ADVERTISEMENT

ಕೃತಕ ಭಾಷೆ, ಕೃತಕ ವಿವೇಕ

ಓ.ಎಲ್.ನಾಗಭೂಷಣ ಸ್ವಾಮಿ
Published 22 ಡಿಸೆಂಬರ್ 2012, 19:59 IST
Last Updated 22 ಡಿಸೆಂಬರ್ 2012, 19:59 IST
ಇದು ದುರಾಸೆಯೋ ಮಹತ್ವಾಕಾಂಕ್ಷೆಯೋ ಅಸಾಧ್ಯವಾದುದನ್ನು ಸಾಧಿಸಬೇಕೆಂಬ ಮನುಷ್ಯ ಛಲವೋ ಗೊತ್ತಿಲ್ಲ. ಜಗತ್ತಿನ ಎಲ್ಲ ಮನುಷ್ಯರ ಜೊತೆ ಸಂವಾದ ನಡೆಸುವುದು ಹೇಗೆ? ಎಷ್ಟೆಂದು ಭಾಷೆಗಳನ್ನು ಕಲಿಯುವುದಕ್ಕೆ ಸಾಧ್ಯ? ಅಥವ ಎಷ್ಟೆಂದು ಅನುವಾದ ಮಾಡುತ್ತ ಕೂರುವುದು?

ಜಗತ್ತಿನ ಎಲ್ಲ ದೇಶಗಳ ಎಲ್ಲ ಭಾಷೆಗಳ ಜನರೂ ಪರಸ್ಪರ ಸಂವಾದ ನಡೆಸುವಂಥ ಭಾಷೆಯೊಂದು ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ನಮಗೆ ಹುಟ್ಟಿನಿಂದ ದೊರೆತ ಸಹಜ ಭಾಷೆಯ ಜೊತೆಗೆ ಅದೊಂದು ಭಾಷೆಯನ್ನು ಕಲಿತಿದ್ದರೆ ಸಾಕಾಗುತ್ತಿತ್ತು. 
 
ಅಂಥ ಭಾಷೆಯ ಪೌರಾಣಿಕ ಕಲ್ಪನೆ ಸಮವಸರಣದ್ದು. ತೀರ್ಥಂಕರನಿಗೆ ಕೇವಲ ಜ್ಞಾನ ಲಭಿಸಿದ ನಂತರ ಆತ ಸಮವಸರಣ ಮಂಟಪದಲ್ಲಿ ಸಂಗೀತದಷ್ಟು ಮೃದುವಾಗಿ ಮಾಡುವ ಬೋಧನೆ ಅಲ್ಲಿ ನೆರೆದ ಋಷಿ, ಮುನಿ, ಬೇರೆ ಬೇರೆ ಭಾಷೆಗಳನ್ನಾಡುವ ಜನರು, ಪ್ರಾಣಿ, ಪಕ್ಷಿಗಳಿಗೆಲ್ಲ ಅವರವರ ಭಾಷೆಯಲ್ಲೇ ಅರ್ಥವಾಗುತ್ತಿತ್ತು ಅನ್ನುವ ಕಲ್ಪನೆ ಇದೆ.
 
ಅಂಥದೊಂದು ಭಾಷೆ ಇಲ್ಲ, ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೇ ಎಂಬ ಹಂಬಲ ಮನುಷ್ಯನನ್ನು ಕಾಡಿದೆ. ಜಗತ್ತನ್ನೆಲ್ಲ ಆಳಲು ಬಯಸಿದ ಪಶ್ಚಿಮದ ದೇಶಗಳಲ್ಲಿ ಇಂಥ ಕನಸಿಗೆ ರೆಕ್ಕ ಪುಕ್ಕ ಬಲಿತು ಹಾರಾಟ ಶುರುವಾಗಿದ್ದು ಹದಿನಾರನೆಯ ಶತಮಾನದ ಕೊನೆಯ ಹೊತ್ತಿಗೆ. ಅಂಥದೊಂದು ಕೃತಕ ಅಂದರೆ ಮನುಷ್ಯ ನಿರ್ಮಿತ ಭಾಷೆ ಹೇಗಿರಬೇಕು? ಕಲಿಯಲು ಸುಲಭವಾಗಿರಬೇಕು; ಅದರ ವ್ಯಾಕರಣದ ನಿಯಮಗಳು ಖಚಿತವಾಗಿ, ಸರಳವಾಗಿ ಇರಬೇಕು.

ಯಾವ ನಿಯಮಕ್ಕೂ ವಿನಾಯತಿ ಇರಬಾರದು; ಉಚ್ಚರಿಸಲು ಕಷ್ಟವಾಗುವ ಧ್ವನಿಗಳು ಇರಬಾರದು; ಮಾತಾಡುವ ಕ್ರಮಕ್ಕೂ ಬರೆಯುವ ಕ್ರಮಕ್ಕೂ ವ್ಯತ್ಯಾಸ ಇರಬಾರದು. ಯಾವುದೇ ನುಡಿತಾಯಿಯ ಮಕ್ಕಳೂ ಅದನ್ನು ತಮ್ಮ ತಾಯಿನುಡಿಗೆ, ತಮ್ಮ ಭಾಷೆಯಲ್ಲಿರುವುದನ್ನು ಅದಕ್ಕೆ ಸುಲಭವಾಗಿ ಅನುವಾದಿಸುವದಕ್ಕೆ ಸಾಧ್ಯವಾಗಬೇಕು.

ಆ ಭಾಷೆಯ ಪದದ ವ್ಯತ್ಪತ್ತಿ ಎಲ್ಲರಿಗೂ ತಿಳಿಯುವಂತಿರಬೇಕು. ಯಾವುದೇ ನಿರ್ದಿಷ್ಟ ಧರ್ಮ ಅಥವ ದೇಶದ ಪಕ್ಷಪಾತಿಯಾಗಿದೆ ಈ ಭಾಷೆ ಅನ್ನಿಸದೆ ನಿರ್ಲಿಪ್ತವಾಗಿರಬೇಕು. ದಿನನಿತ್ಯದ ಮಾತುಕತೆಯನ್ನೂ ಒಳಗೊಂಡು ವಿವಿಧ ವಿಷಯಗಳನ್ನು ಕುರಿತು ಹೇಳಲು ತಿಳಿಯಲು ಸಹಾಯಕವಾಗಿರಬೇಕು?
 
ಅಂಥದೊಂದು ಭಾಷೆಯನ್ನು ಸೃಷ್ಟಿಸುವ ಆಸೆಯಲ್ಲಿ ಹದಿನೇಳನೆಯ ಶತಮಾನದಿಂದ ಇಲ್ಲಿಯವರೆಗೆ ಸುಮಾರು ಇಪ್ಪತ್ತಮೂರು ಭಾಷೆಗಳು ಸೃಷ್ಟಿಯಾಗಿವೆ. ಕೃತಕ ಭಾಷೆ ಅನ್ನುವುದು ಯಾಕೋ ಇರಿಸುಮುರಿಸು ಅನ್ನಿಸಿ ಸಹಾಯಕಭಾಷೆ ಅನ್ನುವ ಗಂಭೀರ ನಾಮಕರಣವಾಗಿ 1951ರಲ್ಲಿ ಇಂಟರ್ ಲಿಂಗ್ವಾ: ಇಂಟರ್‌ನ್ಯಾಶನಲ್ ಆಕ್ಸಿಲರಿ ಲಾಂಗ್ವೇಜ್ ಅಸೋಸಿಯೇಷನ್ ಕೂಡ ಸ್ಥಾಪನೆಯಾಯಿತು. 
 
ಭಾಷೆಯನ್ನು ಕಾರ್ಯ ಎಂದಿಟ್ಟುಕೊಂಡರೆ ಅದರ ಕಾರಣವನ್ನು ಮೊದಲು ಕಂಡುಕೊಂಡು ಅದರ ಆಧಾರದ ಮೇಲೆ ಹೊಸ ಭಾಷೆಯನ್ನು ಸೃಷ್ಟಿಸುವುದು ಕಾರಣ-ಕಾರ್ಯದ ವಿಧಾನ. ಹಲವು ಭಾಷೆಗಳ ಕಾರ್ಯವನ್ನೇ ಮುಖ್ಯವಾಗಿ ಗಮನಿಸಿ ಅದರ ಆಧಾರದ ಮೇಲೆ ಸ್ಪಷ್ಟವಾದ ನಿಯಮಗಳನ್ನು ಸಂಯೋಜಿಸಿ ರೂಪಿಸಿ ಹೊಸ ಭಾಷೆ ಸೃಷ್ಟಿಸುವುದು ಇನ್ನೊಂದು ವಿಧಾನ.

ಇಂಥ ಪ್ರಯತ್ನಗಳಲ್ಲಿ ತುಂಬ ವಿಶೇಷವಾಗಿ ಕಾಣುವುದು 1827ರಲ್ಲಿ ಫ್ರೆಂಚ್ ಸಂಗೀತ ವಿದ್ವಾಂಸ ಜೀನ್ ಫ್ರಾಂಕೋಯಿಸ್ ಸುದ್ರೆ ರೂಪಿಸಿದ ಸೊಲೆಸ್ರಾಲ್ ಎಂಬ ವಿಶ್ವಾತ್ಮಕ ಸಂಗೀತ ಭಾಷೆ. ಸಂಗೀತದ ಏಳು ಸ್ವರಗಳೇ ಈ ಭಾಷೆಗೆ ಮೂಲಾಧಾರ. ನಿ-ಹೌದು, ಸ-ಇಲ್ಲ, ಸರಿ-ನಾನು, ಸಗ-ನೀನು, ಸರಿಸ-ಟೈಮು, ಸರಿಗ-ದಿನ, ಸರಿಮ-ವಾರ, ಸರಿಪ-ವರ್ಷ, ಸರಿನಿ-ಶತಮಾನ ಹೀಗೆ; ನಾಲ್ಕು ಸ್ವರಗಳನ್ನು ಆಯ್ದು ಒಂದೊಂದೂ ಒಂದೊಂದು ವಲಯಕ್ಕೆ ಸಂಬಂಧಿಸಿದ್ದು ಎಂದು ನಿಗದಿ.

`ದ' ಅನ್ನುವುದು ಕೈಗಾರಿಕೆ, ವಾಣಿಜ್ಯಕ್ಕೆ ಹೀಗೆ. ಐದು ಸ್ವರಗಳ ಸಂಯೋಜನೆಯ ಮುಖಾಂತರ ಪ್ರಾಣಿ, ಸಸ್ಯ, ಖನಿಜ, ಇತ್ಯಾದಿ ಒಂಬತ್ತು ಸಾವಿರ ಪದಗಳ ಕೋಶ; ವಿರುದ್ಧಾರ್ಥಕ್ಕೆ ಸ್ವರಗಳ ಅನುಕ್ರಮದ ಅದಲುಬದಲು: ಗಪ-ಒಳ್ಳೆಯದು, ಗಪ-ಕೆಟ್ಟದ್ದು ಹೀಗೆ. ಈ ಭಾಷೆಯನ್ನು ವಾದ್ಯದಲ್ಲಿ ನುಡಿಸಬಹುದು, ಹಾಡಬಹುದು, ಮಾತಾಡಬಹುದು, ಸಿಳ್ಳೆ ಹಾಕಬಹುದು.

ಕೆಲವು ದಶಕಗಳ ಕಾಲ ಜನಪ್ರಿಯವಾಗಿದ್ದ ಭಾಷೆ ಕಲಿಯುವುದು ಕಷ್ಟವಾಗಿ, ಸದ್ದುಗಳ ಏಕತಾನದಿಂದ ಬೇಸರ ಹುಟ್ಟಿಸಿ ಕಣ್ಮರೆಯಾಯಿತು. ಜೊಹಾನ್ ಮಾರ್ಟಿನ್ ಶ್ಲೈಯರ್ 1880ರಲ್ಲಿ `ವೊಲಪುಕ್' ಎಂಬ ಎಂಟು ಸ್ವರ, 20 ವ್ಯಂಜನಗಳ ಇಂಗ್ಲಿಶ್ ಮತ್ತು ಜರ್ಮನ್ ಆಧಾರಿತ ಭಾಷೆಯನ್ನು ಸೃಷ್ಟಿಸಿದ. ಇದು ಮತ್ತು 1887ರಲ್ಲಿ ಲುಡ್ವಿಗ್ ಲಾಝರಸ್ ಝಮೆನ್‌ಹಾಫ್ ಎಂಬ ನೇತ್ರತಜ್ಞ ತನ್ನ ಹದಿನೈದನೆಯ ವಯಸ್ಸಿನಲ್ಲಿ `ಎಸ್ಪರಾನ್ತೊ' ಅನ್ನುವ ಭಾಷೆ ಸೃಷ್ಟಿಸಿದ. ಮನೆಯಲ್ಲಿ ರಶಿಯನ್, ಯಿದ್ದಿಶ್, ಪೋಲಿಶ್, ಹೀಬ್ರೂ ಬಳಕೆಯಾಗುತಿತ್ತು; ಶಾಲೆಯಲ್ಲಿ ಲ್ಯಾಟಿನ್, ಗ್ರೀಕ್, ಫ್ರೆಂಚ್, ಜರ್ಮನ್ ಕಲಿತಿದ್ದ; ಐದು ಸ್ವರ, 23 ವ್ಯಂಜನ, ಪಶ್ಚಿಮ ಯೂರೋಪಿನ ಪ್ರಮುಖ ಭಾಷೆಗಳ ಶಬ್ದಕೋಶ ಅಳವಡಿಸಿಕೊಂಡು ಕಲಿಯಲು ಬಲುಮಟ್ಟಿಗೆ ಸುಲಭವಾದ ವ್ಯಾಕರಣ ನಿಯಮ ರೂಪಿಸಿದ.

ವಿಶ್ವಕ್ಕೆಲ್ಲ ಒಂದೇ ಭಾಷೆ ಒಂದೇ ಧರ್ಮ ಇರಬೇಕು ಅನ್ನುವುದು ಅವನ ಅಪೇಕ್ಷೆ. ಹೊಮರಾನಿಸ್ಮೊ-ಮನುಕುಲದ ಸದಸ್ಯರೆಲ್ಲರ ಧರ್ಮ ಎಂದು ಹೊಸ ಧರ್ಮವನ್ನು ಹುಟ್ಟುಹಾಕಿದ (ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಕಲ್ಪನೆಯಂಥದ್ದು). ಇದೇ ಕಾರಣದಿಂದ ಭರವಸೆ ಎಂಬ ಅರ್ಥದ ಎಸ್ಪರಾನ್ತೊ ಭಾಷೆಯ ಪ್ರತಿಪಾದಕರಲ್ಲಿ ಭಿನ್ನಾಭಿಪ್ರಾಯ ಹುಟ್ಟಿತು. ಭಾಷೆ ಎಂದೂ ಭಾವೈಕ್ಯವನ್ನು ತರಲಾರದು. ಆದರೂ ಜಗತ್ತಿನ ಪ್ರಮುಖ ಕೃತಿಗಳು ಎಸ್ಪರಾನ್ತೊಗೆ ಭಾಷಾಂತರವಾಗಿವೆ, ಸುಮಾರು ಆರುನೂರು ಶಾಲೆಗಳು, ಮೂವತ್ತೊಂದು ವಿಶ್ವವಿದ್ಯಾಲಯಗಳು ಎಸ್ಪರಾನ್ತೊ ಕಲಿಸುತ್ತವೆ, ನಿಯತಕಾಲಿಕಗಳೂ ಇವೆ. ಸುಮಾರು 15 ಮಿಲಿಯನ್ ಜನ ಇದನ್ನು ಬಳಸುತ್ತಾರಂತೆ. 
 
ಸಹಜ ಭಾಷೆಯನ್ನೇ ವಿಶಿಷ್ಟ ಕೃತಕತೆಯಲ್ಲಿ ಬಳಸಿರುವ ಎರಡು ನಿದರ್ಶನಗಳು ತೆಲುಗು ಮತ್ತು ಕನ್ನಡದಲ್ಲಿ ಸುಮಾರಾಗಿ ಒಂದೇ ಸಮಯದಲ್ಲಿ ನಡೆದವು. 17ನೆಯ ಶತಮಾನದ ಪಿಂಗಳಿ ಸೂರಿ ಎಂಬ ಕವಿ, (ಅವನ ಕಾದಂಬರಿಯಂಥ `ಕಲಾಪೂರ್ಣೋದಯ'ವನ್ನು ಶೇಷಶಾಸ್ತ್ರಿಗಳು ಕನ್ನಡಕ್ಕೆ ಅನುವಾದಿಸಿದ್ದಾರೆ) `ರಾಘವಪಾಂಡವೀಯ' ಅನ್ನುವ ಕೃತಿ ರಚಿಸಿದ್ದಾನೆ.

ಇದರ ಒಂದೊಂದೂ ಪದ್ಯವನ್ನು ರಾಮಾಯಣದ ನಿರೂಪಣೆಯಾಗಿಯೂ ಮಹಾಭಾರತದ ನಿರೂಪಣೆಯಾಗಿಯೂ ಓದಬಹುದು. ಕೋಲಾರ ಜಿಲ್ಲೆಯ ನಂದಿಬೆಟ್ಟದ ಬಳಿಯ ಹಳ್ಳಿಯಲ್ಲಿ ದೊರೆತ ಕುಮುದೇಂದು ಬರೆದಿರುವ `ಸಿರಿಭೂವಲಯ' ಬಹುಶಃ ಜಗತ್ತಿನಲ್ಲೇ ವಿಶಿಷ್ಟವಾದ ಬಹುಭಾಷಿಕ ಕೃತಿ. ಬರೆದಾತ ಕನ್ನಡದವನಾದರೂ ಇದು ಅಕ್ಷರಗಳನ್ನಲ್ಲ ಕನ್ನಡ ಅಂಕಿಗಳನ್ನು ಆಧಾರವಾಗಿಟ್ಟುಕೊಂಡ `ಅಂಕಕಾವ್ಯ'. ಇದರ 1270 ಚಕ್ರಗಳು ದೊರೆತಿವೆ. ಒಂದೊಂದು ಚಕ್ರದಲ್ಲೂ 27 ಗಿ 27 `ಮನೆ'ಗಳಿವೆ.

ಒಂದೊಂದು ಮನೆಯಲ್ಲೂ 1ರಿಂದ 64ರವರೆಗೆ ಕನ್ನಡ ಅಂಕಿಗಳಿವೆ. ಈ ಅಂಕಿಗಳನ್ನು ಅಕ್ಷರಗಳಾಗಿ ಪರಿವರ್ತಿಸಿಕೊಂಡರೆ ಕನ್ನಡ, ತೆಲುಗು, ಸಂಸ್ಕೃತ, ಮರಾಠಿ, ಪ್ರಾಕೃತ ಮೊದಲಾಗಿ 718 ಭಾಷೆಗಳಲ್ಲಿ ಇದನ್ನು ಓದಬಹುದು ಅನ್ನುತ್ತಾರೆ. ಒಟ್ಟು ಐವತ್ತೊಂಬತ್ತು ಅಧ್ಯಾಯಗಳ ಸುಮಾರು ಆರು ಲಕ್ಷ ಪದ್ಯಗಳಿರುವ ಈ ಕೃತಿಯಲ್ಲಿ ವೇದ, ರಾಮಾಯಣ, ಮಹಾಭಾರತ, ಮತ್ತು ಜೈನ ಸಾಹಿತ್ಯಕೃತಿಗಳು, ಹಲವು ಶಾಸ್ತ್ರಕೃತಿಗಳ ನಿರೂಪಣೆಯನ್ನು ಕಾಣಬಹುದು ಅನ್ನುತ್ತಾರೆ.

ಆಯುರ್ವೇದ ವಿದ್ವಾಂಸ ಯಲ್ಲಪ್ಪ ಶಾಸ್ತ್ರಿ, ಸ್ವಾತಂತ್ರ್ಯ ಹೋರಾಟಗಾರ ಕರ್ಲಮಂಗಲಂ ಶ್ರಿಕಂಠಯ್ಯ, ಕನ್ನಡ ಬೆರಳಚ್ಚು ಅಭಿವೃದ್ಧಿಪಡಿಸಿದ ಅನಂತ ಸುಬ್ಬರಾವ್ ಇವರ ಶ್ರಮದಿಂದ ಬೆಳಕು ಕಂಡ ಕೃತಿ ಇತ್ತೀಚೆಗೆ ಟಿ.ವಿ. ವೆಂಕಟಾಚಲ ಶಾಸ್ತ್ರಿಗಳಿಂದ ಸಂಪಾದಿತವಾಗಿದೆ. `ಕನಕ ಮುಸುಕು' ಕಾದಂಬರಿಯಲ್ಲಿ ಜಿ.ವಿ. ಗಣೇಶಯ್ಯ `ಸಿರಿಭೂವಲಯ'ದ ಸೂತ್ರಗಳನ್ನು ಕಥಾ ನಿರೂಪಣೆಯಲ್ಲಿ ಬಳಸಿಕೊಂಡಿದ್ದಾರೆ. 
ಭಾಷೆಯನ್ನು ಅಂಕಿಗಳಾಗಿ ಪರಿವರ್ತಿಸಿ ಬಹುಭಾಷಿಕ ಪಠ್ಯವನ್ನು ನಿರ್ಮಿಸಿದ ಈ ಪ್ರಯತ್ನ ತೀರ ವಿಶಿಷ್ಟವೇ ಸರಿ.

ಈ ಕೃತಿಯ ಬಹುಭಾಗವನ್ನು ಇನ್ನೂ ಓದಲು ಆಗಿಲ್ಲ ಅನ್ನುತ್ತಾರೆ ವಿದ್ವಾಂಸರು. ಅಂದಹಾಗೆ, ಅಂಕಿಗಳಿಗಿಂತ ವಿಶ್ವಾತ್ಮಕವಾದದ್ದು ಬೇರೇನಿದೆ? ನಾನು ಬರೆಯಲು ಬಳಸುತ್ತಿರುವ ಲ್ಯಾಪ್ ಟಾಪು, ನೀವು ಓದುತ್ತಿರುವ ಪ್ರಜಾವಾಣಿ, ಬ್ಯಾಂಕಿನ ಎಟಿಎಂ, ಸಂಗೀತದ ಸಿ.ಡಿ, ಸಿನಿಮಾದ ಸಿ.ಡಿ, ಜಗತ್ತಿನ ಕಂಪ್ಯೂಟರುಗಳೆಲ್ಲ ಅಂಕಿಯ ಭಾಷೆಯನ್ನೇ ಬಳಸುವುದು.

ಕಂಪ್ಯೂಟರಿಗೆ ಅರ್ಥವಾಗುವದು, ಅದು ಪಠ್ಯವೇ ಇರಲಿ, ಚಿತ್ರವೇ ಇರಲಿ, ಸಂಗೀತವೇ ಇರಲಿ ಆಫ್ ಮತ್ತು ಆನ್, (ವಿದ್ಯುತ್ ಪ್ರವಾಹ ಇದೆ ಅಥವ ಇಲ್ಲ) ಎಂಬ ಎರಡೇ ಸೂಚನೆ. ಅದನ್ನು ಅಂಕಿಗಳಿಗೆ ಪರಿವರ್ತಿಸಿದರೆ 0 ಮತ್ತು 1 ಎಂಬ ಅಂಕಿ. ಈ ಎರಡೇ ಅಂಕಿಗಳ ಆಧಾರದ ಮೇಲೆ ಕಂಪ್ಯೂಟರುಗಳ ವಿಶ್ವಭಾಷೆ ರೂಪಗೊಂಡಿದೆ.

ಅಕ್ಕಿತಿಮ್ಮನ ಹಳ್ಳಿಯ ಕಂಪ್ಯೂಟರು, ಅಲಾಸ್ಕಾದ ಇನ್ನೊಂದು ಕಂಪ್ಯೂಟರು ಇದೇ ಭಾಷೆಯನ್ನು ಬಳಸಿಕೊಂಡು ನಮಗಾಗಿ ಪರಸ್ಪರ ಮಾತಾಡುತ್ತವೆ. ಈ ಎರಡೇ ಅಂಕಿಗಳನ್ನು ಬಳಸಿಕೊಂಡು ಕಂಪ್ಯೂಟರು ಮಾಡಬೇಕಾದ ನಿರ್ದೇಶನಗಳನ್ನು ನೀಡಲು ಹಲವು ಬಗೆಯ ಭಾಷೆಗಳು ಸೃಷ್ಟಿಯಾಗಿವೆ. ಒಂದೊಂದು ಕಂಪ್ಯೂಟರ್ ಭಾಷೆಯೂ ತನ್ನದೇ ವಾಕ್ಯರಚನೆಯನ್ನು ಹೊಂದಿವೆ. ಅದು ಬೇರೆಯದೇ ಭಾಷೆಯ ಬೇರೆಯ ಲೋಕ.
 
ಇತ್ತೀಚೆಗೆ ಯೂನಿಕೋಡ್ ಅನ್ನುವ ಮಾತು ಕೇಳಿದ್ದೀರಲ್ಲವೇ, ಅದು ಬಹಳಷ್ಟು ಮುಖ್ಯ ಭಾಷೆಗಳ ಲಿಪ್ಯಂತರಕ್ಕೆ ಸಹಾಯಮಾಡುತ್ತದೆ. ಯೂನಿಕೋಡ್ ಎಂಬ ಭಾಷಾ ಸಂಹಿತೆ ಸಮವಸರಣದತ್ತ ಇಟ್ಟಿರುವ ಹೆಜ್ಜೆ ಅನ್ನಿಸುತ್ತದೆ. ಮನುಷ್ಯರು ಬಳಸುವ ಸಹಜ ಭಾಷೆಯನ್ನು ಯಂತ್ರಕ್ಕೆ ಅರ್ಥವಾಗುವ ಕೃತಕ ಭಾಷೆಯಾಗಿ ಪರಿವರ್ತಿಸಿ, ಅದರ ಮೂಲಕ ಸಹಜ ಭಾಷೆಗಳ, ವಾಸ್ತವ ಲೋಕದ, ಪ್ರತಿಲೋಕವನ್ನೇ ಸೃಷ್ಟಿಸಿಕೊಂಡಿದ್ದೇವೆ. ನಾವು ಯಾವುದನ್ನು ವಾಸ್ತವ ಅಂದುಕೊಂಡಿದ್ದೇವೋ ಅದರ ತೋರಿಕೆಯಾಗಿ ಅಥವ ತಾನೇ ಇನ್ನೊಂದು ವಾಸ್ತವವಾಗಿ ಇರುವ ಪ್ರತಿ ವಾಸ್ತವ ಸೃಷ್ಟಿಸಿಕೊಂಡಿದ್ದೇವೆ. ಯಾವುದು ವಾಸ್ತವ, ಯಾವುದು ಕೃತಕ ಅನ್ನುವ ಅವೆರಡರ ನಡುವಿನ ಗಡಿಗೆರೆ ಅಸ್ಪಷ್ಟವಾಗಿದೆ.
 
ಮನುಷ್ಯರಿಗೆ ಇರುವ ಸಹಜವಾದ ವಿಚಾರ ಶಕ್ತಿ, ಜ್ಞಾನ, ಯೋಜನಾ ಸಾಮರ್ಥ್ಯ, ಕಲಿಕೆ, ಸಂವಹನೆ, ಗ್ರಹಿಕೆ, ವಸ್ತುಗಳ ನಿರ್ವಹಣೆ ಇವೆಲ್ಲವೂ ಯಂತ್ರಗಳಿಗೆ, ಕಂಪ್ಯೂಟರುಗಳಿಗೆ ದೊರೆತರೆ ಅದು ಕೃತಕ ವಿವೇಕ ಅನ್ನಿಸಿಕೊಳ್ಳುತ್ತದೆ. ಅಥವ ಮನುಷ್ಯ ಕೃತ ವಿವೇಕ ಅನ್ನೋಣ. ಗ್ರೀಕ್ ಪುರಾಣಗಳಲ್ಲಿ ಹೆಫೇಸ್ಟಸ್ ಅನ್ನುವ ದಿವ್ಯ ಕುಶಲಕರ್ಮಿ ರೆಕ್ಕೆ ಇರುವ ಹೆಲ್ಮೆಟ್ಟು, ಪಾದುಕೆಗಳನ್ನು ಸೃಷ್ಟಿಸಿದ ಕಥೆ ಇದೆ; ಮೇರಿ ಶೆಲ್ಲಿ ಫ್ರಾಂಕಿನ್‌ಸ್ಟೀನ್ ದೈತ್ಯನ ಕಲ್ಪನೆಯನ್ನು ಬೆಳೆಸಿದ್ದು; ಭಾರತದ ಪುರಾಣದಲ್ಲೇ ಬರುವ ಆಕಾಶದಲ್ಲಿ ತೇಲಾಡುವ ಮೂರು ಪುರಗಳು, ಅಥವ ವಿಶ್ವಾಮಿತ್ರ ಮಾಡಿದ ಸೃಷ್ಟಿಗಳು ಇಂಥವು ಕೃತಕ ವಿವೇಕದ ಥೀಮನ್ನು ಇಟ್ಟುಕೊಂಡ ಕಥೆ ಕಲ್ಪನೆಗಳಾದರೆ, 1940ರಿಂದ ಈಚೆಗೆ ಕೃತಕ ವಿವೇಕದ ಸಂಶೋಧನೆಗಳು ಸಾಕ್ಷಾತ್ತಾಗತೊಡಗಿದವು. ಈ ಶೋಧಗಳ ಹಿಂದೆ ಎಷ್ಟೆಲ್ಲ ಜ್ಞಾನಶಾಖೆಗಳ ತಿಳಿವಳಿಕೆ ಬಳಕೆಯಾಗಿದೆ, ಎಷ್ಟೆಲ್ಲ ಶಾಖೆ, ಉಪಶಾಖೆಗಳು ಹುಟ್ಟಿಕೊಳ್ಳುತ್ತಿವೆ ಎಂದರೆ ಒಂದು ಶಾಖೆಯಲ್ಲಿ ತಜ್ಞರಾದವರಿಗೆ ಇನ್ನೊಂದು ಶಾಖೆ ಅರ್ಥವೇ ಆಗುವುದಿಲ್ಲವಂತೆ.
 
ನಮ್ಮ ಮಿದುಳು, ನಮ್ಮ ಭಾಷೆ, ನಮ್ಮ ಗ್ರಹಿಕೆ, ನಮ್ಮ ಆಲೋಚನೆ, ನಾವು ದಿನ ನಿತ್ಯ ನಡೆಸುವ ಕೆಲಸ ಕಾರ್ಯಗಳು, ತೆಗೆದುಕೊಳ್ಳುವ ನಿರ್ಣಯಗಳು, ನಮ್ಮ ದೇಹದಲ್ಲಿ ನಮ್ಮ ಅರಿವಿಗೇ ಬಾರದೆ ನಡೆದುಹೋಗುವ ಕಾರ್ಯಗಳು ಇವೆಲ್ಲ ಎಷ್ಟು ಸಲೀಸು, ಎಷ್ಟು ಸಹಜ ಅನ್ನಿಸುತ್ತದೆಂದರೆ, ಅಂಥದೇ ಇನ್ನೊಂದು ಭಾಷೆ, ಇನ್ನೊಂದು ವಿವೇಕವನ್ನು ಸೃಷ್ಟಿಸಲು ಹೊರಟಾಗ ಮಾತ್ರ ಸಹಜವೆನ್ನುವುದೇ ಮಹಾ ಪವಾಡ ಅನ್ನುವ ಬೆರಗು ಮೂಡುತ್ತದೆ.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.