ಇತ್ತೀಚೆಗೆ ನ್ಯಾಯಾಂಗ, ಮಾಧ್ಯಮ ಹಾಗೂ ಪೊಲೀಸ್- ಮೂರೂ ಕ್ಷೇತ್ರಗಳು ಸುದ್ದಿಯಲ್ಲಿವೆ. ಕ್ಷುಲ್ಲಕ ಕಾರಣಗಳಿಂದಾಗಿ ಜನರಿಗೆ ಈ ಕ್ಷೇತ್ರಗಳ ಬಗ್ಗೆ ಅಪನಂಬಿಕೆ ಶುರುವಾಗಿದೆ. ಮೂರೂ ಕ್ಷೇತ್ರಗಳಲ್ಲಿರುವ ಕೆಲವರ ಸ್ವಪ್ರತಿಷ್ಠೆಯಿಂದಾಗಿ ಉದ್ಭವಿಸಿದ ಸಮಸ್ಯೆ ದೊಡ್ಡದಾಗಿದೆ.
ಈ ಮೂರೂ ಕ್ಷೇತ್ರಗಳ ನಡುವೆ ತಾಳಮೇಳ ಸರಿಯಾಗಿರಬೇಕು. ಈಗ ಅದಿಲ್ಲವಾಗಿದೆ. ಸಾಮಾಜಿಕ ಸಮಸ್ಯೆಗಳಿಗೆ ಉತ್ತರರೂಪವಾಗಿರುವ ಈ ಕ್ಷೇತ್ರಗಳೇ ಸಮಸ್ಯೆಗಳನ್ನು ಹುಟ್ಟುಹಾಕುತ್ತ ಕೂತಿರುವುದು ಪರಿಸ್ಥಿತಿಯ ವ್ಯಂಗ್ಯ.
ವಕೀಲರ ಸಂಘದಲ್ಲಿ ರಾಜಕೀಯ ಪ್ರೇರಿತರಿದ್ದಾರೆ. ಮಾಧ್ಯಮದಲ್ಲಿ ರಾಜಕೀಯ ಬೆಂಬಲಿಗರಿದ್ದಾರೆ. ಅಂತೆಯೇ ಪೊಲೀಸರಲ್ಲಿ ರಾಜಕಾರಣಿಗಳ ಜೊತೆ ಶಾಮೀಲಾಗಿ ಅವರಿಗೆ ಅನುಕೂಲ ಮಾಡಿಕೊಡುವವರಿದ್ದಾರೆ.
1970-80ರ ದಶಕದಲ್ಲಿ ಬೆಂಗಳೂರಿನಲ್ಲಿ ಜಯರಾಜನ ತಂಡ, ಕೊತ್ವಾಲ ರಾಮಚಂದ್ರನ ತಂಡಗಳು ಪ್ರಬಲವಾಗಿದ್ದವು. ಮಧ್ಯದಲ್ಲಿ ಆಯಿಲ್‌ಕುಮಾರ್ ತಂಡ ಕೂಡ ಸುಮ್ಮನಿರಲಿಲ್ಲ. ಈ ಮೂರೂ ತಂಡಗಳಿಗೆ ರಾಜಕಾರಣಿಗಳ, ವಕೀಲರ, ಪೊಲೀಸ್ ವ್ಯವಸ್ಥೆಯಲ್ಲಿನ ಕೆಲವರ ಬೆಂಬಲ ಇತ್ತು.
ರಾಜಕಾರಣಿಗಳ ಬೆಂಬಲ ಪಡೆದ ಪೊಲೀಸರು ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಗಾದೆಯನ್ನು ತಪ್ಪಾಗಿ ಅನುಷ್ಠಾನಕ್ಕೆ ತಂದು, ಆ ಪಾತಕಿಗಳಿಗೇ ನೆರವು ನೀಡುತ್ತಿದ್ದರು.
ಇದರ ಪರಿಣಾಮವೇ ಗೋಪಿ ಮತ್ತು ತಂಡದ ಮೇಲೆ ನಡೆದ ಹಲ್ಲೆ. ಗೋಪಿಯ ವಿರುದ್ಧ ಜಯರಾಜ್ ವೈರತ್ವ ಸಾಧಿಸುತ್ತಾ, ಕೋರ್ಟ್ ಆವರಣದೊಳಕ್ಕೇ ನುಗ್ಗಿ ಅವನ ಮೇಲೆ ಹಲ್ಲೆ ಮಾಡಿದ.
`ಕ್ರಿಮಿನಲ್ ಸಿಸ್ಟಂ ಆಫ್ ಜಸ್ಟಿಸ್~ಗೆ ವಿರುದ್ಧವಾಗಿ ನ್ಯಾಯ ದೇಗುಲದಲ್ಲಿಯೇ ಈ ಹಲ್ಲೆ ನಡೆದದ್ದು ದುರಂತ. ಜಯರಾಜ್ ಪರವಾಗಿಯೂ ಪ್ರಖ್ಯಾತ ವಕೀಲರೇ ಕೇಸು ನಡೆಸಿದರು. ಆ ಪ್ರಕರಣದಲ್ಲಿ ಒಬ್ಬರು ನ್ಯಾಯಾಧೀಶರು ಸಾಕ್ಷಿ ಹೇಳಿದ್ದರಿಂದ ಅವನಿಗೆ ಶಿಕ್ಷೆಯಾಯಿತು. ಇಲ್ಲವಾಗಿದ್ದಲ್ಲಿ ಅದನ್ನೂ ಅವನು ತಪ್ಪಿಸಿಕೊಳ್ಳುತ್ತಿದ್ದ.
ಇತ್ತೀಚೆಗೆ ಕೆ.ಪಿ.ಜಡ್ ಹುಸೇನ್ ಎಂಬ ವ್ಯಕ್ತಿ ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕೊಲೆಯಾದ. ಅವನ ಇಬ್ಬರ ಹೆಣ್ಣುಮಕ್ಕಳ ಎದುರಲ್ಲೇ ಈ ದುರ್ಘಟನೆ ನಡೆದುಹೋಯಿತು.
ಕೊಲೆಗೆ ಕಾರಣರಾದವರ ಬೆಂಬಲಕ್ಕೆ ಒಂದು ದೊಡ್ಡ ಧಾರ್ಮಿಕ ಸಮುದಾಯವೇ ನಿಂತಿತು. ಕೆಲವು ರಾಜಕಾರಣಿಗಳು, ಪೊಲೀಸರೂ ಆ ಮಕ್ಕಳ ಮೇಲೆ ಇನ್ನಿಲ್ಲದಂತೆ ಒತ್ತಡ ಹೇರಿದರು. ಅವನ್ನೆಲ್ಲಾ ಸಹಿಸಿಕೊಂಡು, ಕಷ್ಟಗಳನ್ನು ಮಡಿಲಲ್ಲಿಟ್ಟುಕೊಂಡೇ ಆ ಹೆಣ್ಣುಮಕ್ಕಳು ಒತ್ತಡ ಮೀರಿ ಸಾಕ್ಷಿ ಹೇಳಿದರು.
ನ್ಯಾಯಾಲಯದಲ್ಲಿ ಜೀವಾವಧಿ ಶಿಕ್ಷೆ ಪ್ರಕಟವಾಗಿದ್ದೇ ಕೆಲವು ಆರೋಪಿಗಳು ಪರಾರಿಯಾದರು. ಮತ್ತೆ ಅವರನ್ನು ಹಿಡಿದು ತಂದು, ಶಿಕ್ಷೆಯನ್ನು ಪ್ರಕಟಿಸಿದ್ದೂ ಆಯಿತು. ಅದೇ ಸಂದರ್ಭದಲ್ಲಿ ಆರೋಪಿಗಳ ಸಂಬಂಧಿಕರು ನ್ಯಾಯಾಲಯದ ಆವರಣದಲ್ಲಿ ದಾಂಧಲೆ ಶುರುಮಾಡಿದರು. ಇದರಿಂದ ಎಷ್ಟೋ ಅಮಾಯಕ ಜನರಿಗೆ ತೊಂದರೆಯಾಯಿತು.
ಸ್ವಾಸ್ಥ್ಯ ಸಮಾಜ ಇರಬೇಕೆಂದರೆ ಪೊಲೀಸ್, ಮಾಧ್ಯಮ ಹಾಗೂ ನ್ಯಾಯಾಂಗ- ಈ ಮೂರೂ ಕ್ಷೇತ್ರಗಳು ಗಟ್ಟಿಯಾಗಿರಬೇಕು. ಈ ಬದಲಾದ ಕಾಲದಲ್ಲಿ ಮೂರೂ ಕಡೆ `ಬ್ಲ್ಯಾಕ್‌ಶೀಪ್ಸ್~ (ಕರಿ ಕುರಿಗಳು) ಇವೆ. ಪೊಲೀಸರಲ್ಲೂ ಜವಾಬ್ದಾರಿಯಿಂದ ವರ್ತಿಸದವರ ಸಂಖ್ಯೆ ಹೆಚ್ಚಾಗುತ್ತಿದೆ.
ಬೆಂಗಳೂರು ನಗರಕ್ಕೆ ಇತ್ತೀಚೆಗೆ ಬರುತ್ತಿರುವ ಬಹುತೇಕ ಉನ್ನತ ಪೊಲೀಸ್ ಅಧಿಕಾರಿಗಳು ರಾಜಕೀಯ ವರ್ಚಸ್ಸು, ಪ್ರಭಾವದಿಂದಲೇ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. ಇಲ್ಲವೇ ಜಾತಿ ಅನುಕಂಪದಿಂದ ಆ ಸ್ಥಾನ ತಲುಪಿರುತ್ತಾರೆ.
ಆಯಕಟ್ಟಿನ ಜಾಗದಲ್ಲಿ ಇಂಥವರು ಬಂದು ಕೂತರೆ ಪ್ರಯೋಜನವಿಲ್ಲ. ಕೆಲಸ ಮಾಡುವ ಪ್ರದೇಶದ ನಾಡಿಮಿಡಿತ ಅರಿತ ಅಧಿಕಾರಿಯಿಂದಷ್ಟೇ ಸಮರ್ಪಕ ಕೆಲಸ ಸಾಧ್ಯ. ಪ್ರದೇಶದ ಜಾಯಮಾನ ಗೊತ್ತಿಲ್ಲದವರನ್ನು ತಂದು ಕೂರಿಸಿದರೆ, ಆ ಸ್ಥಳದ ಜನರ ನಾಡಿಮಿಡಿತ ಏನು ಎಂದು ಅರಿಯಲು ಒಂದು ವರ್ಷ ಬೇಕಾಗುತ್ತದೆ.
ಮಾಧ್ಯಮದ ಪರಿಸ್ಥಿತಿ ಕೂಡ ಈಗ ಮೊದಲಿನಂತಿಲ್ಲ. ಕೆಲವು ವರ್ಷಗಳ ಹಿಂದೆ ಪತ್ರಕರ್ತರು, ಪತ್ರಿಕಾ ಛಾಯಾಗ್ರಾಹಕರು ಮಾತ್ರ ನಮಗೆ ಕಾಣುತ್ತಿದ್ದರು. ಈಗ ವಿದ್ಯುನ್ಮಾನ ಮಾಧ್ಯಮದವರ ದೊಡ್ಡ ದಂಡೇ ಸೇರ್ಪಡೆಯಾಗಿದೆ. ಅವರ ನಡುವೆ ಪೀತ ಪತ್ರಿಕೆಗಳ ಜನ ನುಸುಳುವುದು ಮುಂದುವರಿದೇ ಇದೆ.
ವಿವಿಧ ಇಲಾಖೆಗಳಲ್ಲಿ ಪೀತ ಪತ್ರಿಕೆಗಳವರು ಹಣ ಸುಲಿಯುತ್ತಿದ್ದಾರೆ. ಇನ್ನು ವಕೀಲರ ಸಂಘದ ವಿಷಯ. ಅಲ್ಲಿ ಚುನಾವಣೆ ನಡೆಯುತ್ತಿರುವ ರೀತಿಯೇ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಮದ್ಯದ ಸರಬರಾಜು, ಆಮಿಷ, ಬೆದರಿಕೆ, ಜಾತಿ, ರಾಜಕಾರಣ ಎಲ್ಲವೂ ಆ ಚುನಾವಣೆಗಳಲ್ಲಿ ಇದೆ. ಹೀಗಾಗಿ ನ್ಯಾಯಾಂಗದಲ್ಲೂ ಕಲುಷಿತಗೊಂಡವರು ಇದ್ದಾರೆಂಬುದು ಸ್ಪಷ್ಟ.
ಪೊಲೀಸರಲ್ಲೂ ಸ್ವಾರ್ಥಕ್ಕಾಗಿ ಅಡ್ಡದಾರಿ ಹಿಡಿಯುವವರನ್ನು ನಾನೇ ಕಂಡಿದ್ದೇನೆ. ಪಾತಕಿಗಳ ಜೊತೆ ಶಾಮೀಲಾಗುವುದು, ರಾಜಕೀಯ ಪ್ರಭಾವಕ್ಕೆ ಒಳಗಾಗುವುದು ಈಗಲೂ ನಿಂತಿಲ್ಲ. ಅಂಥವರು ಸ್ವಂತ ಬುದ್ಧಿಯಿಂದ ಕೆಲಸ ಮಾಡುವುದನ್ನು ಬಿಟ್ಟು ಬೇರೆಯವರ ಕೈಗೊಂಬೆಯಾಗುತ್ತಾರೆ.
ಹಾದಿಬಿಟ್ಟು ಕೆಲಸ ಮಾಡುವ ವಕೀಲರು, ಪೊಲೀಸರು, ಮಾಧ್ಯಮದವರಿಗೆ ಸಾಮಾಜಿಕ ಸ್ವಾಸ್ಥ್ಯದ ಕಾಳಜಿಯೇ ಇರುವುದಿಲ್ಲ. ಗಲಭೆ, ದಾಂಧಲೆ, ದುಷ್ಕೃತ್ಯಕ್ಕೆ ಇಂಥವರ ಧೋರಣೆಯೂ ತುಪ್ಪ ಸುರಿಯುತ್ತದೆ.
ಅಪ್ರತಿಮ, ಸಮಾಜಮುಖಿ, ಅನ್ಯಾಯದ ವಿರುದ್ಧ ಸಿಡಿದೇಳುವಂಥವರನ್ನು ಎದೆಗಾರಿಕೆ ಮತ್ತು ಧೈರ್ಯದಿಂದ ಮಾತಿನಲ್ಲೇ ಗಲಭೆಗಳನ್ನು ಹತೋಟಿಗೆ ತರುತ್ತಿದ್ದ ಪೊಲೀಸ್ ಅಧಿಕಾರಿಗಳನ್ನು ಕಂಡಿದ್ದೇವೆ. ವಕೀಲರು ಬಹಳ ಬೇಗ ಪ್ರಚೋದನೆಗೆ ಒಳಗಾಗುತ್ತಾರೆ. ಯಾಕೆಂದರೆ, ಗಲಭೆ ನಡೆದದ್ದು ಅವರ ಅಖಾಡದಲ್ಲಿ. ವಕೀಲರು ಹೀಗೆಯೇ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿದರೆ ಅವರು ಅದನ್ನು ಸಹಿಸುವುದೂ ಇಲ್ಲ.
ಈ ಎಲ್ಲದರ ಮೊತ್ತವೇ ಗಲಭೆ. `ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್. ಸ್ಟ್ರಗಲ್ ಫಾರ್ ಎಕ್ಸಿಸ್ಟೆನ್ಸ್~ ಎಂಬ ಡಾರ್ವಿನ್ನನ ಸಿದ್ಧಾಂತದ ಸಾಕಾರರೂಪವಿದು. ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರವಾದ ದೃಶ್ಯಗಳು ಗಲಭೆಯ ಒಂದು ಮುಖವನ್ನು ಮರೆಮಾಚಿ, ಇನ್ನೊಂದನ್ನು ಮಾತ್ರ ತೆರೆದಿಟ್ಟು ದಾರಿ ತಪ್ಪಿಸಿದವು.
ಗಲಭೆಯಲ್ಲಿ ಇಬ್ಬರು ಪೊಲೀಸರ ಸಾವು ಎಂದು ಸುದ್ದಿ ಹರಡಿದ್ದಂತೂ ಸಾಮಾಜಿಕ ಹೊಣೆಗಾರಿಕೆ ಇಲ್ಲದವರ ಉಡಾಫೆಗೆ ಹಿಡಿದ ಕನ್ನಡಿ. ಇಬ್ಬರು ವಕೀಲರು ಮೃತಪಟ್ಟಿದ್ದಾರೆಂದು ಮೊಬೈಲ್‌ಗಳಲ್ಲಿ ಮೆಸೇಜುಗಳನ್ನೂ ಹಬ್ಬಿಸಿದ್ದರು.
ಅಂಥದೊಂದು ಮೆಸೇಜು ನನಗೂ ಬಂದಿತ್ತು. ವಸ್ತುಸ್ಥಿತಿಯ ನೈಜ ಚಿತ್ರಣವನ್ನು ಪರಿಪೂರ್ಣವಾಗಿ ದಾಖಲಿಸದೆ, ಪರಿಸ್ಥಿತಿಯ ಸೂಕ್ಷ್ಮವನ್ನು ಪರಿಶೀಲಿಸದೆ ಗಲಭೆಯ ವಿಷಯದಲ್ಲಿ ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಕೆಲವರು ಪ್ರಚಾರ ಮಾಡ್ದ್ದಿದರಿಂದ ಕ್ಷುಲ್ಲಕ ಸಂಗತಿಯೊಂದು ದೊಡ್ಡದಾಗುವಂತಾಯಿತು. ಒಬ್ಬ ವಕೀಲ ಹೆಲ್ಮೆಟ್ ಇಲ್ಲದೆ ವಾಹನ ಓಡಿಸಿದ ಎಂಬ ಕಾರಣಕ್ಕೆ ಅವನನ್ನು ಪೊಲೀಸರು ಪ್ರಶ್ನಿಸಿದ ಘಟನೆ ಇಷ್ಟು ಬೃಹದಾಕಾರ ಪಡೆದುಕೊಳ್ಳಬೇಕಿರಲಿಲ್ಲ.
ಹಿರಿಯ ವಕೀಲರ ಮಾತನ್ನು ಗಣನೆಗೆ ತೆಗೆದುಕೊಳ್ಳದೆ ಕಿರಿಯ ವಕೀಲರು ತಿರುಗಿಬೀಳುತ್ತಿದ್ದಾರೆ. ತಮ್ಮ ಕರ್ತವ್ಯ ಪಾಲನೆ ಮಾಡದ ಕೆಲವು ಪೊಲೀಸರು ಕೂಡ ಮಾಧ್ಯಮದವರು, ವಕೀಲರು ಪರಸ್ಪರ ಹೊಡೆದಾಡಿಕೊಳ್ಳಲಿ ಎಂಬಂತೆ ವರ್ತಿಸುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಒಬ್ಬ ವಕೀಲೆ, ಆಕೆಯ ಪತಿ ಹಾಗೂ ತಾಯಿಯನ್ನು ಹಾಡಹಗಲಲ್ಲೇ ಕೊಂದು ರಸ್ತೆಗೆ ಬಿಸಾಡಿದ್ದ ಪ್ರಕರಣ ಜ್ಞಾನಭಾರತಿ ಪೊಲೀಸ್ ಠಾಣೆ ಸರಹದ್ದಿನಲ್ಲಿ ನಡೆದಿತ್ತು. ಅಕ್ರಮ ಕಟ್ಟಡ ನಿರ್ಮಾಣದ ಕುರಿತು ಕೇಸು ಹಾಕಿ, ಸುಪ್ರೀಂಕೋರ್ಟ್‌ವರೆಗೆ ಹೋಗಿ ಹೋರಾಡಿದ್ದ ಮಹಿಳೆ ಅವರು. ಅವರಿಗಾದ ಅನ್ಯಾಯದ ವಿರುದ್ಧ ವಕೀಲರು ಆಗ ಪ್ರತಿಭಟನೆ ಮಾಡಲಿಲ್ಲ. ಚಿತ್ರಲೇಖ ಕೊಲೆ ಪ್ರಕರಣದಲ್ಲಿ ಅನ್ಯಾಯವಾದಾಗ ಕೂಡ ಅವರಿಗೆ ಪ್ರತಿಭಟನೆ ಮಾಡಬೇಕು ಅನ್ನಿಸಲಿಲ್ಲ.
ಬದಲಿಗೆ ವಕೀಲರ ವೃಂದವೇ ಆ ಕೇಸನ್ನು ಗೆದ್ದುಕೊಟ್ಟಿತ್ತು. ಹಿರಿಯ ವಕೀಲರು ಒಮ್ಮೆ ಬುದ್ಧಿಮಾತು ಹೇಳಿದಾಗ ವಕೀಲರ ಸಂಘ ಅವರ ತಿಥಿ ಮಾಡಿ, ವಡೆ-ಪಾಯಸ ತಿಂದು ಪ್ರತಿಭಟನೆ ವ್ಯಕ್ತಪಡಿಸಿತ್ತು. ಅದನ್ನು ಕಂಡ ಅನುಭವಸ್ಥ ವಕೀಲರಿಗೆ ಮುಜುಗರವಾಗಿ ಬೇಸತ್ತಿದ್ದರು. ಈಗಲೂ ಹಿರಿಯರು ಇಂಥ ಘಟನೆಗಳ ಬಗ್ಗೆ ಮಾತನಾಡಲು ಕೂಡ ಹಿಂದೇಟು ಹಾಕುವುದು ಇದೇ ಕಾರಣಕ್ಕೆ.
ವಕೀಲರ ಸಂಘವೇ ಪೊಲೀಸ್ ಕಮಿಷನರ್ ಹತ್ತಿರ ಹೋಗಿ ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದಿದ್ದರೆ ಈ ಸಮಸ್ಯೆ ಬೇಗ ಬಗೆಹರಿಯುವ ಸಾಧ್ಯತೆ ಇತ್ತು. ಅದರೆ ತಾಳ್ಮೆ ಇಲ್ಲದ, ಅನುಭವಸ್ಥರ ಮಾತಿಗೆ ಕಿವಿಗೊಡದವರ ಸ್ವಾರ್ಥದಿಂದ ಹೀಗೆಲ್ಲಾ ಆಗುತ್ತಿದೆ. ಇದು ದುರಂತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.