ADVERTISEMENT

ಇಲ್ಲದೆ ಇರುವ ಭಾಷೆ: ನಾಗಾರ್ಜುನ

ಓ.ಎಲ್.ನಾಗಭೂಷಣ ಸ್ವಾಮಿ
Published 12 ಜನವರಿ 2013, 19:59 IST
Last Updated 12 ಜನವರಿ 2013, 19:59 IST
ಇಲ್ಲದೆ ಇರುವ ಭಾಷೆ: ನಾಗಾರ್ಜುನ
ಇಲ್ಲದೆ ಇರುವ ಭಾಷೆ: ನಾಗಾರ್ಜುನ   

ಬುದ್ಧ ತನ್ನ ಸುತ್ತಲ ಜನ ಆಡುವ ನುಡಿಯನ್ನು ಬಳಸಿಕೊಂಡೇ ದುಃಖದಿಂದ ಪಾರಾಗುವ ದಾರಿಯನ್ನು `ಸರಳ'ವಾದ ಮಾತಿನಲ್ಲಿ ಬೋಧಿಸಿದ. ಅತಿರೇಕಗಳಿಗೆ ಗಂಟುಬೀಳಬೇಡಿ, ಮಧ್ಯಮ ಮಾರ್ಗ ಹಿಡಿದು ಸಾಗಿ ಎಂದ. ಬಸವಣ್ಣ ಮಾಡಿದ್ದೂ ಅದನ್ನೇ. ಸುತ್ತಲ ಜನಕ್ಕೆ ತಿಳಿಯುವ ನುಡಿಯಲ್ಲಿ ಕಳಬೇಡ, ಕೊಲಬೇಡ ಇತ್ಯಾದಿಯಾಗಿ `ಸರಳ'ವಾದ ಮಾತಿನಲ್ಲಿ ಬೋಧನೆ ಮಾಡಿದ.

ನುಡಿಯನ್ನು ನಡೆಯೊಳಗಾಗಿಸಿಕೊಳ್ಳಲು, ಅಂದರೆ `ಸರಳ' ಮಾತುಗಳನ್ನೇ ಆಚರಣೆಯಲ್ಲಿ ನಿಜವಾಗಿಸಲು ಹೊರಟಾಗ ಸರಳ ನುಡಿಗಳ ಅರ್ಥ ಅಂದುಕೊಂಡಷ್ಟು ಸುಲಭವಲ್ಲ ಎಂದು ತಿಳಿಯುತ್ತದೆ; `ಸಮರ್ಥ'ವಾಗಿ ವಿವರಿಸುವುದಕ್ಕೆ ತೊಡಗಿದಾಗ ತರ್ಕ, ವಿವರಣೆ, ಸಿದ್ಧಾಂತಗಳ ಕಾಡು ಬೆಳೆಯುತ್ತದೆ.

ಬುದ್ಧನ ಬೋಧನೆಯನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಎರಡು ಚಿಂತನೆಯ ದಾರಿಗಳು ರೂಪುಗೊಂಡವು. ಹೀನಯಾನ ಅಥವಾ ಥೇರಾವಾದ ಅನ್ನುವುದೊಂದು, ಮಹಾಯಾನ ಅನ್ನುವುದು ಇನ್ನೊಂದು. ಮಹಾಯಾನವೆಂಬ ಚಿಂತನೆಯ ಮರದಲ್ಲಿ ಮಾಧ್ಯಮಿಕ ಅನ್ನುವ ಕೊಂಬೆ ಮೂಡಿತು. ಇದಕ್ಕೆ ಕಾರಣರಾದವರಲ್ಲಿ ಕ್ರಿಶ 2ನೆಯ ಶತಮಾನದ ನಾಗಾರ್ಜುನ (ಕ್ರಿಶ 150-250) ಮುಖ್ಯನಾದವನು. ಆಗಿನ ಕರ್ನಾಟಕದಲ್ಲಿ ಹುಟ್ಟಿ ಬೆಳೆದವನು. ಶಾತವಾಹನ ದೊರೆ ಗೌತಮಿಪುತ್ರ, ಈಗಿನ ಬಳ್ಳಿಗಾವೆಯಲ್ಲಿ ಆಗ ಇದ್ದ ಕೋಢಿಮಠವೆಂಬ ಬೌದ್ಧ ವಿಶ್ವವಿದ್ಯಾಲಯದ ಜೊತೆಗೆ ಆತನ ಹೆಸರು ಕೇಳುತ್ತದೆ. ನಲಂದ ವಿಶ್ವವಿದ್ಯಾಲಯದಲ್ಲಿ ಗುರುವಾಗಿದ್ದು, ಕೊನೆಗಾಲದಲ್ಲಿ ಅವನಿಗಾಗಿ ಸಾತಕರ್ಣಿಯು ಶ್ರೀಶೈಲದಲ್ಲಿ ಕಟ್ಟಿಸಿಕೊಟ್ಟ ವಿಹಾರದಲ್ಲಿ ಕಳೆದ ವಿವರಣೆಗಳು ಇವೆ. ನಾಗಾರ್ಜುನ ಸಾಗರ, ನಾಗಾರ್ಜುನ ಕೊಂಡ ಅನ್ನುವ ಹೆಸರುಗಳಲ್ಲಿ ನೆನಪಾಗಿ ಉಳಿದಿದ್ದಾನೆ.  ಬುದ್ಧನ ಚಿಂತನೆಗಳನ್ನು ತಾತ್ವಿಕವಾಗಿ ಸಮರ್ಥನಾಗಿ ಮಂಡಿಸಿದ ನಾಗಾರ್ಜುನನಿಗೆ ಜಗತ್ತಿನ ತತ್ವಶಾಸ್ತ್ರದಲ್ಲೇ ದೊಡ್ಡ ಸ್ಥಾನವಿದೆ. ಅವನ ವಿಚಾರಗಳನ್ನು ಸ್ಥೂಲವಾಗಿ ಮಾತ್ರ ಇಲ್ಲಿ ವಿವರಿಸಬಹುದು.

ಬದುಕಿನಲ್ಲಿ ಅತಿರೇಕದ ದಾರಿ ಹಿಡಿಯಬಾರದು; ತೀವ್ರವಾದ ವೈರಾಗ್ಯ ಅಥವ ಅತಿಯಾದ ಲೌಕಿಕತೆ ಎರಡೂ ಸರಿಯಲ್ಲ; ಅತಿಗಳಿಲ್ಲದ `ಮಧ್ಯಮ ಮಾರ್ಗ' ಬದುಕಿಗೆ ಸೂಕ್ತ ಅನ್ನುವುದು ಬುದ್ಧನ ಬೋಧನೆ. ಈ ಬೋಧನೆಯ ತಾತ್ವಿಕ ರೂಪವೇ ನಾಗಾರ್ಜುನನ ಚಿಂತನೆ. ಭಾಷೆ ಮತ್ತು ಅರ್ಥಗಳನ್ನು ಕುರಿತ ಅವನ ಚಿಂತನೆಗೂ ಇದೇ ಮೂಲ ಆಧಾರ. ಮಧ್ಯಮ ಎಂದರೆ ಶೂನ್ಯತೆ ಎಂಬ ಅರ್ಥವೂ ಇದೆ. ಆರಂಭ ಮತ್ತು ಕೊನೆ ಎರಡೂ ಇಲ್ಲದೆ ನಿರಂತರವಾಗಿ ಹರಿಯುತ್ತಲೇ ಇರುವ ಲೋಕಪ್ರವಾಹವನ್ನು ಗ್ರಹಿಸುವ ವಿಧಾನವೇ ಮಧ್ಯಮಮಾರ್ಗ.

ಸರಿ-ತಪ್ಪು, ಒಳ್ಳೆಯದು-ಕೆಟ್ಟದ್ದು, ಇದೆ-ಇಲ್ಲ, ಸತ್ಯ-ಸುಳ್ಳು, ಇವು ಅರ್ಥದ ಅತಿರೇಕಗಳು, ಎರಡು ತುದಿಗಳು. ನಿನ್ನೆಯ ನೆನಪು-ನಾಳೆಯ ಕನಸು ಭಾವದ ಅತಿರೇಕದ ತುದಿಗಳು. ಸಿದ್ಧಾಂತಗಳೇ ಸತ್ಯವೆನ್ನುವುದು ಬುದ್ಧಿಯ ಅತಿರೇಕ. ವ್ಯವಹಾರದ ಸತ್ಯ ಬೇರೆ ಪರಮಾರ್ಥದ ಸತ್ಯ ಬೇರೆ ಅನ್ನುವುದು ಭಾಷೆಯ ಅತಿರೇಕ. ಅರ್ಥದ ಎರಡು ತುದಿಗಳನ್ನೂ, ಅತಿರೇಕಗಳನ್ನೂ ನಿರಾಕರಿಸುವ ದಾರಿಯಲ್ಲಿ ಸಾಗಿದರೆ ಮನಸಿಗೆ ಬಿಡುಗಡೆ ದೊರೆಯುತ್ತದೆ, ಅರಿವಿನ ಬೆಳಕು ಮೂಡುತ್ತದೆ ಅನ್ನುವುದು ನಾಗಾರ್ಜುನನ ಕಾಣ್ಕೆ.
ಸತ್ಯದ ಅಂತಿಮ ಸ್ವರೂಪದ ಬಗ್ಗೆ ಕೇಳಿದಾಗ ಮೌನವೇ ಬುದ್ಧನ ಉತ್ತರವಾಗಿತ್ತು ಅನ್ನುತ್ತಾರೆ. ಬುದ್ಧ ಒಮ್ಮೆ ಹೀಗೆ ಹೇಳಿದನೆಂದು ವದಂತಿ: `ಲೋಕ ಶಾಶ್ವತವಲ್ಲ ಅಥವ ಅಶಾಶ್ವತವಲ್ಲ; ಆ ಬಗ್ಗೆ ನೀನು ನೀಡುವ ಯಾವುದೇ ಪ್ರಮಾಣ ಕೇವಲ ಸಿದ್ಧಾಂತ, ತತ್ವಗಳ ಅರಣ್ಯ, ಸಿದ್ಧಾಂತಗಳ ಸಿಕ್ಕು, ತತ್ವಗಳ ಸಂಕೋಲೆ; ಅದರಿಂದ ಹತಾಶೆ, ಕೆಡುಕು, ತಳಮಳ, ಜ್ವರ, ತಾಪ; ಇದರಿಂದೆಲ್ಲ ಶಾಂತಿ, ಸಮಾಧಾನ, ನಿರ್ವಾಣದ ವಿವೇಕ ಸಿಗುವುದಿಲ್ಲ. ಈ ಎಲ್ಲ ದೃಷ್ಟಿಗಳಿಂದ ನನಗೆ ಈ ಅಪಾಯ ಕಾಣುತ್ತದೆ, ಇವೆಲ್ಲವನ್ನೂ ನಿರಾಕರಿಸುತ್ತೇನೆ'. ಈ ನಿಲುವನ್ನೇ ನಾಗಾರ್ಜುನನ ಚರ್ಚೆ ಎತ್ತಿಹಿಡಿಯುತ್ತದೆ.

ಅಂದರೆ ನಾಗಾರ್ಜುನ ಒಪ್ಪಿಕೊಂಡ ಅರ್ಥಗಳನ್ನೆಲ್ಲ ನಿರಾಕರಿಸುವ ದಾರಿ ಹಿಡಿದು ಸಾಗುತ್ತಾನೆ. ಆಲೋಚನೆಯ ವಿರುದ್ಧ ಧೃವಗಳನ್ನು ವೈಚಾರಿಕವಾಗಿ ನಿರಾಕರಿಸಿದಾಗ ಸತ್ಯ ಅಥವ ವಾಸ್ತವ ಅನ್ನುವುದು ಅವೆರಡೂ ತುದಿಗಳಲ್ಲಿ ಇಲ್ಲ ಅನ್ನುವುದು ಮನಸಿಗೆ ಗೊತ್ತಾಗುತ್ತದೆ. ಹಾಗೆ ಗೊತ್ತಾದಾಗ ಶೂನ್ಯತೆಯನ್ನು ಅನುಭವಿಸುವುದಕ್ಕೆ ಸಾಧ್ಯವಾಗುತ್ತದೆ.
ದಾವಣಗೆರೆಯಲ್ಲಿ ಒಬ್ಬರು ಶೂನ್ಯತೆ ಅನ್ನುವುದನ್ನು ಸೊನ್ನೆ ಭಾವ ಅಂದಿದ್ದು ಕೇಳಿದ್ದೇನೆ. ಇದು ಅಭಾವವಲ್ಲ, ಇಲ್ಲದಿರುವಿಕೆಯೂ ಅಲ್ಲ. ಅದು ನಿರಂತರವಾಗಿ `ಆಗುವಿಕೆ' ಮಾತ್ರ. ಕೇವಲ ವಿರುದ್ಧಗಳಲ್ಲೇ ಯೋಚನೆ ಮಾಡಿ ಅಭ್ಯಾಸವಾಗಿರುವ ಮನಸ್ಸು ಸಾಮಾನ್ಯವಾಗಿ ಪಡೆಯಲಾಗದ ಗ್ರಹಿಕೆ ಶೂನ್ಯತೆ. ಎರಡು ಅತಿರೇಕಗಳ ಮಧ್ಯ ಇರುವುದನ್ನು ಯಾವುದಕ್ಕೂ ಹೋಲಿಸಲಾಗದ್ದು, ಕಾಣಿಸಲಾಗದ್ದು, ಗ್ರಹಿಸಲಾಗದ್ದು. ನಿಜದ ನಿಜರೂಪದ ದರ್ಶನಕ್ಕೆ ಈ ಮಧ್ಯ ಮಾರ್ಗವೇ ಗತಿ.

ದಾರಿಯಲ್ಲದ ಈ ದಾರಿಯಲ್ಲಿ ಸಾಗುವುದಕ್ಕೆ ಎಲ್ಲ ದ್ವಂದ್ವಗಳನ್ನೂ ಪರಿಶೀಲಿಸಿ ನಿರಾಕರಿಸಬೇಕು. ನಾಗಾರ್ಜುನ ಸುವ್ಯವಸ್ಥಿತವಾಗಿ ಮಾಡುವ ನಿರಾಕರಣೆಗಳಿಗೆ ಬುದ್ಧನ ಎಂಟು ಮಹಾ ನಿರಾಕರಣೆಗಳೇ ಆಧಾರ. ಸೃಷ್ಟಿಯೂ ಇಲ್ಲ, ಪ್ರಳಯವೂ ಇಲ್ಲ; ಶಾಶ್ವತತೆಯೂ ಇಲ್ಲ, ಅಶಾಶ್ವತತೆಯೂ ಇಲ್ಲ; ಏಕತೆಯೂ ಇಲ್ಲ, ಅನೇಕತೆಯೂ ಇಲ್ಲ; ಬರುವುದೂ ಇಲ್ಲ, ಹೋಗುವುದೂ ಇಲ್ಲ ಎಂದು ಬುದ್ಧ ಒಮ್ಮೆ ಹೇಳಿದನಂತೆ. ಲೋಕವನ್ನು ಇದೆ ಎಂದಾಗಲೀ, ಇಲ್ಲ ಎಂದಾಗಲೀ, ಇದೆ-ಇಲ್ಲ ಎರಡೂ ಹೌದೆಂದಾಗಲೀ, ಇದೆ-ಇಲ್ಲ ಎರಡೂ ಅಲ್ಲವೆಂದಾಗಲೀ ವಿವರಿಸಲು ಬಾರದು ಎನ್ನುತ್ತಾನೆ.

ತುಂಬ ತೊಡಕಿನದು ಅನ್ನಿಸುವ ಈ ಕ್ರಮವನ್ನು ನಾಗಾರ್ಜುನ ಯಾಕೆ ಆರಿಸಿಕೊಂಡ ಅನ್ನುವುದಕ್ಕೆ ಚಾರಿತ್ರಿಕ ಕಾರಣಗಳು ಇವೆ ಅನ್ನಿಸುತ್ತದೆ. ದಿನಬಳಕೆಯ ವ್ಯವಹಾರದ ಕಾರಣದಿಂದ ಹಲವು ಸಂಪ್ರದಾಯಗಳು ಹುಟ್ಟಿಕೊಳ್ಳುತ್ತವೆ. ಭಾಷೆಯ ಸಂಪ್ರದಾಯ, ಸಾಮಾಜಿಕ ಸಂಪ್ರದಾಯ, ರಾಜಕೀಯ ಸಂಪ್ರದಾಯ, ನೈತಿಕ ಸಂಪ್ರದಾಯ, ಧಾರ್ಮಿಕ ಸಂಪ್ರದಾಯ ಹೀಗೆ. ಈ ಸಂಪ್ರದಾಯಗಳನ್ನು ಸಮರ್ಥಿಸುವ, ವಿವರಿಸುವ ಭಾಷೆಯೂ ತಯಾರಾಗುತ್ತದೆ. ಬುದ್ಧನಿಗಿಂತ ಮೊದಲಿನ ಹಿಂದೂ ಚಿಂತಕರು ಸಂಪ್ರದಾಯಗಳನ್ನೇ ಸತ್ಯವೆಂದು, ಸಂಪ್ರದಾಯಕ್ಕೆ ವೇದಗಳಲ್ಲಿರುವ ಭಾಷೆಯೇ ಪ್ರಮಾಣವೆಂದು ಹೇಳುತ್ತಿದ್ದರು. ವೇದಗಳ ಭಾಷೆಯ ಸಂಪ್ರದಾಯ `ಸತ್ಯ'ವಾಯಿತು; ಸಮಾಜದಲ್ಲಿ ನಾಲ್ಕು ಜಾತಿಗಳೆಂಬ ಸಂಪ್ರದಾಯ `ಸತ್ಯ'ವಾಯಿತು; ಇವನ್ನು ಆಧರಿಸಿದ ನೀತಿಯ, ನ್ಯಾಯದ ಸಂಪ್ರದಾಯಗಳು `ಸತ್ಯ'ವಾದವು. ಈ ಸಂಪ್ರದಾಯವನ್ನು ಕಾಪಾಡಿಕೊಂಡು ಬರುವುದೇ `ಧರ್ಮ' ಎಂದಾಯಿತು. ಅಂದರೆ `ಸಾಂಪ್ರದಾಯಿಕ ಅರ್ಥ'ಗಳೇ `ಪರಮಾರ್ಥ', ಪರಮ-ಅರ್ಥ, ಅಖಂಡವಾದ ಪರಮಸತ್ಯದ ಅರ್ಥ ಅನ್ನುವ ನಂಬಿಕೆ ಬೇರೂರಿತ್ತು.

ಹಾಗೆಯೇ `ಇಹ'ವು ಸುಳ್ಳು, ಪರವು ಸತ್ಯ ಅನ್ನುವಂಥ ನಂಬಿಕೆಗಳೂ ಇದ್ದವು. ಈ ಅರ್ಥಗಳ ಅತಿರೇಕವನ್ನು ನಿರಾಕರಿಸದೆ ಮಧ್ಯಮ ಮಾರ್ಗ ಕಾಣುವುದು ಸಾಧ್ಯವಿರಲಿಲ್ಲ. ಬುದ್ಧ ಕಂಡುಕೊಂಡ, ನಾಗಾರ್ಜುನ ತಾತ್ವಿಕವಾಗಿ ಪ್ರತಿಪಾದಿಸಿದ ಮಧ್ಯಮ ಮಾರ್ಗವು ಸಂಪ್ರದಾಯಗಳನ್ನೇ ಪರಮ ಸತ್ಯವೆಂದು ನಂಬಿಕೊಂಡು ಬದುಕುವ, ಅಥವ ಇದರಿಂದ ಪಾರಾಗಿ ಮತ್ತೊಂದು ಲೋಕವನ್ನು ಪಡೆಯಲು ಬಯಸುವ ಎರಡು ಅತಿರೇಕದ ದಾರಿಗಳ ನಿರಾಕರಣೆ ಎಂದು ತೀರ ಸರಳವಾಗಿ ವಿವರಿಸಿಕೊಳ್ಳಬಹುದು.

ಭಾಷೆಗಷ್ಟೇ ಕಿರಿದುಗೊಳಿಸಿಕೊಂಡು ನೋಡೋಣ. ನಾವು ಬಳಸುವ ಭಾಷೆಗೂ ಲೋಕದಲ್ಲಿ `ಇರುವ' ಸತ್ಯಕ್ಕೂ ಸಂಬಂಧವಿದೆ ಅನ್ನುವ ನಿಲುವು ಏನೇನು ಅನಾಹುತ ಮಾಡಬಹುದು ನೋಡಿ. ನನ್ನೆದುರು ಮೇಜು ಇದೆ, ಬೆಕ್ಕು ಇದೆ. ಇದು ಸರಿ. ಆದರೆ ಸತ್ಯವು ಇದೆ, ನ್ಯಾಯವು ಇದೆ, ಮೋಕ್ಷವು ಇದೆ ಅಂದರೆ ಹೇಗೆ? ವಾಕ್ಯಗಳ ಸ್ವರೂಪ ಒಂದೇ ಇರಬಹುದು. ಆದರೆ `ಸತ್ಯ'ಕ್ಕೂ ಭಾಷೆಗೂ ಸಂಬಂಧ ಇದೆಯೇ? ನನ್ನ ಬಳಿ ಇರುವುದು ನನ್ನ ಅಪ್ಪ, ನನ್ನ ತಾತ ಬಳಸುತಿದ್ದ ಮೇಜು. ಅದು ಅಮೂಲ್ಯವೋ? ನಮ್ಮ ಅಜ್ಜ ನೆಟ್ಟಿದ್ದ ಆಲದ ಮರ ಶ್ರೇಷ್ಠವೋ? ಇಂಥ ಯಾವ ಉದಾಹರಣೆಯನ್ನಾದರೂ ತೆಗೆದುಕೊಳ್ಳಿ. ಶ್ರೇಷ್ಠತೆ, ಅಮೂಲ್ಯ, ಒಳ್ಳೆಯ, ಕೆಟ್ಟ, ಇಂಥ ಯಾವ ಸ್ವಭಾವವೂ ಮೇಜಿನಲ್ಲಿ, ಮರದಲ್ಲಿ ಇರುವುದಿಲ್ಲ, ನನಗೂ, ಅವಕ್ಕೂ ಇರುವ ಸಂಬಂಧದಲ್ಲಿ ಇರುತ್ತದೆ. ನಾವು ಯಾವುದನ್ನು ಸತ್ಯವೆಂದು ವಾದಿಸುತ್ತೇವೋ ಅವೆಲ್ಲ ಹಲವು ಬಗೆಯ ಸಂಬಂಧಗಳ ಕಾರಣದಿಂದ ಹುಟ್ಟಿಕೊಳ್ಳುತ್ತವೆ. ಲೋಕದಲ್ಲಿ ಯಾವ ವಸ್ತುವಿಗೂ, ಯಾವ ಕ್ರಿಯೆಗೂ ಹಾಗೆ ಸ್ಥಿರವಾದ ಸ್ವ-ಭಾವ ಇರುವುದಿಲ್ಲ. 

ಹಾಗೆ ಸ್ವ-ಭಾವ ಇಲ್ಲ ಅನ್ನುವುದನ್ನು ತಿಳಿಯುವುದಕ್ಕೆ ಸತ್ಯವನ್ನು ಕುರಿತ ಹೇಳಿಕೆಗಳನ್ನು ನಿರಾಕರಿಸುವ ತಾಕತ್ತು ಬೇಕಾಗುತ್ತದೆ. ನಾಗಾರ್ಜುನ ಅವನ ಕಾಲದ ಎಲ್ಲ ಪ್ರಮುಖ ದರ್ಶನಗಳನ್ನೂ ಅತ್ಯಂತ ಪ್ರಬಲವಾದ ತರ್ಕ, ವಾದಗಳ ಮೂಲಕ ನಿರಾಕರಿಸುತ್ತಾನೆ. ನಿರಾಕರಣೆಯ ಮೂಲಕವೇ ಶೂನ್ಯತೆಯ ಅರಿವು ಮೂಡುತ್ತದೆ, ಮಧ್ಯಮ ಮಾರ್ಗ ಕಾಣುತ್ತದೆ ಅನ್ನುತ್ತಾನೆ. ಗಮನಿಸಬೇಕಾದ ಮಾತೆಂದರೆ ಶೂನ್ಯವೆಂದರೆ ಏನು ಎಂದು ಹೇಗೆ ವಿವರಿಸಿದರೂ ಅವೆಲ್ಲ ವಿವರಣೆಗಳನ್ನೂ ನಿರಾಕರಿಸಬೇಕು! ಶೂನ್ಯವೆಂದರೆ ಏನೂ ಇಲ್ಲ ಅಂತಲ್ಲ, ಇದೆ ಅಂತಲ್ಲ; ಇದೆ ಅನ್ನುವುದಕ್ಕೂ ಇಲ್ಲ ಅನ್ನುವುದಕ್ಕೂ ಕೊಡುವ ಸಮರ್ಥನೆಗಳೂ ಅಲ್ಲ.

ಸದಾ ಆಗುತ್ತಿರುವ, ಬದಲಾಗುತ್ತಿರುವ, ಬಗೆ ಬಗೆಯ ಸಂಬಂಧಗಳ ಫಲಿತಾಂಶವಾಗಿಯೇ ಮೂಡುವ ಅರ್ಥ ಕೂಡ ಸ್ಥಿರವಲ್ಲ; ಈ ಎಲ್ಲ ಇಲ್ಲ ಮತ್ತು ಅಲ್ಲಗಳ ಮೂಲಕವೇ ಬಿಡುಗಡೆ, ನಿರ್-ವಾಣಿಯಾಗಿರುವ ಬಿಡುಗಡೆ ದೊರೆಯುತ್ತದೆ.  ಬದುಕು ಬೇರೆಯಲ್ಲ, ನಿರ್ವಾಣ ಬೇರೆಯಲ್ಲ ಅನ್ನುವುದು ತಿಳಿಯುತ್ತದೆ. ವೈರುಧ್ಯಗಳು ಕುಸಿದು ಬಿದ್ದು, ಅಸಂಗತವಾಗಿ; ತೋರಿಕೆಯ ವಿರೋಧಗಳು ನಿಜವಾಗಿ ಇಲ್ಲ ಅನ್ನುವುದು ಹೊಳೆದು; ಉತ್ಪಾದನೆಯಾಗಲೀ ನಾಶವಾಗಲೀ, ಶಾಶ್ವತವಾಗಲೀ ಅಶಾಶ್ವತವಾಗಲೀ ಇಲ್ಲ ಅನ್ನುವುದು, ಗೊತ್ತಾಗುತ್ತದೆ. ವಿರೋಧಗಳ ನಡುವೆ ವಿರೋಧವೇ ಇಲ್ಲ ಅನ್ನುವುದು ಹೊಳೆಯುತ್ತದೆ.

ಫಲವೇನು? ಅದನ್ನು ಲೋಕಕ್ಕೆ ತಿಳಿಸುವುದು ಹೇಗೆ? ಭಾಷೆಯೇ ಬೇಕಲ್ಲವೇ?
ಇದರ ಅರ್ಥ ನಿತ್ಯದ ಬದುಕಿನಲ್ಲಿ ಕಾಣುವ, ಗ್ರಹಿಸುವ ವ್ಯತ್ಯಾಸಗಳನ್ನು ನಿರಾಕರಿಸುವದೆಂದರೆ ಅವು ಅನುಪಯುಕ್ತವೆಂದು ಹೇಳಿದಂತಲ್ಲ. ಅರ್ಥವು ಕಟ್ಟಿಕೊಂಡದ್ದೇ ಹೊರತು ಇರುವಂಥದಲ್ಲ ಅನ್ನುವ ಅರಿವನ್ನು ಪಡೆಯುವುದು ಮುಖ್ಯ. ಇರುವ ಭಾಷೆಯ ಮೂಲಕವೇ ಇಲ್ಲದ, ಅಥವ ಇದೆಯೆಂದು ಭಾವಿಸಿದ ಸತ್ಯಗಳನ್ನು ಕಾಣುವುದಕ್ಕೆ ಹೆಣಗುವುದಲ್ಲದೆ ಬೇರೆ ದಾರಿ ಏನಿದೆ!

ಅಲ್ಲಮನ ವಿಚಾರ ಕ್ರಮಕ್ಕೂ ನಾಗಾರ್ಜುನನ ವಿಚಾರ ಕ್ರಮಕ್ಕೂ ಅನೇಕ ಸಮಾನಾಂಶಗಳು ಹೊಳೆಯುತ್ತವೆ. ಕಾಶ್ಮೀರ ಶೈವದ ಅಭಿನವಗುಪ್ತನು ಕಾವ್ಯದ ಬಗ್ಗೆ ವಿಚಾರ ಮಾಡುತ್ತ ಅರ್ಥದ ಮಿತಿಗಳನ್ನು, ಅತಿರೇಕದ ಮಿತಿಗಳನ್ನು ಮೀರಿದ ಧ್ವನಿಯ ಪ್ರಸ್ತಾಪ ಮಾಡಿದ್ದೂ ನೆನಪಿಗೆ ಬರುತ್ತದೆ. ಕಳೆದ ಕೆಲವು ದಶಕಗಳಲ್ಲಿ ವ್ಯಾಪಕವಾಗಿ ಕೇಳುತ್ತಿರುವ ನಿರಚನಾವಾದ, ಆಧುನಿಕೋತ್ತರ ತಾತ್ವಿಕ ಚಿಂತನೆ ಇವೆಲ್ಲವುಗಳ ಮೂಲ ಪುರುಷ ನಾಗಾರ್ಜುನ ಅನಿಸುತ್ತದೆ. ಅವನ ಪ್ರಜ್ಞಾಪಾರಮಿತ ಸೂತ್ರವು ಮೊದಲು ಚೀನೀ ಭಾಷೆಗೆ, ಆನಂತರ ಏಶಿಯದ ವಿವಿಧ ನುಡಿಗಳಿಗೆ, ಪಾಶ್ಚಾತ್ಯ ಲೋಕಕ್ಕೆ ತಲುಪಿತು. ಆಧುನಿಕ ತತ್ವಶಾಸ್ತ್ರದಲ್ಲಿ, ಸೌಂದರ್ಯಶಾಸ್ತ್ರದ ಚಿಂತನೆಯಲ್ಲಿ ಅವನ ಪ್ರಾಮುಖ್ಯ ಅರಿವಿಗೆ ಬರುತ್ತಿದೆ. ನಾಗಾರ್ಜುನನನ್ನು ಕುರಿತು 2009ರಲ್ಲಿ ಜಾನ್ ವೆಸ್ಟರ್‌ಹಾಫ್ ಬರೆದಿರುವ ಪುಸ್ತಕ ನಾಗಾರ್ಜುನಾಸ್ ಮಾಧ್ಯಮಕ ಒಳ್ಳೆಯ ಪ್ರವೇಶವನ್ನು ಒದಗಿಸಿದರೆ, 2008ರಲ್ಲಿ ರಿಚರ್ಡ್ ಶುಸ್ಟರ್‌ಮನ್ ಸಂಪಾದಿಸಿರುವ ಈಸ್ಥಟಿಕ್ಸ್ ಪುಸ್ತಕದಲ್ಲಿ ಸೌಂದರ್ಯಮೀಮಾಂಸೆಯ ನಿರೂಪಣೆಗೆ ನಾಗಾರ್ಜುನನ ಚಿಂತನೆ ಬಳಕೆಯಾಗಿರುವುದನ್ನು ನೋಡಬಹುದು.

ನಟರಾಜ ಬೂದಾಳು ಅವರು ನಾಗಾರ್ಜುನನ ಮೂಲಮಾಧ್ಯಮ ಕಾರಿಕೆಯ ಕನ್ನಡ ಅನುವಾದವನ್ನು ಮಾಡಿದ್ದಾರೆ; ನಾಗಾರ್ಜುನನನ್ನು ಅರಿಯುವುದಕ್ಕೆ ಸಹಾಯಕವಾದ ಕಿರು ಹೊತ್ತಿಗೆಯನ್ನು ರಚಿಸಿದ್ದಾರೆ. ನಾಗಾರ್ಜುನನಂಥ ಚಿಂತಕನ ವಿಚಾರಗಳು ಕನ್ನಡದ ಶೈಕ್ಷಣಿಕ ವಲಯದಲ್ಲಿ ಇನ್ನೂ ಸ್ಥಾನಪಡೆಯಬೇಕಾಗಿದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.