ಹೊಳಲ್ಕೆರೆ: ಇಲ್ಲಿ ಹನಿ ನೀರೂ ವ್ಯರ್ಥವಾಗುವು ದಿಲ್ಲ. ಮಳೆನೀರು ಹರಿದು ಹಳ್ಳ ಸೇರು ವುದಿಲ್ಲ. ಸ್ನಾನಕ್ಕೆ ಬಳಸಿದ ನೀರು ಚರಂಡಿ ಪಾಲಾಗುವುದಿಲ್ಲ. ಪ್ರತಿ ಹನಿಯೂ ಮರು ಬಳಕೆ ಆಗುತ್ತದೆ. ಎಲ್ಲೆಡೆ ನೀರಿಗೆ ಹಾಹಾ ಕಾರ ಇದ್ದರೂ ಇಲ್ಲಿ ಮಾತ್ರ ನೀರಿಗೆ ‘ಬರ’ವಿಲ್ಲ!
ತಾಲ್ಲೂಕಿನ ಮಲ್ಲಾಡಿಹಳ್ಳಿ ಉದ್ಯಮಿ ನಾಗರಾಜ್ ನೀರಿನ ಮರುಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಗ್ರಾಮದ ಹೊರವಲಯದಲ್ಲಿರುವ ಮನೆ, ಪೆಟ್ರೋಲ್ ಬಂಕ್ ಮತ್ತು ಕಾರ್ಮಿ ಕರ ತರಬೇತಿ ಕೇಂದ್ರಗಳ ಆವರಣದಲ್ಲಿ ಬೀಳುವ ಮಳೆನೀರು ಸಂಗ್ರಹಿಸಲು 1.8 ಲಕ್ಷ ಲೀಟರ್ ಸಾಮರ್ಥ್ಯದ ದೊಡ್ಡ ತೊಟ್ಟಿ ನಿರ್ಮಿಸಿದ್ದಾರೆ.
ಸುಮಾರು ಎರಡು ಎಕರೆ ಪ್ರದೇಶದಲ್ಲಿ ಬೀಳುವ ಮಳೆನೀರು ವ್ಯರ್ಥವಾಗದೇ, ನೀರಿನ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ತೊಟ್ಟಿಯಲ್ಲಿ ಕಲ್ಲಿ ದ್ದಲು, ಉಪ್ಪು, 20 ಮಿ.ಮೀ, 40 ಮಿ.ಮೀ ಜಲ್ಲಿಯ ಪದರಗಳಿದ್ದು, ನೀರು ತನ್ನಿಂದ ತಾನೇ ಶುದ್ಧೀಕರಣಗೊಳ್ಳುತ್ತದೆ. ಇದೇ ನೀರನ್ನು ಕುಡಿಯಲು ಹಾಗೂ ಇತರೆ ಕಾರ್ಯಗಳಿಗೆ ಬಳಸಲಾಗುತ್ತದೆ. ನಿತ್ಯ ಒಂದು ಸಾವಿರ ಲೀಟರ್ ನೀರು ಖರ್ಚು ಮಾಡಿದರೂ ಸುಮಾರು 6 ತಿಂಗಳವರೆಗೆ ಬಳಸಬಹುದು. ಮಳೆಗಾಲ ದಲ್ಲಿ ಹೆಚ್ಚಾದ ನೀರು ಕೊಳವೆಬಾವಿಯ ಇಂಗುಗುಂಡಿ ಸೇರುವ ವ್ಯವಸ್ಥೆ ಮಾಡಿದ್ದಾರೆ.
ಬಳಸಿದ ನೀರು ಉದ್ಯಾನಕ್ಕೆ: ಮನೆಯ ಆವರಣದಲ್ಲಿ 100x100 ಅಳತೆಯ ಉದ್ಯಾನ ನಿರ್ಮಿಸಿದ್ದಾರೆ. ಪಾತ್ರೆ, ಬಟ್ಟೆ ತೊಳೆದ ನೀರು, ಸ್ನಾನಕ್ಕೆ ಬಳಸಿದ ನೀರು ಸಂಗ್ರಹಕ್ಕೆ ಮತ್ತೊಂದು ತೊಟ್ಟಿ ನಿರ್ಮಿಸಿದ್ದಾರೆ. ಇಲ್ಲಿಯೂ ನೀರು ಶುದ್ಧೀಕರಣಗೊಳ್ಳುತ್ತದೆ. ಹನಿ ಹಾಗೂ ತುಂತುರು ನೀರಾವರಿ ವ್ಯವಸ್ಥೆ ಮೂಲಕ ಉದ್ಯಾನಕ್ಕೆ ನೀರನ್ನು ಬಳಸಿಕೊಳ್ಳಲಾಗು ತ್ತಿದೆ. ಇದರಿಂದ ಉದ್ಯಾನದಲ್ಲಿರುವ ನೂರಾರು ಜಾತಿಯ ಅಲಂಕಾರಿಕ ಸಸ್ಯ ಗಳು, ಹಲಸು, ಮಾವು, ಹೆಬ್ಬೇವು ಮತ್ತಿತರ ಜಾತಿ ಮರಗಳು, ಹುಲ್ಲಿನ ಹಾಸು ಬೇಸಿಗೆಯಲ್ಲೂ ನಳನಳಿಸುತ್ತವೆ.
ಮನೆಯಂಗಳದಲ್ಲಿ ತರಕಾರಿ: ನಾಗರಾಜ್ ಅವರ ಪತ್ನಿ ಪದ್ಮಾವತಿ ಮನೆ ಅಂಗಳದಲ್ಲಿ ಮಳೆನೀರು ಸಂಗ್ರಹ ವಾದ ನೀರಿನಿಂದ ವಿವಿಧ ಜಾತಿಯ ಸೊಪ್ಪು, ತರಕಾರಿ ಬೆಳೆಯುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೆ ಇವುಗಳನ್ನು ಬೆಳೆಯುತ್ತಾರೆ. ‘ಶುದ್ಧ ನೀರು, ಸಾವಯವ ಗೊಬ್ಬರ ಬಳಸಿ ತರಕಾರಿ ಬೆಳೆಯುವುದ ರಿಂದ ಆರೋಗ್ಯಕ್ಕೂ ಒಳ್ಳೆಯದು’ ಎನ್ನುತ್ತಾರೆ ಅವರು.
ಕಾರ್ಖಾನೆಯಲ್ಲೂ ಮಳೆ ನೀರು ಸಂಗ್ರಹ: ಗ್ರಾಮದ ಹೊರವಲಯದಲ್ಲಿ ಮೂರು ಎಕರೆ ಜಾಗದಲ್ಲಿ ನಾಗರಾಜ್ ಅವರ ‘ಅಮೃತ್ ಆರ್ಗ್ಯಾನಿಕ್ ಫರ್ಟಿಲೈಜರ್ಸ್’ ಕಾರ್ಖಾನೆ ಇದೆ. ಇಲ್ಲಿಯೂ ಮಳೆ ನೀರು ಸಂಗ್ರಹ ಮಾಡುತ್ತಾರೆ. ಕಾರ್ಖಾನೆ ಆವರಣದಲ್ಲಿ 4 ಲಕ್ಷ ಲೀಟರ್ ಸಾಮರ್ಥ್ಯದ ತೊಟ್ಟಿ ನಿರ್ಮಿಸಿದ್ದಾರೆ. ಸಾವಯವ ಗೊಬ್ಬರ ತಯಾರಿಕೆ, ಕಾರ್ಮಿಕರಿಗೆ ಕುಡಿಯುವ ನೀರು, ಸಂಶೋಧನೆಗೆ ಬೇಕಾಗುವಷ್ಟು ನೀರನ್ನು ಸುಲಭವಾಗಿ ಪಡೆಯುತ್ತಾರೆ.
ಮಳೆಗಾಲದಲ್ಲಿ ನೀರು ವ್ಯರ್ಥವಾಗಿ ಚರಂಡಿ ಸೇರುತ್ತದೆ. ಸ್ವಲ್ಪ ಹಣ ಖರ್ಚು ಮಾಡಿದರೆ ಮನೆಯ ಆವರಣದಲ್ಲಿ ಬೀಳುವ ನೀರನ್ನು ಸಂಗ್ರಹಿಸಿ ವರ್ಷಪೂರ್ತಿ ಬಳಸಬಹುದು
-ಕೆ.ನಾಗರಾಜ್, ಉದ್ಯಮಿ, ಮಲ್ಲಾಡಿಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.