ಕೊಂಡು ನಿರಂತರವಾಗಿ ಅಡಿಕೆ ಮರಕ್ಕೆ ಪೂರೈಸುತ್ತದೆ. ಇದೇ ಶಿವನಂಜಯ್ಯ ಅವರು ಹೇಳುವ ‘ತಳ ನೀರಾವರಿ’ ವಿಧಾನ.

‘ಕಳೆದ ವರ್ಷ ಈ ವಿಧಾನ ಅನುಸರಿಸಿದ್ದರಿಂದ ಬಾಡಿ ಹೋಗಿದ್ದ ಅಡಿಕೆ, ತೆಂಗಿನ ಮರಗಳು ಉಳಿದವು. ಇದೊಂದು ರೀತಿ ಪವಾಡ ಎನ್ನಿಸಿದರೂ, ‘ತಳ ನೀರಾವರಿ ಪದ್ಧತಿ’ ಯಿಂದ ತೋಟ ಉಳಿಯಿತು ಎಂಬುದಂತೂ ಸತ್ಯ’ ಎನ್ನುತ್ತಾರೆ ಶಿವನಂಜಯ್ಯ.

ಅಡಿಕೆ ಮರದ ಅಡಿ ದೂರದಲ್ಲಿ ಗುಂಡಿ ತೆಗೆದಾಗ ಮರದ ಬೇರಿನ ವ್ಯೂಹಕ್ಕೆ ಸ್ವಲ್ಪ ತೊಂದರೆಯಾಯಿತು. ಆದರೂ, ಮರಗಳನ್ನು ಉಳಿಸಿಕೊಳ್ಳುವುದಕ್ಕೆ ಬೇರುಗಳಿಗೆ ಇಷ್ಟು ಘಾಸಿ ಮಾಡುವುದು ಅನಿವಾರ್ಯವಾಗಿತ್ತು. ‘4 ದಶಕಗಳಿಂದ ಉಳುಮೆ ಕಾಣದ ಮರಗಳಿಗೆ ಆ ವರ್ಷ ಉಳುಮೆಯ ರುಚಿ ತೋರಿಸಿದಂತಾಯಿತು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಉಣಿಸಿದ ನೀರಿನ ಲೆಕ್ಕಾಚಾರ: ‘ಬೇಸಿಗೆಯಲ್ಲಿ ಪ್ರತಿ ಅಡಿಕೆ ಮರಕ್ಕೆ 10 ದಿನಗಳಿಗೊಮ್ಮೆ 70 ಲೀಟರ್ ನಷ್ಟು ನೀರು ಕೊಡುತ್ತಿದ್ದೆವು. ‘ತಳ ನೀರಾವರಿ’ ಪದ್ಧತಿ ಅಳವಡಿಕೆ ನಂತರ ಪ್ರತಿ ಮರಕ್ಕೆ, 10 ದಿನಗಳಿಗೊಮ್ಮೆ 35 ಲೀಟರ್ ನೀರು ಸಿಕ್ಕಿದಂತಾಗಿದೆ. ಆದರೂ ತೋಟ ಉಳಿದಿದ್ದು ಒಂದು ರೀತಿ ಪವಾಡವೇ’ ಎನ್ನುವುದು ಶಿವನಂಜಯ್ಯ ಅಭಿಪ್ರಾಯ.

‘ಮರಗಳಿಗೆ ಮುಚ್ಚಿಗೆ ಮಾಡುವುದರಿಂದ ನೀರು ಆವಿಯಾಗುವುದು ತಪ್ಪುತ್ತದೆ. ತೇವಾಂಶ ರಕ್ಷಣೆಗೆ ತೋಟಕ್ಕೆ ಮುಚ್ಚಿಗೆ ಬೆಳೆಗಳಿರುವುದರಿಂದ ಕಡಿಮೆ ನೀರಿನಲ್ಲಿ ಅಡಿಕೆ ಮರಗಳು ಸುರಕ್ಷಿತವಾಗಿರುವ ಸಾಧ್ಯತೆ ಇದೆ’ ಎಂದು ಚಿತ್ರದುರ್ಗ ತಾಲ್ಲೂಕು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ದೇವರಾಜ್ ವಿವರಣೆ ನೀಡಿದರು.

ಕೊಳವೆಬಾವಿಗೆ ಜಲಮರುಪೂರಣ

ಚಿಕ್ಕನಾಯ್ಕನಹಳ್ಳಿ ತಾಲ್ಲೂಕು ಜೆ.ಸಿ. ಪುರ ವ್ಯಾಪ್ತಿಯಲ್ಲಿ ಕಳೆದ ವರ್ಷದ ಕೊನೆಯಲ್ಲಿ ಅನಿರೀಕ್ಷಿತವಾಗಿ 980 ಮಿ.ಮೀನಷ್ಟು ಮಳೆಯಾಗಿದೆ. ಶಿವನಂಜಯ್ಯ ಅವರು ಕೊಳವೆಬಾವಿಗೆ ಜಲಮರುಪೂರಣ ವಿಧಾನ ಅಳವಡಿಸಿದ್ದ­ರಿಂದ, ತೋಟದಲ್ಲಿ ಬಿದ್ದ ಮಳೆ ನೀರು ಕೊಳವೆಬಾವಿಗೆ ಇಂಗಿ, ಜಲಮರುಪೂರಣಗೊಂಡಿದೆ.

‘ಬೇಸಿಗೆಯಲ್ಲಿ ಒಂದು ಇಂಚು ನೀರು ಬರುತ್ತಿದ್ದ ಕೊಳವೆಬಾವಿಯಲ್ಲಿ ಈಗ ನೀರಿನ ಇಳುವರಿ ಉತ್ತಮವಾಗಿದೆ. ಒಂದು ಪಕ್ಷ ವಿದ್ಯುತ್ ಸಮಸ್ಯೆಯಿಂದ ತೋಟಕ್ಕೆ ನೀರು ಹಾಯಿಸದಿದ್ದರೂ ತೇವಾಂಶ ರಕ್ಷಣೆಯಾಗಿರುವ ತೋಟದಲ್ಲಿ ಉತ್ತಮ ಬೆಳೆ ಬರುವ ನಿರೀಕ್ಷೆ ಇದೆ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಅವರು.

ತಳನೀರಾವರಿ ಮತ್ತು ಸಹಜ ಕೃಷಿ ಪದ್ಧತಿಯ ಮಾಹಿತಿಗಾಗಿ ಶಿವನಂಜಯ್ಯ ಅವರ ಸಂಪರ್ಕ ಸಂಖ್ಯೆ: 9964451421.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.