ADVERTISEMENT

ಧರ್ಮ ಸಂಸ್ಥೆಯ ಭಾಷೆ, ಅನುಭವದ ನುಡಿ

ಓ.ಎಲ್.ನಾಗಭೂಷಣ ಸ್ವಾಮಿ
Published 29 ಡಿಸೆಂಬರ್ 2012, 19:59 IST
Last Updated 29 ಡಿಸೆಂಬರ್ 2012, 19:59 IST

ಬದುಕಿನಲ್ಲಿ ಧರ್ಮವೆಂಬ ವಲಯಕ್ಕೂ ಭಾಷೆಗೂ ಇರುವ ಸಂಬಂಧದ ಬೆಸುಗೆ ಬಿಡಿಸಲು ಬಾರದಂಥದ್ದು. ಒಂದೊಂದೂ ಧರ್ಮದ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಭಾಷೆಯ ಪಾತ್ರವೇನು? ಭಾಷೆಯ ಮತ್ತು ಭಾಷೆಯ ಅಧ್ಯಯನದ ಚರಿತ್ರೆಯ ಮೇಲೆ ಧರ್ಮ ಬೀರಿದ ಪ್ರಭಾವವೇನು? ಇವು ಈ ಸಂಬಂಧದ ಹೊರವಲಯದ, ವಿಶಾಲ ವ್ಯಾಪ್ತಿಯ ಪ್ರಶ್ನೆಗಳು.

ತಂತ್ರಜ್ಞಾನದ ಬೆಳವಣಿಗೆಯಲ್ಲಿ ಯುದ್ಧಾಸಕ್ತಿ ಬಲು ದೊಡ್ಡ ಪ್ರೇರಣೆಯಾಗಿರುವಂತೆಯೇ ಮಾನವಿಕ ವಿಷಯಗಳ ಸಂಶೋಧನೆಗೆ ಧರ್ಮಾಸಕ್ತಿ ಪ್ರಬಲ ಪ್ರೇರಣೆಯಾಗಿದೆ. ಇದರಂತೆಯೇ ಧರ್ಮವೆನ್ನುವುದು ಆಚರಣೆ, ಅನುಭಾವ ಮೊದಲಾಗಿ ಅನೇಕ ಬಗೆಗಳಲ್ಲಿ ಪ್ರಕಟವಾಗುತ್ತದೆ.

ಧರ್ಮದ ಪ್ರಕಟರೂಪಗಳಿಗೂ ಅವು ಪ್ರಕಟಗೊಳ್ಳುವ ಭಾಷೆಯ ಸ್ವರೂಪಕ್ಕೂ ಇರುವ ಸಂಬಂಧವನ್ನು ಕುರಿತ ಪ್ರಶ್ನೆಗಳು ಒಳ ವಲಯದ ಸೂಕ್ಷ್ಮ ಪ್ರಶ್ನೆಗಳು. ಧರ್ಮ-ಭಾಷೆಯ ಈ ಹೊರ-ಒಳ ವಲಯದ ಪ್ರಶ್ನೆಗಳನ್ನು ಸ್ಥೂಲವಾಗಿ ಗಮನಿಸುವುದಕ್ಕೂ ದೊಡ್ಡ ಪುಸ್ತಕವನ್ನೇ ಬರೆಯಬೇಕಾಗುತ್ತದೆ. ಇಲ್ಲಿ ನಿಮ್ಮ ಆಲೋಚನೆಗೆ ಕುಮ್ಮಕ್ಕು ಕೊಡುವಂಥ ಕೆಲವು ಸಂಗತಿಗಳನ್ನು ಮಾತ್ರ ಪ್ರಸ್ತಾಪಿಸಿದ್ದೇನೆ.

ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಬಳಸಿಕೊಳ್ಳುವ ಬಹುಮುಖ್ಯ ಕಲ್ಪನೆಗಳೆಲ್ಲ ಎರಡು ಅಥವ ಮೂರು ಅಕ್ಷರದ ಪದಗಳು- ಧರ್ಮ, ನೀತಿ, ನ್ಯಾಯ, ಪ್ರೀತಿ, ಕಾಮ, ಭಾಷೆ, ಜಾತಿ, ಚರಿತ್ರೆ, ಮದುವೆ, ವ್ಯಕ್ತಿತ್ವ, ಸಮಾಜ, ಇತ್ಯಾದಿ. ಇಂಥವನ್ನು ವಿವರಿಸಲು ಪ್ರಯತ್ನಪಟ್ಟರೆ ನಾವು ಬಳಸುವ ಭಾಷೆಯ ಸ್ವರೂಪದ ಕಾರಣದಿಂದಲೇ ಪಾರಾಗಲು ದಾರಿಯೇ ಇಲ್ಲವೇನೋ ಅನ್ನಿಸುವಂಥ ಸಂದಿಗ್ಧ ಅರ್ಥಗಳ ಬಲೆಯಲ್ಲಿ ತೊಡಕಿಕೊಳ್ಳುತ್ತೇವೆ.

ಇತ್ತೀಚೆಗೆ ನಡೆಸಿರುವ ಲೆಕ್ಕಾಚಾರ ಈ ಹೊತ್ತಿನ ಜಗತ್ತಿನಲ್ಲಿ ಸುಮಾರು 6000 ಭಾಷೆಗಳು ಇರುವ ಹಾಗೆಯೇ 4200 ಧರ್ಮಗಳು ಇವೆ ಅನ್ನುತ್ತದೆ. ಎಷ್ಟು ಭಾಷೆಗಳಿವೆಯೋ ಅಷ್ಟು ಧರ್ಮಗಳಿವೆ ಅನ್ನಬಹುದೇನೋ. ಯಾಕೆಂದರೆ ನಂಬಿಕೆಗಳ ವಿನ್ಯಾಸ, ಸಂಸ್ಕೃತಿ ವಿನ್ಯಾಸ, ಲೋಕದೃಷ್ಟಿ, ಆಧ್ಯಾತ್ಮಿಕತೆ ಭಾಷೆಗೂ ಧರ್ಮಕ್ಕೂ ಸಮಾನ ಸಂಗತಿಗಳು.

ಇವೆಲ್ಲ ಭಾಷೆಯಲ್ಲಿ ಹುಟ್ಟಿ ಧರ್ಮದ ರೂಪ ತಾಳುತ್ತವೋ, ಧರ್ಮದ ವ್ಯಕ್ತರೂಪವಾಗಿ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತದೋ? ಎರಡೂ ಥರ ವಾದ ಮಾಡಬಹುದು. ಮಾನವ ಧರ್ಮ, ವಿಶ್ವಧರ್ಮ ಎಂಬ ಕಲ್ಪನೆಗಳು ಆಕರ್ಷಕ, ಪೇಕ್ಷಣೀಯ, ಆದರ್ಶ ಅನ್ನಿಸುತ್ತಿರುವಾಗಲೇ ಧರ್ಮವು ಶೋಷಣೆಗೆ, ಯುದ್ಧಕ್ಕೆ, ಭಯೋತ್ಪಾದನೆಗೆ, ಕ್ರೌರ್ಯಕ್ಕೆ, ಹಿಂಸೆಗೆ ಕಾರಣವಾಗಿರುವ ಚರಿತ್ರೆಯ ವಾಸ್ತವ ಮನಸ್ಸು ಕಲಕಿ ಕಾಡುತ್ತದೆ.

ADVERTISEMENT

ನಮ್ಮ ನಮ್ಮ ಸಾಮಾಜಿಕ ಚಹರೆಗೆ ಕಾರಣವಾಗುವ ಸಂಗತಿಗಳೆಲ್ಲವೂ ಭಂಗಕ್ಕೆ, ಅವಿಶ್ವಾಸಕ್ಕೆ, ಅಸಮಾನತೆಗೆ ಕಾರಣವಾಗುತ್ತವಲ್ಲ ಇದರಲ್ಲಿ ಭಾಷೆಯ ಪಾಲು ಎಷ್ಟು ಇದ್ದೀತು?
ನಮಗೆಲ್ಲ ಬಹಿರಂಗ-ಅಂತರಂಗ ಇರುವ ಹಾಗೆ ಧರ್ಮಕ್ಕೂ ಬಹಿರಂಗ-ಅಂತರಂಗ ಇದೆ ಅನಿಸುತ್ತದೆ.

ಧರ್ಮವನ್ನು ಕುರಿತು ಆಲೋಚಿಸಿದ ವಿದ್ವಾಂಸರು ಧರ್ಮಕ್ಕೆ ಏಳು ಆಯಾಮಗಳಿವೆ ಅನ್ನುತ್ತಾರೆ. ಇವನ್ನು ಸಿದ್ಧಾಂತದ, ಪುರಾಣದ, ನೀತಿಯ, ಆಚರಣೆಯ, ಸಾಂಸ್ಥಿಕವಾದ, ಅನುಭವನಿಷ್ಠವಾದ, ಮತ್ತು ವಸ್ತುಗಳ ಆಯಾಮಗಳೆಂದು ಗುರುತಿಸುತ್ತಾರೆ.

ಇವುಗಳಲ್ಲಿ ಅನುಭವ ಅನ್ನುವುದು ಭಕ್ತಿ, ಅನುಭಾವಗಳನ್ನು ಒಳಗೊಂಡು ಅಂತರಂಗಕ್ಕೆ ಸಂಬಂಧಪಟ್ಟದ್ದು, ಸ್ಥೂಲವಾಗಿ ಚರಿತ್ರೆಯ ಹಂಗು ಇಲ್ಲದೆ ಇರುವಂಥವು; ಮಿಕ್ಕವು ಬಹಿರಂಗಕ್ಕೆ ಸಂಬಂಧಪಟ್ಟವು, ಚರಿತ್ರೆಯ ಶಕ್ತಿಯಿಂದ ರೂಪುಗೊಳ್ಳುವಂಥವು, ಚರಿತ್ರೆಯ ಚಲನೆಗೆ ಕಾರಣವಾಗುವಂಥವು.

ಹೀಗೆ ಹೇಳುತ್ತಿರುವಾಗಲೇ ಅಂತರಂಗ-ಬಹಿರಂಗ ಅನ್ನುವುದನ್ನು ಗೆರೆಕೊರೆದ ಹಾಗೆ ವಿಂಗಡಿಸಲು ಆಗುವುದಿಲ್ಲವಲ್ಲ ಅನ್ನುವ ಅನುಮಾನ ಶುರುವಾಗುತ್ತದೆ! ಧರ್ಮ ಅನ್ನುವ ಮಾತು ವಿಶ್ವದ ವರ್ತನೆಗಳನ್ನು ನಿಯಂತ್ರಿಸುವ ನಿಯಮ ಅನ್ನುವಷ್ಟು ವಿಶಾಲ ವ್ಯಾಪ್ತಿಯಿಂದ ಹಿಡಿದು ನೈತಿಕತೆ, ಕಾನೂನು, ರಾಜ್ಯದ ಆಡಳಿತ, ಸಾಮೂಹಿಕ ಆಚರಣೆ, ವ್ಯಕ್ತಿಯ ಸ್ವಭಾವದವರೆಗೆ ಎಲ್ಲೆಲ್ಲೂ ಚಲಾವಣೆಯಲ್ಲಿರುವುದರಿಂದಲೇ ಅದನ್ನು ಕುರಿತು ಹೇಳುವ ಯಾವುದೇ ಸಂಗತಿ ಎಲ್ಲರಿಗೂ ಮಾನ್ಯವಾಗುವುದೇ ಇಲ್ಲ.

ಸುಮ್ಮನೆ ಗಮನಿಸಿದರೂ ಸಾಕು, ಯಾವುದೇ ಮನುಷ್ಯ ಭಾಷೆಯಲ್ಲಿರುವಷ್ಟೇ ವೈವಿಧ್ಯ ಧರ್ಮವನ್ನು ಕುರಿತು ಬಳಸುವ ಭಾಷೆಯಲ್ಲೂ ಕಾಣುತ್ತದೆ. ಕಾವ್ಯದ ಸ್ಪರ್ಶವಿರುವ ಸ್ತ್ರೋತ್ರದ ಭಾಷೆ, ಬೋಧನೆಯ ಭಾಷೆಯ ಯಜಮಾನಗುಣ, ಆಚರಣೆಯ ಭಾಷೆಯ ಸಾಮಾಜಿಕ ಸಾಂಕೇತಿಕತೆ, ಪಠಣದ ಭಾಷೆಯ ಯಾಂತ್ರಿಕತೆ, ವ್ಯಾಖ್ಯಾನ, ಟೀಕುಗಳ ವಿವರಣೆಯ ಭಾಷೆ, ಸೂತ್ರಗಳ ಭಾಷೆಯ ಸಂಕ್ಷಿಪ್ತ ಖಚಿತತೆ, ತಾತ್ವಿಕತೆಯ ಭಾಷೆಯ ತರ್ಕ, ಅನುಭಾವದ ಭಾಷೆಯ ಪ್ರತಿಮಾಲೋಕ, ಹಾಡು, ಭಜನೆ, ಮೈಮೇಲೆ ಬರುವ ದೇವರು ಆಡುವ ಭಾಷೆ, ಕಣಿ, ಕಾರ್ಣಿಕದ ರೂಪಕ ರಾಶಿ, ಪ್ರಮಾಣಗಳ ಭಾಷೆ, ಧಾರ್ಮಿಕ ಸಂಕೇತಗಳ ಮಹತ್ವವನ್ನು ಮನಸಿಗೆ ಇಳಿಸುವ ಭಾಷೆ, ಪುರಾಣದ ಕಥೆಗಳ ನಿರೂಪಣೆಯ ಭಾಷೆಗೆ ಇರುವ ಚರಿತ್ರೆ, ಮನಶ್ಶಾಸ್ತ್ರ, ಸಂಸ್ಕೃತಿ, ಚರಿತ್ರೆಯ ಆಯಾಮಗಳು- ಇಂಥ ಧರ್ಮದ ಭಾಷೆಯ ನುಡಿ ಬಗೆಗಳನ್ನು ಕುರಿತು ಕುತೂಹಲ ನಮ್ಮ ಅಧ್ಯಯನಗಳಲ್ಲಿ ಇನ್ನೂ ಮೂಡಬೇಕಾಗಿದೆ.

ಕೆಲವು ತಿಂಗಳ ಹಿಂದೆ ಸಿ.ಎನ್. ರಾಮಚಂದ್ರನ್ ಅವರು `ನೀರಿನ ಹೂವು' ಎಂಬ ಪ್ರಬಂಧದಲ್ಲಿ ಸ್ತೋತ್ರಸಾಹಿತ್ಯದ ಭಾಷೆಯ ಸ್ವರೂಪವನ್ನು ಪರಿಶೀಲಿಸಿದ್ದು ನೆನಪಿಗೆ ಬರುತ್ತಿದೆ. `ಪವಿತ್ರ'ವಾದುದನ್ನು ಕುರಿತು ಹೇಳಲು ದಿನ ನಿತ್ಯದ ಬಳಕೆಯಿಂದ `ಮಲಿನ'ವಾದ ಭಾಷೆಗಿಂತ ಅರ್ಥವಾಗದಿದ್ದರೂ, ದಿನ ನಿತ್ಯದ ಬಳಕೆಯಲ್ಲಿಲ್ಲದಿದ್ದರೂ ಅಪರಿಚಿತ ಭಾಷೆಯೇ ಸೂಕ್ತ ಅನ್ನುವ ಭಾವನೆ ನಮ್ಮಲ್ಲಿದೆಯೇ? ಆದ್ದರಿಂದಲೇ ಲ್ಯಾಟಿನ್, ಸಂಸ್ಕೃತ, ಹೀಬ್ರೂ ಇಂಥ ದೂರದ ಭಾಷೆಗಳನ್ನು ಧರ್ಮದ ಆಚರಣೆಯ ವ್ಯವಹಾರಕ್ಕೆ ಉಳಿಸಿಕೊಂಡಿದ್ದೇವೆಯೇ?

ಧರ್ಮಕ್ಕೆಂದೇ ವಿಶೇಷ ಭಾಷೆಯನ್ನೂ ಲಿಪಿಯನ್ನೂ ಬಳಸುವ ಅಭ್ಯಾಸ ಬೆಳೆದಿರಬಹುದೇ? ಈಜಿಪ್ಟ್ ಜನ ಧಾರ್ಮಿಕ ವಿಚಾರಗಳ ಬರವಣಿಗೆಗೆ ಬಳಸುತಿದ್ದ ಲಿಪಿ ಹೈರೊಗ್ಲಿಫಿಕ್ಸ್ ದಿನ ನಿತ್ಯದ ಈಜಿಪ್ಟ್ ಭಾಷೆಯ ಬರವಣಿಗೆಗಿಂತ ಭಿನ್ನವಾಗಿತ್ತು. ಕ್ರಿಪೂ 500ರಲ್ಲೇ ಯಹೂದಿಗಳು ಅರಾಮಿಕ್ ಭಾಷೆಯನ್ನೂ ಲಿಪಿಯನ್ನೂ ಬಳಸುತಿದ್ದರಾದರೂ ವಿಶೇಷ ಸಂದರ್ಭಗಳಿಗೆ ಹೀಬ್ರೂ ಮಾತ್ರವೆ ಒದಗಿಬರುತಿತ್ತು.

ದೇವಭಾಷೆ ಯಾವುದು ಅನ್ನುವ ಚರ್ಚೆ ಜಗತ್ತಿನಾದ್ಯಂತ ನಡೆದಿದೆ. ತಮ್ಮ ಧರ್ಮದ ಪವಿತ್ರ ಭಾಷೆಯೇ ದೇವಭಾಷೆ ಅನ್ನುವ ವಾದಗಳನ್ನು ಅನೇಕ ಭಾಷಿಕರು ಮಂಡಿಸಿದ್ದಾರೆ. ಈ ಧೋರಣೆ ಭಾಷೆಯ ವಿಷಯದಲ್ಲಿ ಎರಡು ಭಿನ್ನ ನಿಲುವುಗಳಿಗೆ ಕಾರಣವಾಗಿದೆ.

ದೇವಭಾಷೆ ಯಲ್ಲಿರುವ ಧಾರ್ಮಿಕ ವಿಚಾರಗಳನ್ನು ಬೇರೆಯ ಭಾಷೆಗೆ ಅನುವಾದಿಸುವುದು ಸೂಕ್ತವಲ್ಲ ಎಂದು ನಂಬಿದ ಧರ್ಮಗಳು ಇರುವಂತೆಯೇ ಸ್ಥಳೀಯ ಭಾಷೆಗಳಲ್ಲಿ ಧರ್ಮ ವಿಚಾರಗಳನ್ನು ಹೇಳುವುದರಿಂದ ಮಾತ್ರವೇ ಧರ್ಮ ಪ್ರಚಾರ ಸಾಧ್ಯ ಎಂದು ನಂಬಿರುವ ಉದಾಹರಣೆಗಳೂ ಇವೆ.

ಕ್ರಿಶ್ಚಿಯನ್ ಧರ್ಮ ಅನುವಾದಗಳ ಮೂಲಕವೇ ವಿಸ್ತಾರವನ್ನು ಪಡೆದರೆ ಯಹೂದಿ ಧರ್ಮ ಹೀಬ್ರೂವನ್ನು ಮಾತ್ರ ಅಪ್ಪಿಕೊಂಡಿದ್ದು ಒಂದು ನಿದರ್ಶನ. ಸಂಸ್ಕೃತವನ್ನು ಮಾತ್ರ ಧರ್ಮ ವಿಚಾರಗಳ ಪ್ರಮುಖ ಮಾಧ್ಯಮವಾಗಿ ಮಾಡಿಕೊಂಡ ಹಿಂದೂ ಧರ್ಮಕ್ಕಿಂತ ಭಿನ್ನವಾಗಿ ಬೌದ್ಧಧರ್ಮವು ಟಿಬೆಟನ್, ಪಾಳಿ, ಜಪಾನೀ ಮತ್ತು ಚೀನೀ ಭಾಷೆಗಳ ಅನುವಾದವನ್ನೂ ನೆಚ್ಚಿಕೊಂಡಿತು.

ಸಂಸ್ಕೃತ, ಗ್ರೀಕ್ ಮತ್ತು ಅರಾಬಿಕ್ ಭಾಷೆಗಳು ಧರ್ಮ ಭಾಷೆಗಳಾಗಿದ್ದರಿಂದಲೇ, ಆಯಾ ಭಾಷೆಗಳ ಸ್ವರೂಪದ ಕಾರಣದಿಂದಲೇ ಸೂಕ್ಷ್ಮ ರೂಪದ ಚಿಂತನೆಗಳು ಸಾಧ್ಯವಾದವು; ಗ್ರೀಕ್ ಭಾಷೆಗೆ ಜಾಗತಿಕ ಮನ್ನಣೆ ಇದ್ದ ಕಾಲದಲ್ಲಿ ಕ್ರಿಶ್ಚಿಯನ್ ಧರ್ಮ ಮತ್ತು ಗ್ರೀಕ್ ಭಾಷೆಗಳ ಪ್ರಭಾವ ಸಿರಿಯಾಕ್, ಅರ್ಮೇನಿಯನ್, ಲ್ಯಾಟಿನ್, ಜರ್ಮನ್, ರಶಿಯನ್ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಆಯಿತು; ಸಂಸ್ಕೃತವು ಬೌದ್ಧಿಕ ಚಿಂತನೆಯ ಮಾಧ್ಯಮವಾದ್ದರಿಂದ ಎಲ್ಲ ಭಾರತೀಯ ಭಾಷೆಗಳ ಮೇಲೆ ಸಂಸ್ಕೃತದ ಮತ್ತು ಹಿಂದೂ ಚಿಂತನೆಗಳ ಪ್ರಭಾವ ಹೆಚ್ಚಿತು; ಅರಾಬಿಕ್ ಭಾಷೆ ಇಸ್ಲಾಂ ಜಗತ್ತಿನ ಬಹಳಷ್ಟು ಪ್ರದೇಶಗಳಲ್ಲಿ ಆಟ್ಟೊಮನ್ ಟರ್ಕ್, ಪರ್ಶಿಯನ್, ಪಶ್ತು, ಉರ್ದು, ಮಲಾಯ್, ಮತ್ತಿತರ ಭಾಷೆಗಳಲ್ಲೂ ಹಾಸು ಹೊಕ್ಕಾಯಿತು ಎಂದು ಧರ್ಮ-ಭಾಷೆಗಳ ವಿದ್ವಾಂಸರು ಊಹಿಸಿದ್ದಾರೆ.

ಬರವಣಿಗೆಗಿಂತ ನುಡಿರೂಪದ ಭಾಷೆಗೇ ಸಂಸ್ಕೃತ ಮಹತ್ವ ಕೊಟ್ಟಿದ್ದರಿಂದಲೇ ವೇದದ ಸೂಕ್ತಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳುವ ಹಂಬಲವೇ ಸಂಸ್ಕೃತದ ವ್ಯಾಕರಣ, ಧ್ವನಿ ಶಾಸ್ತ್ರಗಳ ಬೆಳವಣಿಗೆಗೆ, ಉಚ್ಚಾರಣೆಯ ಯಥಾವತ್ ಅನುಕರಣೆಯ ಶಿಸ್ತು ರೂಪುಗೊಳ್ಳುವುದಕ್ಕೆ ಕಾರಣವಾಗಿರಬಹುದು.

ಅಂಥ ಧಾರ್ಮಿಕ ಅಗತ್ಯವೇ ಪಾಣಿನಿಯಂಥ ವಿದ್ವಾಂಸ ಅಷ್ಟು ಪರಿಷ್ಕಾರವಾದ ಧ್ವನಿಶಾಸ್ತ್ರವನ್ನು ಕ್ರಿಪೂ ನಾಲ್ಕನೆಯ ಶತಮಾನದಲ್ಲಿ ರೂಪಿಸಲು ಪ್ರಚೋದನೆ ನೀಡಿರಬಹುದು. ವ್ಯಾಕರಣವೂ ವೇದದ ತಿಳಿವಳಿಕೆಯ ಭಾಗವೆಂಬ ನಂಬಿಕೆ ಬೆಳೆದಿರಬಹುದು. ಭಾಷೆಗಳ ಅಧ್ಯಯನದ ಸ್ವರೂಪದ ಮೇಲೂ ಧರ್ಮದ ಪ್ರಭಾವ ಬಲು ದೊಡ್ಡದು.

ಬೈಬಲನ್ನು ಇನ್ನೂ ಎಷ್ಟು ಭಾಷೆಗಳಿಗೆ ಭಾಷಾಂತರಿಸುವ ಅಗತ್ಯವಿದೆ ಎಂದು ತಿಳಿಯುವ ಸಲುವಾಗಿಯೇ ಜಗತ್ತಿನ ಭಾಷೆಗಳ ಸರ್ವೇಕ್ಷಣೆ ನಡೆದದ್ದು ಇತ್ತೀಚಿನ ಉದಾಹರಣೆ.
ಇದೆಲ್ಲ ಧರ್ಮ ಮತ್ತು ಭಾಷೆಯ ಹೊರವಲಯದ ಮಾತಾಯಿತು; ಧರ್ಮದ ಸಾಂಸ್ಥಿಕ ಸ್ವರೂಪಕ್ಕೆ ಸಂಬಂಧಿಸಿದ ಸಂಗತಿಗಳಾದವು.

ಒಂದೊಂದು ಧರ್ಮದಲ್ಲೂ ಭಾಷೆಯಲ್ಲೂ ಆಚರಣೆ, ಪೂಜೆ, ಆರಾಧನೆ, ತಾತ್ವಿಕ ಚರ್ಚೆ, ಉತ್ಸವ, ವ್ಯಾಖ್ಯಾನ, ಪುರಾಣ, ಪ್ರವಚನ, ಪಠಣ, ಯಾಗ, ಹೋಮ, ಹರಕೆ ಇತ್ಯಾದಿಗಳ ಮೂಲಕ, ಧರ್ಮದ ಸಂಸ್ಥೆಯನ್ನು ಬಲಪಡಿಸುವ ಕೆಲಸ ನಡೆಯುತ್ತಲೇ ಇರುತ್ತದೆ. ಸಂಸ್ಥೆಯೆಂದರೆ ಅಧಿಕಾರ, ಅಧಿಕಾರವೆಂದರೆ ಅಸಮಾನತೆ.

ಹಾಗಾಗಿ ಧರ್ಮದ ಈ ಹೊರಗಿನ ರೂಪಗಳು `ಧರ್ಮ'ವಲ್ಲ, ಅವೆಲ್ಲ ಯಾಂತ್ರಿಕವಾದ ಅಭ್ಯಾಸಗಳು, ಧರ್ಮ ಅನ್ನುವುದಿದ್ದರೆ ಅದು ವೈಯಕ್ತಿಕ ಅನುಭವದ ಮೂಲಕ ವರ್ತನೆಯಲ್ಲಿ ಮೂಡಬೇಕು, ನುಡಿ ಮತ್ತು ನಡೆಯ ಒಳಗಾಗಿರಬೇಕು ಎಂಬ ನಿಲುವಿನ ಭಕ್ತಿ ಮತ್ತು ಅನುಭಾವಗಳದ್ದು ಒಳಮುಖ.

ಧರ್ಮದ ಈ ಒಳಮುಖ ಬಳಸುವ ಭಾಷೆಯೇ ಬೇರೆ. ಆ ಕಾರಣದಿಂದಲೇ ಜಗತ್ತಿನಾದ್ಯಂತ ನಿಜವಾದ `ಭಕ್ತ'ರು ಮತ್ತು `ಅನುಭಾವಿ'ಗಳು ಸಂಸ್ಥೆಗೊಂಡ ಧರ್ಮದ ವಿರೋಧಿಗಳಾಗಿ, ಧರ್ಮದ ಆಚಾರದಲ್ಲೇ ನಿಷ್ಠರಾದವರಿಗೆ ಅಪಾಯಕಾರಿಗಳಾಗಿ ಕಾಣುತ್ತಾರೆ. ಭಕ್ತರು ಮತ್ತು ಅನುಭಾವಿಗಳು `ಧರ್ಮದ ಭಾಷೆ'ಯನ್ನು ನಿರಾಕರಿಸುತ್ತಾರೆ.

ಸೂಫಿಗಳು ಮತ್ತು ಕನ್ನಡದ ಪ್ರಮುಖ ವಚನಕಾರರು ಈ ಮಾತಿಗೆ ನಿದರ್ಶನ. ಧರ್ಮವನ್ನು ಸಂಸ್ಥಾಪನೆ ಮಾಡುವುದು ಅಸಾಧ್ಯ; ಧರ್ಮವನ್ನು ಸ್ಥಾಪನೆ ಮಾಡುವುದೆಂದರೆ ಯಾವುದೋ ಕಾಲದ ಸ್ಥಾಪಿತವಾದ ಭಾಷೆಯನ್ನು ನೆನಪಿಟ್ಟುಕೊಂಡು ಆಚರಿಸುವ ಕೆಲಸ. ಸ್ಥಾಪಿತವಾದ ಭಾಷೆಯೇ ಸ್ಥಾವರ.

ನಿಜವಾದ ಧಾರ್ಮಿಕ ಅನುಭವ ಕ್ಷಣಕ್ಷಣವೂ ಚಲನಶೀಲವಾಗಿರುವ ಜಂಗಮ. ಅನುಭವ ಸದಾ ಹೊಸತು ಆಗಿರಬೇಕಾದರೆ ಎಂದೋ ಹೇಳಿದ ಮಾತು ಮನಸ್ಸಿನಲ್ಲಿ ಚಲಿಸದೆ ಸ್ಥಾವರವಾಗಿ ಕೂತಿರಬಾರದು. ಅನುಭವ ಹೊಸತಾಗಿ ಆಗಬೇಕಾದರೆ ಹಳೆಯ ನೆನಪುಗಳ ನೆರಳು ಸುಳಿಯಬಾರದು.

ಆದ್ದರಿಂದಲೇ ಅನುಭವವನ್ನು ಅದಕ್ಕೆ ತಕ್ಕ ಭಾಷೆಯಲ್ಲಿ, ಶ್ರುತಿಯೂ ಅಲ್ಲದ ಸ್ಮೃತಿಯೂ ಅಲ್ಲದ ತಾನು ಒಲಿದಂತೆ ಹಾಡುವ ಹಾಡು ಮಾಡಿಕೊಳ್ಳಲು ಬಯಸಿದ ಬಸವಣ್ಣ. ಹಾಡಿನ ಗುಣವೇ ಜಂಗಮ. ಒಮ್ಮೆ ಹಾಡಿದಂತೆ ಇನ್ನೊಮ್ಮೆ ಹಾಡಲಾಗದು. ಧರ್ಮವೂ ಅಷ್ಟೇ. ಸದಾ ಜಂಗಮ, ಎಂದೋ ಅದು ಇತ್ತೆಂಬ ಸ್ಥಿತಿಯಲ್ಲಿ ಸದಾ ಸ್ಥಾಪಿತವಾಗಿ ಇರಲಾರದು ಅದು.

ಸೂಫಿಗಳು, ಅನುಭಾವಿಗಳು ಕಂಡ ಧರ್ಮದಲ್ಲಿ ನುಡಿಯೂ ಮುಖ್ಯ, ನಡೆಯೂ ಮಹತ್ವ. ನುಡಿಗೂ ನಡೆಗೂ ನಡುವೆ ಬಿರುಕು ಇರದಿದ್ದರೆ ಅದು ಧರ್ಮದ ಸಾಧನೆ. ನುಡಿ ಮತ್ತು ನಡೆ ಎರಡೂ ಪ್ರತಿ ಕ್ಷಣವೂ ಹುಟ್ಟಬೇಕಾದವು, ಆಗಾಗಲೇ ಸಂಭವಿಸಿ ಆಗಾಗಲೇ ಇಲ್ಲವಾಗಬೇಕಾದವು. ಅಂದರೆ ಧರ್ಮ ನಿರಂತರ ಸಾಧನೆಯೇ ಹೊರತು ಸ್ಥಾಪನೆಯಲ್ಲ. ಅದಕ್ಕೆ ಬೇಕಾಗುವ ಭಾಷೆಯ ಸ್ವರೂಪವೇ ಬೇರೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.