ADVERTISEMENT

ಒಳ್ಳೆಯ ಕೆಲಸಕ್ಕೆ ಎಲ್ಲಿದ್ದರೂ ಮನ್ನಣೆ

ಶಿವರಾಮ್
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ನಾನು ಹೈಕೋರ್ಟ್‌ನ ಜಾಗೃತದಳದಲ್ಲೇ ನೆಮ್ಮದಿಯಿಂದ ಕೆಲಸ ಮಾಡಿಕೊಂಡಿದ್ದೆ. ನನ್ನನ್ನು ವರ್ಗಾವಣೆ ಮಾಡಿಸಿದ ಭೂಗತಲೋಕದ ಬುದ್ಧಿಜೀವಿ ಒಮ್ಮೆ ಕೋರ್ಟ್‌ನಲ್ಲಿ ಸಿಕ್ಕರು. ಅವರೇ ಖುದ್ದಾಗಿ ಬಂದು, `ನಾನು ತಪ್ಪು ಮಾಡಿಬಿಟ್ಟೆ. ನಾನೇ ಶಾಸಕರೊಬ್ಬರಿಗೆ ಹೇಳಿ ನಿಮ್ಮ ವರ್ಗಾವಣೆಯಾಗುವಂತೆ ಮಾಡಿದೆ. ಅದು ನಿಮಗೆ ಗೊತ್ತಾಗಿರಬೇಕು, ಬೇಜಾರಾಗಬೇಡಿ~ ಎಂದು ಹೇಳಿದರು. `ಇಲ್ಲಪ್ಪಾ... ನನಗೆ ಗೊತ್ತಿಲ್ಲ. ನೀವು ಒಳ್ಳೆಯ ತಪ್ಪನ್ನೇ ಮಾಡಿದ್ದೀರಿ. ಇಷ್ಟು ನೆಮ್ಮದಿಯ ಮತ್ತು ಗೌರವ ಸರ್ಕಾರಿ ಕೆಲಸವನ್ನು ನಾನು ನೋಡೇ ಇಲ್ಲ~ ಎಂದು ಪ್ರತಿಕ್ರಿಯಿಸಿದೆ.

ನ್ಯಾಯಾಧೀಶರು, ನ್ಯಾಯಾಂಗದ ಜೊತೆಗಿನ ನನ್ನ ಒಡನಾಟ ಚೆನ್ನಾಗಿಯೇ ಇತ್ತು. ಎರಡು ವರ್ಷ ಹೈಕೋರ್ಟ್‌ನಲ್ಲಿ ಕೆಲಸ ಮಾಡಿದೆ. ಆಗ ಮಡಿಯಾಳ್ ಕಮಿಷನರ್ ಆಗಿದ್ದರು. ಬೇಹುಗಾರಿಕೆ ವಿಭಾಗದ ಐಜಿಪಿ ಆಗಿ ಟಿ.ಜಯಪ್ರಕಾಶ್ ಇದ್ದರು. ದಿನಕರ್ ಡಿಜಿ ಆಗಿದ್ದರು.
 
ಅವರು ಕಟ್ಟುನಿಟ್ಟಿನ ಅಧಿಕಾರಿ. ನನ್ನನ್ನು ಮತ್ತೆ ಠಾಣೆಗೆ ವರ್ಗಾವಣೆ ಮಾಡಿಸುವುದಾಗಿ ಆ ಅಧಿಕಾರಿಗಳೆಲ್ಲಾ ಹೇಳಿದರು. ಮೂರು ವರ್ಷ ಆಗಲಿ ಎಂದು ನಾನು ಹೇಳಿದರೂ ಅವರು ಪ್ರಮುಖ ಪೊಲೀಸ್ ಠಾಣೆಗೆ ಸಮರ್ಥರೊಬ್ಬರ ಅಗತ್ಯವಿದೆ ಎಂದು ನನ್ನ ಬಾಯಿ ಮುಚ್ಚಿಸಿದರು. ನನಗೆ ಅಲಸೂರು ಗೇಟ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲು ಅವರು ನಿರ್ಧರಿಸಿದರು. ಆ ಠಾಣೆ ಬೆಂಗಳೂರು ನಗರದ ರಿಮೋಟ್ ಕಂಟ್ರೋಲ್ ಇದ್ದಂತೆ.
ಪೊಲೀಸ್ ಇಲಾಖೆಯಂತೆಯೇ ನ್ಯಾಯಾಂಗದಲ್ಲಿ ಕೂಡ ನನ್ನ ಕೆಲವು ಹಿತೈಷಿಗಳಿದ್ದರು.
 
ರಿಜಿಸ್ಟ್ರಾರ್ ವಿಜಿಲೆನ್ಸ್, ರಿಜಿಸ್ಟ್ರಾರ್ ಜನರಲ್ ಹಾಗೂ ರಿಜಿಸ್ಟ್ರಾರ್ ಜ್ಯುಡಿಷಿಯಲ್ ಅಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದೆವು. ಆಪ್ತ ವಾತಾವರಣ ಇದ್ದದ್ದರಿಂದ ನನಗೆ ವರ್ಗಾವಣೆಯಾಗಿರುವ ವಿಚಾರವನ್ನು ಅವರೆಲ್ಲರಿಗೆ ತಿಳಿಸಿದೆ. `ನಿಮ್ಮನ್ನು ಇಲ್ಲಿಂದ ಬಿಡಲು ಸಾಧ್ಯವೇ ಇಲ್ಲ~ ಎಂದು ಅವರೆಲ್ಲಾ ಪಟ್ಟು ಹಿಡಿದವರಂತೆ ಹೇಳಿದರು. ದಿನಕರ್ ಮಹಾನ್ ಶಿಸ್ತಿನ ಮನುಷ್ಯರಾಗಿದ್ದರು. ಹಾಗಾಗಿ ವರ್ಗಾವಣೆ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದುಕೊಂಡು ನಾನು `ರಿಲೀವ್ ಆರ್ಡರ್~ಗೆ ಕಾಯುತ್ತಾ ಕುಳಿತೆ. ಆದರೆ, ಅದು ಬರಲೇ ಇಲ್ಲ.

ಇದ್ದಕ್ಕಿದ್ದಂತೆ ಪೊಲೀಸ್ ಇಲಾಖೆಯಿಂದ ಕರೆ ಬಂತು. ಅಧಿಕಾರಿಗಳು ನನ್ನನ್ನು ಬರಹೇಳಿದ್ದರು. ಹೋದೆ. `ಪೊಲೀಸ್ ಅಧಿಕಾರಿಗಳನ್ನು ನ್ಯಾಯಾಂಗದವರು ಮೆಚ್ಚಿಕೊಳ್ಳುವುದೇ ಅಪರೂಪ. ಅಂಥಾದ್ದರಲ್ಲಿ ಅವರು ನಿಮ್ಮನ್ನು ಇಷ್ಟಪಟ್ಟಿದ್ದಾರೆ.

ನಿಮ್ಮನ್ನು ಬಿಡಲು ತಯಾರಿಲ್ಲ. ಆದರೂ ನೀವೂ ಬರಲು ಸಿದ್ಧವಿದ್ದಲ್ಲಿ ಇಲ್ಲಿಯೇ ಕೆಲಸ ಮಾಡಬಹುದು. ಏನಂತೀರಿ?~ ಎಂದು ಕೇಳಿದರು. `ಶಿವರಾಂ ಸೇವೆ ನಮಗೆ ಬಹಳ ಮುಖ್ಯವಾಗಿದೆ. ಅಂಥ ಅಧಿಕಾರಿಗಳು ನಮಗೆ ಬೇಕು. ಅವರನ್ನು ನಾವು ರಿಲೀವ್ ಮಾಡುವುದಿಲ್ಲ. ಅವರನ್ನು ವರ್ಗಾವಣೆ ಮಾಡಬೇಡಿ~ ಎಂದು ಹೈಕೋರ್ಟ್‌ನಿಂದ ಪೊಲೀಸ್ ಇಲಾಖೆಗೆ ಪತ್ರ ಹೋಗಿತ್ತಂತೆ. ಅದನ್ನು ಆ ಅಧಿಕಾರಿಗಳೇ ನನಗೆ ತಿಳಿಸಿದರು. ನನ್ನ ಮೇಲೆ ಹೈಕೋರ್ಟ್ ರಿಜಿಸ್ಟ್ರಾರ್‌ಗಳು ಇಟ್ಟಿದ್ದ ವಿಶ್ವಾಸದಿಂದ ಹೆಮ್ಮೆ ಎನ್ನಿಸಿತು. ಅಲ್ಲಿಯೇ ಕೆಲಸ ಮುಂದುವರಿಸಲು ನಿರ್ಧರಿಸಿದೆ.

ಒಂದೂವರೆ ವರ್ಷ ಕಳೆಯಿತು. ಅಧಿಕಾರಿಗಳು ಮತ್ತೆ ನನ್ನನ್ನು ಠಾಣೆಗೆ ವರ್ಗಾವಣೆ ಮಾಡಿಸುವ ನಿರ್ಧಾರಕ್ಕೆ ಬಂದರು. ಮರಿಸ್ವಾಮಿಯವರು ಎಡಿಜಿ (ಅಡ್ಮಿನ್) ಆಗಿದ್ದರು. ವರ್ಗಾವಣೆಗಳ ಮುಖ್ಯ ಅಧಿಕಾರ ಅವರದ್ದೇ ಆಗಿತ್ತು. ಬೇಹುಗಾರಿಕಾ ವಿಭಾಗದ ಐಜಿ ಆಗಿ ಜಯಪ್ರಕಾಶ್ ಇದ್ದರು. ಅವರಿಬ್ಬರೂ `ಈ ಬಾರಿ ಶಿವರಾಂ ವರ್ಗಾವಣೆ ಮಾಡಲೇಬೇಕಾಗಿದೆ~ ಎಂದರು. ನನ್ನನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡುವ ನಿರ್ಧಾರ ಹೊರಬಿತ್ತು.

ಆ ಜಾಗಕ್ಕೆ ಇನ್ನೊಬ್ಬ ಪೊಲೀಸ್ ಅಧಿಕಾರಿ ಪ್ರಯತ್ನಿಸಿದ್ದರೆಂಬ ವಿಚಾರವನ್ನು ನನಗೆ ಹಿರಿಯ ಅಧಿಕಾರಿಗಳೇ ಹೇಳಿದರು. ಶಾಸಕರೊಬ್ಬರ ಬಲವಾದ ಬೆಂಬಲದ ಜೊತೆಗೆ ಆರು ಶಾಸಕರ ಶಿಫಾರಸು ಪತ್ರಗಳನ್ನು ಇಟ್ಟುಕೊಂಡು ಅವರು ನನ್ನನ್ನು ವರ್ಗಾವಣೆ ಮಾಡಲು ನಿರ್ಧರಿಸಿದ್ದ ಜಾಗಕ್ಕೆ ಹೋಗಲು ಪ್ರಯತ್ನಿಸಿದ್ದರು.

`ವಶೀಲಿಯಿಂದ ಈ ಜಾಗಕ್ಕೆ ಬರುವುದಾದರೆ ನಾವು ನಿಷ್ಕ್ರಿಯ ಎನ್ನಿಸಿಕೊಳ್ಳುತ್ತೇವೆ. ಇದು ಮುಖ್ಯವಾದ ಠಾಣೆ. ಸಮರ್ಥರೇ ಬೇಕೆಂದು ನಿಮ್ಮನ್ನು ಅಲ್ಲಿಗೆ ನಿಯೋಜಿಸುತ್ತಿದ್ದೇವೆ~ ಎಂದರು. ಹೈಕೋರ್ಟ್‌ನ ರಿಜಿಸ್ಟ್ರಾರ್ ಒಬ್ಬರು ಬಂದು, `ಏನ್ರೀ ಅಷ್ಟು ಪಟ್ಟಾಗಿ ಹಿಡಿದುಕೊಂಡಿದ್ದಾರೆ ನಿಮ್ಮನ್ನು. ಈ ಸಲವೂ ನಿಮ್ಮ ಟ್ರಾನ್ಸ್‌ಫರ್ ಕ್ಯಾನ್ಸಲ್ ಮಾಡಿಸ್ತೀವಿ~ ಎಂದುಬಿಟ್ಟರು. ನಾನು `ಆಗಲಿ~ ಎಂದೆ. ಆದರೆ, ಹಿರಿಯ ಪೊಲೀಸ್ ಅಧಿಕಾರಿಗಳು `ಇಷ್ಟು ವರ್ಷ ಅವರು ಅಲ್ಲಿ ಕೆಲಸ ಮಾಡಿರುವುದೇ ಹೆಚ್ಚು. ಅವರಿಗೆ ಸರಿಸಮಾನರಾದ ಇನ್ನೊಬ್ಬರನ್ನು ನಿಮಗೆ ಕೊಡುತ್ತೇವೆ; ಬಿಟ್ಟುಕೊಡಿ~ ಎಂದು ಕೇಳಿಕೊಂಡರು. ಹೈಕೋರ್ಟ್ ರಿಜಿಸ್ಟ್ರಾರ್‌ಗಳೂ ನನ್ನನ್ನು ತುಂಬುಪ್ರೀತಿಯಿಂದ ಕಳುಹಿಸಿಕೊಟ್ಟರು.

ಪೊಲೀಸ್ ಜಗತ್ತಿನ ಕೆಲವು `ಆಸ್ಥಾನ ಪಂಡಿತ~ರಿಗೆ ನನ್ನ ವರ್ಗಾವಣೆಯಿಂದ ಮತ್ತೆ ಕಿಚ್ಚು ಹತ್ತಿಕೊಂಡಿತು. ಅದು ಪ್ರಮುಖ ಪೊಲೀಸ್ ಠಾಣೆಯಾಗಿತ್ತು. ನನ್ನ ಮೇಲೆ ದೊಡ್ಡ ಜವಾಬ್ದಾರಿಯೂ ಇತ್ತು. ಆ ಠಾಣೆಯಲ್ಲಿ ಕೆಲಸ ಮಾಡುವಾಗ ದಾಳಿ ನಡೆಸಿ ಎರಡು ಕೋಟಿ ರೂಪಾಯಿ ಮೌಲ್ಯದ ನಕಲಿ ಸೀಡಿ ಜಾಲವನ್ನು ನಮ್ಮ ತಂಡ ಭೇದಿಸಿತು.

ತಮಿಳುನಾಡು, ಕೇರಳ, ಮುಂಬೈ ಮೊದಲಾದ ಚಿತ್ರೋದ್ಯಮದ ವಾಣಿಜ್ಯ ಮಂಡಳಿಗಳು ನಮ್ಮ ಕಾರ್ಯವನ್ನು ಶ್ಲಾಘಿಸಿದವು.

ಅಮೆರಿಕದ `ಮೋಷನ್ ಪಿಕ್ಚರ್ಸ್‌ ಅಸೋಸಿಯೇಷನ್ ಇಂಟರ್‌ನ್ಯಾಷನಲ್~ನ `ಏಷ್ಯಾ ಪೆಸಿಫಿಕ್ ಆಂಟಿ ಪೈರಸಿ ಆಪರೇಷನ್~ ಘಟಕವು ನಮ್ಮ ಇಲಾಖೆಯವರಿಗೆ ಈ ಕೆಲಸಕ್ಕಾಗಿ ಶ್ಲಾಘನಾಪತ್ರ ನೀಡಿ ಗೌರವಿಸಿತು. ಏಷ್ಯಾ ಖಂಡದಲ್ಲಿಯೇ ಇಷ್ಟು ದೊಡ್ಡ ಪೈರಸಿ ಸೀಡಿ ಜಾಲವನ್ನು ಅದುವರೆಗೆ ಭೇದಿಸಿರಲಿಲ್ಲ.
* * *
ಅಧಿಕಾರಿಯ ಮನಸ್ಸನ್ನು ಅರ್ಥ ಮಾಡಿಕೊಂಡು ಅವರ ಬಯಕೆ ಈಡೇರಿಸುವುದು, ಅವರು ಏನು ನಿರೀಕ್ಷಿಸುತ್ತಾರೋ ಅಂತೆಯೇ ವರ್ತಿಸುವುದು, ಅಡುಗೆ ಮಾಡುವವನಿಗೆ ಪ್ರಾಧಾನ್ಯ ಕೊಡುವುದು- ಹೀಗೆಲ್ಲಾ ಮಾಡುತ್ತಲೇ ಸೇವಾವಧಿ ಪೂರೈಸುವವರನ್ನು ನಾನು ಕಂಡಿದ್ದೇನೆ.

ಒಬ್ಬ ಹಿರಿಯ ಅಧಿಕಾರಿಗೆ ಕಾಡುಹಂದಿ ಎಂದರೆ ಬಲು ಇಷ್ಟ. ಬೆಂಗಳೂರು ನಗರದಲ್ಲಿ ಅವರಿಗೊಬ್ಬ ಭಟ್ಟಂಗಿ ಪೊಲೀಸ್ ಇದ್ದರು. ಅವರು ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡಿ ಬಡ್ತಿ ಪಡೆದು ಎಸಿಪಿ ಆಗಿ ಇದ್ದರು. ಜೀವಮಾನವಿಡೀ ಭಟ್ಟಂಗಿಯಾಗಿಯೇ ಇದ್ದ ಅವರು ಕಾಡುಹಂದಿಪ್ರಿಯ ಅಧಿಕಾರಿಯನ್ನು ಚೆನ್ನಾಗಿಯೇ ಓಲೈಸುತ್ತಿದ್ದರು.

ಕಾಡುಹಂದಿಯ ಮಾಂಸದಲ್ಲಿ ಕಿಂಚಿತ್ತೂ ಕೊಬ್ಬು ಇರುವುದಿಲ್ಲ. ನಾಡಹಂದಿಯ ಮಾಂಸದಲ್ಲಿ ಮಾಂಸಕ್ಕಿಂತ ಕೊಬ್ಬು ದಪ್ಪ. ಅದನ್ನು ಪೂರ್ತಿ ಕೆರೆಸಿ, ಹೆಚ್ಚು ಖಾರದ ಮಸಾಲೆ ಹಾಕಿಸಿ ಅಡುಗೆ ಮಾಡಿಸಿ ತಂದು, ಕಾಡುಹಂದಿ ಪ್ರಿಯ ಅಧಿಕಾರಿಗೆ ಕೊಡುತ್ತಿದ್ದರು. ಆ ಹಿರಿಯ ಅಧಿಕಾರಿ ಅದನ್ನೇ `ಬೆಸ್ಟ್‌ಬೆಸ್ಟ್ ಬೆಸ್ಟ್~ ಎನ್ನುತ್ತಾ ಚಪ್ಪರಿಸಿಕೊಂಡು ತಿಂದದ್ದನ್ನು ನಾನು ಕಂಡಿದ್ದೇನೆ. ಮಾನವೀಯತೆಗೆ ಬೆಲೆ ಕೊಡುತ್ತಿದ್ದ ಆ ಅಧಿಕಾರಿ ಭಟ್ಟಂಗಿಗಳಿಗೂ ದಡ್ಡತನದಿಂದ ಆಸ್ಪದ ಕೊಡುತ್ತಿದ್ದುದು ನನಗೆ ಅಚ್ಚರಿಯ ಸಂಗತಿಯಾಗಿ ಕಂಡಿತ್ತು. ಆ ಹಂದಿಪ್ರಿಯ ಅಧಿಕಾರಿ ಕೋಮುವಾದಿಯಾಗಿದ್ದುದೇ ಅದಕ್ಕೆ ಕಾರಣ. ಅಂಜುಬುರುಕರೂ ಆಗಿದ್ದ ಅವರನ್ನು ಮಾಧ್ಯಮ ಕೂಡ `ಸೂಪರ್ ಕಾಪ್~ ಎಂದೇ ಬಣ್ಣಿಸಿತ್ತು. ಇನ್ನೊಬ್ಬ ಪೊಲೀಸ್ ಅಧಿಕಾರಿ ಸಂಪ್ರದಾಯಸ್ಥ ಮನೆತನದವರು. ಸಸ್ಯಾಹಾರಿ. ಅವರ ಮನೆಯ ಆರ್ಡರ್ಲಿಗಳು ಕೂಡ ಸಸ್ಯಾಹಾರಿಗಳೇ ಆಗಿದ್ದರು. ಅವರೂ ಆ ಹಿರಿಯ ಅಧಿಕಾರಿಗಳನ್ನು ಓಲೈಸಲು ಅಗತ್ಯ ಬಿದ್ದಾಗ ಮಾಂಸಾಹಾರದ ಅಡುಗೆ ಕೊಟ್ಟು ಕೃತಾರ್ಥರಾದದ್ದೂ ಇದೆ.
* * *
ಕಮಿಷನರನ್ನು ಮೆಚ್ಚಿಸಲಿಕ್ಕೆ ಇನ್ನೊಬ್ಬ ಭಟ್ಟಂಗಿ ಎಸಿಪಿ ಅವರ ಚೇರ್‌ಗೆ ಮರಗಳ ಮಣಿಯ ಕವಚ ತಂದುಕೊಟ್ಟರು. `ವೆರಿಗುಡ್, ಎಲ್ಲಿಂದ ತಂದೆ, ಚೆನ್ನಾಗಿದೆ~ ಎಂದು ಅದನ್ನು ನೋಡಿದ ಕಮಿಷನರ್ ಉದ್ಗರಿಸಿದರು. ಅದನ್ನು ಕುರ್ಚಿಯ ಮೇಲೆ ಇಟ್ಟ ಭಟ್ಟಂಗಿ ಆರ್ಡರ್ಲಿಗಳೇ ಕಟ್ಟಿಕೊಳ್ಳುತ್ತಾರೆ ಎಂದುಕೊಂಡು ಹೊರಟುಹೋದರು. ಕಮಿಷನರ್ ಕೂಡ ಅದರ ಮೇಲೆ ಕೂರದೆ ಊಟಕ್ಕೆ ಹೋದರು. ಮತ್ತೆ ಅವರು ಕ್ಯಾಬಿನ್‌ಗೆ ಹೋದ ಕೆಲವೇ ಕ್ಷಣಗಳಲ್ಲಿ ಫೈರ್ ಎಂಜಿನ್ ತರಹ ಸತತವಾಗಿ ಕಾಲಿಂಗ್ ಬೆಲ್ ಹೊಡೆದುಕೊಳ್ಳತೊಡಗಿತು. ಹೊರಗಿದ್ದ ಸೆಂಟ್ರಿ ಆತಂಕದಿಂದ ಒಳಗೆ ನುಗ್ಗಿದರೆ ಕುರ್ಚಿಯ ಮೇಲೆ ಕಮಿಷನರ್ ಇರಲೇ ಇಲ್ಲ. ಅವನಿಗೆ ಆಶ್ಚರ್ಯ. ಬೆಲ್ ಮಾತ್ರ ಸತತವಾಗಿ ಸದ್ದು ಮಾಡುತ್ತಲೇ ಇತ್ತು. ಕಮಿಷನರ್ ಎಲ್ಲಿರಬಹುದು ಎಂದು ಅವನು ಹುಡುಕತೊಡಗಿದ. ಅತ್ತಿತ್ತ ನೋಡುತ್ತಿದ್ದ ಅವನಿಗೆ ಅತಿಯಾದ ಬೈಗುಳವೊಂದು ಕೇಳಿಸಿತು. ಧ್ವನಿ ಬಂದ ಕಡೆ ಬಗ್ಗಿ ನೋಡಿದರೆ ಮೇಜಿನ ಕೆಳಗೆ ಕಮಿಷನರ್ ಬಿದ್ದಿದ್ದರು. ಕುರ್ಚಿಗೆ ಕಟ್ಟಿಲ್ಲದ ಮಣಿಯ ಕವಚದ ಮೇಲೆ ಕುಳಿತು ಜಾರಿಕೊಂಡು ಅವರು ಮೇಜಿನ ಕೆಳಗೆ ಹೋಗಿ ಬಿದ್ದುಬಿಟ್ಟಿದ್ದರು. ಅಲ್ಲಿದ್ದ ಸೆಂಟ್ರಿ ಈ ಘಟನೆ ಹೇಳಿ ನನ್ನಂತೆ ಅನೇಕರನ್ನು ನಗೆಗಡಲಲ್ಲಿ ತೇಲಿಸಿದ್ದ.

ಮುಂದಿನ ವಾರ: ಕೆಲವರ ಅಹಂನಿಂದ ಜನಜೀವನದ ಮೇಲಾಗುವ ದುಷ್ಪರಿಣಾಮಗಳು
ಶಿವರಾಂ ಅವರ ಮೊಬೈಲ್ ಸಂಖ್ಯೆ:
9448313066.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.