1997-98ರಲ್ಲಿ ನಾನು ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದೆ. ಲಾಡ್ಜ್ ಒಂದರಲ್ಲಿ ಯುವತಿಯೊಬ್ಬಳ ಕೊಲೆಯಾಗಿತ್ತು. ಆ ಕುರಿತು ದೂರು ಬಂದದ್ದೇ ಅಲ್ಲಿಗೆ ಹೋದೆವು. ಕಿಟಕಿಯಲ್ಲಿ ನೋಡಿದರೆ ಶೌಚಾಲಯದ ಕೆಳಭಾಗದಿಂದ ಶವದ ಕಾಲುಗಳಷ್ಟೇ ಕಾಣುತ್ತಿದ್ದವು. ಒಳಗೆ ಹೋಗಿ ನೋಡಿದೆವು. ಯಾರೋ ಬರ್ಬರವಾಗಿ ಕೊಂದಿದ್ದರು. ಮೊದಲು ನೀರಿನಲ್ಲಿ ಮುಳುಗಿಸಿ, ಆಮೇಲೆ ದುಪಟ್ಟ ಕತ್ತಿಗೆ ಬಿಗಿದು ಅವಳನ್ನು ಕೊಲ್ಲಲು ಯತ್ನಿಸಿದ್ದರು. ತಲೆಯ ಭಾಗವನ್ನು ಕಮೋಡಿಗೆ ಹೊಗಿಸಿದ್ದರು. ಕೈಗಳು ಹಾಗೂ ಮುಖದ ಕೆಲವು ಭಾಗಗಳ ಮೇಲೆ ಆಸಿಡ್ ಕೂಡ ಎರಚಿದ್ದರು. ಬಹುಶಃ ಅವರು ಹಾಕಿದ್ದ ಆಸಿಡ್ ಪ್ರಬಲವಾಗಿರಲಿಲ್ಲ ಅಥವಾ ಆಸಿಡ್ ಹಾಕಿದ ತಕ್ಷಣ ಕಮೋಡಿನೊಳಗೆ ತಳ್ಳಿ ನೀರು ಸುರಿದದ್ದರರಿಂದ ಆಸಿಡ್ ಬಿದ್ದ ಭಾಗಗಳು ಹೆಚ್ಚೇನೂ ಸುಟ್ಟಿರಲಿಲ್ಲ.
ಎಂದಿನ ನನ್ನ ಶೈಲಿಯಲ್ಲೇ ತನಿಖೆ ಪ್ರಾರಂಭಿಸಿದೆ. ಆ ಕೋಣೆಯನ್ನು ಒಂದು ಸುತ್ತು ಹುಡುಕಿದೆ. ಒಂದು ಸೂಟ್‌ಕೇಸ್, ಬ್ರೀಫ್‌ಕೇಸ್ ಸಿಕ್ಕಿತಾದರೂ ಅವುಗಳಲ್ಲಿ ತುಂಡು ಬಟ್ಟೆಯೂ ಇರಲಿಲ್ಲ. ಕೊಲೆ ಮಾಡಿದವರು ಸುಳಿವು ಸಿಗದಿರಲಿ ಎಂದು ಬಟ್ಟೆಯನ್ನು ತೆಗೆದುಕೊಂಡು ಹೋಗಿದ್ದರು. ಶವದ ಕೈಮೇಲೆ ಹಚ್ಚೆಯ ಗುರುತಿತ್ತು. ಅದರ ಮೇಲೂ ಆಸಿಡ್ ಎರಚಿದ್ದರು. ಬಂಗಾಳಿ ಭಾಷೆಯಲ್ಲಿದ್ದ ಹಚ್ಚೆ ಅದು. ಸತ್ತ ಯುವತಿ ಬಂಗಾಳಿ ಮೂಲದವಳು ಎಂಬುದಷ್ಟೇ ಇದರಿಂದ ಗೊತ್ತಾದದ್ದು. ಉಳಿದಂತೆ ಸಣ್ಣ ಸುಳಿವೂ ಸಿಗಲಿಲ್ಲ.
ಮೊದಲು ಕಾನೂನಿನ ರೀತಿಯಲ್ಲಿ ಮಹಜರು ಮಾಡಿದೆವು. ಆಮೇಲೆ ಶವದ ಮುಖದ ಮೇಲಿನ ಕಲೆಗಳಿಗೆಲ್ಲಾ ಮೇಕಪ್ ಹಾಕಿಸಿ, ಮುಖ ಚೆನ್ನಾಗಿ ಕಾಣುವಂತೆ ಫೋಟೋ ತೆಗೆಸಿದೆ. ಮಹಿಳಾ ಸಿಬ್ಬಂದಿ ಹಾಗೂ ಸಬ್ ಇನ್ಸ್‌ಪೆಕ್ಟರ್ ಎಸ್.ಕೆ.ಉಮೇಶ್ ಈ ಕೆಲಸಕ್ಕೆ ಸಾಥ್ ನೀಡಿದರು. ಪೊಲೀಸ್ ಫೋಟೋಗ್ರಾಫರ್ ಅದ್ಭುತವಾದ ಫೋಟೋ ತೆಗೆದರು. ಶವದ ಕೈಮೇಲಿದ್ದ ಹಚ್ಚೆಯದ್ದೂ ಫೋಟೋ ತೆಗೆಸಿದೆ.
ರೂಮನ್ನು ಇನ್ನೊಂದು ಸುತ್ತು ಜಾಲಾಡಿದ ಮೇಲೆ ಒಂದು ನೀರಿನ ಬಾಟಲಿ ಸಿಕ್ಕಿತು. ಆ ಖಾಲಿ ಬಾಟಲನ್ನು ಸೂಕ್ಷ್ಮವಾಗಿ ಗಮನಿಸಿದೆ. ಅದರ ಮೇಲಿದ್ದ ಕಂಪೆನಿಯ ಹೆಸರು ಮಹಾರಾಷ್ಟ್ರದ ಯವತ್‌ಮಾಲ್‌ಗೆ ಸೇರಿದ್ದಾಗಿತ್ತು. ನೀರಿನ ಬಾಟಲಿಯ ಮೇಲೆ ಬೆರಳಿನ ಗುರುತೂ ಸಿಗಲಿಲ್ಲ. ಆ ಬಾಟಲಿಯ ಮೇಲಿದ್ದ ಊರಿನ ಹೆಸರಿನ ಹೊರತು ಬೇರೆ ಯಾವ ಸುಳಿವೂ ಇರಲಿಲ್ಲ.
ನಾವು ಯವತ್‌ಮಾಲ್‌ಗೆ ಹೋದೆವು. ಅಲ್ಲಿ ಕೊಲೆಯಾಗಿದ್ದ ಹುಡುಗಿಯ ಫೋಟೋ ತೋರಿಸತೊಡಗಿದೆವು. ಮೂರು ದಿನ ಏನೂ ಪ್ರಯೋಜನವಾಗಲಿಲ್ಲ. ಆಮೇಲೆ ಒಬ್ಬ ವ್ಯಕ್ತಿ ಫೋಟೋದಲ್ಲಿದ್ದವಳನ್ನು ಗುರುತಿಸಿದ. ಆ ಯುವತಿ ಹತ್ತಿರದ ಒಂದು ಹಳ್ಳಿಯಲ್ಲಿ ಅವನ ಕಣ್ಣಿಗೆ ಬಿದ್ದಿದ್ದಳು. ಅವಳು ಆ ಹಳ್ಳಿಯ ಯುವಕನ ಜೊತೆಗೆ ಓಡಾಡುತ್ತಿದ್ದಳೆಂದೂ, ಇಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದರೆಂದೂ ಆ ವ್ಯಕ್ತಿ ತಿಳಿಸಿದ. ಆ ಹಳ್ಳಿಗೆ ಹೋಗಿ ವಿಚಾರಿಸಿದೆವು. ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸಂಗತಿ ಗೊತ್ತಾಯಿತು. ಎಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬುದೂ ಸ್ಪಷ್ಟವಾಯಿತು.
ಬೆಂಗಳೂರಿಗೆ ಮರಳಿ, ಆ ಯುವಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಿದೆವು. ಒತ್ತಡ ಹಾಕಿದ ನಂತರ ಅವನು ನಡೆದ ಸಂಗತಿಯನ್ನು ವಿವರವಾಗಿ ಹೇಳಿದ. ಅವನು ಕೊಲೆ ಮಾಡಿದ ಯುವತಿ ಲೈವ್‌ಬ್ಯಾಂಡ್‌ನಲ್ಲಿ ನೃತ್ಯ ಮಾಡುತ್ತಿದ್ದಳು. ಅಲ್ಲಿಗೆ ಅವನು ಹೋದಾಗ ಪ್ರೇಮಾಂಕುರವಾದದ್ದು. ಅವಳನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಯವತ್‌ಮಾಲ್ ಜಿಲ್ಲೆಯ ತನ್ನ ಹಳ್ಳಿಗೆ ಅವಳನ್ನು ಕರೆದುಕೊಂಡು ಹೋಗಿದ್ದ. ಮದುವೆಯಾಗುವುದಾಗಿ ಊರತುಂಬಾ ಹೇಳಿಕೊಂಡಿದ್ದ. ಆದರೆ, ದಿನಗಳೆದವೇ ವಿನಾ ಅವನು ಮದುವೆಯಾಗಲಿಲ್ಲ. ಹೆಚ್ಚೂಕಡಿಮೆ ಗಂಡ-ಹೆಂಡಿರಂತೆಯೇ ಅವರು ಬದುಕುತ್ತಿದ್ದರು. ಲೈವ್ಬ್ಯಾಂಡ್ ಹುಡುಗಿಗೆ ಆ ಬದುಕು ಸಾಕಾಗಿಹೋಯಿತು. ಅವಳು ಮದುವೆಯಾಗಲೇಬೇಕು ಎಂದು ದುಂಬಾಲು ಬಿದ್ದಳು. ಅವನು ಅವಳನ್ನು ಲಾಡ್ಜ್‌ನಲ್ಲಿ ಕೊಂದುಹಾಕಿದ.
ಲೈವ್‌ಬ್ಯಾಂಡ್ ಹುಡುಗಿಯರ ಬದುಕು ಹೀಗೆ ನರಕದಲ್ಲಿ ಶುರುವಾಗಿ ಸಾವಿನಲ್ಲಿ ಅಂತ್ಯಗೊಂಡ ಎಷ್ಟೋ ಉದಾಹರಣೆಗಳಿವೆ. ನಾನು ಕಳೆದ ವಾರ ಬರೆದ ವಿಂಟಿ ಸೇಠ್ ಕೂಡ ಲೈವ್‌ಬ್ಯಾಂಡ್‌ನ ಹುಡುಗಿಯೇ ಆಗಿದ್ದವಳು.
ನಾವು ಲೈವ್‌ಬ್ಯಾಂಡ್‌ಗೆ ದಾಳಿ ಇಟ್ಟಾಗಲೆಲ್ಲಾ ಸುಂದರವಾದ ಹುಡುಗಿಯರು ಕುಣಿಯುವುದನ್ನು ನೋಡುತ್ತಿದ್ದೆವು. ಅರೆಬೆತ್ತಲೆ ಕುಣಿಯುತ್ತಿದ್ದ ಅವರ ಮೇಲೆ ನೋಟಿನ ಸುರಿಮಳೆಯಾಗುತ್ತಿತ್ತು. ಹೊರಗಿನಿಂದ ನೋಡಿದರೆ ಆ ಹುಡುಗಿಯರೆಲ್ಲಾ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿದ್ದಾರೆ ಎಂಬ ಭ್ರಮೆ ಮೂಡುತ್ತಿತ್ತು. ಆದರೆ, ಒಳಗಿದ್ದ ಪರಿಸ್ಥಿತಿಯೇ ಬೇರೆ. ಗ್ರಾಹಕರು ಎಸೆಯುವ ಬಹುಪಾಲು ನೋಟುಗಳು ಲೈವ್‌ಬ್ಯಾಂಡ್ ಮಾಲೀಕರ ಗಲ್ಲಾ ಸೇರುತ್ತದೆಂಬುದು ಸತ್ಯ.
ಅಲ್ಲಿ ಕುಣಿದು ಕುಣಿದು ಸುಸ್ತಾದ ಮೇಲೆ ಹುಡುಗಿ ಗ್ರೀನ್‌ರೂಮಿಗೆ ಹೋಗುತ್ತಾಳೆ. ಅಲ್ಲಿ ಎತ್ತರದ ಅಲ್ಯುಮಿನಿಯಂ ತಪ್ಪಲೆಯಲ್ಲಿ ಕಿಚಡಿ ತುಂಬಿಸಿ ಇಟ್ಟಿರುತ್ತಾರೆ. ಅದು ತಯಾರಾಗಿ ಕನಿಷ್ಠ ಏಳೆಂಟು ತಾಸುಗಳಾಗಿರುತ್ತದೆ. ಒಂದು ಪೇಪರ್ ಪ್ಲೇಟಿಗೆ ಆ ಕಿಚಡಿ ಹಾಕಿಕೊಂಡು ಸುಸ್ತಾದ ಹುಡುಗಿ ತಿನ್ನತೊಡಗುವಾಗ ಅವಳ ತುಟಿಬಣ್ಣ ಅದಕ್ಕೆ ಬೆರೆಯುತ್ತದೆ. ಊಟ ಮುಗಿದದ್ದೇ ಹಳೆಯ ಡ್ರಮ್‌ನಲ್ಲಿ ತುಂಬಿಸಿಟ್ಟ ನೀರನ್ನು ಮೊಗೆದುಕೊಂಡು ಕುಡಿಯುತ್ತಾಳೆ. ತುಟಿಗೆ ಇನ್ನೊಂದು ಕೋಟ್ ಬಣ್ಣ ಹಚ್ಚಿಕೊಂಡು ಅವಳು ಹೊರನಡೆಯಲು ಸಜ್ಜಾಗುತ್ತಿದ್ದಂತೆ, ಇನ್ನೊಬ್ಬಳು ಅದೇ ಗ್ರೀನ್‌ರೂಮಿಗೆ ಸುಸ್ತಾಗಿ ಬರುತ್ತಾಳೆ. ಅವಳ ಹಣೆಬರಹವೂ ಅದೇ ತರಹ. ಹೊರಗೆ ಲೈವ್‌ಬ್ಯಾಂಡ್ ಗ್ರಾಹಕರು ಒಂದಕ್ಕೆ ಹತ್ತರಂತೆ ಹಣ ತೆತ್ತು ಮದ್ಯ, ನೀರಿನ ಬಾಟಲಿ, ಸ್ನ್ಯಾಕ್ಸ್ ಸವಿಯುತ್ತಿದ್ದರೆ ಒಳಗೆ ದೂರದ ರಾಜ್ಯದಿಂದ ಬಂದ ಹುಡುಗಿಯ ಜೀವ ನವೆಯುತ್ತಿರುತ್ತದೆ. ಭಾರತ-ಬಾಂಗ್ಲಾದೇಶದ ಗಡಿ ಪ್ರದೇಶದಲ್ಲಿರುವ ಬಂಗಾಳಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಲೈವ್‌ಬ್ಯಾಂಡ್ ಸೇರುತ್ತಿದ್ದರು. ಅವರಲ್ಲಿ ಕೆಲವರು ಪ್ರೇಮದ ಪಾಶಕ್ಕೆ ಸಿಲುಕಿ ಬದುಕು ಕಳೆದುಕೊಂಡ ಉದಾಹರಣೆಗಳನ್ನು ನಾನು ಕಂಡಿದ್ದೇನೆ. *
ಅದೇ ಚಿಕ್ಕಪೇಟೆಯಲ್ಲಿಯೇ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ಎಡವಟ್ಟಿನ ತನಿಖೆಯನ್ನು ಕಂಡೆ. 1996-97ರ ಅವಧಿ. ಪಶ್ಚಿಮ ವಿಭಾಗದಿಂದ ಸಾಕಷ್ಟು ಸರಗಳ್ಳತನದ ಪ್ರಕರಣಗಳು ವರದಿಯಾದವು. ಮೆಂಟಲ್ ಕುಮಾರ ಎಂಬುವನು ಆಗಿನ ಹೆಸರಾಂತ ಸರಗಳ್ಳ. ರಾತ್ರಿ ಹೊತ್ತು ಅಡ್ಡಗಟ್ಟಿ ಅಮಾಯಕರಿಂದ ಒಡವೆ, ಹಣ ದೋಚುವುದರಲ್ಲಿ ಅವನು ನಿಸ್ಸೀಮನಾಗಿದ್ದ. ಚಿಕ್ಕಾಸೂ ಇಲ್ಲದ ಅಮಾಯಕರು ಸಿಕ್ಕಿದರೆ, ಅವರ ಕತ್ತನ್ನೇ ರೇಸರ್‌ನಿಂದ ಸೀಳುತ್ತಿದ್ದ. ಈ ಕಾರಣಕ್ಕೇ ಅವನಿಗೆ ಮೆಂಟಲ್ ಕುಮಾರ ಎಂಬ ಹೆಸರು ಬಂದಿತ್ತು.
ಮೈಸೂರಿನ ಕೆಸರೆ ಎಂಬಲ್ಲಿ ಕುಮಾರ ಹೆಂಡತಿ-ಮಕ್ಕಳ ಜೊತೆ ವಾಸಿಸುತ್ತಿದ್ದನೆಂಬ ಮಾಹಿತಿ ಬಂತು. ಅವನನ್ನು ದಸ್ತಗಿರಿ ಮಾಡಲೆಂದು ವಯಸ್ಸಿನಲ್ಲಿ ಹಿರಿಯರಾದ ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಒಂದು ತಂಡವನ್ನು ಮೈಸೂರಿಗೆ ಕಳುಹಿಸಿದೆ. ಅವರು ಕುಮಾರನ ಮನೆಗೆ ಹೋದಾಗ ನಡುರಾತ್ರಿಯಾಗಿತ್ತು. ಮೊದಲು ಅವನ ಹೆಂಡತಿ ಮಾತಾಡಿ, ಅವನು ಮನೆಯಲ್ಲಿ ಇಲ್ಲ ಎಂದಳಂತೆ. ಪೊಲೀಸರು ದಾಳಿ ಇಡುವುದು ಖಚಿತ ಎಂದಾದ ನಂತರ ಕುಮಾರ ಕಾಣಿಸಿಕೊಂಡ. ಆದರೆ, ಅವನು ಪೊಲೀಸರ ತಂಡವನ್ನು ಹೆದರಿಸಲು ರೇಸರ್‌ನಿಂದ ತನ್ನ ಕತ್ತನ್ನೇ ಸೀಳಿಕೊಂಡ. ಅದನ್ನು ನೋಡಿದ ಸಬ್ ಇನ್ಸ್‌ಪೆಕ್ಟರ್ ಗಾಬರಿಗೊಂಡು, ಅವನನ್ನು ದಸ್ತಗಿರಿ ಮಾಡದೆಯೇ ಅಲ್ಲಿಂದ ಬೆಂಗಳೂರಿಗೆ ಬಂದುಬಿಟ್ಟರು.
ಮರುದಿನ ಬೆಳಗ್ಗೆ ಬಂದವರೇ ನನಗೆ ನಡೆದ ಘಟನೆ ಹೇಳಿದರು. ಗಾಯಗೊಂಡ ಕುಮಾರ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೆಂಡತಿಯ ಜೊತೆಗೆ ಹೋಗಿದ್ದ. ನಡೆದ ಘಟನೆಯ ಬಗ್ಗೆ ಆ ಸಬ್ ಇನ್ಸ್‌ಪೆಕ್ಟರ್ ಸ್ಥಳೀಯ ಪೊಲೀಸ್ ಠಾಣೆಗೆ ದೂರನ್ನು ಕೂಡ ಕೊಟ್ಟಿರಲಿಲ್ಲ. ಹೋಗಲಿ, ಆ ರೇಸರ್ ಎಲ್ಲಿ ಎಂದು ಕೇಳಿದೆ. ತಮ್ಮ ಜೇಬಿನಿಂದ ಹೊರತೆಗೆದು, ‘ಇದೋ... ಇಲ್ಲೇ ಇದೆ’ ಎಂದರು. ನೇರವಾಗಿ ಹಿಡಿದರೆ ಅದರ ಮೇಲೆ ತಮ್ಮ ಬೆರಳಿನ ಗುರುತು ಮೂಡುತ್ತದೆ ಎಂಬ ಅರಿವು ಅವರಿಗೆ ಇರಲಿಲ್ಲವೋ ಅಥವಾ ಗಾಬರಿಗೊಂಡು ಅವರು ಅದನ್ನು ಜೇಬಿಗಿಳಿಸಿದ್ದರೋ ಗೊತ್ತಿಲ್ಲ. ಒಂದು ವೇಳೆ ಕುಮಾರ ಪೊಲೀಸರೇ ತನ್ನ ಕುತ್ತಿಗೆ ಸೀಳಿದರು ಎಂದು ದೂರಿತ್ತರೆ ಆ ಸಬ್ ಇನ್ಸ್‌ಪೆಕ್ಟರ್ ವಿರುದ್ಧವೇ ಕೊಲೆಯತ್ನದ ಕೇಸು ದಾಖಲಾಗುವ ಅಪಾಯವಿತ್ತು. ಅದನ್ನು ನಾನು ಮನವರಿಕೆ ಮಾಡಿಕೊಟ್ಟಿದ್ದೇ ಅವರು ಗಾಬರಿಗೊಂಡರು.
ಮತ್ತೆ ಅವರನ್ನು ಮೈಸೂರಿಗೆ ಕಳಿಸಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕುಮಾರ ಆತ್ಮಹತ್ಯೆಗೆ ಯತ್ನಿಸಿದ ವಿವರಗಳನ್ನು ನೀಡಿ, ಒಂದು ದೂರು ದಾಖಲಿಸುವಂತೆ ಸೂಚಿಸಿದೆ. ಆಸ್ಪತ್ರೆಗೆ ಹೋಗಿ ಅವರು ನೋಡಿದರು. ಅಲ್ಲಿಂದ ಕುಮಾರ ಜಾಗ ಖಾಲಿ ಮಾಡಿದ್ದ. ಅವನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನೆಂಬುದು ಗೊತ್ತಾಯಿತು. ಅಲ್ಲಿಗೆ ಹೋಗಿ, ಇದ್ದ ಸ್ಥಿತಿಯಲ್ಲೇ ಅವನನ್ನು ದಸ್ತಗಿರಿ ಮಾಡಿದೆವು. ಸುಮಾರು ಹತ್ತು ಸರಗಳ್ಳತನದ ಪ್ರಕರಣಗಳನ್ನು ಪತ್ತೆಮಾಡಿದೆವು. ಆ ಸಬ್ ಇನ್ಸ್‌ಪೆಕ್ಟರ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಕ್ಕೆ ನೆಮ್ಮದಿಯ ನಿಟ್ಟುಸಿರಿಟ್ಟರು.
ಸೇವಾವಧಿಯಲ್ಲಿ ದೊಡ್ಡ ಅನುಭವ ಇದ್ದರೂ ಗಾಬರಿಗೊಂಡು ಮಾಡುವ ಸಣ್ಣ ಎಡವಟ್ಟಿನಿಂದ ಏನೆಲ್ಲಾ ಆಗಬಹುದು ಎಂಬುದಕ್ಕೆ ಇದು ಉದಾಹರಣೆ.
ಮುಂದಿನ ವಾರ: ಬ್ಯಾಂಕ್‌ಗೆ ಮೋಸ ಮಾಡಿದ್ದವನು ಕೊನೆಗೂ ಸಿಕ್ಕ
ಶಿವರಾಂ ಅವರ ಮೊಬೈಲ್ ನಂಬರ್ 94483 13066
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.