ADVERTISEMENT

ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ

ಪೃಥ್ವಿ ದತ್ತ ಚಂದ್ರ ಶೋಭಿ
Published 28 ಡಿಸೆಂಬರ್ 2017, 19:30 IST
Last Updated 28 ಡಿಸೆಂಬರ್ 2017, 19:30 IST
ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ
ಹೆಗಡೆ ಮಾತುಗಳು ಮನದಾಳದ ಅಭಿವ್ಯಕ್ತಿ   

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಕ್ರಿಸ್‌ಮಸ್‌ ದಿನದಂದು ಆಡಿದ ಮಾತುಗಳು ಕೇವಲ ಅನುಚಿತ ಹೇಳಿಕೆಗಳೇ? ಅಥವಾ ಆ ಮಾತುಗಳು ಅವರು ಆಳವಾಗಿ ನಂಬಿರುವ, ಆದರೆ ಸಾರ್ವಜನಿಕವಾಗಿ ಆಡಬಾರದಿರುವ ಮಾತುಗಳೇ? ಇಂಗ್ಲಿಷ್‌ನಲ್ಲಿ ಇವುಗಳನ್ನು ‘ಗ್ಯಾಫ್‌’ (gaffe) ಎಂದು ಕರೆಯುತ್ತಾರೆ.

ಸಚಿವರ ಮಾತುಗಳು ಇಡೀ ರಾಷ್ಟ್ರದ ಗಮನವನ್ನು ಸೆಳೆದಿವೆ. ಕಳೆದ ಕೆಲವು ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆ ನಡೆದಿರುವುದರ ಜೊತೆಗೆ ಡಿ.26ರಂದು ಪಾರ್ಲಿಮೆಂಟಿನ ಕಲಾಪವನ್ನೂ ನುಂಗಿದೆ. ಸಚಿವ ಹೆಗಡೆ ಅವರು ವಿವಾದಾತ್ಮಕ ಹೇಳಿಕೆಗಳಿಗೆ ಮತ್ತು  ನಡೆಗಳಿಗೆ ಹೆಸರಾಗಿದ್ದರೂ, ಈ ವಾರ ಅವರು ಸುದ್ದಿಯಲ್ಲಿದ್ದಷ್ಟು ಅವರ ಎರಡೂವರೆ ದಶಕಗಳ ಸಕ್ರಿಯ ರಾಜಕೀಯ ಜೀವನದಲ್ಲಿ ಯಾವಾಗಲೂ ಇರಲಿಲ್ಲ. ಅವರ ನಡೆನುಡಿಗಳ ಬಗ್ಗೆ, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳ ಸಂದರ್ಭವನ್ನು ಪರಿಗಣಿಸಿಯೇ ಹಲವು ಪ್ರತಿಕ್ರಿಯೆಗಳು ಬಂದಿವೆ. ಆದರೆ 2017ರ ಕಡೆಯ ಅಂಕಣದಲ್ಲಿ ನಮ್ಮ ರಾಜಕೀಯ ಸಮಾಜ ಹಾಗೂ ಸಾಮಾಜಿಕ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ಸಚಿವ ಹೆಗಡೆ ಅವರ ಮಾತುಗಳ ಬಗ್ಗೆ ಕೆಲವು ಟಿಪ್ಪಣಿಗಳನ್ನು ಓದುಗರ ಮುಂದಿರಿಸುತ್ತಿದ್ದೇನೆ.

ಮೊದಲಿಗೆ ಸಚಿವರ ಮಾತುಗಳಿಗೆ ಬಂದ ಹಿಂಸಾತ್ಮಕ ಬೆದರಿಕೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ಖಂಡಿಸಬೇಕು. ಅವರ ನಾಲಿಗೆಯನ್ನು ಕತ್ತರಿಸಿ ತಂದವರಿಗೆ ಒಂದು ಕೋಟಿ ಬಹುಮಾನವನ್ನು ಕೊಡುವುದಾಗಿ ಹೇಳಿರುವವರು ‘ಪದ್ಮಾವತಿ’ ಚಲನಚಿತ್ರದ ಸಂದರ್ಭದಲ್ಲಿ ಇಂತಹುದೇ ಬೆದರಿಕೆಗಳನ್ನು ಕರ್ಣಿಸೇನಾದ ಸದಸ್ಯರಂತೆಯೇ ನಮ್ಮ ತಿರಸ್ಕಾರಕ್ಕೆ, ಖಂಡನೆಗೆ ಮಾತ್ರ ಯೋಗ್ಯರು. ಎರಡನೆಯ ಮಾತಿಲ್ಲ.

ADVERTISEMENT

ಎರಡನೆಯದಾಗಿ, ಸಚಿವರು ಸಂವಿಧಾನ ಬದಲಾವಣೆಯ ಬಗ್ಗೆ ಹೇಳಿರುವ ಮಾತುಗಳು ಸ್ವಲ್ಪ ಸೂಕ್ಷ್ಮವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತವೆ ಎನಿಸುತ್ತಿದೆ. ಅವರು ತರಬೇಕೆನ್ನುವ ಸಾಂವಿಧಾನಿಕ ತಿದ್ದುಪಡಿಗಳ ಬಗ್ಗೆ, ಅವರು ಸೂಚಿಸುತ್ತಿರುವ ಬದಲಾವಣೆಗಳ ಬಗ್ಗೆ ನನಗೆ ಭಿನ್ನಾಭಿಪ್ರಾಯವಿರಬಹುದು. ಆದರೆ ಸಂವಿಧಾನವನ್ನು ಬದಲಿಸಬೇಕೆನ್ನುವ ಹೊಸ ಚರ್ಚೆಯನ್ನು ಭಾರತದಲ್ಲಿ ಇಂದು ಸಚಿವ ಹೆಗಡೆ ಅವರು ಪ್ರಾರಂಭಿಸುವುದಾದರೆ, ಅವರನ್ನು ಅವರ ರಾಜಕೀಯ ಎದುರಾಳಿಗಳು ತಡೆಯುವಂತಿಲ್ಲ.

ಇದಕ್ಕೆ ಕಾರಣಗಳು ಬಹಳ ಸರಳವಾದವು. ಭಾರತೀಯ ಸಂವಿಧಾನವನ್ನು ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಕೇವಲ ಮನುಷ್ಯರೇ ಬರೆದಿರುವುದು. ಸಚಿವ ಹೆಗಡೆ ಮತ್ತು ಇತರ ಪ್ರಮುಖ ಬಲಪಂಥೀಯರು ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಹೇಳಿರುವಂತೆ, ಜುಲೈ 1, 2017ರ ಜಿ.ಎಸ್.ಟಿ. ತಿದ್ದುಪಡಿಯೂ ಸೇರಿ ಸಂವಿಧಾನಕ್ಕೆ 101 ತಿದ್ದುಪಡಿಗಳಾಗಿವೆ. ಮಿಗಿಲಾಗಿ ಭಾರತೀಯ ನಾಗರಿಕರೆಲ್ಲರೂ ನಮ್ಮ ಸಂವಿಧಾನದ ಸ್ವರೂಪ, ಮೂಲ ಆಶಯಗಳು ಹೇಗಿರಬೇಕು ಎನ್ನುವುದನ್ನು ಚರ್ಚಿಸುವ, ತಮ್ಮ ಅಭಿಪ್ರಾಯಗಳನ್ನು ಮುಂದಿಡುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಈಗಿನ ಸಂವಿಧಾನದ ಆಶಯಗಳನ್ನು, ಅಲ್ಲಿರುವ ಪರಿಚ್ಛೇದಗಳನ್ನು ಬದಲಿಸಲು ಇಚ್ಛಿಸಿ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಲು ಅನಂತಕುಮಾರ್ ಹೆಗಡೆ ಅವರಿಗೆ ಇರುವ ಅವಕಾಶವನ್ನು ಯಾರೂ ಕಸಿದುಕೊಳ್ಳುವಂತಿಲ್ಲ. ‘ಭಾರತವು ಸೆಕ್ಯುಲರ್ ಮತ್ತು ಸಮಾಜವಾದಿ ಮೌಲ್ಯಗಳನ್ನು ಅನುಸರಿಸಬಾರದು, ಧಾರ್ಮಿಕ ಸಮಾಜವಾಗಿ ಹೊರಹೊಮ್ಮಬೇಕು’ ಎನ್ನುವುದು ಅವರ ನಿಲುವಾದರೆ, ಅದನ್ನು ಅವರು ಮುಕ್ತವಾಗಿ ಪ್ರಾಮಾಣಿಕವಾಗಿ ಹೇಳಬಹುದು. ಆ ಬಗೆಯ ಸಾಂವಿಧಾನಿಕ ಬದಲಾವಣೆಗಾಗಿ ಶಾಂತಿಯುತವಾದ ರಾಜಕೀಯ ಹೋರಾಟವನ್ನು ನಡೆಸುವ ಹಕ್ಕು ಅವರಿಗೆ ಖಂಡಿತವಾಗಿಯೂ ಇದೆ. ಆದರೆ ಇಂತಹ ಚರ್ಚೆಯ ಸಂದರ್ಭದಲ್ಲಿ ಯಾವುದೇ ಹಿಂಸೆ, ಬೆದರಿಕೆಗಳು ಇರಬಾರದು ಮತ್ತು ಪರಸ್ಪರ ರಾಜಕೀಯ ಎದುರಾಳಿಗಳಿಗೆ ತಮ್ಮ ವಾದಗಳನ್ನು ಭಾರತೀಯ ನಾಗರಿಕರ ಮುಂದಿಡುವ ಮುಕ್ತ ಅವಕಾಶವಿರಬೇಕು ಎನ್ನುವುದಷ್ಟೇ ಹೆಗಡೆ ಅವರೂ ಸೇರಿದಂತೆ ಎಲ್ಲರ ಮೇಲಿರುವ ನಿರ್ಬಂಧಗಳು.

ಈ ಮೇಲಿನ ವಾಕ್ಯಗಳಲ್ಲಿ ಅಡಕವಾಗಿರುವ ಸ್ವತಂತ್ರವಾಗಿ ವಿಚಾರ ಮಾಡುವ ಅವಕಾಶ, ವಿಚಾರಗಳನ್ನು ಅಭಿವ್ಯಕ್ತಿಸುವ ಮತ್ತು ಸಂಘಟನೆ ಮಾಡುವ ಸ್ವಾತಂತ್ರ್ಯಗಳು ಯಾವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲ ಆಶಯಗಳು. ಸ್ವತಃ ಬಾಬಾಸಾಹೇಬರೂ ಸಚಿವ ಹೆಗಡೆ ಅವರ ಹಕ್ಕುಗಳನ್ನು ಸಮರ್ಥಿಸುತ್ತಿದ್ದರು ಎಂದು ನಾನು ಭಾವಿಸುತ್ತೇನೆ. ಆದರೆ ಭಾರತೀಯ ಸಂವಿಧಾನವನ್ನು ಬದಲಿಸುವಾಗ ಸಚಿವರು ಕೆಲವು
ಸಂಕೀರ್ಣತೆಗಳನ್ನು ಎದುರಿಸಬೇಕಾಗುತ್ತದೆ. ಇದು ನಾನು ಇಲ್ಲಿ ಪ್ರಸ್ತಾಪಿಸುವ ಮೂರನೆಯ ಅಂಶ.

ಕೇವಲ ‘ಸೆಕ್ಯುಲರ್’ ಮತ್ತು ‘ಸೋಷಿಯಲಿಸ್ಟ್’ ಎಂಬ ಪದಗಳನ್ನು ಸಂವಿಧಾನದಿಂದ ಕೈಬಿಡುವ ಮೂಲಕ ಸಂವಿಧಾನದ ಮೂಲ ಆಶಯಗಳನ್ನು ಬದಲಿಸಲು ಸಾಧ್ಯವಿಲ್ಲ. 1973ರಲ್ಲಿ ಸುಪ್ರೀಂ ಕೋರ್ಟ್‌ ಸಂವಿಧಾನದ ಮೂಲಭೂತ ಸ್ವರೂಪ, ಸಿದ್ಧಾಂತವನ್ನು ಮುಂದಿಟ್ಟಿತು. ಅದರಂತೆ ಮೂಲಭೂತ ಹಕ್ಕುಗಳೂ ಸೇರಿದಂತೆ ಸಂವಿಧಾನದ ಕೆಲವು ನಿರ್ದಿಷ್ಟ ಭಾಗಗಳನ್ನು ಪಾರ್ಲಿಮೆಂಟಿನ ತಿದ್ದುಪಡಿ ಮಾಡುವ ವ್ಯಾಪ್ತಿಯಿಂದ ಸುಪ್ರೀಂ ಕೋರ್ಟ್‌ ಹೊರಗಿಟ್ಟಿದೆ. ಹಾಗಾಗಿ ಸಚಿವರೂ ಸೇರಿದಂತೆ ಯಾರೇ ಆದರೂ ಅಷ್ಟು ಸುಲಭವಾಗಿ ಸಂವಿಧಾನದ ಮೂಲ ಅಶಯಗಳ ತಿದ್ದುಪಡಿ ಮಾಡಲು ಸಾಧ್ಯವಿಲ್ಲ.

ಈ ಚರ್ಚೆಯ ಮುಂದಿನ ಹಂತಕ್ಕೆ ಸಚಿವರು ಅಂದು ಆಡಿದ ಇತರೆ ಮಾತುಗಳು ಹೆಚ್ಚು ಪ್ರಸ್ತುತವಾಗುತ್ತವೆ. ‘ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜಾತಿ ಅಥವಾ ಧರ್ಮದ ಗುರುತಿನ ಮೂಲಕವೇ ತನ್ನನ್ನು ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು’ ಎನ್ನುವ ನಿರೀಕ್ಷೆ ಅವರ ಮಾತುಗಳಲ್ಲಿ ಸ್ಪಷ್ಟ
ವಾಗಿ ಹೊರಬಂದಿತ್ತು. ಅವರ ಮಾತುಗಳಲ್ಲಿದ್ದ ಪ್ರಚೋದನಕಾರಿ  ದನಿಯ ಬಗ್ಗೆ ಬಹುತೇಕ ಪ್ರತಿಕ್ರಿಯೆಗಳು ಗಮನ ಹರಿಸಿವೆ. ಇಲ್ಲಿನ ಮತ್ತೊಂದು ಆತಂಕಕಾರಿ ಆಯಾಮದ ಬಗ್ಗೆ ಸ್ಪಷ್ಟವಾಗಿ ಉತ್ತರಿಸಬೇಕು.

ಸಂಪ್ರದಾಯವಾದಿ ಮನಸ್ಸಿಗೆ ಜಾತಿ ಅಥವಾ ಧರ್ಮದ ಮೂಲಕ ನಾವು ಕಟ್ಟಿಕೊಳ್ಳುವ ಗುರುತು ಯಾಕೆ ಬೇಕು ಎನ್ನಿಸುತ್ತದೆ? ನಾವೆಲ್ಲರೂ ಇಂತಹ ಜಾತಿಯವರು, ಧರ್ಮದವರು ಎಂದಾಗ ಸಂಪ್ರದಾಯವಾದಿಗಳ ನಿರೀಕ್ಷೆಯಿರುವುದು ಕೇವಲ ಸಾರ್ವಜನಿಕವಾಗಿ ನಮ್ಮ ಗುರುತನ್ನು ಹೇಳುತ್ತಿದ್ದೇವೆ ಎಂದಷ್ಟೇ ಅಲ್ಲ. ಅದಕ್ಕಿಂತ ಮಿಗಿಲಾಗಿ ನಮ್ಮ ಜಾತಿ ಮತ್ತು ಧರ್ಮಗಳ ತತ್ವಗಳು, ನಂಬಿಕೆಗಳು, ಜೀವನಚಕ್ರದ ಆಚರಣೆಗಳು (ಲೈಫ್‌ ಸೈಕಲ್ ರಿಚ್ಯುವಲ್‌ಗಳು) ಮತ್ತು ನೈತಿಕತೆಯನ್ನು ನಾವು ಪಾಲಿಸುವವರು ಎಂದು ಸಾರ್ವಜನಿಕವಾಗಿ ಘೋಷಿಸುತ್ತಿದ್ದೇವೆ. ಸಚಿವ ಹೆಗಡೆ ಅವರು ನಿರೀಕ್ಷಿಸುತ್ತಿರುವುದು ಈ ಬಗೆಯ ಸ್ಪಷ್ಟತೆಯನ್ನು. ತಮ್ಮ ಆಯ್ಕೆಯ ವ್ಯಕ್ತಿತ್ವವನ್ನು ಹೊಂದಿರುವವರನ್ನಲ್ಲ.

ಜಾತ್ಯತೀತರಾಗುತ್ತೇವೆ ಎನ್ನುತ್ತಿದ್ದಂತೆ ಸಮುದಾಯಕ್ಕಿಂತ ವ್ಯಕ್ತಿಯ ನೆಲೆಯಲ್ಲಿ ನಮಗೆ ಸರಿಯೆನ್ನಿಸುವ ನಂಬಿಕೆಗಳು ಮತ್ತು ಆಚರಣೆ
ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲಾರಂಭಿಸುತ್ತೇವೆ. ಈ ಸ್ವಾತಂತ್ರ್ಯದ ಬಗ್ಗೆ ಅನುಮಾನವಿರುವವರು ಕೇವಲ ಅನಂತಕುಮಾರ್ ಹೆಗಡೆ ಮಾತ್ರವಲ್ಲ. ವಿಶ್ವವಿದ್ಯಾಲಯಗಳ ಉಪನ್ಯಾಸಕರಂತಹ ಪ್ರಬುದ್ಧ ಸಮುದಾಯಗಳಲ್ಲಿಯೇ ಜಾತ್ಯತೀತ ಮೌಲ್ಯ
ಗಳನ್ನು ಪ್ರತಿಪಾದಿಸುವವರ ಪಿತೃತ್ವವನ್ನು ಪ್ರಶ್ನಿಸುವ ಮಾತುಗಳನ್ನು ಅಸಂಖ್ಯ ಬಾರಿ ನಾನೂ ಕೇಳಿದ್ದೇನೆ, ಗುರಿಯಾಗಿದ್ದೇನೆ. ಆದುದರಿಂದ ಸಚಿವರ ಮಾತುಗಳನ್ನು ಅಪರೂಪದ, ಯಾರೂ ಪ್ರತಿಪಾದಿಸದ ಮಾತುಗಳು ಎಂದು ತಳ್ಳಿಹಾಕುವಂತಿಲ್ಲ.

ಹೀಗಿರುವಾಗ ಜಾತ್ಯತೀತತೆ ಎನ್ನುವುದು ಚರ್ಚೆಗೆ ಒಳಗಾಗಿಸಬಹುದಾದ ಮೌಲ್ಯವಲ್ಲ, ಬದಲಿಗೆ ಭಾರತೀಯ ಸಂವಿಧಾನದಿಂದ ದತ್ತವಾಗಿರುವ ಮೂಲಭೂತ ಸ್ವಾತಂತ್ರ್ಯವೆಂದು ಸ್ಪಷ್ಟವಾಗಿ ಹೇಳಲೇಬೇಕು. ಅಂದರೆ ನಾನು ಭಾರತದ ಪ್ರಜೆಯಾಗಿರುವುದು, ಸ್ವಾತಂತ್ರ್ಯಗಳಿಗೆ ಹಕ್ಕುದಾರನಾಗಿರುವುದು ಯಾವುದೊ ಜಾತಿ ಅಥವಾ ಧರ್ಮದ ಸದಸ್ಯನೆಂದಲ್ಲ. ಭಾರತೀಯ ಪ್ರಜೆಯ ಸ್ಥಾನಮಾನ ಮತ್ತು ಸ್ವಾತಂತ್ರ್ಯಗಳು ನಮಗೆ ದೊರಕುವುದು ವ್ಯಕ್ತಿನೆಲೆಯಲ್ಲಿ.

ಅಂದರೆ ನನ್ನ ಮಾತಿನ ಅರ್ಥವಿಷ್ಟೆ: ಪ್ರತಿಯೊಬ್ಬ ಭಾರತೀಯನೂ ಒಂದು ಧರ್ಮ ಅಥವಾ ಜಾತಿಗೆ ಸೇರಿರುವ ಕುಟುಂಬದಲ್ಲಿ ಜನಿಸಿರಬಹುದು. ಆದರೆ ಆ ಜಾತಿ, ಧರ್ಮಗಳು ಆ ಭಾರತೀಯನ ಬದುಕಿನ ಯಾವ ಆಯಾಮವನ್ನೂ ನಿರ್ಧರಿಸಬೇಕಿಲ್ಲ. ನಮ್ಮ ಶಿಕ್ಷಣ ಮತ್ತು ವೃತ್ತಿಗಳನ್ನು, ನಮ್ಮ ಸ್ನೇಹ ಮತ್ತು ವಿವಾಹ ಸಂಬಂಧಗಳನ್ನು, ನಮ್ಮ ನಂಬಿಕೆ ಮತ್ತು ಆಚರಣೆಗಳನ್ನು, ನಮ್ಮ ನೈತಿಕತೆಯನ್ನು ನಾವು ಆಕಸ್ಮಿಕವಾಗಿ ಹುಟ್ಟಿರಬಹುದಾದ ಜಾತಿ ಮತ್ತು ಧರ್ಮಗಳು ತೀರ್ಮಾನಿಸುವುದಿಲ್ಲ. ಬದಲಿಗೆ ವ್ಯಕ್ತಿಗಳಾಗಿ ನಮಗೆ ಈ ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮ ಆಯ್ಕೆಗಳನ್ನು ಮಾಡಲು ಸಾಂವಿಧಾನಿಕವಾದ ಸ್ವಾತಂತ್ರ್ಯವಿದೆ. ಈ ಮೂಲಭೂತ ಸ್ವಾತಂತ್ರ್ಯಗಳನ್ನು ಇಂದಿರಾ ಗಾಂಧಿಯವರು 70ರ ದಶಕ
ದಲ್ಲಿ ಅರಿತಂತೆ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಕಸಿದುಕೊಳ್ಳಲು ಸಾಧ್ಯವಿಲ್ಲ.

ಈ ವಿವಾದದಿಂದ ಮತ್ತೊಮ್ಮೆ ಸ್ಪಷ್ಟವಾಗುತ್ತಿರುವುದು ಸರಳವಾದ ಒಂದು ಪ್ರಶ್ನೆ: ಭಾರತದಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು, ಅದರ ಎಲ್ಲ ಆಯಾಮಗಳಲ್ಲಿ, ಉಳಿಸಿಕೊಳ್ಳಲು ನಾವೆಲ್ಲರೂ (ಅಂದರೆ ಪ್ರಜೆಗಳಿರುವ ನಾಗರಿಕ ಸಮಾಜ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ನ್ಯಾಯಾಂಗ ವ್ಯವಸ್ಥೆ) ಬದ್ಧರಾಗಿದ್ದೇವೆಯೇ? ಬರುವ ದಿನಗಳಲ್ಲಿ ನಮ್ಮನ್ನು ಮತ್ತೆ ಮತ್ತೆ ಕಾಡುವ ಪ್ರಶ್ನೆಯಿದು.

ಪ್ರಾರಂಭದಲ್ಲಿ ಸಚಿವರ ಮಾತುಗಳು ಒಂದು ‘ಗ್ಯಾಫ್‌’ ಆಗಿರಬಹುದೆ ಎಂದು ಕೇಳಿದೆ. ಅದರ ಉದ್ದೇಶವಿಷ್ಟೆ. ರಾಜಕೀಯ ‘ಗ್ಯಾಫ್‌’ಗಳು ಮನದಾಳದಲ್ಲಿ ಹುದುಗಿರುವ ಸತ್ಯವನ್ನು ಅರಿವಿಲ್ಲದಂತೆ ಹೊರತಂದುಬಿಡುತ್ತವೆ. ಸಚಿವ ಹೆಗಡೆ ಅವರು ಕೇವಲ ಅವರ ಮನದ ಮಾತು
ಗಳನ್ನು ಮಾತ್ರವಲ್ಲ, ಭಾರತದಲ್ಲಿ ಹಲವರು ಒಪ್ಪುವ ಅಭಿಪ್ರಾಯಗಳನ್ನು ಅಭಿವ್ಯಕ್ತಿಸಿದ್ದಾರೆ ಎಂದು ನನಗೆ ಅನ್ನಿಸುತ್ತಿದೆ. ಈ ಪ್ರಕರಣವು ಹೆಚ್ಚು ಕಾವೇರಿದಂತೆ ಅವರು ಸಂವಿಧಾನದ ಬಗ್ಗೆ ಅವರಿಗಿರುವ ಗೌರವ, ನಿಷ್ಠೆಗಳನ್ನು ಪುನರುಚ್ಚರಿಸಿದ್ದಾರೆ. ಆದರೆ ಹಾಗೆನ್ನುತ್ತಿದ್ದಂತೆ ಸಂವಿಧಾನಕ್ಕೆ ಬದಲಾವಣೆಗಳ ಅಗತ್ಯವಿದೆ, ಸಂವಿಧಾನದತ್ತವಾದ ಸ್ವಾತಂತ್ರ್ಯಗಳ ಮೇಲೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹಲವರು ನಂಬಿದ್ದಾರೆ ಎನ್ನುವ ಮಾತು ಸುಳ್ಳಾಗುವುದಿಲ್ಲ. ಆದುದರಿಂದಲೇ ನಮ್ಮ ರಾಜಕೀಯ ಮತ್ತು ನಾಗರಿಕ ಸಮಾಜ ಹೇಗಿರಬೇಕು ಎನ್ನುವುದರ ಬಗೆಗಿನ ಚರ್ಚೆ ಇಂದು ಮುಗಿಯುವುದಿಲ್ಲ. ವ್ಯಕ್ತಿನೆಲೆಯ ವೈಯಕ್ತಿಕ ಸ್ವಾತಂತ್ರ್ಯ ಯಾವುದೇ ರೂಪದಲ್ಲಿ ಹರಣವಾಗದಂತೆ ಎಚ್ಚರ ವಹಿಸಬೇಕಿದೆ ಎನ್ನುವುದನ್ನೂ ಮರೆಯುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.